Thursday 20 December 2018

ರೆಬಲ್ ಸ್ಟಾರ್ ನ ಅಂತರಂಗ

ಕಳೆದ ತಿಂಗಳು ಅಂಬರೀಶ್ ಕೂಡ ಕಣ್ಮರೆಯಾದರು. ಈ ವರ್ಷದ ಅವರ ಹುಟ್ಟುಹಬ್ಬದಲ್ಲಿ ಮುತ್ತಿಕೊಂಡ ಪತ್ರಕರ್ತರ ಒಂದೊಂದೇ ಪ್ರಶ್ನೆಗಳಿಗೆ ತಮ್ಮದೇ ಆದ ರೀತಿಯಲ್ಲಿ ಉತ್ತರವನ್ನು ಅಂಬಿ ಬಿಸಾಕುತ್ತಿದ್ದರು. ಪತ್ರಕರ್ತರೊಬ್ಬರು ಆ ದಿನದ ಅವರ ಕಾರ್ಯಕ್ರಮದ ಬಗ್ಗೆ ಕೇಳುತ್ತಾರೆ. ಆಗ ಅಂಬರೀಶ್ “ಗಂಟೆಗೆ ಕಲಾವಿದರ ಸಂಘದ ಕಾರ್ಯಕ್ರಮ ಅಲ್ಲಿ ಗಂಟೆ ಇದ್ದು ಬರುತ್ತೇನೆ” ಎನ್ನುತ್ತಾರೆ. ಅದಕ್ಕೆ ತಟ್ಟಕ್ಕನೆ ಪತ್ರಕರ್ತನೊಬ್ಬ “ಆಮೇಲೆ?” ಅನ್ನುತ್ತಾನೆ. ಅದಕ್ಕೆ ಅಂಬರೀಶ್ ತಮ್ಮದೇ ಆದ ಶೈಲಿಯಲ್ಲಿ “ನಿನ್ಗ್ ಯಾಕ್ ಅವೆಲ್ಲಾ...” ಎನ್ನುತ್ತಾ ಇವ್ಯಾವವೋ ಇಷ್ಟ ಇಷ್ಟ್ ಇದಾವೆ, ಬಿಡೋದಿಲ್ಲ ಅಂತವೇ” ಎನ್ನುತ್ತಾ ಕೋಪದ ಜೊತೆ  ಒಂದು ಹುಸಿ ನಗೆ ಬೀರುತ್ತಾರೆ. ಇಡೀ ಗುಂಪು ಗೊಳ್ಳೆನ್ನುತ್ತದೆ. ಇದು ಅಂಬರೀಶ್ ಇದ್ದ ರೀತಿ.

