Sunday 13 January 2019

ಸಾಧ್ಯತೆಗಳು


ಯಾತ್ರಿಕನೊಬ್ಬ ಹಳ್ಳಿಯೊಂದಕ್ಕೆ ಬಂದ. ಹಾಗೇ ಬಂದದ್ದೇ ಮನೆಯೊಂದರ ಮುಂದೆ ಹೋಗಿ ತಿನ್ನಲು ಏನಾದರೂ ಇದೆಯೇ” ಎಂದು ಕೇಳುತ್ತಾನೆ. ಮನೆಯ ಒಡತಿ ತಿನ್ನಲು ಏನೂ ಇಲ್ಲ” ಎನ್ನುತ್ತಾಳೆ. ಹೀಗೆ ಒಂದೆರಡು ಮನೆಗಳ ಮುಂದೆ ಹೋಗಿ ಕೇಳಿದಾಗಲೂ ಇದೇ ರೀತಿಯ ಉತ್ತರ ಬರುತ್ತದೆ. ಆಗ ಯಾತ್ರಿಕನು ನಿಮ್ಮಲ್ಲಿ ಯಾರನ್ನಾದರೂ ಕೇಳಿ ಸ್ವಲ್ಪ ಊಟ ಕೊಡಲು ಸಾಧ್ಯವೇ?” ಎಂದು ಕೇಳುತ್ತಾನೆ. ಅದಕ್ಕೆ ಮನೆಯ ಒಡತಿ” ನಾವು ಒಬ್ಬರಿಗೊಬ್ಬರು ಅಷ್ಟಾಗಿ ಮಾತನಾಡುವುದಿಲ್ಲ ಒಟ್ಟಾಗಿ ಸೇರುವುದಿಲ್ಲ ಆದ್ದರಿಂದ ಕೇಳುವುದಿಲ್ಲ” ಎನ್ನುತ್ತಾಳೆ.    

ಅದಕ್ಕೆ ಯಾತ್ರಿಕನು ಸರಿ, ಹಾಗಾದರೆ ನನ್ನ ಬಳಿ ಒಂದು ವಿಶೇಷವಾದ ಅದ್ಭುತ  ಕಲ್ಲು ಇದೆ. ಅದನ್ನು ಕುದಿಯುವ ನೀರಿನಲ್ಲಿ ಹಾಕಿದರೆ, ಲೋಕದಲ್ಲಿ ಎಲ್ಲಿಯೂ ಸಿಗದಂತಹ ಅದ್ಭುತವಾದ ಸೂಪ್ ತಯಾರಾಗುತ್ತದೆ. ನೀನು ನನಗೆ ಒಂದು ಪಾತ್ರೆಯನ್ನು ಕೊಟ್ಟರೆ ನಾನು ಅದನ್ನು ನೀರಿಗೆ ಹಾಕಿ, ನಿನಗೂ ಸ್ವಲ್ಪ ಕೊಡುತ್ತೇನೆ” ಎನ್ನುತ್ತಾನೆ.         

ಇದನ್ನು ಕೇಳಿದ್ದೆ, ಹೆಂಗಸು ಓಡಿ ಹೋಗಿ ಒಂದು ದೊಡ್ಡ ಪಾತ್ರೆಯನ್ನು ತಂದು ಕೊಟ್ಟು ಅದಕ್ಕೆ ಬೇಕಾದ ಸ್ವಲ್ಪ ಸೌದೆ, ಬೆಂಕಿಯನ್ನು ಸಹ ಸಿದ್ಧಪಡಿಸಿ ಕೊಡುತ್ತಾಳೆ. ಯಾತ್ರಿಕ ನಲ್ಲಿ ಇರುವ ಅದ್ಭುತವಾದ ಕಲ್ಲಿನ ಬಗ್ಗೆ ತನ್ನ ಅಕ್ಕ ಪಕ್ಕದವರಿಗೆ ಮಾತ್ರ ತಿಳಿಸಿದಾಗ, ಅದು ಊರಿಗೆಲ್ಲ ಹರಡಿ ಎಲ್ಲರೂ ಯಾತ್ರಿಕನು ಸಿದ್ಧ ಪಡಿಸುತ್ತಿದ್ದ ಜಾಗದಲ್ಲಿ ಬಂದು ಸೇರುತ್ತಾರೆ.   

