Thursday 12 May 2011

ಹಾರೋಬೆಲೆಯ ಶತಮಾನದ ನಾಟಕ ‘ಮಹಿಮೆ’





‘ಯೇಸು ಹೃದಯವೇ.. ದಾಸರ ಮೇಲೆ ನೀಡಿ ನಿಮ್ಮ ವರವ

ದೋಷಭರಿತ ನಮ್ಮಗಳಿಗೆ ...ನೀಡಿ ನಿಮ್ಮಾಶೀರ್ವಾದವ’ 

ಈ ನಾಂದಿ ಪದ್ಯ ಪ್ರಾರಂಭವಾಗುತ್ತಿದ್ದಂತೆ ಊರ ಜನರಲ್ಲಿ ಒಂದು ಬಗೆಯ ಸಂಚಲನ ಸೃಷ್ಟಿಯಾಗುತ್ತದೆ. ಹೆಂಗಸರು, ಮಕ್ಕಳು, ಹಿರಿಯರು, ಕಿರಿಯರು ತಮ್ಮ ಕೆಲಸಗಳನ್ನು ಮುಗಿಸಿ ನಾಟಕ ನೋಡಲು ಮೈದಾನದತ್ತ ಧಾವಿಸುತ್ತಾರೆ. ಮಕ್ಕಳು ಸಾಕಷ್ಟು ಮೊದಲೇ ರಂಗಸ್ಥಳದ ಮುಂದಿನ  ಬಯಲಲ್ಲಿ ಚಾಪೆಹಾಸಿ ತಮ್ಮ ಜಾಗ ಕಾದಿರಿಸುತ್ತಾರೆ. 


ಊರಿನ ಯುವಕರಲ್ಲಿ ಸಂಭ್ರಮ. ಪಟಾಕಿ ಸಿಡಿಸಿ ಅದನ್ನು ವ್ಯಕ್ತಪಡಿಸುವ ಕಾತರ. ಹಿರಿಯರಿಗೆ ಹಳೆಯ ನೆನಪುಗಳು ನುಗ್ಗಿ ಬರುತ್ತವೆ. ಪಾತ್ರಧಾರಿಗಳಿಗೆ ಮೇಕಪ್ ಸರಿ ಪಡಿಸಿಕೊಂಡು ರಂಗದ ಮೇಲೆ ಬರುವ ಕಾತರ.... ಹೀಗೆ ಎಲ್ಲರಲ್ಲೂ ಒಂದು ಬಗೆಯ ಚಡಪಡಿಕೆ.  ಇದು ಕನಕಪುರ ತಾಲೂಕಿನ ಹಾರೋಬೆಲೆ ಗ್ರಾಮದಲ್ಲಿ ಪ್ರತಿ ವರ್ಷ ನಡೆಯುವ ‘ಯೇಸು ಕ್ರಿಸ್ತರ ಪೂಜ್ಯ ಪಾಡುಗಳ ಹಾಗೂ ಪುನರುತ್ಥಾನದ ಮಹಿಮೆ’ಯನ್ನು ಸಾರುವ ನಾಟಕದ ಆರಂಭದ ಸಂದರ್ಭ.


ಶತಮಾನ ದಾಟಿರುವ ಈ ನಾಟಕ ಜನರ ಬಾಯಲ್ಲಿ ‘ಮಹಿಮೆ’ ಎಂದೇ ಹೆಸರಾಗಿದೆ. ಯೇಸು ಕ್ರಿಸ್ತರ ಜೀವನ, ಬೋಧನೆ, ವಿಶೇಷವಾಗಿ ಅವರು ಶಿಲುಬೆಗೇರುವ ಸಂದರ್ಭದ ಯಾತನಾಮಯ ಘಟನೆಗಳು ಹಾಗೂ ನಂತರದ ಪುನರುತ್ಥಾನದ ಬಗೆಗೆ ಬೈಬಲ್‌ನಲ್ಲಿ ಉಲ್ಲೇಖವಾಗಿರುವ ವೃತ್ತಾಂತಗಳೇ ಈ ನಾಟಕದ ಕಥಾವಸ್ತು. 1906ರಲ್ಲಿ ಈ ನಾಟಕ ರಂಗದ ಮೇಲೆ ಮೊದಲು ಪ್ರದರ್ಶನವಾಯಿತು. ಆ ನಂತರ ಇದು ಪ್ರತಿ ವರ್ಷ ಒಂದೇ ರಂಗ ಮಂಟಪದ ಮೇಲೆ ‘ಶುಭ’ ಶುಕ್ರವಾರದಂದು ಪ್ರದರ್ಶನಗೊಳ್ಳುತ್ತ ಬಂದಿದೆ! ನಾಟಕದ ಕಥಾ ವಸ್ತು ಹಾಗೂ ಅದು ನಡೆದ ಸಂದರ್ಭ 2000 ವರ್ಷಗಳ ಹಿಂದಿನ ಜೆರುಸಲೇಮೀನದ್ದಾದರೂ ನಾಟಕದ ಸಂಭಾಷಣೆ, ಸಂಗೀತ, ವೇಷ ಭೂಷಣ, ರಂಗ ವಿನ್ಯಾಸ ಇತ್ಯಾದಿಗಳು  ಕನ್ನಡ ನಾಡಿನ ಸಂಸ್ಕೃತಿ ಹಾಗೂ ಜಾನಪದದ ಪ್ರತೀಕವಾಗಿವೆ.

