Friday 8 March 2013

ಬೇಕಾಗಿದ್ದಾರೆ ಆಧುನಿಕ ಭಗೀರಥರು!!!!!!!

ತನ್ನ ಪೂರ್ವಜರ ಮೋಕ್ಷ ಪ್ರಾಪ್ತಿ ಹಾಗೂ ತನ್ನ ನಾಡಿನ ಒಳತಿಗಾಗಿ ಬೇಕಾದ ನೀರಿಗಾಗಿ ಕಠಿಣ ತಪ್ಪಸ್ಸನ್ನು ಮಾಡಿ ಕೈಲಾಸದಿಂದ ಗಂಗೆಯನ್ನು ಹರಿಸಿದ ಭಗೀರಥನ ಕಥೆ ಭಾರತದ ಪುರಾಣದಲ್ಲಿದೆ. ಕೈಲಾಸದಲ್ಲಿದ್ದ ನದಿಯನ್ನು ಭೂಮಿಗಿಳಿಸಲು ಆತ ಕೈಗೊಂಡ ತಪ್ಪಸು, ಎದುರಿಸಿದ ಅಡೆ ತಡೆಗಳು,ಅದನ್ನು ಆತ ಯಶಸ್ವಿಯಾಗಿ ನಿಭಾಯಿಸಿದ ರೀತಿ, ತನ್ನ ಗುರಿಯೆಡೆಗಿನ ಶ್ರದ್ಧೆ, ನಿರಂತರ ಪ್ರಯತ್ನ ಹಾಗೂ ಆತನ ನಿಶ್ಚಲ ಪ್ರಯತ್ನವೆಲ್ಲವೂ ಆ ಕಥೆಯಲ್ಲಿ ಮೂಡಿ ಬಂದಿರುವ ರೀತಿ ಅದ್ಭುತ. ಇಂದಿಗೂ ಸತತ ಪ್ರಯತ್ನವನ್ನುಭಗೀರಥ ಪ್ರಯತ್ನವೆಂದೇ ಕರೆಯಲಾಗುತ್ತದೆ ಹಾಗೂ ಯಾವುದೇ ಒಂದು ನೀರಿಗಾಗಿನ ಹೋರಾಟ, ಶ್ರಮ, ಕೆಲಸದಲ್ಲಿ ಬೇಡವೆಂದರೂ ಭಗೀರಥನ ಹೆಸರು ನುಸುಳುತ್ತದೆ. ಇಂದು ಇಡೀ ವಿಶ್ವದಲ್ಲಿ ತಲೆದೋರಿರುವ ನೀರಿನ ಅಭಾವ, ನೀರಿಗಾಗಿ ಏಳುತ್ತಿರುವ ಹಾಹಾಕಾರವನ್ನು, ಬರಿದಾಗುತ್ತಿರುವ ಅಂತರ್ಜಲದ ಮಟ್ಟವನ್ನು ಕಂಡರೆ ಮತ್ತೊಂದು ಭಗೀರಥ ಪ್ರಸಂಗ ನಡೆಯಬೇಕೇನೋ ಅನಿಸದಿರಲಾರದು.  

