Sunday 3 March 2013

ಬ್ರ. ಗೆಬ್ರಿಯಲ್ ಪೆರಿಚೋ‍ರ ನೆನಪುಗಳಲ್ಲಿ ಹುಟ್ಟಿದ ಮಾತುಗಳು..



ಮನಸ್ಸು ಹಿಂಡಿದಂತಾಯಿತು. ಕೇಳಿಸಿಕೊಳ್ಳಲು ಇಚ್ಛಿಸದ ವಿಷಯ ಕೇಳಿ ಮನಸ್ಸು ರೋಧಿಸಿತ್ತು.
ಅದೇ ಗೆಬ್ರಿಯಲ್ ಪೆರಿಚೋರ ಸಾವಿನ ಸುದ್ದಿ.
ಅಧಮ್ಯ ಕಲೆಗಾರ ಗೆಬ್ರಿಯಲ್ ಪೆರಿಚೋರನ್ನು ಸಾವು ಎಂಬುವಳು ಇಷ್ಟೂ ಬೇಗ
ವರಿಸಿಕೊಂಡು ಬಿಡುತ್ತಾಳೆಂದು ನಾನು ಕನಸು ಮನಸಿನಲ್ಲೂ ಊಹಿಸಿರಲಿಲ್ಲ.
ಗಟ್ಟಿಮುಟ್ಟಾಗಿ, ಮನೆಯ ಸುತ್ತ ಮುತ್ತಲಿನ ಗಲ್ಲಿಗಳನ್ನು ಸುತ್ತಾಡಿ, ರಸ್ತೆಯಲ್ಲಿ
ಸಿಕ್ಕಿದವರಿಗೆ ಬಿಟ್ಟಿ ಸಲಹೆಗಳನ್ನು ಕೊಟ್ಟು, ಬೆಸೆಲಿಕಾ ಮತ್ತು ಪಾಟ್ರಿಕ್ಸ್ ಚರ್ಚ್ ಗಳಿಗೆ ಹಾಜರಿ ಕೊಟ್ಟು ಮನೆಗೆ ಹಿಂದಿರುಗಿ ತನ್ನ ಹಾಸ್ಯಭರಿತ ಮಾತುಕತೆಗಳಿಂದ
ಮನೆಯಲ್ಲಿದ್ದವರೆನ್ನಲ್ಲ ನಕ್ಕಿ ನಗಿಸುತ್ತಿದ್ದ, ಇವಿಷ್ಟನ್ನು ತನ್ನ
ದಿನಚರಿಯಾಗಿಸಿಕೊಂಡಿದ್ದ ಪರಿಚೋ ಎಂಬ ಬೀದಿಬಸವ, ಕಿಂದರಿಜೋಗಿಯನ್ನು ಸಾವೆಂಬ ಮಾಯೆ
ನಿರ್ದಯೆಯಿಂದ ಕೈಕಾಲುಗಳನ್ನು ಕಟ್ಟಿ ಒಂದು ಕಡೆ ಮಲಗಿಸಿಬಿಟ್ಟಿತ್ತು.

