ಅದು 1980 ರ ಭಾರತ ಹಾಗೂ ಇಂಗ್ಲೆಂಡ ತಂಡಗಳ ನಡುವಿನ ಕ್ರಿಕೆಟ್ ಪಂದ್ಯ. ಭಾರತ ಕ್ರಿಕೆಟ್ ಮಂಡಳಿಯ ಸ್ವರ್ಣ ಮಹೋತ್ಸವದ ನೆನಪಿನ ಜೂಬಿಲಿ ಟೆಸ್ಟ್. 58 ರನ್ನಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದ ಸ್ಥಿತಿಯಲ್ಲಿದ್ದ ಇಂಗ್ಲೆಂಡ ತಂಡದ ಏಳನೇ ಬ್ಯಾಟ್ಸ್ ಮ್ಯಾನಾಗಿ ಬಂದಿದ್ದ ಬಾಬ್ ಟೇಲರ್ ವಿಕೆಟ್ ಕೀಪರ್ ಸ್ಯಯದ್ ಕಿರ್ಮಾನಿಗೆ ಕ್ಯಾಚ್ ಇತ್ತಾಗ, ಅಂಪೈರ್ ಔಟೆಂದು ತೀರ್ಪು ಕೊಟ್ಟರು. ಬಾಬ್ ಟೈಲರ್ ಆಶ್ಚರ್ಯ ಹಾಗೂ ಅಸಮಧಾನದಿಂದ ತಲೆ ಅಲ್ಲಾಡಿಸುತ್ತ ಪೆವೆಲಿಯನ್ ನ್ ಕಡೆ ನಡೆಯಲು ಅನುವಾಗುತ್ತಿದ್ದಂತೆ ಕ್ರಿಕೆಟ್ ಚರಿತ್ರೆಯಲ್ಲಿ ಅಳಿಸಲಾಗದಂತಹ ಘಟನೆಯೊಂದು ನಡೆಯಿತು. ಅಲ್ಲೇ ಸ್ಲಿಪ್ ನಲ್ಲಿ ಕ್ಷೇತ್ರ ರಕ್ಷಣೆ ಮಾಡುತ್ತಿದ್ದ ಆಗಿನ ಭಾರತ ತಂಡದ ನಾಯಕ, ಬ್ಯಾಟ್ಸ್ ಮೆನ್ ಬಾಬ್ ಟೈಲರ ಬಳಿ ಚೆಂಡು ಬ್ಯಾಟಿಗೆ ತಗುಲಿತೇ ಎಂದು ಕೇಳುತ್ತಾರೆ, ಟೈಲರ್ ಇಲ್ಲ ಎಂದಾಗ, ಅಂಪೈರ್ ನ ಬಳಿ ಹೋಗಿ ತಮ್ಮ ತಂಡ ಮಾಡಿದ್ದ ಮನವಿಯನ್ನು( ಅಪೀಲ್) ಹಿಂದೆ ಪಡೆಯುತ್ತಾರೆ. ಬಾಬ್ ಟೈಲರ್ ಮತ್ತೆ ಬ್ಯಾಟಿಂಗ್ ಆಡುತ್ತಾರೆ. ಮುಂದಿನದು ಇತಿಹಾಸ. ಅದೇ ಬಾಬ್ ಟೈಲರ್ ಜೊತೆ ದಾಖಲೆಯ ಜೊತೆಯಾಟವಾಡಿದ ಪ್ರಖ್ಯಾತ ಆಲ್ ರೌಂಡರ್ ಇಯನ್ ಬಾತಮ್, ಬೌಲಿಂಗ್ ನಲ್ಲೂ ಮಿಂಚಿ ಇಂಗ್ಲೆಂಡ್ ತಂಡಕ್ಕೆ ಗೆಲುವನ್ನು ತಂದು ಕೊಡುತ್ತಾರೆ. ಭಾರತ 10 ವಿಕೆಟ್ಟುಗಳ ಹೀನಾಯ ಸೋಲು ಕಾಣುತ್ತದೆ. ಆದರೆ ಇಂದಿಗೂ ಬಾತಮಿನ್ನ ಪ್ರಚಂಡ ಆಲ್ ರೌಂಡ್ ಆಟಕ್ಕಿಂತ, ಸ್ವರ್ಣ ಮಹೋತ್ಸವದ ಟೆಸ್ಟ್ ಎನ್ನುವುದಕ್ಕಿಂತ ಮೇಲಾಗಿ ಕ್ರೀಡಾ ಜಗತ್ತು ಆ ಟೆಸ್ಟ್ ಅನ್ನು ಭಾರತ ತಂಡದ ನಾಯಕನ ಆ ಉದಾರತೆಗಾಗಿ,sportsman spirit ಗಾಗಿ, ಕ್ರೀಡಾ ಮನೋಭಾಕ್ಕಾಗಿ ನೆನಪಿಸಿಕೊಳ್ಳತ್ತದೆ. ಕ್ರಿಕೆಟ್ ಒಂದು ಸಜ್ಜನ, ಸಭ್ಯ ಕ್ರೀಡೆ ಎಂಬ ಮಾತು ಬಂದಾಗಲೆಲ್ಲಾ ಈ ಘಟನೆಯನ್ನು, ಆಗಿನ ಭಾರತ ತಂಡದ ನಾಯಕನನ್ನು ನೆನೆಪಿಸಿಕೊಳ್ಳಲಾಗುತ್ತದೆ. ಅ ನಾಯಕ ಮತ್ತಾರೂ ಅಲ್ಲ, ನಮ್ಮ ಕರ್ನಾಟಕದವರೇ ಆದ ಜಿ.ಆರ್.ವಿಶ್ವನಾಥ್. ಇಂದಿಗೂ ವಿಶಿಯನ್ನು ಕ್ರಿಕೆಟ್ ಜಗತ್ತು ಕಲಾತ್ಮಕ ಬ್ಯಾಟ್ಸ್ ಮ್ಯಾನ್ ಎಂದು ಮಾತ್ರವಲ್ಲದೆ Gentleman ಕ್ರಿಕೆಟರ್ ಎಂದೇ ಕರೆಯುತ್ತದೆ. ಈ ಘಟನೆ ಒಂದು ಉದಾಹರಣೆಯಷ್ಟೆ, ಈ ಮಾತು ವಿಶ್ವನಾಥ್ ಅವರೊಬ್ಬರಿಗೆ ಮಾತ್ರವಲ್ಲದೆ ಇಡೀ ರಾಜ್ಯದ ಕ್ರಿಕೆಟ್ಟಿಗೇ ಸಲ್ಲುವಂತೆ ಮಾಡಿರುವುದು ನಮ್ಮ ಕರ್ನಾಟಕದ ಇತರ ಎಲ್ಲಾ ಕ್ರಿಕೆಟ್ ಆಟಗಾರರೂ ಎಂದರೆ ತಪ್ಪಾಗಲಾರದೇನೋ.
