Thursday 4 April 2013

ಮುತ್ತನ ತಪ್ಪಸ್ಸು - ಮುಂದುವರಿದ ಭಾಗ

ಮುತ್ತ ಕಾಯುತ್ತಿದ್ದ ಹಬ್ಬದ ವಾರ ಬಂದೇ ಬಿಟ್ಟಿತು. ಕುಮಾರಪ್ಪನವರ ತೋಟದಲ್ಲಿ, ಮನೆಯಲ್ಲಿ ಭರ್ಜರಿ ಕೆಲಸ. ಹಬ್ಬಕೆ ಮನೆಯೆಲ್ಲಾ ಸ್ವಚ್ಛ ಮಾಡುತ್ತಿದ್ದರೆ, ಹಾಳಾದ್ದು ಕರೆಂಟು ದಿನವೆಲ್ಲಾ ಇದ್ದು, ನೀರು ಕಟ್ಟುವುದು, ಪಾತಿ ಮಾಡುವುದು ಎಲ್ಲವೂ ನಡೆದಿತ್ತು. ಸಂಜೆ ಸುಸ್ತಾಗಿ ಮನೆಗೆ ಹೋಗುತ್ತಿದ್ದ ಮುತ್ತ ಹುಂಡಿಯನೊಮ್ಮೆ ನೋಡಿ ಮಲಗಿ ಬಿಡುತ್ತಿದ್ದ. ಆ ವಾರವೆಲ್ಲ ಅದಕ್ಕೆ ದುಡ್ಡೂ ಹಾಕಿರಲಿಲ್ಲ. ಈಗಾಗಲೇ ತುಂಬಿ ಹೋಗಿತ್ತು. ಭಾನುವಾರ ಬೀಗ ತೆಗೆದು ಖಾಲಿ ಮಾಡಿಕೊಳ್ಳುವುದೊಂದೇ ಬಾಕಿ. ಭಾನುವಾರವೆಲ್ಲಿ? ಶನಿವಾರ ರಾತ್ರಿಯಲ್ಲವೇ ಹಬ್ಬ? ಅಬ್ಬಾ.....ಮನಸ್ಸಿನ ಈ ಪರಿಯ ಸಡಗರವನ್ನು ಈಚೀನ ವರ್ಷಗಳಲ್ಲಿ ಮುತ್ತ ಸವಿದದ್ದೇ ಇಲ್ಲ. 

ಈ ನಡುವೆ ಶುಭ ಶುಕ್ರವಾರದ ಪೂಜೆ ಪ್ರಾರ್ಥನೆಯೆಲ್ಲಾ ಅಗಿತ್ತು. ಶನಿವಾರ ಕುಮಾರಪ್ಪನವರ ತೋಟದಲ್ಲಿ ಮಧ್ಯಾಹ್ನದವರೆಗೂ ಕೆಲಸ ಮಾಡಿದ್ದ ಮುತ್ತ ಮನೆಗೆ ಬಂದು ವಿಶ್ರಮಿಸಿಕೊಂಡ. ರಾತ್ರಿಯೆಲ್ಲಾ ಎದ್ದಿರಬೇಕಲ್ಲ. ಮಕ್ಕಳು ಮನೆಯಲ್ಲಿ ಸಂಭ್ರಮದಿಂದ ಇದ್ದರು. ಇಷ್ಟು ವರ್ಷಗಳ ಹಬ್ಬಗಳಲ್ಲಿ ಇಲ್ಲದ ಕೇಕೆ ನಗು ಎಲ್ಲವೂ ಕೇಳುತ್ತಿತ್ತು. ಕಾರಣ ಕೇಳಲು ಹೋಗಲಿಲ್ಲ ಮುತ್ತ. ರಾತ್ರಿಯಾಗುತ್ತಿದ್ದಂತೆ ಮನೆಯಲ್ಲಿ ಎಲ್ಲರೂ ಹಬ್ಬದ ಪೂಜೆಗೆ ಹೋಗಲು  ಅಣಿಯಾಗುತ್ತಿದ್ದರು. ತಾನೂ ಪೂಜೆಗೆ ಹೋಗಬೇಕಲ್ಲ ಎಂದುಕೊಳ್ಳುತ್ತಲೇ, ಹುಂಡಿಯನ್ನು ಹುಡುಕತೊಡಗಿತು ಮುತ್ತನ ಕಣ್ಣುಗಳು.

