Wednesday 6 February 2013

ಪೂರ್ವದಿಂದ ಬಂದ ರಾಯರು ಹಳ್ಳಿಗಳಲ್ಲೇ ಉಳಿದುಬಿಟ್ಟರು!

ಈ ಹಬ್ಬಕ್ಕೆ ಮೂರು ಅಂಶಗಳಿದ್ದರು ಮೂರು ರಾಯರದ್ದೇ ಪ್ರಧಾನ.  ಕ್ರಿಸ್ಮಸ್ ಹಬ್ಬಕ್ಕೆಂದು ಗೊದಲಿಯನ್ನು ಕಟ್ಟಿ ಮೂಲೆಯಲ್ಲಿಡುತ್ತಿದ್ದ  ೩ ರಾಯರನ್ನು ಅಂದು ತಂದು ಬಾಲಯೇಸುವಿನ ಬಳಿ ಇಡುವ ಮೂಲಕ ಇದು ಮೂರು ರಾಯರು ಸಂದರ್ಶಿಸಿದ ಹಬ್ಬವೆಂದೇ ನಮ್ಮ ಮನಗಳಲ್ಲಿ ಗಟ್ಟಿಯಾಗಿ ನೆಲೆಯೂರಿದೆ. ವಿಶೇಷವೇನೆಂದರೆ ಮೂರೂರಾಯರು ಯೇಸುವನ್ನು ಸಂಧಿಸುವುದಕ್ಕೂ ಹಳ್ಳಿಗಳಲ್ಲಿ  ಆಚರಣೆಯಲ್ಲಿರುವಂತೆ ಜಾನುವಾರುಗಳನ್ನು ತೀರ್ಥದಿಂದ ಪ್ರೋಕ್ಷಿಸಿ ಆಶೀರ್ವದಿಸುವ ಅದೇ ದಿನಕ್ಕೂ ಅದ್ಯಾವ ಸಂಬಂಧ ಬೆಸೆದಿದೆಯೋ ಗೊತ್ತಿಲ್ಲ.


ದು ಜಾತ್ರೆ ಜಾತ್ರೆಯಂತಹ ಜನ ಜಂಗುಳಿ. ಊರಿಗೆ ಊರೇ ತಮ್ಮ ತಮ್ಮ ಮನೆ ಬಾಗಿಲ ಬಳಿ ನಿಂತು ತಮ್ಮ ಜಾನುವಾರುಗಳನ್ನೂ ಸಾಲಾಗಿ ನಿಲ್ಲಿಸಿ ಗುರುಗಳಿಂದ ಪ್ರೋಕ್ಷಿಸಲ್ಪಡುವ ತೀರ್ಥಕ್ಕೆ ಮೈಯೊಡ್ಡಿ ನಿಲ್ಲುವ ವಿಶ್ವಾಸನೀಯ ಗಳಿಗೆ. ಇದೊಂದು ಆಚರಣೆ ಕೂಡ. ಕೇವಲ ಹಳ್ಳಿಗಳಲ್ಲಿ ಮಾತ್ರವೇ ಕಂಡುಬರುವ ಹಬ್ಬದ ಸಂಪ್ರಾದಾಯಿಕ ಆಚರಣೆ. ಕ್ರಿಸ್ಮಸ್ ಹಬ್ಬದ ನಂತರ ಬರುವ ಮೊದಲ ವಾರ್ಷಿಕ ಹಬ್ಬ. ಇದುವೇ ಮೂರು ರಾಯರ ಹಬ್ಬ. ಕ್ರಿಸ್ತ ಜಯಂತಿಯ ೧೨ ನೇ ದಿನಕ್ಕೆ ಸರಿಯಾಗಿ ಈ ಹಬ್ಬ ಬರುತ್ತದೆಯಾದರೂ ಆ ದಿನದ ಮುಂದಿನ ಭಾನುವಾರದಂದು ಆಚರಿಸುವುದು ವಾಡಿಕೆ. ಈ ಹಬ್ಬವನ್ನು ಪೂರ್ವ ಕ್ರೈಸ್ತ ದೇಶಗಳು ಅತಿ ವಿಜ್ರಾಂಭಣೆಯಿಂದ ಆಚರಿಸುತ್ತವೆ ಎಂದು ಕೇಳಿದ್ದೇವೆ. ೩ ರಾಜರು ಪೂರ್ವದೇಶದಿಂದ ಬಂದರು ಎಂಬ ಉಲ್ಲೇಖಗಳೆ ಅದಕ್ಕೆ ಕಾರಣಗಳು ಇದ್ದಾವು. ಏನೇ ಆಗಲಿ ಇದು ಕ್ರಿಸ್ತನ ಆನೇಕ ಪ್ರಥಮಗಳ ಸಂಗಮದ ಹಬ್ಬ ಅಥವಾ ಕ್ರಿಸ್ತರು ದೈವಿಕ ಪ್ರಕೃತಿಯ ಕುರುಹುವಿನೊಂದಿಗೆ ಹಠಾತ್ ಬಹಿರಂಗಗೊಂಡ ದಿನವೆಂತಲೂ ಅರ್ಥೈಸಬಹುದು. ಅವುಗಳನ್ನು ಪಟ್ಟಿಮಾಡುವುದೇ ಆದರೆ; ಮೊದಲನೆಯದು, ಲೋಕಕ್ಕೆ ಬೆಳಕಾಗುವ ರಾಜನು ಈ ಕ್ರಿಸ್ತ ಎಂಬ ಸಂಕೇತವಾಗಿ ೩ ರಾಜರು ತಾರೆಯ ಬೆಳಕನ್ನು ಅನುಸರಿಸಿ ಬಂದು ಕ್ರಿಸ್ತನನ್ನು ಸಂಧಿಸಿ ಕ್ರಿಸ್ತನೆ ಜಗತ್ತಿನ ಮಹಾರಾಜ ಎಂದು ಪರಿಚಯಿಸಿದ ಹಬ್ಬ. ಎರಡನೆಯದು, ಯೇಸು ಸ್ನಾನಿಕ ಅರಲಪ್ಪರಿಂದ ಸ್ನಾನಾದೀಕ್ಷೆ ಪಡೆದು ತನ್ನನೇ ಲೋಕಾರ್ಪಣೆಮಾಡಿಕೊಂಡ ದಿನ. ಮೂರನೆಯದು, ಕಾನಾ ಮದುವೆಯಲ್ಲಿ ನೀರನ್ನು ದ್ರಾಕ್ಷರಸವನ್ನಾಗಿ ಪರಿವರ್ತಿಸಿ ತನ್ನ ದೈವೀ ಗುಣವನ್ನುಪ್ರಚುರಪಡಿಸಿದ ದಿನ. ಹೀಗೆ ಕ್ರಿಸ್ತನ ಮಹತ್ತರ ಪ್ರಥಮ ಹೆಜ್ಜೆಗಳ ಸಲುವಾಗಿ ಧರ್ಮಸಭೆ ಈ ಹಬ್ಬವನ್ನು ದೈವ ದರ್ಶನದ ಹಬ್ಬವನ್ನಾಗಿ ಆಚರಿಸುತ್ತದೆ. ಈ ಹಬ್ಬಕ್ಕೆ ಮೂರು ಅಂಶಗಳಿದ್ದರು ಮೂರು ರಾಯರದ್ದೇ ಪ್ರಧಾನ.  ಕ್ರಿಸ್ಮಸ್ ಹಬ್ಬಕ್ಕೆಂದು ಗೊದಲಿಯನ್ನು ಕಟ್ಟಿ ಮೂಲೆಯಲ್ಲಿಡುತ್ತಿದ್ದ  ೩ ರಾಯರನ್ನು ಅಂದು ತಂದು ಬಾಲಯೇಸುವಿನ ಬಳಿ ಇಡುವ ಮೂಲಕ ಇದು ಮೂರು ರಾಯರು ಸಂದರ್ಶಿಸಿದ ಹಬ್ಬವೆಂದೇ ನಮ್ಮ ಮನಗಳಲ್ಲಿ ಗಟ್ಟಿಯಾಗಿ ನೆಲೆಯೂರಿದೆ. ವಿಶೇಷವೇನೆಂದರೆ ಮೂರೂರಾಯರು ಯೇಸುವನ್ನು ಸಂಧಿಸುವುದಕ್ಕೂ ಹಳ್ಳಿಗಳಲ್ಲಿ  ಆಚರಣೆಯಲ್ಲಿರುವಂತೆ ಜಾನುವಾರುಗಳನ್ನು ತೀರ್ಥದಿಂದ ಪ್ರೋಕ್ಷಿಸಿ ಆಶೀರ್ವದಿಸುವ ಅದೇ ದಿನಕ್ಕೂ ಅದ್ಯಾವ ಸಂಬಂಧ ಬೆಸೆದಿದೆಯೋ ಗೊತ್ತಿಲ್ಲ.. ಯೇಸು ಹುಟ್ಟಿದ್ದು ದನಕರುಗಳ ಮಧ್ಯೆ ಎಂದಾಗಲಿ ಮೂರು ರಾಯರು ಒಂಟೆಗಳ ಮೇಲೆ ಪ್ರಯಾಣಿಸಿ ಬಂದರು,  ಒಂಟೆಗಳು ನಮ್ಮಲ್ಲಿ ಇಲ್ಲದ್ದರಿಂದ ದನಕರುಗಳ ರೂಪದಲ್ಲಿ ಅವುಗಳನ್ನೂ ಆಶೀರ್ವದಿಸಲಾಗುವುದು ಎಂದಾಗಲಿ ನಮ್ಮದೇ ಕಲ್ಪನೆಯಲ್ಲಿ ಆ ಅಚರಣೆಯನ್ನು ಅರ್ಥೈಸಿಕೊಂಡಿದ್ದೇವೆ. ಈ ಕಲ್ಪನೆ ಎಷ್ಟರ ಮಟ್ಟಿಗೆ ಸತ್ಯ ಎನ್ನುವುದು ತಿಳಿದಿಲ್ಲ. ಆದರೂ ಇದನ್ನು ಆಚರಿಸುವ ಆಸಕ್ತಿ ಮಾತ್ರ ಅಸಾಧಾರಣ.    


