Wednesday 11 November 2009

ಕನ್ನಡ, ಹೋರಾಟ ಹಾಗೂ ಅದರ ಅವಶ್ಯಕತೆ - ಭಾಗ 2

ಹೊರಗಿನ ಶಕ್ತಿಗಳಿಗಿಂತ ಒಳಗಡೆಯೇ ನೆಲಸಿ ಇಲ್ಲಿನ ಭಾಷೆ,ಸಂಸ್ಕೃತಿಗಳ ವಿರುದ್ಧವಾಗಿಯೇ ಕೆಲಸ ಮಾಡುತ್ತಿದ್ದ, ನಿರ್ಭಾವುಕವಾಗಿದ್ದ ಒಳಗಿನ ಶಕ್ತಿಗಳ, ಪಿತೂರಿಗಳ ವಿರುದ್ಧವೂ ದೊಡ್ಡ ಹೋರಾಟಗಳೇ ನಡೆದಿವೆ. ಬೀದಿಗಿಳಿದ ಚಳುವಳಿ ನಾಯಕರ ಹೋರಾಟದ ಜೊತೆಯಲ್ಲೇ ಸಾಹಿತಿಗಳ ಅಕ್ಷರ ರೂಪದ ಹೋರಾಟಗಳು ಈ ಹೋರಾಟದ ಜ್ಯೋತಿಯನ್ನು ನಿರಂತರವಾಗಿ ಬೆಳಗಿಸಿಕೊಂಡು ಬಂದಿತು. ಅನಕೃರವರ೦ತ ಸಾಹಿತಿಗಳು ಬೀದಿಗಿಳಿದ್ದು ಕನ್ನಡ ಪರ ದನಿಯೆತ್ತಿದ್ದೂ ಉ೦ಟು.

ಕಲಾವಿದರನ್ನೂ ಒಳಗೊಂಡಂತೆ ಸಮಾಜದ ಎಲ್ಲಾ ಸ್ತರದ ಜನರೂ ಭಾಗವಹಿಸಿದ ಗೋಕಾಕ್ ಚಳುವಳಿಯ ರಭಸ, ಭಾವತೀವ್ರತೆಯ ಎಷ್ಟಿತ್ತೆಂದರೆ ಅನ್ಯರಾಜ್ಯದವರೂ, ಬೇರೆ ಭಾಷಿಕರೂ ಸಹಾ ಕತ್ತೆತ್ತಿ ನೋಡುವಂತೆ ಮಾಡಿದ್ದು ಮಾತ್ರವಲ್ಲದೆ ಸಕಾಲವಾದ ಎಚ್ಚರಿಕೆಯ ಘಂಟೆಯನ್ನು ಮೊಳಗಿಸಿತು.ಎ೦ಬತ್ತರ ದಶಕದ ರೈತ ಚಳುವಳಿಗಳು ಸಹಾ ಇದಕ್ಕಿಂತ ಭಿನ್ನವಾಗಿರಲಿಲ್ಲ. ಅದೂ ಒ೦ದು ರೀತಿಯ ಕನ್ನಡ ರೈತರ ಆಶೋತ್ತರಗಳಿಗಾಗಿ ನಡೆದ ಕನ್ನಡದ ಹೋರಾಟವೇ.



