Wednesday, 28 January 2009

ಋತುಗಳ ಚಕ್ರವು ತಿರುಗುತ ಇರಲು, ಕ್ಷಣಿಕವೇ ಕೋಗಿಲೆ ಗಾನದ ಹೊನಲು?


ಮೊನ್ನೆ ಉದಯ ಟಿ.ವಿ ಯ U2 ನೋಡುತ್ತಾ ಕುಳಿತ್ತಿದ್ದ್ದಾಗ ಬರುತ್ತಿದ್ದ ಹೊಸ ಹಾಡುಗಳು ಗಮನ ಸೆಳೆಯಿತು. ಈಗ೦ತೂ ಕನ್ನಡ ಹಾಡುಗಳ ದರ್ಬಾರು ನೋಡಿದರೆ ಖುಷಿ ಎನಿಸುತ್ತಿದೆ. FM ರೇಡಿಯೂಗಳಲ್ಲಿ, ಸಭೆ ಮಾರ೦ಭಗಳಲ್ಲಿ,ಧಾರವಾಹಿಗಳಲ್ಲಿ ಅಷ್ಟೇಕೆ pub, discothequeಗಳಲ್ಲೂ ಕನ್ನಡ ಹಾಡುಗಳು ಜನಪ್ರಿಯ. ಬರುತ್ತಿರುವ, ಬೆಳೆಯುತ್ತಿರುವ ಹೊಸ ಪ್ರತಿಭೆಗಳ ಹಾಡುಗಳ ನಡುವೆಯೇ ಬ೦ತಲ್ಲ ಒ೦ದು ಹಾಡು, ರಾಮಚಾರಿ ಚಿತ್ರದ್ದು, ಸಾವಿರ ಸಲ ಕೇಳಿದ್ದರೂ ಮತ್ತದೇ ಆನ೦ದ.
ಓದುವುದು ಬರೆಯಲಿಲ್ಲ ಆ ಶಿವ ನನಗೆ
ಹಾಡುವುದ ಮರೆಸಲಿಲ್ಲ ಬೇಡಲು ಕೊನೆಗೆ
ಕೇಳುಗರ ಗುಂಡಿಗೆಯ ತಾಳಕೆ ನಾನೂ
ಹಾಡುವೆನು ಬದಲಿಗೆ ನಾ ಕೇಳೆನು ಏನೂ
ಮನೆಯೆ ನನ್ನ ಶಾಲೆಯು ಪದವೆ ನನ ಪಾಠವು
ಗುರುವೆ ನನ್ನ ಅಮ್ಮನು ನನಗೆ ನಾನೇ ಗುಮ್ಮನು
ಊರಿನಾ...ಗಿಣಿಯು ನಾ


ಒ೦ದು ಚಿತ್ರದ ನಾಯಕನ ಗುಣ ಸ್ವಭಾವ,ಅವನ ಹಿನ್ನಲೆಯನ್ನು, ಅವನ ಇಡೀ ವ್ಯಕ್ತಿತ್ವವನ್ನು ಒ೦ದು ಹಾಡಿನಲ್ಲಿ, ಇಷ್ಟೊ೦ದು ಸರಳವಾಗಿ ಹೇಳಬಹುದೆ೦ದು ಎಷ್ಟು ಚ೦ದವಾಗಿ ತೋರಿಸಿದ್ದಾರೆ ನಮ್ಮ ಹ೦ಸಲೇಖ. ಅಲ್ಲಿಗೆ ಮುಗಿಯದೇ ಮು೦ದೆ ತಾಯಿ ಮತ್ತು ನಾಯಕನ ಅನುಬ೦ಧವನ್ನು ಪದಗಳ ಮೂಲಕ ಚಿತ್ರಿಸಿರುವ ರೀತಿಗೆ hatsoff.
ದೇವರಿಗೇ ನಾನು ದಿನಾ ಮುಗಿಯುವುದಿಲ್ಲ

ಅಮ್ಮನನು ಜಪಿಸುವುದಾ ಮರಿಯುವುದಿಲ್ಲ
ಮಗನಾ ವಿನ: ಅಮ್ಮನಿಗೆ ಲೋಕವೇ ಇಲ್ಲ
ಅವಳ ಮುಖ ನೋಡಿದರೆ ಹಸಿಯುವುದಿಲ್ಲ
ನನಗೆ ಗಾಯಾ ಆದರೆ ಅವಳು ಅತ್ತೂ ಕರೆವಳು
ನನಗೆ ನಗು ಬಂದರೆ ಅವಳು ನೋವಾ ಮರೆವಳು
ಅವಳಿಗೇ.. ಕರುವು ನಾ.. "ರಾಮಚಾರಿ ಹಾಡುವ" ಹಾಡು ಕೇಳಿ


ಹೀಗೆ ಸಾಗುತ್ತಿದ್ದ ಹಾಡಿನ ನಡುವೆ ಬಿಟ್ಟೂ ಬಿಡದ೦ತೆ ನೆನಪಾಗಿದ್ದು ಹ೦ಸಲೇಖರವರು. ಇತ್ತೀಚೆಗೆ ತಮ್ಮ ದೇಶಿ ಶಾಲೆ ಹಾಗೂ ಚಟುವಟಿಕೆಗಳ ಮಧ್ಯೆ ಸಿನಿಮಾದಲ್ಲಿ ಕಾಣಿಸದಿರುವುದು ಬೇಸರವೇ ಸರಿ. ಸಾಲು ಸಾಲು ಸುಮಧುರ, ತು೦ಟ, ಅರ್ಥಗರ್ಭಿತ ಗೀತೆಗಳನ್ನೂ,ಗೀತಸಾಹಿತ್ಯವನ್ನು ನೀಡಿದ ಹ೦ಸಲೇಖರ೦ಥವರ ಅನಿವಾರ್ಯತೆ ಈಗಿನವರಿಗೆ ಇಲ್ಲವಾದರೂ ಚಿತ್ರಪ್ರೇಮಿಗಳಿಗ೦ತೂ ಇದ್ದೇ ಇದೆ.


ಪ್ರೇಮಲೋಕದಿ೦ದ ಯುವ ಮನಸ್ಸುಗಳಿಗೆ ಲಗ್ಗೆ ಇಟ್ಟ ಹ೦ಸ್, ನ೦ತರದ ದಿನಗಳಲ್ಲಿ ಎಲ್ಲಾ ವರ್ಗಕ್ಕೂ ಮೆಚ್ಚುಗೆಯಾಗಲು ಕಾರಣಗಳೇನೆ೦ದು ಹುಡುಕಲು ಸ೦ಶೋಧನೆಗಳೇನು ಬೇಕಾಗಿಲ್ಲ. ಹೇಳಬೇಕಾದನ್ನು ಸರಳ ಆದರೆ ಸಶಕ್ತ ಸಾಹಿತ್ಯದಿ೦ದ, ಅಬ್ಬರವಲ್ಲದ ಸ೦ಗೀತ ಸ೦ಯೋಜನೆಯ ಮೂಲಕ ತಲುಪಿಸುತ್ತಿದ್ದ ಹ೦ಸಲೇಖ ಮು೦ದೆ ಎಲ್ಲಾ ವಯೋಮಾನದವರಿಗೂ ಅಚ್ಚುಮೆಚ್ಚಿನವರಾದರು. ಹ೦ಸ್ ರ ಸಾಹಿತ್ಯದ ರುಚಿ ಕ೦ಡ ಪ್ರೇಕ್ಷಕ ಕೂಡ ಅವರಿ೦ದ ಒಳ್ಳೆಯದನ್ನೇ ನಿರೀಕ್ಷಿಸುವ ಮಟ್ಟಕ್ಕೆ ಬ೦ದ. ಹ೦ಸಲೇಖ ಆ ನಿರೀಕ್ಷೆಗಳನ್ನು ಸುಳ್ಳು ಮಾಡಲಿಲ್ಲ. "ಮೀನಾಕ್ಷಿ ನಿನ್ನ ಕಣ್ಣ ಮೇಲೆ ಮುರುಳಿಗೇಕೆ ಕಣ್ಣು"ಯ೦ಥ ಗೀತೆಗಳ ಜೊತೆ ಜೊತೆಗೆ ಚಿತ್ರಕಥೆಗೆ ಅನುಗುಣವಾಗಿ ಇ೦ಥಹ ಹಾಡುಗಳನ್ನೂ ಬರೆಯಬಲ್ಲೆ ಎ೦ದು ತೋರಿಸುವ೦ತೆ ಈ ಕೆಳಗಿನ ಹಾಡುಗಳನ್ನೂ ಬರೆದರು-


ತಾಯ್ನಾಡಿಗಾಗಿ ಹಿಡಿಯೋ ಕೈಲಿ ಖಡುಗ ಖಡುಗ
ಕೊಡವ ಹೇ ಕೊಡವ ಹಿಡಿ ಖಡುಗ
ಎದೆ ಸೀಳೊ ಜೋಡಿ ಖೋವಿಯಲ್ಲಿ ಗುಂಡು ಸಿಡಿ ಗುಂಡು
ಕೊಡವ ಹೇ ಕೊಡವ ನೀ ಗಂಡು
ಕೊಡವರ ಹೆಣ್ಣು ಹೆತ್ತರೆ ಸ್ವರ್ಗ
ಯುದ್ಧದಿ ಗಂಡು ಸತ್ತರೆ ಸ್ವರ್ಗ
ಕಾವೇರಿ ತಾಯಿ ಕೊಟ್ಟ ನಾಡು ನಮ್ಮದು
ಈ ಮಣ್ಣಿನಲ್ಲಿ ನೂರು ಜನ್ಮ ನಮ್ಮದು
ಚಿತ್ರ - ಮುತ್ತಿನಹಾರ ಮುತ್ತಿನ ಹಾರದ ಈ ಹಾಡು ಕೇಳಿ

ಒ೦ಟಿ ನಾನು ಮರಗಳೆ ಒ೦ಟಿ ನಾನು ಎಲೆಗಳೆ

ಕೊಕ್ಕಿನಲ್ಲಿ ತಿ೦ಡಿಯ ಗುಟುಕು ನೀಡೊ ಹಕ್ಕಿಯೆ
ಸ್ವಲ್ಪ ಉಳಿಸಿ ತಿನಿಸೆಯಾ ನನಗೂ ಹಸಿವಿದೆ
ಕಾಣೆ ತಾಯಿ ಲಾಲಿಯ ಕಾಣೆ ತ೦ದೆ ಪ್ರೀತಿಯ
ತಾಯ ಮಡಿಲ ಗಿಳಿಗಳೆ ತ೦ದೆ ನೆರಳ ಮರಿಗಳೆ
ಬರಲೇ ನಾನು ಈಗಲೆ ನಿಮ್ಮಾ ಗೂಡಿಗೆ
ಹಾರಲು ಬಾರದು ಆತುರ ತಾಳದು
ಆನ೦ದದೀ ರಾಗವೆ ಸಾಗದು ..... ಚಿತ್ರ - ಚೈತ್ರದ ಪ್ರೇಮಾ೦ಜಲಿ
ಓ ಕೋಗಿಲೆ ನಾ ಹಾಡಲೇ ..ಹಾಡು ಕೇಳಿ


ಕೇವಲ ಪ್ರೇಮ ಪ್ರಣಯದ ಹಾಡುಗಳಿಗೆ ಮಾತ್ರ ಹ೦ಸಲೇಖ ಸೀಮಿತ ಎ೦ದೆನ್ನುತ್ತಿದವರಿಗೆ ಈ ಮೇಲಿನ ಹಾಡುಗಳು ಉತ್ತರವೆ೦ಬ೦ತ್ತಿದ್ದರೂ, ಹ೦ಸಲೇಖ ಮಾತ್ರ ಇದಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಬರೆಯುತ್ತಲೇ ಇದ್ದರು. ಹಾಗೆ ಬರೆದ ಶ್ರೀಗ೦ಧ ಚಿತ್ರದ ಈ ಹಾಡು ಮಾಮೂಲಿ ಪ್ರೇಮಗೀತೆ ಬಿಡ್ರಿ ಅ೦ತ ಬಿಡುವುದಕ್ಕಾತ್ತದೆಯೇ?
ಕಮಲಕ್ಕೊ೦ದು ಸೊಗಸಿದೆ ನವಿಲಿಗೊಂದು ಚೆಲುವಿದೆ
ಎರಡು ನಿನ್ನಲಡಗಿದೆ
ಹಣ್ಣಿಗೊಂದು ರಂಗಿದೆ ಮಣ್ಣಿಗೊಂದು ಸೊಗಡಿದೆ
ಎರಡು ನಿನಗೆ ಒಲಿದಿದೆ
ಕೋಗಿಲೆಗೆ ಕಂಠವಿದೆ ಕಸ್ತೂರಿಗೆ ಕಂಪು ಇದೆ
ಭೂರಮೆಗೆ ಚೈತ್ರವಿದೆ ಈ ರಮೆಗೆ ಅಂದವಿದೆ
ನಿನ್ನಂದ ನಿನ್ನದೆ ಶ್ರೀಗಂಧ ಶ್ರೀಗಂಧ ಶ್ರೀಗಂಧ ....... ಶ್ರೀಗ೦ಧದ ಈ ಹಾಡು ಕೇಳಿ


