Sunday 20 January 2019

ನೀವೂ ನೋಡಿ - ಆಫ್ ಗಾಡ್ಸ್ ಅಂಡ್ ಮೆನ್

2010 ರಲ್ಲಿ ಬಿಡುಗಡೆಗೊಂಡ  ಫ್ರೆಂಚ್ ಚಿತ್ರ ಆಫ್ ಗಾಡ್ಸ್ ಅಂಡ್ ಮೆನ್. ವಿಶ್ವ ವಿಖ್ಯಾತ ಕೇನ್ಸ್ ಚಿತ್ರೋತ್ಸವದಲಿ ಮೊದಲು ಪ್ರದರ್ಶಿತಗೊಂಡ ಚಿತ್ರವು ಮೆಚ್ಚುಗೆಯನ್ನು, ಅನೇಕ ರೀತಿಯ ಪ್ರಶ್ನೆಗಳನ್ನು ಹುಟ್ಟು ಹಾಕುತ್ತದೆ. ಅಲ್ಲದೆ ಪ್ರಶ್ನೆಗಳಿಗೆ ಉತ್ತರ ನೀಡುವಲ್ಲಿ  ಚಿತ್ರವು ವಿಫಲವಾಗಿದೆ ಎಂಬ ಟೀಕೆಯನ್ನು ಸಹಾ ಎದುರಿಸಿದೆ.

ಆಲ್ಜೀರಿಯಾ ದಲ್ಲಿ ನಡೆದ ಸತ್ಯ ಒಂದನ್ನು ಆಧಾರವಾಗಿಟ್ಟುಕೊಂಡ ಚಿತ್ರವು ನಿರ್ಮಾಣ ಗೊಂಡಿತು. ಜೇವಿಯರ್ ಬಿಯೋವಿಯೋ ಚಿತ್ರದ ನಿರ್ದೇಶಕ. ಚಿತ್ರಕಥೆಯಲ್ಲಿ ನಿರ್ಮಾಪಕ ಕೋಮರ್ ಜೊತೆ ನಿರ್ದೇಶಕ ಸಹ ಕೈ ಜೋಡಿಸಿದ್ದಾನೆ.

ಮೊದಲೇ ಹೇಳಿದಂತೆ ಇದೊಂದು ಸತ್ಯ ಘಟನೆಯ ಸ್ಪೂರ್ತಿಯಿಂದ ನಿರ್ಮಾಣಗೊಂಡ ಚಿತ್ರ. 1996ರಲ್ಲಿ ಏಳು ಜನ ಫ್ರೆಂಚ್ ಗುರುಗಳು, ಆಲ್ಜೀರಿಯಾ ಟಿಬಿಯಿನ್ ಎಂಬ ಹಳ್ಳಿಯಲ್ಲಿನ ಮಠದಿಂದ ಅಪಹರಣಕ್ಕೆ ಒಳಗಾಗುತ್ತಾರೆ. ನಂತರ ಅವರುಗಳ ಶಿರಚ್ಛೇದನಗೊಂಡ ದೇಹಗಳು ಸಿಗದೇ  ಕೇವಲ ತಲೆಗಳು ಸಿಗುತ್ತವೆ. ಆಲ್ಜೀರಿಯದ ಮೂಲಭೂತವಾದಿ ಭಯೋತ್ಪಾದಕರು ಕೊಲೆಗಳನ್ನು ತಾವು ಮಾಡಿದ್ದೇವೆಂದು ಕೊಚ್ಚಿಕೊಳ್ಳುತ್ತಾರೆ.

