Tuesday 3 November 2009

ಕನ್ನಡ, ಹೋರಾಟ ಹಾಗೂ ಅದರ ಅವಶ್ಯಕತೆ - ಭಾಗ 1

ಕನ್ನಡ ಪರ ಹೋರಾಟದ ಮಾತಿರಲಿ, ಕೆಲವೂಮ್ಮೆ ಕನ್ನಡ, ಕನ್ನಡಿಗರ ಬಗೆಗಿನ ನ್ಯಾಯಪರ ಹಕ್ಕುಗಳ ಬಗ್ಗೆ ಮಾತನಾಡಿದರೂ ಇವೆಲ್ಲ ಬೇಕೇ ಎಂದೋ, ದುರಾಭಿಮಾನಿಗಳೆ೦ದೋ ಮೂದಲಿಸುವ ಜನಕ್ಕೆ ಕಡಿಮೆಯಿಲ್ಲ, ಅದರಲ್ಲೂ ನಮ್ಮ ಕನ್ನಡಿಗರೇ ಹೀಗೆ೦ದಾಗ ಇನ್ನೇನು ಹೇಳೋಣ?


ಒ೦ದು ಭಾಷೆ ಎನ್ನುವುದು ಕೇವಲ ಸ೦ಪರ್ಕದ ಮಾಧ್ಯಮ ಮಾತ್ರವಲ್ಲದೆ ಸಂಸ್ಕೃತಿಯ ಭಾಗವೇ ಆಗಿ ಶತಮಾನಗಳೇ ಕಳೆದಿವೆ. ಜಗತ್ತಿನ ಯಾವುದೇ ಭಾಷೆಯ ಇತಿಹಾಸ , ಬೆಳವಣಿಗೆಯನ್ನು ಅವಲೋಕಿಸಿದಾಗ ಅದರ ಜೊತೆಯಲ್ಲೇ ಆ ಪ್ರದೇಶದ ಸಂಸ್ಕೃತಿ, ಜೀವನ ವಿಧಾನ, ಪ್ರಾದೇಶಿಕತೆ, ಮಣ್ಣಿನ ಸೊಗಡು ಹಾಗೂ ತನ್ನದೇ ಆದ ವೈಶಿಷ್ಠ್ಯಗಳು ಕಾಣ ಸಿಗುತ್ತದೆ. ಒ೦ದು ಸಮಾಜದ, ಜನಾ೦ಗದ, ಜೀವ ವಿಧಾನದ ಅವಿಭಾಜ್ಯ ಅಂಗವಾಗಿರುವ ಭಾಷೆಯ ಪರವಾಗಿ ಹೋರಾಟ, ವಕಾಲತ್ತುಗಳ ಅವಶ್ಯಕತೆ ಇಲ್ಲ ಎ೦ದು ಮೇಲು ನೋಟಕ್ಕೆ ಅನಿಸುತ್ತದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಹಲವಾರು ಪ್ರಾಚೀನ ಸಂಸ್ಕೃತಿಗಳು, ಜೀವ ವಿಧಾನಗಳು ಆಧುನಿಕತೆಯ ಹೊಡೆತಕ್ಕೆ ಸಿಕ್ಕು ತಮ್ಮ ಬೇರನ್ನು ಕಳೆದುಕೊ೦ಡು ಅವಸಾನದತ್ತ ಹೆಜ್ಜೆ ಹಾಕಿವೆ. ಭಾಷೆಯ ವಿಷಯದಲ್ಲೂ ಈ ಮಾತು ನಿಜವಾಗತೊಡಗಿರುವುದು ವರದಿಗಳಿಂದ ಧೃಡಪಟ್ಟಿವೆ.ಕೆಲವು ಸ೦ದರ್ಭಗಳಲ್ಲಿ ಇವು ಸಕಾರಣವಾಗಿ, ಅನಿವಾರ್ಯವಾಗಿದ್ದರೂ ಇನ್ನೂ ಕೆಲವು ಸ೦ದರ್ಭಗಳಲ್ಲಿ ಒ೦ದು ಸಂಸ್ಕೃತಿ, ಒ೦ದು ಭಾಷೆ ಇನ್ನೊ೦ದು ಸಂಸ್ಕೃತಿ, ಭಾಷೆಗಳ ಮೇಲೆ ದಬ್ಬಾಳಿಕೆ ನಡೆಸಿದ ನಿದರ್ಶನಗಳೂ ಹೇರಳ. ಸ೦ಖ್ಯಾ ದೃಷ್ಠಿ, ಪ್ರಬಲ ಅಧಿಕಾರ ಹಾಗೂ ದುರಾಭಿಮಾನಗಳು ಈ ದಬ್ಬಾಳಿಕೆ, ಹೇರಿಕೆಗೆ ಪ್ರಮುಖ ಕಾರಣಗಳು.

ಈ ಹಿನ್ನಲೆಯಲ್ಲಿ ಕನ್ನಡ ಭಾಷೆಯ ಇತಿಹಾಸವನ್ನು ಗಮನಿಸಿದಾಗ ಅತ್ಯ೦ತ ಪ್ರಾಚೀನ ಭಾಷೆಯಗಿದ್ದೂ,ಭವ್ಯ ಇತಿಹಾಸವಿದ್ದೂ, ಸಾಹಿತ್ಯ ಹಾಗೂ ವೈಜ್ಞಾನಿಕವಾಗಿಯೂ ಬಹಳ ಉನ್ನತ ಮಟ್ಟದ ಭಾಷೆಯಾಗಿದ್ದರೂ, ಕನ್ನಡ ಕಾಲದಿ೦ದ ಕಾಲಕ್ಕೆ ಆ ಕಾಲ ಘಟ್ಟದ ಸವಾಲುಗಳನ್ನು ಎದುರಿಸುತ್ತಾ ಬ೦ದಿದೆ. ಆದರೆ ಆ ಸವಾಲುಗಳ ಮಧ್ಯೆಯೂ ಕನ್ನಡ ಬೆಳೆದು ಬ೦ದಿರುವ ಪರಿ ಆಶ್ಚರ್ಯ ಮೂಡಿಸುತ್ತದೆ. ಅದರಲ್ಲೂ ಕನ್ನಡ ಭಾಷೆಗೆ ಬಹು ದೊಡ್ಡ ಸವಾಲು ಎದುರಾಗಿದ್ದು ಈ ಕಳೆದ ಶತಮಾನದಲ್ಲೇ ಎ೦ದೆನಿಸುತ್ತದೆ. ಭಾರತ ಒಕ್ಕೂಟದಲ್ಲಾದ ಅನೇಕ ರಾಜಕೀಯ ಬೆಳವಣಿಗೆಗಳು ಈ ಭಾಷೆಯ ಮೇಲೆ ತನ್ನದೇ ಆದ ಪರಿಣಾಮವನ್ನು ಬೀರಿತು. ಬ್ರಿಟಿಷ್ ಆಡಳಿತದಲ್ಲಿ ಅನ್ಯ ಭಾಷಿಕರು ಬಂದು ಈ ನಾಡಿನಲ್ಲಿ ಸೇರುವುದರೊಂದಿಗೆ ಪ್ರಾರಂಭಗೊಂಡ ಈ ಕಷ್ಟಗಳು ಸ್ವತ: ಕನ್ನಡಿಗರ ಒಳ್ಳೆಯತನ, ಸೌಜನ್ಯ, ನಿರುತ್ಸಾಹ ಹಾಗೂ ನಿರಾಭಿಮಾನದಿಂದಲೂ ಮತ್ತಷ್ಟು ಕಷ್ಟಗಳನ್ನು ಎದುರಿಸಬೇಕಾಯಿತು. ಒ೦ದೆಡೆ ಬೇರೆ ಭಾಷೆಗಳ ಸ್ಪರ್ಧೆ, ಇನ್ನೊಂದೆಡೆ ಆಂಗ್ಲ ಭಾಷೆಯ ಜನಪ್ರಿಯತೆಯ ಮಧ್ಯೆ ಕನ್ನಡವನ್ನು ಹೋರಾಟದ ಮೂಲಕವೇ  ಊಳಿಸಿಕೊಳ್ಳಬೇಕಾದ ಅನಿವಾರ್ಯ ಪರಿಸ್ಥಿತಿ ಉ೦ಟಾಗಿದ್ದು ಸುಳ್ಳಲ್ಲ. ಪ್ರಭಾವಿ ರಾಜಕೀಯ ಅಸ್ತಿತ್ವವಿಲ್ಲದ್ದರಿಂದ ವ್ಯವ್ಯಸ್ಥೆಯ ಮೂಲಕ ಆಗಬಹುದಾದ, ಆದರೆ ಆಗದ ಕನ್ನಡ ಕಾರ್ಯಗಳಿಗಾಗಿ ಹೋರಾಟದ ಮೂಲಕವೇ ಪಡೆಯಬೇಕಾದ ಪರಿಸ್ಥಿತಿ ಕರ್ನಾಟಕದಲ್ಲಿ ನಿರ್ಮಾಣವಾಗಿ ಅದು ಈಗಲೂ ಮು೦ದುವರಿದಿದೆ.


ರಾಜಕೀಯ ಪ್ರಭಾವ ಹಾಗೂ ಸ೦ಖ್ಯೆಯ ಕಾರಣದಿಂದಾಗಿಯೂ ಕಾಲದಿಂದಲೂ ಕನ್ನಡ ಭಾಷೆ ಮಾತ್ರವಲ್ಲದೆ ಕರ್ನಾಟಕ ನಿರ್ಲಕ್ಷ್ಯ ಧೋರಣೆಗೆ ಬಲಿಯಗುತ್ತಾ ಬಂದಿದೆ. ಎಲ್ಲಾ ಸಾಮರ್ಥ್ಯವಿದ್ದೂ ಇಲ್ಲಿನ ರಾಜಕಾರಣಿಗಳು, ಸಾಹಿತಿಗಳು, ಕಲಾವಿದರು, ಪ್ರತಿಭಾವ೦ತರು ಕಡೆಗೆ ಸಾಮನ್ಯ ಜನರೂ ಮಲತಾಯಿ ಧೋರಣೆಯನ್ನು ಅನುಭವಿಸುತ್ತಾ ಬಂದಿರುವುದನ್ನು ಇತಿಹಾಸದಲ್ಲಿ ಕಾಣಬಹುದಾಗಿದೆ. ಬಲಿಷ್ಠರನ್ನೇ ಪೋಷಿಸಿ, ಬೆಳೆಸಿ ಬೆ೦ಬಲಿಸುವ ವ್ಯವಸ್ಥೆ ಸಹ ಕನ್ನಡದ ನೋವಿಗೆ ಕುರುಡಾದಾಗ, ಬೆನ್ನು ಮಾಡಿ ನಿ೦ತಾಗ, ಹೋರಾಟವಲ್ಲದ ಅನ್ಯಮಾರ್ಗವೇ ಕಾಣಸಿಗದಾಗ ಹೋರಾಟವೇ ರಾಜ ಮಾರ್ಗವಾಯಿತು.

ಮುಂದುವರಿಯುವುದು . . . .

- ಪ್ರಶಾ೦ತ್