ಭೂಮಿಯ ಮೇಲಿನ ನೀರಿನ ಅಂಕಿ ಅಂಶಗಳು ಬಹಳ ತೂಹಲಕಾರಿಯಾಗಿರುವಂಥದು. ಭೂಮಿಯ ಮೇಲಿನ ಸುಮಾರು 70ರಷ್ಟು ಪ್ರದೇಶ ನೀರಿನಿಂದಲೇ ತುಂಬಿದ್ದು, ಅದರಲ್ಲಿ ಶೇಕಡ 95 ಕ್ಕೂ  ಹೆಚ್ಚಿನಷ್ಟು ನೀರು ಸಮುದ್ರ, ಸಾಗರದಲ್ಲಿದೆ. ಎಲ್ಲವನ್ನು ತೂಗಿ ಕಳೆದ ಮೇಲೆ ನಮ್ಮ ಭೂಮಿ ಮೇಲಿನ ಒಟ್ಟು ಇರುವ ನೀರಿನಲ್ಲಿ ಕೇವಲ ನೂರಕ್ಕೆ 2.5 ರಷ್ಟು ಮಾತ್ರ ಸಿಹಿ ನೀರು ಅಥವಾ ಬಳಸ ತಕ್ಕ ನೀರು ಎಂದೇಳುತ್ತದೆ ಮಾಹಿತಿಗಳು. ಅದರಲ್ಲೂ ಬಹುಪಾಲು ನೀರು ಇರುವುದು ಮಂಜು ಗಡ್ಡೆ ಹಾಗೂ ಭೂಮಿ ಆಳದ ಅಂತರ್ಜಲದ ರೂಪದಲ್ಲಿ. ಅಂದರೆ ನೀರೆನ್ನುವುದು ಮೊದಲಿನಿಂದಲೂ ದುಬಾರಿಯಾದುದೇ. ಸುಲಭದಲ್ಲಿ ಸಿಗುತ್ತಿದ್ದದ್ದೇನಲ್ಲ. ನೀರು ಸುಲ್ಭದಲ್ಲಿ ಸಿಗದಿದ್ದ ಕಾಲದಲ್ಲೂ ಅದು ಅಭಾವ ಎನಿಸಿರಲಿಲ್ಲ, ಶ್ರಮದಾಯಕ ಮಾತ್ರವಾಗಿತ್ತು. ಆದರೆ ಬದಲಾದ ಪರಿಸರ, ವಾತವರಣ ಹಾಗೂ ಪ್ರಾಕೃತಿಕ ಅಸಮಲೋತನದಿಂದಾಗಿ ನೀರಿನ ಅಭಾವ,ದಾರಿದ್ರ್ಯದ ಸ್ವರೂಪ ಇಂದು ಬದಲಾಗುತ್ತಿದೆ. ಕೆಲವೇ ವರ್ಷಗಳ ಹಿಂದಿನವರೆಗೂ ನೀರಿನ  ಸಮಸ್ಯೆಯೆಂದರೆ ನೀರಿನ ಕೊರತೆ ಎಂಬುದಾಗಿತ್ತು. ಆದರೆ ಇಂದು ನೀರಿನ ಸಮಸ್ಯೆ ಎಂದರೆ ಕೊರತೆ ಮಾತ್ರವಲ್ಲ ಅದಕ್ಕೆ ನೀರಿನ ಒತ್ತಡ, ನೀರಿನ ಮುಗ್ಗಟ್ಟು ಎಂಬುದೆಲ್ಲವೂ ಸೇರಿಕೊಂಡಿವೆ. 