ಪೂಜೆಯ ಯಾವ ಭಾಗದಲ್ಲಿ ಎದ್ದು ಹೋಗಬೇಕು ಎಂದು ಅಂದಾಜು ಹಾಕುತ್ತಲೇ, ಅಷ್ಟರಲ್ಲಿ ಬಾರಿನವನು ಮುಚ್ಚಿಕೊಂಡು ಹೋದರೇ ಎಂಬ ಅನುಮಾನದ ಮುಳ್ಳು ಚುಚ್ಚಿತು. ಎಲ್ಲಾದರು ಉಂಟೇ? ಇವತ್ತು ಅವನು ಬಾರು ಬೇಗ ಮುಚ್ಚಿದ್ದರೆ, ಭಕ್ತರ ಗತಿಯೇನು? ಹಾಗೆಲ್ಲಾ ಆಗುವುದಿಲ್ಲ ಎಂದು ವಿಶ್ವಾಸ ತಂದು ಕೊಂಡ ಮುತ್ತ. ಇತ್ತ ಪೂಜೆಗೆ ಹೊರಟು ನಿಂತ ಹೆಂಡತಿ, ಹೊಸ ಶರ್ಟು, ಪಂಚೆ ತಂದುಕೊಟ್ಟು ಪೂಜೆಗೆ ಹಾಕಿಕೊಂಡು ಬನ್ನಿ ಎಂದಾಗ ಮುತ್ತನಿಗೆ ಆಶ್ಚರ್ಯವಾಯಿತು. ಆದರೆ ದೊಡ್ಡ ಸಂಭ್ರಮದ ಹೊಸ್ತಿಲ್ಲಲ್ಲಿ ಇದು ಯಾಕೋ ಅಷ್ಟು ಮುಖ್ಯವೆನಸಲಿಲ್ಲ. ಸರಿ ಎಂದವನೇ, ಅವರು ಹೊರಟ ಮೇಲೆ ತನ್ನ ಪ್ಲಾಸ್ಟಿಕ್ ಹುಂಡಿಯನ್ನು ತೆಗೆದುಕೊಂಡ. 

ಯಾಕೋ ಭಾರವಿಲ್ಲವೆನಿಸಿತು. ಈಗಿನ ನೋಟುಗಳು ಹಾಗೆ ಎಂದು ಸಮಾಧಾನ ಮಾಡಿಕೊಂಡು ಮುಚ್ಚಳ ತೆಗೆದ ಮುತ್ತ. ಒಳಗೆ  ಒಂದಷ್ಟು ಚಿಲ್ಲರೆ ನಾಣ್ಯಗಳನ್ನು ಬಿಟ್ಟರೆ ಬೇರೇನಿಲ್ಲ. ಇದೇ ಹುಂಡಿಯೇ ಎಂದು ಮತ್ತೆ ನೋಡಿಕೊಂಡ. ಅದೇ ಹುಂಡಿ. ಆದರೆ ದುಡ್ಡಿಲ್ಲ. ನೆನಪಿಸಿಕೊಂಡ ಬೇರೆಲ್ಲಾದರೂ ಇಟ್ಟೆನೇ ಎಂದು. ಉಹೂಂ ನೆನಪಿಗೆ ಬರುತ್ತಿಲ್ಲ. ತನ್ನ ಶರ್ಟು, ಪ್ಯಾಂಟೆಲ್ಲಾ ತಡಕಾಡಿದ. ಇಲ್ಲ. ಮನೆಯ ಒಂದೇ ಬೀರುವಿನಲ್ಲಿ ಹುಡುಕಾಡಿದ. ಅಲ್ಲೂ ಇರಲಿಲ್ಲ. ಯಾವುದೋ ಬಟ್ಟೆ ಅಂಗಡಿಯ ಕೆಲವು ಕವರುಗಳನ್ನು ಬಿಟ್ಟರೆ ಮನೆ, ಹಬ್ಬದ ಸಲುವಾಗಿ ಸ್ವಚ್ಛವಾಗಿತ್ತು. ಮುತ್ತನ ಹುಡುಕಾಟದಿಂದಾಗಿ ಮನೆ ಮತ್ತೆ ಹಳೆಯ ರೂಪ ಪಡೆದಿತ್ತು. 