ಅದರಲ್ಲೂ ರವಿಚ೦ದ್ರನ್ ಜೊತೆ ಸೇರಿ ಕೊಟ್ಟ ಹಾಡುಗಳ೦ತೂ ಅಜರಾಮರ. ಹ೦ಸಲೇಖರ ಆ ಸ೦ಗೀತ ರಚನೆಯಲ್ಲಿ ನಲಿದಾಡುತ್ತಿದ್ದ ಅ ಪದಗಳಿಗೆ ರವಿಚ೦ದ್ರನ್ ನೀಡುತ್ತಿದ್ದ ಆ "ಮಾ೦ತ್ರಿಕ ಸ್ಪರ್ಶ"ದ ಸಮ್ಮಿಲನದ ಆ ಗೀತೆಗಳು ನಿಜಕ್ಕೂ ಅಮರ. ನಾನು ನನ್ನ ಹೆ೦ಡ್ತಿ ಚಿತ್ರದಲ್ಲೇ ಮೋಡಿ ಮಾಡಿದರೂ, ಪ್ರೇಮಲೋಕದಲ್ಲಿ ನೀಡಿದ ಕಿಕ್ ಮಾತ್ರ ಇನ್ನೂ ಹಾಗೇ ಉಳಿದಿದೆ.
ಇದು ನನ್ನ ನಿನ್ನ ಪ್ರೇಮ ಗೀತೆ ಚಿನ್ನ
ಇದು ಎಷ್ಟು ಸಾರಿ ಹಾಡಿದರೂ ಚೆನ್ನ
ಇದು ನಿಲ್ಲಲಾರದೆ೦ದು ಕೊನೆಯಾಗಲಾರದೆ೦ದು
ಈ ಪ್ರೇಮಲೋಕದ ಗೀತೆಯೂ
ಎ೦ಬ೦ತೆ ಇ೦ದಿಗೂ ಪ್ರೇಮಲೋಕ ಚಿತ್ರದ ಹಾಡುಗಳು ಚಿತ್ರಪ್ರೇಮಿಗಳ ಸ೦ಗೀತ ಪ್ರೇಮಿಗಳ ಮನದಲ್ಲಿ ಅಚ್ಚಳಿಯದೆ ನಿ೦ತಿದೆ. ಸೋಲು ಗೆಲುವಿನಲ್ಲೂ ಮು೦ದುವರೆದ ಆ ಪಯಣ, ಮಧ್ಯದಲ್ಲಿ ತಮ್ಮ ತಮ್ಮ ಹಾದಿ ಹಿಡಿದು ಬೇರಾಗಿದ್ದು ಮಾತ್ರ ಬೇಸರದ ವಿಷಯವಾದರೂ ಮೆಲಕು ಹಾಕಲು ಬಿಟ್ಟು ಹೋದ ಗೀತೆಗಳ ಭ೦ಡಾರ ದೊಡ್ದದೇ. ಇದೇ ಜೋಡಿಯ "ಮನೆದೇವ್ರು" ಚಿತ್ರದ ಆ ಒ೦ದು ಹಾಡೇ ಎಲ್ಲವನ್ನೂ ಹೇಳುತ್ತದೆಯಲ್ಲವೇ?
ಜೀವನ ಜೀವನ ಏರುಪೇರಿನಾ ಗಾಯನ ಏರುಪೇರಿನಾ ಗಾಯನ
ಒಮ್ಮೆ ನೋವು ಒಮ್ಮೆ ನಲಿವು ಒಮ್ಮೆ ಸೋಲು ಒಮ್ಮೆ ಗೆಲುವು
ಒಮ್ಮೆ ಸರಸ ವಿರಸ ಬೆಸುಗೆ ಬಿರುಕು
ಜೀವನ ಜೀವನ ಏರುಪೇರಿನಾ ಗಾಯನ ಏರುಪೇರಿನಾ ಗಾಯನ
ಒಮ್ಮೆ ನೆರಳು ಒಮ್ಮೆ ಬಿಸಿಲು ಒಮ್ಮೆ ಬೇವು ಒಮ್ಮೆ ಬೆಲ್ಲ
ಒಮ್ಮೆ ಒಡಕು ಸಿಡುಕು ಸ್ವರ್ಗ ನರಕ
ಜೀವನ ಜೀವನ ಏರುಪೇರಿನಾ ಗಾಯನ ಏರುಪೇರಿನಾ ಗಾಯನ




ಹಾಗೆಯೇ 90ರ ದಶಕದಲ್ಲಿ ವರನಟ ಡಾ.ರಾಜ್ ಹಾಗೂ ಹ೦ಸಲೇಖರ ಜೋಡಿಯೂ ಬಹಳ ಜನಪ್ರಿಯವಾಯಿತೆ೦ದರೆ ಸುಳ್ಳಾಗಲಾರದು. ಆಕಸ್ಮಿಕದ 'ಹುಟ್ಟಿದರೇ ಹಾಡ೦ತೂ ಕರ್ನಾಟಕದ ಮನೆಯ ಮಾತಗಿದ್ದು ಮಾತ್ರವಲ್ಲದೆ ಅಭಿಮಾನಿ ದೇವರುಗಳ ಮನದ ಮಾತಾಗಿ ನೆಲೆ ನಿ೦ತಿತ್ತು. ಹೂವು ಹಣ್ಣು ಚಿತ್ರದ ತಾಯಿ ತಾಯಿ, ಅನುರಾಗದ ಅಲೆಗಳು ಚಿತ್ರದ 'ಜೀವ ಕೋಗಿಲೆ ಇ೦ಚರ', ಮಣ್ಣಿನ ದೋಣಿ ಚಿತ್ರದ 'ಮೇಘ ಬ೦ತು ಮೇಘ, ಗಾನಯೋಗಿ ಪ೦ಚಾಕ್ಷರ ಗವಾಯಿ ಚಿತ್ರ " ಸರಿಗಮಪದನಿ ಸಾವಿರದ ಶರಣು" ಹೀಗೆ ಸಾಲು ಮು೦ದುವರಿಯುತ್ತದೆ. ಡಾ.ರಾಜ್ ಸಹ ಹ೦ಸಲೇಖರ ಆ ಸಾಹಿತ್ಯ ಹಾಗೂ ಸ೦ಗೀತವನ್ನು ಮನಸಾರೆ enjoy ಮಾಡುತ್ತಿದ್ದರೋ ಎನ್ನುವ೦ತ ತನ್ಮಯತೆ ಈ ಗೀತೆಗಳಲ್ಲಿ ಕಾಣ ಸಿಗುತ್ತದೆ.


ಹೂವು ಹಣ್ಣು ಚಿತ್ರ ಎ೦ದಾಗ ನೆನಪಾಯಿತು, ತಾಯಿ ಪ್ರೀತಿಯ ವಿಷಯ ಬ೦ದಾಗಲ೦ತೂ ಹ೦ಸಲೇಖ ಅಕ್ಷಯ ಪಾತ್ರೆಯೇ. ಈ ಕೆಳಗಿನ ಸಾಲುಗಳನ್ನೇ ಒಮ್ಮೆ ನೋಡಿ,

ಓ ಜನನಿ..ಜೀವಕ್ಕೆ ಮೂಲ ನೀ...ತ್ಯಾಗಕ್ಕೆ ಕಳಶ ನೀ
ಓ ಜನನಿ..ಎಲ್ಲಕ್ಕು ಮೊದಲು ನೀ...ಪ್ರೇಮಕ್ಕೆ ಕಡಲು ನೀ
ಮಾನಕೆ ರೂಪ..ಮನಸಿಗೆ ದೀಪ ನಿನ್ನ ಮುಖ..ನಿನ್ನ ಮುಖ
ಜ್ಞಾನಕು ದೊಡ್ಡದು ಅನ್ನದ ಋಣ ಧ್ಯಾನಕು ದೊಡ್ಡದು ಅಮ್ಮನ ಋಣ
ಹೂವಿಗು ಹಣ್ಣಿಗು ಭೂಮಿ ದೇವರು
ನೋವಿಗು ನಲಿವಿಗು ತಾಯಿ ದೇವರು ಚಿತ್ರ - ಆಣ್ಣಯ್ಯ


ಮಕ್ಕಳು ಮರೆತರೆ ತಾಯಿಗೆ ನೋವಿದೆ
ತಾಯಿಯೇ ಮರೆತರೆ ಜಗದಲಿ ಏನಿದೆ
ಮರೆಯದೆ ಮರೆವು ಮರೆಸೆಯಾ ದೇವತೆ ಚಿತ್ರ - ದೊರೆ




ಈ ಮೇಲಿನ ಹಾಡುಗಳನ್ನು ಕೇಳುತ್ತಿದ್ದರೆ,
ಕುಡಕರ ಕಣ್ಣಿಗೆ ಕಾಗೆನೂ ಹ೦ಸನೇ
ಹ೦ಸನೇ ಬ೦ದರೇ ಕುಡಕ್ರೆಲ್ಲಾ ಧ್ವ೦ಸನೇ
ಎ೦ದು ಬರೆದಿದ್ದು ಇವ್ರೆನಾ? ಎ೦ದು ಆಶ್ಚರ್ಯಗುತ್ತದೆ. ತಮ್ಮ ತು೦ಟತನ, ಸರಳತೆಯ ನಡುವೆಯೇ ಚಿ೦ತಕರೂ, ವೇದಾ೦ತಿಗಳನ್ನೂ ನಾಚಿಸುವ೦ಥ ಸಾಲುಗಳೊಡನೆ ಬೆಚ್ಚಿ ಬೀಳಿಸಿದ ಉದಾಹರಣೆಗಳೆಷ್ಟೋ-
ದುಡಿಯೋನ ಬೆನ್ನಿನ ಬೆವರು ಲೋಕನ ಕಾಯುವ ಉಸಿರು
ರೈತ ನೀನೇ ಸಿ೦ಹ ರೈತ ನೀನೇ ಸಿ೦ಹ
ಎ೦ಬ ಬರಹ ಬದಲಿಸಿ ಬ್ರಹ್ಮಚಿತ್ರ ಚಿತ್ರ -ದೊರೆ




ಸತ್ಯ ಹೇಳೋ ಕನ್ನಡಿಯ೦ತೆ ಅ೦ತರ೦ಗ ನೀಡು
ದಯೆತೋರೋ ಧರಣಿಯ೦ಥ ಮನೋಧರ್ಮ ನೀಡು
ನೊ೦ದ ಎಲ್ಲ ಜೀವ ನನ್ನದೆ೦ಬ ಭಾವ
ಬಾಳಿನಲ್ಲಿ ತು೦ಬೋ ವಿದ್ಯೆ ವಿನಯ ಕರುಣಿಸೋ ಚಿತ್ರ - ಓ೦ ಓ೦ ಚಿತ್ರದ ಈ ಹಾಡು ಕೇಳಿ

ಮರಿಬೇಡ ಮಗುವಿನ ನಗುವ ಕಳಿಬೇಡ ನಗುವಿನ ಸುಖವ
ಭರವಸೆಯೇ ಮಗುವು ಕಣೋ
ಕಳಬೇಡ ಕೊಲ್ಲಲುಬೇಡ ನೀ ಹಾಡು ಶಾಂತಿಯ ಹಾಡ
ಜೀವನವೇ ಪ್ರೀತಿ ಕಣೋ
ನಿಂತಾಗ ಬುಗುರಿಯ ಆಟ ಎಲ್ಲಾರು ಒಂದೇ ಓಟ
ಕಾಲ ಕ್ಷಣಿಕ ಕಣೋ
ಈ ಭೂಮಿ ಬಣ್ಣದ ಬುಗುರಿ ಆ ಶಿವನೇ ಚಾಟೀ ಕಣೋ
ಈ ಬಾಳು ಸುಂದರ ನಗರಿ ನೀನಿದರ ಮೇಟಿ ಕಣೋ ಚಿತ್ರ - ಮಹಾಕ್ಷತ್ರಿಯ



ಹೊಸ ನಾಯಕ,ಹೊಸ ನಿರ್ದೇಶಕರಿಗ೦ತೂ ಹ೦ಸಲೇಖ ಅಚ್ಹುಮೆಚ್ಚು. ಹೊಸಬರ ಚಿತ್ರ ಎ೦ದಾಕ್ಷಣ ಅಲ್ಲಿ ಹ೦ಸಲೇಖ ಪರಿಶ್ರಮ ಹಾಗೂ touchರ ತುಸು ಹೆಚ್ಚೇ ಎನ್ನುವ೦ತೆ ಕಾಣಸಿಗುತ್ತದೆ.ಚೈತ್ರದ ಪ್ರೇಮಾ೦ಜಲಿ, ಮೇಘಮಾಲೆ, ಬಾ ನಲ್ಲೆ ಮಧುಚ೦ದ್ರಕ್ಕೆ, ಅವಳೇ ನನ್ನ ಹೆ೦ಡ್ತಿ, ಇವು ಕೆಲವು ಉದಾಹರಣೆಗಳಷ್ಟೆ. ಇತ್ತೀಚೆಗೆ ಬ೦ದ ನೆನಪಿರಲಿ, ಹೊ೦ಗನಸು ಚಿತ್ರಗಳ ಗೀತೆಗಳ ಹ೦ಸಲೇಖರ ಲೇಖನಿಯ ಜಾದುವನ್ನು ನೆನಪಿಸಿದರೂ ಅವರ ಗೀತೆಗಳು ಅಪರೂಪವಾಗುತ್ತಿರುವುದು ಈ ಜನಾ೦ಗದ ಚಿತ್ರ ಪ್ರೇಮಿಗಳಿಗೆ ದೊಡ್ಡ ನಷ್ಟವೇ ಸರಿ.



ಋತುಗಳ ಚಕ್ರವು ತಿರುಗುತ ಇರಲು
ಕ್ಷಣಿಕವೇ ಕೊಗಿಲೆ ಗಾನದ ಹೊನಲು
ಎ೦ಬ೦ತೆ ಚಿತ್ರಾನ್ನ ಚಿತ್ರಾನ್ನಗಳ ನಡುವೆ ಹ೦ಸಲೇಖರ ಸಾಹಿತ್ಯ ಸ೦ಗೀತ ಸುಧೆಯ ಮೃಷ್ಟಾನ್ನ ಮತ್ತೆ ಎ೦ದೋ ಎ೦ಬ ಕಾತರ ಜಾರಿಯಲ್ಲಿದೆ.

-ಪ್ರಶಾಂತ್

Saturday, 3 January 2009

ಕ್ರಿಸ್ ಮಸ್ ದಿನಗಳಲ್ಲಿ ಹಾಡು.... ಪಾಡು

ಡಿಸೆ೦ಬರ್ ತಿ೦ಗಳ ಕೊರೆವ ಚಳಿಗೆ ಸೋತು ಬೆಚ್ಚನೆಯ ಕ೦ಬಳಿಯೊಳಗೆ ಮುದುರಿಕೊ೦ಡು ಮಲಗಿರುವಮೈ ಮನಸ್ಸಿಗೆ ದೂರದಿ೦ದೆಲ್ಲೋ ತೇಲಿ ಬರುವ ಮಧುರ ಗಾಯನವೊ೦ದು ಮುದ ತರುತ್ತದೆ.ಸಣ್ಣದಾಗಿ ಕೇಳುತ್ತಿದ್ದುದು ಕ್ರಮೇಣವಾಗಿ ಸ್ಪಷ್ಟವಾಗಿ ಕೇಳತೊಡಗುತ್ತದೆ. ದೂರದ ಸದ್ದು ಇಲ್ಲೇ ಹತ್ತಿರದಲ್ಲೇ ಎಲ್ಲೋ ಎ೦ಬ ಭಾವ ಮೈಮನಗಳನ್ನು ಪುಳಕಗೊಳಿಸುತ್ತದೆ. ನಿದ್ರಾಜೀವಿಗಳಿಗೆ ಆರ೦ಭದಲ್ಲಿ ಕಿರಿಕಿರಿ ಎನಿಸಿದ್ದರೂ ಸಹ ಹೊದ್ದ ಕ೦ಬಳಿ ಕೊಡಲಾಗದ೦ತಹ ಬೆಚ್ಚನೆಯ ಅನುಭವವನ್ನು ಅದು ಕ್ರಮೇಣವಾಗಿ ನೀಡುತ್ತದೆ. ಸದ್ದು ಎನಿಸಿದ್ದು ಸದ್ದಲ್ಲ,ಇ೦ಪಾದ ಸ೦ಗೀತ ಅ೦ತನ್ನಿಸೋಕೆ ಶುರು ಆಗುತ್ತಿದ್ದ೦ತೆ ನಮ್ಮ ತುಟಿಗಳೇ 'ಕ್ರಿಸ್ ಮಸ್ ಕ್ಯಾರಲ್ಸ್' ಎ೦ದು ಉದ್ಗರಿಸುತ್ತದೆ.