 
ಹಳ್ಳಿಗರಿಗೆ ವ್ಯವಸಾಯವೇ ಜೀವನಾಂಶವಾದ್ದರಿಂದ ದನಕರು ಕುರಿ ಮೇಕೆಗಳು ಅವರ ಅವಿಭಾಜ್ಯ. ವರ್ಷಕ್ಕೊಮ್ಮೆ ಅವುಗಳನ್ನು ಗೌರವಿಸಿ ಸತ್ಕರಿಸುವ ಹಬ್ಬವನ್ನು ಇನ್ನೆಷ್ಟು ಮುತುವರ್ಜಿಯಿಂದ ಮಾಡಿಯಾರು ಉಹಿಸಿ.  ಉಹಿಸುವುದೇನು? ಅಂತಹ ಪ್ರದೇಶದಿಂದ ಹುಟ್ಟಿ ಬಂದ ನನ್ನಂತವನಿಗೆ ಆ ಚಿತ್ರಣವನ್ನು ಕಟ್ಟಿಕೊಡುವುದು ಕಷ್ಟಕರವೇನಲ್ಲ. ವರ್ಷಪೂರ ಕಷ್ಟಪಟ್ಟು ಗೇಮೆ ಗೈಯುವ ಜಾನುವಾರುಗಳನ್ನು ಅಂದು ಆದಷ್ಟು ಚೆಂದವಾಗಿ ಶೃಂಗರಿಸಿ ಮೆರವಣಿಗೆಗೆ ತರಬೇಕು ಎಂದು ಎಂತಹ ಬಡವನಿಗೂ ಅನಿಸದೇ ಇರದು. ಇದು ಅವನ ಮತ್ತು ಜಾನವಾರುಗಳ ನಡುವಿನ ಭಾಂಧವ್ಯ; ಅವುಗಳ ಕೊಂಬನ್ನು ನುಣುಪಾಗಿ ಒರೆದು, ಕೊಂಬನ್ನು ಅಂದಗೊಳಿಸುವುದರಿಂದ ಆರಂಭಗೊಳ್ಳುವ ಕಾಳಜಿ, ಮನೆಮಂದಿಯೆಲ್ಲ ದನಕರುಗಳ ಒಂದಲ್ಲ ಒಂದು ಸೇವೆಗೆ ನಿಂತುಬಿಡುವಂತೆ ಮಾಡುತಿತ್ತು. ಒಬ್ಬರಿಂದ ಕೊಂಬನ್ನು ಮೊನಚುಗೊಳಿಸುವ ಮುತುವರ್ಜಿ. ಜೊತೆಯಲ್ಲೇ ಮೇವು ತಿನ್ನಿಸಿ ಹೊಟ್ಟೆ ಭರ್ತಿಮಾಡುವ ಮತ್ತೊಬ್ಬನ ಅವಸರ. ಅಳಿದುಳಿದ ಜಾಗವನ್ನು ತೊಳೆದು ಸ್ವಚ್ಚಗೊಳಿಸುವುದು ಉಳಿದೊಬ್ಬನಿಗೆ ಬಿಟ್ಟು ಕೆಲಸ. ಇದಕ್ಕೆ ಬೇಸರಿಸಿಕೊಂಡ ವರದಿಯಾಗಿಲ್ಲ. ಈ ವಿಷಯದಲ್ಲಿ "ಪಾಲಿಗೆ ಬಂದದ್ದೆ ಪಂಚ ಮೂತ್ರ".... ಪಾಪ ಅವುಗಳು ತಾನೇ  ಏನು ಮಾಡಿಯಾವು! ಅಷ್ಟು ಜನರ ಶೂಶ್ರುಷೆ ಒಟ್ಟಿಗೆ ನೋಡಿದ ಗಾಬರಿಗೆ ಆಗಾಗ ಮೂತ್ರ ಮಾಡುವುದು ಅವತ್ತಿನ ಸಾಮಾನ್ಯ. ಇದೆಲ್ಲ ಮುಗಿಯುವ ಹೊತ್ತಿಗೆ ಎಲ್ಲರೂ ದೌಡಾಯಿಸಿ ಊರಿನ ವೃತ್ತ(ಊರಿಗೆ ಇರುತ್ತಿದ್ದ ಒಂದೇ ಒಂದು Circle)ದಲ್ಲಿ ಅರವಿಕೊಂಡ ಅಂಗಡಿಗಳಿಗೆ ಮುತ್ತಿಗೆಹಾಕಿ ವ್ಯಾಪಾರಕ್ಕಿಳಿಯುವ ಜನರು, ಪರಸ್ಪರ ಏನೇನು ಅಲಂಕಾರಿಕ ವಸ್ತುಗಳನ್ನು ಕೊಂಡೆವು, ಆ ಅಂಗಡಿಯ ಬೆಲೆ ಈ ಅಂಗಡಿಯಲ್ಲಿನ ಬೆಲೆ ತಾಳೆ ಮಾಡಿ ತರುವಷ್ಟರಲ್ಲಿ ದೊಡ್ಡ ಡೀಲ್ ಮುಗಿದಂತೆ.

ಅಂಗಡಿಯವರೇನು ಸಾಮಾನ್ಯನೇ. ಬೆಲೆಗೆ ತಕ್ಕ ಸಭೂಬು ಉಚಿತವಾಗಿ ಕೊಡುತ್ತಿದ್ದ. ಇವರೆಲ್ಲರು ಅದೇ ಊರಿನವರಲ್ಲ ಅಕ್ಕ ಪಕ್ಕದ ಊರಿನಲ್ಲಿರುವ ವ್ಯಾಪಾರಸ್ಥರು. ಈ ವಾರ್ಷಿಕ ದಿನವನ್ನು ಮುಂಗಡವಾಗಿ ಗೊತ್ತುಪಡಿಸಿಕೊಂಡು ಎಲ್ಲ ಅಲಂಕಾರಿಕ ಸಾಮಾನುಗಳೊಂದಿಗೆ ಹಾಜರಾಗುತ್ತಿದ್ದರು. ರಸ್ತೆಯ ಬದಿಯಲ್ಲಿ, ಮನೆಯ ಜಗುಲಿಗಳಲ್ಲಿ ಮಾರಗಲ ಜಾಗಸಿಕ್ಕರೆ ಸಾಕು ಥೇಟ್ ಅಂಗಡಿಗಳಂತೆ ಮಾಡಿಬಿಡುತ್ತಿದ್ದರು. ಹಿಂಬದಿ ಗೋಡೆಗೆ ತರಾವರಿ ಬಣ್ಣದ ಮಾಲೆಗಳನ್ನು ನೇತುಹಾಕಿ ಅಂಗಡಿಗೊಂದು ಅಂದ ಕೊಡುತ್ತಿದ್ದರು. ತಾವು ಅರವಿಟ್ಟುಕೊಂಡ ಅಂಗಡಿಯ ಅಳತೆಗಾಗಿ ಆ ಬದಿ ಈ ಬದಿಯಲ್ಲಿ ದನಕರುಗಳಿಗೆ ಕಟ್ಟುವ ಮೂಗುದಾರಗಳು, ಕರಿಹಗ್ಗವನ್ನು ಸಿಕ್ಕಿಸಿಬಿಟ್ಟು, ತಮ್ಮ ಮುಂದೆ ವಿವಿಧ ಬಣ್ಣದ ಡಬ್ಬಗಳು, ಕುಂಚ,  ಬಲೂನು, ಚಿನಾರಿ ಕಾಗದ, ಮತ್ತು ಸೂರ್ಯಕಾಂತಿಯಂತೆ ಕಾಣುವ ಬಣ್ಣಬಣ್ಣ್ದ ವಿನ್ಯಾಸಗಳನ್ನು ಬಿಡಿಸಿಟ್ಟುಕೊಂಡು ಅಪ್ಪಂದಿ ರೊಂದಿಗೆ ಬರುವ ಮುದ್ದು ಮಕ್ಕಳನ್ನು ಆಕರ್ಷಿಸಲು ಸಣ್ಣ ಪುಟ್ಟ ಅಟಸಾಮಾನುಗಳನ್ನೂ ಇಟ್ಟುಕೊಂಡು ಗಲ್ಲಪೆಟ್ಟಿಯ ಮೇಲೆ ಕೂತುಬಿಟ್ಟರೆ ಭರ್ಜರಿ ವ್ಯಾಪಾರ ಶುರು. ಬಂದ ಅಷ್ಟು ಜನರ ಗುಂಪನ್ನು ಒಮ್ಮೆಲೇ ನಿಭಾಯಿಸಿ ಎಲ್ಲರಿಗೂ ಸಂಯಮ ದಿಂದ ಉತ್ತರಿಸಿ ವ್ಯವಹರಿಸುವ ಜಾಣ್ಮೆ ಈ ಶೆಟ್ಟರುಗಳಿಗೆ ಮಾತ್ರವೇ ಬಂದ ಜನ್ಮತ ಕಲೆ ಎಂದು ಭಾವಿಸುತ್ತೇನೆ.  ಇನ್ನೂ ಮುಂದಿನ ದೇನಿದ್ದರೂ ಆ ಊರಿನ ಸ್ಪರ್ಧಾ ಜಗತ್ತು.

ಊರಿಗೆ ಊರೇ ತಮ್ಮ ಮನೆಗಳ ಮುಂದೆ ದನಕರುಗಳ ಸಿಂಗಾರ  ಕಾರ್ಯದಲ್ಲಿ ನಿರುತರಾಗಿದ್ದರೆ, ಆಟವಾಡುವ ಮಕ್ಕಳ ಒಂದು ದಂಡು ಬೀದಿ ಬೀದಿ ಬೇಟಿಕೊಟ್ಟು ಯಾರ ಕೈಂಕರ್ಯ ಹೆಚ್ಚು ಎಂದು ಅಂದಾಜಿಸಿ ಬರುತ್ತಿದ್ದರು. ಕೆಲವರಂತೂ ಮನೆಯ ಒಳ ಹಿತ್ತಲಿನಲ್ಲೇ ಹಸುಗಳನ್ನು ಸಿಂಗರಿಸುತ್ತಿದ್ದರು. ಏಕೆಂದರೆ ಇಂತಹ ದಂಡಿನಲ್ಲಿ ಎದುರಾಳಿಯ ಮಕ್ಕಳೇನಾದರೂ ಬಂದು ನೋಡಿಬಿಟ್ಟಾರು ಎಂಬ ಭಯ. ಅದು ಸ್ಪರ್ಧೆಯ ಮೊದಲೇ ಗುಟ್ಟು ಬಿಟ್ಟುಕೊಡದ ಗಟ್ಟಿ ನಿರ್ಧಾರ. ಒಟ್ಟಾರೆ ಆ ಘಳಿಗೆಯವರೆಗೂ ಸಸ್ಪೆನ್ಸ್. ಅನಂತರದ ತೋರಿಕೆಯೇ ಬೇರೆ. ಅವರದು ಹೀಗಿತ್ತು, ಅವರದು ಹಾಗಿತ್ತು, ಇವರದ್ದು ಎಲ್ಲರಿಗಿಂತಲೂ ಜೋರಾಗಿತ್ತು ಎಂಬ ಊರವರ ಪ್ರಶಂಸೆಯನ್ನು ವಾರಗಟ್ಟಲೇ ಕೇಳುವ ಭಾಗ್ಯಕ್ಕೆ ತಾವು ಪಾತ್ರರಾಗಬೇಕು ಎಂಬುದೇ ಮೂಲ ಆಸೆ. ಸಾಕಷ್ಟು ಶಕ್ತಿಮೀರಿ ಇರುವ ಐಡಿಯಾನೆಲ್ಲ ಬಳಸಿ ಸಿದ್ದತೆಯಲ್ಲಿ ತೊಡಗುತ್ತಿದ್ದರು. ಸಮಯ ಮೀರಿತೆನೋ ಎಂಬ ಗಗಾಬರಿಗೆ ಕೊನೆಗಳಿಗೆಯಲ್ಲಿ ಕಟ್ಟುತ್ತಿದ್ದ ಬಲೂನು, ಪೇಪರ್ ಮಾಲೆಗಳು ಆಕಾರ ಕಳೆದುಕೊಂಡು ಆಭಾಸ ಎನಿಸಿದರೂ "ಎಲ್ಲರ ಮನೆ ದೋಸೆನೂ ತೂತೆ" ಎಂಬ ಗಾದೆ ಇದ್ದೇ ಇದೆಯಲ್ಲ.. 

