Thursday 4 April 2013

ಮುತ್ತನ ತಪ್ಪಸ್ಸು - ಸಣ್ಣ ಕಥೆ

ಕ್ರೈಸ್ತರು ಆಚರಿಸುವ ಈಸ್ಟರ್ ಹಬ್ಬದ ಮುಂಚಿನ 40  ದಿವಸಗಳನ್ನು  ತಪ್ಪಸು ಕಾಲವೆಂದು ಕರೆಯುತ್ತಾರೆ. ತ್ಯಾಗ ಹಾಗೂ ಶೋಕದ ದಿನಗಳಾದ ಈ ಸಮಯದಲ್ಲಿ ಅನೇಕ ಕ್ರೈಸ್ತರು ಹಲವಾರು ರೀತಿಯ ತ್ಯಾಗ, ಧ್ಯಾನದಲ್ಲಿ ಪಾಲ್ಗೊಳ್ಳುತ್ತಾರೆ. ಕೆಲವರು ಉಪವಾಸ ಕೈಗೊಂಡರೆ ಮತ್ತೆ ಕೆಲವರು ಮಾಂಸಹಾರವನ್ನೂ, ಕೆಲವರು ಮಧ್ಯಪಾನವನ್ನು ಬಿಡುತ್ತಾರೆ. ಈ ಹಿನ್ನಲೆಯಲ್ಲಿ ಮುತ್ತ ಎಂಬುವವನು ಆಚರಿಸಿದ ತಪ್ಪಸಿನ ಸುತ್ತ ಎಣೆದಿರುವ ಕಥೆ ಇದು.

ಸಣ್ಣ ಪುಟ್ಟ ಲೇಖನಗಳನ್ನು ಬರೆಯುವ ನನಗೆ ಕಥೆ,ಕವಿತೆ ಒಲಿದಿಲ್ಲ, ಆದರೂ ತುಂಬಾ ದಿನಗಳಿಂದ ಮನದಲ್ಲಿ ರೆಕ್ಕೆಗಟ್ಟಿ ಹಾರಾಡುತ್ತಿದ್ದ ಈ  ಸಣ್ಣ ಕಥೆಗೆ ಅಕ್ಷರ ರೂಪ ಕೊಟ್ಟಿದ್ದೇನೆ.  ಪ್ರಯತ್ನ ನನ್ನದು. ಕಮೆಂಟು, ಟೀಕೆ ಟಿಪ್ಪಣಿ ನಿಮ್ಮದು. 
-ಪ್ರಶಾಂತ್ ಇಗ್ನೇಷಿಯಸ್
--------------------------------------------------------------------------------------------------------------------

"ಥೂ ಆದೇನು ಹಿಂಗ್ ಕುಡಿದು ಸಾಯ್ತಿರೋ, ವರ್ಷಕ್ಕ್ ಒಂದ್ ಹಬ್ಬದಲ್ಲಾದ್ರೂ ಮಾನ ಮರ್ವಾದೆ ಇಂದ ಇರೋಕೆ ಆಗಲ್ವಾ, ಥೂ ನಿಮ್ಮ್ ಗಳ್ ಜನ್ಮಕ್ಕೆ"  
ಮುತ್ತ  ಪ್ಲಾಸ್ಟಿಕ್ ಡಬ್ಬಕ್ಕೆ ತನ್ನ ಕೈ ಹಾಕಿ, ಅಲ್ಲಿದ್ದ ನೋಟು ನಾಣ್ಯಗಳ ಮಧ್ಯೆ ಕೈ ಆಡಿಸುತ್ತಾ, ಹೋದ ವರ್ಷದ ಹಬ್ಬದ ದಿನ ಕುಮಾರಪ್ಪನವರು ಬಯ್ದ ಮಾತುಗಳನ್ನೇ ನೆನಸಿಕೊಳ್ಳುತ್ತಿದ್ದ. ಈಗ ನೆನಸಿಕೊಂಡರೂ ಕೋಪ ಬರುತ್ತಿತ್ತು ಅವನಿಗೆ. ಆದರೆ ಅವತ್ತು ಮಾತ್ರ ಅವನಿಗೆ ಏನೂ ಅನಿಸಿರಲಿಲ್ಲ, ಅವರು ಹೇಳಿದ ಮಾತೇನೋ ಸ್ಪಷ್ಟವಾಗಿ ಕೇಳುತ್ತಿತ್ತು ಆದರೆ ಕೋಪ ಗೀಪ ಏನೂ ಬಂದಿರಲಿಲ್ಲ.ಬಂದರೂ ಏನೂ ಮಾಡೋ ಸ್ಥಿತಿಲಿ ಇರಲಿಲ್ಲ ಅವನು. ಅಷ್ಟೊಂದು ಕುಡಿದಿದ್ದ. ಕುಡಿದ್ದಿದೇನೋ ಸರಿ, ಆದರೆ ಹೋಗಿ ಹೋಗಿ ಆ ಕುಮಾರಪ್ಪನವರ ಮನೆ ಮುಂದಿನ ಜಗುಲಿ ಮೇಲೆ ಎಚ್ಚರ ತಪ್ಪಿ ಬಿದ್ದಿದ್ದ.