ನಾವು ಕಂಡ ಹಾಗೆ ಒಂದು ಇಪ್ಪತ್ತು ಮೂವತ್ತು ವರ್ಷಗಳ ಹಿಂದೆ ನೀರಿನ ಅಭಾವದ ಸ್ವರೂಪವೇ ಬೇರೆಯದೇ ರೀತಿಯದ್ದಾಗಿತ್ತು. ಈಗಿನಂತೆ ಮನೆ ಮನೆಗೆ ನೀರು ಬರುವುದು ಕನಸಿನ ಮಾತೇ.ಎಷ್ಟೋ ನಗರ, ಬಡಾವಣೆಗಳಲ್ಲಿ ಈಗಲೂ ಆ ಪರಿಸ್ಥಿತಿ ಇದೆಯಾದರೆ, ಹಿಂದೆ ಅದು ಸಾಮಾನ್ಯದ ಮಾತೇ. ಮನೆಯಲ್ಲೇ ಬಾವಿ ಇದ್ದವರು ಇಲ್ಲವೇ ಬೋರ್ ವೆಲ್ ತೆಗೆಸಿಕೊಂಡವರು ಬಿಟ್ಟರೆ, ಬೇರೆಲ್ಲರಿಗೂ ಬೀದಿಯ ನಲ್ಲಿಯೇ ಗತಿ. ಬೀದಿಗೆ ಒಂದು ಎರಡೋ ಇದ್ದ ನಲ್ಲಿಯಲ್ಲಿ ಹೋಗಿ ನೀರು ತುಂಬಿಕೊಂಡು ಬರುವುದೇ ಒಂದು ದೊಡ್ಡ ಸಾಹಸ. ಒಂದು ನದಿ ಇದ್ದ ಕಡೆ ಇದ್ದ ಒಂದು ಸಂಸ್ಕೃತಿ, ನಾಗರೀಕತೆಯೇ ಅನಾವರಣಗೊಳ್ಳುತ್ತದೆ ಎಂಬ ಮಾತಿದೆ. ನಮ್ಮ ಅಂದಿನ  ಬೀದಿ ಬದಿಯ ನಲ್ಲಿಯೂ ಒಂದು ರೀತಿಯ ಸಾಂಸ್ಕೃತಿಕ ಚಟುವಟಿಕೆಗೆ ವೇದಿಕೆಯೇ, ಅದು ಬೇರೆಯ ಮಾತು. ಆಗದ ನೀರಿನ ಪೈಪುಗಳ ಜೋಡಣೆ, ಅಸಮರ್ಪಕವಾದ ನೀರಿನ ಹಂಚಿಕೆ ಹಾಗೂ ನಿರ್ವಹಣೆಯಿಂದಾಗಿ ನದಿಗಳಲ್ಲಿ ನೀರಿದ್ದರೂ ಅದು ಜನರನ್ನು ತಲಪುವ ಸಾಧನಗಳು, ವಿಧಾನಗಳು ಬಾಲ್ಯಾವಸ್ಥೆಯಲ್ಲಿದ್ದವು. 

ಇದು ನಗರದ ಮಾತಾದರೇ, ಹಳ್ಳಿಗಳಲ್ಲಿ ಇತ್ತೀಚಿನವರೆಗೂ ಬಾವಿ, ಕೆರೆ, ನದಿ, ಹಳ್ಳ, ಝರಿ,ಬೋರ್ ವೆಲ್ ಗಳೇ ನೀರಿನ ಮೂಲಗಳಾಗಿದ್ದವು. ಅಂದರೆ ಅದು ಮೂಲಭೂತ ಸೌಕರ್ಯದ ಕೊರತೆಯಾಗಿದ್ದು ಸರ್ಕಾರಗಳ, ಸಂಬಂಧಪಟ್ಟ ಸಂಸ್ಥೆಗಳ ವೈಫಲ್ಯವನ್ನು ಎತ್ತಿ ತೋರಿಸುತ್ತಿದ್ದವು. ಹಲವು ಸಂದರ್ಭಗಳಲ್ಲಿ ಸರ್ಕಾರ, ಸಂಸ್ಥೆಗಳು ಕಾರ್ಯಪ್ರವತರಾಗಿದ್ದರೂ ಹಣಕಾಸಿನ ತೊಂದರೆ ಇಲ್ಲವೇ ಸೌಲಭ್ಯದ ಅಡೆತಡೆಗಳು ಅವುಗಳ ಕೈ ಕಟ್ಟಿಹಾಕುತ್ತಿದ್ದವು. ಇವೆಲ್ಲಾ ಕಾರಣಗಳಿಂದಾಗಿ ನೀರೆನ್ನುವುದು ಒಂದು ದುಬಾರಿ ನೈಸರ್ಗಿಕ ಸಂಪತ್ತಾಗಿತ್ತು. ಅಂದರೆ ನೀರು ಇದ್ದರೂ ಅದನ್ನು ಸಮರ್ಪಕವಾಗಿ ಹಂಚುವ ಪರಿಕರಗಳು, ಸೌಲಭ್ಯಗಳು ಇಲ್ಲದೆ ಅದೇ ಒಂದು ರೀತಿಯ ಸಮಸ್ಯೆಯಾಗಿತ್ತು. ಆದರೆ ಈಗಿನದು ಬೇರೆಯದೇ ಆದ ಸಮಸ್ಯೆ. ಕಾಲ ಬದಲಾದಂತೆಲ್ಲಾ ನೀರನ್ನು ಸಮರ್ಪಕವಾಗಿ ತಲುಪಿಸುವ ಕಾರ್ಯ ಯೋಜನೆಗಳು ಸಾಕಾರಗೊಂಡವು. ನೀರಾವರಿ ಯೋಜನೆಗಳ ಆಮೆ ವೇಗ, ಭ್ರಷ್ಟಾಚಾರದ ನಡುವೆಯೂ ನೀರು ಮರಿಚಿಕೆಯಾಗದೆ, ಗಗನ ಕುಸುಮವಾಗದೆ, ಮೂಲ ಸೌಕರ್ಯದ ಭಾಗವಾಗಿ ಮನೆ ಮನೆಗಳನ್ನು ತಲುಪಿತು. ಅದು ನೂರಕ್ಕೆ ನೂರರಷ್ಟು ಅಲ್ಲದಿದ್ದರೂ ಭಾರತದಂಥ ಅಗಾಧ ಜನಸಂಖ್ಯೆಯ ದೇಶದಲ್ಲಿ ನಿಜಕ್ಕೂ ಈ ನಿಟ್ಟಿನಲ್ಲಿ ಸಾಕಷ್ಟು ಪ್ರಗತಿಯಾಗಿದೆ, ಇನ್ನೂ ಸುಧಾರಿಸುವ ಭರವಸೆ ಇದೆ ಎಂಬುದಾಗಿ ವಿಶ್ವದ ಅನೇಕ ನೀರು ನಿರ್ವಹಣಾ ಸಂಸ್ಥೆಗಳು ಮೆಚ್ಚುಗೆ ವ್ಯಕ್ತ ಪಡಿಸಿವೆ, ಆದರೆ ಅಸಲಿ ಸಮಸ್ಯೆ ಪ್ರಾರಂಭವಾಗಿರುವುದೇ ಇಲ್ಲಿ. ಈಗ ಇಲ್ಲಿ  ಒತ್ತಡ ಹಾಗೂ ಮುಗಟ್ಟಿನ ಸಮಸ್ಯೆ. ಈ ನೀರಿನ ಒತ್ತಡವೆಂದರೆ ಏನು ಎಂದು ಅವಲೋಕಿದಾಗ ಕಣ್ಣಿಗೆ ರಾಚುವುದು ಕಳೆದ 50 ವರ್ಷಗಳಲ್ಲಿ  ದುಪ್ಪಟ್ಟಾಗಿರುವ ಪ್ರಪಂಚದ ಜನಸಂಖ್ಯೆ. ಅದರಲ್ಲೂ ಭಾರತ ಇದರಲ್ಲಿ ಬಹು ಮುಂದು. ಜನ ಸಂಖ್ಯೆ ಮಾತ್ರವಲ್ಲದೆ ಒಬ್ಬ ಮನುಷ್ಯ ಉಪಯೋಗಿಸುತ್ತಿದ್ದ, ಬಳಸುತ್ತಿದ್ದ ನೀರಿನ ಸರಾಸರಿ ಕೂಡ ದುಪ್ಪಟ್ಟಾಗಿದೆ. 