ಸಂಜೆ ಆಗುತ್ತಿದ್ದಂತೆ ಸರಿಯಾಗಿ ೪ ಕ್ಕೆ ದೇವಾಲಯದ ಗಂಟೆ ಬಾರಿಸುವುದರೊಂದಿಗೆ ಹಬ್ಬ, ಜಾತ್ರೆ, ಸ್ಪರ್ಧೆ, ಸಾಹಸದ ನಾಡಿಮಿಡಿತ ಹೆಚ್ಚಾಗುವುದು. ಊರಿನ ಎಲ್ಲ ದನಕರುಗಳು ಬಂದು ರಸ್ತೆಯುದ್ದಕ್ಕೂ ಸಾಲಾಗಿ ನಿಂತು ಗುರುವಿನ ಬರುವಿಕೆಗೆ ಕಾಯುವ ಸರಧಿ. ರಸ್ತೆಯ ಆಜುಬಾಜಿನಲ್ಲಿ ನಿಲ್ಲುವ ಜಾನುವಾರುಗಳ ಸೌಂದರ್ಯದ ಲೆಕ್ಕಾಚಾರ ಆಗ ಶುರು. ತಮ್ಮ ಇಡೀ ದಿನದ ಶ್ರಮಾದಾನ ಇಲ್ಲಿ ಪ್ರದರ್ಶನಕ್ಕಿಡಬೇಕಾಗಿತ್ತು. ದನಗಳನ್ನು ಮಾತನಾಡಿಸುವ ಶಬ್ಧಗಳಿಂದ ನೆರೆದ ಜನರ ಗಮನವನ್ನು ತಮ್ಮ ಸಿಂಗಾರಗೊಂಡ ಎತ್ತುಗಳ ಮೇಲೆ ಸೆಳೆಯುವ ಮಂತ್ರ. ಬಲ್ಲವರಿಗೆ ಗೊತ್ತು ಅವರ ತಂತ್ರ. ನೆರೆದವರೆಲ್ಲರೂ ಒಂದೇ ಕಡೆ ನೋಡುತ್ತಿದ್ದಾರೆ ಎಂದಿಟ್ಟುಕೊಳ್ಳಿ, ಅಲ್ಲಾವುದೋ ಒಂದು ಬೆದರಿದ ಎತ್ತು ಗುಂಪನ್ನು ಚದುರಿಸಿ ಧೂಳೆಬ್ಬಿಸಿರುವುದು ಖಾತ್ರಿ. ಅದನ್ನು ಹಿಡಿದು ಹತೋಟಿಗೆ ತರುವಂತಹ ಸಾಹಸಮಯ ಪಟ್ಟುಗಳನ್ನು ಯುವಕರು ಮಾಡುತಿದ್ದರು. ಮಾಡಿ ಬೀಗುತ್ತಿದ್ದರು. ಆ ಹುಡುಗರು ಕಟ್ಟಿಕೊಳ್ಳುವ ಹೆಣೈಕಳು ಅತ್ತ ಸುಳಿದಾಡಿದರೋ ಆ ಪಟ್ಟುಗಳು ಇನಷ್ಟು ಖಚಿತ. ಇದು ಹಸು-ಎತ್ತುಗಳ ಕಥೆಯಾದರೆ, ಕುರಿಮೇಕೆಗಳನ್ನು ಕಟ್ಟಿಕೊಂಡವರ ಕಥೆನೆ ಬೇರೆ. ಕುರಿ ಮೇಕೆಗಳು ಒಂದುಕಡೆ ನಿಲ್ಲುವ ಜಾತಿಯವಲ್ಲ. ಗುರುಗಳು ಬಂದು ಹೋಗುವವರೆಗೆ ಅವುಗಳನ್ನು ನಿಭಾಯಿಸುವ ಸಾಹಸ ಸವಾಲಿನ ಕೆಲಸ. ತೀರ್ಥ ಪ್ರೋಕ್ಷಣೆ ಮುಗಿದ ಮೇಲೆ ವಾಪಾಸು ಮನೆ ಸೇರುವ ಗೊಂದಲದಲ್ಲಿ ಯಾರದೋ ಕುರಿ ಮತ್ಯಾರದೋ ಕುರಿ ಮಂದೆಯೊಂದಿಗೆ ಸೇರಿ  ತಪ್ಪಿಸಿಕೊಂಡಿರುತ್ತಿತ್ತು. ಅದನ್ನು ಹುಡುಕಿ ಎಳೆತರುವುದರೊಳಗೆ ಮೂರು ರಾಯರು ಸವೆದ ದಾರಿ, ದುಗುಡ ಎಲ್ಲ ಪರಿಚಯವಾಗಿಬಿಟ್ಟಿರುತ್ತದೆ. ಈ ಎಲ್ಲ ಸಂದಣೀಯ ಮದ್ಯೆ ಎಮ್ಮೆಗಳ ದಂಡು ಬಂದು ಊರಿನ ಪ್ರಮುಖ ವೃತ್ತದ ಸುತ್ತ ನಿಂತು ಅರಚುತಿದ್ದರೆ ಯಮಧರ್ಮನಿಗೆ ಕೇಳಿಸದೇ ಇದ್ದಿತೇ?. ಅವನ ಪ್ರತಿನಿಧಿಯಾಗಿ ಎಮ್ಮೆಕಾಯುವ ಹುಡುಗ ಎಮ್ಮೆಯ ಮೇಲೇ ಕೂತು ಅವುಗಳನ್ನು ಸಮಾದಾನ ಪಡಿಸುವ ವಿದಿಯೇ ಯಮಯಾತನೆ. ಆದರೂ ಬೇಸರಿಸದ ಅವನು ಎಮ್ಮೆಗಳಂತೆ ನಿಧಾನವಾಗಿ ಬಂದ ಕೆಲಸ ಮುಗಿಸಿಕೊಂಡು ಹೋಗುತ್ತಿದ್ದ. ಎಮ್ಮೆಗಳೆನು ಉಚಿತವಾಗಿ ಬಂದು ಹೋಗುವಂತವಲ್ಲ. ಇಡೀ ಊರನ್ನು ಗುಡಿಸಿ ಸಾರಿಸುವಷ್ಟು ಸಗಣಿ ಬಿಟ್ಟುಹೋಗುತ್ತಿದ್ದವು. ಈ ಹಬ್ಬಕ್ಕೆ ಅವುಗಳ ಬಳುವಳಿ ಅದು.

ಈ ಶೋ ನ ಕಡೆಗೆ ನಡೆಯುತ್ತಿದುದೆ 'ಹೋರಿ' ಆಟ. ಅದು ಒಂಟಿ. ಒಂಟಿ ಸಲಗವೇ ಸರಿ!. ಅದರ ನೋಟ ಭಯಂಕರ. ಹೋರಿಯನ್ನು ಎಡ ಮತ್ತು ಬಲ ಎರಡು ಕಡೆ ಮೂಗುದಾರಕ್ಕೆ ಕಟ್ಟಿ ದಾರ ಹಿಡಿದ ಇಬ್ಬರ ನಡುವೆ ಬರುತ್ತಿದ್ದರೆ, ನೋಡಲು ನಿಂತ ಜನ ಹೆದರಿ ಓಡಿಹೊಗುತ್ತಿದರು. ಕಟ್ಟುಮಸ್ತಾದ ಮೈಕಟ್ಟು, ಬಿರ್ಗಣ್ಣಿನ ನೋಟ , ಊರಿನ ಎಲ್ಲ ಜಾನುವಾರುಗಳು ಆಲಂಕಾರಗೊಂಡು ಹಬ್ಬ ಆಚರಿಸಿದರೆ, ಹೋರಿ ಮಾತ್ರ ಚೂಪಾದ ತನ್ನ ಒಂದು ಕೊಂಬಿನ ತುದಿಗೆ ಕೇವಲ ನಿಂಬೆಹಣ್ಣನ್ನು ಸಿಕ್ಕಿಸಿಕೊಂಡು ಠೀವಿಯಿಂದ ಬರುವುದೇ ಅದಕ್ಕೆ ಅಲಂಕಾರ ಮತ್ತು ಅದರ ಅಹಂಕಾರ. ಹೆಚ್ಚೆಂದರೆ ಕತ್ತಿಗೊಂದು ಹಾರ. ಕುಸ್ತಿ ಅಂಕಣದತ್ತ ಜಟ್ಟಿಯನ್ನು ಕರೆತರುವಂತೆ ಬಾಸವಾಗುತ್ತಿತ್ತು. ಇದಕ್ಕೆ ತದ್ವಿರುದ್ಧ ನೋಡಿ ಜೋಡಿ ಎತ್ತುಗಳ ಆಟ. ಹೆಥೆಚ್ಚವಾಗಿ ಖರ್ಚುಮಾಡಿ ಸಿಂಗಾರಗೊಂಡಿರುತ್ತವೆ. ಅವು ಮೈಬೆನ್ನ ಮೇಲೆ ಕುಪುಸ ಹೊದ್ದು, ಕಾಲ್ಗೆಜ್ಜೆಗಳನ್ನು ಕಟ್ಟಿಕೊಂಡು, ಕಟ್ಟಿಗೆ ಕೊರಳ್ಗೆಜ್ಜೆ, ಸರ ಹಾಕಿಕೊಂಡು ಯಕ್ಷಗಾನ ಆಡುವವರಂತೆ ಹೆಜ್ಜೆಗಳನ್ನಾಕುತಾ ಬರುವ ಪರಿಯೇ ಪರಮಾನಂದ. ಥೇಟ್ ಪ್ಯಾಶನ್ ಶೋ. ವ್ಯಾಪಾರೀ ಶೆಟ್ಟರ ಊಟ್ಟಕ್ಕೆ ಪಾಯಸ, ಪಲ್ಯ ಆದವರೆ ಈ ಎತ್ತುಗಳ ಧಣಿಗಳು. ಇಲ್ಲಿಗೆ ಆಟ ಮುಗಿಯಿತು ಅಂದುಕೊಳ್ಳುತ್ತೇವೆ, ಆದರೆ ಕ್ಲೈಮಾಕ್ಸ್ ಬೇರೆನೆ ಇದೆ. ಅದೇನೆಂದರೆ, ಎಲ್ಲವನ್ನು ನೋಡಿ ಉನ್ಮಾದಗೊಂಡ ಕೆಲವು ಕುಡುಕ ಮಹಾಶಯರು ಸಿಕ್ಕ ಬೀದಿ ನಾಯಿಯೋ, ಸಾಕಿದ ಬೆಕ್ಕಿಗೋ ಅಲ್ಲಿ ಇಲ್ಲಿ ಉದುರಿ ಬಿದಿದ್ದ ಬಲೂನು, ಪೇಪರ್ ಅನ್ನು ಕಟ್ಟಿ ಗುರುಗಳ ಬಳಿ ಎಳೆದುತಂದು ಇವಕ್ಕೂ ನೀವು ತೀರ್ಥ ಪ್ರೋಕ್ಷಿಸಬೇಕೆಂದು ಆಗ್ರಹಿಸಿ, ನಾಯಿ ಜೊತೆ ತಾನು ಮಂಡಿಯೂರಿ ಆಶೀರ್ವಾದ ಪಡೆದು ಖುಷಿಪಡುತ್ತಿದ್ದರು. ಅಲ್ಲಿಗೆ ಎಲ್ಲವೂ ಶುಭಂ.!