ನೀರು ಕುದಿಯುತ್ತಿದ್ದಂತೆ ಯಾತ್ರಿಕನು ತನ್ನ ಕೈಯಲ್ಲಿದ್ದ ಕಲ್ಲನ್ನು ತೆಗೆದು ಪಾತ್ರೆಯೊಳಗೆ ಹಾಕುತ್ತಾನೆ. ಸ್ವಲ್ಪ ಸಮಯದ ನಂತರ ನೀರು ಚೆನ್ನಾಗಿ ಬಿಸಿಯಾದ ಮೇಲೆ ಒಂದು ಸಣ್ಣ ಚಮಚದಿಂದ ನೀರನ್ನು ಎತ್ತಿ ಅದರ ರುಚಿ ನೋಡುತ್ತಾನೆ. ನೋಡಿದಾಕ್ಷಣ ಆಹಾ ಎಷ್ಟು ಚೆನ್ನಾಗಿದೆ”, ಎನ್ನುತ್ತಾ ಇದಕ್ಕೆ ಸ್ವಲ್ಪ ಆಲೂಗಡ್ಡೆ ಹಾಕಿದ್ದರೆ ಇನ್ನು ಎಷ್ಟು ರುಚಿ ಇರುತ್ತಿತ್ತು” ಎಂದು ಉದ್ಘರಿಸುತ್ತಾನೆ.         

