Thursday 13 December 2018

ನನ್ನ ಚೈನಾ ಪ್ರವಾಸ – ಭಾಗ 11/2

ವಿಶ್ವವೇ ಒಂದು ಪುಸ್ತಕ, ಲೋಕ ಸಂಚಾರ ಮಾಡದಿರುವವನು ಕೇವಲ ಒಂದು ಪುಟ ಮಾತ್ರ ಓದಿದಂತೆ’ ಎಂದಿದ್ದಾರೆ ಸಂತ ಅಗಸ್ಟೀನ್. ಅವರು ಹೇಳೋ ಲೆಕ್ಕದಲ್ಲಿ ನೋಡಿದರೆ ನಾನು ಒಂದು ವಾಕ್ಯ ಕೂಡ ಓದಿಲ್ಲದಂತೆ. ಕಡೆ ಚೆನ್ನೈ, ಆ ಕಡೆ ಬಾಂಬೆ, ಇನ್ನೊಂದು ಕಡೆ ಕೇರಳ ಕೂಡ ದಾಟಿಲ್ಲ ನನ್ನ ಲೋಕಲ್ ಪಾಸ್‍ಪೋರ್ಟ್.      
.
ಹಾಗೆ ನೋಡಿದರೆ, ನನ್ನ ಹಲವು ಯುವ ಗೆಳೆಯರು ಪ್ರವಾಸಗಳನ್ನು ಮಾಡುವುದರಲ್ಲಿ ಎತ್ತಿದ ಕೈ. ಅಗಸ್ಟಿನರ ಮಾತಿನ ಲೆಕ್ಕದಲ್ಲಿ ಪ್ರತಿ ವರ್ಷ ಒಂದೊಂದೇ ಪುಟ ತುಂಬುತ್ತಿರುತ್ತಾರೆ. ಯಾವ ಊರಿನಲ್ಲಿ ಯಾವ ಹೋಟೇಲ್ ಎಷ್ಟಕ್ಕೆ ಸಿಗುತ್ತದೆ? ಯಾವ ಪ್ಲೈಟ್ ಯಾವಾಗ ಬುಕ್ ಮಾಡಬೇಕು? ಎಂಬುದನ್ನು ಕೆಲಸದ ನಡುವೆ ಯಾವಾಗ ಎಬ್ಬಿಸಿ ಕೇಳಿದರೂ, ಚಂದನದಲ್ಲಿ ಹೇಳಿದಂತೆ ’ಥಟ್’ ಎಂದು ಹೇಳುತ್ತಾರೆ, ಆಯ್ಕೆಗಳೊಂದಿಗೆ.
ಅವರಿಗೆಲ್ಲಾನಾನು ಅಷ್ಟೇನೂ ಪ್ರವಾಸಗಳನ್ನು ಮಾಡಿಲ್ಲ, ದೇಶಗಳನ್ನು ನೋಡಿಲ್ಲ ಎಂಬುದು ನನಗಿಂತ ದೊಡ್ಡ ವ್ಯಥೆ. ನನ್ನ ಲೇಖನಗಳನ್ನು ಓದುವ ಅವರು ಮೆಟ್ರೋಲಿ ಹಂಗ್ ಹೋಗಿ ಹಿಂಗೆ ಬಂದಿದ್ದನೇ ಒಳ್ಳೆ ಯುರೋಪ್ ಪ್ರವಾಸ ಕಥನ ಬಿಲ್ಡಪ್ ಕೊಟ್ಟು ಬರೀತೀರಾ, ಇನ್ನೂ ನಿಜಕ್ಕೂ ಯೂರೋಪ್ ಗೆ ಹೋದರೆ ಹೆಂಗೆ ಸಾರ್? ಎಂದು ಕಾಲು ಎಳೆಯುತ್ತಾರೆ. “ಕಾಲ ಬರುತ್ತೆ ಬಿಡಿ” ಅಂದುಕೊಂಡೆ ಕಾಲ ತಳ್ಕೊಂಡು, ಕಾಲನ್ನು ಎಳ್ಕೊಂಡು ಇಲ್ಲಿಯವರೆಗೂ ಬಂದಿದ್ದೇನೆ.
ಬುಲೆಟ್‍ನಲ್ಲಿ ಲೇಹ್ ಲಡಾಕ್ ಟ್ರಿಪ್‍ಗೆ ಹೋಗೋಣ ಬನ್ನಿ ಎಂದು ಕೇಳಿದಾಗಲೆಲ್ಲಾ ಬರುವ  ವರ್ಷ, ಬರುವ  ವರ್ಷ” ಅಂತ ಹೇಳಿರುವ ವರ್ಷ ಇನ್ನೂ ಬಂದೇ ಇಲ್ಲ. ಕೊನೆಗೆ ಇತ್ತ ಕನಕಪುರದ ಗಡಿ ಕೂಡ ದಾಟದೆ ನನ್ನ ಬುಲೆಟ್ ತನ್ನ ಏಳನೆಯ ವರ್ಷಕ್ಕೆ ಟೈರ್ ಇಟ್ಟಿದೆ (ಕಾಲು ಇಟ್ಟಿದೆ ಎನ್ನುವುದರ ವಾಹನಾರ್ಥಕ ಪದ).
ನನ್ನ ಯುವ ಮಿತ್ರರ ಪ್ರಾರ್ಥನೆಯೋ, ಹಾರೈಕೆಯೋ ಚೈನಾ ದೇಶದ ಕುನ್‍ಮಿಂಗ್ ನಗರಕ್ಕೆ ಕಾರ್ಯ ನಿಮಿತ್ತ ಹೋಗುವ ಅವಕಾಶ ಇತ್ತೀಚೆಗೆ ಸಿಕ್ಕಿತು. ಅವಕಾಶ ಇನ್ನೇನು ಕೈ ತಪ್ಪಿತ್ತು ಎನ್ನುವಷ್ಟರಲ್ಲಿ ಸದ್ಯ ಬಾಯಿಗೆ ಬಂದು ಬಿಟ್ಟಿತ್ತು.  ಇದಕ್ಕೆ ಮುಂಚೆ ನಮ್ಮ ಚಿಗುರು ಬಳಗದ ಅಂಜೆನು ಕಾರ್ಯಕ್ರಮದ ಸಾಧ್ಯತೆ, ಸಿದ್ಧತೆ, ಬದ್ಧತೆ, ಆದ್ಯತೆ, ಚಿಂತೆ ಎಲ್ಲವೂ ಇದ್ದುದರಿಂದ,  ಚೆಡ್ಡಿ, ಬನಿಯನ್ , ಸಾಕ್ಸ್‍ ಗಳನ್ನು  ಪ್ಯಾಕ್ ಮಾಡುಲು  ಶುರು ಮಾಡಿದ ನಂತರವೇ ಮೊದಲ ಪ್ರವಾಸದ ಕಾತುರ, ರೋಮಾಂಚನಗಳು ಆರಂಭವಾದದ್ದು.      