ಯಾಕೋ ಫ್ಯಾನಿನ ಗಾಳಿ ಕಡಿಮೆಯಾದ್ದಂತೆ ಎನಿಸಿತು. ಬೆನ್ನಿನಲ್ಲಿ ಬೆವರು ಮೆಲ್ಲಗೆ ಇಳಿಯುತ್ತಿತ್ತು. ಅಡುಗೆ ಮನೆಯ ದಬ್ಬಗಳಲ್ಲಿ ಇರಲು ಸಾಧ್ಯವಿಲ್ಲದಿದ್ದರೂ ಹುಡುಕಾಡಿದ. ಇನ್ನೂರು ರುಪಾಯಿ ಬಿಟ್ಟರೆ ಮತೇನೂ ಸಿಗಲಿಲ್ಲ. ತಾನು ಹುಡುಕುತ್ತಿರುವುದು ಸಾವಿರದ ಆಸುಪಾಸಿನ ಮೊತ್ತ. ಉಹೂಂ ಸಿಗಲೊಲ್ಲದು. ಮನೆಗೆ ಬಂದವರು ಯಾರಾದರೂ ಹುಂಡಿಗೆ  ಕೈ ಹಾಕಿದರೆ?....., ಯಾರು ಬಂದಿರಬಹುದು ಎನ್ನುವುದೂ ನನಪಿಗೆ ಬರಲಿಲ್ಲ. ದೇವಸ್ಥಾನದ ಗಂಟೆ ಮೊಳಗಲು ಪ್ರಾರಂಭಿಸಿತು. ಏನು ಅನಿಸಿತೋ ಅವನಿಗೆ ಮನೆಯ ಬಾಗಿಲನ್ನೂ ಹಾಕದೇ ಓಡಲು ಪ್ರಾರಂಭಿಸಿದ ಮುತ್ತ. ಕಾಲು ದೇವಸ್ಥಾನದ ಕಡೆ ದಾಪುಗಾಲಿಟ್ಟಿತು.

ಒಂದೇ ಉಸಿರಲ್ಲಿ ಓಡಿದ ಮುತ್ತ ದೇವಾಸ್ಥಾನದ ಬಳಿ ಬರುತ್ತಿದ್ದಂತೆ ನಿಧಾನ ಮಾಡಿದ. ನಕ್ಕ ಪರಿಚಯದವರತ್ತ ಪೇಲವವಾಗಿ ನಕ್ಕ. ಕೆಲವರು ಏನೋ ಮಾತನಾಡಿಸಿದರು, ಏನೂ ಕೇಳಿಸಲಿಲ್ಲ. ಬಾಗಿಲ ಬಳಿ ಬಂದವನು ಸಾಮಾನ್ಯವಾಗಿ ಹೆಂಡತಿ ಕೂರುವ ಜಾಗದತ್ತ ನೋಡುತ್ತ ಅವಳನ್ನು ಹುಡುಕ ತೊಡಗಿದ. ಓಡಿ ಬಂದ ದಣಿವು ಇನ್ನೂ ಇತ್ತು, ಕಣ್ಣುಗಳು ಯಾಕೋ ಸರಿಯಾಗಿ ಹುಡುಕುತ್ತಿಲ್ಲ. ಹೆಂಡತಿ ಕಾಣುತ್ತಿಲ್ಲ. ಹೊಸ ಸೀರೆಗಳನ್ನು ಉಟ್ಟ ಹೆಂಗಸರು, ತಲೆಗೆ ಸೆರಗನ್ನು ಹೊದ್ದು ಕೊಂಡಿದ್ದರಿಂದ ತನ್ನ ಹೆಂಡತಿಯನ್ನು ಹುಡುಕುವುದು ಇನ್ನೂ ಕಷ್ಟವಾಯಿತು ಮುತ್ತನಿಗೆ. ಕೊನೆಗೆ ತನ್ನ ಮಗಳು ಕಂಡಳು. ಅವಳತ್ತ ಕೈ ಸನ್ನೆ ಮಾಡಿದ ಮುತ್ತ ಕೊನೆಯ ಪ್ರಯತ್ನವೆಂಬಂತೆ . ಅವಳು, ಟಾಟಾ ಎನ್ನುವಂತೆ ಸಣ್ಣಗೆ ಸನ್ನೆ ಮಾಡಿ ಕಣ್ಣು ಮುಚ್ಚಿಕೊಂಡಳು. ರೇಗಿ ಹೋಯಿತು ಮುತ್ತನಿಗೆ ಮಗಳ ಭಕ್ತಿಯ ಮೇಲೆ. ಮಗಳು ಮತ್ತೆ ಕಣ್ಣು ಬಿಡುವ ತನಕ ಕಾದ. ಅವಳು ಮೆತ್ತಗೆ ಕಣ್ಣು ಬಿಟ್ಟಳು, ಮತ್ತೊಮ್ಮೆ ಕೈ ಅಲ್ಲಾಡಿಸಿದ, ಏನು ಎಂಬಂತೆ ಕೇಳಿದಳು ಮಗಳು. ಅಮ್ಮನನ್ನು ಕರೆ ಎಂಬಂತೆ ಸನ್ನೆ ಮಾಡಿದ. ಅವಳು ಅಮ್ಮನನ್ನು ಕರೆದು ಮುತ್ತನತ್ತ ತೋರಿದಳು. ಅವಸರವಾಗಿ ಹೊರಗೆ ಕರೆದ. 