ಇದನ್ನು ಕೇಳಿದ್ದೆ ಅಲ್ಲಿದ್ದ ಕೆಲವರು ಓಡಿ ಹೋಗಿ ತಮ್ಮ ಮನೆಯಲ್ಲಿದ್ದ ಹಾಲುಗಡ್ಡೆಗಳನ್ನು ತಂದು ಅವನಿಗೆ ಕೊಡುತ್ತಾರೆ. ಅವನು ಅದನ್ನು ನೀರಿಗೆ ಹಾಕಿ ಮತ್ತಷ್ಟು ಕುದಿಸುತ್ತಾನೆ. ಸ್ವಲ್ಪ ಸಮಯದ ನಂತರ ಚಮಚದಿಂದ ಮತ್ತೆ ನೀರನ್ನು ತೆಗೆದು ರುಚಿ ನೋಡುತ್ತಾ, ರುಚಿಗೆ ಒಂದಷ್ಟು ಮಾಂಸ ಇದ್ದಿದ್ದರೆ ಅದರ ಕತೆಯೇ ಬೇರೆ, ಆದರೆ ಇಲ್ಲಿ ಇಲ್ಲವಲ್ಲ” ಎಂದು ಹುಸಿ ವ್ಯಥೆಪಡುತ್ತಾನೆ.
ಇದನ್ನು ಕೇಳಿದ ಹಳ್ಳಿಯವನೊಬ್ಬ ಓಡಿ ಹೋಗಿ ತನ್ನ ಬಳಿ ಇದ್ದ ಸ್ವಲ್ಪ ಮಾಂಸವನ್ನು ತಂದು ಕೊಡುತ್ತಾನೆ. ಯಾತ್ರಿಕ ಇದು ಸಾಲದು ಎಂಬಂತೆ ನೋಡುತ್ತಾನೆ. ಅಷ್ಟರಲ್ಲಿ ಇನ್ನು ಕೆಲವರು ಹೋಗಿ ತಮ್ಮ ತಮ್ಮ ಮನೆಯಲ್ಲಿದ್ದ ಅಷ್ಟು ಇಷ್ಟು ಮಾಂಸವನ್ನು ಸಂತೋಷದಿಂದ ತಂದುಕೊಡುತ್ತಾರೆ. ಯಾತ್ರಿಕನು ಅವರಿಗೆ ವಂದಿಸಿ ಅದನ್ನು ಪಾತ್ರೆಯಲ್ಲಿ ಹಾಕುತ್ತಾನೆ. ಮಾಂಸ ಇಲ್ಲದವರು ಸ್ವಲ್ಪ ಈರುಳ್ಳಿ, ಕ್ಯಾರೆಟ್ ತರಬಾರದೇ ಎಂದು ಹೇಳಿದಾಗ ಊರಿನವರು ಅದನ್ನೂ ತಂದು ಕೊಡುತ್ತಾರೆ . ಕೊನೆಗೆ ಎಂಬಂತೆ ಮತ್ತೊಂದು ಬಾರಿ ನೀರಿನ ರುಚಿ ನೋಡುತ್ತಾ ಇನ್ನೂ ಇದಕ್ಕೆ ಉಪ್ಪು ಮೆಣಸು ಬಿದ್ದರೆ ಲೋಕದಲ್ಲಿ ಅತ್ಯಂತ ರುಚಿಯಾದ ಸೂಪ್ ಇಗೋ ಸಿದ್ಧವಾಗುತ್ತದೆ” ಎನ್ನುತ್ತಾನೆ.
ಇಷ್ಟೆಲ್ಲಾ ಆದಮೇಲೆ ಇನ್ನೂ ಉಪ್ಪಿಗೆ ಬರವೇ ಅದೂ ಬರುತ್ತದೆ. ಯಾತ್ರಿಕನು ಅದನ್ನು ನೀರಿಗೆ ಹಾಕಿ ಬೆರೆಸಿ, ಸರಿ ಸೂಪ್ ಸಿದ್ಧವಾಗಿದೆ, ಯಾರಿಗೆ ಬೇಕೋ ತೆಗೆದುಕೊಳ್ಳಿ” ಎನ್ನುತ್ತಾನೆ. ಹಳ್ಳಿಯವರೆಲ್ಲರೂ ಓಡಿ ಹೋಗಿ ತಮಗಾಗಿ ಒಂದೊಂದು ಪಾತ್ರೆ ತಟ್ಟೆಯನ್ನು ತಮ್ಮ ಮನೆಗಳಿಂದ ತರುತ್ತಾರೆ. ಆದರೆ ಸಂಕೋಚದಿಂದ ಹಿಂದೆ ಉಳಿಯುತ್ತಾರೆ. ಬೇರೆಯವರು ಮುಂದೆ ಬಂದದ್ದನ್ನು ನೋಡಿ ಕೊನೆಗೆ ಎಲ್ಲರೂ ಕುಳಿತು ಸಂತೋಷದಿಂದ ಸೂಪನ್ನು ಕುಡಿಯುತ್ತಾರೆ.
ಊಟವೆಂದರೆ ಬರೀ ಸೂಪಲ್ಲವಲ್ಲ. ತಾವು ಮನೆಯಲ್ಲಿ ಮಾಡಿದ ಅಡುಗೆಯನ್ನು ಸಹ ಅಲ್ಲಿಗೇ ತಂದು ಎಲ್ಲರೊಂದಿಗೆ ಹಂಚಿಕೊಂಡು ತಿನ್ನುತ್ತಾರೆ. ಅದೆಷ್ಟೋ ವರ್ಷಗಳ ಬಳಿಕ ರೀತಿಯ ಸಾಮೂಹಿಕ ಭೋಜನ ಅವರ ಹಳ್ಳಿಯಲ್ಲಿ ನಡೆಯುತ್ತದೆ. ಯಾತ್ರಿಕನು ಪಾತ್ರೆ ಖಾಲಿಯಾದ ಬಳಿಕ ಕಲ್ಲನ್ನು ತನ್ನ ಜೇಬಿಗಿಳಿಸಿ ಮುಂದಿನ ಊರಿಗೆ ಹೊರಡುತ್ತಾನೆ. ಅದೊಂದು ಸಾಮಾನ್ಯವಾದ ಕಲ್ಲಾಗಿತ್ತು.        