ಅಂತಾ ಏಪ್ರಿಲ್ ಬಿಸಿಲಿಗೂ ಜಗ್ಗದೇ ಬಿದ್ದಿದ್ದ ಅವನನ್ನು ಎಲ್ಲರೂ ನೋಡುವವರೇ.ಕುಮಾರಪ್ಪನವರ ಮನೆ ಏನು ಊರಿನ ಮೂಲೇಲಿತ್ತೇ? ಅಲ್ಲೇ ದೇವಸ್ಥಾನದ ಬೀದಿಲೇ ಇತ್ತು. ಊರಿಗೆ ಊರೇ ಒಡಾಡೋ ಬಿದೀಲಿ ಹಾಗೆ ಕುಡಿದು ಬಿದಿದ್ದರೆ ಹೋಗೋ ಬರೋ ಜನ ನೋಡದೆ ಇರ್‍ತಾರೆಯೇ?  ಪೂಜೆ ಮುಗಿಸಿಕೊಂಡು ಹೋಗೋರು, ಅಂಗಡಿಗೆ ಬಂದು ಹೋಗೋರು, ಮಾಂಸ ತರೋಕೆ ಹೋಗೋರು, ಎಲ್ಲಾ ಮತ್ತಾಗಿದ್ದ  ಮುತ್ತನ ನೋಡೋರೇ. ಆದರೆ ಯಾರೂ ಅವನ ಮುಟ್ಟಲು, ಎತ್ತಲು ಹೋಗಲಿಲ್ಲ. ದಿನಾ ಕುಡಿಯೋರನ್ನ ಎತ್ತೋರು ಯಾರು?

ಹಬ್ಬದ ದಿನ ಮನೆ ಮುಂದೆ ಹೀಗೆ ಬಿದ್ದಿದ್ದ ಮುತ್ತನ ನೋಡಿ ರೇಗಿ ಹೋಗಿತ್ತು ಕುಮಾರಪ್ಪನಿಗೆ. ಮನೆ ತುಂಬಾ ಹಬ್ಬಕ್ಕೆ ಅಂಥಾ ಜನ ಬಂದಿರುವಾಗ ಇವನು ಹೀಗೆ ಮನೆ ಮುಂದೆ ಬಿದ್ದಿದ್ದರೆ ಯಾವನಿಗೆ ಕೋಪ ಬರೊಲ್ಲ? ಅದರಲ್ಲೂ ಅವನು ಅವರ ಮನೆ ತೋಟದ ಆಳು. ತೋಟದ ಕೆಲಸಕ್ಕೆ ಅಂಥಾನೇ ಅವನ ನೇಮಿಸಿಕೊಂಡಿದ್ದರೂ ಮುತ್ತ ಕುಮಾರಪ್ಪನವರ ಮನೆ ಕೆಲಸಗಳನ್ನು  ಸಹಾ ಮಾಡುತ್ತಿದ್ದ. ಅಂಗಡಿ ಇಂದ ಸಾಮಾನು ತರೋದು,ಮಾಂಸ, ಕೋಳಿ ಮೀನು ಕುಯ್ದು ಕ್ಲೀನ್ ಮಾಡಿಕೊಡುವುದು, ಪಕ್ಕದ ಊರಿಗೆ ಹೋಗಿ ಗ್ಯಾಸು,ಮದ್ದು,ಗಿದ್ದು ತರೋದು ಹೀಗೆ. ಈ ಕರೆಂಟ್ ಸಮಸ್ಯೆಯಿಂದ ತೋಟದ ಕೆಲಸಗಳೆಲ್ಲಾ ಅಷ್ಟರಲ್ಲೇ ಇತ್ತು. ಮುತ್ತನಿಗೂ ದಿನಾ ಎಲ್ಲಾ ತೋಟದಲ್ಲಿ ಬಿಸಿಲಲ್ಲಿ ಮೈ ಬಗ್ಗಿಸಿ ಕೆಲಸ ಮಾಡೋದಕ್ಕಿಂತ ಈ ಕೆಲಸನೇ ಹೆಚ್ಚು ಇಷ್ಟ ಆಗಿತ್ತು. ಕರೆಂಟ್ ಇಲ್ದೆ ಇರೋದು ಕುಮಾರಪ್ಪನಂಥವರಿಗೆ ಶಾಪವಾದರೆ ಮುತ್ತನಂಥವರಿಗೆ ವರವಾಗಿತ್ತು.

