Tuesday 10 September 2013

ಲೂಸಿಯಾ.......

ಪ್ರೇಕ್ಷಕರಿಂದ ಪ್ರೇಕ್ಷಕರಿಗಾಗಿಯೇ ಎಂಬ ಹೊಸ ಮಂತ್ರದಿಂದ ಪ್ರೇಕ್ಷಕರ ಹಣದಿಂದಲೇ ಪ್ರಾರಂಭವಾದ ಪವನ್ ಕುಮಾರ್ ರವರ ಹೊಸ ಕನಸು ’ಲೂಸಿಯಾ’ ಕನ್ನಡ ಚಿತ್ರ ಪ್ರೇಮಿಗಳ ನಡುವೆ ಒಂದು ಹೊಸ ನಿರೀಕ್ಷೆಯನ್ನೆ ಸೃಷ್ಟಿಸಿದೆ. ಅದರಲ್ಲೂ ಅಂತರಜಾಲ ಹಾಗೂ ಫೇಸ್ ಬುಕ್ಕಿನಲ್ಲಿ ಈ ಹೊಸ ಆಲೋಚನೆಯನ್ನು ಕನ್ನಡದ ಯುವ ಸಮುದಾಯ ಪ್ರೀತಿಯಿಂದ ಅಪ್ಪಿಕೊಂಡಿದೆ. ಲಂಡನ್ ಚಿತ್ರೋತ್ಸವದಲ್ಲಿ ಪ್ರೇಕ್ಷಕರ ಮೆಚ್ಚಿನ ಸಿನಿಮಾ ಎನ್ನುವ ಪ್ರಶಸ್ತಿ ಪವನ್ ಕುಮಾರರ ಈ ಕನಸಿನ ರೆಕ್ಕೆ ಮತ್ತಷ್ಟು ಗರಿಗಳನ್ನು ಮೂಡಿಸಿದೆ. ಈಗ ಇದು ಕೇವಲ ಪವನ್ ಚಿತ್ರ ಮಾತ್ರವಲ್ಲದೆ ಲೂಸಿಯದಲ್ಲಿ ತೊಡಗಿಸಿಕೊಂಡ, ಕೇವರ ೫೦೦ ರಷ್ಟು ಕಾಣಿಕೆ ನೀಡಿರುವ ಎಲ್ಲರದೂ ಎನ್ನುವಷ್ಟು ಬೆಳೆವಣಿಗೆ ಕಂಡಿದೆ. ಚಿತ್ರರಂಗ ಕೂಡ ವಾರೆ ಗಣ್ಣಿನಲ್ಲಿ ಇದನೆಲ್ಲಾ ಗಮನಿಸುತ್ತಿರಬಹುದು. ಮಾಧ್ಯಮಗಳ ಬೆಂಬಲ ಈಗಾಗಲೇ ಚಿತ್ರಕ್ಕೆ ಭಾರಿ ಎನ್ನುವ ಮಟ್ಟಿಗೇ ದೊರಕಿದೆ. ಈ ಎಲ್ಲಾ ಹಿನ್ನಲೆಯಲ್ಲೇ ಚಿತ್ರದ ಹಾಡುಗಳನ್ನು ಕೇಳಿದಾಗ ಯಾವುದೇ ಚಿತ್ರ ಹಿನ್ನಲೆಯಿಲ್ಲದ  ಹೊಸ ಸಂಗೀತ ನಿರ್ದೇಶಕ ಹಾಗೂ ಬಡ್ಜೆಟ್ ನ  ಇತಿ ಮಿತಿ ಇಲ್ಲಿನ ಹಾಡುಗಳಲ್ಲಿ ಎದ್ದು ಕಾಣುತ್ತದೆ. 


ತಿನ್ನ ಬೇಡ ಕಮ್ಮಿ 
ಇಂದಿನ ಹಾಡುಗಳ ಧಾಟಿಯಲ್ಲೇ ಸಾಗುವ ಈ ಗೀತೆ ಯುವಕರಿಗೆ ಮೆಚ್ಚುಗೆಯಾಗಬಹುದಾದ ಸಾಧರಣ ಗೀತೆ. ಕನ್ನಡ ಬಾರದ ಹುಡುಗಿಯೊಬ್ಬಳಿಗೆ ಕನ್ನಡದ ಬಗ್ಗೆ ಹೇಳುತ್ತಾ ಛೇಡಿಸುವ ಸಾಹಿತ್ಯವಿರುವ ಗೀತೆಯಲ್ಲಿ ತಾಳ ವಾದ್ಯವೇ ಹೈಲೈಟ್. ತೇಜಸ್ವಿಯವರೇ ಬರೆದು ಧ್ವನಿಗೂಡಿಸಿರುವ ಹಾಡು ಒಳ್ಳೆಯ ನೃತ್ಯದಿಂದ ಪರದೆಯ ಮೇಲೆ ಇಷ್ಟುವಾಗಬಹುದು. 

