Wednesday 4 September 2013

ಓದಬೇಕು ಮಿತ್ರರೇ......

ಒಂದು ಪುಸ್ತಕ, ಕಾದಂಬರಿ, ಆತ್ಮ ಚರಿತ್ರೆಯನ್ನು ಓದುತ್ತಿದ್ದರೆ ಆ ಕಥಾವಸ್ತು, ವ್ಯಕ್ತಿಗೆ ಮೀರಿದ ವಸ್ತುಗಳು ಅದರೊಂದಿಗೆ ನಮ್ಮ ಭಾವನಾ ಪ್ರಪಂಚಕ್ಕೆ ದೊರಕುತ್ತದೆ. ಕುವೆಂಪುರವರ ಮಲೆಗಳಲ್ಲಿ ಮದುಮಗಳು ಕೇವಲ ಒಂದು ಹಳ್ಳಿಯ, ಒಂದೆರಡು ಕುಟುಂಬದ, ಒಂದು ಕಾಲದ ಕಥೆಯಾಗದೆ, ಇಡೀ ಮಲೆನಾಡಿನ ಜೀವನ ಶೈಲಿ, ಕಾಡಿನ ಸೊಬಗು, ಭಾಷೆಯ ಸೊಗಡನ್ನು ಅದ್ಭುತವಾಗಿ ತೆರೆದಿಡುತ್ತದೆ. ಮಲೆನಾಡನ್ನು ನೋಡದವನೂ ಸಹಾ ಅಲ್ಲಿನ ಪಾತ್ರಗಳೊಂದಿಗೆ ಅಲ್ಲಿನ ಹೊಲಗದ್ದೆ, ಕಾಡುಗಳಲ್ಲಿ ಓಡಾಡುತ್ತಾ ಮಳೆಯಲ್ಲಿ ನೆಂದಂತ ಅನುಭವ ಸಿಗುತ್ತದೆ
***************************************************************************
ಮೊನ್ನೆ, ಲೇಖಕ ವಿಕ್ರಮ್ ಸೇಥ್‌ಗೆ ಪೆಂಗ್ವಿನ್ ಪ್ರಕಾಶನ ಸಂಸ್ಥೆ ನೀಡಿದ ಮುಂಗಡವನ್ನು ವಾಪಸ್ ಕೇಳಿತು ಎಂಬ ಸುದ್ದಿ ದಿನಪತ್ರಿಕೆಯಲ್ಲಿತ್ತು. ಆ ಸಂಸ್ಥೆ ಲೇಖಕನಿಗೆ ಕೊಟ್ಟಿದ್ದ ಹಣ 9.5 ಕೋಟಿಯಷ್ಟು. ಅದು ಮುಂಗಡ, ಅಂದರೆ ಅಡ್ವಾನ್ಸ್ ಅಷ್ಟು. ಮುಂಗಡದ ಹಣವೇ ಅಷ್ಟು ಎಂದ ಮೇಲೆ ಪೂರ್ತಿ ಹಣ ಇನ್ನೆಷ್ಟಿರಬೇಕು? ಇನ್ನೂ ಆ ಪುಸ್ತಕದಿಂದ ಬರಬಹುದಾದ ಲಾಭವೆಷ್ಟಿರಬಹುದು? ಅಂದರೆ ಇನ್ನೂ ಬರೆದು ಮುಗಿಯದ ಆ ಪುಸ್ತಕವನ್ನು ಕೊಳ್ಳುವವರು ಎಷ್ಟಿರಬಹುದು? ಅಷ್ಟು ಜನ ಕೊಂಡು ಓದುತ್ತಾರೆ ಎಂಬುದೇ ಸಂತೋಷದ ವಿಷಯ ಅಚ್ಚರಿಯ ವಿಷಯವೂ ಹೌದು. ಏಕೆಂದರೆ ನನ್ನ ಬಳಿಯೇ ಇರುವ ಎಷ್ಟೋ ಕನ್ನಡ ಪುಸ್ತಕಗಳನ್ನು ತೆಗೆದು ಪ್ರಾರಂಭದಲ್ಲಿ ಸಿಗುವ ಪ್ರತಿಗಳ ವಿವರವನ್ನು ನೋಡಿದಾಗ ಬಹಳಷ್ಟು ಪುಸ್ತಕಗಳು 1000 ಎಂದಿವೆ. ದುಂಡಿರಾಜರ ಹನಿಗವನದ ತರಹ ಪುಸ್ತಕಗಳು 2000 ಅಚ್ಚಾಗುತ್ತವೆ. ನಾಲ್ಕೈದು ಕೋಟಿಯಷ್ಟಿರುವ ಕರ್ನಾಟಕದ ಜನಸಂಖ್ಯೆಯಲ್ಲಿ ಜನಪ್ರಿಯ ಪುಸ್ತಕಗಳೂ ಸೇರಿದಂತೆ ಓದುವುದು 2000 ಜನರು ಮಾತ್ರವೇ?? ಸುಮಾರು 17 ಮರು ಮುದ್ರಣಗಳನ್ನು ಕಂಡ ಕುವೆಂಪುರವರ ಮಲೆಗಳಲ್ಲಿ ಮದುಮಗಳು ಕಾದಂಬರಿಯನ್ನು ಓದಿದ ಅಷ್ಟೂ ಜನರು ಏನಾದರು? ಬೇಂದ್ರೆ, ಬೈರಪ, ಅನಂತಮೂರ್ತಿ, ಮಾಸ್ತಿ, ಮುಂತಾದವರ ಪುಸ್ತಕಗಳನ್ನು ಮುಗಿಬಿದ್ದು ಓದುತ್ತಿದ್ದ ಆ ಓದುವ ಪರಂಪರೆ ಎಲ್ಲಿ ಹೋಯಿತು? ನಮ್ಮ ನಾಯಕರ, ಸಿನಿಮಾ ನಟ ನಟಿಯರ, ಸಮಾಜದ ಪ್ರಮುಖ ವ್ಯಕ್ತಿಗಳ ಮಾತು, ಸಂದರ್ಶನಗಳನ್ನು ನೋಡುತ್ತಿದ್ದರೆ ಅರಿವಾಗುತ್ತದೆ. ಅವರೆಲ್ಲಾ ಹೆಚ್ಚು ಓದುತ್ತಿಲ್ಲ ಎಂಬ ಸಂಗತಿ.


ಈಗ ಎಲ್ಲದಕ್ಕೂ ಟ್ರಾಫಿಕ್, ಕೆಲಸ, ಟಿ.ವಿಯನ್ನು ದೂಷಿಸುವುದು ಅಭ್ಯಾಸವಾಗಿ ಹೋಗಿದೆ ನಮಗೆ. ಇಂದು ಯಾರಾದರೂ ಎಲ್ಲಿಗಾದರೂ ತಡವಾಗಿ ಬಂದರೆ ತಟ್ಟನೆ ಕೊಡುವ ಉತ್ತರ ತುಂಬಾ ಟ್ರಾಫಿಕ್, ಟ್ರಾಫಿಕ್ ಎನ್ನುವುದು ನಿಜವಾದರೂ ಬೆಂಗಳೂರಿನ ಮಟ್ಟಿಗಂತೂ ಇದು ಸುಮಾರು ಹತ್ತು ವರ್ಷದಿಂದ ಇರುವಂಥದ್ದೆ. ಇಂದು ನಾವೆಲ್ಲಿಗೆ ಹೊರಟರೂ ಆ ಟ್ರಾಫಿಕ್ ನಮ್ಮ ಪ್ರಯಾಣದ ಲೆಕ್ಕಚಾರದಲ್ಲಿ ಇದ್ದೆ ಇದೆ. ಆದರೂ ಟ್ರಾಫಿಕ್ಕನ್ನು ಸಮಜಾಯಿಸಿ ಕೊಡುವುದು ಇನ್ನು ಬಿಟ್ಟಿಲ್ಲ. ನಮ್ಮ ಟ್ರಾವೆಲ್ಸ್‌ನ ಡ್ರೈವರುಗಳು, ಕಾರ್ಖಾನೆ, ಕಛೇರಿ, ಶಾಲೆ ವಿದ್ಯಾರ್ಥಿಗಳೆಲ್ಲಾ ತಮ್ಮ ಕೆಲಸ, ಶಾಲೆಗಳಿಗೆ ಸರಿಯಾಗಿಯೇ ಹೋಗುತ್ತಾರೆ, ಏಕೆಂದರೆ ಅಲ್ಲಿಗೆ ಹೋಗುವಾಗಲೆಲ್ಲಾ ಟ್ರಾಫಿಕ್‌ನ ಲೆಕ್ಕಾಚಾರಗಳೊಂದಿಗೆ ನಾವು ಪ್ರಯಾಣ ಮಾಡುವುದು. ಅದೇ ಸಭೆ ಸಮಾರಂಭ, ದೇವಾಲಯ, ಪೂಜೆಗಳಿಗೆ ಹೋಗುವಾಗ ಮಾತ್ರ ತಡವಾಗಿ ಹೋಗುವುದಕ್ಕೆ ಟ್ರಾಫಿಕ್ ನೆಪವಾಗುತ್ತದೆ.

