Tuesday 13 December 2011

ಕ್ರಿಸ್ತನಿಗೊಂದು ಪವಿತ್ರ ಗೋದಲಿಯನ್ನು ಕಟ್ಟಲು ಅನುವುಮಾಡಿಕೊಡುವ ಭಜನೆಮೇಳ..


ಪ್ರೀತಿಯ ಅನು
ಸ್ನೇಹಾಂಜಲಿ.
ಭರವಸೆ, ನಿರೀಕ್ಷೆ, ಸಿದ್ಧತೆ, ಪರಿವರ್ತನೆ, ಹೀಗೆ ಬದುಕಿನ ನಾನಾ ವರಸೆಗಳನ್ನು ಕಟ್ಟಿಕೊಡುವ ಅಗಮನಕಾಲ, ಕ್ರೈಸ್ತ ಪಂಚಾ0 ಗದಲ್ಲಿ ಕಾಣಸಿಗುವ ಒಂದು ವಿಶಿಷ್ಟ ಕಾಲ. ಕ್ರಿಸ್ತನು ಮನುಷ್ಯ ರೂಪ ತಾಳಿ ಬಂದದ್ದನ್ನು ಅರ್ಥಭರಿತವಾಗಿ ಸ್ಮರಿಸಲು ಅಣಿಮಾಡಿಕೊಡುವುದರ ಜತೆಗೆ ಕ್ರಿಸ್ತನ ಪುನರಾಗಮನದ ಪೂರ್ವಾನುಭವವನ್ನು ಉಣಬಡಿಸುತ್ತದೆ ಆಗಮನಕಾಲ. ಕ್ರಿಸ್ಮಸ್ ಎಂಬ ಪಾರಮಾರ್ಥಿಕ ಅದ್ದೂರಿಯ ಜೌತಣದ ಸಂಪೂರ್ಣ ಅನುಭೋಗಕ್ಕೆ ನಮ್ಮನ್ನು ಸಿದ್ಧಗೊಳಿಸುತ್ತಲೇ, ಕ್ರಿಸ್ತನ ಎರಡನೆಯ ಬರುವಿಕೆಯನ್ನು ಮತ್ತು ಮಾನವರನ್ನು ನ್ಯಾಯವಿಚಾರಣೆಗೆ ಗುರಿಮಾಡುವ ಅಂತಿಮ ದಿನವನ್ನು ಸಾಂಕೇತಿಕವಾಗಿ ಸ್ಪಷ್ಟಪಡಿಸುತ್ತದೆ. ಕಾರಣದಿಂದ ಆಗಮನ ಕಾಲವೆಂಬುವುದು ಜೀವಾವಧಿಯ ಕಾಲ, ಆಜೀವ ಸಿದ್ಧತೆಯ ಕಾಲವೆಂಬ ಸತ್ಯವನ್ನು ಮನಗಾಣಿಸುತ್ತದೆ
ಆಂಗ್ಲ ಭಾಷೆಯ advent season ಎಂಬುವುದನ್ನು ಕನ್ನಡದಲ್ಲಿ ಆಗಮನಕಾಲ ಎಂದು ಕರೆಯುತ್ತಾರೆ. ಮೂಲತಃ ಲ್ಯಾತಿನ್ ಪದದ ವ್ಯುತ್ಪನ್ನವಾಗಿರುವ advent ಆಗಮನ ಅಥವಾ ಬರುವುದು ಎಂಬ ಅರ್ಥಗಳನ್ನು ನೀಡುತ್ತದೆ. ಕ್ರಿಸ್ತಜಯಂತಿಯ ಪೂರ್ವಭಾವಿಯಾಗಿ ಬರುವ ಆಚರಣೆಯ ಕಾಲಾವಧಿ ಸುಮಾರು ನಾಲ್ಕು ವಾರಗಳಿಗೆ ವಿಸ್ತರಿಸಿಕೊಂಡಿದ್ದು ಡಿಸಂಬರ್ ೨೫ಕ್ಕೆ ಪೂರ್ಣ ಗೊಂಡು ಕ್ರಿಸ್ಮಸ್ ಹಬ್ಬದ ಸಂಭ್ರಮದ ಆಚರಣೆಗೆ ಮೂರ್ಹತ ಹಾಕಿಕೊಡುತ್ತದೆ. ನಾಲ್ಕುನೆ ಶತಮಾನದಲ್ಲಿ ಆಗಮನಕಾಲವನ್ನು ಉಪವಾಸ ಮತ್ತು ಪ್ರಾಯಶ್ಚಿತ ಕಾಲವಾಗಿ ಆಚರಿಸುತ್ತಿದ್ದರೆಂಬುವುದು ಚಾರಿತ್ರಿಕ ಸತ್ಯ.  