Tuesday 15 December 2009

ಮತ್ತೆ ಬನ್ನಿ ಕನ್ನಡ ನಾಡಿನ ಗುಬ್ಬಚ್ಚಿಗಳೇ . . . .

ಅದೆಲ್ಲಿ ಹೋದವೋ ಈ ಗುಬ್ಬಿಗಳೆಲ್ಲಾ? ಬೇರಾವುದೇ ಪಕ್ಷಿಯಾಗಿದ್ದರೆ, ಎಲ್ಲಿ ಹಾಳಾದವೋ ಎ೦ದೆನ್ನಬಹುದಿತ್ತೇನೋ, ಆದರೆ ಗುಬ್ಬಿಗಳ ಬಗ್ಗೆ ಆ ರಿತಿ ಮಾತನಾಡಲು ಮನಸ್ಸಾಗುವುದಿಲ್ಲ ನೋಡಿ. ಈಗಾಗಲೇ ಅನೇಕರು ಅವುಗಳ ಬಗ್ಗೆ ಹೊಗಳುತ್ತಾ, ಕನವರಿಸುತ್ತಾ ಬರೆದು, ಕರೆದರೂ ಯಾಕೋ ಬರಲೊಲ್ಲವು. ಅದೇನು ಮುನಿಸೋ? “ಮತ್ತೆ ಬನ್ನಿ ಕನ್ನಡ ನಾಡಿನ ಗುಬ್ಬಿಗಳೇ” ಎಂದು ಕರೆಯಬೇಕೆನಿಸುತ್ತದೆ. “ಗುಬ್ಬಿಗಳೇ” ಎಂದರೆ ok, ಕನ್ನಡ ನಾಡಿನ ಗುಬ್ಬಿಗಳೇ ಯಾಕೆ ಅಂತೀರಾ? ಕನ್ನಡ ನಾಡಿನ ಗುಬ್ಬಿಗಳು ಅಂಥ ಗುಬ್ಬಿಗಳ ಜಾತಿಯೇನಾದರು ಇದೇಯೆ? ಆ ರೀತಿ ಏನಿಲ್ಲ ಬಿಡಿ.

ಈ ಗುಬ್ಬಿಗಳಿಗೆ ಯಾವ ನಾಡೇನು, ಕಾಡೇನು? ಮನುಷ್ಯ ವಾಸ ಎಲ್ಲೆಲ್ಲಿ ಇದೆಯೋ ಅಲ್ಲೆಲ್ಲಾ ಕಾಣಸಿಗುವ ಇವು, ಪೇಟೆಗಳಲ್ಲಿ, ಹಳ್ಳಿಗಳಲ್ಲಿ, ಮರುಭೂಮಿಯ ಹಳ್ಳಿಗಳಲ್ಲಿ, ಅಕ್ಕಿ ಮಿಲ್ಲುಗಳ ಬಳಿ, ಧವಸ ಧಾನ್ಯದ ದಾಸ್ತಾನುಗಳ ಬಳಿ ಹೆಚ್ಚಾಗಿ ಗೂಡು ಕಟ್ಟುತ್ತವೆ ಎಂದು ನಮ್ಮ ಪೂರ್ಣ ಚಂದ್ರ ತೇಜಸ್ವಿ ಬರೆಯುತ್ತಾರೆ. ಎಲ್ಲಿಯೂ ಸಲ್ಲುವ, ಯಾವ ಪರಿಸರಕ್ಕೂ ಹೊಂದಿಕೊಳ್ಳುವ, ಸದಾ ಚಿಲಿಪಿಲಿಗುಟ್ಟುತ್ತಾ ಸಂಭ್ರಮಿಸುವ ಇವುಗಳನ್ನು ನೋಡಿಯೇ ಇರಬೇಕು ಯೇಸು ಸ್ವಾಮಿ ಹೇಳಿದ್ದು “ಹಕ್ಕಿಗಳಂತೆ ನಿರಾಳವಾಗಿರಿ” ಎಂದು. ಪಾಪ ಅಧುನಿಕತೆಯ ಹೊಡೆತಕ್ಕೆ ಸಿಕ್ಕು ತತ್ತರವಾಗಿರುವ ಅವುಗಳ ಜೀವನ ವಿಧಾನಕ್ಕೆ ಇನ್ನೆಲ್ಲಿಯ ನಿರಾಳ?