-ಸಂತೋಷ್ ಇಗ್ನೇಷಿಯಸ್ 

ಕನ್ನಡ ಚಿತ್ರರಂಗದ ಹೊಸ ಸಂಚಲನ - ಅಂದರ್ ಬಾಹರ್


ಪ್ರಕಟಣೆ ಆದ ದಿನದಿಂದಲೂ ಅಭಿಮಾನಿಗಳನ್ನು ಆಕರ್ಷಿಸುತ್ತಲೇ ಬಂದಿರುವ ಈ ಚಿತ್ರ  ಇನ್ನೇನು ಬಿಡುಗಡೆಯ ಹೊಸ್ತಿಲಲ್ಲಿ ನಿಂತಿದೆ. ಆಂದರ್ ಬಾಹರ್ ಎಂಬ ನಮ್ಮದಲ್ಲದ ಶೀರ್ಷಿಕೆಯ ಬಗ್ಗೆ ಮೊದಮೊದಲು ಇದ್ದ ಅಸಮಾಧಾನವೆಲ್ಲಾ, ಪೂರ್ವಭಾವಿ ಸ್ಟಿಲ್ಸ್ ಗಳಿಂದಲೇ ಮೆಲ್ಲಗೆ ಕರಗತೊಡಗಿದಂತೆ, ಆ ಚಿತ್ರಗಳಲ್ಲಿ ಶಿವಣ್ಣ ಕಾಣಿಸಿಕೊಂಡ ಬಗೆ ಶಿವಣ್ಣನ ಅಭಿಮಾನಿಗಳಿಗೆ ಮಾತ್ರವಲ್ಲದೆ ಎಲ್ಲ ವರ್ಗದವರಿಗೂ ಮೆಚ್ಚುಗೆ ವ್ಯಕ್ತವಾಯಿತು. ಅಲ್ಲಿಂದ ಪ್ರಾರಂಭವಾದ ಚಿತ್ರದ ಬಗೆಗಿನ ಕ್ರೇಜ್ ಇದೀಗ ಹೊಸ ಭರವಸೆಯೊಂದಿಗೆ ಒಂದು ರೀತಿಯ ಸಂಚಲನವಾಗಿ ಮಾರ್ಪಟ್ಟಿದೆ. 

 ಈ ಭರವಸೆ, ಸಂಚಲನ, ನಿರೀಕ್ಷೆಗೆ ತನ್ನದೇ ಆದ ಕಾರಣಗಳಿವೆ. ಎಲ್ಲಕ್ಕಿಂತ ಮೊದಲಿಗೆ ಇದು ಅಪ್ಪಟ ಶಿವಣ್ಣನ ಅಭಿಮಾನಿಗಳಿಂದ ನಿರ್ಮಾಣಗೊಳ್ಳುತ್ತಿರುವ ಸಿನಿಮಾ.ರಾಜ್ ಕುಟುಂಬದ ಮೇಲಿನ ಅಭಿಮಾನವನ್ನೇ ಉಸಿರಾಗಿಸಿಕೊಂಡಿರುವ ಈ  ನಿರ್ಮಾಪಕರುಗಳಿಗೆ ಒಬ್ಬ ಸಾಮಾನ್ಯ ಅಭಿಮಾನಿಯ ಆಸೆ, ನಿರಾಸೆ, ನಿರೀಕ್ಷೆ, ತವಕ, ಕಾತುರ, ಸಂಭ್ರಮ, ದುಗುಡ ಎಲ್ಲವೂ ಅಂಗೈಯಷ್ಟೇ ಪರಿಚಿತ. ಈ ಚಿತ್ರಕ್ಕೆ ನಿರ್ಮಾಪಕರುಗಳಾದರೂ ಹಿಂದಿನ ಚಿತ್ರದವರೆಗೂ ಅಭಿಮಾನಿಗಳಾಗಿ ಎಲ್ಲವನ್ನೂ ಅನುಭವಿಸಿರುವವರೇ. ಅದರಲ್ಲೂ ಡಾ.ರಾಜ್ ಚಿತ್ರಗಳ, ಆ ಸುವರ್ಣ ಯುಗವನ್ನು ಸವಿದವರೇ, ಅದೇ ರೀತಿಯ ಒಂದು ಉತ್ತಮ ಸಧಭಿರುಚಿ ಚಿತ್ರದ ಕನಸೂಂದಿಗೆ ಚಿತ್ರ ನಿರ್ಮಿಸುತ್ತಿರುವ ರಜನೀಶ್, ಪ್ರಸಾದ್ ರಾವ್, ಅಂಬರೀಶ್, ಭಾಸ್ಕರ್, ಶ್ರೀನಿವಾಸ್, ಅವಿನಾಶ್ ಅವರನ್ನು ಒಳಗೊಂಡ ಸಹೃದಯ ನಿರ್ಮಾಪಕ ಬಳಗ, ಒಂದು ಉತ್ತಮವಾದ ಚಿತ್ರವನ್ನೇ ನೀಡುತ್ತದೆ ಎಂಬ ಸಹಜ ನಿರೀಕ್ಷೆ  ಕನ್ನಡ ಪ್ರೇಕ್ಷಕರದು.

ಇನ್ನೂ ದಿನದಿಂದ  ದಿನಕ್ಕೆ ಹೊಸ ಅಚ್ಚರಿಗಳನ್ನೇ ನೀಡುತ್ತಲೇ ಬಂದ ಚಿತ್ರ ತಂಡ, ಅಭಿಮಾನಿಗಳಿಗೆ ಮೊದಲ ಸಿಹಿ ನೀಡಿದ್ದು ಚಿತ್ರದ ತಾರಬಳಗದಿಂದ. ಮಿಲನದಂಥ ಒಂದು ಚಿತ್ರದಿಂದಲೇ ನಮ್ಮವರೇ ಆಗಿ ಹೋದ ಪಾರ್ವತಿ ಮೆನೆನ್ ನ ಆಯ್ಕೆ ಚಿತ್ರಕ್ಕೆ ಒಂದು ಕೌಟುಂಬಿಕ ಚೌಕ್ಕಟ್ಟನ್ನು ನೀಡಿದೆ. ಇನ್ನೂ ಜೋಗಿಯಲ್ಲಿ ಮೋಡಿ ಮಾಡಿದ  ಶಿವಣ್ಣ ಹಾಗೂ ಅರುಂಧತಿ ನಾಗ್ ಜೋಡಿ ಮತ್ತೆ ತೆರೆಯ ಮೇಲೆ ಜೊತೆಯಾಗಿ ಬರುತ್ತಿರುವುದು ಚಿತ್ರಕ್ಕೆ ಮಾಂತ್ರಿಕ ಸ್ಪರ್ಷವನ್ನು ನೀಡಿದೆ. ಮುಂದೆ ಮತ್ತೊಂದು ಸಿಹಿಯಾದ ಅಚ್ಚರಿ ಎಂಬಂತೆ ಚಿತ್ರದ ಸಂಗೀತದ ಹೊಣೆ ಪ್ರಖ್ಯಾತ ಗಾಯಕ ವಿಜಯ್ ಪ್ರಕಾಶ್ ಹೆಗಲಿಗೆ ಬಿದ್ದಿದ್ದು. ಚೊಚ್ಚಲ ಅವಕಾಶವನ್ನು ಮೈಸೂರಿನ ಮಧುರ ಕಂಠದ ಈ ಗಾಯಕ ಭರ್ಜರಿಯಾಗೇ ಸದುಪಯೋಗ ಪಡಿಸಿಕೊಂಡಿದ್ದಾರೆ ಎಂಬ ಮೆಚ್ಚುಗೆಯ ಮಾತುಗಳು ಈಗಾಗಲೇ ಕೇಳಿ ಬರುತ್ತಿವೆ. ಅಂತೆಯೇ ಶೇಖರ್ ಚಂದ್ರ, ಎಂ.ಸ್ ರಮೇಶ್, ಇಮ್ರಾನ್ ಮುಂತಾದವರ ದಂಡೇ ಇದೆ. ಅಲ್ಲಿಗೆ ತೆರೆಯ ಅಂದರ್ ಬಾಹರ್ ಎರಡೂ ಪ್ರತಿಭಾನ್ವಿತ ತಂತ್ರಜ್ಞರಿಂದ ಹೌಸ್ ಫುಲ್ ಆಗಿದೆ. 