ಆದರೆ ನಂತರದ ವರ್ಷಗಳ ತನಿಖೆ ಮತ್ತು ವರದಿಗಳ ಪ್ರಕಾರ ಅಲ್ಜೀರಿಯಾದ ಸೈನ್ಯದಿಂದಲೇ ಬಿಡುಗಡೆ ಕಾರ್ಯಾಚರಣೆ ಸಂದರ್ಭದಲ್ಲಿ ಆಕಸ್ಮಿಕವಾಗಿ ಗುರುಗಳು ಸಾವನ್ನಪ್ಪುತ್ತಾರೆ. ಒಂದು ಅಪವಾದದಿಂದ ತಪ್ಪಿಸಿಕೊಳ್ಳಲು ಸೈನ್ಯವೇ ಅವರ ಶಿರಚ್ಛೇದನ ಮಾಡಿ ಭಯೋತ್ಪಾದಕರ ಕಾರ್ಯವೆಂದು ಆರೋಪಿಸುತ್ತಾರೆ ಎಂಬುದಾಗಿ ವರದಿಗಳಿವೆ. ಯಾವುದು ನಿಜ ಎಂಬುದು ಇನ್ನೂ ಮರೀಚಿಕೆಯಾಗಿಯೇ ಉಳಿದಿದೆ

ಇದು ನಡೆದ ಘಟನೆಯಾದರೆ, ಇಷ್ಟನ್ನು ಬಳಸಿಕೊಂಡ ಚಿತ್ರವೇ ಆಫ್ ಗಾಡ್ಸ್ ಅಂಡ್ ಮೆನ್. ಚಿತ್ರವು ಬಹಳ ಮನೋಜ್ಞವಾಗಿ ಹೃದಯಂಗಮವಾಗಿ ಮೂಡಿ ಬಂದಿದೆ. ಅಲ್ಜೀರಿಯಾದ ಬಡ ಸ್ಥಳವೊಂದರಲ್ಲಿ ಏಳು ಜನ ಗುರುಗಳು ತಮ್ಮ ಸೇವಾ ವೃತ್ತಿಯನ್ನು ಮಾಡುತ್ತಿರುತ್ತಾರೆ . ಶಾಂತಿಯುತ ಹಾಗೂ ಪ್ರಾರ್ಥನಾಮಯ ಜೀವನ ಅವರದು. ಜೊತೆಗೆ ಸುತ್ತಮುತ್ತಲಿನ ಜನರೊಂದಿಗೆ ಬೆರೆಯುತ್ತಾ  ಅವರ ಕಷ್ಟ ಸುಖಗಳಲ್ಲಿ ಭಾಗಿಯಾಗುವ ಗುರುಗಳು ವೈದ್ಯಕೀಯ ಸೇವೆಯನ್ನು ಸಹ ನೀಡುತ್ತಿರುತ್ತಾರೆ.

ಆರ್ಥಿಕವಾಗಿ ಬಡತನದಲ್ಲಿದ್ದರೂ ತಮ್ಮ ಮಠದ ಒಳಗೆ ತಮಗೆ ಬೇಕಾದ ತರಕಾರಿಗಳನ್ನು ಬೆಳೆಸಿಕೊಳ್ಳುತ್ತಾ ತಮ್ಮದೇ ತ್ಯಾಗಮಯ ಜೀವನವನ್ನು ನಡೆಸುತ್ತಿರುತ್ತಾರೆ. ಇಂತಹ ಸಮಯದಲ್ಲಿ ದೇಶದಲ್ಲಿ ರಾಜಕೀಯ ಅರಾಜಕತೆ ಉಂಟಾಗುತ್ತದೆ. ಅದರೊಂದಿಗೆ ಧಾರ್ಮಿಕ ಅಸಹನೆ, ಸಹಿಷ್ಣುತೆಯೂ ಪ್ರಾರಂಭವಾಗುತ್ತದೆ. ರಾಜಕೀಯ ಹಾಗೂ ಧಾರ್ಮಿಕ ಕಾರಣಗಳಿಂದ ಕೊಲೆ, ಅಪಹರಣಗಳು ಸಾಮಾನ್ಯವೆಂಬಂತೆ ನಡೆಯುತ್ತಿರುತ್ತವೆ.