ಇದೊಂದು ಸುಂದರವಾದ ಕತೆ. ಹೊಸ ವರ್ಷದಲ್ಲಿ ನಾವು ಇದರಲ್ಲಿ ನಮಗೆ ಅನೇಕ ಪಾಠಗಳಿರಬಹುದು. ಕೆಲವೊಮ್ಮೆ ನಮ್ಮ ಜೀವನವೇ ಯಾತ್ರಿಕನು ಬಂದ ಹಳ್ಳಿಯಂತೆ. ನಮ್ಮಲ್ಲಿರುವ ಅಪಾರವಾದ ಸಾಧ್ಯತೆಗಳನ್ನು ನಾವೇ ಸ್ವತ: ಮುಚ್ಚಿಟ್ಟುಕೊಂಡು ನಮ್ಮಲ್ಲಿ ಏನೂ ಸಾಧ್ಯವಿಲ್ಲ ಎಂಬಂತೆ ಜೀವಿಸುತ್ತಿರುತ್ತವೆ. ನಮ್ಮ ದೇಹ, ಆತ್ಮ ಅಂತರಂಗ ದಿನಚರಿಗಳೆಲ್ಲವೂ ಒಂದಕ್ಕೊಂದು ಸಂಬಂಧವಿಲ್ಲದಂತೆ ತನ್ನದೇ ಆದ ಒಂದೊಂದು ದಿಕ್ಕಿನಲ್ಲಿ ಸಾಗುತ್ತಿರುತ್ತದೆ.           
ಇವೆಲ್ಲವನ್ನೂ ಒಂದುಗೂಡಿಸಿ ಕ್ರಿಯಾತ್ಮಕವಾಗಿ ತೊಡಗಿಸಿಕೊಳ್ಳಲು ಯಾತ್ರಿಕನಂತವನೊಬ್ಬನ ಸಹಾಯ ನಮಗೆ ಬೇಕಾಗುತ್ತದೆ. ಆದರೆ ಇಲ್ಲಿ ನಮ್ಮ ದೇವರು ಯಾತ್ರಿಕನಂತೆ ನಮ್ಮಲ್ಲೇ ಜೀವಿಸುತ್ತಾ ಮ್ಮನ್ನು ಎಚ್ಚರಿಸುತ್ತಾ, ನಮ್ಮನ್ನು ಬಳಸಿಕೊಂಡು ಅದ್ಭುತವಾದ ಕಾರ್ಯಗಳನ್ನು ಮಾಡಲು ಯತ್ನಿಸುತ್ತಿರುತ್ತಾರೆ. ಆದರೆ ನಾವು ಮಾತ್ರ ಅದಕ್ಕೆ ಬೆನ್ನು ಮಾಡುತ್ತಿರುತ್ತೇವೆ.
ಇಲ್ಲಿನ ಕಥೆಯಲ್ಲಿ ಯಾತ್ರಿಕನ ಬಳಿ ಇದ್ದ ಕಲ್ಲು ಸಾಮಾನ್ಯವಾಗಿತ್ತು ಆದರೆ ಕಲ್ಲಿನಲ್ಲಿವಿಶ್ವಾಸವಿಟ್ಟ ಊರಿನ ಜನರು ಕೊನೆಗೆ ಅದ್ಭುತವಾದ ಕಾರ್ಯದಲ್ಲಿ ಪಾಲುಗಾರರಾಗುತ್ತಾರೆ. ಅಂತೆಯೇ ದೇವರ ಸಾಧ್ಯತೆಗಳ ಬಗ್ಗೆ ನಮಗೆ  ವಿಶ್ವಾಸವಿದ್ದರೆ ನಾವು ಸಹ ಅದ್ಭುತ ಸಾಧನಗಳಾಗಬಹುದು.   
ಇದು ವ್ಯಕ್ತಿಗತವಾದ ಇದು ಸಂದೇಶವಾದರೆ, ಇನ್ನೂ ಸಾಮಾಜಿಕವಾಗಿ ಸಹ ಹಳ್ಳಿಯ ಜನರಂತೆ ನಾವು ನಾವು ಸಹ ನಮ್ಮದೇ ಆದ ದ್ವೀಪಗಳಲ್ಲಿ ಬಾಳುತಿರುತ್ತೇವೆ. ಅಲ್ಲಿ ಒಟ್ಟಾಗಿ ಸೇರಿ ಮಾಡಬಹುದಾದ ಹಲವಾರು ಕಾರ್ಯಗಳಿದ್ದರೂ ನಾವು ನಮ್ಮದೇ ಆದ ಅಹಮಿನ ಕೋಟೆಗಳನ್ನು ಕಟ್ಟಿಕೊಂಡು ಬಾಳುತ್ತಿರುತ್ತೇವೆ. ನಮ್ಮನ್ನು ಒಟ್ಟುಗೂಡಿಸುವ ಯಾತ್ರಿಕನೊಬ್ಬ, ಅದ್ಭುತವಾದ ಕಲ್ಲು ನಮಗೆ ಬೇಕಾ ಗುತ್ತದೆ. ಇಲ್ಲವೇ ಯಾತ್ರಿಕನ ಸಹಾಯವಿಲ್ಲದೆ ನಾವೇ ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವ ಮನೋಭಾವವನ್ನು ಬೆಳೆಸಿಕೊಳ್ಳಬೇಕಾಗಿದೆ.