ಅಂತೆಯೇ ಈ ನಮ್ಮ ಓದುವ ಅಭ್ಯಾಸ, ಹವ್ಯಾಸ ಕಡಿಮೆಯಾಗುತ್ತಿರುವುದಕ್ಕೆ ನಾವು ಕೊಡುತ್ತಿರುವ ನೆಪ ಅದೇ. ಕೆಲಸ, ಸಮಯದ ಅಭಾವ ಇತ್ಯಾದಿ. ಆದರೆ ನಿಜಕ್ಕೂ ಓದು ಎನ್ನುವುದರ ಅರ್ಥವೇ ಬದಲಾಗತೊಡಗಿದೆಯೇನೋ ಎಂದೆನಿಸುತ್ತಿದೆ. ಇಂದು ಓದು ಎನ್ನುವುದು ಶಾಲೆಯ ಓದು ಬರಹ ಎನ್ನುವುದಕ್ಕಷ್ಟೇ ಸೀಮಿತವಾಗುತ್ತದೆ. ಅದು ಬಿಟ್ಟರೆ ಓದು ಬೇಕಾಗಿರುವುದು ಮಾಹಿತಿಗಾಗಿ ಮಾತ್ರ. ಹಿಂದೆಲ್ಲಾ ಓದುವುದು ಎನ್ನುವುದಕ್ಕೆ ಅದೆಷ್ಟು ಆಯಾಮಗಳಿದ್ದವು. ಓದು ಜ್ಞಾನಾರ್ಜನೆಯ ಪ್ರಮುಖ ಸಾಧನವಾದರೆ, ಸಂತೋಷಕ್ಕಾಗಿ, ಮನೋರಂಜನೆಗಾಗಿ, ಜೀವನಪ್ರೀತಿ, ಕೊನೆಗೆ ಬೇಸರ ಕಳೆಯುವಿಕೆಗೂ ಮುಖ್ಯವಾದ ಮಾಧ್ಯಮವಾಗಿತ್ತು. ಇವುಗಳ ಜೊತೆ ಜೊತೆಗೆ ಮಾಹಿತಿ, ತೃಪ್ತಿ, ಆತ್ಮವಿಶ್ವಾಸ ಎಲ್ಲವನ್ನೂ ಓದು ನೀಡುತ್ತಿತ್ತು. ಆದರೆ ಇಂದು ಇವಕ್ಕೆಲ್ಲಾ ಬೇರೆ ಬೇರೆ ಮಾಧ್ಯಮಗಳು ಬಂದು ಕೂತಿವೆ. ಜ್ಞಾನ, ಮಾಹಿತಿಗಳು ಕಂಪ್ಯೂಟರ್ ಮೂಲಕ ಬೆರಳ ತುದಿಯಲ್ಲಿವೆ. ಮನೋರಂಜನೆಯ ನೆಪದಲ್ಲಿ ಟಿ.ವಿ. ನಮ್ಮೆನ್ನೆಲ್ಲಾ ಆಳುತ್ತಾ ಮನೆಯಲ್ಲಿ ಕೆಡವಿ ಬೀಳಿಸಿವೆ. ಸಿಗುತ್ತಿರುವ ಸಾವಿರ ಸಾವಿರ ಸಂಬಳದಲ್ಲೇ ತೃಪ್ತಿ, ಆತ್ಮ ವಿಶ್ವಾಸಗಳನ್ನು ಕಂಡುಕೊಳ್ಳುತ್ತಾ, ಸಿಕ್ಕಿದ್ದನ್ನು ಕೊಂಡುಕೊಳ್ಳುತ್ತಿರುವಾಗ ಓದಿನಿಂದ ಸಿಗುವ ಲಾಭವಾದರೂ ಏನು ಎಂಬುದು ಮನಸಿನಾಳದ ಪ್ರಶ್ನೆ.

