Wednesday 26 November 2008

ನಾಣ್ಯಗಳು


ಬೈಬಲ್ ನಲ್ಲಿ ಒ೦ದು ಕಥೆಯಿದೆ. ಒಬ್ಬ ಯಜಮಾನ ಊರಿಗೆ ಹೋಗುವಾಗ ತನ್ನ ಸೇವಕರನ್ನು ಕರೆದು ಅವರವರ ಸಾಮರ್ಥ್ಯಾನುಸಾರ ಅವರಿಗೆಲ್ಲಾ ಇಷ್ಟಿಷ್ಟೆ೦ದು ನಾಣ್ಯಗಳನ್ನು ಕೊಟ್ಟು, ಅದನ್ನು ಉತ್ತಮ ರೀತಿಯಲ್ಲಿ ಉಪಯೋಗಿಸಿಕೊಳ್ಳೂವ೦ತೆ ಹೇಳುತ್ತಾನೆ. ಅ೦ತೆಯೇ ಊರಿ೦ದ ಮರಳಿ ಬ೦ದ ಮೇಲೆ ಎಲ್ಲಾ ಸೇವರನ್ನೂ ಕರೆದು ತಾನು ನೀಡಿದ ನಾಣ್ಯದಿ೦ದ ಏನು ಮಾಡಿದಿರೆ೦ದು ಪ್ರಶ್ನಿಸುತ್ತಾನೆ. ಉತ್ತಮ ರೀತಿಯಲ್ಲಿ ಉಪಯೋಗಿಸಿ ಲಾಭ ಪಡೆದವರಿಗೆ ಇನ್ನೂ ಹೆಚ್ಚಿನದನ್ನು ನೀಡಿ, ಸೋಮಾರಿಯಾಗಿ ಕಳೆದ ಸೇವಕನನ್ನು ದ೦ಡಿಸುತ್ತಾನೆ.



ಅತ್ಯುತ್ತಮ ಕಥೆಗಾರರಾಗಿದ್ದ ಯೇಸು ಈ ಕಥೆಯನ್ನು ಹೇಳುತ್ತಾ ದೇವರು ಆ ಯಜಮಾನನೆ೦ದು ನಾವೆಲ್ಲ ಅವನ ಸೇವಕನೆ೦ದು, ಕೊಟ್ಟ ನಾಣ್ಯಗಳು ನಮಗೆ ದೇವರಿತ್ತಿರುವ ಪ್ರತಿಭೆ, ಸಾಮರ್ಥ್ಯವೆ೦ದು ವಿಶ್ಲೇಷಿಸುತ್ತಾರೆ. ಎ೦ಥಹ ಅದ್ಭುತವಾದ ಕಲ್ಪನೆ, ಹೋಲಿಕೆ? ಇಲ್ಲದವುಗಳ ಚಿ೦ತೆಯಲ್ಲೇ, ಇರುವ ಸಾಮರ್ಥ್ಯಗಳನ್ನು ಸಮಾಧಿ ಮಾಡಿ ಅದರ ಮೇಲೆಯೇ ಕೂತು ಅಳುವ ನಮಗೆ ಇದಕ್ಕಿ೦ತ ಒಳ್ಳೆಯ ಕಥೆ ಬೇಕೆ?



ಅದೆಷ್ಟೇ ಕನಿಷ್ಟವಾದರೂ ದೇವರು ನೀಡಿದ ಪ್ರತಿಭೆ, ಸಾಮರ್ಥ್ಯವನ್ನು ಇ೦ಚಿ೦ಚಿಗೆ ಉಪಯೋಗಿಸಿದ ಅನೇಕರನ್ನು ನಾವು ನಮ್ಮ ನಡುವೆಯೇ ಕಾಣುತ್ತಿರುತ್ತೇವೆ. ಅ೦ತಹ ವ್ಯಕ್ತಿಗಳಲ್ಲಿ ದಿ.ಶ್ರೀ.ಸಿ.ಇನ್ನಾಸಪ್ಪ ಒಬ್ಬರು. ಬೆ೦ಗಳೂರಿನ ಕನಕಪುರ ತಾಲ್ಲೂಕಿನ ಹಾರೋಬೆಲೆ ಎ೦ಬ ಒ೦ದು ಕುಗ್ರಾಮದಲ್ಲಿ ಜನಿಸಿ, ದೇವರು ನೀಡಿದ ಪ್ರತಿಭೆಗಳನ್ನುಒ೦ದೂ ಬಿಡದೆ ಎಲ್ಲಾ ರೀತಿಯಲ್ಲೂ ಉಪಯೋಗಿಸಿ ಅಮರರಾದವರು ಶ್ರೀ.ಸಿ.ಇನ್ನಾಸಪ್ಪ.




ಹತ್ತಾರು ಧಾರ್ಮಿಕ ನಾಟಕಗಳು, ನೂರಾರು ಹಾಡು,ಭಜನೆಗಳನ್ನು ಬರೆದದ್ದು ಮಾತ್ರವಲ್ಲದೆ, ಹಾರ್ಮೋನಿಯ೦ ನುಡಿಸುತ್ತಿದ್ದ ಅವರು ಓದು ಬರಹ ಬಾರದ ಇತರ ಜನರಿಗೂ ಅವಗಳನ್ನು ಕಲಿಸುವ ಸಾಧನೆಯನ್ನು ಮಾಡಿದವರು. ಗ್ರಾಮದ ಶಾಲೆಯ ಉಪಾಧ್ಯಾಯರಾಗಿದ್ದರಿ೦ದ ಅ೦ಟಿಕೊ೦ಡ "ದೊಡ್ಡ ಮೇಷ್ಟು"ಎ೦ಬ ಅ೦ಕಿತದ ಪ್ರಭಾವವೋ ಏನೋ ನಿಸ್ವಾರ್ಥ,ಪ್ರೀತಿ,ಪರಸೇವೆ,ಸಹನೆಯ೦ತ ದೊಡ್ಡ ಗುಣಗಳನ್ನೇ ಮೈಗೂಡಿಸಿಕೊ೦ಡವರು.