ಕ್ರೈಸ್ತ ಧರ್ಮದಲ್ಲಿ ಆಗಮದಕಾಲದ ಆಚರಣೆಯು ಯಾವಾಗ ರೂಢಿಗೆ ಬಂತ್ತೆಂಬ ಪ್ರಶ್ನೆಗೆ ನಿಖರವಾದ ಉತ್ತರ ಅಲಭ್ಯವಾದರೂ ಶತಮಾನಗಳಿಂದ ಅನೇಕ ರೀತಿಯ ವೈವಿಧ್ಯಮಯ ಆಚರಣೆಗಳು/ವಿಧಿಗಳನ್ನು ಕಾಲವು ಮೈಗೂಡಿಸಿಕೊಂಡಿರುವುದು ಒಂದು ಸ್ವಾರಸ್ಯಕರ ವಿಷಯ.
ವಾಡಿಕೆಯಂತೆ ಬಡ ಮಹಿಳೆಯರು ಆಗಮನಕಾಲದ ವಿಷಯವನ್ನು ಒಕ್ಕಣಿಸುವ ಕೆಲವೊಂದು ಭಾವಚಿತ್ರಗಳನ್ನು ಮತ್ತು ಮೇರಿ ಮತ್ತು ಯೇಸುವಿನಂತೆ ಆಲಂಕರಿಸಿದ ಗೊಂಬೆಗಳನ್ನು ಹೊತ್ತು, ಮನೆ ಮನೆಗೆ ಹೋಗಿ, ಮನೆಮಂದಿಗೆಲ್ಲಾ ತೋರಿಸಿ ಅವರಿಂದ ಹಣ ಪಡೆಯುವ ರೂಢಿ ಇಗ್ಲೆಂಡ್ ದೇಶದಲ್ಲಿ ಕಾಣ ಸಿಗುತ್ತದೆ. ಗೊಂಬೆಗಳನ್ನು ಹೊತ್ತುಕೊಂಡ ಮಹಿಳೆಯರು ಕ್ರಿಸ್ಮಸ್ ಮುಂಚಿತವಾಗಿ ತಮ್ಮ ಮನೆಯ ಅಂಗಳದಲ್ಲಿ ಕಾಣಿಸಿಕೊಳ್ಳದಿದ್ದಲ್ಲಿ ಅಂತಹ ಮನೆಗಳಿಗೆ ಅಪಶಕುನ ಅಥವಾ ಅನಿಷ್ಟ ಕಟ್ಟಿಟ್ಟ ಬುತ್ತಿಯೆಂಬ ನಂಬಿಕೆಯಿದೆ
ಉಳುಮೆದಾರರು ಅಥವಾ ಕೃಷಿಕರು ತಮ್ಮ ಹೊಲಗದ್ದೆಗಳ ಸುತ್ತಾ ಗಸ್ತು ತಿರುಗುವಂತೆ, ಒಣಗಿದ ಹುಲ್ಲು ಕಡ್ಡಿಗಳ ಕಂತೆಗಳಿಗೆ ಬೆಂಕಿ ಹಚ್ಚಿ ಕೂಗಾಡಲು ಮಕ್ಕಳನ್ನು ನೇಮಿಸುತ್ತಾರಂತೆ. ಕ್ರಿಮಿಕೀಟಗಳು ಬೆಳೆಗಳನ್ನು ನಾಶಮಾಡುವುದೆಂಬ ಭಯದಿಂದ ಅವುಗಳನ್ನು ತಮ್ಮ ಹೊಲಗದ್ದೆಗಳಿಂದ ಅಟ್ಟಿಸಲು ರೀತಿಯ ವಾಡಿಕೆ ಅವರಿಗೆ ಅಂಟಿಕೊಂಡಿದೆ ಎಂಬ ವಿವರಣೆಯಿದೆ. ಇಟಲಿಯ ದೇಶದಲ್ಲಿ ಮೇರಿ ಮಾತೆಯ ಪುಣ್ಯಕ್ಷೇತ್ರಗಳ ಮುಂದೆ ಜನರು bagpipe ಎಂಬ ವಾದ್ಯಗಳನ್ನು ನುಡಿಸುತ್ತಾರಂತೆ. ಕ್ರಿಸ್ತನ ಜನನದ ನಂತರ ಅವನನ್ನು ಕಾಣಲು ಬಂದ ಕುರುಬರು bagpipe ನುಡಿಸಿ ಸಂಭ್ರಮಿಸಿದರೆಂಬ ನಂಬಿಕೆಯಿಂದ ಹುಟ್ಟಿಕೊಂಡ ಇನ್ನೊಂದು ಆಚರಣೆಯಿದು.
