Thursday 20 December 2018

ಡಾಕ್ಟರ್ ಲೀಲಾವತಿ ದಾಸ್ - ಧ್ಯಾನಸಕ್ತ ಮುಗುಳ್ನಗೆಯ ಮೂರ್ತಿ

ಡಾಕ್ಟರ್ ಲೀಲಾವತಿ ದಾಸ್ ಯಾವುದೇ ಸದ್ದಿಲ್ಲದೆ ಹೊರಟ್ಟಿದ್ದಾರೆ. “ನೋಡ್ತಿರಿ ನಾನು ಒಂದು ದಿನ ಹಾಗೆ ಹೊರಟು ಬಿಡುತ್ತೇನೆ” ಎಂದು ತಮ್ಮ ತಂಗಿಯ ಬಳಿ ಹೇಳಿದ್ದರಂತೆ. ಒಂದಂತು ನಿಜ, ಅವರು ಸುಮ್ಮನಂತೂ ಹೋಗಿಲ್ಲ, ಒಂದು ಸಾರ್ಥಕವಾದ ಜೀವನವನ್ನು ಬದುಕಿ ಸಂತೋಷದಿಂದಲೇ ತೆರಳಿದ್ದಾರೆ. ಒಂದಷ್ಟು ಬರವಣಿಗೆ ಇನ್ನೂ ಉಳಿದಿತ್ತೇನೋ. ಏಕೆಂದರೆ  ಭೇಟಿ ಮಾಡಿದಾಗಲೆಲ್ಲಾ ಟೈಪ್ ಮಾಡಿದ ಬರವಣಿಗೆ ಅವರ ಕಂಪ್ಯೂಟರ್ ಮೇಲೆ ಕಾಣುತ್ತಿತ್ತು. ಯಾವುದಾದರೂ ಒಂದು ಪುಸ್ತಕ ತೆರೆದಿಟ್ಟ ಸ್ಥಿತಿಯಲ್ಲೇ ಟೇಬಲ್ ಮೇಲೆ ಇರುತ್ತಿತ್ತು ಇತ್ತೀಚಿಗೆ ಪ್ರಕಟಗೊಂಡಿದ್ದ ಲೇಖನವೊಂದು ಫೈಲ್ ಸೇರಲು ಹಾತೊರೆಯುತ್ತಿತ್ತು. ಚೇರಿನ ಮೇಲೆ ಧ್ಯಾನಸಕ್ತ ಮುಗುಳ್ನಗೆಯ ಮೂರ್ತಿ ಸದಾ ಕಾಣುತ್ತಿತ್ತು.

ಇವೆಲ್ಲದರ ನಡುವೆಯೇ ಮಾತಿಗೆ ಕೂತರೆ ಅದೇ ಬತ್ತದ ಉತ್ಸಾಹ, ಮಾಸದ ಮುಗುಳ್ನಗೆ, ಆಳವಾದ ವಿವರಗಳು ಹಾಗೂ ಮುಗಿಯದ ಆತ್ಮೀಯತೆ. ಈ ಸ್ಥಿತಿಯಲ್ಲಿ ಅವರನ್ನು ಕಂಡಾಗಲೆಲ್ಲಾ ಒಂದು ಆಶ್ಚರ್ಯ. ’ಎಲ್ಲಿಂದ ಹೊತ್ತು ತರುತ್ತಾರೆ ಈ ಜೀವನೋತ್ಸಾಹವನ್ನು’ ಎಂದು. “ಈ ರೀತಿ ದಿನಪೂರ್ತಿ ಕುರ್ಚಿಯಲ್ಲಿ ಕುಳಿತುಕೊಂಡು ಬರೆಯುವಾಗ ಬೆನ್ನು ನೋವು  ಬರುವುದಿಲ್ಲವೇ” ಎಂದು ಒಮ್ಮೆ ಕೇಳಿದೆ. “ನೋವು ಬಂದಾಗ ರೆಸ್ಟ್ ಮಾಡುತ್ತೇನೆ” ಎಂದರು. ಪರಿಹಾರ ಇಷ್ಟು ಸುಲಭವೇ ಎಂದುಕೊಂಡೆ.