ಇಂಥ ಮುತ್ತಂದಿರು ಊರಲ್ಲಿ ತುಂಬಾ ಜನ ಇದ್ದರು. ಮುತ್ತನಿಗೆ ಕುಡಿಯೋ ಅಭ್ಯಾಸ ಇದೆ ಎನ್ನುವುದು ಇಡೀ ಊರಿಗೇ ಗೊತ್ತಿದ್ದರೂ, ಅವತ್ತು ಈಸ್ಟರ್ ಹಬ್ಬದ ದಿನ, ಎರಡನೇ ಪೂಜೆ ಪ್ರಸಂಗದ ಹೊತ್ತಿಗೇ ಈ ರೀತಿ ಚಿತ್ತಾಗಿ ಬಿದ್ದಿದ್ದು ನೋಡಿದವರಿಗೆ ಯಾಕೋ ಅತಿ ಅನಿಸುತ್ತಿತ್ತು. ಮನೆ ತುಂಬಾ ನೆಂಟರು ಇದ್ದು ಕೆಲಸ ಇರುವಾಗ ಹೀಗೆ, ಬಿದ್ದಿದ್ದರೆ ಕೋಪ ಮಾಡಿಕೊಳ್ಳದೆ ಇರುವುದಕ್ಕೆ ಕುಮಾರಪ್ಪನವರೇನು ಸಂತರೇ?. ನೆಂಟರು, ಬೀದಿ ಜನ ಅಂತನೂ ನೋಡದೆ ಸರಿಯಾದ ಬಯ್ಗಳಗಳನ್ನು ಬಿಡ್ತಿದ್ದರು ಕುಮಾರಪ್ಪ. ಗಂಟಲು ಪೂರ್ತಿ ಕುಡಿದಿದ್ದವನಿಗೆ ಅದೆಲ್ಲಾ ಏನೂ ಕೇಳಿಸಲಿಲ್ಲ , ಕೊನೆಗೆ ಮಾತ್ರ "ಥೂ ಅದೇನು ಹೀಂಗ್........ " ಅಂತ ಅವರು ಬಯ್ಯುತ್ತಿದ್ದರೆ, ಸುತ್ತ ಸೇರಿದ್ದ ಮಕ್ಕಳೆಲ್ಲಾ ಮುಸಿ ಮುಸಿ ನಗುತಿದ್ದದ್ದು ಮಾತ್ರ ಅವನಿಗೆ ಗೊತ್ತಾಗಿತ್ತು. ಅದರಲ್ಲಿ ತನ್ನ ಮಕ್ಕಳೇನಾದರೂ ಇದ್ದಾರೆಯೇ ಎಂದು ನೋಡಿದ ಮುತ್ತ, ಉಹಂ.. ಏಪ್ರಿಲ್ ತಿಂಗಳ ಮುಂಜಾನೆಯ ಸೂರ್ಯ ಕಣ್ಣಲ್ಲೇ ಬಂದು ಕೂತ್ತಿದ್ದ. ಹಾಗೇ ಮೆಲ್ಲನೆ ಕಣ್ಣು ಮುಚ್ಚಿಕೊಂಡ ತಾತ್ಕಾಲಿಕವಾಗಿ.......

