Tuesday 23 December 2014

ಆಡಿಯೋ ಅನಿಸಿಕೆ - ಮಿ & ಮಿಸ್ಸಸ್ ರಾಮಚಾರಿ



ಒಟ್ಟಾಗಿಯೇ ಚಿತ್ರರಂಗ ಪ್ರವೇಶಿಸಿ, ತಮ್ಮದೇ ಆದ ಭದ್ರವಾದ ಸ್ಥಾನಗಳನ್ನು ಪಡೆದುಕೊಂಡಿರುವ ಯಶ್ ಹಾಗೂ ರಾಧಿಕ ಪಂಡಿತ್ ರದು ಒಟ್ಟಾಗಿಯೂ ಯಶಸ್ವಿ ಜೋಡಿಯೇ. ಇಬ್ಬರಿಗೂ ತಮ್ಮದೇ ಆದ ಅಭಿಮಾನಿ ಪ್ರೇಕ್ಷಕ ವೃಂದವಿದ್ದೂ ಅದು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಎಲ್ಲಾ ರೀತಿಯ ಪಾತ್ರಗಳನ್ನು ಲೀಲಾಜಾಲವಾಗಿ ನಿರ್ವಹಿಸಬಲ್ಲ ರಾಧಿಕ ಪಂಡಿತ್ತ್ ಒಂದು ಕಡೆ ಆದರೆ, ಯುವ ಹಾಗೂ ಮಾಸ್ ಪ್ರೇಕ್ಷಕರನ್ನು ಸೆಳೆಯುತ್ತಿರುವ ಯಶ್ ಚಿತ್ರದಿಂದ ಚಿತ್ರಕ್ಕೆ ಕನ್ನಡದ ಅಗ್ರ ನಾಯಕರಲ್ಲಿ ಒಬ್ಬರಾಗಿ ಬೆಳೆಯುತ್ತಿದ್ದಾರೆ. ಇವರಿಬ್ಬರಿದ್ದು, ವಿಭಿನ್ನ ಹೆಸರುಳ್ಳ ಮಿ&ಮಿಸಸ್ಸ್ ರಾಮಾಚಾರಿ ಚಿತ್ರ ಸಹಜವಾಗಿಯೇ ಕನ್ನಡ ಬಹು ನಿರೀಕ್ಷೆಯ ಚಿತ್ರಗಳಲ್ಲಿ ಒಂದಾಗಿದೆ. ಹರಿಕೃಷ್ಣ ನಿರ್ದೇಶನದ ಚಿತ್ರದ ಹಾಡುಗಳು  ಹೇಗಿವೆ ಎಂಬ ಕುತೂಹಲ ನಿಮ್ಮದಾಗಿದ್ದರೆ, ಒಮ್ಮೆ  ಇತ್ತ ಕಣ್ಣಾಡಿಸಿ. 


ಯಾರಲ್ಲಿ ಸೌಂಡು ಮಾಡೋದು?
ಗಾಯನ - ರಂಜಿತ್
ಸಾಹಿತ್ಯ - ಸಂತೋಶ್ ಆನಂದ್ ರಾಮ್ 
ಹರಿಕೃಷ್ಣರ ಗೀತೆಗಳಲ್ಲಿರುವ ವಾದ್ಯ ಸಂಯೋಜನೆ, ಜೋಶ್ ತುಂಬಿದ ರಿದಮ್, ಕೋರಸ್ ಜೊತೆಗೆ  ’ಎಲ್ಲೋ ಕೇಳಿದಂತೆ ಅನಿಸುವ ಭಾವ’ ಎಲ್ಲವೂ ಇರುವ ಗೀತೆ. ನಡು ನಡುವೆ ಬರುವ ’ಹಾವಿನ ದ್ವೇಷ’ ಹಾಡಿನ ಛಾಯೆಯಿಂದಾಗಿ ಗೀತೆ ಹೊಸ ರೂಪ ಪಡೆದುಕೊಳ್ಳುತ್ತದೆ. ಸಂತೋಶ್ ಆನಂದ್ ರಾಮ್ ರ ಸಾಹಿತ್ಯ, ಸಂಗೀತಕ್ಕೆ ತಕ್ಕ ಹಾಗಿದೆ.  ರಂಜಿತ್ ಕೂಡ ಉತ್ತಮವಾಗಿ ಹಾಡುವುದರಿಂದ ಹಾಡು ರಂಜಿಸುತ್ತದೆ.