ಪ್ರಸ್ತುತ ವಿದ್ಯಾಮಾನಗಳ ಹಿನ್ನಲೆಯಲ್ಲಿ ಕನ್ನಡ ಪರ ಹೋರಾಟಗಳು ಬಹಳ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ಹೋರಾಟ ಎನ್ನುವುದಕ್ಕಿಂತಲೂ ಕನ್ನಡ ಪರ ಕಾಳಜಿ ಹಾಗೂ ಜಾಗೃತಿಯ ಅವಶ್ಯಕತೆ ಇದಿಂದಿಗಿಂತಲೂ ಹಚ್ಚಾಗಿ ಕಾಣ ತೊಡಗಿದೆ. ಇಂದು ಜಾಗತೀಕರಣದ ಪ್ರಭಾವಗಳು ತನ್ನದೇ ಆದ ಒಳಿತು ಕೆಡಕುಗಳನ್ನು ತನ್ನಲ್ಲೇ ಅಡಗಿಸಿಕೊಂಡು ಬಂದಿದೆ.
ಹಿಂದಿನ ದಶಕಗಳಲ್ಲಿ ಜನರನ್ನು ನಿರುತ್ಸಾಹದಿಂದ ಎಬ್ಬಿಸಬೇಕಾದ ಅವಶ್ಯಕತೆ ಇದ್ದರೆ ಈಗಿನ ಪ್ರಶ್ನೆಯೇ ಬೇರೆ ರೀತಿಯದು. ಜಾಗತೀಕರಣದ ತೆರೆದ ಬಾಗಿಲು ಉದ್ಯೋಗಗಳನ್ನು,ವ್ಯಾಪಾರಗಳನ್ನು, ಬೇರೆಯದೇ ರೀತಿಯದ ಜೀವನ ವಿಧಾನವನ್ನು ಸೃಷ್ಠಿಸಿದೆ. ಈ ಹೊಸ ಅಲೆಯಲ್ಲಿ ಕನ್ನಡದ ಅವಶ್ಯಕತೆ, ಅನಿವಾರ್ಯತೆ ಇಲ್ಲ ಎ೦ಬ ಭಾವವನ್ನು ಸೃಷ್ಠಿಸುವ ವ್ಯವಸ್ಥಿತ ಸಂಚು ನೆಡೆದಿದೆ.


ಈಗ ಬೇಕಾಗಿರುವುದು ಶಿಕ್ಷಣ, ಅದರಿಂದ ಉದ್ಯೋಗ, ಉದ್ಯೋಗದಿಂದ ಹಣ ಹಾಗೂ ಹಣದಿಂದ ವಸ್ತುಗಳನ್ನು ಕೊಳ್ಳುವ ಹಪಾಹಪಿ. ಇವೆಲ್ಲದರ ಮಧ್ಯೆ ಕನ್ನಡ ಭಾಷೆ,ಅದರ ಮಹತ್ವ,ಅದರ ಸೊಗಡು ಯಾರಿಗೂ ಬೇಕಾಗಿಲ್ಲ. ಈ ವರ್ತುಲದಲ್ಲಿ ನಮ್ಮದೇ ಕನ್ನಡದ ಮಕ್ಕಳು,ಯುವಕರು ಅವರ ತಂದೆ ತಾಯಿಗಳು ಸಿಕ್ಕಿ ಬಿದ್ದಿರುವುದು ವಿಷಾದನೀಯ.ರ೦ಬೆ ಕೊಂಬೆಗಳನ್ನು ಚಾಚಿ ಬೆಳೆಯಲು ಬೇಕಾದ ಬೇರಿನ ಮಹತ್ವವ್ವನು ಯುವ ಜನಾಂಗಕ್ಕೆ ತಿಳಿಹೇಳುವ ಸಾಂಸ್ಕೃತಿಕ ಹೋರಾಟದ ಅವಶ್ಯಕತೆ ಹಿಂದೆಂದಿಗಿಂತಲೂ ಈಗ ಬಹಳವಾಗಿದೆ. ಈ ನಾಡು, ಈ ಸಂಸ್ಕೃತಿ, ಈ ಜೀವ ವಿಧಾನ, ಇಲ್ಲಿನ ಪರಿಸರಗಳು ಶತಮಾನಗಳಿಂದ ಬೆಳೆದು ಬಂದಿರುವುದು ಕೇವಲ ಹಣ, ವ್ಯಾಪಾರದಿಂದ ಮಾತ್ರವಲ್ಲದೆ, ಇಲ್ಲಿನ ಕಲೆ, ಸಾಹಿತ್ಯ, ತ್ಯಾಗ, ಶ್ರಮ ಹಾಗೂ ಬಲಿದಾನಗಳಿಂದ ಎಂಬ ಸತ್ಯವು ಇಂದಿನ ಮಕ್ಕಳು,ಯುವಕರಿಗೆ ಮರಯಲಾಗದಂತೆ ತಿಳಿ ಹೇಳುವ ಶಿಕ್ಷಣದ ಅವಶ್ಯಕತೆ ಇದೆ.


ಮುಂದುವರಿಯುವುದು.....


-ಪ್ರಶಾಂತ್