ಹೊರಗೆ ಬಂದ ಹೆಂಡತಿ "ಹೊಸ ಬಟ್ಟೆ ಹಾಕಿಕೊಳ್ಳಲಿಲ್ಲವೇ" ಎನ್ನುತ್ತಿದ್ದಂತೆ
"ಅದಿರಲಿ ಹುಂಡಿಯಲ್ಲಿ ಇದ್ದ ನನ್ನ ಕಾಸು ನೋಡ್ದಾ?" ಎಂದ ಮುತ್ತ. 
"ಯಾವ್ ಹುಂಡಿ?". ಮುತ್ತನ ಕೋಪ ತಲೆಗೆ ಹತ್ತಿತು.
"ಇನ್ಯಾವ ಹುಂಡಿ, ನನ್ನ ಪ್ಲಾಸ್ಟಿಕ್ ಹುಂಡಿ"
"ಅದನ್ನು ತೆಗೆದುಕೋ ಅಂತಾ ನೀವೆ ಹೇಳಿಲ್ವಾ? ಬಟ್ಟೆಗೆ, ಮಕ್ಕಳ ಫೀಸಿಗೆ........
ಹೆಂಡತಿ ಮಾತನಾಡುತ್ತಿದ್ದರೆ ಮುತ್ತನ ಕಾಲುಗಳು ದು:ಖದಿಂದ ನಡುಗತೊಡಗಿದವು....
"ಅವತ್ತು ಬಟ್ಟೆಗೆ, ಫೀಸ್ ಗೆ  ಕಾಸ್ ಬೇಕು, ನಿಮ್ಮ ಹುಂಡಿಯಿಂದ ಕೊಡ್ರಿ ಅಂದಿದ್ದಕ್ಕೆ ಹೂಂ ಅಂದ್ರಿ, ಅದಕ್ಕೆ ನಾನು ತೆಗ್ದು ...ಸೋಮವಾರ ಸ್ಕೂಲಿಗೆ ಹೋಗಿ.....