1933-34ರಲ್ಲಿ ಸ್ಥಾಪನೆಗೊಂಡ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಇತ್ತೀಚೆಗೆ ತಾನೇ ತನ್ನ ವಜ್ರ ಮಹೋತ್ಸವವನ್ನು ಆಚರಿಸಿದೆ. ತನ್ನದೇ ಶ್ರೀಮಂತವಾದ ಇತಿಹಾಸವನ್ನು, ಕ್ರಿಕೆಟ್ ಪರಂಪರೆಯನ್ನು ಉಳಿಸಿಕೊಂಡು ಬೆಳಸಿಕೊಂಡೂ ಬಂದಿದೆ. ಇನ್ನೂ ಭಾರತ ಕ್ರಿಕೆಟ್ ಇತಿಹಾಸದಲ್ಲಿ ಕರ್ನಾಟಕದ ಪಾಲು ಬಹಳ ದೊಡ್ಡದು. ಕ್ರಿಕೆಟ್ ಆಟದ ಘನತೆ ಹಾಗೂ ಸಂಸ್ಕೃತಿಯನ್ನು ಎತ್ತಿಡಿದಿರುವುದರಲ್ಲಿ ಸಹಾ ಕರ್ನಾಟಕ ಕ್ರಿಕೆಟ್ ಎಂದಿಗೂ ಮುಂದೆ. ಕ್ರಿಕೆಟ್ ಜಗತ್ತಿನಲ್ಲಿ ಕರ್ನಾಟಕದ ಆಟಗಾರರು ತಮ್ಮ ಆಟಕ್ಕೆ ಮಾತ್ರವಲ್ಲದೆ ಕ್ರಿಕೆಟ್ ಒಂದು ಸಜ್ಜನ, ಸುಸಂಸ್ಕೃತ ಕ್ರೀಡೆ ಎಂಬುದರ ಪ್ರತೀಕ ಹಾಗೂ ರಾಯಭಾರಿಗಳಾಗಿದ್ದಾರೆ.

ಸೆಂಟ್ರಲ್ ಕಾಲೇಜಿನ ಮೈದಾನವನ್ನೇ ತನ್ನ ಕಾರ್ಯಕ್ಷೇತ್ರವಾಗಿಸಿದ್ದ ಸಂಸ್ಥೆಯು, ಕ್ರಿಕೆಟ್ ಆಡುವುದು ಮಾತ್ರವಲ್ಲದೇ ಅಲ್ಲೇ ತನ್ನ ಕಛೇರಿಯನ್ನೂ ಸ್ಥಾಪಿಸಿಕೊಂಡಿತ್ತು. ಇಂದಿನ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಚಾಲನೆ ದೊರಕಿದ್ದು 1969ರಲ್ಲಿ. 1974 ರ ನವೆಂಬರ್ ನಲ್ಲಿ ಇನ್ನೂ ಪೂರ್ಣಗೊಳ್ಳದ ಕ್ರೀಡಾಂಗಣದಲ್ಲೇ ಮೊದಲ ಟೆಸ್ಟ್ ನಡೆಯಿತು. ವೆಸ್ಟ್ ಇಂಡೀಸ್ ವಿರುದ್ಧದ ಈ ಪಂದ್ಯದಲ್ಲೇ ಕ್ರಿಕೆಟ್ ದಂತಕಥೆಗಳಾದ ಗಾರ್ಡನ್ ಗ್ರೀನಿಡ್ಜ್ ಹಾಗೂ ವಿವಿಯನ್ ರಿಚರ್ಡ್ಸ್ ಟೆಸ್ಟ್ ರಂಗಕ್ಕೆ ಪಾದಾರ್ಪಣೆ ಮಾಡಿದರು ಎಂಬುದು ವಿಶೇಷ. ಮುಂದೆ ಹಲವಾರು ಸ್ಮರಣೀಯ ಟೆಸ್ಟ್ ಹಾಗೂ ಒಂದು ದಿನದ ಪಂದ್ಯಗಳಿಗೆ ಈ ಕ್ರೀಡಾಂಗಣ ವೇದಿಕೆಯಾಗಿದೆ. 