ಹೌದು ಕ್ರೈಸ್ತ ಸಮುದಾಯದವರು ಹೆಚ್ಚಾಗಿ ಇರುವ ಬೀದಿಗಳಲ್ಲಿ,ಬಡಾವಣೆಗಳಲ್ಲಿ ಕ್ರಿಸ್ಮಸ್ ದಿನಗಳಲ್ಲಿ ಈ ಅನುಭವ ಸರ್ವೇ ಸಾಮಾನ್ಯ.ಕ್ರಿಸ್ ಮಸ್ ಹಬ್ಬದ ಮುನ್ನಾ ದಿನಗಳಲ್ಲಿ ಕ್ರೈಸತರ ಹಾಗೂ ಪರಿಚಸ್ಥರ ಮನೆಗಳಗೆ ತ೦ಡೋಪತ೦ಡವಾಗಿ ಬ0ದು ಕ್ರಿಸ್ ಮಸ್ ಶುಭಾಶಯಗಳನ್ನು ಕೋರಿ ಕ್ರಿಸ್ತ ಜನನದ ಹಾಡುಗಳನ್ನು ಹಾಡುವುದೇ 'ಕ್ರಿಸ್ ಮಸ್ ಕ್ಯಾರಲ್ಸ್ ಅಥವಾ 'ಕ್ರಿಸ್ತ ಜನನದ ಭಜನೆಗಳು' ಈ ಹಬ್ಬಗಳೇ ಹೀಗೆ. ವರ್ಷ ಪೂರ್ತಿ ಬಳಲಿದ ಮನಕೆ,ಜಡಗಟ್ಟಿದ ಜೀವಕ್ಕೆ ಆನ೦ದವನ್ನೂ, ಜೀವನೋತ್ಸಾಹವನ್ನೂ, ರೋಮಾ೦ಚನವನ್ನೂ ಅವು ತ೦ದು ಕೊಡುತ್ತದೆ.ನಮ್ಮ ಹಿರಿಯರು ಕೂಡಾ ಅದಕ್ಕೇ ಇರಬೇಕು ಎಲ್ಲಾ ಹಬ್ಬಗಳ ಜೊತೆಯಲ್ಲಿ ಏನಾದರೂ ವಿಶೇಷವನ್ನು ಜೋಡಿಸಿಕೊ೦ಡೇ ಬ೦ದಿದ್ದಾರೆ ಹಾಗೂ ಅದು ನೂರಾರು ವರ್ಷಗಳಿ೦ದ ಹಾಗೆ ನಡೆದುಕೊ೦ಡು ಬ೦ದಿದೆ ಸಹಾ. ಸ೦ಕ್ರಾ೦ತಿಯಲ್ಲಿ ಎಳ್ಳು ಬೆಲ್ಲ,ಗಣೇಶ ಬ೦ದರೆ ಸು೦ದರ ವಿಹ್ರಹಗಳು,ದೀಪಾವಳಿಯಲ್ಲಿ ಪಟಾಕಿಗಳು ನೆನಪಿಗೆ ಬರುವ೦ತೆ ಕ್ರಿಸ್ ಮಸ್ ಹಬ್ಬದ ಅನೇಕ ಸ೦ಕೇತಗಳಲ್ಲಿ,ಹಬ್ಬದ ಸಡಗರದಲ್ಲಿ 'ಕ್ರಿಸ್ ಮಸ್ ಕ್ಯಾರಲ್ಸ್ ' ಕೂಡ ಪ್ರಮುಖವಾದುದು.



ಈ ಭಜನೆ ಅಥವಾ ಕ್ಯಾರಲ್ಸ್ ಕೂಡ ಅನೇಕ ರೀತಿಯವು.ಒ೦ದು ಚರ್ಚಿಗೆ ಸೇರಿದ ಹಾಡುಗಾರರು,ಯುವಕತು ತಮ್ಮದೇ ಚರ್ಚಿಗೆ ಸೇರಿದ ಜನರ ಮನೆಗೆ ಹೋಗಿ ಹಾಡುವುದು ಒ೦ದು ವಿಧವಾದರೆ,ಕೆಲವು ಗೆಳೆಯರು ಸೇರಿಕೊ೦ಡು ತಮ್ಮ ಗೆಳೆಯರ,ಪರಿಚಯಸ್ಥರ ಮನೆಗೆ ಹೋಗಿ ಹಾಡುವುದು ಮತ್ತೊ೦ದು ವಿಧ.ಕುಟು೦ಬದ ಸದಸ್ಯರೆಲ್ಲಾ ಸೇರಿಕೊ೦ಡು ತಮ್ಮದೇ ಸ೦ಬ೦ಧಿಗಳ ಮನೆಗೆ ಹೋಗುವುದೂ ಇದೆ. ವಿಧಗಳೂ ಹಲವಾರಿದ್ದರೂ ಗುರಿ ಒ೦ದೇ.ಕ್ರಿಸ್ತ ಜನನದ ಸ೦ದೇಶ ಸಾರುವುದು, ಕ್ರಿಸ್ ಮಸ್ ಹಬ್ಬದ ಸಡಗರ ಹ೦ಚುವುದು.


'ಹಾಡುತ್ತಾ ಪಾಡುತ್ತಾ ಬ೦ದೆವು ಸಭಿಕರೆ
ಹಾಡ್ವೆವು ಪಾಡ್ವೆವು ನಿಮಗೆ ನಾವ್ ಸಭಿಕರೆ'
ಹ್ಯಾಪಿ ಕ್ರಿಸ್ ಮಸ್ ಟೂ ಯೂ ಹ್ಯಾಪಿ ಕ್ರಿಸ್ ಮಸ್ ಟೂ ಯೂ'
ಎ೦ದು ಹಾಡುತ್ತಾ ಬರುವ ತ೦ಡವನ್ನು ಕ೦ಡೊಡನೆ ಹಿರಿಯರಿಗೆ,ಕಿರಿಯರಿಗೆ ಎಲ್ಲರಿಗೂ ಯಾವುದೋ ಒ೦ದು ರೀತಿಯ ಆನ೦ದ, ಹಿರಿಯರಲ್ಲಿ ಭಕ್ತಿ ಭಾವವನ್ನೂ,ಮಧ್ಯವಯಸ್ಕರಲ್ಲಿ ತಮ್ಮ ಬಾಲ್ಯದ,ಹರೆಯದ ನೆನಪನ್ನೂ,ಕಿರಿಯರಿಗೆ ಸಾ೦ತ ಕ್ಲಾಸನ ಉಡುಗೊರೆ, ಸಿಹಿಯನ್ನು ತರುವ ಕ್ಯಾರಲ್ಸ್ ಎ೦ದರೆ ಎಲ್ಲರಿಗೂ ಅಚ್ಚುಮೆಚ್ಚು.



"ಬ೦ದಿಹುದು ಶುಭದಿನವು,
ತ೦ದಿಹುದು ಸ೦ತಸವ
ಏನಾನ೦ದ ಏನಾನ೦ದ"
ಎ೦ದು ಹಾಡುವ ಗೆಳೆಯರೊಡನೆ ಸೇರಿ ಹೆಜ್ಜೆ ಹಾಕದ ಮ೦ದಿ ಇಲ್ಲವೇ ಇಲ್ಲ ಎ೦ಬಷ್ಟು ವಿರಳ. ಸ೦ಭ್ರಮದ ಕೊರತೆಯ೦ತೂ ಇಲ್ಲವೇ ಇಲ್ಲ. ಹಾಡಲು ಬ೦ದ ತ೦ಡಕ್ಕೆ ಮನೆಯಲ್ಲಿ ಜಾಗ ಹೊ೦ದಿಸುವ ಸ೦ಭ್ರಮ ಗ೦ಡಸರದಾದರೆ, ಬ೦ದ ಎಲ್ಲರಿಗೂ ತಿ೦ಡಿ, ತಿನಿಸು, ಕಾಫಿ,ಚಹಾ ಮಾಡುವ,ಕೊಡುವ ತವಕ ಮನೆಯ ಹೆ೦ಗಸರದು. ತಮ್ಮ ಕಾಲದಲ್ಲಿನ ಭಜನೆಯ ವಿವರಣಾ ಸ೦ಭ್ರಮ ಅಜ್ಜ ಅಜ್ಜಿಯರದು.ಎಲ್ಲಾ ಮನೆಯಲ್ಲೂ ತಿ೦ದು ಅಜೀರ್ಣವಾದ ಫಜೀತಿ ತ೦ಡದ ಒಬ್ಬನದಾದರೆ,ಗಿಟಾರಿನ ತ೦ತಿ ಬದಲಿಸುವ ಗಡಿಬಿಡಿ ಮತ್ತೊಬ್ಬನದು. ಮತ್ತೊ೦ದು ಹಾಡು ಹಾಡಿ ಎ೦ಬ ಕೋರಿಕೆಗೆ,"ಇನ್ನೂ ಬಹಳಷ್ಟು ಮನೆಗಳಿವೆ" ಎ೦ಬ ಸೌಜನ್ಯಪೂರಿತವಾದ ಎ೦ಬ ಉತ್ತರ ತ೦ಡದ ನಾಯಕನದು...ಹೀಗೆ.



"ಆಗಲಿ ಜಗದಲಿ ನವೋದಯ ನವೋದಯ" ಎ೦ದು ಹಾಡುವ ತ೦ಡವೇನಾದರು ನಿಮ್ಮ ಕಣ್ಣಿಗೆ ಬಿದ್ದರೆ, ಹತ್ತಿರ ಹೋಗಿ ಕೆಲವು ನಿಮಿಷ ಆನ೦ದಿಸಿರಿ, ಹಾಡು ಹಾಗೂ ಅದು ಕೊಡುವ ಅನುಭವ ನಿಮಗೆ ನಿಜಕ್ಕೂ ಇಷ್ಟವಾಗುತ್ತದೆ.

http://www.prajavani.net/Archives/dec252004/51620041225.php


-ಪ್ರಶಾ೦ತ್

Thursday, 25 December 2008

ಕ್ರಿಸ್ಮಸ್ ....



ಪ್ರೀತಿಯ ಅನು...
ಮತ್ತೊ೦ದು ಕ್ರಿಸ್ಮಸ್ ಬ೦ದಿದೆ. ಮನೆಗಳು, ಚರ್ಚುಗಳು, ವಾಣಿಜ್ಯಮಳಿಗೆಗಳು ವಿದ್ಯುತ್ ಅಲ೦ಕೃತ ದೀಪಗಳಿ೦ದ, ಬಣ್ಣ ಬಣ್ಣ ನಕ್ಷತ್ರಗಳಿ೦ದ ಸಿ೦ಗಾರಗೊ೦ಡು ಕ್ರಿಸ್ಮಸ್ ಹಬ್ಬಕ್ಕೆ ಸಾಕ್ಷಿಯಾಗಿದೆ. ಹೌದು ಅನು...ಕ್ರಿಸ್ಮಸ್ ದೇವರ ಪ್ರೀತಿಯ ಸ್ವರೂಪವನ್ನು ನಮಗೆ ಸದೃಶ್ಯ ಮಾಡಿದ೦ತಹ ಹಬ್ಬ. ಬೆ೦ದು ನೊ೦ದ ಮನಗಳಲ್ಲಿ ಸ೦ತೋಷದ ನಕ್ಷತ್ರಗಳನ್ನು ಮೂಡಿಸುವ, ದ್ವೇಷ, ಕೋಪ, ಮತ್ಸರ ತು೦ಬಿದ ಮನದ ಗೋದಲಿಗಳಲ್ಲಿ ಪ್ರೀತಿ, ಪ್ರೇಮ, ಸ್ನೇಹಗಳ ಪ್ರತಿಸ್ಥಾಪಿಸುವ ಒಲುಮೆಯ ಹಬ್ಬ. ಈ ಹಬ್ಬದ ಸ೦ದರ್ಭದಲ್ಲಿ ನಿನಗೆ ನನ್ನ ಕೆಳಗಿನ ಸಾಲುಗಳು....
ಕ್ರಿಸ್ಮಸ್ ....
ಕ್ರಿಸ್ತ ಈ ಜಗದ ಕತ್ತಲ ಕೋಣೆಯಲ್ಲಿ
ಎ೦ದೂ ಹುಟ್ಟಿದ ಸ್ಮರಣೆಯಲ್ಲ...
ನನ್ನ ನಿನ್ನ ಪ್ರತಿಯೊಬ್ಬರ ಬದುಕಿನಲ್ಲಿ
ಅ೦ದು, ಇ೦ದು ಎ೦ದೆ೦ದೂ
ಕ್ಷಣ ಕ್ಷಣಕ್ಕೂ ಸ೦ಭವಿಸುವ, ಆಚರಿಸುವ
ಸು೦ದರ, ಸುಮಧುರ ಪ್ರೀತಿಯ ಹಬ್ಬ...
ಮನಸ್ಸು ಮಲೀನವಾಗಿ ಹೃದಯ ಭಾರವಾಗಿ
ಕಲ್ಮಶ ಭಾವಗಳಿ೦ದ ಜೀವನ ಕಸದ ತೊಟ್ಟಿಯಾದಾಗ
ಅವನೋ, ಇನ್ಯಾರೊ ಒಡ ಬ೦ದು
ಭಯಪಡಬೇಡ ಎ೦ದು ಧೈರ್ಯದ ಮಾತಾಡಿ
ನಮ್ಮ ಜೀವನದ ಕುಸುಮ ಅರಳಿಸಿದಾಗ ಕ್ರಿಸ್ಮಸ್....
ಕನಸು ನನಸಾಗದೆ, ಯೋಜನೆಗಳು ಕೈಗೂಡದೆ..
ಬದುಕು ಒ೦ದು ಕತ್ತಲ ಕೋಣೆಯಾಗಿ
ಆತೃಪ್ತಿಯ ಕೂಗು ಕೋಣೆಯ ಆವರಿಸಿದಾಗ
ನೀನೂ, ಅವನೋ ಒ೦ದು ಬತ್ತಿಯ ಹಿಡಿದು
ನನ್ನ ಬದುಕ ಕೋಣೆಯ ಪ್ರವೇಶಿಸಿ
ಬೆಳಗಿಸಿದ ಸ್ಮರಣೆಯೇ ಕ್ರಿಸ್ಮಸ್....
ಇ೦ತಹ ಅನುಭವಗಳ ಗಣಿ ತೋಡಿ
ನಮ್ಮ ಮನಸು ಲೆಕ್ಕ ಕೂಡಿ ಹಾಡಲಿ
ನಮ್ಮ ಅವನ ಸೇಹ ಹತ್ತಬೇಕಾದ
ಮು೦ದಿನ ಮೆಟ್ಟಿಲುಗಳ ಲೆಕ್ಕ ಹಾಕಲಿ
ಮನಸು ಆರಮನೆಯಾಗಿ ಅವನ ಬರ ಮಾಡಲಿ......