‘Where ever you go, go with all your heart’
ಎಂದ ಕನಫ್ಯೂಶಿಸ್‍ನ ಮಾತು ಎದೆ ತುಂಬಿಕೊಂಡು, ಅದೇ ಗುಂಗಿನಲ್ಲಿ ಎಲ್ಲಿ ಪಾಸ್‍ಪೋರ್ಟ್ ಮರೆತು ಬಿಡುತ್ತೇನೋ ಎಂಬ ಆತಂಕವು ವಿಮಾನದ ಮೆಟ್ಟಿಲು ಹತ್ತುವ ತನಕ ಇದ್ದೇ ಇತ್ತು. ‘What ever you do, be careful with your Passport’ ಎಂದ              ನಮ್ಮ ಆಫೀಸಿನ ಅಡ್ಮಿನ್ ಮಾತನ್ನು heartನಲ್ಲಿ by heart  ಮಾಡಿಕೊಂಡಿದ್ದೆ, ಕನಫ್ಯೂಶಿಸ್‍ನ ಕ್ಷಮೆ ಕೋರುತ್ತಾ.     

ಪಾಸ್‍ಪೋರ್ಟ್ದೇ ಒಂದು ಕಥೆ. ನಾನಿನ್ನೂ ಚಿಕ್ಕವನಿದ್ದಾಗ, I mean ವಯಸ್ಸಿನಲ್ಲಿ  ಚಿಕ್ಕವನಿದ್ದಾಗ, ಮನೆ ಮುಂದೆ ಯಾರೋ ಕಣಿ ಹೇಳುವವಳು ಬಂದಿದ್ದಳು. ನನ್ನನು ನೋಡಿದ್ದೇ ಕ್ಷಣ, “ ಹಾಲಕ್ಕಿ ನುಡಿತ್ತೈತೆ ಹಾಲಕ್ಕಿ, ಈ ಹುಡುಗನ ನಸೀಬು ದೊಡ್ಡದೈತ್ತಿ. ಆಕಾಶದಾಗ ವಿಮಾನದಾಗ ದೇಶ ದೇಶ ಸುತ್ತು ಯೋಗ ಐತ್ರಿ” ಎಂದು ಹೇಳಿ ಒಂದು ಇಡಿ ಬದಲು, ಎರಡು ಡಿ ಅಕ್ಕಿ, ತೆಂಗಿನಕಾಯಿ, ಬೆಲ್ಲ ಎಲ್ಲ ತೆಗೆದುಕೊಂಡು ಹೋಗಿದ್ದಳು. ಅದೇನು ಅಂತ ಭವಿಷ್ಯ ಹೇಳಿದಳೋ, ನಮ್ಮ ಮನೆಯಲ್ಲಿ ಎಲ್ಲರೂ ಫಾರಿನ್ ಟ್ರಿಪ್ಪಿಗೆ ಹೋಗಿ ಬಂದರೂ, ನಾನು ಮಾತ್ರ ಶಿವಾಜಿನಗರ ಟೂ ದೊಮ್ಮಲೂರು ನಡುವಿನ ಡಬಲ್ ಡೆಕ್ಕರ್‍ ಬಸ್ಸಿನ  ಮಹಡಿ ಮೀರಿ ಮೇಲೆ ಏರಲಿಲ್ಲ. ಸ್ಟಾಪ್ ಬಂದಾಗ ಕೆಳಗಂತೂ ಇಳಿದೆ.