ನಮಗಂತೂ ಗುಬ್ಬಿ ಎನ್ನುವುದಕ್ಕಿಂತ ಗುಬ್ಬಚ್ಚಿ ಎನ್ನುವುದೇ ಹೆಚ್ಚು ಆಪ್ತ. ಏನೇ ಹೇಳಿ ಈ ಗುಬ್ಬಚ್ಚಿಗಳದು ನಮ್ಮ ಕನ್ನಡದ ಮನಸ್ಸೇ. ಕರೆಯದಿದ್ದರೂ ಮನೆ ಮುಂದೆ ಬಂದು ಕಾ ಕಾ ಎನ್ನುತ್ತಾ, ಏನಾದರು ಕಂಡರೆ ಸಾಕು ತನ್ನ ಬಳಗವನ್ನೆಲ್ಲಾ ಕರೆದು ಮುಕ್ಕಿ ತಿನ್ನುವ ಕಾಗೆ, ತನ್ನಗಿಂತ ಮೇಲಾರಿಲ್ಲ ಎಂಬಂತೆ ಬೀಗುತ್ತಾ, ಹಾರುತ್ತಾ ಗಬ್ಬಕ್ಕನೆ ಕಬಳಿಸುವ ಹದ್ದು, ತನ್ನದಲ್ಲದ ಗೂಡನ್ನು ಆಕ್ರಮಿಸಿ ಕುಹೂ ಕುಹೂ ಎನ್ನುವ ಕೋಗಿಲೆ, ನಮ್ಮದೇ ಕಿಟಕಿ, ಗೋಡೆಯ ಸಂದಿಯಲ್ಲೇ ಕೂತು ಗುಟುರು ಹಾಕುವ ಪಾರಿವಾಳಗಳ ನಡುವೆ ಇದೊಂದು ಸಂಕೋಚದ ಪ್ರಾಣಿ, sorry ಪಕ್ಷಿ “ ನಮ್ಮ ಪ್ರೀತಿಯ ಗುಬ್ಬಚ್ಚಿ”. ಅದಕ್ಕೆ ಹೇಳಿದ್ದು ಅವುಗಳದ್ದು ಕನ್ನಡದ ಮನಸ್ಸೆಂದು. ಬಂದು ನೋಡಿ, ಏನಾದರು ಕಾಳು ಸಿಕ್ಕರೆ ಹೆಕ್ಕಿ ತಿಂದು, ಗುಟುಕು ನೀರಿಗೆ ತೃಪ್ತಿ ಪಟ್ಟು, ನೆಲದಲ್ಲಿ ಬಿದ್ದ ಚಿಕ್ಕ ಹಳ್ಳದಲ್ಲಿ ಕೂಡಿಕೊಂಡ ನೀರಲ್ಲಿ ಸಣ್ಣ ಜಳಕ ಮುಗಿಸಿ ಎದ್ದು ಹೋಗುವ ಗುಬ್ಬಚ್ಚಿಗಳದ್ದೇ ಒಂದು ಚಿಕ್ಕ ಚೊಕ್ಕ ಪ್ರಪಂಚ.


