Thursday 12 May 2011

ಹೊಸ ಬೆಳಕಿನ ಈಸ್ಟರ್






ಕ್ರೈಸ್ತರ ಹಬ್ಬ ಎಂದರೆ ಮೊಟ್ಟ ಮೊದಲು ನೆನಪಿಗೆ ಬರುವುದು ಕ್ರಿಸ್‌ಮಸ್. ಏಸು ಕ್ರಿಸ್ತರ ಜನನದ  ಸಂಭ್ರಮದ ಹಬ್ಬವಾಗಿರುವುದರಿಂದ ಸಹಜವಾಗಿಯೇ ಧರ್ಮ, ಜಾತಿ ಮೀರಿದ ಮನ್ನಣೆ ಜನಪ್ರಿಯತೆ ಕ್ರಿಸ್‌ಮಸ್‌ಗಿದೆ.

ಆದರೆ ಕ್ರಿಸ್‌ಮಸ್ ರಂಗು ರಂಗಿನ ಹಬ್ಬವಾದರೆ ಪವಿತ್ರ ವಾರದ ಭಾನುವಾರದಂದು ಬರುವ ‘ಈಸ್ಟರ್’ ಕ್ರೈಸ್ತರಿಗೆ ನಿಜಕ್ಕೂ ಮಹತ್ವದ ಹಬ್ಬ. ಶನಿವಾರ ರಾತ್ರಿಯಿಂದಲೇ ಚರ್ಚ್‌ಗಳಲ್ಲಿ ನಡೆಯುವ ಅರ್ಥಗರ್ಭಿತ ಪ್ರಾರ್ಥನೆ ಹಾಗೂ ವಿಧಿವಿಧಾನಗಳನ್ನು ಒಳಗೊಂಡ ‘ಪಾಸ್ಕ’ ಜಾಗರಣೆಯಲ್ಲಿ ಭಾಗವಹಿಸುವುದರೊಂದಿಗೆ  ಕ್ರೈಸ್ತರು ಭಾನುವಾರ ಈಸ್ಟರ್ ಹಬ್ಬವನ್ನು ಸ್ವಾಗತಿಸುತ್ತಾರೆ.

 ಅಂತೆಯೇ ಇದರೊಂದಿಗೆ 40 ದಿನಗಳ ತಪಸ್ಸು ಕಾಲದ ತ್ಯಾಗ, ದೇಹ ದಂಡನೆಯ ವ್ರತ ಮುಕ್ತಾಯಗೊಳ್ಳುತ್ತದೆ.

ಆನಂದ ಸಂಭ್ರಮದ ವಾತಾವರಣ ಮೂಡುತ್ತದೆ. ಇದನ್ನು ಪಾಸ್ಕ ಹಬ್ಬ ಹಾಗೂ ಪುನರುತ್ಥಾನದ ಹಬ್ಬ ಎಂದೂ ಕರೆಯಲಾಗುತ್ತದೆ.

ದುಷ್ಟ ಜನರ ಒಳಸಂಚಿನಿಂದ ಅನ್ಯಾಯದ ತೀರ್ಪಿಗೆ ಒಳಗಾಗಿ ಶಿಲುಬೆಯಲ್ಲಿ ಘೋರವಾದ ಮರಣವನ್ನು ಹೊಂದಿದ ಏಸು ಕ್ರಿಸ್ತ ಮೂರನೆಯ ದಿನ ಮತ್ತೆ ಜೀವಂತವಾಗಿ ಎದ್ದು ಬಂದು ತಮ್ಮ ದೈವತ್ವವನ್ನು ತೋರ್ಪಡಿಸಿದರು ಎಂಬುದರ ಸಂಭ್ರಮದ ಆಚರಣೆಯೇ ಈಸ್ಟರ್.

ಏಸುವಿನ ಸಾವಿನಿಂದ ಭಯಪಟ್ಟು, ಅಧಿಕಾರಸ್ಥರ  ದರ್ಪದಡಿ ಎಲ್ಲಾ ಭರವಸೆಯನ್ನು ಕಳೆದುಕೊಂಡ ಶಿಷ್ಯರು ಹಾಗೂ ಹಿಂಬಾಲಕರಲ್ಲಿ ಸ್ವಾಮಿಯ ಈ ಪುನರುತ್ಥಾನ ಹೊಸ ಚೈತನ್ಯ, ಅಭಯವನ್ನು ನೀಡಿತು. ಅಲ್ಲದೆ ಕ್ರಿಸ್ತನ ಪ್ರೀತಿ ಶಾಂತಿಯ ಸಂದೇಶವನ್ನು ಎಲ್ಲೆಡೆ ಸಾರುವ ಸ್ಫೂರ್ತಿ ತುಂಬಿತ್ತು.