ಈಗ ಅದೆಲ್ಲಾ ನೆನಪು ಮಾಡಿಕೊಳ್ಳುತ್ತಾ ಮತ್ತೆ ಆ ಪ್ಲಾಸ್ಟಿಕ್ ಹುಂಡಿಯಲ್ಲಿ ಕೈ ಹಾಕಿದ ಮುತ್ತ.ತನ್ನ ಹೆಂಚಿನ ಮನೆಯ ನೆತ್ತಿಯ ಮೇಲಿನ ಫ್ಯಾನು ಬಿಸಿ ಗಾಳಿಯನ್ನೇ ಬೀಸುತ್ತಿದ್ದರೂ ಹುಂಡಿಯೊಳಗಿನ ಕಾಸು ಮಾತ್ರ ಕೈಗೆ ತಣ್ಣಗೆ ತಾಕುತ್ತಿತ್ತು. ಸುಮಾರು 35 ದಿನಗಳಿಂದ ಕೂಡಿಟ್ಟ ದುಡ್ಡು ಎಷ್ಟಾಗಿದೆ ಎಂದು ಎಣಿಸಲು ಹೋಗಿರಲಿಲ್ಲ ಅವನು. ಬರುವ ವಾರ ಅದನ್ನು ಒಟ್ಟಿಗೆ ತೆಗೆಯುವಾಗ ಎಷ್ಟಾಗಿರಬಹುದು ಎಂದು ಅಂದಾಜು ಹಾಕಿತು ಮನಸ್ಸು. ಆ ಅಂದಾಜಿಗೇ ತುಟಿಯ ಮೇಲೆ ಸಣ್ಣ ಮುಗಳ್ನಗೆಯೊಂದು ಸುಳಿದ್ದಾಡುತ್ತಿದ್ದಂತೆಯೇ, ಅಡುಗೆ ಮನೆಯಿಂದ ಹೆಂಡತಿ ಕರೆದ ಸದ್ದಾಯಿತು. ತುಟಿಯಿಂದ ನಗೆ ಮರೆಯಾಗಿ, ಕೈ ಬೆದರಿದಂತೆ ಹುಂಡಿಯಿಂದ ಹೊರ ಬಂತು.

ಅವನು ಹಾಗೆ ಸುಮ್ಮನೆ ಕುಳಿತಾಗಲೆಲ್ಲಾ ಹೆಂಡತಿ ಅಡುಗೆ ಮನೆಯಿಂದಲೇ ಕೂಗುವುದು,ಮನೆಯ ಕಷ್ಟ ಹೇಳಿಕೊಳ್ಳುವುದು, ಮಕ್ಕಳ ಶಾಲೆ ಫೀಸು, ಹೊಸ ಬಟ್ಟೆಯ ಬಗ್ಗೆ ಗೋಳಿಡಿವುದು , ಅವನು ಅದನ್ನು ಕಿವಿಗೂ ಹಾಕಿಕೊಳ್ಳದಿರುವುದು, ಆಗ ಅವಳು ಅಳುವುದು ಇದೆಲ್ಲಾ ಮುತ್ತನ ದಿನಚರಿಯ ಭಾಗವಾಗಿತ್ತು. ಇನ್ನು, ಇಷ್ಟೆಲ್ಲಾ ಆದ ಮೇಲೆ ಸುಮ್ಮನಿರಲು ಸಾಧ್ಯವೇ? ಎದ್ದು ನೇರವಾಗಿ ಊರಿನ ಒಂದೇ ಬಾರಿನಲ್ಲಿ ಕೂತು ಕುಡಿಯುವುದು, ಕುಡಿದದ್ದು  ಜಾಸ್ತಿ ಆದಾಗ ಅಲ್ಲೇ ಬಾರಿನ ಜಗಲಿಯಲ್ಲೋ ರಸ್ತೆ ಬದಿಯಲ್ಲೋ ದಣಿ(?)ವಾರಿಸಿಕೊಂಡು ಮನೆಗೆ ಬರುತ್ತಿದ್ದದ್ದು, ಆ ದಿನಚರಿಯ ಮುಂದಿನ ಭಾಗ. ಒಮ್ಮೊಮ್ಮೆ ಇನ್ನೂ ಜಾಸ್ತಿಯಾದಗ ಮಕ್ಕಳು ಬಂದು ಮನೆಗೆ ಕರೆದುಕೊಂಡು ಹೋಗುತ್ತಿದ್ದದ್ದು ಬೆಳಿಗ್ಗೆ ಎದ್ದಾಗ ನೆನಪಿಗೆ ಬರುತಿತ್ತು. ಮುತ್ತಿನಂಥ ಮಕ್ಕಳು ಎಂದು ಕೊಳ್ಳುತ್ತಿದ್ದ ಮುತ್ತ.