ಓದುವುದಕ್ಕೆ ಸಮಯವಿಲ್ಲವೆನ್ನುವುದು ಸ್ವಲ್ಪ ಮಟ್ಟಿಗೆ ನಿಜವೆನಿಸಿದರೂ ಅದು ಸುಳ್ಳೂ ಹೌದು. ನಮ್ಮ ಬಹುತೇಕ ಗೆಳೆಯರು ಚಾಟ್‌ಗಳಲ್ಲಿ, ಫೇಸ್ ಬುಕ್ಕಿನಲ್ಲಿ ಟ್ವಿಟ್ಟರ್‌ನಲ್ಲಿ, ಇಂದು ಸಿಗುತ್ತಾರೆ. ಸಿಗುವುದೇನು ಸಾಕಷ್ಟು ಸಮಯ ಅಲ್ಲಿ ಕಳೆಯುತ್ತಾರೆ. ಅದು ಕಂಪ್ಯೂಟರ್‌ನಲ್ಲಿ ಕೆಲಸ ಉದ್ಯೋಗ ಮಾಡುವವರಿಗೆ ಸಿಗುವ ಸೌಲಭ್ಯ. ಕೆಲಸ ಮಾಡುತ್ತಿರುವಂತೆಯೇ ಒಂದು ಸುತ್ತು ಇವೆಲ್ಲದರ ಬಳಿಗೆ ಹೋಗಿ ಬಂದುಬಿಡಬಹುದು. ಅಷ್ಟೇ ಸಮಯದಲ್ಲಿ ಒಂದು ಪುಸ್ತಕವನ್ನು ಓದಲು ಸಾಧ್ಯವಿಲ್ಲ ಅಲ್ಲವೇ, ಅವಕಾಶವೂ ಇಲ್ಲ. ಆದರೆ ಇಂದು ನಾವೆಲ್ಲ ಓದುವುದಿಲ್ಲ ಎನ್ನುವುದಕ್ಕೆ ಸಮಯವಿಲ್ಲವೆನ್ನುವುದು ಮಾತ್ರ ಕಾರಣವೇನಲ್ಲ. ಉದ್ಯೋಗಕ್ಕೆ, ನಮ್ಮ ಮಾಹಿತಿಗಷ್ಟೇ ನಮ್ಮ ಓದು ಸೀಮಿತವಾಗಿದೆಯಷ್ಟೇ.ನಮ್ಮ ಗೆಳೆಯರ ನಡುವಲ್ಲೇ ಒಂದು ವಿಷಯದ ಬಗ್ಗೆ, ಪುಸ್ತಕಗಳ ಬಗ್ಗೆ ಮಾತನಾಡೋಣವೆಂದರೆ ಪುಸ್ತಕ, ಕಾದಂಬರಿ, ಕಥೆಯಿರಲಿ ಪತ್ರಿಕೆ ಮನೆಗೆ ತರೆಸಿ ಓದುವವರೇ ಹತ್ತಕ್ಕಿಂತ ಹೆಚ್ಚಾಗಿ ಸಿಗುವುದು ಕಷ್ಟವಾಗಿದೆ. ಟಿ.ವಿ.ಗಳ ಬ್ರೇಕಿಂಗ್ ನ್ಯೂಸ್‌ಗಳೇ ಇಂದಿನ ಸುದ್ದಿಗಳ ಪ್ರಮುಖ ಮೂಲ. ನಾವೇಕೆ ಓದಬೇಕು? ಓದುವುದರಿಂದ ಬರುವ ಲಾಭವಾದರೂ ಏನು ಎಂಬುದಕ್ಕೆ ನಿಖರವಾದ ಉತ್ತರ ಹೊಳೆಯುತ್ತಿಲ್ಲವಾದರೂ ಒಂದು ಶಾಲೆ, ವಿಶ್ವವಿದ್ಯಾಲಯ ನೀಡುವಂಥ ಜ್ಞಾನ ಸಂಪಾದನೆ ಓದಿನಿಂದಲೂ ಸಾಧ್ಯವಿದೆ. ತಂದೆ ತಾಯಿ, ಕುಟುಂಬ ಮನೆಯ ವಾತಾವರಣದಿಂದ ದೊರಕುವ ಸಂಸ್ಕಾರ ಓದಿನಿಂದಲೂ ಸಾಧ್ಯ. ನಮ್ಮ ಮನೆಯ ಮುಂದಿನ ಕಸಗುಡಿಸುತ್ತಾ ಪಕ್ಕದ ಮನೆಯ ಮುಂದೆ ತಳ್ಳಬಾರದೆಂಬ ಸೂಕ್ಷ್ಮ ಗ್ರಹಿಕೆಗಳು, ರಸ್ತೆಯಲ್ಲಿ ವಾಹನ ಓಡಿಸುವಾಗ ನಮ್ಮ ಬದಿ ಬಿಟ್ಟು