ಹಾಗಿಂದಾಗೆ ತಮ್ಮದೇ ಜಾತಿಯ ಇನ್ನೊಂದು ಗುಬ್ಬಚ್ಚಿಯೊಡನೆ ಜಗಳಕ್ಕೆ ಬಿದ್ದು ಅದೇ ಮುದ್ದಿನ ಚಿಲಿಪಿಲಿಯೊಂದಿಗೆ ಅಟ್ಟಾಡಿಸಿಕೊಂಡು ಹಾರಾಡುವಾಗ “ ಓ ಪರವಾಗಿಲ್ಲ ನಿನಗೂ ಕೋಪ ಬರುತ್ತದೆ” ಎಂಬಂತೆ ನಿಂತು ನೋಡುವರ ಮುಂದೆ ಸಂಕೋಚದ ಮುದ್ದೆಯಾಗಿ ಮರೆಯಾಗುವ ಅವುಗಳ ಪರಿಯೇ ಚಂದ. ಅದು ಬಿಟ್ಟರೆ ಹೆಚ್ಚಿನ ಸಮಯ ಈ ಕಾಗೆಗಳೊಂದಿಗೆ ಹೋರಾಟವೇ ಆಗಿ ಹೋಗುತ್ತದೆ. ಅವುಗಳಿಂದ ತಪ್ಪಿಸಿಕೊ೦ಡೋ, ಇಲ್ಲವೇ ಅವುಗಳ ಕಣ್ಣ್ ತಪ್ಪಿಸಿ ಆಹಾರ ಹೊಂದಿಸುವದರಲ್ಲೇ ದಿನದ time table close. ಈ ಹೆಂಚಿನ ಮನೆಗಳ ಛಾವಣಿಯ ಅಂಚಿನಲ್ಲಿ , ಕರೆಂಟ್ ಮೀಟರ್ ಇರುವ ಜಾಗದಲ್ಲಿ ಗೂಡು ಕಟ್ಟುತ್ತಿದ್ದದ್ದೂ ಉಂಟು. ಒಮ್ಮೆಮ್ಮೆ ಅಚಾನಕ್ಕಾಗಿ main switchನ ಮೇಲೆ ಕೂತು ಮನೆಯ ಕರೆಂಟ್ off ಮಾಡುತ್ತಿದ್ದದ್ದು ಬಿಟ್ಟರೆ ಅವುಗಳಿಂದ ಅಷ್ಟೇನು ತೊಂದರೆ ಆದ ನೆನಪುಗಳಿಲ್ಲ. ಮರದ ಕೆಳಗೆ ನಿಂತಾಗ ತಲೆಯ ಮೇಲೆ, ಬಟ್ಟೆಯ ಮೇಲೆ ಚಿತ್ತಾರ ಮೂಡಿಸುವ ಇತರ ಪಕ್ಷಿಗಳಿಗೆ ಹೋಲಿಸಿದರೆ ಈ ಗುಬ್ಬಚ್ಚಿಗಳದ್ದು ಒ೦ದು ರೀತಿಯ clean record .ಇಂಥಾ ನಿರುಪದ್ರವಿ, ಸು೦ದರ ಜೀವಿಗಳು ನಮ್ಮೆಲ್ಲರ ಬಾಲ್ಯದ ನೆನಪುಗಳ ಅವಿಭಾಜ್ಯ ಅಂಗವಾಗಿ ಉಳಿದುಹೋಗಿವೆ ಎಂದರೆ ತಪ್ಪಾಗಲಾರದು. ಯಾಕೋ ನೆನಪುಗಳಾಗೇ ಉಳಿಯುವಂತೆ ಕಾಣುತ್ತಿವೆ. ಈಚೀಚೆಗೆ ಒ೦ದೂ ಕಾಣುತ್ತಿಲ್ಲ.


ಇವೆಲ್ಲಾ ಈಗೀಗ, ಅಂದರೆ ಸುಮಾರು ೧೦ ವರ್ಷಗಳ ಬೆಳವಣಿಗೆ ಇರಬಹುದೇನೋ. ಈ ಟ್ರಾಫಿಕ್ ಜಾಮ್, ಕಪ್ಪು ಹೊಗೆ, ಜನ ದಟ್ಟಣೆ, ಯಾಂತ್ರಿಕತೆ ಇವೆಲ್ಲಾ ಈ ಗುಬ್ಬಚ್ಚಿಗಳಿಗೆ ಹಿಡಿಸಲಿಲ್ಲವೊ ಏನೋ. ಕನ್ನಡ ಮಾತನಾಡುವವರೂ ಕಡಿಮೆಯಾಗುತ್ತಿದ್ದಾರೆ ಎ೦ದ ಮೇಲೆ ಇನ್ನು ಇಲ್ಲಿ ನಮಗೇನು ಕೆಲಸ ಅನಿಸಿತೋ ಏನೋ ಈ ಬೆಂಗಳೂರಿನ ಗುಬ್ಬಚ್ಚಿಗಳಿಗೆ. ಗಂಡ ಹೆಂಡತಿ ಇಬ್ಬರೂ ಕೆಲಸಕ್ಕೆ ಹೋಗಲು ಶುರು ಮಾಡಿಕೊಂಡು, ನಂಬಿಕೊಂಡ ಮನೆಗಳೇ ಸಂಜೆಯವರೆಗು ಬೀಗ ಬಡಿದುಕೊಂಡು ನಿಂತಿದ್ದರೆ ಇನ್ನೆಲ್ಲಿ ಅಹಾರ ಅರಸಿ ಹೋದಾವು?



