Saturday 29 December 2018

ನೀವೂ ನೋಡಿ - ಜೊಯ್ ನೋಯೆಲ್ - ಭಾಗ 2

ಈ ಹಿನ್ನೆಲೆಯಲ್ಲಿ ಡಿಸೆಂಬರ್ 24ರ ರಾತ್ರಿ ಆದ ಘಟನೆಯನ್ನು ಆಧರಿಸಿ ನಿರ್ಮಾಣಗೊಂಡ ಚಿತ್ರವಿದು. ಈ ಚಿತ್ರದಲ್ಲಿ ಯುದ್ಧಭೂಮಿಯಲ್ಲಿ ಸೇವೆ ಸಲ್ಲಿಸಿದ 6 ಪ್ರಮುಖ ಪಾತ್ರಧಾರಿಗಳ ಭೂಮಿಕೆಯಲ್ಲಿ ಚಿತ್ರಿಸಲಾಗಿದೆ. ಲೆಫ್ಟಿನೆಂಟ್ ಗಾರ್ಡನ್, ಲೆಫ್ಟಿನೆಂಟ್ ಆಡಿಬೋರ್ಡ್, ಲೆಫ್ಟಿನೆಂಟ್ ಹಾರ್ಸ್ ಮೇಯರ್ ಹಾಗೂ ಅವರನ್ನು ರಂಜಿಸಲು ಬಂದ ಜರ್ಮನಿಯ ಇಬ್ಬರು ಪ್ರಖ್ಯಾತ ಸಂಗೀತಗಾರರಾದ ಸ್ಪ್ರಿಂಕ್ ಹಾಗೂ ಆತನ ಪ್ರೇಯಸಿ ಆನರವರ ಪಾತ್ರವೇ ಇಲ್ಲಿ ಪ್ರಮುಖ ಭೂಮಿಕೆ.

ಕ್ರಿಸ್ಮಸ್ ಸಮಯದಲ್ಲಿ ಸೈನಿಕ ಪಡೆಗೆ ತಮ್ಮ ಗಾಯನದ ಮೂಲಕ  ಹಾರೈಸುವುದು ಸ್ಪ್ರಿಂಕ್ ಹಾಗೂ ಆನಾರ ಉದ್ದೇಶ. ಈ ಉದ್ದೇಶದಿಂದ ಬಂದ ಸ್ಪ್ರಿಂಕ್ ಕ್ರಿಸ್ಮಸ್ನ ಹಿಂದಿನ ದಿನ ಅಂದರೆ ಕ್ರಿಸ್ಮಸ್ ಈವ್ನಂದು ಯುದ್ಧ ಭೂಮಿಗೆ ಬರುತ್ತಾರೆ.  ಆ ಸಮಯದಲ್ಲಿ ಸ್ಪ್ರಿಂಕ್  ಕ್ರಿಸ್ಮಸ್‍ನ ಪ್ರಸಿದ್ಧ ಗೀತೆಯಾದ ’ಸೈಲೆಂಟ್ ನೈಟ್’ ಹಾಡಲು ತೊಡಗುತ್ತಾನೆ.
ಇದು ಜರ್ಮನಿಯ ಶಿಬಿರದಲ್ಲಿ ಮಾತ್ರವಲ್ಲದೆ ವಿರೊಧೀ ಪಡೆಗಳ ಶಿಬಿರದಲ್ಲೂ ಒಂದು ರೀತಿಯ ಸಂಚಲನವನ್ನು ಉಂಟು ಮಾಡುತ್ತದೆ. ಕೇವಲ ಮದ್ದು ಗುಂಡುಗಳ ವಾಸನೆ, ಆಕ್ರಂದನ ಬೇಸರದ ಗೂಡಾಗಿದ್ದ ಕಂದಕದಿಂದ ಕ್ರಿಸ್‍ಮಸ್ ಸಂದೇಶ ಹೊರ ಹೊಮ್ಮುತ್ತದೆ.