ಮತ್ತೊಂದು ಬದಿಗೆ ಹೋದರೆ ಎದುರಿನಿಂದ ಬರುವವರಿಗೆ ತೊಂದರೆಯಾಗುತ್ತದೆ, ಟ್ರಾಫಿಕ್ ಅಡಚಣೆಯಾಗುತ್ತದೆ ಎಂಬ ಸಂವೇದನೆಯುಳ್ಳ ಮನಸ್ಸು, ನೊಂದ ಗೆಳೆಯನಿಗೆ ನೆರವಾಗುವ ಮಿಡಿತ, ಎದುರಿಸುತ್ತಿರುವ ಅನ್ಯಾಯ, ದೌರ್ಜನ್ಯವನ್ನು ಸಣ್ಣದಾಗೆ ಪ್ರತಿಭಟಿಸುವ ತುಡಿತ, ಇಂಥ ಅನೇಕವುಗಳನ್ನು ಪುಸ್ತಕಗಳ ಓದು ನಮಗೆ ಒದಗಿಸಿಕೊಡುತ್ತದೆ. ಓದಿದನ್ನು ಗ್ರಹಿಸಿ, ಅಳವಡಿಸಿಕೊಳ್ಳದಿದ್ದರೆ ಪುಸ್ತಕದ ಬದನೆಕಾಯಿ ಆಗುವುದು ಇದೆ. ಅದು ಮತ್ತೊಂದು ವಿಷಯ. ಇಷ್ಟೆಲ್ಲಾ ಆಗಿ ಏನಾಗಬೇಕಾಗಿದೆ, ಇದರಿಂದ ಜೀವನ ನಡೆವುದೇ? ಜೀವನಕ್ಕೆ ಏನು ಲಾಭ ಎಂಬ ಪ್ರಶ್ನೆ ಬಂದರೆ ಅದಕ್ಕೆ ಉತ್ತರವಿಲ್ಲ. ಓದುವ ರೂಢಿ ರುಚಿ ಬೆಳೆಸಿಕೊಂಡಿರುವ ಹಾಗೆ ಕೇಳುವುದೂ ಇಲ್ಲ. ಬಲ್ಲವನೇ ಬಲ್ಲ ಬೆಲ್ಲದ ರುಚಿ ಎಂಬಂತೆ.

ಒಂದು ಪುಸ್ತಕ, ಕಾದಂಬರಿ, ಆತ್ಮ ಚರಿತ್ರೆಯನ್ನು ಓದುತ್ತಿದ್ದರೆ ಆ ಕಥಾವಸ್ತು, ವ್ಯಕ್ತಿಗೆ ಮೀರಿದ ವಸ್ತುಗಳು ಅದರೊಂದಿಗೆ ನಮ್ಮ ಭಾವನಾ ಪ್ರಪಂಚಕ್ಕೆ ದೊರಕುತ್ತದೆ. ಕುವೆಂಪುರವರ ಮಲೆಗಳಲ್ಲಿ ಮದುಮಗಳು ಕೇವಲ ಒಂದು ಹಳ್ಳಿಯ, ಒಂದೆರಡು ಕುಟುಂಬದ, ಒಂದು ಕಾಲದ ಕಥೆಯಾಗದೆ, ಇಡೀ ಮಲೆನಾಡಿನ ಜೀವನ ಶೈಲಿ, ಕಾಡಿನ ಸೊಬಗು, ಭಾಷೆಯ ಸೊಗಡನ್ನು ಅದ್ಭುತವಾಗಿ ತೆರೆದಿಡುತ್ತದೆ. ಮಲೆನಾಡನ್ನು ನೋಡದವನೂ ಸಹಾ ಅಲ್ಲಿನ ಪಾತ್ರಗಳೊಂದಿಗೆ ಅಲ್ಲಿನ ಹೊಲಗದ್ದೆ, ಕಾಡುಗಳಲ್ಲಿ ಓಡಾಡುತ್ತಾ ಮಳೆಯಲ್ಲಿ ನೆಂದಂತ ಅನುಭವ ಸಿಗುತ್ತದೆ. ಒಂದು ಕಾಲದ ಜನರ ಸಾಮಾಜಿಕ, ಆರ್ಥಿಕ, ಸ್ಥಿತಿಗತಿಗಳ ಕಡೆ ಬೆಳಕು ಚೆಲ್ಲುತ್ತದೆ. ಇನ್ನೂ ಅನೇಕ ಸೂಕ್ಷ್ಮ ಸಂಗತಿಗಳು ನಮಗೆ ಕಾಣಸಿಗುತ್ತವೆ. ಇದು ಒಂದು ಕಾದಂಬರಿಯ ಲಾಭ. ಬೈರಪ್ಪನವರ ಭಿತ್ತಿ ಆತ್ಮಕಥೆಯಾದರೂ ಬಾಲಕನೊಬ್ಬನ ತಲ್ಲಣ, ಹತಾಶೆ, ಪ್ರಯತ್ನಗಳ ಜೊತೆ ಜೊತೆಯಲ್ಲೇ ಒಂದು ಕಾಲಘಟ್ಟದ ಸಾಮಾಜಿಕ ಪರಿಸ್ಥಿತಿ, ವ್ಯವಸ್ಥೆ ಎಲ್ಲವನ್ನೂ ಎಳೆ ಎಳೆಯಾಗಿ ಬಿಡಿಸಿಡುತ್ತದೆ. ಒಬ್ಬ ಬರಹಗಾರನ ಪ್ರೇರಣೆ, ಬೆಳವಣಿಗೆ, ಒಂದು ಕೃತಿ ಹುಟ್ಟಿಕೊಳ್ಳುವ, ಹಂತ ಹಂತವಾಗಿ ಬೆಳೆಯುವ, ಅದರ ಹಿಂದಿನ ತಯಾರಿ ಎಲ್ಲವೂ ಅದರಲ್ಲಿ ಸಿಗುತ್ತವೆ. ಅಷ್ಟರ ಮಟ್ಟಿಗೆ ಅದರ ಓದುಗ ಅನುಭವದಲ್ಲಿ ಶ್ರೀಮಂತ. ತೇಜಸ್ವಿಯವರ ಅಣ್ಣನ ನೆನಪು ಪುಸ್ತಕದಲ್ಲಿ ಕುವೆಂಪುರವರು ಒಬ್ಬ ರಾಷ್ಟ್ರಕವಿ ಎನ್ನುವುದಕ್ಕಿಂತ ತಂದೆಯಾಗಿ, ಪತಿಯಾಗಿ, ಕುಲಪತಿಯಾಗಿ, ಬೆಳಗಿನ ದಿನಪತ್ರಿಕೆಗಾಗಿ ಕಾಯುವ ಸಾಮಾನ್ಯವಾಗಿ ನಮಗೆ ಓದಲು ಸಿಗುತ್ತಾರೆ. ಮೈಸೂರು ಹಾಗೂ ಸುತ್ತಮುತ್ತದ ೬೦, ೭೦ ದಶಕದ ಜೀವನ ಹೇಗಿತ್ತು ಎಂಬುದರ ಒಳ ಸುಳಿವು, ಪೇಚಾಟಗಳು ನಮ್ಮ ಅನುಭವಕ್ಕೆ ಸಿಗುತ್ತದೆ. ತೇಜಸ್ವಿಯವರ ಇನ್ನಿತರ ಕಾದಂಬರಿ, ಪುಸ್ತಕಗಳಂತೂ ನಮ್ಮಂಥ ನಗರದವರು ಕಾಣದ, ಇನ್ನೆಂದೂ ನೋಡಲು ಸಾಧ್ಯವಾಗದಂಥ ಅದ್ಭುತ ಪ್ರಪಂಚವನ್ನೆ ತೆರೆದಿಡುತ್ತದೆ. ಒಬ್ಬ ದಲಿತನ, ಸಮಾಜದಲ್ಲಿ ಶೋಷಣೆಗೊಳಗಾದವನ ನೋವು, ಹತಾಶೆ ಸಿದ್ಧಲಿಂಗಯ್ಯ, ದೇವನೂರರ ಕವಿತೆಗಳು ನಮ್ಮ ಮನಸ್ಸಿಗೆ ದಾಟಿಸುತ್ತವೆ, ಸೂಕ್ಷ್ಮ ಕವಿ ಮನಸ್ಸಿನ ತುಂಟತನ ಲಕ್ಷ್ಮಣರಾವ್‌ರವರ ಕವಿತೆಗಳಲ್ಲಿ ಸಿಗುತ್ತವೆ. ಜಿ.ಪಿ. ರಾಜರತ್ನಂರವರ ರತ್ನನ ಪದಗಳು ಮೇಲೆ ಕಣ್ಣಾಡಿಸುತ್ತಿದ್ದಂತೆ ಅವುಗಳಿಗೆ ಸಂಗೀತ ರೂಪ ಕೊಟ್ಟ ಮೈಸೂರು ಅನಂತಸ್ವಾಮಿಯವರ ತಾಳ ಜ್ಞಾನದ ಬಗ್ಗೆ ಆಶ್ಚರ್ಯ ಮೂಡುತ್ತದೆ. ಶಿಶುನಾಳ ಶರೀಫರ ಪದ್ಯಗಳು ಸಿ. ಅಶ್ವತ್ಥರ ಧ್ವನಿಯಲ್ಲಿ ಕಂಡುಕೊಳ್ಳುವ ಪರಿಪೂರ್ಣತೆಗೆ ಮನಸ್ಸು ತುಂಬಿಕೊಳ್ಳುತ್ತದೆ.

