Thursday 19 September 2013

ಆಡಿಯೋ ಅನಿಸಿಕೆ : ಬೃಂದಾವನ

ಯಾವ ನಟನಿಗೆ ಯಾವ ರೀತಿ ಸಂಗೀತ, ಆಯಾ ನಟರ ಅಭಿಮಾನಿಗಳ ನಿರೀಕ್ಷೆ, ಅಪೇಕ್ಷೆಗಳ ಸುತ್ತ ಗಿರಕಿ ಹೊಡೆಯುತ್ತಾ, ನಿರ್ದೇಶಕ ಇಷ್ಟಪಡುವ ಸಂಗೀತವನ್ನು ಕೊಡುವ ಕಲೆ ಹರಿಕೃಷ್ಣರಿಗೆ ಸಿದ್ಧಿಸಿದೆ ಎಂದೇ ಹೇಳಬಹುದು. ತಮ್ಮದೇ ಆದ ಇತಿ ಮಿತಿಯಲ್ಲೇ ಆಯಾ ನಟ, ನಿರ್ದೇಶಕನಿಗೆ ತಕ್ಕಂತೆ ಹಾಡುಗಳನ್ನು ನೀಡುತ್ತಾ ವಿಭಿನ್ನವಾಗಿ ನಿಲ್ಲುವುದರಲ್ಲಿ   ಹರಿಕೃಷ್ಣ ಇತ್ತೀಚಿನ ದಿನಗಳಲ್ಲಿ ಗೆದ್ದಿದ್ದಾರೆ ಎಂಬುದರಲ್ಲಿ ಅನುಮಾನವಿಲ್ಲ. ದರ್ಶನ್  ಅಭಿನಯದ ಬೃಂದಾವನ ಚಿತ್ರದ ಗೀತೆಗಳು ಇದಕ್ಕೆ ಇತ್ತೀಚಿನ ಉದಾಹರಣೆ. ದರ್ಶನ್ ರ  ಯಶಸ್ಸು, ಅಭಿಮಾನಿ ವೃಂದ, ಇಮೇಜ್ ಗೆ ತಕ್ಕುದಾದ ಹಾಡುಗಳು ಚಿತ್ರದಲ್ಲಿದೆ. ಈಗಾಗಲೇ ಹಾಡುಗಳು ಅಭಿಮಾನಿಗಳ ಮೆಚ್ಚುಗೆಯೂ ಪಡೆದಿದೆ.  ಹೇಗಿದೆ ಹಾಡುಗಳು ?


ಹಾರ್ಟಲ್ಲಿರೋ ಹಾರ್ಮೋನಿಯಂ : ಟ್ಯೂನ್ ಹಾಕಿದೆ ಈ ಮನಸ್ಸಿನ FM ನಲ್ಲಿ ನಿಂದೆ ಹಾಡಿದೆ ಎಂದು ಪ್ರಾರಂಭವಾಗುವ ಹಾಡನ್ನು ಟಿಪ್ಪು ತಮ್ಮ ಎಂದಿನ ಶೈಲಿಯಲ್ಲೇ ಹಾಡಿದ್ದಾರೆ. ಕವಿರಾಜ್ ರ ಸಾಹಿತ್ಯದಲ್ಲಿ ಕನ್ನಡದಷ್ಟೆ ಸಮನಾಗಿ ಇತರ ಭಾಷೆಗಳೂ ಸೇರಿಕೊಂಡಿವೆ. ಇದು ಈಗಿನ ಟ್ರೆಂಡ್ ಹೌದಾದರೂ ಅದೇನು ಅಷ್ಟು ಸುಲಲಿತವಾಗಿ ಸೇರದ ಭಾವನೆ ಮೂಡುತ್ತದೆ. ದರ್ಶನ್ ಹಾಗೂ ಅವರ ಅಭಿಮಾನಿಗಳನ್ನು ಮನಸಿನಲ್ಲಿಟ್ಟುಕೊಂಡೇ ಹರಿ ಈ ಹಾಡನ್ನು ಸಂಯೋಜಿಸಿದರೇನೋ ಎಂಬಷ್ಟು ಗಟ್ಟಿಯಾಗಿ ದರ್ಶನ್ ಗೆ ಈ ಹಾಡು ಒಪ್ಪುತ್ತದೆ.

ಬೆಳ್ಳಂ ಬೆಳಗಾ : ಬಹಳ ದಿನಗಳ ನಂತರ ಕೇಳ ಸಿಗುವ ಹೇಮಂತರ ಧ್ವನಿಯಿರುವ ಈ ಗೀತೆ, ಅವರಿಂದಾಗಿಯೇ ಇಷ್ಟವಾಗುತ್ತದೆ. ಕನ್ನಡ ಹಾಗೂ ಕನ್ನಡಾಭಿಮಾನದ ಬಗೆಗಿನ ನಾಗೇಂದ್ರ ಪ್ರಸಾದರವರ ಸಾಹಿತ್ಯಕ್ಕೆ ಹಾಗೂ ಗೀತೆಯ ಗ್ರಾಮೀಣ ಸೊಗಡಿನ ಲಯಕ್ಕೆ ಹೇಮಂತ್ ರವರನ್ನೇ ಆರಿಸಿಕೊಂಡಿರುವಲ್ಲಿ ಹರಿಯವರ ಜಾಣ್ಮೆ ಎದ್ದು ಕಾಣುತ್ತದೆ.
ಇಷ್ಟೆಲ್ಲಾ ಸಾಧನೆ ಹಾಗೂ ಪ್ರತಿಭೆಯ ನಡುವೆಯೂ ಮತ್ತೊಮ್ಮೆ ಶ್ರೇಯಾ ಘೋಷಲ್ ಹಳ್ಳಿ ಲಾವಣಿಯ ಧಾಟಿಯ ಗಾಯನದಿಂದ ಅಚ್ಚರಿ ಮೂಡಿಸುತ್ತಾರೆ. ಉತ್ತಮವಾದ ಗೀತೆಗೆ ನಡು ನಡುವೆ ಒದಗಿ ಬಂದಿರುವ ಕೋರಸ್ ಮತ್ತಷ್ಟು ಮೆರಗು ದೊರಕುತ್ತದೆ.