ಒಂದಷ್ಟು ವರ್ಷಗಳ ಹಿಂದೆ ಪವಿತ್ರ ಗುರುವಾರದ ಬಗ್ಗೆ ಪ್ರಜಾವಾಣಿಯಲ್ಲಿ ಲೇಖನ ಬರೆಯಲು ಆರಂಭಿಸಿದ್ದೆ. ಆಗ ನಮ್ಮ ಸಿ ಎಸ್ ಐನವರು ಪವಿತ್ರ ಗುರುವಾರವನ್ನು ಹೇಗೆ ಆಚರಿಸುತ್ತಾರೆ ಎಂಬ ಪ್ರಶ್ನೆ ಮೂಡಿತು. ನನ್ನ ಅನೇಕ ಗೆಳೆಯರಿದ್ದರೂ ಲೀಲಾವತಿ ಅವರನ್ನು ಕೇಳೋಣ ಎಂದುಕೊಂಡು ಫೋನ್ ಮಾಡಿದೆ. ಅದೇ ಅವರೊಟ್ಟಿಗಿನ ನನ್ನ ಮೊದಲ ಸಂವಾದ. ವಿವರಗಳನ್ನು ಹೇಳಿದ ಬಳಿಕ “ಆಚರಣೆಗಳ ಬಗ್ಗೆ ಏಕೆ ಬರೀತಿಯಪ್ಪ? ಯೇಸುವಿನ ಆ ಕಾರ್ಯದ ಹಿಂದಿನ ಅರ್ಥ, ಸದ್ದುದೇಶದ ಬಗ್ಗೆ ಬರಿ ಸಾಕು” ಎಂದರು. ನನಗೂ ಅದು ಸರಿಯೆನಿಸಿತು. 

ಮುಂದೆ ನಮ್ಮ ಕಾರ್ಯಕ್ರಮಗಳಿಗೆಲ್ಲಾ ಆಹ್ವಾನ ಕೊಡುತ್ತಿದ್ದೆ. ಕರೆದ ಕಾರ್ಯಕ್ರಮಗಳಿಗೆ ಬಂದರು. ಒಂದು ಕಾರ್ಯಕ್ರಮದಲ್ಲಿ ಅವರನ್ನೂ, ಸಿಸ್ಟರ್ ಜಸಿಂತಾರವರನ್ನು ಒಟ್ಟಿಗೆ ಸನ್ಮಾನಿಸಿದ ನೆನಪು. ಮೊನ್ನೆಯ ’ಅಂಜೆನು’ ಕಾರ್ಯಕ್ರಮಕ್ಕೂ ಕರೆಯಲು ಹೋದಾಗ ಬಹಳ ಹೊತ್ತು ಮಾತನಾಡಿಸಿದರು. ಕಾರ್ಯಕ್ರಮಕ್ಕೂ ಬಂದು ಕೂತು ಮಧ್ಯೆ ಎದ್ದು ಹೋದರಂತೆ. ಪೂರ್ತಿ ಕಾರ್ಯಕ್ರಮಕ್ಕೆ ಇರಲಾಗಲಿಲ್ಲ ಎಂದು ವಿಷಾದ ವ್ಯಕ್ತಪಡಿಸಿದ್ದರು. ಆ ವಯಸ್ಸಿನಲ್ಲೂ ಆಟೋದಲ್ಲಿ ಬಂದು ಹೋದ ಅವರ ಬದ್ಧತೆ, ಪ್ರೀತಿಗೆ ಬೆಲೆಯುಂಟೇ?. 

2
ವರ್ಷಗಳ ಹಿಂದೆ ನಮ್ಮ ದೇವಾಲಯದಲ್ಲಿನ ರಾಜ್ಯೋತ್ಸವ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಬಂದಿದ್ದರು, 2 ಮಹಡಿ ಹತ್ತಿ ಬಂದಿದ್ದು ಕಷ್ಟವಾಯಿತೇ ಎಂದು ಕೇಳಿದರೆ, “ಮೊದಲ ಮಹಡಿಯಲ್ಲಿನ ದೇವಾಲಯದ ಪೀಠ ಚೆನ್ನಾಗಿದೆ” ಎನ್ನಬೇಕೆ?

ವೈದ್ಯಕೀಯ ಪದವಿಯಲ್ಲಿ ಸ್ವರ್ಣ ಪದಕ ಹಾಗೂ ತಮ್ಮ ಧೀರ್ಘ ವರ್ಷಗಳ ಕಾಲದ ವೃತ್ತಿಯಲ್ಲಿ ಒಳ್ಳೆಯ ಹೆಸರು ಮಾಡಿದ್ದು ಅವರ ಹೆಗ್ಗಳಿಕೆ ಗಳಲ್ಲಿ ಒಂದು. ನಿಜವಾದ ಸೇವಾಭಾವದಿಂದ ಯಾರೂ ಇಚ್ಛಿಸದ ಸ್ಥಳಗಳಲ್ಲಿಯೇ ಹೆಚ್ಚಾಗಿ ಸೇವೆ ಮಾಡಿದ್ದರು ಎಂಬ ಮಾಹಿತಿಯೇ ಅವರ ಬಗ್ಗೆ ಧನ್ಯತೆಯನ್ನು ಮೂಡಿಸುತ್ತದೆ.       

ಕನ್ನಡ ಕ್ರೈಸ್ತರಾದ ನಾವು ಅವರನ್ನು ಮತ್ತಷ್ಟು ಧನ್ಯತೆಯಿಂದ ನೆನಸಿಕೊಳ್ಳಬೇಕಾಗಿದೆ. ಅದಕ್ಕೆ ಮೊದಲ ಪ್ರಮುಖ ಕಾರಣ ಬೈಬಲ್ ಭಾಷಾಂತರದಲ್ಲಿನ ತೊಡಗುವಿಕೆ. ಅಂತೆಯೇ ಅನೇಕ ಬೈಬಲ್ ಆಧಾರಿತ ಲೇಖನಗಳು ಮಹಿಳಾ ದೃಷ್ಟಿಕೋನದ ಬರವಣಿಗೆಗಳು ಅಪರೂಪವಾದದ್ದು.       

ಎಲ್ಲಾ ಸಾಧನೆಗಳ ನಡುವೆ ನೆನಪಿನಲ್ಲಿ ಉಳಿಯುವಂತದ್ದು ಅವರ ಸ್ವಭಾವ ಹಾಗೂ ಶ್ರಮ- ಶ್ರದ್ಧೆ. 88ರ ಹರೆಯದಲ್ಲೂ ತೋರುತ್ತಿದ್ದ ಬದ್ಧತೆ ನಿಜಕ್ಕೂ ಅನುಕರಣೀಯ. ಕಳೆದ ವರ್ಷ ಅವರು ಬರೆಯುತ್ತಿದ್ದ ಸಿರಿಧಾನ್ಯದ ಬಗ್ಗೆಗಿನ ಪುಸ್ತಕಕ್ಕೆ ಅದರ ಬಗ್ಗೆ ಆಸಕ್ತಿ ಇದ್ದ ನನ್ನ ಹೆಂಡತಿಯಿಂದ ಒಂದಷ್ಟು ಮಾಹಿತಿಗಳನ್ನು ಪಡೆದುಕೊಂಡಿದ್ದರು. ಪುಸ್ತಕ ಬಿಡುಗಡೆಯಾದಾಗ ಕರೆ ಮಾಡಿ ಅದರ ಪ್ರತಿಗಳನ್ನು ಕೊಟ್ಟಿದ್ದರು. ತಮ್ಮ ಅಪಾರ ಜ್ಞಾನದ ನಡುವೆ ಮಾಹಿತಿಗಳು ಎಲ್ಲಿಂದ ಬಂದರೂ ಸ್ವೀಕರಿಸುವ ವಿನಯ ಅವರಲ್ಲಿತ್ತು.        

ಹೀಗೆ ಎಷ್ಟೋ ಕೆಲಸಗಳು ಬಾಕಿ ಉಳಿದು ಬಿಡುತ್ತವೆ. “ಅಂಜೆನು ಕಾರ್ಯಕ್ರಮದ ಮಧ್ಯೆ ಹೊರಟೆ ಆದ್ದರಿಂದ ಸಿಡಿ ಬಂದರೆ ಮತ್ತೆ ನೋಡೋಣ ಎಂದಿದ್ದರು” ಇನ್ನೆಲ್ಲಿ ನೋಡುವುದು? ಅಂತೆಯೇ ತಾವು ನಿರ್ಮಿಸಿದ್ದ ಧ್ವನಿಸುರುಳಿ ಒಂದರ ಕೊನೆಯ ಕ್ಯಾಸೆಟ್ಟನ್ನು ನನಗೆ ಕೊಟ್ಟು ಸಮಯ ಸಿಕ್ಕಾಗ ಸಿಡಿ ಗೆ ಕನ್ವರ್ಟ್ ಮಾಡಿಕೊಡು ಎಂದಿದ್ದರು. ಅದೂ ಹಾಗೆಯೇ ಉಳಿದಿದೆ.

ಯಾವುದೂ ನಿಂತ ನೀರಲ್ಲ. ಯಾರದೂ ಭರಿಸಲಾಗದ ನಷ್ಟವಿಲ್ಲದೆ ಇರಬಹುದು. ಆದರೆ ಶಿಕ್ಷಣ, ಜ್ಞಾನ, ಸೇವೆ, ಸಾಹಿತ್ಯ ಬುದ್ಧಿಮತ್ತೆ, ಹೃದಯವಂತಿಕೆ, ಅರಿವಿನ ಆಳ, ಬದ್ಧತೆ ಎಲ್ಲವೂ ಒಬ್ಬರಲ್ಲೇ ಕಾಣುವುದು ತುಸು ಕಷ್ಟವೇ. ಅಂತಹ ಸ್ವಭಾವಗಳ ಆಗರವಾಗಿದ್ದ ಡಾಕ್ಟರ್ ಲೀಲಾವತಿ ದೇವದಾಸ್ ರವರ ಆಗಲಿಕ್ಕೆ ನಿಜಕ್ಕೂ ತುಂಬಲಾರದ ನಷ್ಟವೇ.
Read more!

No comments:

Post a Comment