ಇದೇ ಸಮಯದಲ್ಲಿ ಮಠದ ಹತ್ತಿರದಲ್ಲೇ ಕೆಲಸ ಮಾಡುತ್ತಿದ್ದ ಕಾರ್ಮಿಕರ ಸಾಮೂಹಿಕ ಮಾರಣಹೋಮ ನಡೆಯುತ್ತದೆ. ಜನರು ಭಯಭೀತರಾಗುತ್ತಾರೆ. ಗುರುಗಳು ಸಹಾ ವಿಚಿಲಿತರಾದರೂ, ತಮ್ಮ ಸೇವಾ ಬದುಕಿಗೆ ಬದ್ಧರಾಗಿ ಉಳಿಯುತ್ತಾರೆ. ಇತ್ತ ಇವೆಲ್ಲವನ್ನೂ  ಕಂಡ ಸರ್ಕಾರವು ತನ್ನ ಅಧಿಕಾರಿಯೊಬ್ಬನನ್ನು ಗುರುಗಳ ಬಳಿ ಕಳುಹಿಸಿ ಮಾತನಾಡುತ್ತದೆ. ಅಧಿಕಾರಿಯು ಗುರುಗಳು ಇನ್ನು ದೇಶದಲ್ಲಿ ವಾಸಿಸುವುದು ಅಪಾಯಕಾರಿ ಎಂದು ತಿಳಿಸುತ್ತಾ ಅವರು ದೇಶವನ್ನು ಬಿಟ್ಟು ತಮ್ಮ ಸ್ವಂತ ದೇಶವಾದ ಫ್ರಾನ್ಸಿಗೆ ಮರುಳಬೇಕೆಂದು ಸಲಹೆ  ನೀಡುತ್ತಾನೆ. ಅಲ್ಲದೆ ಅವರಿರುವ ತನಕ ಮಠಕ್ಕೆ ಸರ್ಕಾರದಿಂದ ಸೈನ್ಯಾ ಭದ್ರತೆಯನ್ನು ಕೊಡುವ ಭರವಸೆ ನೀಡುತ್ತಾನೆ.

ಆದರೆ ಗುರುಗಳು ಇದನ್ನು ಒಪ್ಪದೇ ಕಷ್ಟದಲ್ಲಿ ಇರುವ ಜನರನ್ನು ಬಿಟ್ಟು ಹೋಗುವುದಿಲ್ಲ ಎಂದು ಪಟ್ಟು ಹಿಡಿಯುತ್ತಾರೆ. ಅಲ್ಲದೆ ಮಠದಲ್ಲಿ ಸೈನ್ಯವಿರುವುದು ಬೇಡವೆಂದು ಹೇಳುತ್ತಾರೆ. ಇದರ ಬಗ್ಗೆ ಅಲ್ಲಿನ ಜನರೊಂದಿಗೆ ಮಾತನಾಡಿದಾಗ ಜನರು ಕೂಡ ಗುರುಗಳು ಊರನ್ನು ತೊರೆದರೆ ತಮಗೆ ಉಳಿಗಾಲವಿಲ್ಲ ಎಂದು ಹೇಳುತ್ತಾರೆ.

ಈ ಸಮಯದಲ್ಲಿ ಗುರುಗಳು ತಾವು ಏನು ಮಾಡಬೇಕೆಂಬ ಕಠಿಣವಾದ ನಿರ್ಧಾರ ತೆಗೆದುಕೊಳ್ಳುವ ಸಮಯ ಬರುತ್ತದೆ. ನಿರ್ಣಯ ಸುಲಭವಾದದ್ದಲ್ಲ. ಗುರುಗಳ ನಡುವೆಯೇ ವಾಗ್ವಾದಗಳು ನಡೆಯುತ್ತವೆ.  ಮ್ಮ ಜೀವನಗಳು ಕೊಲೆಗಡುಕರ ಕೈಗೆ ಏಕೆ ಸುಲಭದ ತುತ್ತಾಗಬೇಕು ಎಂಬ ವಾದಗಳು ಅವರಲ್ಲೇ ನಡೆಯುತ್ತದೆ.