ಮಿರ್ಚಿ ಹುಡುಗಿ : ಇದು ಮತ್ತೊಂದು ಪಕ್ಕಾ ಹರಿ ಹಾಗೂ ದರ್ಶನ್ ಕಾಂಬಿನೇಶನ್ ಗೀತೆ. ಅಭಿಮಾನಿಗಳಿಗೆ ತುಸು ಹೆಚ್ಚೇ ಇಷ್ಟವಾಗಬಹುದಾದ ಸ್ವರ ಸಂಯೋಜನೆ ಹಾಡಿಗಿದೆ. ಇಲ್ಲಿ ಕವಿರಾಜರ ಸಾಹಿತ್ಯಕ್ಕಿಂತ ಹರಿಯ ಸಂಗೀತ, ನೃತ್ಯ ಯೋಜನೆ ಹಾಗೂ ಪರದೆಯ ಮೇಲಿನ ಚಿತ್ರೀಕರಣವೇ ಹೆಚ್ಚು ಗಮನ ಸೆಳೆಯುವ ಅಂಶಗಳಾಗುತ್ತವೇನೋ. ಸಂತೋಷ್ ವೆಂಕಿಯ ಗಾಯನ ಹಾಗೂ ಧ್ವನಿ ಹಾಡಿನ ಆಶಯಕ್ಕೆ ತಕ್ಕ ಆಗಿದೆ.

ತಂಗಾಳಿ ಹಾಡಿದೆ : ಶಂಕರ್ ಮಹಾದೇವನ್, ಕೈಲಾಶ್ ಕೈರ್, ಕಾರ್ತಿಕ್, ಹೇಮಂತ್ ಎಲ್ಲರ ಧ್ವನಿ ಒಟ್ಟಿಗೆ ಕೇಳ ಸಿಗುವ ಬಂಪರ್ ಹಾಡು ಇದು. ಕುಟುಂಬವೆಲ್ಲ ಸೇರಿ ಸಂತೋಷವಾಗಿ ಹಾಡುವ ಇಂಥಹ ಗೀತೆಗಳ ಸಾಹಿತ್ಯದಲ್ಲಿ ನಾಗೇಂದ್ರ ಪ್ರಸಾದ್ ಎಂದಿಗೂ ಸಿದ್ಧ ಹಸ್ತರೇ. ಹರಿಕೃಷ್ಣ ಪೂರ್ಣ ಪ್ರಮಾಣದಲ್ಲಿ ಈ ಹಾಡಿನ ಮೂಲಕ ತಮ್ಮತನ ಮೆರೆಯುತ್ತಾರೆ. ವಾದ್ಯ ತಾಳಗಳ ಬಳಕೆ ಹಾಗೂ ಉತ್ತಮ ಗಾಯಕರ ಸಂಗಮದ ಮಟ್ಟಿಗೆ ಇದೊಂದು ಶ್ರೀಮಂತ ಗೀತೆಯೇ.

ಓಯ್ ಕಳ್ಳ : ಹರಿಕೃಷ್ಣರ ಸಂಗೀತ, ಯೋಗರಾಜರ ಭಟ್ಟರ ಸಾಹಿತ್ಯದ ಜೋಡಿಗೆ ಉಪ್ಪಿ ಭರ್ಜರಿಯಾಗಿಯೇ ಬಂದು ಸೇರಿಕೊಂಡಿದ್ದಾರೆ. ಭಟ್ಟರ ಎಂದಿನ ತುಂಟತನಕ್ಕೆ ಉಪ್ಪಿಯೂ ಸರಿಸಮಾನವಾಗಿ ಧ್ವನಿಗೂಡಿಸಿದ್ದಾರೆ. ಇಂದು ನಾಗರಾಜ್ ಹಾಗೂ ಪ್ರಿಯದರ್ಶಿ ಮಾತ್ರವೇನು ಹಿಂದೆ ಬಿದ್ದಿಲ್ಲ. ಇಬ್ಬರು ಹುಡುಗಿಯರ ನಡುವಿನ ಪ್ರೇಮದಾಟದ ಸಾಹಿತ್ಯಕ್ಕೆ ಪಕ್ಕಾ ನೃತ್ಯಕ್ಕೆ ಹೇಳಿ ಮಾಡಿಸಿದಂತಿರುವ ಗೀತೆಯನ್ನಾಗಿ ಹರಿ ಪರವರ್ತಿಸಿದ್ದಾರೆ.

- ಪ್ರಶಾಂತ್ ಇಗ್ನೇಷಿಯಸ್  

No comments:

Post a Comment