ಜೀವನ ಶೈಲಿ ಸರಳವಾಗಿದ್ದ, ಶ್ರೀಮಂತಿಕೆಯ ಅರ್ಥ ಬೇರೆಯದೇ ಇದ್ದ ಸಮಯದಲ್ಲಿ ನೀರಿನ ಬಳಕಯಲ್ಲೂ ಸಮಾನತೆಯಿತ್ತು. ಶ್ರೀಮಂತ, ಬಡವನ ಆಹಾರ, ನೀರು ಬಳಸುವ ಪದ್ದತಿಗಳು ಒಂದೇ ರೀತಿಯದ್ದಾಗಿದ್ದವು.ಆದರೆ ಕಾಲ ಬದಲಾದಂತೆ ಹೆಚ್ಚು ಹೆಚ್ಚು ನೀರು ಬಳಸುವಂತ ಮಾನವನ ಜೀವನ ವಿಧಾನಗಳು, ಆಹಾರ ಪದ್ಧತಿಯಿಂದಾಗಿ ನೀರಿನ ಮೂಲಗಳ ಮೇಲೂ ಅಧಿಕವಾದ ಒತ್ತಡ ಪ್ರಾರಂಭವಾಯಿತು. ಉಳ್ಳವರು ತಮ್ಮ ಸಂಪತ್ತನ್ನು ಬಳಸಿ ನೀರನ್ನು ಬಸಿಯುವ, ಕೂಡಿಸಿಕೊಳ್ಳುವ ಪ್ರಕ್ರಿಯೆಯೂ ಪ್ರಾರಂಭವಾಯಿತ್ತು. ವಾತವರಣದಲ್ಲಿನ ಬಲಾವಣೆ ಪ್ರಕೃತಿ ಮೇಲೆಯೂ ಪರಿಣಾಮ ಬೀರಿ ಈ ನೀರಿನ ಸೆಲೆಗಳು ಬೇಡಿಕೆಯ ಮಟ್ಟದಲ್ಲಿ ನೀರನ್ನು ನೀಡಲು ವಿಫಲವಾದವು.  ಕೈಗಾರೀಕರಣದಿಂದಾಗಿ ಸಿಹಿ ನೀರಿನ ಬುಗ್ಗೆಗಳು ಕಲುಷಿತಗೊಂಡವು. ನೀರು ಯತ್ತೇಚ್ಛವಾಗಿದ್ದರೂ ಬೃಹದಾಕಾರವಾಗಿ ಬೆಳೆಯುತ್ತಿದ್ದ ಮಾನವನ ದಾಹಕ್ಕೆ ಪರಿಸರ ಒಂದಲ್ಲ ಒಂದು ದಿನ ಬರಿದಾಗಲೇ ಬೇಕಿತ್ತು. ಆ ಬರಿದಾಗುವ ಕಾಲ ಈಗ ಬರುತ್ತಿದೆ. ಎಚ್ಚರ ವಹಿಸದಿದ್ದರೆ ಮುಂದೆ ಸಂಪೂರ್ಣವಾಗಿ ಬತ್ತಿಹೋಗುವ ಲಕ್ಷಣಗಳು ಕಾಣುತ್ತಿವೆ. ಎಚ್ಚರಿಕೆಯ ಗಂಟೆಗಳು ಮೊಳಗುತ್ತಿವೆ. ನೀರು ಸಿಕ್ಕರೂ ಸುರಕ್ಷಿತವಾದ, ಸ್ವಚ್ಛವಾದ ನೀರು ಎನ್ನುವುದು ಖಾತ್ರಿಯಿಲ್ಲ. ಭಾರತದಂಥ ದೇಶದಲ್ಲಿ ದಿನವೊಂದಕ್ಕೆ 1600 ಜನರು ಕಲುಷಿತ ನೀರಿನಿಂದ ಅಸ್ವಸ್ಥಗೊಂಡು ಅಸುನೀಗುತ್ತಾರೆ ಎಂಬದು ಬೆಚ್ಚಿ ಬೀಳಿಸುವ ಸಂಗತಿ. 