ಮಠದ ಮೇಲ್ವಿಚಾರಕ ಗುರುಗಳಾದ ಕ್ರಿಸ್ಟಿಯನ್ ತಮ್ಮದೇ ಆದ ವಾದವನ್ನು ಮುಂದಿಡುತ್ತಾರೆ ಅದರ ಪ್ರಕಾರ ತಾವು ಮಠದಲ್ಲಿಯೇ ಉಳಿದು ಜನರ ಸೇವೆ ಮಾಡುವುದಾಗಿ ತಿಳಿಸುತ್ತಾರೆ.  ಅಂತೆಯೇ ಮಠದ ರಕ್ಷಣೆಗಾಗಿ ಸೈನಿಕರನ್ನು ಕಳುಹಿಸುವ ಪ್ರಸ್ತಾವವನ್ನು ಸಹ ತಿರಸ್ಕರಿಸುವ ನಿರ್ಣಯ ಮಾಡುತ್ತಾರೆ.

ಕೊನೆಗೆ ಎಲ್ಲಾ ಗುರುಗಳು ಈ ನಿರ್ಣಯಕ್ಕೆ ಅನುಮೋದನೆ, ಸಹಮತವನ್ನು ನೀಡಿ ತಾವು ಸಹ ಗುರು ಮಠದಲ್ಲಿ ಉಳಿಯುವ ನಿರ್ಧಾರಕ್ಕೆ ಬರುತ್ತಾರೆ. ಮುಂದೆ ಅವರು ನಿರೀಕ್ಷಿಸುತ್ತಿದ್ದ ಆ ಸಮಯ ಬರುತ್ತದೆ. ಕ್ರಿಸ್ತ ಜಯಂತಿಯ ಹಿಂದಿನ ದಿನ ಮೂಲಭೂತವಾದಿಗಳ ಭಯೋತ್ಪಾದಕ ತಂಡವು ಮಠಕ್ಕೆ ಬರುತ್ತದೆ. ಗಾಯಗೊಂಡ ತಮ್ಮ ಸದಸ್ಯನೊಬ್ಬನನ್ನು ಮಠದ ವೈದ್ಯ ಗುರುಗಳು ಬಂದು ಉಪಚರಿಸಬೇಕೆಂದು ಆಜ್ಞೆ ನೀಡುತ್ತಾನೆ. ಗುರು ಕ್ರಿಶ್ಚಿಯನ್ ಆಜ್~ಯನ್ನು  ತಿರಸ್ಕರಿಸುತ್ತಾರೆ. ತಮ್ಮಲ್ಲಿ ವೈದ್ಯಕೀಯ ನೆರವು ನೀಡುವಷ್ಟು ಸಾಮಗ್ರಿ ಇಲ್ಲವೆಂದು ಹಾಗೂ ವೈದ್ಯ ಗುರುಗಳು ಆನಾರೋಗ್ಯದಿಂದ ಬಳಲುತ್ತಿರುವುದರಿಂದ ಅವರು ಬರಲಾಗುವುದಿಲ್ಲ ಎಂದು ತಿಳಿಸುತ್ತಾರೆ. ಆಶ್ಚರ್ಯವೆಂಬಂತೆ ತಂಡದ ನಾಯಕ ಇದನ್ನು ಒಪ್ಪಿಕೊಳ್ಳುತ್ತಾನೆ. ಅಷ್ಟು ಮಾತ್ರವಲ್ಲದೆ ತಾನು ಸರ್ಕಾರದಿಂದ ಹತನಾಗುವ ತನಕ ಆ ಮಠಕ್ಕೆ ರಕ್ಷಣೆಯನ್ನೂ ನೀಡುತ್ತಾನೆ.

ಮುಂದಿನ ದಿನಗಳಲ್ಲಿ ಗುರುಗಳನ್ನು ಭಯೋತ್ಪಾದಕರು ಅಪಹರಿಸುತ್ತಾರೆ. ಸಾವಿನತ್ತ ಅವರ ಭಾರವಾದ ನಡಿಗೆಯಿಂದ ಚಿತ್ರ ಕೊನೆಗೊಳ್ಳುತ್ತದೆ.