ಜರ್ಮನ್ ಸೈನಿಕರು ಸಹಾ ಪುಟ್ಟ ಪುಟ್ಟ ಕ್ರಿಸ್ಮಸ್ ಟ್ರೀ ಗಳನ್ನು ಮಾಡಿ ಅದನ್ನು ಕಂದಕದ ಮೇಲಿನ ಯುದ್ಧಭೂಮಿಯ ನೆಲದ ಮೇಲೆ ಇಡಲು ಪ್ರಾರಂಭಿಸುತ್ತಾರೆ. ಸಣ್ಣದಾಗಿ ಕ್ರಿಸ್ಮಸ್‍ನ ವಾತಾವರಣ ಅಲ್ಲಿ ಸೃಷ್ಟಿಯಾಗುತ್ತದೆ. ಇದನ್ನು ನೋಡಿ ಏನು ಮಾಡುವುದೆಂದು ತಿಳಿಯದೇ ಫ್ರೆಂಚ್  ಮಿತ್ರ ಪಡೆಗಳ ಶಿಬಿರದಲ್ಲಿ ಒಂದು ರೀತಿಯ ಗೊಂದಲ ಆವರಿಸುತ್ತದೆ. ಆದರೆ ಅವರ ಮನದಲ್ಲೂ ಸಹಾ ಕ್ರಿಸಮಸ್‍ನ ಸುಂದರ ಭಾವಗಳು ಚಿಗುರುತ್ತವೆ.

ಇತ್ತ ಸ್ಪ್ರಿಂಕ್ ತನ್ನ ’ಸೈಲೆಂಟ್ ನೈಟಿನ’ ಹಾಡನ್ನು ಮುಂದುವರಿಸುತ್ತಾನೆ. ವಿರೋಧಿ ಪಾಳಯದಲ್ಲಿನ ಸ್ಕಾಟ್ ಸೈನಿಕರಲ್ಲಿ ಒಬ್ಬ ತನ್ನ ಬಳಿಯಿದ್ದ ಬ್ಯಾಗ್ ಪೈಪರ್ ವಾದನದಿಂದ   ಸಣ್ಣದಾಗಿ ನುಡಿಸಲು ಪ್ರಾರಂಭಿಸುತ್ತಾನೆ. ಹಾಡಿಗೆ ಬ್ಯಾಗ ಪೈಪರ್ ವಾದನ ದನಿಗೂಡಿಸುತ್ತದೆ. ಆ ಸ್ಪೂರ್ತಿ, ಉತ್ತೇಜನ ಇಡೀ  ಸೈನಿಕ ಪಡೆಗೆ ಹರಡುತ್ತದೆ.
ಎರಡೂ ಕಡೆಯ ಪಡೆಯ ಸೈನಿಕರಲ್ಲಿ ಒಂದು ರೀತಿಯ ರೋಮಾಂಚನ ಉಂಟಾಗುತ್ತದೆ.  ಹೊತ್ತಿನಲ್ಲಿ ಒಂದು ಅನಿರೀಕ್ಷಿತವಾದ  ಘಟಯುತ್ತದೆ. ಸ್ಪ್ರಿಂಕ್ ಹಾಡುತ್ತಾ ಹಾಡುತ್ತಾ  ಕಂದಕದಿಂದ  ಮೆಲ್ಲಗೆ ಮೆಟ್ಟಿಲುಗಳನ್ನು ಹತ್ತುತ್ತಾ ಯುದ್ಧ ಭೂಮಿಯ ನೆಲದ ಮೇಲೆ ನಿಂತು ಹಾಡಲು ಪ್ರಾರಂಭಿಸುತ್ತಾನೆ.