ಇನ್ನೂ ನಮ್ಮದೇ ಬೈಬಲಿನ ವಿಷಯಕ್ಕೆ ಬಂದರೆ, ಜಗತ್ತಿನ ಅತಿ ಹೆಚ್ಚು ಮಾರಾಟವಾಗುವ ಪುಸ್ತಕವೆಂಬ ಹೆಗ್ಗಳಿಕೆ ಅದರದು. ಆದರೆ ಬೈಬಲ್ ನಿಜಕ್ಕೂ ಅತಿ ಹೆಚ್ಚು ಮಂದಿ ಓದುವ ಪುಸ್ತಕವೇ ಎಂಬ ಪ್ರಶ್ನೆಯೂ ಜೊತೆಗೇ ಕೇಳಿ ಬರುತ್ತವೆ. ಇಂದಿಗೂ ಬೈಬಲನ್ನು ನಾವು ಒಂದು ಧಾರ್ಮಿಕ ಅಥವಾ ಆಧ್ಯಾತ್ಮಿಕ ನೆಲೆಯಲ್ಲಿ ಮಾತ್ರ ಓದುತ್ತೇವೆ. ಆದರೆ ಅದನ್ನು ಮೀರಿದ ಮೌಲಿಕ, 
ಮಾನವೀಯ, ಸಾಹಿತ್ಯಿಕ ಆಯಾಮಗಳು ಅದರಲ್ಲಿದೆ ಎಂಬ ಸತ್ಯವನ್ನು ನಾವು ಮನಗಾಣಬೇಕಾಗಿದೆ. ನಮ್ಮ ಓದುವ ಅಭ್ಯಾಸ ಹಾಗೂ ಹವ್ಯಾಸ ಇಲ್ಲಿ ಮತ್ತೆ ಕೆಲಸಕ್ಕೆ ಬರುತ್ತದೆ. ಕುವೆಂಪು, ಜಿ.ಎಸ್. ಶಿವರುದ್ರಪ್ಪ, ಖಲೀಲ್ ಗಿಬ್ರಾನರ ಬರಹಗಳಲ್ಲಿ ಯೇಸು ಕ್ರಿಸ್ತನ ಜೀವನ ಬೋಧನೆಯ ಅನೇಕ ಒಳನೋಟಗಳು ಕಾಣಸಿಗುತ್ತವೆ. ಯು.ಆರ್. ಅನಂತಮೂರ್ತಿ, ಎಚ್.ಎಸ್. ವೆಂಕಟೇಶ್ ಮೂರ್ತಿ, ಸಾ.ಶಿ. ಮರುಳಯ್ಯನವರು ಮುಂತಾದವರು ಯೇಸುಕ್ರಿಸ್ತನನ್ನು ಅರ್ಥ ಮಾಡಿಕೊಂಡಿರುವ ಪರಿಯನ್ನು ಅವರ ಭಾಷಣಗಳಲ್ಲಿ ಕೇಳಿ ಅಚ್ಚರಿಗೊಂಡಿದ್ದೇನೆ. ಸಾ.ಶಿ. ಮರುಳಯ್ಯನವರಂತೂ ತಮ್ಮ ಒಂದು ಭಾಷಣದಲ್ಲಿ ಯೇಸು ಮಾನವನನ್ನು ಉಪ್ಪಿಗೆ ಹೋಲಿಸಿದರ ಮಹತ್ವವನ್ನು ಎಳೆ ಎಳೆಯಾಗಿ ಬಿಡಿಸಿ ವಿವರಿಸಿದ್ದು ಇಂದಿಗೂ ಯಾವುದೇ ಪ್ರಬೋಧನೆಗಿಂತ ಹೆಚ್ಚು ನೆನಪಿದೆ. ನಮ್ಮಲ್ಲೂ ಫಾ. ಅಂತಪ್ಪ, ಚಸರಾ, ವಿಲಿಯಂ, ನಾ. ಡಿಸೋಜ, ತಲ್ವಾಡಿ, ಶ್ರೀ.ಸ್ವಾಮಿ, ನಂದಗಾವ್, ಮರಿಜೋಸೆಫ್ ಮುಂತಾದವರು ಬರಹಗಳು ನಮಗೆ ಸಿಗುತ್ತವೆ. ಇದೆಲ್ಲವೂ ಅವರಿಗೆ ಸಾಧ್ಯವಾಗಿರುವುದು ಬೈಬಲ್ಲನ್ನು ಸಹಾ ಒಂದು ಉನ್ನತವಾದ ಗ್ರಂಥದಂತೆ ಓದುವ, ಅಭ್ಯಾಸಿಸುವ, ಅವರ ಅಧ್ಯಯನಶೀಲ, ಸಂವೇದನಾಶೀಲ ಮನಸ್ಸಿನಿಂದ. ಆ ಮನಸ್ಸು ದೊರಕುವುದು ಬಹುಮಟ್ಟಿಗೆ ಓದಿನಿಂದಲೇ.