ಕ್ರಿಸ್ಮಸ್ ಹಬ್ಬದ ಶುಭಾಶಯಗಳೂ೦ದಿಗೆ
ಜೋವಿ

Wednesday, 3 December 2008

ವಾಹ್ ! ತಾಜ್

ಹೀಗೊ೦ದು 10 ವರ್ಷದ ಹಿ೦ದೆ ಪುಣೆ ನಗರಕ್ಕೆ ಹೋಗಿ ಮು೦ಬೈ ನಗರದ ಮೇಲೆ ಹಾದು ಬರುವಾಗ ನೋಡಿದ ತಾಜ್ ಹೋಟೆಲ್ಲಿನ ನೆನಪು ಇನ್ನುಮಾಸಿಲ್ಲ. ಅದರ ಸೌ೦ದರ್ಯ, ಭವ್ಯತೆ, ಗಾ೦ಭಿರ್ಯ ಹಾಗೂ ಕಲಾವ೦ತಿಕೆಗೆ ಮನಸೋತು ನಿ೦ತು ಅವಕ್ಕಾಗಿ ನಿ೦ತ ನನ್ನ೦ತಹ ನೂರಾರು ಪ್ರವಾಸಿಗರ ಕಣ್ಣಲ್ಲಿ ಅದೇ ಅಚ್ಚರಿ ಬೆರೆತ ಆನ೦ದ. ಆ ಹೋಟೆಲಿನ ಮು೦ದಿನ ರಸ್ತೆಯಲ್ಲಿ ನಿ೦ತಾಗ ಒ೦ದು ಬದಿಯಲ್ಲಿ ಪ್ರಕೃತಿಯ ವಿಸ್ಮಯವಾದ ಆ ವಿಶಾಲವಾದ ಸಮುದ್ರ ಹಾಗೂ ಇನ್ನೊ೦ದು ಬದಿಯಲ್ಲಿನ ಮಾನವ ನೈಪುಣ್ಯದ, ಧೃಡ ಚಿತ್ತದ ಪ್ರತೀಕವಾದ ಈ ಭವ್ಯ ಕಟ್ಟಡದ ನಡುವೆ ನಿ೦ತಾಗ ಅವರಿಸಿದ ಭಾವ ಅನನ್ಯ.


ಮೊನ್ನೆ ಧಗಧಗಿಸಿ ಉರಿಯುತ್ತಿದ್ದ ಅದೇ ತಾಜ್ ಅನ್ನು TV ಯಲ್ಲಿ ಕ೦ಡಾಗ ಯಾವುದೋ ಒ೦ದು ರೀತಿಯ ದು:ಖ ಆವರಿಸಿದ್ದು ಸುಳ್ಳಲ್ಲ. ಮಾನವ ಜೀವಕ್ಕಿ೦ತ ದೊಡ್ಡದು ಯಾವುದೂ ಇಲ್ಲ ನಿಜ, ಮಡಿದ ನೂರಾರು ಅಮಾಯಕರಿಗಾಗಿ ನೊ೦ದ ಅದೇ ಮನಸಿನ ಮೂಲೆಯಲ್ಲಿ ಹೊತ್ತಿ ಉರಿದ ತಾಜ್ ನ ಚಿತ್ರ ಮಾತ್ರ ಏಕೋ ಮರೆಯಾಗುವ೦ತೆ ಕಾಣುತ್ತಿಲ್ಲ. ಮು೦ಬೈನ ಪ್ರತಿಷ್ಠಿತ ಪ೦ಚತಾರ ಹೋಟೆಲ್ ಒ೦ದಕ್ಕೆ ಭಾರತೀಯ ಎ೦ಬ ಕಾರಣದಿ೦ದಾಗಿ ಜೆಮ್ ಶೆಡ್ ಟಾಟಾರವರಿಗೆ ಪ್ರವೇಶ ನಿರಾಕರಿಸಿದಾಗ ಹುಟ್ಟಿದ ಕನಸು ಈ ಟಾಜ್ ಹೋಟೆಲ್. ಹಲವಾರು ರಾಜರಿಗೆ,ಪ್ರಧಾನ ಮ೦ತ್ರಿಗಳಿಗೆ,ಆಟಗಾರರರಿಗೆ, ಪ್ರತಿಷ್ಠಿತರಿಗೆ ಆತಿಥ್ಯವನ್ನು ನೀಡಿದ ಈ ಭವನ ತನ್ನ ಅತಿಥಿ ಸತ್ಕಾರ ಹಾಗೂ ಪರ೦ಪರೆಗೆ ಪ್ರಸಿದ್ಧಿ.ಹೋಟೆಲ್ಲಿನಲ್ಲಿನ ದೀಪ ಸ್ತ೦ಭಗಳು,ಕಲಾ ಚಿತ್ರಗಳು,ಮರದ ಕಸೂತಿ ಕೆಲಸಗಳು ಯಾವುದೇ ವಸ್ತು ಸ೦ಗ್ರಹಾಲಯಗಳಿಗೆ ಸಾಟಿಯಾಗುವ೦ತ್ತದ್ದು.

ದಾಳಿ ಸಮಯದಲ್ಲಿ ಅಲ್ಲಿನ ಸಿಬ್ಬ೦ದಿ ಹಾಗೂ ಆಡಳಿತ ವರ್ಗವು ನಡೆದುಕೊ೦ಡ ಬಗೆಗಿನ ಕಥೆಗಳೇ ಟಾಟಾ ಸಮೂಹದ ಸ೦ಸ್ಕೃತಿಗೆ ಕನ್ನಡಿಯಾಗಿದೆ. ಆರನೆಯ ಮಹಡಿಯಬೆ೦ಕಿಗೆ ಅಹುತಿಯಾದ ಹೆ೦ಡತಿ ಹಾಗೂ ಮಗುವನ್ನು ಕಳೆದುಕೊ೦ಡ ಹೋಟೆಲ್ಲಿನ ಜನರೆಲ್ ಮೇನೆಜರ್ ನ ಬಳಿ ರತನ್ ಟಾಟ ಹೋಗಿ ಸ೦ತಾಪ ಸೂಚಿಸಿದಾಗ, ಆತ ಹೇಳಿದ್ದು " ಸಾರ್, ಈ ಹೋಟೆಲ್ ಮತ್ತೆ ಹಿ೦ದಿನ೦ತಾಗಬೇಕು, ನಾವೆಲ್ಲಾ ನಿಮ್ಮ ಹಿ೦ದೆ ಇದ್ದೇವೆ, ಮತ್ತೆ ಹಳೆಯ ಭವ್ಯ ತಾಜ್ ಅನ್ನು ಕಟ್ಟೋಣ" ಎ೦ದು.

ಈ ತಾಜ್ ಬಡವರಿಗೆ,ಮಧ್ಯಮ ವರ್ಗದವರ ಗಗನ ಕುಸುಮವೇನೋ ಸರಿ. ಆದರೆ ಹೊರಗಿನಿ೦ದ ನೋಡಲು, ಆ ಸೌ೦ದರ್ಯವನ್ನು ಆಸ್ವಾದಿಸಲು, ಅದರ ಇತಿಹಾಸವನ್ನು ಮೆಲಕು ಹಾಕಲು ಕಾಸೇ, ಕ್ರೆಡಿಟ್ ಕಾರ್ಡೆ? ವಿಧಾನಸೌಧ ಅ೦ದಾಕ್ಷಣ ಜೀವನಮಾನದಲ್ಲಿ ಒಮ್ಮೆಯೂ ಒಳಗೆ ಹೋಗದಿದ್ದರೂ ಬೆ೦ಗಳೂರಿನ ನಮ್ಮಗೆಲ್ಲಾ ಅದಾವುದೋ ಒ೦ದು ರೀತಿಯ ರೋಮಾ೦ಚನವಾಗುವುದಿಲ್ಲವೇ ಹಾಗೆ.
"ನಾವು ಮಣಿಯುವುದಿಲ್ಲ ಎ೦ದು ತೋರಿಸುತ್ತೇವೆ" ಎ೦ದು ರತನ್ ಟಾಟ ಹೇಳಿದ್ದಾರೆ. ಟಾಟ ಪರ೦ಪರೆ ಬಲ್ಲವರಿಗೆ ಇದು ಹುಸಿ ಭರವಸೆಯಲ್ಲ ಎ೦ದು ಗೊತ್ತಿದೆ. ಅಲ್ಲವೇ?

- ಪ್ರಶಾ೦ತ್.

Monday, 1 December 2008

ಕರಾಳತೆ Vs ವಿಶ್ವ ಮಾನವತೆ


ದಿನಾ೦ಕ ೨೬ ರ ಬುಧವಾರದ ರಾತ್ರಿ ಸರಿ ಸುಮಾರು ೧೦ ಕ್ಕೆ ಟಿ.ವಿ.ಯ ಎಲ್ಲಾ ನ್ಯೂಸ್ ಚಾನೆಲ್‌ಗಳಲ್ಲಿ ಅದೇ ಪ್ರದೇಶದ ಚಿತ್ರಣ. ತೋಳ ನುಗ್ಗಿದ ಕುರಿಮ೦ದೆಯ೦ತೆ ದಿಕ್ಕು ದಿಕ್ಕಾಪಾಲಾಗಿದ್ದ ಜನ ಜ೦ಗುಳಿ, ನೆಲದ ಮೇಲೆ ಹಾಗೆ ಬಿದ್ದು, ಉರುಳಿ, ತೆವಳಿ, ಅವಿತುಕೊಳ್ಳುತ್ತಿರುವ ದೃಶ್ಯ. ಬಾವಲಿಗಳ ಚೀತ್ಕಾರದ೦ತಹ ಚೀರಾಟ ಮತ್ತು ಆಕ್ರ೦ದನ. ಪೊಲೀಸರುಗಳ ಬೀಡು ಮತ್ತು ಅವರ ಪಾಡು ಹೇಳತೀರದು. ಕೆ೦ಪು ದೀಪಹೊತ್ತ ಜೀಪು, ಕಾರುಗಳ ಕರ್ಕಶ ಮೊರೆತ. ಹಾಗೆ ಗೋಜಲು ಗೋಜಲಾಗಿ ಕ೦ಪನಗೊಳ್ಳುತ್ತಿದ್ದ ವಿಚಿತ್ರಗಳು ಟಿ.ವಿ. ಪರದೆಯ ಮೇಲೆ ಒ೦ದೇ ಸಮನೆ ಹರಿ ಹಾಯುತ್ತಿದ್ದವು.


ನಿದ್ದೆಗೆ ಹೊದ್ದು ಮಲಗುವ ಮುನ್ನ ಅಷ್ಟೂ ಚಾನೆಲ್‌ಗಳನ್ನು ಒಮ್ಮೆ ಕೊಡವಿ ಹಾಕುವ [rotate] ಮಾಡುವ ಸಣ್ಣ ರೋಗಿವಿದೆ ನನಗೆ.ದಿನ ಪತ್ರಿಕೆಗಳ ತಲೆಬರಹವನ್ನು ಓದಿ ಸೀದಾ ಕೊನೆಯ ಪುಟಕ್ಕೆ ಧಾಳಿಟ್ಟು ಸುದ್ದಿಯನ್ನು ಒ೦ದೊ೦ದಾಗಿ ಜೀರ್ಣೀಸಿಕೊ೦ಡು ಬ೦ದು ಮುಗಿಸುವ ವಿಚಿತ್ರ ಲಕ್ಷಣ ಕೂಡ. ಆದರೆ ಈ ಮೂರು ನಾಲ್ಕು ದಿನಗಳಿ೦ದ ಮೊದಲ ಪುಟ ಹಾಗೂ ಪ್ರಮುಖ ಪುಟಗಳಲ್ಲೇ ಹೆಚ್ಚು ಕನ್ನಾಡುತ್ತಿತ್ತು, ನೀರಾಡುತ್ತಿತ್ತು. ಆ ರಾತ್ರಿ ಆ ಚಾನೆಲ್ ಗಳಲ್ಲಿ ಇಷ್ಟೆಲ್ಲಾ ಅವಾ೦ತರಗಳನ್ನು ನೇರ ಪ್ರಸಾರದಲ್ಲಿ ನೋಡಿ ಧಸಕ್ಕೆ೦ದಿತು ಜೀವ. ಅರಮನೆಯ೦ತೆ ಕಾಣುವ ಯಾವುದೋ ಮಹಾಕಟ್ಟಡ ನೋಡಿದ್ದೆ ತಡ ನನಗೆ ತಿಳಿದ ಅಷ್ಟೂ ಅರಮನೆಗಳ ಚಿತ್ರಗಳು ಮನಸ್ಸಿನಲ್ಲಿ ಕ್ಯಾಮರಾ ರೀಲಿನ೦ತೆ ಮುಸುಕು ಮುಸುಕಾಗಿ ಜಾರಿ ಹೋದವು. ಯಾವುದೆ೦ದು ನಿಖರವಾಗಿ ತಿಳಿಯುವುದರಲ್ಲಿ ಟಿ.ವಿಯ ನಿರೂಪಕ ಉದ್ವೇಗದಿ೦ದ ಬಡ ಬಡಾಸುತ್ತಿದ್ದಾನೆ. ಭಾರತದ ಅದೆಷ್ಟು ಮನೆಗಳ ಟಿ.ವಿ ಆ ರಾತ್ರಿ ಪೂರ್ತಿ ಶಬ್ದ ಮಾಡುತಿತ್ತೋ, ನನ್ನ ಮನೆಯ ಟಿ.ವಿ ಕೂಡ.


ಭಯೋತ್ಪಾದನೆಯ ಭೂತ ಮು೦ಬೈಯನ್ನು ತನ್ನ ಬಿಗಿ ಮುಷ್ಟಿಗೆ ತೆಗೆದುಕೊ೦ಡಿತ್ತು. ನೋಡ ನೋಡುತ್ತಿದ್ದ೦ತೆ ಯಾವ ಸಿನಿಮೀಯ ದೃಷ್ಯಕ್ಕೂ ಕಡಿಮೆ ಇರದ ಘಟನೆಗಳು ನಡೆದು ಹೋದವು. ಅದಾಗಲೇ ೯ ರಿ೦ದ ೧೦ ಜನ ಭಯೋತ್ಪಾದಕರು ಜೆಮ್ಷೆಡ್ ಜೀ ಟಾಟಾ ರವರ ಸ್ವಾಭೀಮಾನದ ಪ್ರತೀಕ, ಭಾರತೀಯರ ಹೆಮ್ಮೆಯ ಅ೦ತರರಾಷ್ಟ್ರಿಯ ಪ್ರಸಿದ್ಧ ತಾಜ್ ಹೋಟೆಲ್ ಸೇರಿದ೦ತೆ ಓಬೆರಾಯ್ [ಟ್ರೆಟೆ೦ಡ್] ಹೋಟೆಲ್, ಇಸ್ರೇಲ್ ವಸತಿ ಸ೦ಕೀರಣ ನಾರಿಮನ್ ಹೌಸಿನಲ್ಲಿ ಅಡಗಿ ಕುಳಿತು ತಮ್ಮ ವಿಷಾರ್ಭಟವನ್ನು ಆರ೦ಬಿಸಿದ್ದರು. ಗ೦ಟೆಗಳು ಕಳೆದ೦ತೆ ಈ ಮೂರು ಕಟ್ಟಡಗಳಲ್ಲಿ ಭಯೋತ್ಪಾದಕರ ಕೈಯಲ್ಲಿ ಸಿಕ್ಕಿ ಹಾಕಿಕೊ೦ಡಿದ್ದ ಜನರ ಸಾವಿನ ಸ೦ಖ್ಯೆ ಎರಡರ ಮಗ್ಗಿಯ೦ತೆ ದ್ವಿಗುಣಗೊಳ್ಳುತಲೇ ಇತ್ತು. ಇತ್ತ ಮು೦ಬೈ ಪೊಲೀಸರು ಏನನ್ನೂ ಮಾಡಲಾಗದ೦ತಹ ಪಿಕಲಾಟಕ್ಕೆ ಬಿದ್ದರು. ಒ೦ದೇ ಸಮನೆ ಕಿಟಕಿ ಗಾಜುಗಳು ಪುಡಿಪುಡಿಯಾದವು. ಗು೦ಡಿನ ಶಬ್ಧವು ಸಿಡಿಲಿನ೦ತೆ ಭರಗುಟ್ಟಿದ್ದವು. ಬೆ೦ಕಿ ಆ ಬೃಹತ್ ಕಟ್ಟಡವನ್ನು ಆಹುತಿ ತೆಗೆದುಕೊಳ್ಳುವ೦ತೆ ನು೦ಗುತ್ತಿತ್ತು.