ಮನೆ ಮುಂದೆ ಅಲ್ಲದಿದ್ದರೂ ಈ ಶೆಟ್ಟಿ, ಕಾಕ ಅಂಗಡಿಯ ಮು೦ದೆಯಾದರೂ ಕಾಣಬಹುದಿತ್ತು. ಈಗೆಲ್ಲಿಯ ಶೆಟ್ಟಿ, ಕಾಕ ಅಂಗಡಿ? ಎಲ್ಲವನ್ನೂ ಈ ಶಾಪಿಂಗ್ ಮಾಲ್‌ಗಳು, ಬಜಾರ್‌ಗಳು ಕಬಳಿಸಿ ನಿಂತಿವೆ. ಎಲ್ಲಾ ಧಾನ್ಯ, ಧವಸಗಳೂ fully packed. ಹೆಕ್ಕಿ ತಿನ್ನಲು ಚೂರು ಪಾರುಗಳೂ ಇಲ್ಲ. ಆಷ್ಟು ರಿಯಾಯಿತಿ ಇಷ್ಟು ರಿಯಾಯಿತಿ ಅ೦ಥ ಜಾಹಿರಾತು ಕೊಡುವ ಈ ಮಾಲುಗಳು ಈ ಧವಸ, ಧಾನ್ಯಗಳನ್ನು ಎಲ್ಲಿ ಪ್ಯಾಕ್ ಮಾಡುತ್ತಾರೆ ಅಂಥಾದರೂ ಹೇಳಿದರೆ ಪಾಪ ಅಲ್ಲೇ ಹೋಗಿ ಅಷ್ಟು ಇಷ್ಟು ತಿಂದಾವು ನಮ್ಮ ಗುಬ್ಬಚ್ಚಿಗಳು. ಮನುಷ್ಯ ಮನುಷ್ಯನ ಮೇಲೆ ನಂಬಿಕೆ, ಆದರಣೆ ಇಲ್ಲ ಅಂದ ಮೇಲೆ ಇನ್ನೂ ಈ ಪಾಪದ ಗುಬ್ಬಚ್ಚಿಗಳ ಬಗ್ಗೆ ಯಾರು ಯೋಚಿಸುತ್ತಾರೆ ಬಿಡಿ.


ಅಯ್ಯೋ ಪರಿಸ್ಥಿತಿ ಆಷ್ಟು ಕೆಟ್ಟು ಹೋಗಿಲ್ಲ ಮತ್ತೆ ಬನ್ನಿ ಎ೦ದು ಕರೆಯೋಣ ಅಂದರೂ ಸಿಗುತ್ತಿಲ್ಲ ಈ ಗುಬ್ಬಿಗಳು. ಅವು ಬರುತ್ತವೆ ಎಂದರೆ ಮನೆಯ ಮುಂದೆ ಅಷ್ಟಿಷ್ಟು ಕಾಳು ಚೆಲ್ಲಿ ಹೋಗುವ ಮಂದಿಗೇನು ಕಡಿಮೆಯಿಲ್ಲ. ಮೊದಲೆಲ್ಲಾ ಈ postman ಕೆಲಸ ಮಾಡುತ್ತಿದ್ದ ಪಾರಿವಾಳಗಳ ಮೂಲಕವಾದರೂ ಹೇಳಿ ಕಳಿಸೋಣ ಎಂದು ಕೊಂಡರೆ ಅವುಗಳು ಕೆಲಸ ಬಿಟ್ಟು ಎಷ್ಟೋ ವರ್ಷವಾಯಿತು. ಕೊರಿಯರ್, ಈ ಮೇಲ್ ಬಂದ ಮೇಲೆ ನಮ್ಮನ್ನು ಕೇಳುವವರಾರು ಎಂಬಂಥ ಭಾವ ಅವುಗಳದ್ದು. ಹೇಳಿದನ್ನು ಹಾಗೇ ಹೋಗಿ ಒಪ್ಪಿಸುವ ಗಿಣಿಗಳಿಗಾದರು ಹೇಳೋಣವೆ೦ದರೆ ಅವೆಲ್ಲಾ ಶ್ರೀಮಂತರ ಮನೆಗಳ ಪಂಜರದೊಳಗೆ English rhymes ಕಲಿಯುವುದರಲ್ಲಿ ಬಿಸಿ. ಏನು ಮಾಡುವುದೋ ಗೊತ್ತಿಲ್ಲ.


ಮತ್ತೆ ಬರುವ ತನಕ ಕಾಯಬೇಕು ಆಷ್ಟೇ. ಬಂದು ಸ್ಪೈಡರ್ ಮ್ಯಾನ್, ಛೋಟ ಭೀಮ್, ಮಿಸ್ಟರ್ ಬೀನ್, ಕಂಪ್ಯೂಟರ್ ಗೇಮ್ಸ್‌ಗಳಲ್ಲಿ ಕಳೆದು ಹೋಗಿರುವ ನಮ್ಮ ಮಕ್ಕಳನ್ನು ಮನೆಯಿಂದ ಆಚೆಗೆ ಕರತಂದು ನಿನ್ನ ಚಿಲಿಪಿಲಿ ಚಟುವಟಿಕೆಗಳಿಂದ ಸಂತೋಷಪಡಿಸು ಎನ್ನುವುದೊಂದೆ ನಮ್ಮ ಬೇಡಿಕೆ.

- ಪ್ರಶಾಂತ್
( ಮಾತುಕತೆ ಪತ್ರಿಕೆಯಲ್ಲಿ ಪ್ರಕಟಗೊಂಡ ಲೇಖನ)

No comments:

Post a Comment