ಮಿ & ಮಿಸಸ್ಸ್  ರಾಮಾಚಾರಿ
ಗಾಯನ - ಟಿಪ್ಪು
ಸಾಹಿತ್ಯ - ಎ.ಪಿ.ಅರ್ಜುನ್ 
ಸೋಬಾನೆ ಶೈಲಿಯಲ್ಲಿ ವಿಭಿನ್ನವಾಗಿ ಪ್ರಾರಂಭವಾಗುವ ಗೀತೆ ಕೆಲವೇ ಕ್ಷಣದಲ್ಲೇ ಮತ್ತೆ ಹರಿಕೃಷ್ಣ, ಟಿಪ್ಪು ಸ್ಟೈಲ್ ಗೆ ಹೊರಳುತ್ತದೆ. ಲವಲವಿಕೆಯ ಸಾಹಿತ್ಯ ಹಾಗೂ ಸಂಗೀತದಿಂದ ಕೇಳಿಸಿಕೊಂಡು ಹೋಗುತ್ತದೆ. ಟಿಪ್ಪು ಈ ರೀತಿಯ ಗೀತೆಗಳಲ್ಲಿ ಎತ್ತಿದ ಕೈ ಆಗಿರುವುದರಿಂದ ಅವರ ಗಾಯನ ಬಗ್ಗೆ ಹೆಚ್ಚೇನು ಹೇಳುವಂತಿಲ್ಲ.

ಉಪವಾಸ
ಗಾಯನ - ಸೋನು ನಿಗಮ್ ಹಾಗೂ ಶ್ರೇಯ ಘೋಷಲ್
ಸಾಹಿತ್ಯ - ಗೌಸ್ ಪೀರ್
ಗಮನ ಸೆಳೆಯುವ ಸಾಹಿತ್ಯ, ಸರಳ ಹಾಗೂ ಅಬ್ಬರವಿಲ್ಲದ ಸಂಗೀತ ಈ ಗೀತೆಯ ವಿಶೇಷತೆ.  ಸೋನು ನಿಗಮ್ ರವರು ಉತ್ತಮವಾಗಿ ಹಾಡಿದ್ದರೂ ಶ್ರೇಯರವರ ಗಾಯನ ಹೆಚ್ಚು ಇಷ್ಟವಾಗುತ್ತದೆ. ಇತ್ತೀಚಿನ ಗೀಳಾಗಿರುವ ಹಿಂದಿ ಸಾಹಿತ್ಯ, ಕೋರಸ್ ರೂಪದಲ್ಲಿ ಇಲ್ಲಿಯೂ ಇದೆ. ಗೌಸ್ ಪೀರರ ಸಾಹಿತ್ಯ ವಿಭಿನ್ನವಾಗಿದ್ದು,  ಮನ ಸೆಳೆಯುತ್ತದೆ.

ಏನಪ್ಪ
ಗಾಯನ - ಟಿಪ್ಪು
ಸಾಹಿತ್ಯ - ಗೌಸ್ ಪೀರ್
’ಇವನು ಸನ್ನು ಅವಳು ಮೂನು ಇಬ್ಬರೂ ವೆಲ್ಲು ನೋನ್ನು’ ಎಂಬ ಸಾಲುಗಳುಳ್ಳ ಗೌಸ್ ಪೀರ್ ರ ಸಾಧರಣ ಸಾಹಿತ್ಯದ ಹಾಡು ಸಂಗೀತದಲ್ಲೂ ಅದೇ ಮಟ್ಟವನ್ನು ಉಳಿಸಿಕೊಳ್ಳುತ್ತದೆ. ಹೆಚ್ಚೇನು ಏರಿಳಿತಗಳಿಲ್ಲದ್ದರಿಂದ ಟಿಪ್ಪು ಕೂಡ ಎಂದಿನಂತೆ ಹಾಡಿದ್ದಾರೆ. ತೆರೆಯ ಮೇಲೆ ನೃತ್ಯದಿಂದಾಗಿ ಕಳೆಗಟ್ಟಬಹುದೇನೋ ಎಂಬ ಆಶಾಭಾವನೆ ಹುಟ್ಟಿಸುವ ಹಾಡಿದು.  