ಪೂರಿಯಂತೆ ಉಬ್ಬಿದ ಮುಖ, ದಪ್ಪ ತುಟ್ಟಿ. ನಾಣ್ಯದಗಲದ ಕಣ್ಣುಗಳು, ಬೊಜ್ಜು ಹೊಟ್ಟೆ,
ಮಜಬೂತಾದ ದೇಹ, ಸ್ವಲ್ಪ ಬಾಗಿದ ಬೆನ್ನು. ಇವಿಷ್ಟು ಪೆರಿಚೋರ ಮೈಮಾಟವಾದರೆ, ಅವರ
ವ್ಯಕ್ತಿತ್ವದ ಆಳ ಅಗಲ ಇನ್ನೊಂದು ಬಗೆಯದು. ಚಿಕ್ಕದನ್ನೂ ದೊಡ್ಡದಾಗಿಸುತ್ತಿದ್ದ
ಪೆರಿಚೋ ವಿಶಾಲ ಹೃದಯದ ಮನುಷ್ಯ. ೧೦೦ ಎಂಬುವುದು ಗೆಬ್ರಿಯಲ್ ಬಾಯಲ್ಲಿ
೧೦೦೦೦೦ವಾಗುಬಿಡುತಿತ್ತು. ಇರುವೆ ಆನೆಯಾಗುತ್ತಿತ್ತು. ತನಗೆ ಸಿಕ್ಕ ಒಂದು ಚಿಕ್ಕ ಗೌಣ
ಸಹಾಯ ಅವನಿಗೆ ದೊಡ್ಡದೆನಿಸಿಬಿಡುತಿತ್ತು. ಒಬ್ಬ ಸಾಮಾನ್ಯ ಸ್ಕೊಲಸ್ಟಿಕ್- ಹುಡುಗ ಅವನ
ಕಣ್ಣಿಗೆ ರಾಜಮಹಾರಾಜನಾಗಿಬಿಡುತ್ತಿದ್ದ.   ಇದೇ ಒಂದು ಗುಣ ಗೆಬ್ರಿಯಲ್ ಎಂಬ ಸಾಮಾನ್ಯನ
ಪ್ರಸಿದ್ಧಿಯನ್ನು ಉತ್ತುಂಗದ ತುದಿಗೆ ಏರಿಸಿದ್ದು. ಇಲಿ ಹೋದ್ರೆ ಹುಲಿ ಹೋಯಿತು
ಎಂದು ಹೇಳುವುದೊಂದೆ ಅಲ್ಲ ಇಲಿಗೆ ಹುಲಿಯಂತಹ ಧೈರ್ಯ, ಶಕ್ತಿ, ಬಲಿಷ್ಠತೆ ತುಂಬಿ
ಜೀವಂತವಾಗಿ ಬಿಡಿಸುತ್ತಿದ್ದ ಜಾದುಗಾರ ಪರಿಚೋ.

ಯಾರಾದರೂ ಏನಾದರೂ ಒಂದು ಒಳ್ಳೆಯದು ಮಾಡಿ, ಅಥವಾ ಏನಾದರು ಸಾಧಿಸಿ ಪರಿಚೋನ ಕಣ್ಣಿಗೆ
ಸಿಕ್ಕಿಹಾಕಿಕೊಂಡರೋ ಮುಗಿಯಿತು ಅವರಒಳ್ಳೆತನಸಾಧನೆ ಪೆರಿಚೋರ ಹುಚ್ಚುಬಾಯಿಯಲ್ಲಿ
ಕ್ಷಣಕ್ಕೊಮ್ಮೆ ಹುಟ್ಟಿ, ಮರು ಹುಟ್ಟಿ, ಮನೆಗೆ ಬಂದವರ ಕಿವಿಗಳಲ್ಲಿ ಟಂ ಟಂ
ಅಗಿಬಿಡುತ್ತಿದ್ದವು. ಹೀಗಿ ಇನ್ನೊಬ್ಬರ ಒಳ್ಳೆತನವನ್ನು ಗುರುತಿಸಿ ಬೆಳೆಸುವಲ್ಲಿ ಪರಿಚೋ
ಎಂದು ಹಿಂದ್ಬೀಳಲಿಲ್ಲ. ಕೆಲ ಮಿಷನ್ಗಳ spokeperson ಆಗಿದ್ದ(?) ಪೆರಿಚೋ
ಒಳ್ಳೆತನವನ್ನು ಡಂಗುರಿಸುವ ಜಾಹೀರಾತಾಗಿಬಿಟ್ಟಿದ್ದರು.

ಕಥೆಗಳನ್ನು ಹೇಳುವುದರಲ್ಲಿ ಎಷ್ಟೂ ನಿಪುಣನೆಂದರೆ ಅವರ ಕಾಲ್ಪನಿಕತೆಗೆ ಎಲ್ಲೆ
ಎಂಬುವುದೇ ಇರಲಿಲ್ಲ. ಒಂದು ಚೌಕಟ್ಟು, ತೆಕ್ಕೆಗೆ ಸಿದ್ಧಿಸದ ಅವರ ಕಾಲ್ಪನಿಕತೆ
ಕೆಲವೊಮ್ಮೆ ಅಸ್ವಾಭವಿಕತೆಯ ವೇಷವನ್ನು ಧರಿಸಿಕೊಂಡರೂ ಅವು ಹಾಸ್ಯವನ್ನು ಎಂದು
ಬರಿದಾಗಿಸಿಕೊಂಡಿರಲಿಲ್ಲ. ಸ್ವಾರಸ್ಯವಾಗಿ ಕಥೆಗಳನ್ನು narrate ಮಾಡುವುದಿರಲೀ
ಕಥೆಗಳಲ್ಲಿ ಸಿಗುತ್ತಿದ್ದ ಕೇಂದ್ರಶಕ್ತಿ, ಅಧಮ್ಯ ಪ್ರತಿಭೆ, ಸೃಷ್ಟಿ -ಉತ್ಪ್ರೇಕ್ಷಾಪ್ರಯೋಗ ನಿಜವಾಗಲೂ ಅದ್ಬುತ.