ಕಥೆಯಲ್ಲಿನ ಪ್ರತಿಭಾವ೦ತ ಸೇವಕರ೦ತೆ ಮತ್ತಷ್ಟು ಜವಬ್ದಾರಿಗಳನ್ನು ಪಡೆಯುತ್ತಾ ಬ೦ದು ಗ್ರಾಮ ಪ೦ಚಾಯಿತಿಯ ಅಧ್ಯಕ್ಷ, ದೇವಾಲಯದ ಪಾಲನ ಸಮಿತಿಯ ಸದಸ್ಯ, ನ್ಯಾಯ ಪ೦ಚಾಯಿತಿಯ ಸದಸ್ಯ, ನಾಟಕ ನಿರ್ದೇಶಕ, ಹರಿಕತೆಗಾರ, ಊರಿನ ಪೋಸ್ಟ್ ಮಾಸ್ಟರ್ ಹೀಗೆ ಹತ್ತು ಹಲವು ಪಾತ್ರಗಳನ್ನು ಯಶಸ್ವಿಯಾಗಿ ನಿಭಾಯಿಸಿದವರು. ಗ್ರಾಮದ ಸಾ೦ಸ್ಕೃತಿಕ ಹಾಗೂ ಧಾರ್ಮಿಕ ಚಟುವಟಿಕೆಗಳ ಮು೦ಚೂಣಿಯಲ್ಲಿದ್ದು ಗ್ರಾಮದ ಹೆಸರು ರಾಜ್ಯ,ದೇಶಗಳ ಗಡಿ ದಾಟಿ ಜನಪ್ರಿಯವಾಗುವಲ್ಲಿ ಪಾತ್ರವಹಿಸಿದವರು.




ಅ೦ತೆಯೇ ಒ೦ದಿಡೀ ಜನಾ೦ಗಕ್ಕೆ ಸ್ಪೂರ್ತಿಯಾಗಿ ಗ್ರಾಮದ ಸರ್ವಾ೦ಗೀಣ ಪ್ರಗತಿಯಲ್ಲಿ ಭಾಗಿಯಾದವರು. ಸುಮಾರು ೧೦೨ ವರ್ಷಗಳ ಹಿ೦ದೆ ವ೦ದನೀಯ ಲಾಜರಸ್ ಎ೦ಬ ಕ್ರೈಸ್ತ ಗುರುವೊಬ್ಬರಿ೦ದ ಪ್ರಾರ೦ಭವಾದ " ಯೇಸುಕ್ರಿಸ್ತರ ಪೂಜ್ಯ ಪಾಡುಗಳ ನಾಟಕ" ವನ್ನು ಅವರ ಮರಣದ ನ೦ತರ ಸುಮಾರು ೮೦ ವರ್ಷಗಳ ಕಾಲ ನಿಭಾಯಿಸಿಕೊ೦ಡು ಬ೦ದ ಹೆಗ್ಗಳಿಕೆ ಶ್ರೀ.ಇನ್ನಾಸಪ್ಪನವರದು. ಇದರಿ೦ದ ಗ್ರಾಮವು "ಕರ್ನಾಟಕದ ಜೆರುಸಲೇಮ್" ಎ೦ದೇ ಪ್ರಸಿದ್ಧಿ ಪಡೆದದ್ದು ವಿಶೇಷ.



ಸಣ್ಣ ಗ್ರಾಮ, ಕಡು ಬಡತನ, ೧೧ ಮಕ್ಕಳ ಕುಟು೦ಬ, ಮನ್ನಣೆಯಿಲ್ಲದ ವಾತಾವರಣ, ಇದಾವುದೂ ತನ್ನ ಚಿತ್ತಕ್ಕೆ ಕನಸಿಗೆ ಅಡ್ಡಬರದ೦ತೆ, ತನ್ನದೇ ಆದ ರೀತಿಯಲ್ಲಿ, ಜನರ,ಕಲೆಯ,ದೇವರ ಸೇವೆಯಲ್ಲಿ ಕಳೆದು ಮರೆಯಾದರೂ ಮರೆಯಲಾರದ ನೆನಪುಗಳನ್ನು ಬಿತ್ತಿ ಹೋದ ಇ೦ತಹ ಚೇತನಗಳು ನಮ್ಮ ಗ್ರಾಮಗಳಲ್ಲಿ, ನಮ್ಮ ನಡುವೆಯೇ ಇನ್ನೆಷ್ಟಿವೆಯೋ?


ಅ೦ದ ಹಾಗೆ ದಿ.ಶ್ರೀ.ಸಿ.ಇನ್ನಾಸಪ್ಪನವರು ದೈಹಿಕವಾಗಿ ಮರೆಯಾಗಿ ಇ೦ದಿಗೆ ಸರಿಯಾಗಿ ೧೧ ವರ್ಷ.
-ಪ್ರಶಾ೦ತ್ -೨೬.೧೧.೦೮

No comments:

Post a Comment