 ಬೈಬಲ್‌ನ ವಿಮೋಚನಾ ಕಾಂಡವೆಂಬ ಅಧ್ಯಾಯದಲ್ಲಿ  ದಾಸ್ಯತ್ವದಿಂದ ಬಳಲುತ್ತಿದ್ದ ತನ್ನ ಜನರನ್ನು ದೇವರು ಬಿಡಿಸಿ ಅವರನ್ನು ಹೊಸ ನಾಡಿಗೆ ಹೊಸ ಬದುಕಿನೆಡೆಗೆ ಕರೆದೊಯ್ದ ಸಂಗತಿಯ ನೆನಪಿನ ಅಚರಣೆಯೂ ಈ ಹಬ್ಬಕ್ಕೆ ತಳಕು ಹಾಕಿಕೊಂಡಿದೆ. ಹೀಗಾಗಿ ಈಸ್ಟರ್ ದೈವತ್ವದ ಪ್ರತಿಪಾದನೆ ಮಾತ್ರವಲ್ಲದೆ, ಹೊಸ ಜೀವನ, ಹೊಸ ಸೃಷ್ಟಿ, ನಮ್ಮೊಳಗಿನ ಹೊಸ ಅನ್ವೇಷಣೆ ಹಾಗೂ  ಸಾವೇ ಅಂತಿಮ ಅಲ್ಲ ಎಂಬುದರ ಸಂಕೇತವೂ ಹೌದು ಎಂದು ವ್ಯಾಖ್ಯಾನಿಸುತ್ತದೆ ಕ್ರೈಸ್ತ ಸಿದ್ಧಾಂತ. ಈ ಎಲ್ಲಾ ಕಾರಣಗಳಿಂದ  ಮಹತ್ವದ ಹಬ್ಬ ಈಸ್ಟರ್.

ಕ್ರೈಸ್ತ ಜನಮನದಲ್ಲಿ ದೊಡ್ಡ ಹಬ್ಬ ಅಥವಾ ದೊಡ್ಡಬ್ಬ ಎಂದೇ ಪರಿಚಿತ. ಈ ಹಬ್ಬಕ್ಕೆ ನಿರ್ದಿಷ್ಟ ದಿನಾಂಕವಿಲ್ಲ. ಆದರೆ ಸಾಮಾನ್ಯವಾಗಿ ಮಾರ್ಚ್ ತಿಂಗಳ 20ರ  ತರುವಾಯ ಬರುವ ಪೌರ್ಣಿಮೆಯ ನಂತರದ ಭಾನುವಾರ ಆಚರಿಸಲಾಗುತ್ತದೆ. ಈ ಹಬ್ಬದ ನಂತರದ 50 ದಿನಗಳ ಅವಧಿಯನ್ನು ಪಾಸ್ಕ ಕಾಲವೆಂದು ಕರೆಯಲಾಗುತ್ತದೆ.

ಭರವಸೆಯ ಹಬ್ಬ
ಈಸ್ಟರ್ ಎಂದರೆ ಬೆಳಕಿನ ಹಬ್ಬ, ಅದಕ್ಕಿಂತಲೂ ಹೆಚ್ಚಾಗಿ ಅದು ಹೊಸ ಭರವಸೆಯ ಹಬ್ಬ.

ನಲವತ್ತು ದಿನಗಳ ‘ತಪಸ್ಸು ಕಾಲ’ದ ಬಳಿಕ ಈಸ್ಟರ್ ಸಂಭ್ರಮಕ್ಕೆ ಜನ ಚರ್ಚ್‌ಗಳಲ್ಲಿ ಸೇರುತ್ತಾರೆ ಶನಿವಾರ ರಾತ್ರಿ ದಿವ್ಯ ಬಲಿಪೂಜೆಗೆ ಮುಂಚಿತವಾಗಿ ಚರ್ಚ್‌ನ ಅಂಗಳದಲ್ಲಿ ಹಾಕಿದ ಹೊಸ ಬೆಂಕಿಯ ಸುತ್ತ ಜಮಾಯಿಸುತ್ತಾರೆ. ಧರ್ಮಗುರುಗಳು ಪ್ರಾರ್ಥನೆ ಸಲ್ಲಿಸುತ್ತಾ ಆ ಬೆಂಕಿಯಿಂದ ತಮ್ಮ ಕೈಯಲ್ಲಿರುವ ದೊಡ್ಡ ಮೇಣದಬತ್ತಿಯನ್ನು ಬೆಳಗಿಸುತ್ತಾರೆ. ಅಲ್ಲಿರುವ ಭಕ್ತಾದಿಗಳು ಅದರಿಂದ ಮೇಣದಬತ್ತಿಯನ್ನು ಹೊತ್ತಿಸಿ ಚರ್ಚ್‌ನ ಒಳಗೆ ಪ್ರವೇಶಿಸುತ್ತಾರೆ. ಅಲ್ಲಿಯವರೆಗೆ ಚರ್ಚ್‌ನ ಒಳಗೆ ಗಾಢಾಂಧಕಾರ ನೆಲೆಸಿರುತ್ತದೆ. ಹೊಸ ಬೆಳಕಿನೊಂದಿಗೆ ಜನ  ಒಳಪ್ರವೇಶಿಸಿದ ಬಳಿಕವೇ ಚರ್ಚ್‌ನ ದೀಪಗಳನ್ನು ಉರಿಸಲಾಗುತ್ತದೆ. ಬಳಿಕ ಸಂಭ್ರಮದ ಈಸ್ಟರ್ ಬಲಿಪೂಜೆ ನಡೆಯುತ್ತದೆ. ಜನ ಹೊಸ ಭರವಸೆಯೊಂದಿಗೆ ಪ್ರಾರ್ಥನೆ ಸಲ್ಲಿಸುತ್ತಾ ಬೆಳಕಿನ ಹಬ್ಬಕ್ಕೆ ಸ್ವಾಗತ ಕೋರುತ್ತಾರೆ.

No comments:

Post a Comment