ನನ್ನ ಹುಟ್ಟೂರಿನಲ್ಲಿ ಆಗಮನ ಮತ್ತು ಕ್ರಿಸ್ಮಸ್ ಕಾಲಗಳೆಂದರೆ ಭಜನೆಮೇಳಗಳ ಕಾಲ. ಆಗಮನಕಾಲದ ಭಜನೆಗಳು (ಬನ್ನಿ ರಕ್ಷಕರೇ ಬನ್ನಿ ರಕ್ಷಕರೆ, ನಾವು ನಿಮ್ಮನ್ನಪೇಕ್ಷಿಸಿ ಕಾದು ಕೊಂಡಿದ್ದೇವೆ. ಬನ್ನಿ ಬನ್ನಿ...) ಕ್ರಿಸ್ತನ ಬರುವಿಕೆಯನ್ನು ಉತ್ಕಟವಾಗಿ ಆಶಿಸುವ ಜನರ ಹಂಬಲವನ್ನು ವ್ಯಕ್ತಪಡಿಸುತ್ತವೆ. ಇನ್ನೊಂದು ಕಡೆ, ಕ್ರಿಸ್ಮಸ್ ಹಬ್ಬದ ದಿನ ಮತ್ತು ನಂತರ ದಿನಗಳಲ್ಲಿ ಹಾಡಲು ವಿಶೇಷವಾಗಿ ರಚಿತಗೊಂಡ ಕ್ರಿಸ್ಮಸ್ ಭಜನೆಗಳು ಕ್ರಿಸ್ತನ ಜನನದ ಘಟನೆಯನ್ನು ಮತ್ತು ಘಟನೆಯ ಸುತ್ತ ಆವರಿಸಿಕೊಂಡಿರುವ ಇನ್ನಿತರ ಘಟನೆಗಳನ್ನು ಸ್ವಾರಸ್ಯವಾಗಿ ಕಣ್ಣಿಗೆ ಕಟ್ಟುವಂತೆ ಬಣ್ಣಿಸುತ್ತವೆ. ಗೊಲ್ಲರ ಅನುಭವಕ್ಕೆ ಬರುವ ಕ್ರಿಸ್ತ ಜನನದ ವಿವರಣೆಯ ಹಾಡುಗಳಂತೂ ತುಂಬ ವಿಶೇಷವೆನ್ನಿಸುತ್ತವೆ.