ನೀ ತೊರೆದ ಗಳಿಗೆಯಲ್ಲಿ 
ಆನನ್ಯ ಭಟ್ ಹಾಗೂ ಉದಿತ್ ಹ್ಯಾರಿಸ್ ಹಾಡಿರುವ ಗೀತೆ ಈ ಆಲ್ಬಂ ನ ಅತ್ತ್ಯುತ್ತಮ ಗೀತೆ ಎನ್ನಲು ಅಡ್ಡಿಯಿಲ್ಲ. ರಘು ಶಾಸ್ರ್ತಿಯವರ ಉತ್ತಮವಾದ ಸಾಹಿತ್ಯವು ಇದಕ್ಕೆ ಕಾರಣ. ಕೇಳುತ್ತ ಕೇಳುತ್ತ ಇಷ್ಟವಾಗುವ ಇಂಪಾದ ಗೀತೆ ತನ್ನ ಮಾಧುರ್ಯದಿಂದಲೇ ಮನ ಸೆಳೆಯುತ್ತದೆ. ಈ ಹಾಡಿನಿಂದ ಸಂಗೀತ ನಿರ್ದೇಶಕ ತೇಜಸ್ವಿ ಭರವಸೆ ಮೂಡಿಸುತ್ತಾರೆ. ಹಾಡು ನಡುವೆಯಲ್ಲಿ ಸಾಮಾನ್ಯದ ಮಟ್ಟ ಮುಟ್ಟಿದರೂ ಗೀತೆಯ ಪ್ರಾರಂಭದಲ್ಲಿ ಬರುವ ಸಾಲುಗಳು ಸಾಹಿತ್ಯದಿಂದಲೂ ಸಂಗೀತ ಸಂಯೋಜನೆಯಿಂದಲೂ ಕೇಳುಗರನ್ನು ಅವರಿಸುತ್ತದೆ.

ಜಮ್ಮ ಜಮ್ಮ 
ಮತ್ತೊಂದು ಮಾಸ್ ಹಾಡು. ನವ ಗಾಯಕ ನವೀನ್ ಸಜ್ಜುರವರ ಧ್ವನಿ ಹಾಗೂ ಉತ್ಸಾಹ ಎದ್ದು ಕಾಣುವಂತ ಈ ಹಾಡಿನ ಯಶಸ್ಸು ನವೀನಷ್ಟೇ ನಿರ್ದೇಶಕ ಪವನ್ ಹಾಗೂ ತೇಜಸ್ವಿಯವರಿಗೆ  ಸಲ್ಲಬೇಕು. ಆರ್ಕೇಷ್ಟ್ರಾ ಹಾಡುಗಾರನಿಗೆ ಅವಕಾಶಕೊಟ್ಟು ಹುರಿದುಂಬಿಸಿದ ಪರಿಣಾಮ ಹಾಡಿನಲ್ಲಿ ಕಾಣುತ್ತದೆ. ಉತ್ತಮ ವಾದ ಬೀಟ್ಸ್ ಹಾಗೂ ಉತ್ಸಾಹಭರಿತವಾದ ಗಾಯನದಿಂದ ಹಾಡು ಲವಲವಿಕೆಯಿಂದ ಕೂಡಿದೆ. 

ಜಮ್ಮ ಜಮ್ಮ ( ದು:ಖ) 
ಇದೇ ಹಾಡು ಮತ್ತೆ ದು:ಖದ ಸನ್ನಿವೇಶದಲ್ಲಿ ಬಂದಾಗಲೂ ನವೀನ್ ತಮ್ಮ ಗಾಯನದಿಂದ ಗಮನ ಸೆಳೆಯುತ್ತಾರೆ. ತೇಜಸ್ವಿಯವರ ಸಾಹಿತ್ಯ ಸಾಮಾನ್ಯವಾಗಿದೆಯಾದರೂ ರಾಗ ಹಾಗೂ ವಾದ್ಯಸಂಯೋಜನೆ ಹಾಡಿನ ಭಾವಲಹರಿಗೆ ತಕ್ಕ ಹಾಗೆ ಮೂಡಿ ಬಂದಿದೆ. ಮತ್ತೊಮ್ಮೆ ನವೀನ್ ಅಭಿನಂದನಾರ್ಹರು.