ಇನ್ನೂ ಇವೆಲ್ಲಕ್ಕೂ ಕಳಶವಿಟ್ಟಂತೆ ಕಾಣುತ್ತಿರುವುದು ನವ ನಿರ್ದೇಶಕ ಫನೀಶ್ ಎಸ್ ರವರ ಕೈ ಚಳಕ.ಮೊದಲ ಸ್ಟಿಲ್ಸ್ ನಿಂದ ಹಿಡಿದು ಇಲ್ಲಿಯವರೆಗೂ ಅವರು ತೋರುತ್ತಿರುವ, ಆತ್ಮ ವಿಶ್ವಾಸ, ಶ್ರದ್ಧೆ, ಚಿತ್ರ ಪ್ರೀತಿ ಹಾಗೂ ಕಲಾತ್ಮಕತೆ ಎಲ್ಲರ ಮೆಚ್ಚುಗೆಗೊಳಿಸಿರುವುದು ಮಾತ್ರವಲ್ಲದೆ ಚಿತ್ರದ ಬಗ್ಗೆ ಅಪಾರವಾದ ನಿರೀಕ್ಷೆಯನ್ನು ಮೂಡಿಸಿದೆ. ಇಲ್ಲಿಯವರೆಗಿನ ಚಿತ್ರದ ಸ್ಟಿಲ್ಸ್ ಗಳನ್ನು ನೋಡುತ್ತಿದ್ದರೆ, ಚಿತ್ರ ಎಲ್ಲಾ ರೀತಿಯಲ್ಲೂ ಪ್ರೇಕ್ಷಕರಿಗೆ ಇಷ್ಟವಾಗುವ, ಹತ್ತಿರವಾಗುವ ಶುಭ ಸೂಚನೆಗಳು ಕಾಣುತ್ತಿವೆ.

ಇನ್ನೂ ಶಿವಣ್ಣನ ಬಗ್ಗೆ, ಈ ವಯಸ್ಸಿನಲ್ಲೂ ಬತ್ತದ ಅವರ ಉತ್ಸಾಹದ ಬಗ್ಗೆ ಹೇಳುವಿದೇನಿದೆ. ಚಿತ್ರದ ಪೋಸ್ಟರ್ ಒಂದರಲ್ಲಿ ಕೈಯಲ್ಲಿ ಕಾರ್ಡನ್ನು ಹಿಡಿದಿರುವ ಭಂಗಿಯೊಂದೇ ಸಾಕು...simply superb.

ಈ ವಾರ ಆಡಿಯೋ ಬಿಡುಗಡೆ ಇದೆ...ಅಭಿಮಾನಿಗಳ ಹೃದಯದಲ್ಲಿ ಈಗಾಗಲೇ ಸಂತಸದ ತಕಧಿಮಿ......


- ಪ್ರಶಾಂತ್ 

ಕಸವೆಂಬ ನಿತ್ಯ ಸತ್ಯ


ಕಸದಿಂದ ರಸ ಎಂಬದು ಹಳೆಯ ಮಾತು.  ಕೆಲವು ತಿಂಗಳುಗಳ ಹಿಂದೆ ಬೆಂಗಳೂರಿನಲ್ಲಿ ತಲೆದೋರಿದ ಈ ಕಸದ ಸಮಸ್ಯೆ ನಿಜಕ್ಕೂ ಎಲ್ಲರ ತಲೆ ಕೆಡಿಸಿತು.ಮೂಗಗಳನ್ನು ಸಹಾ. ಈ ಸಮಯದಲ್ಲಿ ಈ ರಸ್ತೆಯಲ್ಲಿ ಉಳಿದು ಬಿದ್ದಿದ್ದ ಕಸದಿಂದ ಉಕ್ಕಿದ ರಸಗಳು ಅನೇಕ. ರಸ್ತೆಯ ಅರ್ಧ ಭಾಗಕ್ಕೆ ಹರಡಿಕೊಂಡಿದ್ದ ಕಸದ ನಡುವೆ ನಡೆದೋ ವಾಹನಗಳಲ್ಲಿ ಹೋಗುತ್ತಿದ್ದ ಜನರು, 
ತಮ್ಮ ಮೂಗುಗಳನ್ನು ಮುಚ್ಚಿಕೊಂಡು, ಕಸವನ್ನು ದಾಟಿ, ಒಮ್ಮೊಮ್ಮೆ ಹಾರಿ, ಕೆಲವೊಮ್ಮೆ ಜಾರಿ ಮುಂದೆ ಹೋಗುತ್ತಿದ್ದದ್ದನ್ನು ನೋಡಿದಾಗ ಎಂಥವರಿಗೂ ಕರುಣಾ ರಸ ಉಕ್ಕಿ ಬರುತ್ತಿತ್ತು. ಇನ್ನು ಹಾರಲು ಆಗದೆ,  ಜಾರಲೂ ಒಪ್ಪದೇ ಕಸದ ಮೇಲೇ ನಡೆದುಕೊಂಡು ಹೋಗಬೇಕಾದವರ ಮುಖದಲ್ಲಿ  ಕಾಣುತ್ತಿದ್ದ ಕೋಪವನ್ನು ಕಂಡಾಗ ರೌದ್ರ ರಸದ ನೆನಪು ಬೇಡವೆಂದರೂ 
ಬರುತ್ತಿತ್ತು. ಜನ ಹೇಗಾದರೂ ಒದ್ದಾಡಲಿ ಕಾದು ನೋಡುವ ಎಂಬಂತೆ ಎಲ್ಲವನ್ನು ಸಹನೆಯಿಂದ ನೋಡುತ್ತಿದ್ದ ಸರ್ಕಾರ, ಮಹಾನಗರ ಪಾಲಿಕೆಗಳು ಶಾಂತ ರಸವನ್ನು ಅಭ್ಯಾಸಿಸಿಕೊಂಡರೆ,ಕಸದ ರಾಶಿಯಲ್ಲಿ ಸತ್ತು ಬಿದ್ದಿದ್ದ ಪ್ರಾಣಿಗಳನ್ನು ಕುಕ್ಕಿ ತಿನ್ನುತ್ತಿದ್ದ ನಾಯಿ, ಕಾಗೆಗಳ ದೃಶ್ಯಗಳು ಭೀಭೀತ್ಸ್ಯ ರಸಕ್ಕೆ ಸಾಕ್ಷಿ. ಇನ್ನೂ ಕೆಲವೇ ದಿನಗಳಲ್ಲಿ ಇದಕ್ಕೆ ಪರಿಹಾರ ಕಂಡುಕೊಳ್ಳುತ್ತೇವೆ, ಆಲ್ಲಿಯವರೆಗೂ ಜನ ಸಹನೆಯಿಂದರಬೇಕು ಎಂದು ನಾಯಕರುಗಳು ನೀಡುತ್ತಿದ್ದ ಹೇಳಿಕೆಗಳು ಹಾಸ್ಯ ರಸಕ್ಕೆ ತಕ್ಕ ಉದಾಹರಣೆಗಳಾದರೆ, ತಮ್ಮ ಪಕ್ಷಕ್ಕೆ  ಅಧಿಕಾರ ಕೊಟ್ಟರೆ ಕ್ಷಣ ಮಾತ್ರದಲ್ಲಿ ಇದಕ್ಕೆ ಪರಿಹಾರ ಸಿದ್ಧ ಎಂಬ ವೀರರಸ ವಿರೋಧ ಪಕ್ಷಗಳದ್ದು. ಇದೆಲ್ಲಾದರ ನಡುವೆ ಕಸ ವಿಲೇವಾರಿಗಾಗಿ ಎತ್ತಿಟ್ಟ ಹಣ ಅದೆಲ್ಲಿ ಹೋಗುತ್ತಿದೆ ಎಂಬ ಆಶ್ಚರ್ಯ, ಅದ್ಭುತರಸ ಮಾತ್ರ ಜನ ಸಾಮಾನ್ಯರದು. 

ಸರ್ಕಾರಕ್ಕೂ ಇದರ ಕ(ಸ)ಸಿವಿಸಿ  ತಪ್ಪಲಿಲ್ಲ. ಮಹಾನಗರ ಪಾಲಿಕೆ ಸಹಾ ತಡವಾಗಿ ಎಚ್ಚೆತ್ತುಕೊಂಡು ಏನೆಲ್ಲಾ ಕಸರತ್ತು ಮಾಡಿದರೂ ಇನ್ನೂ ಶಾಶ್ವತ ಪರಿಹಾರವೆನ್ನುವುದು ದೊರಕಿಲ್ಲ. ಕಸವನ್ನು ಕೇವಲವಾಗಿ ನೋಡುವುದೇನೋ ಸರಿ ಆದರೆ ’ಕೇವಲ ಕಸ’ ಎನ್ನುವುದು ಇಂದಿನ ಪರಿಸ್ಥಿತಿಯಲ್ಲಿ ಬೇಜವಬ್ದಾರಿಯ ಮಾತಾಗುತ್ತದೆ. ಕಸದಿಂದ ರಸ ಮಾತ್ರವಲ್ಲ ಕಸದೊಂದಿಗೆ ಇಂದು ಹಣ,ಗುತ್ತಿಗೆ, ಪರಿಸರ ನಾಶವೆಂಬ ಅಪಸ್ವರ, ದಬ್ಬಾಳಿಕೆ, ಹೋರಾಟ, ಧರಣಿ ಎಲ್ಲವೂ ಸೇರಿಕೊಂಡಿವೆ. ಈಗ ಕಸ ಕೇವಲವಾಗಿ ಉಳಿದಿಲ್ಲ. ಅದರ ವಿಲೇವಾರಿಗೆ ನೂರಾರು ಕೋಟಿಗಳ ಯೋಜನೆಗಳು, ಒಪ್ಪಂದಗಳು, ಗುತ್ತಿಗೆಗಳು ಏರ್ಪಡುತ್ತಿವೆ. ಬೆಂಗಳೂರು ನಗರದ ಕಸದ ವಿಲೇವಾರಿ ಗುತ್ತಿಗೆಯ ಮೂತ್ತ ಸುಮಾರು ೩೦೦ ಕೋಟಿಗೂ ಅಧಿಕ ಎಂದರೆ ಕಸದ ಶಕ್ತಿ, ಸಾಧ್ಯತೆ ಅರ್ಥವಾಗುತ್ತದೆ. ಪ್ರತಿದಿನವು ಬೃಹತಾಕಾರದಲ್ಲಿ ಬೆಳೆಯುತ್ತಿರುವ ಕಸದ ಪ್ರಮಾಣದಿಂದ ನಮ್ಮ ಪರಿಸರದ ಮೇಲೆ ಆಗುತ್ತಿರುವ ಅಡ್ಡ  ಪರಿಣಾಮಗಳು, ಮಲೀನಗೊಳ್ಳುತ್ತಿರುವ ಅಂತರ್ಜಲ, ಜಾಗದ ಸಮಸ್ಯೆಗಳು ನಮ್ಮ ಭವಿಷ್ಯವನ್ನು ಭಯಾನಕವಾಗಿಸುವುದರಲ್ಲಿ ಸಂದೇಹವೇ ಇಲ್ಲ. ಪ್ರತಿ ಪ್ರಜೆಯೂ ಮತ ಹಾಕುತಾನೋ ಇಲ್ಲವೋ ಕಸವನ್ನು ಮಾತ್ರ ಉತ್ಪಾದಿಸುತ್ತಾನೆ, ಬೀದಿಗೆ ತಂದು ಹಾಕಿಯೇ ತೀರುತ್ತಾನೆ.

ಹಾಗೆಂದ ಮಾತ್ರಕ್ಕೆ ಇವೆಲ್ಲಕ್ಕೂ ಪರಿಹಾರವೇ ಇಲ್ಲವೇ ಎಂಬ ಪ್ರಶ್ನೆ ಮೂಡ ಬಹುದು. ಸಮಸ್ಯೆ ಎಷ್ಟೇ ಜಟಿಲವಾಗಿದ್ದರೂ ಅದಕ್ಕೆ ಪರಿಹಾರಗಳು ಖಂಡಿತ ಇರುತ್ತವೆ. ನಮ್ಮಂತೆ ದಟ್ಟ ಜನ ಸಂಖ್ಯೆಯ, ಅಗಾಧ ಕಸ ಹೊಮ್ಮಿಸುವ ಇತರ ದೇಶಗಳು ಇದಕ್ಕೆ ಕಂಡುಕೊಂಡಿರುವ ಪರಿಹಾರ ಮಾರ್ಗಗಳು ನಮಗೆ ಮಾದರಿಯಾಗಬಲ್ಲದು. ಮಾರಕವಾಗಬಲ್ಲ ಕಸವನ್ನು ಪರಿವರ್ತಿಸಿ ಅದನ್ನು ಶಕ್ತಿಯಾಗಿ ಖಂಡಿತ ಬಳಸಿಕೊಳ್ಳಬಹುದು. ಅದರೆ ಅದಕ್ಕೆ ಬೇಕಾದ ರಾಜಕೀಯ ಇಚ್ಛಾ ಶಕ್ತಿ, ಸಾಮಾಜಿಕ ಕಾಳಜಿ ಹಾಗೂ ಜನ ಸಾಮಾನ್ಯರ ಸಹಾಕರ ಕೊರತೆ ನಮ್ಮಲ್ಲಿ ಎದ್ದು ಕಾಣುತ್ತದೆ. ಇದರಿಂದಾಗಿ ಒಂದು ಸಣ್ಣ ಸಮಸ್ಯೆಯೂ ದೊಡ್ಡ ಪ್ರಮಾಣದಲ್ಲಿ ಬೆಳೆದು ಪರಿಹಾರವು ದೂರದ ಮಾತಾಗುವ ಪರಿಸ್ಥಿತಿ ನಮ್ಮದಾಗಿದೆ. ಕಸದ ಸಮಸ್ಯೆಯೂ ಇದಕ್ಕೆ ಹೊರತಲ್ಲ. ಮೇಲ್ನೋಟಕ್ಕೆ ಕಾಣುವ ಕಾರಣಗಳ ಜೊತೆಗೆ ಹಲವಾರು ಕಾಣದ ಕೈಗಳು, ಹಿತಾಸಕ್ತಿಗಳು ಸಮಸ್ಯೆಗೆ ತಮ್ಮದೇಆದ ರೀತಿಯಲ್ಲಿ ಕಾರಣವಾಗಿವೆ. ಇವೆಲ್ಲವೂ ದೊಡ್ಡ ಮಾತುಗಳು. ಆದರೆ ಒಂದು ಕಸದ ಸಮಸ್ಯೆ ಹೇಗೆ ಸರಳವೂ ಜೊತೆ ಜೊತೆಗೆ ಜಟಿಲವೂ ಎಂಬುದರ ಪರಿಚಯ ನಿಮ್ಮದಾಗಬೇಕಾದರೆ, ಖಾಲಿ ನಿವೇಶನವಿರುವ ಒಂದು ರಸ್ತೆಯನ್ನು ನೀವು ನೋಡಬೇಕು. ಅಲ್ಲಿ ನಿಮ್ಮ ಮನೆಯಿದ್ದು, ಅದರಲ್ಲೂ ನಿಮ್ಮ ಮನೆ ಆ ಖಾಲಿ ನಿವೇಶನದ ಪಕ್ಕದಲ್ಲೇ ಇದ್ದರೆ ಕಸದ ಸಮಸ್ಯೆಯು ನಿಮಗೆ ಇನ್ನಷ್ಟು ತಿಳಿ ತಿಳಿಯಾಗಿ ಅರ್ಥವಾಗುತ್ತದೆ. ಇಂದಿನ ಬೆಂಗಳೂರಿನ ಮಧ್ಯಮ, ಮೇಲ್ಮಧ್ಯಮ ವರ್ಗದ ಜನರಿರುವ ಬಡಾವಣೆಗಳಲ್ಲೂ ಒಂದು ಸಾಧಾರಣ ಸೈಟಿಗೆ ಎನ್ನಿಲ್ಲವೆಂದರೂ ಸುಮಾರು 30 ರಿಂದ 40 ಲಕ್ಷ ಬೆಲೆ. ಅಷ್ಟೊಂದು ಬೆಲೆಯಿದ್ದರೂ ಒಂದು ಖಾಲಿ ಸೈಟಿನ ಮೇಲೆ ನಡೆಯುವ ಶೋಷಣೆ ಮಾತ್ರ ಹೇಳತೀರದು.

ಮೊದಲು ಅದೇ ರಸ್ತೆಯಲ್ಲಿ ಮನೆ ಕಟ್ಟುತ್ತಿರುವವರು, ಖಾಲಿ ನಿವೇಶನದಲ್ಲಿ ತಮ್ಮ ಕೂಲಿಯವರಿಗೆ ಒಂದು ಶೆಡ್ ಹಾಕುವುದರೊಂದಿಗೆ ನಿವೇಶನಕ್ಕೆ ಸ್ವಲ್ಪ ಗೌರವ ದೊರಕುತ್ತದೆ. ನಿವೇಶನದ ಮಾಲೀಕನಿಗೂ ಕೊಂಚ ಗೌರವ ಧನ. ಈ ಸಮಯದಲ್ಲಿ ಅಲ್ಲಿ ಯಾರೂ ಕಸ ಹಾಕುವ ಧೈರ್ಯ ಮಾಡುವುದಿಲ್ಲ. ಕಸ ಹಾಕಿದರೆ ಅಲ್ಲಿನ ಕೂಲಿಯವನ ಹೆಂಡತಿಯ ಬಾಯಲ್ಲಿ ಬರುವ ಬಯ್ಗಳಕ್ಕಿಂತ ಕಸ ಮನೆಯಲ್ಲಿ ಇರುವುದೇ ಲೇಸು. ಮುಂದೆ ಕಟ್ಟಡದ ಕೆಲಸ ಮುಗಿದು, ಅದೇ ಮನೆಯ ಗೃಹ ಪ್ರವೇಶದ ಸಂದರ್ಭದಲ್ಲಿ ಈ ಖಾಲಿ ನಿವೇಶನ ಊಟದ ಮನೆಯಾಗಿ ಪರಿವರ್ತಿತವಾಗುತ್ತದೆ. ಅಲ್ಲಿಂದ ಪ್ರಾರಂಭ, ಕಸದೊಂದಿಗಿನ ಸ್ನೇಹ ಮಿಲನ. ಅತಿಥಿಗಳು ಹೊರಟರೂ ಊಟದ ಎಲೆ, ತರಕಾರಿ, ಮೂಳೆಗಳೆಲ್ಲಾ ಅಲ್ಲೇ ಉಳಿದು ಹೋಗುತ್ತದೆ. ಕೂಲಿಯವರ ಶೆಡ್ ಕೂಡ ಖಾಲಿ. ಒಂದೆರೆಡು ದಿನವಾದ ಮೇಲೆ ಹೊಸ ಮನೆಯ ಮುಂದೆ ಕಟ್ಟಿದ ಚಪ್ಪರದ ತೆಂಗಿನ ಗರಿಗಳು ಕೂಡ ಬಂದು, ಮೊದಲು ಒರಗಿಕೊಂಡಂತೆ ಮಾಡಿಕೊಂಡು ನಂತರ ಅಲ್ಲೇ ಮಲಗಿಕೊಳ್ಳುತ್ತವೆ. ಎಬ್ಬಿಸುವವರು ಯಾರು? ಹೊಸ ಮನೆ ಎಂದ ಮೇಲೆ ಒಡೆದು ಹೋದ ಟೈಲ್ಸ್ ಚೂರುಗಳು, ಪೇಯಿಂಟ್ ಡಬ್ಬಗಳು, ಎಲ್ಲವೂ  ಮೂಟೆಯೊಂದರಲ್ಲಿ ಸುಂದರವಾಗಿ ಜೋಡಿಸಲ್ಪಟ್ಟು ಇಲ್ಲೇ ಬಂದು ಸ್ಥಾಪಿತವಾಗುತ್ತದೆ. ಯಾರಾದರೂ ಧೈರ್ಯ ಮಾಡಿ ಇಲ್ಲಿ ಬಿಸಾಡಬೆಡಿ ಎಂದರೆ, ಉತ್ತರ ಸಿದ್ಧವಾಗಿರುತ್ತದೆ " ಎಲ್ಲಾ ಒಟ್ಟಿಗೆ ಕ್ಲೀನ್ ಮಾಡಿ ತೆಗೆದುಕೊಂಡು ಹೋಗುತ್ತೇವೆ ಸಾರ್"