ಇಂಥಾ ಮುತ್ತ ಈ ವರ್ಷದ ತಪ್ಪಸ್ಸು ಕಾಲವನ್ನು ಬೇರೆಯದೇ ರೀತಿಯಲ್ಲಿ ಆಚರಿಸಿಕೊಳ್ಳಲು ನಿರ್ಧಾರ ಮಾಡಿದ್ದ. ಮುತ್ತನ ಅನೇಕ ಗೆಳೆಯರು ಈಸ್ಟರ್ ಹಬ್ಬದ ಹಿಂದಿನ ಆ 40 ದಿನಗಳ ತಪ್ಪಸ್ಸು ಕಾಲದಲ್ಲಿ ಮಾಂಸವನ್ನೋ, ಕುಡಿಯುವುದನ್ನು ಬಿಡುತ್ತಿದ್ದರು. ಬಿಡುವುದೇನೋ ಬಿಡುತ್ತಿದ್ದರು, ಆದರೆ ಕಾದುಕೊಂಡಿದ್ದು, ಬಿಟ್ಟಿದ್ದ ಅಷ್ಟೂ ದಿನದ ಒಟ್ಟು ಮೊತ್ತವನ್ನು ಹಬ್ಬದ ದಿನ ಜಮಾ ಮಾಡಿಕೊಳ್ಳುತ್ತಿದ್ದರು. ಆದರೆ ಮುತ್ತ ಮಾತ್ರ ಇದುವರೆಗಿನ ಯಾವ ತಪ್ಪಸ್ಸು ಕಾಲದಲ್ಲೂ ಈ ರೀತಿ ತ್ಯಾಗ ಮಾಡುವ ಮನಸ್ಸು ಮಾಡಿರಲಿಲ್ಲ. ಹಾಗೇ ಬಿಡುವುದೇಕೆ, ತಪ್ಪಸ್ಸು ಕಾಲ ಮುಗಿದ ಮರುದಿನವೇ ಎಲ್ಲವನ್ನೂ ಸೇರಿ ಕುಡಿಯುವುದೇಕೆ ಎಂಬ ಅವನ ಪ್ರಶ್ನೆಗೆ ಗೆಳೆಯರಲ್ಲಿ ಉತ್ತರವಿರಲಿಲ್ಲ.

