Tuesday 29 December 2009

ಕ್ರಿಸ್ತ ಇನ್ನೂ ಹುಟ್ಟಿಲ್ಲ...

ಪ್ರೀತಿಯ ಆನು


ಕ್ರಿಸ್ಮಸ್ ಭಗವಂತನ ಒಂದು ಸ್ವರೂಪವನ್ನೇ ಸದೃಶಗೊಳಿಸುದಂತಹ ಹಬ್ಬ. ಚಿತ್ರದ ಥರ ದೇವರ ಚಿತ್ತಾರಗಳನ್ನು ಸೃಷ್ಟಿಸಿಕೊಂಡಿದ್ದ ನಮ್ಮ ಕಲ್ಪನಾ ಕಣ್ಣುಗಳಿಗೆ ದೇವರ ನೈಜ ರೂಪವನ್ನು ಸಾಕ್ಷತ್ಕರಿಸಿದಂತಹ ಕ್ಷಣ ಕ್ರಿಸ್ಮಸ್. ಬೆಂದು ನೊಂದ ಮನದ ಬಾಂದಳದಲ್ಲಿ ಸಂತೋಷದ ನಕ್ಷತ್ರಗಳನ್ನು ಮಿನುಗಿಸಿದ, ಪಾಪ, ನೋವು ತುಂಬಿದ ಮನದ ಗೋದಲಿಗಳಲ್ಲಿ ಪ್ರೀತಿ ಪ್ರೇಮ ಶಾಂತಿ ಸ್ವರೂಪನಾದ, ಕ್ರಿಸ್ತನೇ ಕ್ರಿಸ್ಮಸ್ ಬಿಂಬಿಸುವ ದೇವರ ಸ್ವರೂಪ.

ಕ್ರಿಸ್ತ ಹುಟ್ಟಿದ ಮನ, ಮನೆ, ಊರು, ದೇಶ ಎಂದೂ ಬದಲಾಗದೆ ಇರಲು ಅಸಾಧ್ಯ. ಆನೇಕ ವ್ಯಕ್ತಿಗಳ ಜೀವನ ಚರಿತ್ರೆಗಳನ್ನು ಓದಿ ನೋಡಿದಾಗ ಈ ಸತ್ಯ ನಮಗೆ ಮನನವಾಗುವುದರಲ್ಲಿ ಎರಡು ಮಾತಿಲ್ಲ. ಒಮ್ಮೆ ನಮ್ಮ ಮನಸ್ಸಿನ ಗೋದಲಲ್ಲಿ ಕ್ರಿಸ್ತ ಹುಟ್ಟಿದ್ದೇ ಆದರೆ, ನಮ್ಮ ಜೀವನ ಹೊಸ ಸ್ವರೂಪವನ್ನೇ ಪಡೆದುಕೊಂಡು ಕೊನೆಗೆ, ನಾವು ಮತ್ತೊಬ್ಬ ಕ್ರಿಸ್ತನಾಗುವುದರಲ್ಲಿ ಸಂಶಯವೇ ಇಲ್ಲ.