ಜರ್ಮನಿಯ ಪಡೆಯ ಲೆಫ್ಟಿನೆಂಟ್ ಇದನ್ನು ವಿರೋಧಿಸಿದರೂ ಗಮನಕೊಡದೆ  ಆತ   ವಿರೋಧಿ ಪಡೆಯುತ್ತ ಹೆಜ್ಜೆ ಹಾಕುತ್ತಾನೆ. ಇತ್ತ ಗನ್ನುಗಳನ್ನು ಇಟ್ಟುಕೊಂಡು ನೋಡುತ್ತಿದ್ದ ಮಿತ್ರ ಪಡೆಯ ಸೈನಿಕರು ಏನೂ ಮಾಡಲು ತೋಚದೆ ನಿಲ್ಲುತ್ತಾರೆ.ಹಾಡು ಮುಂದುವರಿಯುತ್ತಿದ್ದಂತೆಯೇ ಮದ್ದು ಗುಂಡುಗಳು ನೆಲಕ್ಕೆ ಉರುಳಿ ಮಾನವ ಹೃದಯಗಳು ಸೈನಿಕರ ರೂಪದಲ್ಲಿ ಕಂದಕದಿಂದ ಮೇಲೆ ಬಂದು ಯುದ್ಧ ಭೂಮಿಯ ನೆತ್ತರಿನ ನಡುವೆ ಸ್ನೇಹದ ಹಸ್ತವನ್ನು ಚಾಚುತ್ತದೆ. ಸ್ಪ್ರಿಂಕ್ ತನ್ನ ಗಾಯನವನ್ನು ಮುಗಿಸಿದ್ದೇ ತಡ ವಿರೋಧಿ  ಪಾಳಯದಿಂದ ಚಪ್ಪಾಳೆ ಹಾಗೂ ಕೇಕೆಯ ರೂಪದಲ್ಲಿ ಅಭಿನಂದನೆಯ ಮಹಾಪೂರ ಹರಿದು ಬರುತ್ತದೆ.

ಅಲ್ಲಿಗೆ ಒಬ್ಬೊಬ್ಬರೇ ಸೈನಿಕರು ಎರಡು ಪಡೆಗಳ ನಡುವಿನ ಯಾರಿಗೂ ಸೇರದ ’ನೋ ಮ್ಯಾನ್ ಲ್ಯಾಂಡಿ’ನ ಕಡೆ ಹೆಜ್ಜೆ ಹಾಕುತ್ತಾರೆ ಅಲ್ಲಿಗೆ ಕ್ರಿಸ್ಮಸ್‍ನ ಶಾಂತಿ ಪ್ರೀತಿಯ ಸಂದೇಶ ಭೀಕರ ಯುದ್ಧಭೂಮಿಯಲ್ಲಿ ತನ್ನದೇ ಆದ ರೀತಿಯಲ್ಲಿ ಸಾಕಾರಗೊಳ್ಳುತ್ತದೆ.
ಮುಂದೆ ಏನಾಗುತ್ತದೆ ಎನ್ನುವುದನ್ನು ಚಿತ್ರವನ್ನು ನೋಡಿಯೇ ಸವಿಯಬೇಕು. ಮನೋಜ್ಞವಾಗಿ ಮೂಡಿಬಂದಿರುವ ಚಿತ್ರ ಯುದ್ಧದ ಭೀಕರತೆಯನ್ನು ಮಾನವನ ಅಂತರಾಳದಲ್ಲಿ ಶಾಂತಿಯ ಹಾತೊರೆಯುವಿಕೆ,  ಗುಂಪಿನಲ್ಲಿದ್ದರೂ ಕಾಡುವ ಏಕಾಂಗಿತನ, ಪ್ರೀತಿಗಾಗಿಯ ಹಂಬಲವನ್ನು ತೆರೆಯ ಮೇಲೆ ತೆರೆದಿರುತ್ತದೆ.

ಅಂತೆಯೇ ನಾಯಕರುಗಳ ಸ್ವಾರ್ಥದಲ್ಲಿ ಬಲಿಪಶುವಾಗುವ ಸಾಮಾನ್ಯ ಜನರ ತಲ್ಲಣ, 
ಸೈನಿಕರ ನೋವು, ಅವರ ಕುಟುಂಬದವರ ಕಾತುರ, ಕೊನೆಗೆ ಜಗತ್ತಿನ ಎಲ್ಲಾ ಜನರ ಬಗೆಗಿನ ಕಾಳಜಿ ಅನುಕಂಪವನ್ನು ಚಿತ್ರ ನಿಧಾನವಾಗಿ ತೆರೆದಿರುತ್ತದೆ. ಆದ್ದರಿಂದಲೇ ಚಿತ್ರ ನೋಡಲೇಬೇಕಾದ ಚಿತ್ರಗಳ ಸಾಲಿನಲ್ಲಿ ಖಂಡಿತವಾಗಿಯೂ ನಿಲ್ಲುತ್ತದೆ. ಅದರಲ್ಲೂ  ಕ್ರಿಸ್ಮಸ್ ಸಮಯದಲ್ಲಿ ಚಿತ್ರ ಮತ್ತಷ್ಟು ಆಪ್ತವಾಗುತ್ತದೆ

No comments:

Post a Comment