ವೃತ್ತಿಜೀವನದ ಸಾಧ್ಯತೆಗಳನ್ನು ಮೀರಿದ ಪ್ರೀತಿ ಅಭಿಮಾನವನ್ನು ಸಂಪಾದಿಸಿದ್ದಕ್ಕೆ ಅಂಬರೀಶ್ ದೊಡ್ಡ ಉದಾಹರಣೆ. ಜನಪ್ರಿಯ ನಾಯಕ ನಟನೆಂಬ ಚೌಕಟ್ಟು ಮೀರಿ ಅಂಬರೀಶ್ ಬೆಳೆದು ಬಂದ ರೀತಿ ಆಶ್ಚರ್ಯಕರವಾದದ್ದು. ಅಂಬರೀಷ್     ರವರಲ್ಲಿನ ಪೂರ್ಣ ಪ್ರಮಾಣದ ಕಲಾವಿದ ಅನಾವರಣ ಗೊಂಡಿದ್ದು ಪುಟ್ಟಣ್ಣನವರ ಚಿತ್ರಗಳಲ್ಲಿ. ರಂಗನಾಯಕಿ ಚಿತ್ರದಲ್ಲಿನ ಅಂಬರೀಶ್ ನಟನೆಯ ಪ್ರೌಢಿಮೆಯನ್ನು ಮುಂದಿನ ನಿರ್ದೇಶಕರು ಬಳಸಿಕೊಂಡದ್ದು ಕಡಿಮೆಯೇ. ಪಂಚ್ ಲೈನ್  ಗಳಿಂದಲೇ ಪ್ರಸಿದ್ಧಿ ಪಡೆದಿದ್ದ ಅಂಬರೀಶ್ ರವರಿಗೆ ಶುಭಮಂಗಳ ದಲ್ಲಿ ಪುಟ್ಟಣ್ಣ ನೀಡಿದ್ದು ಮೂಗನ ಪಾತ್ರ. ಅದರಲ್ಲೂ ಅಂಬರೀಷ್ ಗೆದ್ದರು.      
ಇನ್ನೂ ರೆಬಲ್ ಪಾತ್ರಗಳಿಗೆ ನಿರ್ದೇಶಕರು ಅವರನ್ನು ಬ್ರಾಂಡ್ ಮಾಡಿದರೂ ಒಲವಿನ ಉಡುಗೊರೆಹೃದಯ ಹಾಡಿತುಏಳು ಸುತ್ತಿನ ಕೋಟೆಮಣ್ಣಿನ ದೋಣಿ ಮುಂತಾದ ಚಿತ್ರಗಳಲ್ಲಿನ ಸಾಫ್ಟ್ ಪಾತ್ರಗಳಲ್ಲಿ ಅಂಬರೀಶ್ ತಮ್ಮ ಛಾಪು ಮೂಡಿಸಿದರು. ಅಂತಚಕ್ರವ್ಯೂಹ ಗಜೇಂದ್ರ ಎಲ್ಲವೂ ಅವರನ್ನು ಯಶಸ್ವಿ ನಾಯಕನ ಪಟ್ಟಕ್ಕೆ ಏರಿಸಿದವು
ಚಿತ್ರ ಜಗತ್ತಿನ ಆಚೆಗೂ ಅಂಬರೀಶ್ ಹೆಸರು ಮಾಡಿದ್ದು ಅವರ ನೇರವಂತಿಕೆಯಿಂದಲೇ. ಪತ್ರಕರ್ತರ ಪ್ರಶ್ನೆಗಳಿಗೆ ಅವರು ಉತ್ತರಿಸುತ್ತಿದ್ದ  ರೀತಿ ಇನ್ಯಾರದೋ ಬಾಯಿಂದ ಬಂದಿದ್ದರೆ ಅದೆಷ್ಟು ವಿವಾದಗಳ ಆಗುತ್ತಿದ್ದವೋ. 
ಇನ್ನು ಅಂಬರೀಷ್ ಬಗೆಗಿನ ದಂತಕಥೆಗಳು ಹಲವಾರು. ಇನ್ನು ಮುಂದೆ ಎಲ್ಲರ ಬಳಿ ಸಂಭಾವಿತವಾಗಿಯೇ ಮಾತನಾಡಬೇಕು ಎಂದು ಗೆಳೆಯರು ಸಲಹೆ ಮಾಡಿದರಂತೆ. ಅಂತೆಯೇ ಫೋನ್ ಮಾಡಿದ ಅಭಿಮಾನಿಗೆ ನಿಧಾನವಾಗಿ ಗೌರವದಿಂದ “ಹೇಳಪ್ಪ" ಎಂದು ಉತ್ತರ ನೀಡಿದರೆ, ಅವನು ನಂಬದೆ “ಆಯ್ತು ಹೇಳಲೇ, ನಿನ್ನ್.... ಎಂದಾಗಲೇ ಆತ “ನಮಸ್ಕಾರ ಕಣ್ಣಣ್ಣೋ” ಎಂದ ಘಟನೆಯು ಹಲವಾರು ರೂಪಗಳನ್ನು ಪಡೆದುಕೊಂಡು ಹರಿದಾಡುತ್ತಿದೆ. ಅಂತೆಯೇ ಒಡಹುಟ್ಟಿದವರು ಚಿತ್ರೀಕರಣದ ಸಮಯದಲ್ಲಿ ಹಲವಾರು ವರ್ಷಗಳಿಂದ ಗುರುವಾರದಂದು ಮಾಂಸಹಾರ ಮಾಡದ ರಾಜಕುಮಾರ್ ರವರಿಗೆ ಗುರುವಾರದಂದೇ  ಪ್ರೀತಿಯಿಂದ ಒತ್ತಾಯ ಮಾಡಿ ಮಾಂಸದ ಊಟ ಬಡಿಸಿದ ಕಥೆಯೂ ಪ್ರಚಲಿತ.
ಅಂಬರೀಶ್ ಬದುಕಿದ ರೀತಿ ಅಪರೂಪದ್ದು. ಆ ರೀತಿ ಬದುಕಿ, ದಕ್ಕಿಸಿಕೊಳ್ಳುವುದು ಅಂಬರೀಶ್ ಯಿಂದ ಮಾತ್ರ ಸಾಧ್ಯ. ಅದು ಅನುಕರಣೀಯವಲ್ಲ ಆದರೆ ಅವರ ಹೃದಯವಂತಿಕೆ, ಪ್ರೀತಿ, ನಗು ಎಲ್ಲವೂ ನಿಜಕ್ಕೂ ಆತ್ಮೀಯ. ಆದ್ದರಿಂದಲೇ ಈ ನಾಡಿನಲ್ಲಿ ’ಏನ್ ಬುಲ್ ಬುಲ್, ಮಾತಾಡಕ್ಕಿಲ್ವಾ’ ಎಂಬ  ಆ ಡೈಲಾಗ್ ನಷ್ಟೇ ಅಂಬರೀಷ್ ಕೂಡ ಅಮರ

No comments:

Post a Comment