2009
ರಲ್ಲಿ ಮಾಡಿದ್ದ ಪಾಸ್‍ಪೋರ್ಟ್‍ನಲ್ಲಿ ಒಂದು ಸಣ್ಣ ಕಲೆಯೂ ಕೂಡ ಬೀಳದಂತೆ ಜೋಪಾನವಾಗಿ ಕಾಪಾಡಿಕೊಂಡು ಬಂದಿದ್ದೆ. ನನ್ನ ಕೆಲವು ಗೆಳೆಯರು ವರ್ಷದಲ್ಲಿ ಒಂದು ಕೆಮೆಸ್ಟ್ರಿ ನೋಟ್ ಬುಕ್ ಮುಗಿಸಿ ಇನ್ನೊಂದು ಹೊಸ ಬುಕ್ ಪ್ರಾರಂಭಿಸಿದಂತೆ, ಪಾಸ್‍ಪೋರ್ಟ್  ತುಂಬಾ ವೀಸಾಗಳನ್ನು ಗುದ್ದಿಸಿಕೊಂಡು ಮುನ್ನಡೆಯುತ್ತಿದ್ದರು. ಮೊನ್ನೆ ಚೈನಾಕ್ಕೆ ವಿಸಾ ಮಾಡಿಸಲು ಕೊಟ್ಟಾಗ ಗೊತ್ತಾಗಿದ್ದು, ಕನಿಷ್ಠ 6 ತಿಂಗಳು ವ್ಯಾಲಿಡಿಟಿ ಇಲ್ಲದಿದ್ದರೆ ವಿಸಾ ಸಿಗೋಲ್ಲ ಎಂದು. ನನ್ನ ಪಾಸ್‍ಪೋರ್ಟ್ ಮಾರ್ಚಿನಲ್ಲಿ ಎಕ್ಸ್ಪೈರ್ ಆಗಲು ತುದಿಗಾಲಿನಲ್ಲಿ ನಿಂತಿತ್ತು.
ಇನ್ನೂ ವಿಸಾ ಸಿಗುವುದಿಲ್ಲ ಎಂದಾಗಲೂ ದುಃಖ ಆಗಲಿಲ್ಲ, ’ಅಂಜೆನು’ವಿನ ಸಿದ್ಧತೆ ಬದ್ಧತೆ ಇದ್ದೇ ಇತ್ತಲ್ಲ. ಆದರೂ ಪಾಸ್‍ಪೋರ್ಟ್ ರಿನಿವಲ್ ಮಾಡಿಸಲು ಬೆಂಗಳೂರಿನಲ್ಲಿ ಮೂಲ ಬೆಂಗಳೂರಿಗನಾದ ನನಗೆ ಅಪಾಯಿಂಟ್‍ಮೆಂಟ್ ಸಿಗದೆ,  ಹುಬ್ಬಳ್ಳಿಗೆ ಹೋಗಿ ಅಪ್ಲೈ ಮಾಡಿದೆ. ರಾಣಿ ಚೆನ್ನಮ್ಮ ಸರ್ಕಲ್ಲಿನ ಬಳಿ ಮೀನು ಊಟ ಮಾಡಿ, ಬಸ್ ಸ್ಟ್ಯಾಂಡ್ ಬಳಿ  20 ದಿನಗಳ ವ್ಯಾಲಿಡಿಟಿ ಇರುವ ಮಿಶ್ರ ಪೇಡ ತೆಗೆದುಕೊಂಡ ಭಾಗ್ಯದ ಮುಂದೆ ವಿಸಾ ಬರುತ್ತೋ ಇಲ್ಲವೋ ಎಂಬುದು ಪಕ್ಕಕ್ಕೆ ಸರಿದು, ಧಾರವಾಡದಲ್ಲಿ ವರಕವಿ ಬೇಂದ್ರೆ ಮನೆ ನೋಡಿದ ತೃಪ್ತಿ ಪ್ರಧಾನವಾಯಿತು.