ಆದರೆ ಉತ್ತರವಿಲ್ಲದಿರುವುದು ಮುತ್ತ ಬಿಡದಿರುವುದಕ್ಕೆ ಕಾರಣವಾಗಿರಲಿಲ್ಲ. ಒಂದು ದಿನ ಕುಡಿಯದೆ ಇರುವುದು ಅವನಿಗೆ ಉಹಿಸಲೂ ಸಾಧ್ಯವಿರಲಿಲ್ಲ. ಹಾಗೆಂದ ಮಾತ್ರಕ್ಕೆ ಅವನು ದಿನವೂ ತುಂಬಾ ಏನೂ ಕುಡಿಯುತ್ತಿರಲಿಲ್ಲ, ವಾರಕ್ಕೆ ಎರಡೋ ಮೂರೋ ಬಾರಿ ಜಾಸ್ತಿ ಆಗುತ್ತಿತ್ತು ಅಷ್ಟೆ. ಆದರೆ ಈ ವರ್ಷ ಮಾತ್ರ ತಪ್ಪಸ್ಸು ಕಾಲದಲ್ಲಿ ಕುಡಿತ ಬಿಡಲು ನಿರ್ಧರಿಸಿದ್ದ ಮುತ್ತ. ಅದಕ್ಕೆ ತ್ಯಾಗ ಭಕ್ತಿ ಏನೂ ಕಾರಣವಾಗಿರಲಿಲ್ಲ, ಅದೆಲ್ಲವೂ ಮನಸ್ಸಿನಲ್ಲಿ ಇರಬೇಕು ಎಂದು ಹೇಳುತ್ತಿದ್ದನಾದರೂ, ಮನಸ್ಸಿನಲ್ಲೂ ಅದು ಸ್ವಲ್ಪ ಕಡಿಮೆಯೇ ಆಗಿತ್ತು.

ಹೋದ ವರ್ಷ ಕುಮಾರಪ್ಪನವರ ಮನೆ ಮುಂದೆ ಅರೆ ಪ್ರಜ್ಞೆಯಲ್ಲಿ ಬಿದ್ದದ್ದರಿಂದ ಅವನಿಗೆ ಅವಮಾನವೇನೂ ಆಗಿರಲ್ಲಿಲ್ಲ, ಆದರೆ ಅಂದು ಕುಡಿದ ಸರಕಿನ ಮೇಲೆ ಅವನಿಗೆ ಕೋಪ ಬಂದಿತ್ತು. ಹಬ್ಬ ಎಂದು ಸ್ವಲ್ಪ ಹೆಚ್ಚಾಗಿಯೇ ಕುಡಿಯಲು ಹೋದ ತನ್ನ ಬಳಿ ಅಂದು ಅಷ್ಟು ಕಾಸಿಲ್ಲದಿದ್ದ ಕಾರಣ ಕಡಿಮೆ ದರ್ಜೆಯ ಸರಕ್ಕನ್ನು ಕುಡಿದದ್ದು ಅವನಿಗೆ ನೆನಪಿಗೆ ಬಂದಿತು. ಅದರಿಂದಲೇ ಅಲ್ಲವೇ ಅಷ್ಟೆಲ್ಲಾ ರಾದ್ಧಾಂತವಾಗಿದ್ದು ಎಂದು ನಿರ್ಧರಿಸಿದವನೇ ಈ ಸಲ ಹಬ್ಬಕ್ಕೆ ತನ್ನ ಊರಿನ ಬಾರಿನಲ್ಲಿ ಸಿಗುವ ಅತಿ ಹೆಚ್ಚು ಬೆಲೆಯ ಬಾಟಲನ್ನೇ ತೆಗೆದುಕೊಳ್ಳಲು ನಿರ್ಧರಿಸಿದ್ದ.ಹಾಗೇ ಮಾಡಲು ಹಣ ಬೇಕಲ್ಲ? ಹೇಗೂ ತಪ್ಪಸ್ಸು ಕಾಲ, ಅಷ್ಟು ದಿನ ಬಿಟ್ಟು, ಬಿಟ್ಟಾಗಿನ ಹಣವನ್ನೆಲ್ಲಾ ಕೂಡಿಸಿ ಆ ಹಣದಿಂದ ಹಬ್ಬದ ದಿನ ದಿವಿನಾಗಿ ಹಬ್ಬ ಮಾಡುವುದು ಅವನ ಮಾಸ್ಟರ್ ಪ್ಲಾನ್ ಆಗಿತ್ತು. ನೀಲಿ ಬಣ್ಣದ ಸ್ಟಿಕ್ಕರ್ ಸುತ್ತಿದ್ದ ಬಾಟಲೊಂದು ಅವನನ್ನು ಯಾವಗಲೂ ಕರೆಯುತ್ತಿತ್ತು. ನಮಂಥ ಬಡವರಿಗಲ್ಲ ಅದೂ ಎಂದುಕೊಳ್ಳುತ್ತಲೇ ಅದರ ಅಹ್ವಾನವನ್ನು ಮುತ್ತ ನಯವಾಗಿ ತಿರಸ್ಕರಿಸುತ್ತಲೇ ಬಂದಿದ್ದ. ಈ ವರ್ಷ ಅದರ ಅಹ್ವಾನಕ್ಕೆ ಮಣೆ ನೀಡಲು ಮಹೂರ್ತ ಬಂದಿದೆ ಎಂದೆನಿಸಿತು ಮುತ್ತನಿಗೆ.