ಅಟೋ ಬಂದು ಅವನಿಗೆ ಡಿಕ್ಕಿ ಹೊಡೆದರು ಸೊಳ್ಳೆ ಕಚ್ಚಿದಂತಾಗಿ ಹಿಂದೆ ತಿರುಗಿ ನೋಡಿದಾಗ
ಅವನಿಗೆ ಡಿಕ್ಕಿ ಒಡೆದ ಆಟೋ ಮೋರಿಯ ಪಾತಾಳದಲ್ಲಿ ಬಿದಿದ್ದು, ತಾನು ಸಾಕಿದ ಹಸುವಿನಿಂದ
ಬೇಕುಬೇಕಾದಾಗೆಲ್ಲಾ ತೊಡೆ ಮಾಂಸ ಕಟಾವು ಮಾಡಿ ತಿಂದರೂ ಪುನ: ಬೆಳೆದುಕೊಳ್ಳುತ್ತಿದ್ದ
 ಹಸುವಿನ ತೊಡೆ ಮಾಂಸ, ಅಂತೋಣಿಯವರ ಪುಣ್ಯಕ್ಷೇತ್ರಕ್ಕೆ ಹೋಗಿ ಅತ್ತು ಕಾಡಿ ಬೇಡಿ ಕಣ್ಣೀರು
ಸುರಿಸಿ, ಕಣ್ಣೀರ  ಒರೆಸಲು ತಂದ ಹತ್ತಾರು ಕರವಸ್ತ್ರಗಳು ತೇವಗೊಂಡು ಕೊನೆಗೆ ಒಂದು
ದೊಡ್ಡ ಕಂಬಳಿ ಸಂಪೂರ್ಣ ಒದ್ದೆಯಾಗಿದ್ದು ಇವೆಲ್ಲವು ಉತ್ಪ್ರೇಕ್ಷಾಪ್ರ ಯೋಗದ
ಅಭ್ಯಾಸಕ್ಕೆ ಪಕ್ಕ ಪಠ್ಯಗಳಾಗಬಹುದೆನೋ. ಅವನ ಉತ್ಪ್ರೇಕ್ಷೆಗಳು ನಮ್ಮಲ್ಲಿ ನಗು
ಹುಟ್ಟಿಸಿದ್ವೆ ಹೊರತು ಅದರಲ್ಲಿ ಅಡಗಿ ಕುಳಿತ್ತಿದ್ದ ಪರಿಚೋ ಎಂಬುವವನ ಆಸೆ ಅಭಿಲಾಸೆ
ನೋವು ನಲಿವುಗಳು ಮತ್ತು ಅವನಿಗೆ ತಪ್ಪಿದ ಅನುಭೋಗಗಳು ನಮ್ಮ ಕಿವಿಗಳಿಗೆ
ಕೇಳಿಸವಿಲ್ಲವೇನೋ!