ಸರಳತೆ ಸ್ಪಷ್ಟತೆಗಳಿಗೆ ಒತ್ತುಕೊಡುವ ನಿರೂಪಣ ವಿಧಾನವನ್ನು ಭಜನೆಗಳಲ್ಲಿ ಕಾಣಬಹುದು. ಭಜನೆಗಳಲ್ಲಿ ರಾಗ, ತಾಳ ಲಯಬದ್ಧವಾಗಿದ್ದು ಸರಳ ಶೈಲಿಯಲ್ಲಿ ರಚಿತವಾಗಿರುವುದರಿಂದ ಒಮ್ಮೆ ಓದಿದವರಿಗೆ ಪುನಃ ಓದಬೇಕೆಂಬ, ಓದಿದ ಮೇಲೆ ಹಾಡಬೇಕೆಂಬ, ಹಾಡಿದ ಮೇಲೆ ಅಲ್ಲಿಯ ತತ್ತ್ವಗಳನ್ನು ಅರಿಯಬೇಕೆಂಬ ಆಸಕ್ತಿ ಒಡಮೂಡದೆ ಇರುವುದಿಲ್ಲ. ದೈನಂದಿನ ಮಾತಿನ ಬಳಕೆ ಹಾಗು ಆಡುಮಾತುಗಳಲ್ಲಿ ಭಜನೆಗಳು ರಚನೆಯಾಗಿರುವುದರಿಂದ ಅವುಗಳು ವ್ಯಕ್ತಪಡಿಸುವ ಧೋರಣೆ, ಆಶಯಗಳು ಸುಲಭವಾಗಿ ಅರ್ಥವಾಗುತ್ತವೆ. ಇನ್ನೊಂದು ಕಡೆ, ಸಂವಾದದ ಧಾಟಿಯಲ್ಲಿರುವ ಅನೇಕ ಭಜನೆಗಳು ಆಶಯಗಳ ಅಭಿವ್ಯಕ್ತಿಗೆ ಅನುಕೂಲವಾಗಿದೆ. ಒಟ್ಟಿನಲ್ಲಿ, ಭಾಷೆಯ ಸಂಕೀರ್ಣತೆಯಿಂದ ದೂರವಾಗಿ ಘನವಾದ ವಿಷಯಗಳನ್ನು ತಿಳಿಗೊಳಿಸಿ ಹೇಳುವ ನಿಪುಣತೆ ಭಜನೆಗಳ ಜೀವಾಳ. ಭಜನೆಗಳ ಧಾಟಿ ಗ್ರಾಮ್ಯವಾಗಿರುವುದ್ದರಿಂದ ಹಳ್ಳಿಯ ಕ್ರೈಸ್ತರ ಮನೆ ಮನಗಳಲ್ಲಿ ಇಂದಿಗೂ ಜೀವಂತವಾಗಿ ಉಳಿದಿವೆ. ಇನ್ನೊಂದು ಕಡೆ, ಭಜನೆಗಳಲ್ಲಿರುವ ಸಾಹಿತ್ಯ ಮತ್ತು ಸಂಗೀತಗಳ ಅನ್ಯೋನ್ಯತೆ ಭಕ್ತನನ್ನು ಭಕ್ತಿಯ ಪರವಶತೆಯಲ್ಲಿ ತೇಲಿಸಿಬಿಡುತ್ತವೆ. ಕೆಲವು ಭಜನೆಗಳ ಸಂಗೀತ ಲ್ಯಾಟಿನ್, ಪ್ರೆಂಚ್ ಮೂಲವಾಗಿದ್ದು ಅವುಗಳನ್ನು ಕನ್ನಡೀಕರಿಸಿ ತಮ್ಮ ಅರಾಧನವಿಧಿಗಳಲ್ಲಿ ಉಪಯೋಗಿಸಿಕೊಂಡಿರುವುದು ಗಮನಾರ್ಹ.
ಆಗಮನಕಾಲ, ಕ್ರಿಸ್ಮಸ್ ಕಾಲ, ಪಾಸ್ಖಕಾಲ ಹೀಗೆ ಕ್ರೈಸ್ತಪೂಜಾವಿಧಿಗಳ ವಿಶೇಷ ಕಾಲಗಳಲ್ಲಿ ಮತ್ತು ವಾರದ ವಿಶೇಷ ದಿನಗಳಲ್ಲಿ ಭಜನೆ ಮೇಳಗಳು ಯಥೇಚ್ಛವಾಗಿ ಕಾಣಸಿಗುತ್ತವೆ. ಜತೆಗೆ ಊರಿನಲ್ಲಿ ಭೀಕರ ಸಮಸ್ಯೆಗಳು ತಲೆದೋರಿದಾಗ ಭಜನೆಮೇಳಗಳು ಹೆಚ್ಚಾಗಿ ನಡೆಯುವುದು ಒಂದು ಕುತೂಹಲವುಳ್ಳ ವಿಷಯವು ಹೌದು.