ಹುಬ್ಬಳ್ಳಿ ಪಾಸ್‍ಪೋರ್ಟ್ ಕಛೇರಿಯ ಸಿಬ್ಬಂದಿಗಳ ಕಾರ್ಯದಕ್ಷತೆಯಿಂದ  ಅಚ್ಚರಿ ಎಂಬಂತೆ ನಾಲ್ಕು ದಿನದಲ್ಲಿ ಪಾಸ್‍ಪೋರ್ಟ್ ಬಂದು, 10 ದಿನದಲ್ಲಿ ವಿಸಾ ಸಿಕ್ಕೇ ಬಿಟ್ಟಿತು. ಅದೆಷ್ಟೇ ಪ್ರಯತ್ನಪಟ್ಟರೂ ಆನಂದಭಾಷ್ಪ ಮಾತ್ರ ಬರದೇ ಹೋಯಿತು. 

ಇನ್ನು ಚೈನಾಗೆ ಹೊರಡುವ ದಿನವೂ ಆಫೀಸಿನಿಂದ ಹಿಂದಿರುಗಿದಾಗ ಸಮಯ ಐದು ಮೂವತ್ತು. ಮನಸ್ಸಲ್ಲಿ ಎಂಥದೋ ಭಾರ. ನನ್ನೆಲ್ಲಾ ಅಗತ್ಯತೆ, ಅನಿವಾರ್ಯತೆ ಅಭದ್ರತೆಯನ್ನು ಚೆನ್ನಾಗಿ ಬಲ್ಲ ಮನೆಯವರು ಎಲ್ಲವನ್ನೂ ಪ್ಯಾಕ್ ಮಾಡಿಟ್ಟಿದ್ದರು. ಹೋಗಿ ತಲೆ ಕೂದಲು ಕಟಿಂಗ್ ಮಾಡಿಸಿಕೊಂಡು ಬಂದರೂ ಅದೇ ಭಾರ. ಇನ್ನು ಹೊರಡುವ ಮುನ್ನ ಬ್ಯಾಗ್ ತೂಕ ಹಾಕಿ ನೋಡಿ ಏರ್‍ಲೈನ್‍ರವರು ವಿಧಿಸಿದ ಮಿತಿಗಿಂತ 15 ಕೆಜಿ ಕಡಿಮೆ ಇದೆ ಎಂದು ತಿಳಿದ ಮೇಲೆಯೇ ಮನಸ್ಸು ಒಂದಷ್ಟು ಹಗುರವಾಗಿದ್ದು.    