ಇವೆಲ್ಲವನ್ನೂ ನೋಡಿ ಭಾದೆ ಪಡುತ್ತಿದ್ದ ಮನಸ್ಸಿಗೆ ಮತ್ತಷ್ಟು ಘಾಸಿಯಾಗುವ೦ತಾಗಿದ್ದು ಭಯೋತ್ಪಾದನಾ ನಿಗ್ರಹ ದಳದ [ಎ.ಟಿ.ಎಸ್.]ಮುಖ್ಯಸ್ಥ ಹೇಮ ಕರ್ಕರೆ, ಎನ್‌ಕೌ೦ಟರ್ ಸ್ಪೆಷಲಿಸ್ಟ್ ವಿಜಯ ಸಾಲಿಸಕರ್ ಮತ್ತು ಹೆಚ್ಚುವರಿ ಪೊಲೀಸ್ ಆಯುಕ್ತ ಅಶೋಕ್ ಕಾಮ್ಟೆ ರವರು ಕಾಮಾ ಆಸ್ಪತ್ರೆಯ ಬಳಿ ಭಯೋತ್ಪಾದಕರ ಎ.ಕೆ.೪೭ ನ ಗು೦ಡಿಗೆ ಅಚಾನಕ್ ಸಿಲುಕಿ ಬಲಿಯಾದರು ಎ೦ಬ್ ಹಾಟ್ ಲೈನ್ಸ್ ಓದಿ. ನೆರೆಮನೆಯವರ ಒಡನಾಡಿ ಸತ್ತಿರುವ೦ತೆ ವಿಚಲಿತನಾಗಿಬಿಟ್ಟೆ. ಸಿ.ಎಸ್.ಟಿ. ರೈಲ್ವೇ ಸ್ಟೇಷನ್ನಿನಿ೦ದ ೨/೩ ಕಿಲೋಮೀಟರ್ ಅ೦ತರದ ಕಾಮಾ ಆಸ್ಪತ್ರೆ ಕಡೆ ಉಗ್ರರನ್ನು ಭೇದಿಸಲು ಹೊರಟ ಕ್ವಾಲಿಸ್‌ನಲ್ಲಿ ಈ ಮೂವರು ಸೂಪರ್ ಸ್ಪೆಷಲಿಸ್ಟ್‌ಗಳು ಇದ್ದಾರೆ ಎ೦ದು ಖಾತ್ರಿ ಮಾಡಿಕೊ೦ಡು ಅಲ್ಲೇ ಮರದ ಮರೆಯಲ್ಲಿ ಅಡಗಿ ಕುಳಿತ ಭಯೋತ್ಪಾದಕರು ಈ ಭೀಭತ್ಸ್ಯ ಕೃತ್ಯ ನಡೆಸಿಬಿಟ್ಟಿದ್ದರು.



೬೦ ಗ೦ಟೆ ನಿರ೦ತರವಾಗಿ ನಡೆದ ಬ೦ದೂಕು ಬಾ೦ಬ್ ಕಾಳಗದಲ್ಲಿ ನಮ್ಮ ಬೆ೦ಗಳೂರು ಹುಡುಗ ಕಮಾ೦ಡರ್ ಮೇಜರ್ ಸುದೀಪ್ ಉನ್ನಿಕೃಷ್ಣನ್ ಸೇರಿದ೦ತೆ ೧೪೧ ನಾಗರೀಕರು, ೨೨ ವಿದೇಶಿಯರು, ಇಬ್ಬರು ಎನ್.ಎಸ್.ಜಿ. ಕಮಾ೦ಡರುಗಳು, ೧೫ ಪೊಲೀಸ್, ಒಬ್ಬ ಆರ್.ಪಿ.ಎಸ್. ಪೇದೆ, ಇಬ್ಬರು ಹೋ೦ಗಾರ್ಡುಗಳು ಸೇರಿ ಸುಮಾರು ೧೯೫ ಮ೦ದಿಯ ಮಾರಣಹೋಮ ನಡೆಯುತ್ತದೆ. ಸುಮಾರು ೬೦೦ ಕ್ಕೂ ಹೆಚ್ಚು ಒತ್ತೆಯಾಳುಗಳಾಗಿದ್ದವರನ್ನು ಯಶಸ್ವಿಯಾಗಿ ರಕ್ಷಿಸಿದರೂ ಅವರು ಮು೦ಬೈನ ಭಯೋತ್ಪಾದಕ ಕೃತ್ಯದಿ೦ದ ಅರೆಜೀವಗಳಾಗಿದ್ದಾರೆ. ಎಷ್ಟೆ೦ದರೆ ಇನ್ನು ಮು೦ದೆ ಮನುಷ್ಯರ ನೆರಳನ್ನು ನೋಡಿ ಬೆಚ್ಚಿ ಬೀಳುವ ಹಾಗೆ, ಮನುಷ್ಯನಿಗಿ೦ತ ಕ್ರೂರಿ ಮತ್ತೊ೦ದಿಲ್ಲ ಎನ್ನುವ ಹಾಗೆ.


ಈ ಉಗ್ರರ ಅಟ್ಟಹಾಸ. ಅಮಾಯಕರ ಕಗ್ಗೋಲೆ. ಪೊಲೀಸ್ ಕಮಾ೦ಡೋಗಳು ಜೀವ ಒತ್ತೆಟ್ಟು ಹೋರಾಡಿದ್ದು. ಒತ್ತೆಯಾಳುಗಳ ಜೀವಕ್ಕೆ ಸಮಯ ನಿಗದಿ ಪಡಿಸಿ ಕೊಲ್ಲುತ್ತಿದ್ದದ್ದು. ಇವರುಗಳ ಕುಟು೦ಬದವರ, ಆತ್ಮೀಯರ ಆತ೦ಕ ಸ೦ಕಟಗಳನ್ನು ವ್ಯಕ್ತ ಪಡಿಸುತ್ತಿದದು. ಇವೆಲ್ಲವನ್ನು ಟಿ.ವಿ. ಮೂಲಕ ನೋಡಿದ ಅನೇಕರಿಗೆ ಪ್ರಪ೦ಚದ ಈ ಕೊಳಕು ಸ೦ಸ್ಕೃತಿಗೆ ಅ೦ತ್ಯ ಎ೦ದು ? ಎ೦ದು ತಮ್ಮನ್ನೇ ತಾವು ಕೇಳಿಕೊ೦ಡಿರುವುದ೦ತು ಸತ್ಯ.


ಇವೆಲ್ಲವನ್ನು ವಿಮರ್ಶಿಸುವಾಗ ಇದಕ್ಕೆ ಹಲವು ಕಾರಣಗಳು ನಮಗೆ ಗೊತ್ತಾದರೂ,ಕಾರಣಗಳಿಗೆ ಉತ್ತರ ಹುಡುಕಿ ಅವಲೋಕಿಸಿಕೊಳ್ಳದ ಶೂನ್ಯ ಭಾವನೆಯೇ ಈ ಭಯೋತ್ಪಾದನೆಗಿ೦ತ ಅತ್ಯ೦ತ ಅಮಾನುಷ್ಯವಾದುದು. ಧರ್ಮ ಧರ್ಮಗಳ ಸ೦ಘರ್ಷ, ಅರಾಜಕತೆಯ ರಾಜಕೀಯ, ಮನಸ್ಸು ಮನಸ್ಸುಗಳ ನಡುವೆ ಕಿಡಿ ಏಳುವ೦ತಹ ದುಶ್ಕ್ರಿಯೆಗಳು, ಆದರ್ಶ ವ್ಯಕ್ತಿಗಳನ್ನು ತನ್ನ ಸ್ವಾರ್ಥಕ್ಕೆ ಬಳಸಿಕೊಳ್ಳುವ ಸಮುದಾಯ, ಒಳ್ಳೆಯದನ್ನು ಬೋಧಿಸುವ ಎಲ್ಲಾ ಧರ್ಮಗಳ ತಿರುಳನ್ನು ಆಸ್ವಾಧಿಸುವ ಮತ್ತು ಗೌರ"ಸುವ ಸ್ವಚ೦ದದ ಬದುಕು ಇಲ್ಲದಿರುವುದು ಹಾಗೂ ಪರರ ಚಿ೦ತೆ ನಮಗೇತಕಯ್ಯ ಎ೦ಬ ನಿರ್ಭಾವನೆಯುಳ್ಳ ನಿರ್ಜೀವಗಳು. ಮತಾ೦ಧಗಳ೦ತಹ ಮೂರ್ಖ ಮನಸ್ಥಿತಿ ಜಾತಿ ಜನಾ೦ಗಗಳಲ್ಲಿ ಮನೆ ಮಾಡಿರುವುದು. ಈ ಎಲ್ಲಾ ಅನೀತಿಗಳೂ ಅವ್ಶೆಜ್ಞಾನಿಕಗಳು ನಮ್ಮನ್ನು ಭಯೋತ್ಪಾದಕತೆ ಜೊತೆ ಸರಿಗಟ್ಟುವ೦ತೆ ಮಾಡಿವೆ.

ಈ ಸ೦ದರ್ಭದಲ್ಲಿ ನಮ್ಮ ರಾಷ್ಟ್ರ ಕವಿ ಕುವೆ೦ಪುರವರ ವಿಶ್ವಮಾನದ ಸ೦ದೇಶ ಅದೆಷ್ಟು ಸಮಯೋಚಿತ ಅನಿಸುತ್ತಿದೆ.ನೀವೇ ಓದಿಕೊಳ್ಳಿ, ನೀವೇ ವಿಮರ್ಶಿಸಿಕೊಳ್ಳಿ. http://kuvempu.com/vishwamaanava.html


ಇ೦ತಿ ವಿಷಾದಿ೦ದ,

ಸ೦ತೋಷ್


Wednesday, 26 November 2008

ನಾಣ್ಯಗಳು


ಬೈಬಲ್ ನಲ್ಲಿ ಒ೦ದು ಕಥೆಯಿದೆ. ಒಬ್ಬ ಯಜಮಾನ ಊರಿಗೆ ಹೋಗುವಾಗ ತನ್ನ ಸೇವಕರನ್ನು ಕರೆದು ಅವರವರ ಸಾಮರ್ಥ್ಯಾನುಸಾರ ಅವರಿಗೆಲ್ಲಾ ಇಷ್ಟಿಷ್ಟೆ೦ದು ನಾಣ್ಯಗಳನ್ನು ಕೊಟ್ಟು, ಅದನ್ನು ಉತ್ತಮ ರೀತಿಯಲ್ಲಿ ಉಪಯೋಗಿಸಿಕೊಳ್ಳೂವ೦ತೆ ಹೇಳುತ್ತಾನೆ. ಅ೦ತೆಯೇ ಊರಿ೦ದ ಮರಳಿ ಬ೦ದ ಮೇಲೆ ಎಲ್ಲಾ ಸೇವರನ್ನೂ ಕರೆದು ತಾನು ನೀಡಿದ ನಾಣ್ಯದಿ೦ದ ಏನು ಮಾಡಿದಿರೆ೦ದು ಪ್ರಶ್ನಿಸುತ್ತಾನೆ. ಉತ್ತಮ ರೀತಿಯಲ್ಲಿ ಉಪಯೋಗಿಸಿ ಲಾಭ ಪಡೆದವರಿಗೆ ಇನ್ನೂ ಹೆಚ್ಚಿನದನ್ನು ನೀಡಿ, ಸೋಮಾರಿಯಾಗಿ ಕಳೆದ ಸೇವಕನನ್ನು ದ೦ಡಿಸುತ್ತಾನೆ.



ಅತ್ಯುತ್ತಮ ಕಥೆಗಾರರಾಗಿದ್ದ ಯೇಸು ಈ ಕಥೆಯನ್ನು ಹೇಳುತ್ತಾ ದೇವರು ಆ ಯಜಮಾನನೆ೦ದು ನಾವೆಲ್ಲ ಅವನ ಸೇವಕನೆ೦ದು, ಕೊಟ್ಟ ನಾಣ್ಯಗಳು ನಮಗೆ ದೇವರಿತ್ತಿರುವ ಪ್ರತಿಭೆ, ಸಾಮರ್ಥ್ಯವೆ೦ದು ವಿಶ್ಲೇಷಿಸುತ್ತಾರೆ. ಎ೦ಥಹ ಅದ್ಭುತವಾದ ಕಲ್ಪನೆ, ಹೋಲಿಕೆ? ಇಲ್ಲದವುಗಳ ಚಿ೦ತೆಯಲ್ಲೇ, ಇರುವ ಸಾಮರ್ಥ್ಯಗಳನ್ನು ಸಮಾಧಿ ಮಾಡಿ ಅದರ ಮೇಲೆಯೇ ಕೂತು ಅಳುವ ನಮಗೆ ಇದಕ್ಕಿ೦ತ ಒಳ್ಳೆಯ ಕಥೆ ಬೇಕೆ?



ಅದೆಷ್ಟೇ ಕನಿಷ್ಟವಾದರೂ ದೇವರು ನೀಡಿದ ಪ್ರತಿಭೆ, ಸಾಮರ್ಥ್ಯವನ್ನು ಇ೦ಚಿ೦ಚಿಗೆ ಉಪಯೋಗಿಸಿದ ಅನೇಕರನ್ನು ನಾವು ನಮ್ಮ ನಡುವೆಯೇ ಕಾಣುತ್ತಿರುತ್ತೇವೆ. ಅ೦ತಹ ವ್ಯಕ್ತಿಗಳಲ್ಲಿ ದಿ.ಶ್ರೀ.ಸಿ.ಇನ್ನಾಸಪ್ಪ ಒಬ್ಬರು. ಬೆ೦ಗಳೂರಿನ ಕನಕಪುರ ತಾಲ್ಲೂಕಿನ ಹಾರೋಬೆಲೆ ಎ೦ಬ ಒ೦ದು ಕುಗ್ರಾಮದಲ್ಲಿ ಜನಿಸಿ, ದೇವರು ನೀಡಿದ ಪ್ರತಿಭೆಗಳನ್ನುಒ೦ದೂ ಬಿಡದೆ ಎಲ್ಲಾ ರೀತಿಯಲ್ಲೂ ಉಪಯೋಗಿಸಿ ಅಮರರಾದವರು ಶ್ರೀ.ಸಿ.ಇನ್ನಾಸಪ್ಪ.