ಹಾಗೆಂದ ಮಾತ್ರಕ್ಕೆ ಓದು ಎಲ್ಲವನ್ನು ನೀಡುತ್ತದೆ, ಅದೇ ಅಂತಿಮ ಎನ್ನುವುದೂ ತಪ್ಪಾಗುತ್ತದೆಯೇನೋ. ಓದು ಬರಹವಿಲ್ಲದ ನಮ್ಮ ಪೂರ್ವಜರು, ಹಿರಿಯರು ಸಹಾ ಸಜ್ಜನರು,ಸಾಂಸ್ಕೃತಿಕ ರಾಯಭಾರಿಗಳು,ಸಂವೇದನಾಶೀಲರಾಗಿದ್ದರು.ಆದರೆ ಅವೆಲ್ಲವೂ ಅವರಿಗೆ ತಮ್ಮ ಜೀವನಾನುಭವದಿಂದ, ತಮ್ಮ ಹಿರಿಯರಿಂದ ಪರಂಪರೆಯಿಂದ ಬಳುವಳಿಯಾಗಿಯೂ ಬಂದಿತ್ತು. ಮನುಷ್ಯ ಹೆಚ್ಚು ಸಮಾಜಮುಖಿಯಾಗಿದ್ದ ಹಾಗೂ ಇತರರೊಡನೆ, ಪರಿಸರದೊಡನೆ ಹೆಚ್ಚು ಒಡನಾಟವಿಟ್ಟುಕೊಂಡಿದ್ದ ಸಂದರ್ಭವಾಗಿತ್ತು. ಒಂದು ತುಂಬು ಕುಟುಂಬದಲ್ಲಿ ಬೆಳೆದ ಮಗುವಿನ ಮೇಲೆ ತಂದೆ ತಾಯಿ ಮಾತ್ರವಲ್ಲದೆ, ಅದರ ಅಜ್ಜನನಡುವಳಿಕೆ, ಅಜ್ಜಿಯ ಲಾಲನೆ, ಕಥೆಗಳು, ದೊಡ್ಡಪ್ಪ, ಚಿಕ್ಕಪ್ಪರ ಮಾತು, ಹಾಸ್ಯಪ್ರಜ್ಞೆ ಎಲ್ಲವೂ ಪ್ರಭಾವ ಬೀರುತ್ತಿತ್ತು. ಆದರೆ ಇಂದಿನ ಮಕ್ಕಳಿಗೆ, ಯುವಕರಿಗೆ ಆ ಸೌಲಭ್ಯಗಳಿಲ್ಲ. ಆಧುನಿಕ ಜೀವನದ ರಭಸದಲ್ಲಿ ಇವೆಲ್ಲವನ್ನು ಇನ್ನೆಲ್ಲಿಯಾದರೂ ನೋಡಿ, ಕೇಳಿ, ಓದಿ ಪಡೆಯಬೇಕಾಗಿದೆ. ಅದಕ್ಕೆ ಓದು ಒಂದು ಉತ್ತಮ ಸಾಧನವಾಗಬಹುದೆಂಬ ಒಂದು ಸಣ್ಣ ಆಸೆ ನಮ್ಮದಾಗಬೇಕು.

-ಪ್ರಶಾಂತ್ ಇಗ್ನೇಶಿಯಸ್

No comments:

Post a Comment