ಶೇಕಡ 50ಕ್ಕಿಂತ ಹೆಚ್ಚಿನ ಶುದ್ಧ ನೀರಿನ ಯೋಜನೆಗಳು ವಿಫಲವಾಗಲು ಬಹು ಮುಖ್ಯ ಕಾರಣ ಸಾಮಾನ್ಯ ಜನರ ಅಸಹಕಾರ ಹಾಗೂ ಉದಾಸೀನತೆ ಎಂದು ಸಂಸ್ಥೆಯೊಂದರ ಅಂಕಿ ಅಂಶಗಳು ಹೇಳುತ್ತವೆ. ನಮ್ಮ ಮಕ್ಕಳಿಗಾಗಿ, ಮುಂದಿನ ಜನಾಂಗಕ್ಕಾಗಿ  ಒಳ್ಳೆಯ ಪರಿಸರವನ್ನು ಉಳಿಸಬೇಕಾದ ಜವಬ್ದಾರಿ ನಮ್ಮ ಮೇಲಿರುವಾಗ ನೀರು ಬಹು ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಈ ನಿಟ್ಟಿನಲ್ಲಿ ಸಾಮೂಹಿವಾದ, ಸಾಂಘಿಕವಾದ ಪ್ರಯತ್ನಗಳು ಆಗಬೇಕಾಗಿದೆ. ತನ್ನ ಪೂರ್ವಜರಿಗಾಗಿ ಕೈಲಾಸದಿಂದ ನೀರನ್ನು ಹರಿಸಿದ ಭಗೀರಥನ ಪ್ರಯತ್ನ ನಮ್ಮ ನಿಮ್ಮದಾಗ ಬೇಕಾಗಿದೆ. ವ್ಯತ್ಯಾಸವೆಂದರೆ ಅದಕ್ಕೆ ಸ್ವರ್ಗದ ಮೊರೆ ಹೋಗಬೇಕಾದ ಅವಶ್ಯಕತೆಯಿಲ್ಲ, ಇರುವ ನೀರನ್ನು ಉಳಿಸಿಕೊಳ್ಳುವ, ನೀರಿನ ಮೂಲಗಳನ್ನು ಬೆಳೆಸುವ ಮನಸ್ಸು ಮಾಡಬೇಕಾಗಿದೆ. ಕಠಿಣ ತಪ್ಪಸಿನ ಬದಲು ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಶಿಸ್ತು, ನಮ್ಮದೇ ಉದಾಸೀನದ ಅಡೆತಡೆಗಳನ್ನು ದಾಟುವ ಸಂಕಲ್ಪ, ಪರಿಸರದ ಬಗೆಗಿನ ಗೌರವ ಬೆಳೆಸಿಕೊಳ್ಳಬೇಕಾಗಿದೆ. ತನ್ನ ಮನೆಯ ಚಂದದ ಹೂದೋಟಕ್ಕೆ ನೀರುಣಿಸುವ ಶ್ರೀಮಂತನಿಗೆ ಎದುರಿನ ಮನೆಯ ಕುಟುಂಬದ ನೀರಿನ ಬವಣೆ ಅರ್ಥವಾಗಬೇಕಾಗಿದೆ. 