ಕ್ರಿಸ್ತ ನಮ್ಮ ಮನಸಿನಲ್ಲಿ ಹುಟ್ಟುವುದೆಂದರೆ ಎನು? ಎಂಬ ಪ್ರಶ್ನೆ ನಮ್ಮನ್ನು ಕಾಡಬಹುದು. ಆದರೆ ಈ ಪಶ್ನೆಗೆ ಕ್ರಿಸ್ತ ಮತ್ತೊಮ್ಮೆ ಹುಟ್ಟಿ ಬರುವ ಭರವಸೆಯೊಂದೇ ಉತ್ತರವಲ್ಲ. ಅವನ ಜೀವವಾಕ್ಯ, ಕರೆ ನಮ್ಮ ಮನಗಳಲ್ಲಿ ಗರ್ಭಕಟ್ಟಿ, ನಮ್ಮ ಸ್ವಾರ್ಥವನ್ನು ಬಡಿದೋಡಿಸಿ ನಮ್ಮನ್ನು ಮತ್ತೊಬ್ಬ ಕ್ರಿಸ್ತನಾಗಿ ಹುಟ್ಟಿಸಬೇಕು. ಅದೇ ನನ್ನರ್ಥದ ಹಾಗು ವಾಸ್ತವಿಕತೆಯ ಕ್ರಿಸ್ಮಸ್. ಕ್ರಿಸ್ತನ ಮಾತುಗಳು ನಮ್ಮೆಲ್ಲರ ಮನಗಳಲ್ಲಿ ಗರ್ಭ ಕಟ್ಟಲಿ, ಅವು ನಮ್ಮಲ್ಲೇ ಪ್ರಸವವಾಗಿ ನಮ್ಮನ್ನು ಕ್ರಿಸ್ತನಂತೆ ಪರಿವರ್ತಿಸಲೆಂಬ ಪ್ರಾರ್ಥನೆ ನಮ್ಮದಾಗಲಿ. ಕೊನೆಗೆ ಕೆಲವು ಸಾಲುಗಳು...

ಕ್ರಿಸ್ತ ಇನ್ನೂ ಹುಟ್ಟಿಲ್ಲ...

ಹಸಿದು ಸಾಯುತ್ತಿರುವ ಜನರ ಕಾಣದೆ
ತಿಂದು ತೇಗುವ ಹೊಟ್ಟೆಬಾಕ ಮನಸ್ಸಿನಲ್ಲಿ
ಕ್ರಿಸ್ತ ಇನ್ನೂ ಹುಟ್ಟಿಲ್ಲ!

ತಮ್ಮ ಲಾಭಕ್ಕಾಗಿ ಇನ್ನೊಬ್ಬರನ್ನು
ಲಾಭದ ವಸ್ತುಗಳಾಗಿಸುವ ಕಾರ್ಪೊರೇಟ್ ಮನಗಳಲ್ಲಿ
ಕ್ರಿಸ್ತ ಇನ್ನೂ ಹುಟ್ಟಿಲ್ಲ!

ಅಧಿಕಾರದಾಸೆಗೆ ಧರ್ಮವನ್ನು ಅಡವಿಟ್ಟು
ದ್ವೇಷ ಹಿಂಸೆಯ ಬೀಜಗಳ ಬಿತ್ತಿ
ಕುಯಿಲು ಮಾಡುವ ಅಧರ್ಮಿಗಳ ಮಾತುಗಳಲ್ಲಿ
ಕ್ರಿಸ್ತ ಇನ್ನೂ ಹುಟ್ಟಿಲ್ಲ!

ಮುಗ್ಧ ಜನರ ಕುರಿಗಾಹಿಯಾದರೂ
ತೋಳಗಳಂತೆ ಭಕ್ತರ ಮೇಲೆರುಗುವ
ಅ ದೇವತಾ ಮನುಷ್ಯರಲ್ಲಿ
ಕ್ರಿಸ್ತ ಇನ್ನೂ ಹುಟ್ಟಿಲ್ಲ!

ಕ್ರಿಸ್ತ ಬೇಡವೆಂದರೂ ನೀ ಹುಟ್ಟು ಬಾ
ಬೀಜದಲ್ಲಿರುವ ಸಸಿಯಂತೆ
ಹಸಿರಾಗಿಸುವ ಮೋಡದ ಮಳೆಹನಿಗಳಂತೆ...
ನನ್ನ ಸ್ವಾರ್ಥಿಯಾದ ಪರಿವರ್ತಿಸಲು
ನೀ ಬರಲೇ ಬೇಕು ಬೇಡವೆಂದರೂ!

ಕ್ರಿಸ್ಮಸ್ ಹಾಗು ಹೊಸ ವರ್ಷದ ಶುಭಾಶಯಗಳು...

ಜೋವಿ

No comments:

Post a Comment