ಅವರು ಮುಂದೆ ಅದನ್ನು ನಿಜಕ್ಕೂ ಕ್ಲೀನ್ ಮಾಡುತ್ತಾರೋ ಇಲ್ಲವೋ, ಅದರೆ ಸುತ್ತಮುತ್ತಲಿನ ಜನರ ಮನಸ್ಸಿನಲ್ಲಿ ಅಲ್ಲಿ ಒಂದು ಕಸದ ತೊಟ್ಟಿ ಹುಟ್ಟಿಕೊಂಡು, ಅದು ಎಲ್ಲರನ್ನೂ ತನ್ನತ್ತ ಆಕರ್ಷಿಸಲು ಪ್ರಾರಂಭಿಸುತ್ತದೆ. ಮೊದ ಮೊದಲಿಗೆ ಸುತ್ತಮುತ್ತಲಿನವರು ಅದನ್ನು ಗಮನಿಸಿದರೂ ಕಸ ಹಾಕದೆ ಮತ್ತಷ್ಟು ಕಸ ಸೇರುವ ತನಕ ಸಹನೆವಹಿಸುತ್ತಾರೆ. ನಂತರದ ದಿನಗಳಲ್ಲಿ ಹಳೆಯ ಟ್ಯೂಬ್ ಲೈಟ್ ಗಳು, ಹಲಗೆಗಳು, ಪ್ಲಾಸ್ಟಿಕ್ ಡಬ್ಬಗಳು ಹಳೆಯ ಒಡೆದ ಕಿಟಕಿ ಗಾಜುಗಳು ಎಂಟ್ರಿ ಕೊಟ್ಟು ತೊಟ್ಟಿಗೆ ಬಣ್ಣ ಕೊಡುತ್ತವೆ.  ಇವೆಲ್ಲಾ ಬಂದ ಮೇಲೆ ಚಿಂದಿ ಹಾಯುವವರು ವಾರಕ್ಕೆ ಒಮ್ಮೆಯೋ ಎರೆಡು ಬಾರಿಯೋ ಬಂದು ಚಟುವಟಿಕೆ ಆರಂಭಿಸುತ್ತಾರೆ. ಇಷ್ಟೆಲ್ಲಾ ಆಗಿ ಆಲ್ಲಿಗೆ ನಿಜಕ್ಕೂ ಒಂದು ಕಸದ ತೊಟ್ಟಿಯ ಕಳೆ ಬರುತ್ತಿದ್ದಂತೆ ಅಲ್ಲಿ ಅನೇಕ ವಸ್ತುಗಳು ಕಾಣಿಸಿಕೊಳ್ಳಲು ಪ್ರಾರಂಭವಾಗುತ್ತದೆ. ತುರಿದ ಸೌತೆಕಾಯಿ ಸಿಪ್ಪೆ, ಸುಲಿದ ಬಾಳೆ ಹಣ್ಣಿನ ಸಿಪ್ಪೆ, ಅವರೆಕಾಯಿಯ ಸಿಪ್ಪೆ, ಮಾವಿನಹಣ್ಣಿನ ವಾಟೆ, ಕೊಳೆತ ಟೊಮೆಟೊ, ಟೂತ್ ಬ್ರಷ್, ಪೇಸ್ಟಿನ ಟ್ಯೂಬು ಇತ್ಯಾದಿಗಳು. ಇನ್ನು ಅಲ್ಲಿ ಕಸ ಹಾಕಲು ಯಾರಿಗೂ ಹಿಂಜರಿಕೆಯಿಲ್ಲ. ಹಗಲಿನಲ್ಲಿ ಸ್ವಲ್ಪ ಸಂಕೋಚ. ಕತ್ತಲಿನಲ್ಲಿ ರಭಸ, ತಮ್ಮ ಮನೆಯಿಂದಲೇ ತೂರಾಟ. 

 ( ಮುಂದುವರಿಯುತ್ತದೆ)

-ಪ್ರಶಾಂತ್ ಇಗ್ನೇಷಿಯಸ್

ಕಸವೆಂಬ ನಿತ್ಯ ಸತ್ಯ - ಭಾಗ 2


(ಮುಂದುವರಿದ ಭಾಗ)

ಇವುಗಳ ನಡುವೆ ಪಕ್ಕದಲ್ಲಿರುವ ಮನೆಯವರ ಕಷ್ಟ ಹೇಳತೀರದು. ಇಲ್ಲದ ಸೊಳ್ಳೆಯ ಕಾಟ ಪ್ರಾರಂಭವಾಗಿ ಮಕ್ಕಳ ಕೈ ಕಾಲು, ಕೆನ್ನೆ, ಮೂಗುಗಳ ಮೇಲೆಲ್ಲಾ ಅವುಗಳದ್ದೇ ಹೆಜ್ಜೆ ಗುರುತು. ಕಸದ ರಾಶಿಯಿಂದ ಹೊರಡುವ ವಾಸನೆಗೆ ಆ ಕಡೆಯ ಕಿಟಕಿ ತೆರೆಯುವಂತಿಲ್ಲ, ಒಮ್ಮೊಮ್ಮೆ ಬೆಂಕಿ ಬಿದ್ದಾಗ ಏಳುವ ಹೊಗೆಗೆ ದಿನವೆಲ್ಲಾ ಬಾಗಿಲೂ ತೆರೆಯುವಂತಿಲ್ಲ. ಮನೆಯ ಕಾಪೌಂಡಿಗೆ ಅಂಟಿಕೊಂಡಂತೆ ದೊಡ್ಡ ರಂಧ್ರಗಳು ಕಾಣಿಸಿಕೊಳ್ಳತೊಡಗುತ್ತವೆ. ಅಲ್ಲಿಗೆ ಸಣ್ಣದಾಗಿ ಹುಟ್ಟಿಕೊಳ್ಳುತ್ತದೆ ಪ್ರಾಣಿಗಳ ಪ್ರಪಂಚ. ಎಲ್ಲವೂ ಮೌನವಾಗಿರುವ ಸಮಯದಲ್ಲಿ ಆ ರಂಧ್ರದಿಂದ ಮೊದಲು ತಲೆಯನ್ನು ಚಾಚಿ ನಂತರ ಪುಟ್ಟ ಪುಟ್ಟ ಹೆಜ್ಜೆಯಿಡುತ್ತಾ ನಿವೇಶನವನ್ನು ಸರ್ವೇ ಮಾಡುವ ಇಲಿಗಳೂ ಅವುಗಳ ದೊಡ್ಡಣ್ಣಗಳು ತಮ್ಮ ಕೆಲಸ ಮುಗಿದ ಮೇಲೆ ಮತ್ತೆ ತಮ್ಮ ಗೂಡು ಸೇರಿಕೊಳ್ಳುತ್ತವೆ. ಸೈಟುಗಳು ಬೇಜಾರಾದಾಗ ಪಕ್ಕದ ಮನೆಗಳತ್ತ ಅವುಗಳ ಪಯಣ. ಒಮ್ಮೊಮ್ಮೆ ಸೈಟಿನಲ್ಲಿ ಕಾಣಿಸಿಕೊಂಡ ರಂಧ್ರಗಳು ಮನೆಯ ಸ್ಕ್ರೀನು, ಬಟ್ಟೆ, ಪುಸ್ತಕಗಳಲ್ಲೂ ಕಾಣಿಸಿಕೊಳ್ಳ ತೊಡಗುತ್ತವೆ. ಈ ಇಲಿಗಳ ಭೇಟಿ ಮಾಡಲು ಬರುವ ಬೆಕ್ಕುಗಳದ್ದು ಅಲ್ಲೇ ವಾಸ್ತವ್ಯ. ಒಮ್ಮೊಮ್ಮೆ ಮನೆಯ ಹಾಲಿಗೂ (ನಂದಿನಿ ಹಾಲು) ಅವುಗಳ ದಾಳಿ. ಅವುಗಳಿಗೆ ಗಂಟೆ ಕಟ್ಟುವವರಾರು. ಇಲ್ಲದ ಸೊಳ್ಳೆಯ ಕಾಟ ಪ್ರಾರಂಭವಾಗಿ ಮನೆಯಲ್ಲಿನ ಮಕ್ಕಳ ಕೈ ಕಾಲು, ಕೆನ್ನೆ, ಮೂಗುಗಳ ಮೇಲೆಲ್ಲಾ ಅವುಗಳದ್ದೇ  ಹೆಜ್ಜೆ ಗುರುತು. ಕಸದ ರಾಶಿಯಿಂದ ಹೊರಡುವ ವಾಸನೆಗೆ ಆ ಕಡೆಯ ಕಿಟಕಿ ತೆರೆಯುವಂತಿಲ್ಲ,  ಒಮ್ಮೊಮ್ಮೆ ಬೆಂಕಿ ಬಿದ್ದಾಗ ಏಳುವ ಹೊಗೆಗೆ ದಿನವೆಲ್ಲಾ ಬಾಗಿಲೂ ತೆರೆಯುವಂತಿಲ್ಲ.ಇನ್ನೂ ಚಿಂದಿ ಆಯುವವರು ಬಂದ ಮೇಲೆ ನಾಯಿಗಳು ಸುಮ್ಮನಿರಲು ಸಾಧ್ಯವೇ. ಅವು ಆದಷ್ಟು ಮಟ್ಟಕ್ಕೆ ಬೊಗಳಿ ಚಿಂದಿಯವರನ್ನು ಓಡಿಸಿ, ಅವರು ಹೋದ ಮೇಲೆ, ಅವರ ಕೆಲಸವನ್ನು ಇವು ಮುಂದುವರಿಸುತ್ತವೆ. ಅದು ಮುಗಿಯದ ಹುಡುಕಾಟ, ಇತ್ತ ರಸ್ತೆಯಲ್ಲಿನ ಪ್ರಾಣಿ ಪ್ರಿಯರು ಬಂದು ನಾಯಿಗಳಿಗೆ ಹಿಂದಿನ ದಿನದ ಅಳಸಿದ ಅನ್ನ, ಚಿತ್ರಾನ್ನ, ಮೊಸರನ್ನ, ಕೆಲವೊಮ್ಮೆ ಮೂಳೆಗಳನ್ನು ಅರ್ಪಿಸುತ್ತಾರೆ. ನಾಯಿಗಳಿಗೆ ಅದು ಇಷ್ಟವಾದರೆ ತಿನ್ನುತ್ತವೆ, ಇಲ್ಲವೇ ಅದು ಒಣಗಿ ಕಸವಾದಗಲೇ ಮುಕ್ತಿ. ಇವುಗಳನ್ನು ತಿನ್ನಲು ನಾಯಿಗಳಲ್ಲೇ ಸ್ಪರ್ಧೆ ಪ್ರಾರಂಭವಾಗಿ, ರಾತ್ರಿಯೆಲ್ಲಾ ಗೊರ್ರ್ ಗೊರ್ರ್ ಶಬ್ದ ರಸ್ತೆಯ ಅವಿಭಾಜ್ಯ ಅಂಗವಾಗುತ್ತದೆ. ಇವೆಲ್ಲದರ ನಡುವೆ ಹಸುಗಳು ಸಹಾ ಬಂದು ಅಳಿದುಳಿದ ಹುಲ್ಲು ತಿನ್ನುತ್ತಾ ತಮ್ಮ ಪಾಲಿನ ಸಗಣಿಯನ್ನು ಅಲ್ಲೇ ಹಾಕುತ್ತವೆ.