ಟ್ರಾಫಿಕ್ಕಿನ ಭಯದಿಂದಾಗಿ ಒಂದಷ್ಟು ಬೇಗನೇ ಓಲಾ ಹಿಡಿದು ವಿಮಾನ ನಿಲ್ದಾಣಕ್ಕೆ ಹೊರಟೆ. ಎಲ್ಲಾ ಟ್ರಾಫಿಕ್ ನಡುವೆಯೂ ಕೇವಲ 50 ನಿಮಿಷದಲ್ಲಿ ಏರ್ಪೋಟ್ ತಲುಪಿಸಿದ ಓಲಾ ಡ್ರೈವರ್ ನನ್ನ ಕಣ್ಣಿಗೆ  ಒಬ್ಬ ಪೈಲೆಟ್‍ನಂತೆ ಗೋಚರಿಸಿದ. ಮಿಕ್ಕ ಚಿಲ್ಲರೆ ಇಟ್ಟುಕೊಳ್ಳಲು ಹೇಳಿದಾಗ ಮಾತ್ರ ವಿಮಾನದ ಏರ್ ಹೋಸ್ಟಸ್‍ನಂತೆ ಸುಂದರ ನಗೆ ನಕ್ಕ.   

ಚೆಕ್ಕಿಂಗ್‍ನಲ್ಲಿ ಒಟ್ಟು ಮೂರು ಬಾರಿ ಸೆಕ್ಯೂರಿಟಿ ಕ್ಲಿಯರೆನ್ಸ್ ಫೇಲ್ ಆದೆ. ಎಲ್ಲವನ್ನೂ ಬ್ಯಾಗಿನಲ್ಲಿ ಹಾಕಬೇಕು ಎಂದು ಹೇಳಿದ ಮೇಲೂ, ಒಮ್ಮೆ ಐದು ರೂಪಾಯಿಯ ನಾಣ್ಯ, ಇನ್ನೊಮ್ಮೆ ಜಪಸರ, ಮಗದೊಮ್ಮೆ ಸಣ್ಣ ಕೀ ಪ್ಯಾಂಟಿನಲ್ಲಿ ಸಿಕ್ಕಿ ಮರಳಿ ಯತ್ನವ ಮಾಡು ಎಂಬಂತೆ ಸ್ಟ್ರಿಕ್ಟ್ ಆಫೀಸರ್ ನನ್ನನ್ನು ಮತ್ತೆ ಮತ್ತೆ ವಾಪಸ್ ಕಳುಹಿಸಿದ. ’ಪೆಹಲಾ ಬಾರ್ ಹೇ ಕ್ಯಾ’ ಎಂಬ ಅವನ ಕರ್ಕಶ ಪ್ರಶ್ನೆಗೆ ನಾನು “ಹಾ” ಅಂದದ್ದು ಹಿಂದಿಯಲ್ಲೋ ಕನ್ನಡದಲ್ಲಿ ನನಗೇ ಕನ್ಫ್ಯೂಷನ್.

579 ಪದಗಳ ನಂತರವೂ ಚೈನಾ ಪ್ರವಾಸದ ಈ ಕಥನ ಬೆಂಗಳೂರು ವಿಮಾನ ನಿಲ್ದಾಣ ದಾಟದೆ ಇರುವುದು ಓದುಗಾರದ ನಿಮ್ಮ ದೌರ್ಭಾಗ್ಯ. ಬಲಗಾಲಿಟ್ಟು ವಿಮಾನದೊಳಗೆ ಹೋದಾಗಿನಿಂದ ಹಿಡಿದು ಎಡಗಾಲಿನ ಮೇಲೆ ಭಾರವಾದ ಸೂಟ್ ಕೇಸ್ ಬಿದ್ದ ಸಂಪೂರ್ಣ ಕಥಾನಕವನ್ನು ಮುಂದಿನ ಭಾಗದಲ್ಲಿ ಖಂಡಿತ ಮುಗಿಸುವೆ. ನಿಹೌ, 你好.

No comments:

Post a Comment