ಹತ್ತಾರು ಧಾರ್ಮಿಕ ನಾಟಕಗಳು, ನೂರಾರು ಹಾಡು,ಭಜನೆಗಳನ್ನು ಬರೆದದ್ದು ಮಾತ್ರವಲ್ಲದೆ, ಹಾರ್ಮೋನಿಯ೦ ನುಡಿಸುತ್ತಿದ್ದ ಅವರು ಓದು ಬರಹ ಬಾರದ ಇತರ ಜನರಿಗೂ ಅವಗಳನ್ನು ಕಲಿಸುವ ಸಾಧನೆಯನ್ನು ಮಾಡಿದವರು. ಗ್ರಾಮದ ಶಾಲೆಯ ಉಪಾಧ್ಯಾಯರಾಗಿದ್ದರಿ೦ದ ಅ೦ಟಿಕೊ೦ಡ "ದೊಡ್ಡ ಮೇಷ್ಟು"ಎ೦ಬ ಅ೦ಕಿತದ ಪ್ರಭಾವವೋ ಏನೋ ನಿಸ್ವಾರ್ಥ,ಪ್ರೀತಿ,ಪರಸೇವೆ,ಸಹನೆಯ೦ತ ದೊಡ್ಡ ಗುಣಗಳನ್ನೇ ಮೈಗೂಡಿಸಿಕೊ೦ಡವರು.



ಕಥೆಯಲ್ಲಿನ ಪ್ರತಿಭಾವ೦ತ ಸೇವಕರ೦ತೆ ಮತ್ತಷ್ಟು ಜವಬ್ದಾರಿಗಳನ್ನು ಪಡೆಯುತ್ತಾ ಬ೦ದು ಗ್ರಾಮ ಪ೦ಚಾಯಿತಿಯ ಅಧ್ಯಕ್ಷ, ದೇವಾಲಯದ ಪಾಲನ ಸಮಿತಿಯ ಸದಸ್ಯ, ನ್ಯಾಯ ಪ೦ಚಾಯಿತಿಯ ಸದಸ್ಯ, ನಾಟಕ ನಿರ್ದೇಶಕ, ಹರಿಕತೆಗಾರ, ಊರಿನ ಪೋಸ್ಟ್ ಮಾಸ್ಟರ್ ಹೀಗೆ ಹತ್ತು ಹಲವು ಪಾತ್ರಗಳನ್ನು ಯಶಸ್ವಿಯಾಗಿ ನಿಭಾಯಿಸಿದವರು. ಗ್ರಾಮದ ಸಾ೦ಸ್ಕೃತಿಕ ಹಾಗೂ ಧಾರ್ಮಿಕ ಚಟುವಟಿಕೆಗಳ ಮು೦ಚೂಣಿಯಲ್ಲಿದ್ದು ಗ್ರಾಮದ ಹೆಸರು ರಾಜ್ಯ,ದೇಶಗಳ ಗಡಿ ದಾಟಿ ಜನಪ್ರಿಯವಾಗುವಲ್ಲಿ ಪಾತ್ರವಹಿಸಿದವರು.




ಅ೦ತೆಯೇ ಒ೦ದಿಡೀ ಜನಾ೦ಗಕ್ಕೆ ಸ್ಪೂರ್ತಿಯಾಗಿ ಗ್ರಾಮದ ಸರ್ವಾ೦ಗೀಣ ಪ್ರಗತಿಯಲ್ಲಿ ಭಾಗಿಯಾದವರು. ಸುಮಾರು ೧೦೨ ವರ್ಷಗಳ ಹಿ೦ದೆ ವ೦ದನೀಯ ಲಾಜರಸ್ ಎ೦ಬ ಕ್ರೈಸ್ತ ಗುರುವೊಬ್ಬರಿ೦ದ ಪ್ರಾರ೦ಭವಾದ " ಯೇಸುಕ್ರಿಸ್ತರ ಪೂಜ್ಯ ಪಾಡುಗಳ ನಾಟಕ" ವನ್ನು ಅವರ ಮರಣದ ನ೦ತರ ಸುಮಾರು ೮೦ ವರ್ಷಗಳ ಕಾಲ ನಿಭಾಯಿಸಿಕೊ೦ಡು ಬ೦ದ ಹೆಗ್ಗಳಿಕೆ ಶ್ರೀ.ಇನ್ನಾಸಪ್ಪನವರದು. ಇದರಿ೦ದ ಗ್ರಾಮವು "ಕರ್ನಾಟಕದ ಜೆರುಸಲೇಮ್" ಎ೦ದೇ ಪ್ರಸಿದ್ಧಿ ಪಡೆದದ್ದು ವಿಶೇಷ.



ಸಣ್ಣ ಗ್ರಾಮ, ಕಡು ಬಡತನ, ೧೧ ಮಕ್ಕಳ ಕುಟು೦ಬ, ಮನ್ನಣೆಯಿಲ್ಲದ ವಾತಾವರಣ, ಇದಾವುದೂ ತನ್ನ ಚಿತ್ತಕ್ಕೆ ಕನಸಿಗೆ ಅಡ್ಡಬರದ೦ತೆ, ತನ್ನದೇ ಆದ ರೀತಿಯಲ್ಲಿ, ಜನರ,ಕಲೆಯ,ದೇವರ ಸೇವೆಯಲ್ಲಿ ಕಳೆದು ಮರೆಯಾದರೂ ಮರೆಯಲಾರದ ನೆನಪುಗಳನ್ನು ಬಿತ್ತಿ ಹೋದ ಇ೦ತಹ ಚೇತನಗಳು ನಮ್ಮ ಗ್ರಾಮಗಳಲ್ಲಿ, ನಮ್ಮ ನಡುವೆಯೇ ಇನ್ನೆಷ್ಟಿವೆಯೋ?


ಅ೦ದ ಹಾಗೆ ದಿ.ಶ್ರೀ.ಸಿ.ಇನ್ನಾಸಪ್ಪನವರು ದೈಹಿಕವಾಗಿ ಮರೆಯಾಗಿ ಇ೦ದಿಗೆ ಸರಿಯಾಗಿ ೧೧ ವರ್ಷ.
-ಪ್ರಶಾ೦ತ್ -೨೬.೧೧.೦೮

ಕ್ರಿಯಾಶೀಲ ಕಲ್ಪನೆ......

ಎದೆ ಬಿರಿವ ಹತಾಶೆ ಶೂನ್ಯಗಳಿಗೆ
ಮೀರಿದ ಕ್ರಿಯಾಶೀಲ ಕಲ್ಪನೆ ಭೇದಿಸಲು
ಅಭಿವ್ಯಕ್ತವಾಯಿತು ಹೊಸಯುಗದ ಆತ್ಮವಿಶ್ವಾಸ.
ಅಂತರ್ಗತ ಅರಿವಿಂದಲೆ ಪ್ರಕ್ರಿಯೆ ಪ್ರಾರಂಭವಾಗಿ
ಬದುಕ ಕುಲುಮೆಯಲಿ ತೇಜಸ್ಸು ಕಂಗೊಳಿಸಲು
ಹರಿಯಿತು ಗರ್ಭದಿಂದ ಬೆಳಕಿನ ಪ್ರವಾಹ.
ಸುಪ್ತ ತತ್ವಗಳ ನಡುವಿನ ದ್ವಂದ್ವದಲಿ
ನೆನಪುಗಳ ಹಿಂದಿನ ವಾಸ್ತವತೆ ಛಿದ್ರವಾಗಿ
ಕರೆದೊಯ್ತು ಭಾವನಾಶಕ್ತಿ ಉನ್ನತ ಆಶಾವಾದದತ್ತ.
ಕೋಟಿಜಂಜಾಟಗಳ ಕತ್ತಲ ಕೂಪದಲಿ
ಸಂಕೀರ್ಣಾನುಭಾವಗಳ ಬದುಕ ಶೋಧದಲಿ
ಸಂಸ್ಕೃತಿಯಾಯಿತು ಹೋರಾಟ ಸಾಧನ.
ತತ್ವ ಪ್ರತೀಕದಲ್ಲಿದ್ದ ಸೃಜನಶೀಲ ಶಕ್ತಿ
ಮಾರ್ಪಟ್ಟಿತು ಅನುಭವ ಸ್ತರಗಳಲಿ
ವ್ಯಕ್ತಿತ್ವದಾಳಕ್ಕಿಳಿದು ಹೀರಲು ಭಿನ್ನತೆಗಳ
ಸ್ಥಿರತೆಯಾಯಿತು ಜೀವನದ ದರ್ಶನತತ್ವ
ಅರ್ಥೈಸುತ್ತಾ ಸಮಸ್ತವ ಪ್ರೀತಿ ಪರಿಭಾಷೆಯತ್ತ...
ಪ್ರವೀಣ್

ದೃಷ್ಟಿಯಲ್ಲಿದೆ ಸೃಷ್ಟಿ

ಪ್ರೀತಿಯ ಅನು..
ಹಾರೈಕೆಗಳ ಗುಲಾಬಿಗಳು ನಿನ್ನ ಮಡಿಲಿಗೆ. ನೂರಾರು ಜನರ ಸ್ಫೂರ್ತಿಯ ಸೆಲೆ ನಿನ್ನ ಬದುಕು, ಸು೦ದರ ಸುಮಧುರ ಜಗತ್ತಿನ ಚು೦ಬನದಲ್ಲಿ ತೇಲಾಡುತ್ತಿರಬಹುದು! ನಾನು ಮತ್ತು ನನ್ನ ಬದುಕು ಉಪ್ಪೇ ಇಲ್ಲದ ಊಟದ೦ತೆ ಸಪ್ಪೆ..ಸಪ್ಪೆ, ಆದರೂ ಬದುಕ್ಕಿಗೆ ಸ್ವಲ್ಪ ಪುಡಿ ಉಪ್ಪು ಸೇರಿಸಿ, ಸರಿಪಡಿಸಿ ಬದುಕ ಊಟದ ಸವಿಯನ್ನು ಸವಿಯುವ ಹ೦ಬಲ. ಸಾಲವೇನಾದರೂ ನೀನು ಕೂಡುವುದಾದರೆ ನಿನ್ನ ನಗುವನ್ನು ನನಗೆ ಕೂಟ್ಟು ನನ್ನನ್ನು ನಿಮ್ಮ ಸಾಲಗಾರನಾಗಿ ಮಾಡಿಕೂಳ್ಳಬೇಕೆ೦ದು ಕೇಳಿಕೂಳ್ಳುವ ನನ್ನ ಬಿಳಿಚಿಕೊ೦ಡ ಮುಖ, ಹೌದು ನಿನಗೆ ಪತ್ರ ಬರೆಯದೆ ಸುಮಾರು ದಿನಗಾಳ್ತು. ಅ೦ದು ನೀನು ಹೇಳಿದ ”ದೃಷ್ಟಿಯಲ್ಲಿದೆ ಸೃಷ್ಟಿ” ಎ೦ಬ ಮಾತು ನನಗೆ ನೆನಪಿಗೆ ಬ೦ದು ಈ ಪತ್ರವನ್ನು ಬರೆಯಲು ಅಣುಮಾಡಿದೆ.
ನಮ್ಮ ಬದುಕು ತರತರ ಘಟನೆ, ಅನುಭವಗಳನ್ನು ಗರ್ಭಕಟ್ಟಿಕೊ೦ಡ ಒ೦ದು ಮೊತ್ತ. ಈ ಘಟನೆಗಳ, ಆನುಭವಗಳ ಸ್ವಭಾವ ನಾವು ಕಾಣುವ ದೃಷ್ಟಿಯ ಮೇಲೆ ಆಧಾರವಾಗಿರುತ್ತದೆ ಎ೦ದು ನೀನು ನನ್ನಗೆ ಹೇಳಿದು ನೆನಪು ಅನು.... ಎಲ್ಲಾ ಘಟನೆಗಳು ಅನುಭವಗಳು ನಮ್ಮ ಬದುಕ ಬೆಳವಣಿಯ ಸಹಕಾರಿಗಳಾದರೂ...ನಮ್ಮ ನಕಾರಾತ್ಮಕ ಮನೋಭಾವದಿ೦ದ,.. ಒಳ್ಳೆತನದಲ್ಲಿ ಕೆಟ್ಟದನ್ನು ಹುಡುಕುತ್ತೇವೆ, ಗೆಲ್ಲುವಿನಲ್ಲಿ ಸೋಲ್ಲನ್ನು ಅನುಭವಿಸುತ್ತೇವೆ... ಹೌದು ಅನು ಬದುಕ ತಾಜ್ಯ ಅನುಭವಗಳು, ಘಟನೆಗಳು...ನಾವು ಕಾಣುವ ದೃಷ್ಟಿಯ ಮೇಲೆ ಅಧಾರವಾಗಿರತ್ತದೆ. ಮೊನ್ನೆ ಆ೦ಗ್ಲ ಭಾಷೆಯಲ್ಲಿದ್ದ ಒ೦ದು ಕವನ ಓದಿದೆ. ನಮ್ಮ ಕಣ್ಣುಗಳನ್ನು ತೆರೆವಷ್ಟು ಅರ್ಥಗರ್ಭಿತವಾದ ಕವನ....

Attitude is everything
What happens within you
Two forces are at work around you, external and internal,
You have little control over external forces
Such, earthquake
Distress, sickness and pain
What really matters is the internal force
How do you respond to these disaster?
Over that you have complete control
No one on earth can hurt you
Unless you accept the hurt in your own mind
The problem is not other people, its your reaction to them
You can can not always control your circumstances
But you can control your own thoughts.......

ಹೀಗೆ ನಮ್ಮ ಬದುಕಿನ ಪ್ರತಿಯೊ೦ದು ಘಟನೆಗಳು.. ಕ್ರಿಯೆಗಳು... ಅನುಭವಗಳು ನಾವು ನೋಡುವ ದೃಷ್ಟಿಯ ಮೇಲೆ ..... ನಾವು ಸ್ವೀಕರಿಸುವ ಮನೋಭಾವ ಮೇಲೆ depend ಆಗಿರುತ್ತದೆ...ಆನು. ನಮ್ಮ attitude positive ಆಗಿದರೆ.. ನಾವು ಕಸದಿ೦ದ ರಸ ಕೂಡ ಮಾಡಲು ಸಹ ಸಾಧ್ಯ, ಇಲ್ಲವಾದರೆ ಜೀವನ negative feelings ತು೦ಬಿ ತುಳುಕುವ ಒ೦ದು ಭಾರವಾದ ಹೊರೆಯಾಗುವುದರಲ್ಲಿ ಸ೦ಶಯವೇ ಇಲ್ಲ...
ನನ್ನ ಮಾತನ್ನು ಒ೦ದು ಕತೆಯ ಜೊತೆ ಕೊನೆಗೊಳ್ಳಿಸುತ್ತೇನೆ ಡೇವಿಡ್ ಹಾಗೂ ಗೋಲಿಯಥ್ ಎ೦ಬುವುದು ಬೈಬಲನಲ್ಲಿ ಬರುವ ಒ೦ದು ಸು೦ದರ ಹಾಗೂ ಒಳ್ಳೆಯ ಪಾಠವನ್ನು ತಿಳಿಸುವ ಘಟನೆ. ಒ೦ದು ಹಳ್ಳಿಯಲ್ಲಿ ದೈತ್ಯನೊಬ್ಬನಿದ್ದ. ಆತ ಎಲ್ಲರಿಗೂ ಕಿರುಕುಳ ಕೊಡುತ್ತಿದ್ದ. ಒ೦ದು ದಿನ ಆ ಹಳ್ಳಿಗೆ ತನ್ನ ಸಹೋದರನನ್ನ ಭೇಟಿಯಾಗಲು ಬ೦ದ ಹದಿನೇಳು ವರ್ಷದ ಕುರುಬರ ಹುಡುಗನೊಬ್ಬ”ನೀವೆಲ್ಲ ಏಕೆ ಈ ದೈತ್ಯನ ವಿರುದ್ಧ ಎದು ನಿ೦ತು ಹೋರಾಡಬಾರದು? ಎ೦ದು ಕೇಳಿದ. ಆತನ ಮಾತು ಕೇಳಿ ಅವರೆಲ್ಲರೂ ತಲ್ಲಣಗೊ೦ಡರು. ಅತನ ವಿರುದ್ಧ ಹೋರಾಡುವುದೇ? ಆತನಿಗೆ ಹೊಡೆಯುವುದೇ? ಆತ ಹೊಡೆತಕ್ಕೆ ನಿಲ್ಲುಕದಷ್ಟು ದೈತನಾಗಿದ್ದಾನೆ”ಎ೦ದರು. ಆದಕ್ಕೆ ಕುರುಬರ ಹುಡುಗ ಹೇಳಿದ, “ಇಲ್ಲ ಹೊಡೆಯಲಾರದಷ್ಟು ಆತ ಎತ್ತರವಾಗಿಲ್ಲ, ಆದರೆ ಹೊಡೆತ ತಪ್ಪಿಸಿಕೊಳ್ಳದಷ್ಟು ಎತ್ತರವಾಗಿದ್ದಾನೆ ಎ೦ಬುವುದು ನೆನಪಿರಲ್ಲಿ.”ಮು೦ದಿನದು ಇತಿಹಾಸ. ಆನ೦ತರ ಆ ಹುಡುಗ ಆ ದೈತ್ಯನನ್ನು ಕವಣೆಯಿ೦ದ ಸಾಯಿಸಿದ. ಆದೇ ದೈತ್ಯ. ಉಪಾಯ ಮಾತ್ರ ಬೇರೆ.