ಭಜನೆ ಮೇಳವನ್ನು ವ್ಯಕ್ತಿಗತ ಮತ್ತು ಸಾಮೂಹಿಕ ಎಂದು ಎರಡು ಹಂತಗಳಲ್ಲಿ ವಿಭಾಗಿಸಬಹುದು. ಗ್ರಾಮದಲ್ಲಿ ನಡೆಯುವುವ ಭಜನೆಮೇಳಗಳು ಸಾಮೂಹಿಕ ರೂಪದ್ದು, ಇಲ್ಲಿ ಹಾಡುವವರ ಸಂಖ್ಯೆಯನ್ನು ನಿರ್ದಿಷ್ಟವಾಗಿ ಹೇಳದೇ ಒಂದಕ್ಕಿಂತ ಹೆಚ್ಚು ಎನ್ನುವುದೇ ಸೂಕ್ತವೆನ್ನಿಸುತ್ತದೆ. ಏಕೆಂದರೆ ಹಲವು ಬಾರಿ ಹಾಡುವವರ ಸಂಖ್ಯೆ ೧೦ ರಿಂದ ೧೫ ಇದ್ದರೆ, ಕೆಲವೊಮ್ಮೆ ಹಾಡುವವರ ಸಂಖ್ಯೆ ೨೦ಕ್ಕಿಂತ ಅಧಿಕವಿರುತ್ತದೆ. ಸಾಮೂಹಿಕ ಭಜನೆಯಾದ್ದರಿಂದ ಹಿಮ್ಮೇಳವಿರವುದನ್ನು ಗಮನಿಸಬಹುದು. ಮುಖ್ಯ ಗಾಯಕ ಭಜನೆಯನ್ನು ಹಾಡುತ್ತಾ ಹೋದಂತೆ ಉಳಿದವರು ಅದೇ ಧಾಟಿಯಲ್ಲಿ ಅದನ್ನು ಪುನರಾವರ್ತಿಸುತ್ತಾರೆ. ಕೆಲವೊಮ್ಮೆ ಪಲ್ಲವಿಯ ಭಾಗವನ್ನು ಪುನರಾವರ್ತಿಸಿದರೆ, ಹಲವು ಸಲ ಜತೆಯಲ್ಲೇ ಇಡೀ ಹಾಡನ್ನು ಪುನರಾವರ್ತಿಸುವುದು ಕಂಡು ಬರುತ್ತದೆ. ತಾಳ, ಕಂಜ್ರಿಹಾರ್ಮೊನಿಯಂ ಹೀಗೆ ಮೊದಲಾದ ವಾದ್ಯ ವಿಶೇಷಗಳು ಇಲ್ಲಿರುತ್ತವೆ.