 ಹಾರೋಬೆಲೆ ಗ್ರಾಮ ಪೂರ್ವಕ್ಕೆ ಅರ್ಕಾವತಿ ನದಿ, ಪಶ್ಚಿಮಕ್ಕೆ ಪಾದ್ರಿಕೆರೆ, ಉತ್ತರಕ್ಕೆ ಕಪಾಲ ಬೆಟ್ಟ, ದಕ್ಷಿಣಕ್ಕೆ ಹೊಂಗೆ ಹಳ್ಳದ ಸುಂದರ ಪರಿಸರದಲ್ಲಿದೆ. 16ನೇ ಶತಮಾನದಿಂದ ಇಲ್ಲಿ ಕ್ರೈಸ್ತರು ನೆಲೆಸಿದ್ದಾರೆ. 1900ರಲ್ಲಿ ವಂದನೀಯ ಸ್ವಾಮಿ ಲಾಜರಸ್ ಅವರು ಮೊದಲ ಬಾರಿಗೆ ಈ ನಾಟಕ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಿದರು. ಹಾಡುಗಳ ರಚನೆಯಲ್ಲಿ ಪರಿಣಿತರಾದ ಲಾಜರಸ್ ಬಹು ಭಾಷಾ ಪರಿಣಿತರು.1906ರ ಏಪ್ರಿಲ್ 13ರ ಶುಭ ಶುಕ್ರವಾರ ಆರು ಮಂದಿ ಪಾತ್ರಧಾರಿಗಳು ಈ ನಾಟಕ ಪ್ರದರ್ಶಿಸಿದ್ದರು. ಆಗ ನಾಟಕದ ಸಮಯ ಒಂದು ಗಂಟೆಯಾಗಿತ್ತು.

1925ರ ವೇಳೆಗೆ (ಲಾಜರಸ್ ಅವರು ನಿಧನರಾದ ವರ್ಷ) ಅರವತ್ತು ಮಂದಿ ಪಾತ್ರಧಾರಿಗಳು ಇಡೀ ರಾತ್ರಿ ಪ್ರದರ್ಶಿಸುವ ವಿಸ್ತಾರಕ್ಕೆ ನಾಟಕ ಬೆಳೆದಿತ್ತು. ಆನಂತರ ಊರಿನ ಶಿಕ್ಷಕ ಸಿ.ಇನ್ನಾಸಪ್ಪ ಅವರ ಸಾರಥ್ಯದಲ್ಲಿ ಪರಿಷ್ಕರಣೆಗೊಂಡು ಪ್ರದರ್ಶನವಾಗುತ್ತ ಬಂದಿದೆ.

ಆರಂಭದಲ್ಲಿ ಹೊಂಗೆಸೊಪ್ಪಿನ ಚಪ್ಪರದಲ್ಲಿ ಪಂಜುಗಳ ಬೆಳಕಿನಲ್ಲಿ  ನಾಟಕ ಪ್ರದರ್ಶನವಾಗುತ್ತಿತ್ತು. ಈಗ ಝಗಮಗಿಸುವ ಬೆಳಕಿನ ರಂಗ ಮಂಟಪದಲ್ಲಿ ನಡೆಯುತ್ತದೆ. ಈ ನಾಟಕದಲ್ಲಿ ಕರ್ನಾಟಕದ ಗ್ರಾಮೀಣ ಪ್ರದೇಶದಲ್ಲಿ ಕಂಡುಬರುವ ಬಯಲಾಟದ ಎಳೆಗಳನ್ನು ಗುರುತಿಸಬಹುದು. ಈಟಿ, ಕತ್ತಿ, ಗುರಾಣಿ ಹಿಡಿದ ಸೈನಿಕರ ಆರ್ಭಟದ ಕುಣಿತಗಳೆಲ್ಲ ನಮ್ಮ ಪೌರಾಣಿಕ ನಾಟಕಗಳಲ್ಲಿ ಇರುವಂತೆಯೇ ಇವೆ. ಆಧ್ಯಾತ್ಮ ಹಾಗೂ ಜಾನಪದ ಸಂಸ್ಕೃತಿಗಳು ನಾಟಕದಲ್ಲಿ ಹದವಾಗಿ ಬೆರೆತಿವೆ.

ನಾಟಕದಲ್ಲಿ ಮನರಂಜನೆಗಿಂತ ಭಕ್ತಿಯೇ ಪ್ರಧಾನ. ನಾಟಕದ ತಾಲೀಮು ನೋಡುತ್ತಲೇ ಸಂಭಾಷಣೆ,  ಹಾಡುಗಳನ್ನು ಕಂಠ ಪಾಠ ಮಾಡಿದ ಗ್ರಾಮಸ್ಥರ ಸಂಖ್ಯೆ ಗಣನೀಯ ವಾಗಿದೆ. ಹೊಲ ಗದ್ದೆಗಳಲ್ಲಿ ದುಡಿಯುವಾಗ, ಕುರಿ, ದನಕರುಗಳನ್ನು ಮೇಯಿಸುವಾಗ, ಗಾಡಿ ಹೊಡೆಯುವ ಸಮಯದಲ್ಲಿ ನಾಟಕದ ಹಾಡುಗಳನ್ನು ಗಟ್ಟಿಯಾಗಿ ಮೆಲಕು ಹಾಕುವ ಜನರನ್ನು ಇಲ್ಲಿ ನೋಡಬಹುದು.
ಹಾರೋಬೆಲೆ ಗ್ರಾಮ ಅನೇಕ ಧರ್ಮ ಗುರುಗಳು, ಸಮಾಜ ಸೇವಕರು, ಲೇಖಕರು, ಕಲಾವಿದರು, ಸಂಗೀತಗಾರರನ್ನು ನೀಡಿದೆ. ಅದೇ ಹಾರೋಬೆಲೆಯ ಹೆಗ್ಗಳಿಕೆ.


No comments:

Post a Comment