ಹೆಂಡತಿ ಇನ್ನೂ ಮಾತನಾಡುತ್ತಲೇ ಇದ್ದಳು, ಮುತ್ತ ಅಲ್ಲಿಂದ ಹೊರಟ, ಭಾರವಾದ ಹೆಜ್ಜೆಗಳನ್ನು
ಇಡುತ್ತಾ...ನಿಧಾವಾಗಿ ಎಲ್ಲವೂ ಅರ್ಥವಾಗತೊಡಗಿತು. ಅಂದು ಮನೆಯಲ್ಲಿ ಕೂತ್ತಿದ್ದಾಗ, ಹೆಂಡತಿ ಎಂದಿನಂತೆ ಬಟ್ಟೆ,ಫೀಸು, ಹಬ್ಬಕ್ಕೆ ಮನೆ ಸಾಮಾನುಗಳ ಬಗ್ಗೆ ಹೇಳುತ್ತಿದ್ದಾಳೆ, ದುಡ್ಡು ಕೇಳಿದ್ದಾಳೆ, ಮುತ್ತ ಏನೂ ಕೇಳಿಸಿಕೊಳ್ಳದೆ ಹೂಂ ಹೂಂ ಎಂದಿದ್ದಾನೆ. ಕೂಡಿಟ್ಟ ದುಡ್ಡೆಲ್ಲ ಮನೆಗೇನೋ ಎಂದುಕೊಂಡವಳು ಹೋಗಿ ಫೀಸು ಕಟ್ಟಿ, ಬಟ್ಟೆ, ಸಾಮನುಗಳನ್ನು ತಂದಿದ್ದಾಳೆ. ಅಷ್ಟೇ.

ದೇವಾಸ್ಥಾನದ ಬಾಗಿಲಿಗೆ ಬರುತ್ತಿದ್ದಂತೆ ಮುತ್ತ ಬೆವರ ತೊಡಗಿದ. ದೊಡ್ಡ ದೊಡ್ಡ ಕಷ್ಟಗಳನ್ನು ಬಂಡೆಯಂತೆ ಎದುರಿಸಿದವನು, ಅವಮಾನಗಳಂತೂ ನಿತ್ಯ ಸಂಗಾತಿ. ಆದರೆ 40 ದಿನದಿಂದ ಆಚರಿಸಿಕೊಂಡು ಬಂದ ತಪ್ಪಸ್ಸೆಲ್ಲಾ ಫೀಸು, ಬಟ್ಟೆ, ಮನೆ ಸಾಮಾನಿನ ಮುಂದೆ ಮಣ್ಣು ಪಾಲಾಯಿತ್ತಲ್ಲಾ ಎಂದುಕೊಳ್ಳುತ್ತಲೇ ತಲೆ ಸುತ್ತಿದಂತಾಯಿತು. ದೇವಾಲಯದ ಗಂಟೆ ಮತ್ತೆ ಮೊಳಗತೊಡಗಿದವು. ಪೂಜೆ ಇನ್ನೇನು ಪ್ರಾರಂಭವಾಗಬೇಕಿತ್ತು.ಕುಮಾರಪ್ಪನವರ ಮನೆಯ ಬಳಿ ಬರುತ್ತಿದ್ದಂತೆ ಇನ್ನೂ ತಡೆಯಲಾರದಂತೆ ಮುತ್ತ ಅಲ್ಲೇ ಕುಸಿದು ಬಿದ್ದ...

ಪೂಜೆಗೆ ಹೊರಟ ಕುಮಾರಪ್ಪನವರ ಮಾತು ಸಣ್ಣದಾಗೆ ಕೇಳುತ್ತಿತ್ತು " "ಥೂ ಆದೇನು ಹಿಂಗ್ ಕುಡಿದು ಸಾಯ್ತಿರೋ, 40 ದಿವಸ ಬಿಡೋದ್ಯಾಕೆ?  ವರ್ಷಕ್ಕೆ ಒಂದ್ ಹಬ್ಬದಲ್ಲೇ ಹೀಂಗ್ ಕುಡಿದು ಬೀಳೋದ್ಯಾಕೆ?  ಹೋದ ವರ್ಷನೂ  ಹಬ್ಬದಲ್ಲಿ ಹಿಂಗೆ ಕುಡ್ದು ಬಿದಿದ್ದ .  ಈ  ನನ್ನ್ ಮಕ್ಕಳ್ಳೆಲ್ಲಾ ಉದ್ಧಾರ ಆಗೋಲ್ಲ ...... "

ಮುತ್ತ ಹಾಗೇ ಮೆಲ್ಲನೆ ಕಣ್ಣು ಮುಚ್ಚಿಕೊಂಡ ತಾತ್ಕಾಲಿಕವಾಗಿ......

-ಪ್ರಶಾಂತ್ ಇಗ್ನೇಷಿಯಸ್

No comments:

Post a Comment