ಅಸಲಿಗೆ ಆ ಬಾಟಲ್ ಗಾಗಿ ಮುತ್ತ 40 ದಿನ ಕುಡಿತ ಬಿಡಬೇಕಾಗಿರಲಿಲ್ಲ. ಅದು ಅಷ್ಟು ದುಬಾರಿ ಏನಿರಲಿಲ್ಲ. ಅದರೂ ಆ ಬಾಟಲಿನ ವಿನ್ಯಾಸ, ಅದರ ವಯ್ಯಾರ, ಒನಪು ಹಾಗೂ ಮೇಲಿನ ಪದರಗಳೆಲ್ಲಾ ಮುತ್ತನ ಲೆಕ್ಕಚಾರಕ್ಕೆ ಅಡ್ಡ ಮಾಡಿತ್ತು. ಒಟ್ಟಿನಲ್ಲಿ 40 ದಿನಗಳ ಕಾಲ ಕುಡಿಯುವುದು ಬಿಟ್ಟು, ಹಬ್ಬದ ದಿನ ಆ ದುಬಾರಿ ಬಾಟಲ್ ಅನ್ನು ತೆಕ್ಕೆಗೆ ಹಾಕಿಕೊಂಡು, ಕುಮಾರಪ್ಪನವರ ಮನೆ ಮುಂದೆ ಬೀಳದಿರುವುದು ಅವನ ಕಾರ್ಯತಂತ್ರವಾಗಿತ್ತು. ಹೀಗೆ ಅವನ ತಪ್ಪಸ್ಸು ಕಾಲ ಯಶಸ್ವಿಯಾಗೇ ನಡೆದುಕೊಂಡು ಬಂತು.

ಬೇರೆ ಸಮಯದಲ್ಲಿ ಕೆಲವೊಮ್ಮೆ ಬೆಳಿಗ್ಗೆಯೇ ರಂಗಾಗುತ್ತಿದ್ದ ಮುತ್ತ ಸಂಜೆಯಾದರೂ ನೆಟ್ಟಗೇ ನಡೆಯುತ್ತಿದ್ದನ್ನು ನೋಡಿದ ಜನ ಬಾಯಿಯ ಮೇಲೆ ಕೈ ಇಟ್ಟುಕೊಂಡರು. ಬಾರಿನಲ್ಲಿನ ಇವನ ಇತರ ಗೆಳೆಯರು ಇವನನ್ನು ಕಂಡು ಲೊಚ್ಚಗುಟ್ಟಿದ್ದರು. ತಪಸ್ಸು ಕಾಲದಲ್ಲಿ  ಕುಡಿತ ಬಿಟ್ಟಿದ್ದ ಇವನ  ಇತರ ಗೆಳೆಯರ ಮುಖದಲ್ಲಿ ತೃಪ್ತಿಯ ಭಾವ. ತಮ್ಮಿಂದ ಇನ್ನೊಬ್ಬ ತಾತ್ಕಾಲಿಕವಾಗಿಯಾದರೂ ಉದ್ಧಾರ ಆದ ಎಂಬಂತೆ. 