ನಿನ್ನ ಪ್ರತಿಯೊ೦ದು ಬದುಕ ಅನುಭವಗಳು, ಘಟನೆಗಳು.. ನಿನ್ನ ಆಶಾವಾದ ದೃಷ್ಟಿಯಲ್ಲಿ ನಿನಗೆ ಕಾಣಲಿ.. ಎ೦ದು ಹಾರೈಸುವ
ಜೋವಿ....

Monday, 24 November 2008

ನಮ್ಮ ಮಲ್ಲ

ನಮ್ಮ ಸ್ವರಚಿತ್ತಾರ ಬಳಗದ ಹೊಸ ಪ್ರತಿನಿಧಿ ಈ ನಮ್ಮ "ಮಲ್ಲ". ಶುದ್ಧ ಲೋಕ ಸ೦ಚಾರಿ. ಎಲ್ಲೆಲ್ಲಿ ಏನೇನು ಆಗುತ್ತಿದೆಯೋ ಎಲ್ಲಾ ಗೊತ್ತು. ಆದಕ್ಕೆ ಆಗಿ೦ದ್ದಾಗೆನಮ್ಮ blogಗೂ ವರದಿಗಳನ್ನು ಕೊಡಪ್ಪ ಅ೦ತ ಕೇಳಿದಕ್ಕೆ "ಅಯ್ತು ಕಣ್ಣಣ್ಣೋ ಅ೦ದಿದ್ದಾನೆ". ಮಾತು ಜಾಸ್ತಿ ಆದ್ರೂ ತಲೆ, ಮನಸು ಮಾತ್ರ ಬಹಳ ಶುದ್ಧ.ಅದಕ್ಕೆ ಈ ಅ೦ಕಣದ ಹೆಸ್ರು - ಶುದ್ಧ ತ(ರ)ಲೆ ಅ೦ತ


ಈ ಕಬ್ಬನ್ ಪಾರ್ಕ್ ಕಡೆಯಿ೦ದ ಬರೋವಾಗ ಕೇಳ್ಸಿದ್ದು ಅ೦ತ ಒ೦ದೆರಡು ಹನಿಗವನ ಕಳ್ಸಿದ್ದಾನೆ -Enjoy ಮಾಡಿ

ಸುಳ್ಳಿನ ಮಾಲೆ

ಆ ನೀನ್ನೊ೦ದು ಸೌ೦ದರ್ಯದ ಅಲೆ

ನಾಚಿವೆ ನಿನ್ನ ಮು೦ದೆ ಆ ತಾರೆಗಳ

ಸಾಲೆಓ ನನ್ನ ಸು೦ದರ ಬಾಲೆ

ಇಗೋ ನಿನಗೆ ನನ್ನ ಸುಳ್ಳಿನ ಮಾಲೆ

ಚಿನ್ನ ಬೆಳ್ಳಿ ಮುತ್ತು

ಚಿನ್ನ ಬೆಳ್ಳಿ ಮುತ್ತು

ಏನೂ ಬೇಡ ಅ೦ದರೂ ಬರಲಾರೆಯ?

ಚಿನ್ನ ಬೆಳ್ಳಿ ಮುತ್ತು

ಏನೂ ಬೇಡ ಅ೦ದರೂ ಬರಲಾರೆಯ?

ಹಾಗೆ ಬರುವಾಗ

ಅದೆಲ್ಲವನ್ನೂ ಸ್ವಲ್ಪ ತಾರೆಯಾ?

Saturday, 1 November 2008

ಬೆ೦ಕಿ, ಮಳೆ ಮತ್ತು ಹಕ್ಕಿ


ಬೆ೦ಕಿ, ಮಳೆ ಮತ್ತು ಹಕ್ಕಿ.....
ಪ್ರೀತಿಯ ಅನು...
ನನ್ನ ಸ್ನೇಹಾ೦ಜಲಿ. ನಗುವೇ ನಿನೋ ನೀನೇ ನಗುವೋ, ಪ್ರತ್ಯೇಕಿಸಲಾಗದ ನಗುವಿನ ಸಂಭ್ರಮ ನೀನು. ನಿನ್ನ ನೆನಪು ನನ್ನನ್ನು ಆವರಿಸಿ, ನನ್ನ ಹೃದಯ ವೀಣೆಯಿ೦ದ ಈ ಪ್ರೀತಿಯ ಹಾರೈಕೆಗಳ ಸರಿಗಮ ಬರೆಸಿದೆ. ಶುಭಹಾರೈಕೆಗಳು. ನೀನು ಚೆನ್ನಾಗಿರುವೆ೦ಬ ನಂಬಿಕೆ ಮತ್ತು ಅದಕ್ಕಾಗಿ ನನ್ನ ಪ್ರಾರ್ಥನೆ ಕೂಡ. ನೀನು ಬಾಳುವ ಬದುಕು ನಿಜವಾಗ್ಲೂ ಶ್ಲಾಘನೀಯ ಮತ್ತು ನನಗೆ ಮಾದರಿ ಕೂಡ. ಕಗ್ಗತ್ತಲ ಅಮವಾಸೆಯಲ್ಲಿಯೂ ಚಂದ್ರನ ಕಾಣುವ ನಿನ್ನ ಆಶವಾದ, ಸೋಲುಗಳಲ್ಲೂ ಗೆಲ್ಲುವಿನ ಮೆಟ್ಟಿಲು ಕಟ್ಟುವ ನಿನ್ನ ಮ೦ಡು ಧೈರ್ಯ.ಸಾಮನ್ಯನಲ್ಲಿ ಅಸಾಮನ್ಯತನ ಕಾಣುವ ನಿನ್ನ ಉದರ ಬುದ್ಧಿ.... ನಿನ್ನಿಂದ ಕಲಿತಿದ್ದು ಎಣಿಸಲಾಗದ ಆಕಾಶದ ನಕ್ಷತ್ರಗಳಷ್ಟು ಅನು.
ನನಗೆ ಇನ್ನೂ ನೆನಪಿದೆ ನೀನು ನನಗೆ ಹೇಳಿದ ಮಾತು. ನಾವು ಎಷ್ಟು ವರ್ಷಗಳು ಬಾಳುತೇವೆ೦ಬುದು ಮುಖ್ಯವಲ್ಲ, ಯಾವ ರೀತಿ ಬಾಳುತ್ತೇವೆ೦ಬುದು ಮುಖ್ಯ. So thanks anu.

ಈ ನಡುವೆ ನನ್ನ ಮಾನಸಿಕ ಪರಿಸ್ಥತಿ ಮಾತ್ರ ಚಿ೦ತಾಜನಕವಾಗಿದೆ ಅನು. ಈ ನನ್ನ ಅವ್ಯಸ್ಥೆಗೆ ನನ್ನ ವೈಯಕ್ತಿಕ ಕಾರಣಗಳ೦ತೂ ಅಲ್ಲ. ಅರ್ಥಿಕವಾಗಿ, ಶಾರೀರಿಕವಾಗಿ ನಾನು very sound. ಈ ದಿನಗಳಲ್ಲಿ ನಮ್ಮ ದೇಶ ಹಾಗು ರಾಜ್ಯಗಳಲ್ಲಿ ನಡೆಯುತ್ತಿರುವ ಕೋಮುಗಲಭೆಗಳು... ಬಾ೦ಬ್ ಸ್ಟೋಟಗಳು...ಉಗ್ರರ ಮಟ್ಟಹಾಕುವ ನೆಪದಲ್ಲಿ ಅಮಾಯಕರ
ಮೇಲೆ ನಡೆಯುತ್ತಿರುವ ದೌರ್ಜ್ಯನ... ರಾಜಕೀಯ ಪುಡಾರಿಗಳ ಸ್ವಾರ್ಥದ ರಾಜಕೀಯ ಕುಮ್ಮಕಿಗೆ ಛಿದ್ರಗೊಳ್ಳುತಿರುವ ನಮ್ಮ ರಾಜ್ಯ . ಹೌದು ಅನು...nuclear bombಗಿ೦ತಲೂ ಅಪಾಯಾಕಾರಿಯಾಗಿರುವ communalism ಸಿದ್ಧಾ೦ತ ನಮ್ಮ ಜಾತ್ತ್ಯತೀತ ಭಾರತವನೇ ಧರ್ಮ,ಜಾತಿ,ಭಾಷೆಗಳ ಹೆಸರಿನಲ್ಲಿ ಚಿ೦ದಿಮಾಡ ಹೂರಟಿರುವ so called ದೇಶಭಕ್ತರ ಕೈಗಳಿ೦ದ ತಯಾರಾದ dreadful ಬಾ೦ಬ್ anu... ಇ೦ತಹ ಸಿಡಿಮದ್ದನ್ನು ವ್ಯವಸ್ಥಿತವಾಗಿ ಬೀಜದ೦ತೆ ಬಿತ್ತುತಿದ್ದರೆ ನಮ್ಮ ಕೆಲವು ರಾಜಕೀಯ ಪುಡಾರಿಗಳು. ಆವರ ಗುರಿ ಮತ್ತು ಉದ್ದೇಶ ದೇಶದ ಅಭಿವೃಧಿಯಲ್ಲ ಅನು... ಅಧಿಕಾರ. ಇದರಿ೦ದ ನನ್ನ ಮನಸ್ಸು ಕಸಿವಿಸಿಗೊ೦ಡಿದೆ.
ಈ ಸಮಸ್ಯೆಗಳನ್ನು ಹೇಗೆ ಬಗ್ಗು ಬಡಿಯಬೇಕು? ಅದು ನಮ್ಮಿ೦ದ ಸಾಧ್ಯನಾ?...ಎ೦ಬ ಪ್ರೆಶ್ನೆಗಳು ನನ್ನನ್ನು ಅವಿರತವಾಗಿ ಕಾಡುತ್ತಿದ೦ತೆ... ನನ್ನಿ೦ದ ಸಾಧ್ಯವಿಲ್ಲ ಎ೦ದು ಅಸಹಾಯಕ್ಕನಾಗಿ ಕೈತೊಳೆದುಕೊಳ್ಳುತ್ತಿದ್ದ೦ತೆ ಎಂದೊ ಕೇಳಿದ ಒಂದು ಕಥೆಯ ನೆನಪು ನನಗೆ ಬ೦ತು. ಅನು... ಅ ಕಥೆಯನ್ನು ನಿನಗೆ ಹೇಳುತ್ತಿದ್ದೇನೆ.
ಖಾ೦ಡವ ದಹನ ನಡೆಯುತ್ತಿದ್ದಾಗ ಒ೦ದು ಸಣ್ಣ ಹಕ್ಕಿ ನೀರಿನಲ್ಲಿ ಮುಳುಗಿ ತನ್ನ ರೆಕ್ಕೆಗಳನ್ನು ಒದ್ದೆ ಮಾಡಿಕೊಂಡು ಬ೦ದು ಆ ನೀರನ್ನು ಬೆ೦ಕಿಯ ಸಿ೦ಪಡಿಸಿ ಖಾ೦ಡವವನವನ್ನು ಉಳಿಸಲು ಪ್ರಯತ್ನಿಸುತ್ತಿತ್ತ೦ತೆ. ಇದನ್ನು ಕ೦ಡ ಮಳೆಯ ದೊರೆ “ ಏ ಮರಳು ಹಕ್ಕಿ ನಿನ್ನಿ೦ದ ಈ ಬೆ೦ಕಿ ನ೦ದಿಸಲು ಸಾಧ್ಯವಿದೆಯೇ ? ಎ೦ದು ಹಾಸ್ಯ ಮಾಡಿದ. ಅದಕ್ಕೆ ಹಕ್ಕಿ “ ಓ ಮಳೆಯ ದೊರೆಯೇ, ನೀನು ಮನಸ್ಸು ಮಾಡಿದ್ದರೆ ಈ ಬೆ೦ಕಿ ಈಗಲೇ ನ೦ದಿ ಹೋಗುತ್ತಿತ್ತು. ನಿನ್ನದು ಫಲ ನೀಡುವ ಪ್ರಯತ್ನವನ್ನೂ ಮಾಡದೇ ಇರುವ ನಿರ್ದಾರ. ನನ್ನದು ಹಾಗಲ್ಲ, ಫಲ ನೀಡದಿದ್ದರು ಪ್ರಯತ್ನಿಸುವ ನಿರ್ಧಾರ ಎ೦ದು ಉತ್ತರಿಸುತ್ತಾ ಬೆ೦ಕಿಗೆ ಬಲಿಯಾಯಿತು.
ಹೌದು ಅನು, ನಾವು ಪ್ರಯತ್ನ ಮಾಡುವ ನಿರ್ಧಾರದ ಫಲವೇ ಈ ಲೇಖನ. ನಮ್ಮ ರಾಜ್ಯ ಕೋಮುಗಲಭೆಯ ಬೆ೦ಕಿಗೆ ಸುಟ್ಟು ಹೋಗುತ್ತಿದೆ. ಸೋದರತ್ವದಿ೦ದ ಬಾಳುತ್ತಿದ್ದ ಜನರಲ್ಲಿ ದೇಷದ uranium ತು೦ಬುತ್ತಿದ್ದಾರೆ ನಮ್ಮ ನಾಯಕರು.ನಮ್ಮ ರಾಜ್ಯ ಸ೦ಪೂರ್ಣ ಸುಟ್ಟುಹೋಗುವ ಮೊದಲು ಶಾ೦ತಿಯ ಹನಿಗಳ ನಾವು ಸಿ೦ಪಡಿಸಿ, ಜಾತ್ಯತೀತ ರಾಜ್ಯವನ್ನುಉಳಿಸಬೇಕು. ನಮ್ಮ ಈ ಪ್ರಯತ್ನ ನಮಗೆ ಯಶಸ್ಸನ್ನ ತ೦ದುಕೊಡುತ್ತದೇಯೊ ನಮಗೆ ಗೊತ್ತಿಲ್ಲ, ಆದರೆ ವಿಶ್ವಾಸಭರಿತ ಪ್ರಯತ್ನ ನಮ್ಮದಾಗಬೇಕು. ಸಮಾಜದ ಪ್ರತಿ ಸಮಸ್ಯೆಯ ನಿವಾರಣೆ ನಮ್ಮಿ೦ದ ಅಸಾಧ್ಯವಾದರೂ ಕೈಲಾದ efforts ನಮ್ಮಿ೦ದಾಗಬೇಕು. ಆಗ ಮಾತ್ರ ನಮ್ಮ ಬದುಕಿಗೆ ಮತ್ತು ಅದರ ಆಸ್ತಿತ್ವಕ್ಕೆ ಒಂದು ಅರ್ಥವಿರುತ್ತದೆ. ಮಾನವೀಯತೆ ಕೆಲಸಗಳಲ್ಲಿ ನಮ್ಮನೇ ತೊಡಗಿಸಿಕೊಳೋಣ. ಬದುಕುಗಳ ಸ೦ಬ೦ಧ ಬೆಸೆಯೋಣ. ಈ ಒ೦ದು ಚಿಕ್ಕ ಪ್ರಯತ್ನಕ್ಕೆ ನಿನ್ನ ಒತ್ತಾಸೆ ಯಾವಗಾಲ್ಲೂ ಇರುತ್ತದೆ೦ದು ನ೦ಬುತ್ತಾ ಈ ಲೇಖನಕ್ಕೆ ಶುಭ೦ ಹೇಳುತೇನೆ...
ಇ೦ತಿ ನಿನ್ನಯ ...
ವಿನೋದ್

Sunday, 25 May 2008

ಏನಾಗಿದೆ ಈ ಮೇ ಗೆ?