ಚಿತ್ರದಲ್ಲಿ ಅನೇಕ ದೃಶ್ಯಗಳು ಮನಕಲಕುವಂತಿದೆ. ಹೊರಗಡೆ ನಡೆಯುವ ರಾಜಕೀಯ ಧಾರ್ಮಿಕ ಕೋಲಾಹಲದ ನಡುವೆ ಮಠದ ಒಳಗಿನ ಮಾನಸಿಕ ತಳಮಳವನ್ನು ಸುಂದರವಾಗಿ ಚಿತ್ರಿಸಿಲಾಗಿದೆ. ಸಾವು ಖಚಿತ ಎಂದು ತಿಳಿದ ಮೇಲೆ ಗುರುಗಳ ಮನಸ್ಸಿನಾಳದಲ್ಲಿ ನಡೆಯುವ ದ್ವಂದ್ವ ಯುದ್ಧವನ್ನು ನಿರ್ದೇಶಕ ಯಾವುದೇ ನಿಲುವು ತಾಳದೇ ಭಾವಗಳ ಸಂಘರ್ಷದ ಮೊರೆ ಹೋಗುತ್ತಾನೆ. ಅವರು ಗುರುಗಳಾಗಿದ್ದರೂ, ಆಳದಲ್ಲಿ ಅವರೂ ಸಾಮಾನ್ಯ ಮನುಷ್ಯರಂತೆಯೇ ಜೀವನದ ಬಗ್ಗೆ ಆಸೆ ಇಟ್ಟುಕೊಂಡವರೇ ಆಗಿರುತ್ತಾರೆ. ಆದರೆ ಅದೆಲ್ಲವನ್ನೂ ಮೀರಿದ ಅವರ ಬದ್ಧತೆಯನ್ನು ನಿರ್ದೇಶಕ ಚಿತ್ರಿಸಿದ್ದಾನೆ.

ಮಠಕ್ಕೆ ಬರುವ ಅತಿಥಿಗಳನ್ನು ಸತ್ಕರಿಸುವ ಭೋಜನದ ದೃಶ್ಯದಲ್ಲಿ ಎಲ್ಲರೂ ಸೇರಿ ನಲಿಯುತ್ತಲ್ಲೇ ಮುಂದೆ ತಮಗೆ ಬರಬಹುದಾದ ಸಾವು ಹಾಗೂ ಅದರೊಂದಿಗಿನ ತಮ್ಮ ಅಗಲಿಕೆ ನೆನೆದು ದು:ಖಿಸುವ ದೃಶ್ಯ ಕಣ್ಣೀರು ತರಿಸುತ್ತದೆ.

ಅಂತೆಯೇ ಯುವತಿಯೊಬ್ಬಳು ಹಿರಿಯ ಗುರುಗಳನ್ನು ಪ್ರೀತಿ ಪ್ರೇಮದ ಬಗ್ಗೆ ಕೇಳುತ್ತಾ, “ನೀವು ಎಂದಾದರೂ ಪ್ರೇಮದಲ್ಲಿ ಸಿಲುಕಿದ್ದೀರ ಎಂದು ಕೇಳುತ್ತಾಳೆ. ಅದಕ್ಕೆ ಉತ್ತರವಾಗಿ ಗುರುಗಳು ಹೌದು  ಅನೇಕ ಬಾರಿ ಎಂದು ಉತ್ತರಿಸುತ್ತಾ,  ನಂತರ ಅದಕ್ಕಿಂತಲೂ ದೊಡ್ಡದಾದ ಪ್ರೇಮದಲ್ಲಿ ಕಳೆದ 60 ವರ್ಷಗಳಿಂದ ಇದ್ದೇನೆ ಎಂದು ತಮ್ಮ ಗುರು ಜೀವನದ ಬಗ್ಗೆ ಹೇಳುತ್ತಾರೆ. ಈ ರೀತಿಯ ಅನೇಕ ದೃಶ್ಯ ಹಾಗೂ ಅವುಗಳ ಒಟ್ಟು ಪರಿಣಾಮದಿಂದಾಗಿ ಇದು ನಾವು ನೋಡಲೇ ಬೇಕಾದ ಚಿತ್ರಗಳ ಸಾಲಿನಲ್ಲಿ ನಿಲ್ಲುತ್ತದೆ.
Read more!

No comments:

Post a Comment