ಮನೆಯಲ್ಲೂ ಸಂತೋಷ ಮನೆ ಮಾಡಿತು. ಅಪ್ಪ ಮನೆಗೆ ಬೇಗ ಬರುತ್ತಿದ್ದದ್ದು ಮಾತ್ರವಲ್ಲದೆ, ಯಾರನ್ನೂ ಬಯ್ಯದೇ ತಮ್ಮ ಪಾಡಿಗೆ ತಮ್ಮದೇ ಲೋಕದಲ್ಲಿ ಇದ್ದದ್ದನು ಕಂಡು ಮಕ್ಕಳು ಪರೀಕ್ಷೆಗೆ ಓದತೊಡಗಿದರು. ಮದುವೆ ಆದಗಿನಿಂದಲೂ ನಿತ್ಯವೂ ತಪ್ಪಸ್ಸು ಕಾಲವೇ ಎಂಬತಾಗಿದ್ದ ಹೆಂಡತಿಯ ಮುಖದಲ್ಲಂತೂ ಹಬ್ಬದ ಸಡಗರ. ಮುತ್ತನದು ಮಾತ್ರ ಬೇರೆಯದೇ ಸಂತೋಷ. ಸಾಮಾನ್ಯ ಸಂತೋಷವನ್ನು ಮೀರಿದ ಹೊಸ ನಿರೀಕ್ಷೆಯ, ಭರವಸೆಯ ಆನಂತ ಆನಂದ ಭಾವ ಅವನ ಮುಖದಲ್ಲಿ ಎದ್ದು ಕಾಣುತ್ತಿತ್ತು. ಹುಂಡಿಯಲ್ಲಿ ಕೈ ಹುದುಗಿಸಿದಾಗಲಂತೂ ಅವನ ಕಣ್ಣುಗಳು ಪ್ರಕಾಶಮಾನವಾಗಿ ಬೆಳಗಿ ಅದು ನಗೆಯ ರೂಪದಲ್ಲಿ ತುಟಿಯ ಮೇಲೆ ಸರಿದಾಡುತ್ತಿತು.ಅದನ್ನು ಹೋಗಲಾಡಿಸುವ ಶಕ್ತಿ ಯಾರಿಗೂ, ಯಾವುದಕ್ಕೂ ಇರಲಿಲ್ಲ.

ಅಡುಗೆ ಮನೆಯಿಂದ "ರೀ" ಎಂಬ ಶಬ್ದವೊಂದಕ್ಕೆ ಬಿಟ್ಟು. ಅಂದೂ ಹಾಗೇ ಆಯಿತು. ಹೆಂಡತಿಯ "ರೀ" ಶಬ್ದಕ್ಕೆ ಹೂಂಗುಟ್ಟಿದ್ದ  ಮುತ್ತ. ಮುಂದೆ ಹೆಂಡತಿ ಏನೋ ಹೇಳುತ್ತಿದ್ದಳು. ಹುಂಡಿಯಲ್ಲಿನ ಹಣದ ಬಗ್ಗೆ ಕೇಳುತ್ತಿದ್ದಳು. ಮಕ್ಕಳ ಫೀಸ್ ಬಗ್ಗೆಯೂ ಏನೋ ಹೇಳಿದಂತಾಯಿತು. ಹೂಂ ಅಂದ ಮುತ್ತ.  ಹುಂಡಿಯ ಹಣದ ಬಗ್ಗೆ ಕೇಳಿದ್ದೇ ಮುತ್ತಾ ಬೇರೆಯದೇ ಪ್ರಪಂಚಕ್ಕೆ ಹೊರಳಿದ್ದ. ಹುಂಡಿಯಲ್ಲಿ ಇದ್ದ ಎಲ್ಲವನ್ನೂ ಎಣಿಸಿದಂತೆ, ಬೊಗಸೆಯಲ್ಲಿ ತುಂಬಿಕೊಂಡಂತೆ, ಬಾರಿನ ಕಡೆ ಹೊರಟಂತೆ, ಕೈ ಬೀಸಿ ಕರೆಯುತ್ತಿದ್ದ ನೀಲಿ ಬಾಟಲಿಗೆ ಬಂದೆ ಎಂದು ತಲೆ ಅಲ್ಲಾಡಿಸಿದಂತೆ....ಇತ್ತ ಹೆಂಡತಿ ಹೇಳಿದಕ್ಕೆಲ್ಲಾ ಹೂ ಹೂ ಎನ್ನುತ್ತಿದ್ದ ಮುತ್ತ.





ಮುಂದುವರಿದಿದೆ..... ಮುಂದೇನು ಮಾಡಿದ ಮುತ್ತ???


No comments:

Post a Comment