ಕಾರ್ಮೋಡ
ಗಾಯನ - ರಾಜೇಶ್ ಕೃಷ್ಣನ್
ಸಾಹಿತ್ಯ - ಗೌಸ್ ಪೀರ್
ಇಷ್ಟವಾಗಲು ಅನೇಕ ಕಾರಣಗಳಿರುವ ಗೀತೆ. ಅದರಲ್ಲಿ ಮೊದಲಿಗೆ, ಬಹಳ ದಿನಗಳ ನಂತರ ಕೇಳ ಸಿಗುವ ರಾಜೇಶ್ ರವರ ಕಂಠ. ರಾಜೇಶ್ ರ ಭಾವಪೂರ್ಣ ಗಾಯನ  ಗೌಸ್ ಪೀರ್ ರವರ ಉತ್ತಮ ಸಾಹಿತ್ಯದ ಅರ್ಥಗಳನ್ನು ಸುಲಭವಾಗಿ ಕೇಳುಗರಿಗೆ ತಲುಪಿಸುತ್ತದೆ. ಸಂಗೀತ ಮಧುರವಾಗಿದ್ದು, ವಾದ್ಯ ಸಂಯೋಜನೆ ಸಾಹಿತ್ಯಕ್ಕೆ, ಗಾಯನಕ್ಕೆ ಅಡ್ಡ ಬರದಂತಿದೆ. 
ಒಂದೆರೆಡು ಕಡೆ ಸಾಹಿತ್ಯ ಹಾಗೂ ರಾಗದ ಹೊಂದಣಿಕೆಯಲ್ಲಿ ಕೊರತೆ ಕಾಣುತ್ತದೆ.     

ಅಣ್ಣ್ ತಮ್ಮ
ಗಾಯನ - ಯಶ್ 
ಸಾಹಿತ್ಯ - ಯೋಗರಾಜ್ ಭಟ್ಟ್
ಇತ್ತೀಚೆನ ಗೀತೆಗಳಲ್ಲಿ ’ಅಣ್ಣ್ ತಮ್ಮ’ನಂತಾಗಿರುವ ಹರಿಕೃಷ್ಣರ ಸಂಗೀತ ಹಾಗೂ ಯೋಗರಾಜ್ ಭಟ್ಟರ ಸಾಹಿತ್ಯ ಇಲ್ಲಿ ಮತ್ತೆ ಒಂದಾಗಿದೆ. ಅದರಲ್ಲೇನು ವಿಶೇಷ? ಎಂಬ ಪ್ರಶ್ನೆಗೆ ’ಯಶ್ ಗಾಯನ’ ಎಂಬ ಸಿದ್ಧ ಉತ್ತರ ಈ ಗೀತೆಯ ಮೂಲಕ ಕೊಡಬಹುದು. ಸರಳವಾದ ಸಾಹಿತ್ಯ ಸಂಗೀತಕ್ಕೆ ಅಷ್ಟೇ ಸರಳವಾಗಿ ಯಶರ ಗಾಯನ ಒದಗಿ ಬಂದಿದೆ. ’ಹಂಗೂ ಹಿಂಗೂ  ಹೆಂಗೋ ಇದ್ದೆ’ಎನ್ನುವ ಹಾಡಿನ ಸಾಲುಗಳನ್ನು ಯಶ್ ರ ನಾಯಕ, ಗಾಯಕವರೆಗಿನ ಬೆಳವಣಿಗೆಯ ಬಗ್ಗೆಯೂ ಹೇಳಬಹುದು