1996 ರ ವಿಶ್ವಕಪ್ ನ ಭಾರತ ಪಾಕಿಸ್ತಾನ ಕ್ವಾಟರ್ ಫೈನಲ್ಸ್, 1987ರ ಭಾರತ ಪಾಕಿಸ್ತಾನ ಟೆಸ್ಟ್ ಪಂದ್ಯ, ಇತ್ತೀಚಿನ 2011ರ ವಿಶ್ವಕಪ್ ನ ಭಾರತ ಇಂಗ್ಲೆಂಡ ನಡುವಿನ ಟೈ ಪಂದ್ಯ ಇವು ಕೆಲವು ಉದಾಹರಣೆಗಳಷ್ಟೇ. ತಮ್ಮ ಕೊನೆಯ ಟೆಸ್ಟ್ ಇನ್ನಿಂಗ್ಸ್ ನಲ್ಲಿ ಗವಾಸ್ಕ್ ರ್ ಹೊಡೆದ 97 ರನ್ನು, ಅನಿಲ್ ಕುಂಬ್ಳೆ ರ 400ನೇ ವಿಕೆಟ್, ರಿಚರ್ಡ್ ಹ್ಯಾಡ್ಲಿ ದಾಖಲೆ ಮಾಡಿದ್ದು, ಕಪಿಲ್ ದೇವ್ ಹ್ಯಾಡ್ಲಿ ದಾಖಲೆ ಸರಿಗಟ್ಟಿದ್ದು ಮುಂತಾದವುಗಳಿಗೆ ಈ ಕ್ರೀಡಾಂಗಣ ಸಾಕ್ಷಿಯಾಗಿದೆ, ವಿದೇಶಿ ತಂಡಗಳೂ ಸಹ ಇಲ್ಲಿನ ವಾತಾವರಣ, ಹವೆ ಮಾತ್ರವಲ್ಲದೆ ಇಲ್ಲಿನ ಪ್ರೇಕ್ಷಕರ ಕ್ರಿಕೆಟ್ ಜ್ಞಾನ ಹಾಗೂ ಕ್ರೀಡಾ ಮನೋಭಾದಿಂದಾಗಿ ಬೆಂಗಳೂರಿನಲ್ಲಿ ಆಡುವುದಕ್ಕೆ ಇಷ್ಟಪಡುತ್ತವೆ. ಇತ್ತೀಚಿನ ವರ್ಷಗಳಲ್ಲಿ ಐಪಿಎಲ್ ನಿಂದಾಗಿ ಕ್ರೀಡಾಂಗಣಕ್ಕೆ ಮತ್ತಷ್ಟು ರಂಗು ದೊರಕಿದೆ.

ಇನ್ನೂ ಕರ್ನಾಟಕ ತಂಡದ ರಣಜಿ ಇತಿಹಾಸ ಒಂದು ಸುಂದರ ಕಥಾನಕ. ಕರ್ನಾಟಕ ಕ್ರಿಕೆಟಿನ ಸುವರ್ಣ ಯುಗವೆಂದೇ ಹೇಳಬಹುದಾದ 90ರ ದಶಕದಲ್ಲಿ ನಾಲ್ಕು ವರ್ಷದ ಅಂತರದಲ್ಲಿ 3 ಬಾರಿ ರಣಜಿ ಟ್ರೋಫಿ ಗೆದ್ದ ಹೆಗ್ಗಳಿಕೆ ಅದರದು. ಭಾರತ ವಿಶ್ವ ಕಪ್ ಗೆದ್ದ 1983ರಲ್ಲೂ ಕರ್ನಾಟಕವೇ ರಣಜಿ ಚಾಂಪಿಯನ್. ಆದರೆ ಇವೆಲ್ಲಕ್ಕಿಂತಲೂ 70ರ ದಶಕದ ಗೆಲವುಗಳೇ ರೋಚಕ. 1959 ರಿಂದ 1973 ರ ವರೆಗೂ ದೇಶದ ರಣಜಿ ಸರಣಿಯಲ್ಲಿ ಆಗಿನ ಬಾಂಬೆ ತಂಡಕ್ಕೆ ಸರಿಸಾಟಿಯೇ ಇಲ್ಲ. 58 ರಲ್ಲಿ ಒಮ್ಮೆ ಬರೋಡ ತಂಡ ಗೆದ್ದದ್ದು ಬಿಟ್ಟರೆ ಎರಡು ದಶಕಗಳ ಪಾರಪತ್ಯ ಬಾಂಬೆ ತಂಡದು. ಅಂತಹ ಬಾಂಬೆ ತಂಡದ ನಾಗಲೋಟಕ್ಕೆ 1974 ರಲ್ಲಿ ತಡೆ ಹಾಕಿ ಟ್ರೋಫಿ ಗೆದ್ದು ಕೊಂಡದ್ದು ಕರ್ನಾಟಕ ತಂಡ. ಮುಂದೆ 78ರಲ್ಲಿ ಮತ್ತೇ ಟ್ರೋಫಿ ಗೆದ್ದು ತನ್ನ ಪ್ರಾಬಲ್ಯವನ್ನು ಮೆರೆಯಿತು. ಯಾವ ಅಂತರರಾಷ್ಟ್ರೀಯ ಪಂದ್ಯಗಳಿಗೂ ಕಡಿಮೆಯಿಲ್ಲದಂತೆ ಪ್ರೇಕ್ಷಕರು ಈ ರಣಜಿ ಪಂದ್ಯಗಳಿಗೆ ಸೇರುತ್ತಿದ್ದದ್ದನ್ನು ಹಿರಿಯರು ಇಂದಿಗೂ ನೆನಪಿಸಿಕೊಳ್ಳುತ್ತಾರೆ, ವಿಶ್ವನಾಥ್, ಬ್ರಿಜೇಶ್ ಪಟೇಲ್, ರಘುರಾಮ್ ಭಟ್ ಮುಂತಾದವರ ಆಟಕ್ಕೆ ಗ್ಯಾಲರಿಗಳು ತುಂಬುತ್ತಿದ್ದ ರೀತಿ ಅನನ್ಯ.ರಣಜಿಯಲ್ಲಿ ರಾಜ್ಯಕ್ಕೆ ಗೌರವ ತಂದು ಕೊಟ್ಟ ದೊಡ್ಡ ಪಟ್ಟಿಯೇ ಇದೆ. ಎಂ.ಚಿನ್ನಸ್ವಾಮಿ , ಶ್ರೀನಿವಾಸನ್ ಮುಂತಾದವರ ತೆರೆಮರೆಯ ಸೇವೆ ಅಪಾರ.

ಕರ್ನಾಟಕ ತಂಡದಿಂದ ಭಾರತವನ್ನು ಪ್ರತಿನಿಧಿಸಿದ ಆಟಗಾರರ ಪಟ್ಟಿಯೇ ಎಲ್ಲವನ್ನು ಹೇಳುತ್ತದೆ, ಕರ್ನಾಟಕದ ನವಾಬ್ ಪಟೌಡಿ ಎಂದೇ ಖ್ಯಾತರಾದ ವಿ.ಸುಬ್ರಮಣ್ಯರದು ಟೆಸ್ಟ್ ನಲ್ಲಿ ಸಾಧಾರಣ ಯಶಸ್ಸಾದರೂ, ಕರ್ನಾಟಕ ರಣಜಿ ತಂಡವನ್ನು ಕ್ಲಬ್ ಮಟ್ಟದಿಂದ ಮೇಲಕೇರಿಸಿದ ಕೀರ್ತಿ ಅವರು ಪಾತ್ರರು. ಇನ್ನೂ ಎರಪಳ್ಳಿ ಪ್ರಸನ್ನ ಈ ದೇಶ ಕಂಡ ಆತ್ತ್ಯುತ್ತಮ ಆಫ್ ಸ್ಪಿನ್ನರ್ ಎಂಬ ಮಾತಿದೆ. ಕ್ಲಾಸಿಕಲ್ ಆಫ್ ಸ್ಪಿನ್ ಎಂದಾಕ್ಷಣ ಪ್ರಸನ್ನರ ಹೆಸರು ವಿಶ್ವ ಕ್ರಿಕೆಟಿನಲ್ಲಿ ಮುಂಚೂಣಿಯಲ್ಲಿ ಕಾಣುತ್ತದೆ. ಪೋಲಿಯೋದಿಂದಾಗಿ ಸ್ವಲ್ಪ ಮಟ್ಟಗಿನ ಶಕ್ತಿಹೀನವಾದ ಕೈಯನ್ನೇ ಅಸ್ತ್ರವನ್ನಾಗಿಸಿಕೊಂಡ ಬಿ.ಎಸ್. ಚಂದ್ರಶೇಖರ್ ಭಾರತ ತಂಡಕ್ಕೆ ವಿದೇಶಗಳಲ್ಲಿ ಮರಿಚಿಕೆಯಾದ ಟೆಸ್ಟ್ ಗೆಲವನ್ನು ತಂದುಕೊಟ್ಟ ಪ್ರಮುಖ ರುವಾರಿ. ಮೂಲತ: ಲೆಗ್ ಸ್ಪಿನರಾದರೂ ಅವರ ವೇಗದ ಬಾಲುಗಳು ವೇಗದ ಬೌಲರುಗಳಿಗಿಂತ ತೀಕ್ಷ್ನತೆ ಪಡೆದಿದ್ದವು ಎಂದು ಅಂದಿನ ಆಟಗಾರರು ನೆನಪಿಸಿಕೊಳ್ಳುತ್ತಾರೆ. ರಣಜಿಯಲ್ಲಿ ಅಸಾಧಾರಣ ಪ್ರತಿಭೆಯಾಗಿದ್ದ ಗ್ಲಾಮರ್ ಬಾಯ್ ಬ್ರಿಜೇಶ್ ಪಟೇಲ್ ಗೆ ಅಂತರಾಷ್ಟ್ರೀಯ ಯಶಸ್ಸು ಮರಿಚಿಕೆಯಾಯಿತು. ಸೈಯದ್ ಕಿರ್ಮಾನಿ ವಿಶ್ವದ ಅತ್ತ್ಯುತ್ತಮ ವಿಕೆಟ್ ಕೀಪರ್ ಗಳಲ್ಲಿ ಒಬ್ಬರು ಎಂಬುದರಲ್ಲಿ ಯಾರಿಗೂ ಅನುಮಾನವೇ ಇಲ್ಲ. ಬ್ಯಾಟಿಂಗ್ ನಲ್ಲಿ ಸಹಾ ಅಪತ್ಭಾಂಧವನಂತೆ ಭಾರತದ ನೆರವಿಗೆ ಬಂದ ಉದಾಹರಣೆಗಳೆಷ್ಟೋ. 1983ರ ವಿಶ್ವಕಪ್ ನಲ್ಲಿ ಆತಿ ಹೆಚ್ಚು ವಿಕೆಟ್ ಪಡೆದು ಭಾರತದ ವಿಜಯದ ಪ್ರಮುಖ ರುವಾರಿಯಾಗಿದ್ದವರು ರೋಜರ್ ಬಿನ್ನಿ. ಜಿ,ಆರ್. ವಿಶ್ವನಾಥ್ ರವರಂತೂ ತಮ್ಮ ಕಲಾತ್ಮಕ ಆಟದಿಂದಾಗಿ ಕ್ರಿಕೆಟ್ ಜಗತ್ತಿನ ಕಣ್ಮಣಿಯಾದವರು. ಬ್ಯಾಟಿಂಗ್ ನ ಆಫ್ ಡ್ರೈವ್,ಸ್ಕ್ವೇರ್ ಕಟ್, ಫ್ಲಿಕ್ ಗಳಿಗೆ ವಿಶಿ ಇಂದಿಗೂ ಹೆಸರುವಾಸಿ.