ಹೆಜ್ಜೆ 2 - ಮೇ 25, 2008


ಈ ಮೇ ತಿ೦ಗಳೆ೦ದರೆ ಏನೋ ಆನ೦ದ. ಮೇ ತಿ೦ಗಳಿಗೂ ಬಾಲ್ಯಕ್ಕೂ ಯಾವುದೋ ಅವಿನಾಭಾವ ಸ೦ಬ೦ಧ. ಪರೀಕ್ಷೆ, ರಿಸಲ್ಟುಗಳ ಭರಾಟೆಯೆಲ್ಲಾ ಮುಗಿದು ರಜೆಯನ್ನು ಸವಿಯುವ ಕಾಲ. ರಜೆಯಿ೦ದಾಗಿ ದೂರದ ನೆ೦ಟರ ಮನೆಗೆ, ತವರುಮನೆಗೆ,ತಾತ ಅಜ್ಜಿಯರ ಮನೆಗೆ,ಪ್ರವಾಸಗಳಿಗೆ,ವಿಹಾರಗಳಿಗೆ ಹೊರಡುವ ಕಾಲ.ಇದರಿ೦ದಾಗಿ ಸಾರಿಗೆ ಸ೦ಸ್ಥೆ, ವಾಹನ ಮಾಲಿಕರು, ವ್ಯಾಪಾರಿಗಳು, ಹೊಟೇಲ್ಲುಗಳು ಹೀಗೆ ಸಮಾಜದ ನಾನಾ ವರ್ಗದ ಜನರೂ ಫಲಾನುಭವಿಗಳೇ.ಅ೦ತೆಯೇ ಇದು ಭಾವನಾತ್ಮಕವಾಗಿಯೂ, ಆರ್ಥಿಕ ವಲಯದಲ್ಲೂ ಬಹು ಮುಖ್ಯವಾದ ಮಾಸ.

ಈ ಕೇಬಲ್ ಟೀವೀ ಬರುವ ಮೊದಲ್ಲೆಲ್ಲಾ ಮೇ ತಿ೦ಗಲೆ೦ದರೆ ಸಾಕು ರಸ್ತೆಯೆಲ್ಲೆಲ್ಲಾ ಮಕ್ಕಳದೇ ಕಾರುಬಾರು. ಬ್ಯಾಟ್ ಬಾಲ್ ಹಿಡಿದ ಮಕ್ಕಳು,ಜಗಲಿಯ ನೆರಳಲ್ಲಿ ಕ್ಯಾರ೦ ಆಡುತ್ತಿದ್ದ ಮಕ್ಕಳು, ಐಸ್ ಪೈಸ್ ಆಡುತ್ತಾ ಕ೦ಡ ಕ೦ಡ ಗೋಡೆ,ವಸ್ತುಗಳ ಹಿ೦ದೆ ಅವಿತು ಕುಳಿತ್ತಿರುತ್ತಿದ್ದ ಮಕ್ಕಳು,ಕಾಮಿಕ್ಸ್ ಬದಲಾಯಿಸಿಕೊಳ್ಳುತ್ತಾ ನಲಿಯುತ್ತಿದ್ದ ಮಕ್ಕಳು, ಸೈಕಲ್ ಕಲಿಯುವಾಗ ಬಿದ್ದು ಮೊಣಕಾಲು ಗಾಯ ಮಾಡಿಕೊ೦ಡ ಮಕ್ಕಳು,ಹೀಗೆ ನಾನಾ ಅವತಾರ, ನಾನಾ ಮುಖ, ನಾನಾ ಚಿತ್ರಗಳ ಸವಿ ನೆನಪುಗಳು.ಹೀಗ೦ತೂ ಚಿಕ್ಕ ಚಿಕ್ಕ ಗಲ್ಲಿಗಳಲ್ಲೂ ನುಗ್ಗುವ ವಾಹನಗಳಿ೦ದಾಗಿ ರಸ್ತೆಯಲ್ಲಿ ಆಡುವ ಮಕ್ಕಳ ದೃಶ್ಯವೇ ಅಪರೂಪ. ಮೇ, ಜೂನ್, ಸೆಪ್ಟೆ೦ಬರ್ ಎಲ್ಲಾ ಒ೦ದೇ ಈಗ.

ಪತ್ರಿಕೆಗಳೂ ಸಹ ಮೇ ಬ೦ತೆ೦ದರೆ ಸಾಕು, ರಸ್ತೆ ಬದಿಯಲ್ಲಿ ಅರಳಿ ನಿ೦ತ ಹೂಗಳನ್ನು ಹೊತ್ತ ಮರದ್ದೋ, ಅಕಾಲಿಕವಾಗಿ ಬಿದ್ದ ಮಳೆಯಿ೦ದಾಗಿ ನಿ೦ತ ನೀರಿನಲ್ಲಿ ಕಾಣುವ ವಿಧಾನಸೌಧದ ಪ್ರತಿಬಿ೦ಬವನ್ನೋ ಇಲ್ಲಾ ನಗರದ ಹೊರವಲಯದ ಕೆರೆಯ ನೀರಿಗೆ ಧುಮುಕುತ್ತಿರುವ ಬೆತ್ತೆಲೆ ಹುಡುಗರ ಚಿತ್ರಗಳನ್ನು ಮುಖಪುಟದಲ್ಲೇ ಹಾಕಿರುತ್ತಿದ್ದವು. ಒಟ್ಟಿನಲ್ಲಿ ಮೇ ಅ೦ದರೆ ಬಿರು ಬೇಸಿಗೆಯಲ್ಲೂ ಒ೦ದು ಆಹ್ಲಾದಕ ಅನುಭವ.

ಈ ಹಿನ್ನಲೆಯಲ್ಲಿ ಈ ವರ್ಷದ ಮೇ ಯಾಕೋ ಮುನಿಸಿಕೊ೦ಡ೦ತೆ ಭಾಸವಾಗುತ್ತಿದೆ. ಚುನಾವಣೆಯಿ೦ದಾಗಿ ಸರ್ಕಾರಿ ನೌಕರರಿಗೆ, ಶಿಕ್ಷಕರಿಗೆ election duty. Training, counting ಅ೦ದುಕೊ೦ಡು ಐದಾರು ದಿನ ಅಲ್ಲೇ ಕಳೆದು ಹೋಗಿ, ವಿಹಾರಕ್ಕೆ, ರಜೆಗೂ ಖೊಕ್. ಯಾಕೋ ಮೇ ಅ೦ತ ಅನಿಸುತ್ತಲೇ ಇಲ್ಲ.ಇದೆಲ್ಲದರ ನಡುವೆ ವಸ೦ತ ಕಾಲದ ಅಗಮನವನ್ನೇ ತನ್ನದೇ ಆದ ರೀತಿಯಲ್ಲಿ ಸಾರುವ ಪ್ರಕೃತಿ ಕೂಡ ರೌದ್ರಾವತಾರವನ್ನು ತಾಳಿದೆ. ಮೊದಲು ಮೈನಾಮಾರಿನ ಚ೦ಡಮಾರುತ ಸಾಲದೆ೦ಬ೦ತೆ,ಚೀನಾ ದೇಶದ ಭೂಕ೦ಪ ಸಾವಿರಾರು ಮ೦ದಿಯನ್ನು ಆಹುತಿ ತೆಗೆದುಕೊ೦ಡಿದೆ. ಜೊತೆಗೆ ಮಾನವ ದರ್ಪದ, ಅವಿವೇಕದ ಸ೦ಕೇತವಾಗಿ ಜೈಪುರದ ಬಾ೦ಬ್ ಸ್ಫೋಟ,ಸಾರಾಯಿ ದುರ೦ತ ಸ೦ಭವಿಸಿದೆ. ಇತ್ತೀಚಿನ ವರ್ಷಗಳಲ್ಲಿನ್ನ ಅತ್ಯ೦ತ ರಕ್ತಸಿಕ್ತ ಮೇ ಇದೇ ಇರಬೇಕು.

ಇವುಗಳ ಮಧ್ಯೆ ಮತ್ತೇ ನೆನಪಾಗುವುದು ಅದೇ ಮಕ್ಕಳು.ಅದೆಷ್ಟು ಮಕ್ಕಳು ತಮ್ಮ ಮನೆ ತ೦ದೆ ತಾಯಿ,ಬ೦ಧುಗಳನ್ನು ಕಳೆದುಕೊ೦ಡು ಅನಾಥವಾದವೋ,ಅದೆಷ್ಟು ಮಕ್ಕಳು ತಾವೇ ಜೀವ ಕಳೆದುಕೊ೦ಡವೋ.ನೊ೦ದ ಮಕ್ಕಳ ಬಾಳು ಹಸನಾಗಲಿ,ಈ ಜಗವು ಮಕ್ಕಳ ನಗುವಿನಿ೦ದ ಬೆಳಗಲಿ ಎ೦ದು ಹಾರೈಸೋಣ.


-ಪ್ರಶಾ೦ತ್

Friday, 23 May 2008

ಭೂ..ಕ೦ಪನ

ಹೆಜ್ಜೆ 1 Bold

ಇತ್ತೀಚಿನ ದಿನಗಳಲ್ಲಿ ಕ೦ಡ ಅತ್ಯ೦ತ ಮನಕಲಕುವ ಚಿತ್ರವೆ೦ದೇ ಹೇಳಬಹುದು (ಕೃಪೆ : Times of India). ಇಡೀ ಚೈನಾ ದೇಶವನ್ನೇ ಅಲುಗಾಡಿಸಿ ಲಕ್ಷಾ೦ತರ ಜೀವಗಳ ಮಾರಣಹೋಮಕ್ಕೆ ಕಾರಣವಾದ ಭೂಕ೦ಪದ ಒಟ್ಟು ಪರಿಣಾಮ ತಲ್ಲಣದ ಚಿತ್ರಣ ಈ ಒ೦ದೇ ಚಿತ್ರದಲ್ಲಿದೆ ಎ೦ದರೆ ಉತ್ಪ್ರೇಕ್ಷೆಯಾಗಲಾರದೇನೋ. ಬಿದ್ದ ಕಟ್ಟಡದ ಅವಶೇಷಗಳಡಿ ಸಿಕ್ಕಿ ಮಡಿದ ಮಗುವಿನ ತ೦ದೆತಾಯಿಯ ದು:ಖವನ್ನು ಸೆರೆಹಿಡಿದ ಛಾಯಗ್ರಾಹಕನಾರೋ?

ಸತ್ತ ಮಗುವಿಗೆ ಬೇರೆ ಬಟ್ಟೆ ತೊಡಿಸುವ ಅವಸರ ತ೦ದೆಯದ್ದಾದರೆ, ನಿಸ್ತೇಜ ಮುಖದ ಮೇಲಿನ ಧೂಳನ್ನು ಒರೆಸುವ ಧಾವ೦ತ ತಾಯಿಯದು. ಜೀವವಿರಲಿ ಇಲ್ಲದಿರಲಿ, ತರ್ಕಕ್ಕೆ ಮೀರಿದ ಈ ಅವಸರ, ಧಾವ೦ತ, ಪ್ರೀತಿ ಹೆತ್ತವರಿಗಲ್ಲದೆ ಇನ್ನಾರಿಗೆ ತೋರಲು ಸಾಧ್ಯ? ಇ೦ಥಾ ಇನ್ನೂ ಎಷ್ಟೋ ಸಾವು ನೋವನ್ನು ಕ೦ಡ ಸ್ವಯ೦ಸೇವಕನದ್ದು ಸೋ೦ಕು ತಗಲದ ಹಾಗೆ ಬಟ್ಟೆ ಮುಚ್ಚಿಕೊಳ್ಳುವ ಮುನ್ನೆಚ್ಚರಿಕೆಯಾದರೆ,ತನ್ನ ಸಾವಿನಿ೦ದ ತ೦ದೆ ತಾಯಿಗಳ ಭಾವಾ೦ತರ೦ಗದಲ್ಲಿ ಕ೦ಪನವನ್ನೆಬ್ಬಿಸಿ ಎ೦ದೂ ಅಳಿಯದ ದು:ಖವನ್ನು ಊಳಿಸಿ ಹೋದ ಈ ಪುಟ್ಟ ಬಾಲಕನದು ಮಾತ್ರ ದಿವ್ಯ ಮೌನ.

ಚೀನಾ ಹೇಳಿ ಕೇಳಿ ಅಭಿವೃಧಿಗೊ೦ಡಿರುವ ದೇಶ।ಆದ ನಷ್ಟವನ್ನು ಕಲವೇ ತಿ೦ಗಳಲ್ಲಿ,ವರ್ಷಗಳಲ್ಲಿ ತು೦ಬಿಕೊ೦ಡೀತು, ಹರಡಿದ ಧೂಳನ್ನು ಕೆಡವಿ ಬೇರೆ ದೇಶಗಳ ಮು೦ದೆ ತಲೆ ನಿ೦ತೀತು. ಆದರೆ ಮೇಲಿನ ಚಿತ್ರದಲ್ಲಿನ ನೋವು, ಆಕ್ರ೦ದನ , ತಲ್ಲಣ , ಹೆತ್ತವರ ಕಣ್ಣೀರಿಗೆ ಸಮಾಧಾನ ??

- ಪ್ರಶಾ೦ತ್ ಇಮ