ಭಜನೆ ಕರ್ನಾಟಕದಾದ್ಯಂತ ಕಂಡು ಬರುವ ದೇಸಿ ಧಾರ್ಮಿಕ ಸಂಪ್ರದಾಯ. ಒಂದು ಆರಾಧನಾ ಕ್ರಮ. ಒಂದೊಂದು ಭಾಗದಲ್ಲಿ ಹಾಡುವ ಭಜನೆಗಳ ಹಿನ್ನಲೆ ಹಾಗು ಪ್ರಕಾರಗಳ ಮಟ್ಟಿಗೆ ಸ್ವಲ್ಪ ವ್ಯತ್ಯಾಸವಾದರೂ ಒಟ್ಟಾಗಿ ಮೇಳಗಳು ಒಂದಲ್ಲ ಒಂದು ರೀತಿಯಲ್ಲಿ ನಾಡಿನ ಉದ್ದಗಲಕ್ಕೂ ವ್ಯಾಪಿಸಿವೆ. ಇದು ಧರ್ಮಾತೀತ ಸಂಪ್ರದಾಯವು ಹೌದು. ಇಂತಹ ದೇಸಿಮೇಳಗಳು ಆಗಮನಕಾಲ ಮತ್ತು ಕ್ರಿಸ್ಮಸ್ ಆಚರಣೆಗಳ ಅವಿಭಾಜ್ಯವಾಗಿದ್ದು ಹೇಗೆ
 ಕೆಲ ದುಷ್ಟಾತ್ಮಗಳಿಗೆ ಮಧ್ಯಾಹ್ನ ಮತ್ತು ನಡುರಾತ್ರಿಯಲ್ಲಿ ಕಾಲರ ರೋಗವನ್ನು ಹರಡುವ ಶಕ್ತಿ ಇತ್ತಂತೆ. ರೋಗವನ್ನು ಹರಡುವ ಅಂತಹ ಭಯಾನಕ ದುಷ್ಟಆತ್ಮಗಳನ್ನು ತಮ್ಮ ಊರುಕೇರಿಗಳಿಂದ ಬೆಂಕಿ ಪಂಜು ಮತ್ತು ಸದ್ದುಗದ್ದಲ ಕೂಗಾಟಗಳಿಂದ ಬೆದರಿಸಿ ಬಡಿದೋಡಿಸಬಹುದು ಎಂಬ ನಂಬಿಕೆಯಿಂದ ಜನರು ಊರಿನ ಸುತ್ತಾ ಪಂಜು ಮತ್ತು ಗದ್ದಲಗಳಿಂದ ಗಸ್ತುಮಾಡಲು ಪ್ರಾರಂಭಿಸಿ ಕಾಲಕ್ರಮೇಣ ಅದು ಭಜನೆ ಸಂಪ್ರದಾಯವಾಗಿ ರೂಪುಗೊಂಡಿತ್ತಂತೆಕೊನೆಗೆ ೧೯ನೇ ಶತಮಾನದಲ್ಲಿ ಭಜನೆಂಬ ದೇಸಿ ಸಂಪ್ರದಾಯವು carol singing ಜತೆ ಸಮೀಕರಿಸಿಕೊಂಡ ಪ್ರತಿಫಲದಿಂದ ಕ್ರೈಸ್ತ ಭಜನೆಮೇಳಗಳು ಹುಟ್ಟಿಕೊಂಡವೆಂದು ಜಾನಪದ ತಜ್ಞ ಪಾಧರ್ ವಿನ್ಸೆಂಟ್ ವಿಲ್ಸನ್ರವರ ವಿವರಣೆ. ಭಜನೆಮೇಳಗಳು ಈಗ ಕಾಲರ ರೋಗವನ್ನು ಹರಡುವ ದುಷ್ಟಶಕ್ತಿಯನ್ನು ಓಡಿಸುವ ಕೆಲಸವನ್ನು ಬಿಟ್ಟು, ಕ್ರಿಸ್ಮ ಆಚರಣೆಗೆ ಸಿದ್ಧತೆಗೊಳಿಸುವ, ಮನಸ್ಸಿನಲ್ಲಿರುವ ದುಷ್ಟ ಶಕ್ತಿಗಳನ್ನು ಬಡಿದೋಡಿಸಿ ಕ್ರಿಸ್ತನಿಗೆ ಒಂದು ಪವಿತ್ರ ಗೋದಲಿಯನ್ನು ನಮ್ಮ ಬದುಕಿನಲು ಕಟ್ಟಲು ಅನುವುಮಾಡಿಕೊಡುವ ಸಂಪ್ರದಾಯವಾಗಿ ರೂಪುಗೊಂಡಿರುವುದು ಶ್ಲಾಘನೀಯ ವಿಷಯ. ಅನು, ಇಂತಹ ಭಜನೆಗಳನ್ನು ಕೇಳಲು ಆಸಕ್ತಿಯಿದ್ದಲ್ಲಿ ನಮ್ಮ ನಾಯಕ ಹುಟ್ಟಿದ ನೋಡಿ ಎಂಬ ದ್ವನಿಸುರುಳಿಯನ್ನು ಕೊಂಡು ಆಲಿಸು. ಧನ್ಯವಾದಗಳು
-ಜೋವಿ

Read more!

No comments:

Post a Comment