ಇದಕ್ಕೆಲ್ಲಾ ಕಳಶವಿಟ್ಟಿದ್ದು 90 ಹಾಗೂ ನಂತರದ ದಶಕ, ಈ ದಶಕದಲ್ಲಿ ಅನಿಲ್ ಕುಂಬ್ಳೆ, ಜಾವಗಲ್ ಶ್ರೀನಾಥ್, ವೆಂಕಟೇಶ್ ಪ್ರಸಾದ್, ರಾಹುಲ್ ಡ್ರಾವಿಡ್, ಸುನಿಲ್ ಜೋಶಿ, ವಿಜಯ್ ಭರದ್ವಾಜ್, ಗಣೇಶ್, ಡೇವಿಡ್ ಜಾನ್ಸನ್, ಸೋಮಸುಂದರ್, ರಾಬಿನ್ ಉತ್ತಪ್ಪ ಭಾರತವನ್ನು ಪ್ರತಿನಿಧಿಸಿದರು, ಕಪಿಲ್ ದೇವ್ ನಂತರ ಯಾರು ಎಂಬ ಪ್ರಶ್ನೆಗೆ ತಕ್ಕ ಉತ್ತರ ಕೊಟ್ಟವರು ಜಾವಗಲ್ ಶ್ರೀನಾಥ್.ವಿಶ್ವ ಕಪ್ ನ ಪಂದ್ಯದಲ್ಲಿ ಕೆಣಕಿದ ಅಮೀರ್ ಸೋಹೆಲ್ ನ ವಿಕೆಟ್ ಪಡೆದೇ ಅಪಾರ ಖ್ಯಾತಿ ಪಡೆದ ವೆಂಕಟೇಶ್ ಪ್ರಸಾದ್ ಸ್ವಿಂಗ್ ಬೌಲಿಂಗೆ ಹೆಸರು ಮಾಡಿದವರು. ಇನ್ನೂ ಅನಿಲ್ ಕುಂಬ್ಳೆ ಹಾಗೂ ರಾಹುಲ್ ಡ್ರಾವಿಡರ ಸಾಧನೆ ಎಲ್ಲರಿಗೂ ತಿಳಿದಿರುವುದೇ. ಭಾರತದ ಪರವಾಗಿ ಅತಿ ಹೆಚ್ಚು ವಿಕೆಟ್ ಪಡೆದ ಹೆಗ್ಗಳಿಕೆ ಮಾತ್ರವಲ್ಲದೆ ಭಾರತ ಕ್ರಿಕೆಟಿನ ಅನೇಕ ಹುದ್ದೆಗೆ ಕೇಳಿ ಬರುವ ಪ್ರಮುಖ ಹೆಸರು ಕುಂಬ್ಳೆಯದು. ಗೋಡೆಯೆಂದೇ ಪ್ರಖ್ಯಾತರಾಗಿರುವ ರಾಹುಲ್ ಡ್ರಾವಿಡ್ ಈಗ ವಿಶ್ವ ಕ್ರಿಕೆಟಿನ ದಂತಕಥೆ. ರನ್ನು ಹಾಗೂ ಜನಪ್ರಿಯತೆಯಲ್ಲಿ ಸಚಿನ್ ನಂತರದ ಹೆಸರು ಡ್ರಾವಿಡ್ ರದು
ಕರ್ನಾಟಕ ಕ್ರಿಕೆಟ್ ಹಾಗೂ ಅದರ ಆಟಗಾರರ ಇಷ್ಟೆಲ್ಲಾ ಕ್ರಿಕೆಟ್ ಸಾಧನೆಗಳ ನಡುವೆಯೂ ಇಂದಿಗೂ ಅದರ ಹೆಗ್ಗಳಿಕೆ ಇರುವುದು ಅದರ ಸಜ್ಜನಿಕೆ ಹಾಗೂ ಸಭ್ಯತೆಯಲ್ಲೇ. ಕರ್ನಾಟಕ ಕ್ರಿಕೆಟಿನ ಅಭಿಮಾನಿಗಳಿಗೆ ಇದಕ್ಕಿಂತ ದೊಡ್ಡ ಉಡುಗೊರೆ ಬೇಕೆ?
-ಪ್ರಶಾಂತ್ ಇಗ್ನೇಶಿಯಸ್
ಕ್ರಿಕೆಟ್ ನೋಡುವುದನ್ನು ಬಿಟ್ಟಿದ್ದೇನೆ ನಿಮ್ಮ ಕ್ರಿಕೆಟ್ ಲೇಖನ ಓದುವುದನ್ನು ಇಟ್ಟುಕೊಂಡಿದ್ದೇನೆ.
ReplyDelete