ಪ್ರೀತಿ ನಂಬಿಕೆ ಸಹಕಾರ ಗಳು ಮರೆಯಾಗುತ್ತಾ ದ್ವೇಷ ಸಂದೇಹ ಸಂಶಯಗಳು ಇಡೀ ವಿಶ್ವವನ್ನೇ ಬಲಿ ತೆಗೆದುಕೊಳ್ಳುತ್ತಿರುವ ಸಂದರ್ಭದಲ್ಲಿ ನಾವು ನಮ್ಮ ಪೂರ್ಣ ಸಾಮರ್ಥ್ಯವನ್ನು ಅರಿತುಕೊಳ್ಳೋಣ ಅದನ್ನು ಸಾಮಾಜಿಕವಾಗಿ ಬಳಸುವತ್ತ ಹೆಜ್ಜೆ ಹಾಕೋಣ. ಮಾತ್ರವಲ್ಲದೆ ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳನ್ನು ಮರೆತು ಒಟ್ಟಾಗಿ ಮಹತ್ತರವಾದ ಕಾರ್ಯಗಳನ್ನುತ್ತ ಸಾಗೋಣ.
ಮಹತ್ತರ ಕಾರ್ಯಗಳನ್ನು ಅಂದಾಕ್ಷಣ ನಮ್ಮಿಂದ ಅದೆಲ್ಲಾ ಸಾಧ್ಯವೇ ಎಂಬ ಉದ್ಘಾರ ನಮ್ಮಿಂದ ಹೊರಡಬಹುದು. ಒಂದು ಸಣ್ಣ ಕಾರ್ಯ ಸಹಾ ಒಂದು ಸಂದರ್ಭದಲ್ಲಿ ದೊಡ್ಡ ಕಾರ್ಯವೇ ಆಗಬಹುದು. ಭಾರಿ ಮಳೆ ಹಾಗೂ ಶೀತ ಗಾಳಿ ಬೀಸುತಿತ್ತು. ಮಳೆಯಿಂದ ತಪ್ಪಿಸಿಕೊಳ್ಳಲು ಬಡ ಹುಡುಗನೊಬ್ಬ ರಸ್ತೆಯ ಬದಿಯ ಆಶ್ರಯವೊಂದರಲ್ಲಿ ನಿಂತಿದ್ದ. ಗಾಳಿ ತಡೆಯುವ ಬಟ್ಟೆಗಳು ಅವನಲ್ಲಿರಲಿಲ್ಲ. ಅದೇ ಆಶ್ರಯದ ಕೆಳಗೆ ಮಳೆಯಿಂದ ತಪ್ಪಿಸಿಕೊಳ್ಳಲು ಮತ್ತೊಬ್ಬ ವ್ಯಕ್ತಿ ಬಂದ. ಹುಡುಗನನ್ನು ನೋಡಿದ್ದೇ “ನಿನಗೆ ಬಹಳ ಚಳಿಯಾಗುತ್ತಿರಬೇಕಲ್ಲವೇ, ಪಾಪ” ಎಂದ. ತಕ್ಷಣ ಆ ಹುಡುಗನೆಂದ “ನೀವು ಬಂದು ಈ ಪ್ರಶ್ನೆ ಕೇಳುವ ತನಕ ಆಗುತಿತ್ತು, ನಿಮ್ಮ ಕಾಳಜಿಯಿಂದ ಬೆಚ್ಚಗಾಯಿತು” ಎಂದ. ಆ ವ್ಯಕ್ತಿ ಆ ಹುಡುಗನಿಗೆ ಹೊದಿಸಿಕೊಳ್ಳಲು ಬಟ್ಟೆ ಕೊಟ್ಟನೇ, ಇಲ್ಲವೇ ಗೊತ್ತಿಲ್ಲ. ಆದರೆ ತೋರಿದ ಕಾಳಜಿಯೇ ಆ ಬಾಲಕನಿಗೆ ಸಾಕಾಯಿತು. ನಮಗೂ ಆ ರೀತಿಯ ಅವಕಾಶಗಳು ಬಂದಾಗ ನಾವು ತಪ್ಪಿಸಿಕೊಳ್ಳಬಾರದಷ್ಟೇ.


-ಪ್ರಶಾಂತ್ ಇಗ್ನೇಷಿಯಸ್

No comments:

Post a Comment