ಯಾಕೋ ಬರಲಿಲ್ಲ 
ಅನಂತಸ್ವಾಮಿಯವರ :ನೀನ್ ನನ್ನಟ್ಟಿಗೆ ಬೆಳಕ್ ಕಿದ್ದೆ ನಂಜಿ" ಎಂಬ ಗೀತೆ ನೆನಪಿಸುವಂತೆ ಅದೇ ಧಾಟಿಯಲ್ಲಿ ಸಾಗುವ ಗೀತೆ ಯಾಕೋ ಬರಲಿಲ್ಲ. ವಿಭಿನ್ನವಾದ ರಾಗ ಸಂಯೋಜನೆ  ಹಾಗೂ ಹಾಡುಗಾರಿಕೆ  ಇದೆ ಎನ್ನುವುದು ಈ ಗೀತೆಯ ಹೆಗ್ಗಳಿಕೆ. ಕೇಳುತ್ತ ಕೇಳುತ್ತ ಇಷ್ಟವಾಗಬಹುದಾದ ಗುಣ ಇರುವುದರಿಂದ ಚಿತ್ರದಲ್ಲಿ ಹೇಗೆ ಬಳಕೆಯಾಗಿದೆ ಎನ್ನುವುದರ ಮೇಲೆ ಹಾಡಿನ ಯಶಸ್ಸು ನಿಲ್ಲಬಹುದು. ಮಿತವಾದ ವಾದ್ಯಗಳು ಹಾಗೂ ಅಬ್ಬರವಿಲ್ಲದಿರುವುದರಿಂದ ಸಾಹಿತ್ಯ ಎದ್ದು ಕೇಳುತ್ತದೆ.

ಹೇಳು ಶಿವ 
ಪವನ್ ಸಿನಿಮಾ ಎಂದ ಮೇಲೆ ಯೋಗರಾಜ್ ಭಟ್ಟರ ಹಾಡು ಇಲ್ಲದಿರಲು ಸಾಧ್ಯವೇ ಹೇಳು ಶಿವಾ, ಹೇಳು ಶಿವಾ ಹಾಡಿಗೆ ಸಾಹಿತ್ಯ ಒದಗಿಸಿ ಧ್ವನಿಯನ್ನೂ ನೀಡಿರುವ ಭಟ್ಟರು ಮತ್ತೆ ತಮ್ಮ ತುಂಟತನ ಮೆರೆಯುತ್ತಾರೆ. ಹುಡುಗಿ, ಸೆಲ್ ಫೋನ್, ಹಾಸ್ಯ, ವೇದಾಂತ, ’ಗಳು’ ಎಲ್ಲವೂ ಇದು ಅವರ್ದೇ ಹಾಡು ಎಂಬುದನ್ನು ಧೃಢ ಪಡಿಸುತ್ತದೆ. ಹರಿಕೃಷ್ಣರ ಗೀತೆಯೇನೋ ಎನ್ನುವಷ್ಟು ಮಜವಾಗಿ ಶ್ರೀಮಂತವಾಗಿ ಹಾಡು ಮೂಡಿ ಬಂದಿದೆ. ನವೀನ ಹಾಗೂ ರಕ್ಷಿತ್ ನಗರ್ಲೆ ಉತ್ತಮವಾಗಿ ಹಾಡಿದ್ದಾರೆ.

ತಿನ್ನ ಬೇಡ 
ಕೊನೆಯಲ್ಲಿ ಸಂಗೀತ ರಾಜೀವ್, ನಿತಿನ್ ಹಾಗೂ ಸ್ಪರ್ಷರವರ ಧ್ವನಿಯಲ್ಲಿ ಮೂಡಿಬಂದಿರುವ ತಿನ್ನ್ ಬೇಡ ಹಾಡು ಮೊದಲಿನ ಗೀತೆಗಿಂತೆಗಿಂತ ಲವಲವಿಕೆಯಾಗಿ ಮೂಡಿ ಬಂದಿದೆ. ಸಂಗೀತ ರಾಜೀವ ರವರ ಧ್ವನಿ ಗೀತೆಗೆ ಹೇಳಿ ಮಾಡಿಸಿದಂತಿದೆ. ಗ್ರಾಮೀಣ ಆಡು ಬಾಷೆಯ ಸಾಹಿತ್ಯವಿರುವುದು ನಿಜಕ್ಕೂ ಹಾಡಿಗೆ ಮೆರಗನ್ನು ನೀಡಿದೆ. ಕೊನೆಯಲ್ಲಿ ಸರ್ ಪ್ರೈಸ್ ಪ್ಯಾಕ್ ಎಂದೇ ಹೇಳಬಹುದಾದ ಹಾಡು ಗುನುಗುನಿಸುವಂತಿದೆ. ಮತ್ತಷ್ಟು ಅವಕಾಶ ಹಾಗೂ ಇತಿ ಮಿತಿಯ ಸಂಕೋಲೆ ಇಲ್ಲದಿದ್ದರೆ ಉತ್ತಮ ಸಂಗೀತ ನಿರ್ದೇಶಕರಾಗುವ ಭರವಸೆ ಮೂಡಿಸುತ್ತಾರೆ ಪೂರ್ಣ ಚಂದ್ರ ತೇಜಸ್ವಿ.



- ಪ್ರಶಾಂತ್ ಇಗ್ನೇಶಿಯಸ್

No comments:

Post a Comment