ಇಷ್ಟೆಲ್ಲಾ ಹೇಗಾಯಿತು, ಏಕಾಯಿತು ಎಂದು ನೋಡಲು ಹೊರಟರೆ ಉತ್ತರಗಳು ಸರಳ. ಯಾರೋ ಒಬ್ಬರು ಹಾಕಿದ ಕಸಕ್ಕೆ ಎಲ್ಲರದ್ದೂ ತಮ್ಮ ಕೈಲಾದ ಸಹಾಯ. ಹಾಗೆ ನೋಡಿದರೆ ದಿನವೂ ತಪ್ಪದೆ ಕಸದ ಆಟೋ, ಗಾಡಿ ಬಂದು ಮನೆಯ ಮುಂದೆಯೇ ಕಸ ಹಾಕಿಸಿಕೊಳ್ಳುತ್ತದೆ. ಆದರೆ ಕೆಲವರು ಬೆಳಿಗ್ಗೆಯ ತನಕ ಕಸ ತಮ್ಮ ಮನೆಯಲ್ಲಿರುವುದು ಬೇಡವೆನ್ನುವಷ್ಟು ಶುದ್ಧ ಹಸ್ತರು. ಅವರಿಂದ ರಾತ್ರಿಯೇ ಖಾಲಿ ಸೈಟಿಗೆ ಕಸ ರವಾನೆ. ಇನ್ನೂ ಕೆಲವರದು ಬೆಳಗ್ಗೆ  ಗಾಡಿ ಬರುವ ಸಮಯದಲ್ಲಿ ಇನ್ನೂ ಗಾಡ ನಿದ್ದೆ. ಅದಕ್ಕೆ ಕೆಲಸಕ್ಕೆ ಹೋಗುವಾಗ ಕವರಿನ್ನಲ್ಲಿ ಕಸವನ್ನು ತುಂಬಿಕೊಂಡು ಎಸೆದು ಹೋಗುವ ಚಾಣಾಕ್ಷ್ಯತನ. ಮತ್ತೆ  ಕೆಲವರು ಮುಂಜಾನೆಯ ಕೆಲಸಕ್ಕೆ ಹೋಗುವುದರಿಂದ ಕಸದ ಗಾಡಿಗೆ  ಕಾಯಲು ಆಗುವುದಿಲ್ಲ. ಹೇಗೂ ಖಾಲಿ ನಿವೇಶನ, ಮುಂಜಾನೆಯೇ ಆದರೆ ಯಾರೂ ನೋಡುವುದೂ ಇಲ್ಲ. ಇನ್ನೂ ಜಾಗಿಂಗ್, ವಾಕಿಂಗ್ ಹೋಗುವವರಲ್ಲಿ ಕೆಲವರಿಗೆ ಕಸ ಸುರಿಯುವುದು ಹವ್ಯಾಸ. 

ಇಷ್ಟೆಲ್ಲಾ ಆಗುತ್ತಿದ್ದರೂ ಇದರ ಬಗ್ಗೆ ಯೋಚಿಸುವುದು ಅದೇ ಸೈಟಿನ ಪಕ್ಕದ ಮನೆಯವರು ಮಾತ್ರ. ಇದನ್ನು ತಡೆಗಟ್ಟ ಬೇಕಾದರೆ ತಡ ರಾತ್ರಿಯಲ್ಲಿ ಜಾಗರಣೆ ಇದ್ದು ಇಲ್ಲವೇ ಮುಂಜಾನೆ ಬೇಗನೆ ಎದ್ದು ಯಾರು ಹಾಕುತ್ತರೆಂದು ನೋಡಬೇಕು. ನೋಡಿದರೂ ಕೆಲವೊಮ್ಮೆ ಅದು ತಮ್ಮ ನೆರಯವರೇ ಅದರಿಂದ ಏನೂ ಹೇಳಲೂ ಆಗದ ಸಂದಿಗ್ದತೆ. ಹಾಗೇನಾದರು ಕಸ ಹಾಕುವವರನ್ನು ಕಂಡು ಕೇಳಿದರೂ ಇಲ್ಲಿ ಮೊದಲೇ ಕಸವಿತ್ತು ಅದಕ್ಕೆ ಹಾಕಿದೆ ಎಂಬ ಉತ್ತರ. ಕಸದಿಂದ ತೊಟ್ಟಿಯೋ , ತೊಟ್ಟಿಯಿಂದ ಕಸವೋ ಎಂಬ ಗೊಂದಲದಿಂದಲೇ ತಮ್ಮದಲ್ಲದ ಜಾಗವನ್ನು ಹೊತ್ತಲ್ಲದ ಹೊತ್ತಿನಲ್ಲಿ ಕಾಯಬೇಕಾದ ಹಣೆಬರಹ ತಮಗೇಕೆ ಎಂದು ಕೊಳ್ಳುತ್ತಾ ಮೂಗು ಮುಚ್ಚಿಕೊಂಡು, ಸೊಳ್ಳೆ ಕಚ್ಚಿಸಿಕೊಂಡು ಬಾಳುವುದನ್ನೇ ಅಭ್ಯಾಸ ಮಾಡಿಕೊಂಡಿರುತ್ತಾರೆ. ಇನ್ನು ಗುಡಿಸುವವರನ್ನು, ಕಸ ಸಂಗ್ರಹಿಸುವವರನ್ನು ಅಲ್ಲಿಂದ ಕಸ ಎತ್ತಲು ಹೇಳಿದರೆ, ಅದು ಅವರ ಕಾರ್ಯ ವ್ಯಾಪ್ತಿಗೆ ಬರುವುದಿಲ್ಲವೆಂಬ ಸಿದ್ಧ ಉತ್ತರ. ಅವರೇನಿದ್ದರೂ ರಸ್ತೆಯ ಮೇಲಿನ ಕಸ ತೆಗೆಯುವ ಪರಿಣಿತರು. "ನಾವು ದಿನವೂ ಮನೆಯ ಮುಂದೆಯೇ ತಪ್ಪದೆ ಕಸ ಸಂಗ್ರಹಿಸಿದರೂ ಸೈಟಿನಲ್ಲಿ ಕಸ ಯಾಕೆ ಹಾಕಬೇಕು" ಎಂಬ ಪರಿಣಿತ ಪ್ರಶ್ನೆಗೆ ಎಲ್ಲಿದೆ ಉತ್ತರ? ಕಸ ಹಾಕುವವರನ್ನು ಕೇಳೋಣ ಎಂದರೆ ಮತ್ತೆ ತಡ ರಾತ್ರಿಯ ತನಕ ಕಾಯಬೇಕು ಇಲ್ಲ ಮುಂಜಾನೆ ಚಳಿಯಲ್ಲಿ ಎದ್ದು ಕೇಳಬೇಕು. ಇನ್ನೂ ಸೈಟಿನ ಯಜಮಾನನನ್ನು ಕೇಳಿದರೆ "ಕಸ ಹಾಕ್ತಾರೆಂತ ಕಾಸಿಲ್ಲದಿದ್ದರೂ ಸಾಲ ಮಾಡಿ ಅರ್ಜೆಂಟ್ ಅರ್ಜೆಂಟಾಗಿ ಮನೆ ಕಟ್ಟೋಕೆ ಆಗುತೇನಣ್ಣ ಎನ್ನುತ್ತಾನೆ". ಕಾಪೌಂಡ್ ಹಾಕಿಸಿದರೆ ಅದರ ಮೇಲೆಯೇ ಕಸ ಹಾಕಿರುವ ಭೂಪರ ಉದಾಹರಣೆಗಳೂ ಸಿಗುತ್ತವೆ. ಇನ್ನೂ ಆಗಿದ್ದಾಗಲಿ ಎಂದು ಸೈಟನ್ನು ಆಗ್ಗಿಂದಾಗೆ ಶುದ್ಧಗೊಳಿಸಿದರೆ, ಹೇಗೂ ಶುದ್ಧವಾಗುತ್ತದೆ ಎಂಬ ಭರವಸೆಯಲ್ಲಿ ಅದು ಮತ್ತಷ್ಟು ಅಶುದ್ಧವಾಗುವ ವೇಗ ಆರ್ಶ್ಚಯಗೊಳಿಸುತ್ತದೆ.

ಕೇವಲ ಒಂದು, ರಸ್ತೆ, ಒಂದು ಖಾಲಿ ಜಾಗದಲ್ಲಿ ಇಷ್ಟೆಲ್ಲಾ ಸಮಸ್ಯೆ, ತೊಡಕಿರುವಾಗ ಇಡೀ ನಗರವನ್ನು ಸ್ವಚ್ಛಗೊಳಿಸುವ ಪ್ರಕ್ರಿಯೆಗೆ ಮೊದಲ್ಲೆಲ್ಲಿ ಕೊನೆಯೆಲ್ಲಿ. ತಮ್ಮ ಊರಲ್ಲಿ ಕಸ ಹಾಕಬೇಡಿ ಎನ್ನುವ ಕೂಗು ಸಹಾ ಸಮರ್ಥನೀಯವಾಗಿ ಕಾಣುತ್ತದೆ.
Charity begins from home ಎನ್ನುವುದು ಕಸದ, ಸ್ವಚ್ಛತೆಯ ವಿಷಯದಲ್ಲಿ ಮನೆಯಿಂದ ಆರಂಭವಾಗಿ ಮನೆಯಲ್ಲೇ ಕೊನೆಗೊಳ್ಳದೇ ಬೀದಿಗೆ, ಬಡಾವಣೆಗೆ, ನಗರಕ್ಕೆ, ಸಮಾಜಕ್ಕೆ ಹರಡಬೇಕಾಗಿರುವುದು ಇಂದಿನ ಅವಶ್ಯಕತೆ. ಇದರಿಂದ ಸಂಬಂಧಪಟ್ಟ ಇಲಾಖೆಗಳಿಗೂ, ಅಧಿಕಾರಿಗಳಿಗೂ ಜವಬ್ದಾರಿ ಮೂಡಿ ಜನರ ಸಹಾಕರದೊಂದಿಗೆ ಸಮಸ್ಯೆಗೆ ಪರಿಹಾರ ದೊರಕಬಹುದು. ಇದು ಇತರ ಎಲ್ಲಾ ಸಮಸ್ಯೆಗಳಿಗೂ ಮಾದರಿಯಾಗಬಹುದು. ಆಗಲಿ. 

-ಪ್ರಶಾಂತ್ ಇಗ್ನೇಷಿಯಸ್