ನೀರನ್ನು ನಮ್ಮದೇ ಆದ ರೀತಿಯಲ್ಲಿ ಉಳಿಸುವ 100 ಸರಳ ವಿಧಾನಗಳನ್ನು http://wateruseitwisely.com ಎಂಬ ಅಂತರ್ಜಾಲದ  ಸೈಟ್ ನಲ್ಲಿ ಕಾಣ ಬಹುದು. ಪಾತ್ರೆಗಳನ್ನು ತೊಳೆಯುವಾಗಿನಿಂದ ಹಿಡಿದು ನಮ್ಮದೇ ಪುಟ್ಟ ಕೈ ತೋಟದಲ್ಲಿ ನೀರನ್ನು ಹೇಗೆ ಬಳಸಬಹುದು ಎಂಬುದರ ಮಾಹಿತಿ ಇದರಲ್ಲಿದೆ. ಬಹುತೇಕ ಮಾಹಿತಿಗಳು ನಮಗೆ ತಿಳಿದಿರುವಂಥದೇ, ಆದರೆ ಅದನ್ನು ಕಡೆಗಣಿಸುತ್ತಾ ಬಂದವರು ನಾವು. ಇನ್ನು ಮುಂದೆ ಮನಸು ಮಾಡಬೇಕು ಆಷ್ಟೇ. ಇನ್ನು, ಭಾರಿ ಪ್ರಮಾಣದಲ್ಲಿ ಮಳೆ ಕಾಣುವ ಮಲೆ ನಾಡು, ಕರಾವಳಿ ಪ್ರದೇಶಗಳಲ್ಲಿ ಭಾರಿ ಪ್ರಮಾಣದ ನೀರು ಹರಿದು ಸಮುದ್ರ ಪಾಲಾಗುತ್ತವೆ. ಹರಿದು ಹೋಗುವ ನೀರನ್ನು, ಸಂಗ್ರಹಿಸಿ, ಸದ್ಬಳಕೆ ಮಾಡಿಕೊಳ್ಳುವಂಥ, ನೀರಿಲ್ಲದ ಜಾಗಗಳಿಗೆ ಹರಿಸುವಂಥ  ಯೋಜನೆಗಳತ್ತ ನಮ್ಮ ಸರ್ಕಾರಗಳು, ನಾಯಕರುಗಳು ಗಮನ ಹರಿಸಬೇಕಾಗಿದೆ. ಕಷ್ಟವಾದರೂ ಅಸಾಧ್ಯದ ಮಾತಲ್ಲ. ರಾಜಕೀಯ ಇಚ್ಚಾಶಕ್ತಿ ಬೇಕಷ್ಟೆ. ನಮ್ಮ ಸ್ಥಳಗಳಲ್ಲೇ ಬೀಳುವ ಪ್ರತಿಯೊಂದು ಮಳೆಯೂ ಪ್ರಕೃತಿ ಕೊಡ ಮಾಡುತ್ತಿರುವ ನೈಜ ಕೊಡುಗೆ. ಅಗಾಧ ನೀರ ಕಣಜ. ಅದನ್ನು Rain Harvesting ಗಳಂಥ ಯೋಜನೆಗಳಿಂದ ಸಂಗ್ರಹ ಮಾಡುವ ಪ್ರಕ್ರಿಯೆಗೆ ಮತ್ತಷ್ಟು ಚುರುಕು ತರುವ ಕಾರ್ಯವನ್ನು ಸ್ಥಳೀಯ ಪೌರ ಸಂಸ್ಥೆಗಳೂ ಮಾಡಬೇಕಾಗಿದೆ. ನೀರಿನ ಮರು ಬಳಕೆಯಂಥ ಅವಿಶ್ಕಾರಗಳು ಮತ್ತಷ್ಟು ಹೆಚ್ಚಬೇಕಾಗಿದೆ.

ಈ ಬೇಸಿಗೆಯಲ್ಲಿ ನೀರಿನ ಅಭಾವವಿರುತ್ತದೆ ಎಂದು ಮಾಹಿತಿಗಳು ಬಂದಿವೆ. ಕಾವೇರಿ ಸಹಾ ಬರಿದಾಗಿರುವುದು ಮಾತ್ರವಲ್ಲದೆ, ನಮ್ಮ ಕೈಯಿಂದ ಜಾರಿದೆ. ಪ್ರತಿ ಹನಿ ಹನಿಯನ್ನೂ ಮುತ್ತಿನಂತೆ ಜೋಪಾನವಾಗಿ ಬಳಸಬೇಕಾದ ಕಾಲಘಟ್ಟದಲ್ಲಿ  ನಾವಿರುವಾಗ, ಜವಬ್ದಾರಿಯುತವಾಗಿ ಬಾಳೋಣ. ನಮ್ಮ ಪರಿಸರವನ್ನು ಕಾಪಾಡಿಕೊಳ್ಳೋಣ. 

-ಪ್ರಶಾಂತ್ ಇಗ್ನೇಷಿಯಸ್

No comments:

Post a Comment