ಅಂಚೆಚೀಟಿಗಳ ಸಂಗ್ರಹ, ಪ್ರಾಚೀನ ನಾಣ್ಯಗಳ ಸಂಗ್ರಹ, ಪೋಪ್ಗಳ ಚಿತ್ರಗಳಿದ್ದ
ಅಂಚೆಚೀಟಿ, ನಾಣ್ಯಗಳ ಸಂಗ್ರಹ, ಹೀಗೆ ಬೇಕಾದಷ್ಟು ಹವ್ಯಾಸಗಳನ್ನು ಬೆಳೆಸಿಕೊಂಡಿದ್ದ
ಪೆರಿಚೋ ಅವುಗಳ ರಸಸ್ಥಿತಿಯನ್ನು ಸಹ ಕಂಡಿದ್ದರು. ಮನೋಭಿಲಾಷೆಯ ಕ್ರಿಯಾಶೀಲ ರಸಸ್ಥಿತಿಯ
ಪರಮಾಭಿವ್ಯಕ್ತಿಗೆ ಒಂದು ರೂಪಕವಾದರು. ತನ್ನಲ್ಲಿ ಉರಿಯುತ್ತಿದ್ದ ಅನಾಥಪ್ರಜ್ಞೆ
ನಂದಿಸಲು ಇಂತಹ ಹವ್ಯಾಸಗಳ ಬಳಸಿಕೊಂಡರೋ ಅಥವಾ ಅನಾಥಪ್ರಜ್ಞೆ ಎಂಬ ಬಲಿಷ್ಠ ಪ್ರಾಣಿಯ
ಉಗ್ರ ಹಿಂಸೆಯೇ ಎಲ್ಲಾ ಕೌಶಲ್ಯ,ಹವ್ಯಾಸಗಳಿಂದ ಅವರನ್ನು ತುಂಬಿತ್ತೋ ಗೊತ್ತಿಲ್ಲ.
ಸಾವಿರಾರು ಜನರ ಪ್ರೀತಿಗೆ ಪಾತ್ರರಾಗಿದ್ದ ಅವರು ಅನಾಥಪ್ರಜ್ಞೆಯಲ್ಲಿ
ಸಾಯಲಿಲ್ಲವೆಂಬುವುದೇ ನನ್ನ ಗ್ರಹಿಕೆ.

ಮನೆಗೆ ಬಂದ ಅತಿಥಿಗಳ ಆತಿಥ್ಯದ ಜವಾಬ್ದಾರಿಯನ್ನು ಸ್ವಂತ ಇಷ್ಟದಿಂದ ತಾನೇ
ವಹಿಸಿಕೊಳ್ಳುತ್ತಿದ್ದ ಪರಿಚೋ ಅತಿಥಿ ಅಭ್ಯಾಗತರನ್ನು ಆದರಿಂದ ಸ್ವಾಗತಿಸಿ
ಉಪಚರಿಸುತ್ತಿವುದಿರಲಿ ಅವರಿಗೆ ಮನೆಯ ಪ್ರತಿಯೊಂದು ಮಾಹಿತಿಯನ್ನು ಒದಗಿಸಿ
ಅತಿಥಿಗಳನ್ನು ನಿರಾತಂಕವಾಗಿಬಿಡಿಸುತ್ತಿದ್ದ. ಅವರ ಆರೈಕೆಗೆ ಯಾವತ್ತು ಪ್ರಾಂತ್ಯ,
ಭಾಷೆ, ಧಾರ್ಮಿಕ ಗುಂಪು, ಸಭೆ ಎಂಬ ಮಾನವ ನಿರ್ಮಿತ ಬೇಧಗಳ ಗರಬಡಿಯಲಿಲ್ಲ. ಅವರ
ಆರೈಕೆಗೆ ಎಲ್ಲಾ ವ್ಯಕ್ತಿಗಳು ಸಮಪಾಲುದಾರರಾಗುತ್ತಿದ್ದರು.

ಕೊನೆಗೆ ಹೇಳಲೇಬೇಕಾದ ಒಂದೇ ಒಂದು ಮಾತು ಕೇಳಿ:
ಗೆಬ್ರಿಯಲ್ ಸಮೀಪಿಸಿದಷ್ಟು ದೂರವಾಗುವ ಕಾಲುದಾರಿ, ಗ್ರಹಿಕೆಗೆ ಪ್ರಯಾಸ ಕೇಳುವ ಒಂದು ಪುಸ್ತಕ, ತನ್ನ ಚಿಕ್ಕಪುಟ್ಟ ಆಟಗಳಲ್ಲಿ ಹಾಸುಹೊಕ್ಕ ಪುಟ್ಟ ಬಾಲಕ, ಬರಹಗಾರರಿಗೆ ಆಗಬಹುದಾದ ಒಂದು ಹಿಡಿ ಕಾದಂಬರಿ.
ಅವರ ಅತ್ಮಕ್ಕೆ ಶಾಂತಿ ನಿತ್ಯವಾಗಲಿ.
ಜೋವಿ ಯೇ..
Read more!

No comments:

Post a Comment