Sunday 3 March 2013

ಪ್ರೇಯಸಿ ಅಜ್ಜಿ

ಪೇಮಿಗಳ ದಿನ
ಏ... ನಿನ್ನ ಹೆಜ್ಜೆಗಳು ಮಸುಕಾದವು
ಅಂದು ಅಜ್ಜಿಯ ನೆನಪು ಕೊಸರಿದವು
ಆಕೆ ಪ್ರೆಮಿಸಿದಳೊ ಪ್ರೀತಿಸಿದಳೋ ಮೊಹಿಸಿದಳೊ?..
ನನ್ನನ್ನು ಆಲಂಗಿಸಿದಳು
ತೊಡೆ ತೂಗುವ ತೊಟ್ಟಿಲ ಮೇಲೆ
ಮೈಚೆಲ್ಲಿ ಮೆದ್ದು
ಹೊರ ಗಾಳಿ ಚಳಿಯಲಿ
ಕನಸುಗಳು ಹೊತ್ತು ಬರುವ ಹಾಗೆ
ಬಿತ್ತಿ ಹೋದವು
ಅಜ್ಜಿ ಕಥೆಗಳು. ಅಲ್ಲಿ
ಕಡುಗೋಲು ರಾಜ ಇದ್ದ
ಕರಿಮಣಿ ರಾಣಿ ಇದ್ದಳು
ಬಂಡಿಪುರದ ಆನೆ ಬಂತು
ನರಿಯಣ್ಣ ಜಾಣನಾದ, ಮೊಲದಣ್ಣ ಮುಗ್ಗರಿಸಿದ
ಹುಲಿ ಸಿಂಹ ಅಬ್ಬರಿಸಿದವು
ನವಿಲುಗರಿ ನಾಚಿತು
ಕಾಗಕ್ಕನ ಪಕ್ಕ ಗೂಬಕ್ಕ ಕೂತಿತು.
ಹಾರಿತು ಏರಿತು ಮನಸು ಅಂಗಾಸಿ
ಬಂದು ಅಜ್ಜಿಯ
ಸೆರಗೇ
ಸೇರುತಿತ್ತು
ಅಂಗಳ ತೊಳೆದಳು
ಅಂದದ ರಂಗೋಲಿ ಬಿಟ್ಟಳು
ತಿಂಗಳ ಬೆಳಕಲಿ ಆಡಿದ ತಂಗಳು ತಂಗಳು
ಆಟಕ್ಕೂ ಉಕ್ಕೇರಿ ನಕ್ಕಳು,
ನಲಿಸಿದಳು
ತುಂಟತನಕ್ಕೆ ಮುಗುಳ್ನಕ್ಕಳು..
ನಾನು ಬಿದ್ದಾಗ ಬೊಕ್ಕೆ ಬಾಯಿಯಿಂದ ಲೊಚಗುಟ್ಟಿದಳು
ಓಡಿಬಂದು ಅಪ್ಪಿಕೊಂಡಳು
ಅಪ್ಪಿಕೊಂಡೆ
ಬೆಳೆಸಿದಳು
ಒಲ್ಲದ ಶಾಲೆಗೆ ಹೋಗೆನೆಂದು ಒಲೆಯ
ಮೂಲೆ ಸೇರಿದವನನು
ಮೊಲೆಯ ನಡುವೆ
ಹುದುಗಿಸಿಟ್ಟಳು
ಹೊಲದ ಕರ್ಮಕ್ಕೆ ಹಚ್ಚಿ ಬೆಚ್ಚಿಬಿದ್ದ
ಪಟಾಪಟಿ ಚಡ್ಡಿ
ದೂಳನ್ನು
ಕೊಡವಿದಳು
ತಲೆ ಸವರಿತು ಅಜ್ಜಿ ಕೈ..
ಬಾಚಿತಬ್ಬಿತು ಮೈ
ಹೇಳಿದಳು..
'ಕಲಿ ಮಗನೆ ಕಲಿತು ಕಲಿಯಾಗು'
ಎಂದು
ನೇವರಿಸಿದಳು
ನೇವರಿಸಿ ಬೆಳೆಸಿದಳು
ಬೆಳೆದೆ ಬೆಳೆದೆ..
ಬೀಳದ ಮರ 
ತೋಯುವ ತೆನೆ,
ತಾಕುವ ಉಸಿರು
ನಿನ್ನಂತಹ ಹೂ ಬಳ್ಳಿಯ ಆಸರೆಗೆ ಚಾಚುವ ನೆರಳಾದೆ..
ಆದಕ್ಕೋ ಎನೋ 
ಅತ್ತ ಕರಗಿ ಬಿಟ್ಟಿತು ಅಜ್ಜಿಯ ಕರುಳಬಳ್ಳಿ
ಪಡೆಯಬೇಕು ಅವಳನು ಮತ್ತೆ
ಪ್ರೀತಿಸಿಯಾದರೂ
ಎಂದೆ
ಪ್ರೀತಿಸಿದೆ
ಪ್ರೇಮಿಸಿದೆ
ಅಜ್ಜಿಯಂತೆ ಮೋಹಿಸಿದರೂ..
ಹೊರಟೆಬಿಟ್ಟಳು ಅದೇ ತಿಂಗಳು
ತಿರುಗಿಯು ನೋಡದೆ
ಕರೆದ
ಊರಿಗೆ..!!

-ಸಂತೋಷ್. ಇ 

No comments:

Post a Comment