Tuesday 13 December 2011

ಭಾವನೆಗಳು ತೂತಾದರೆ ಮನೆಗಳು ತೂತು - ಕೌಟುಂಬಿಕ ದೌರ್ಜನ್ಯ


 
           ರಾಜಾರಾಂ ಮೋಹನ್ ರಾಯ್, ವಿವೇಕನಂದ, ಮಹಾತ್ಮ ಗಾಂಧಿ, ಬಾಬಾ ಆಮ್ಟೆ, ಈಶ್ವರ್ ಚಂದ್ರ ವಿದ್ಯಾಸಾಗರ್, ಅನಿಬೆಸೆಂಟ್ ರಂತಹ ಆನೇಕ ಗಣ್ಯರು ತಮ್ಮ ಇಡೀ ಜೀವಮಾನ ಸವೆಸಿದ್ದು ಇದಕ್ಕಾಗಿಯೇ. ಇದ್ದ ಬದ್ದ ಅನಿಷ್ಟ ಪದ್ಧತಿಗಳು ನಮ್ಮ ಸಾಮಾಜವನ್ನು ಹರಿದು ಮುಕ್ಕಿದ ಕಾಲದಲ್ಲಿ ಪರಿಣಾಮಕಾರಿಯಾಗಿ anti virusನಂತೆ ಕೆಲಸ ಮಾಡಿದ ಇವರು, ಜನರಲ್ಲಿ ಅರಿವು ಮೂಡಿಸುವ ಮತ್ತು ಮೌಢ್ಯಗಳ ವಿರುದ್ಧ ಎಚ್ಚೆತ್ತುಕೊಳ್ಳುವ ಕಾರ್ಯಗಳನ್ನು ರೂಡಿಗೆ ತಂದರು. ಸತಿಸಹಗಮನ ಪದ್ದತಿ, ಬಲಿಕೊಡುವ ಪದ್ದತಿ, ಕೂಡಿಕೆ ಪದ್ದತಿ, ಪರದ ವ್ಯವಸ್ಥೆಯಂತಹ ಅವೈಜ್ಣಾನಿಕ ಪದ್ದತಿಗೆ ಇತಿಶ್ರಿ ಹಾಡುವಲ್ಲಿ ಅವರುಗಳು ತೋರಿದ ಶ್ರದ್ಧೆ, ಕಾಳಜಿ, ಧೈರ್ಯ ಕಷ್ಟ ಸಾಧ್ಯವಾಗಿತ್ತು. ಏಕೆಂದರೆ ಅನಾಗರೀಕತೆ ಮಡುಗಟ್ಟಿ ನಿಂತಿದ್ದ ಕಾಲ ಅದು.
      ವೈಜ್ಣಾನಿಕತೆ ತರುವಲ್ಲಿ ಅಂದಿನ ವಿದ್ಯೆಗೆ ಶಕ್ತಿ ಸಾಲದ್ದಾಗಿತ್ತೊ ಏನೋ? ಅಥವಾ ವಿದ್ಯೆ ತಲುಪಲು ಸಾಕಷ್ಟು ಮಾರ್ಗಗಳಿರಲಿಲ್ಲವೊ ಏನೋ?. ಈ ನ್ಯೂನತೆಗಳನ್ನು ಸ-ದುರುಪಯೋಗಪಡಿಸಿಕೊಂಡಿದ್ದು ಮಾತ್ರ ಇದೇ ಸಮಾಜದ ಪಟ್ಟಭದ್ರಹಿತಾಸಕ್ತಿಗಳು. ತನ್ನ ಮೂಗಿನ ನೆರಕ್ಕೆ ನಡೆಯಬೇಕು ಎಂಬ ಅಹಂ ಆನೇಕ ಅನಿಷ್ಟ ಪದ್ದತಿಗಳ ಹುಟ್ಟಿಗೆ ಕಾರಣವಾಯಿತು. ಅಷ್ಟೇ ಏಕೆ ಈ ಪದ್ದತಿಗಳು ದೈವ ವಿಧಿಸಿದ ವಿಧಿ-ಕಟ್ಟಳೆಗಳು ಇದನ್ನು ಒಪ್ಪಿಕೊಂಡು ಅನುಸರಿಸಿಯೇ ತೀರಬೇಕು ಇಲ್ಲವಾದರೆ ಪಾಪ ಉಳಿದುಬಿಡುತದೆ. ಆ ದೇವರಿಗೆ ಕೋಪ ಬರುತ್ತದೆ, ಎಂದು ಥೇಟ್ ದೇವರನ್ನು ಕಂಡು ಜೊತೆಯಲ್ಲಿ ಬೈಟು ಕಾಫಿ ಕುಡಿದು ಮಾಹಿತಿ ಹೊತ್ತು ಬಂದ ದೂತರಂತೆ ಅಬ್ಬರಿಸಿಬಿಡುತಿದ್ದರು. ಅಷ್ಟಕ್ಕೂ ಈ ಎಲ್ಲ ಅನಿಷ್ಟಗಳನ್ನು ಹೇರಿದ್ದು ಯಾರ ಮೇಲೆ? ಕೈಲಾಗದ, ಧ್ವನಿ ಇಲ್ಲದ ಶೋಷಿತವರ್ಗವೆಂದೇನು ಕರೆಯುತೇವೆಯೋ ಆ ಬಡವರ ಮೇಲೆ, ಹೆಣ್ಣಿನ ಮೇಲೆ ಮುಗ್ಧ ಮಕ್ಕಳ ಮೇಲೆ. ಅದರಲ್ಲೂ ಹೆಣ್ಣನ್ನು ಪೂಜಿಸುವಲ್ಲಿಂದ ಹಿಡಿದು ಜಾಡಿಸುವಲ್ಲಿಯವರೆಗೂ ಬೇಕಾದ ರೀತಿಯಲ್ಲಿ ಶೋಷಣೆ ಮಾಡಿಬಿಟ್ಟರು. ಒಂದು ವಿಧದಲ್ಲಿ ಇದು ಪುರುಷ ಪ್ರಧಾನ ಸಮಾಜದ ಕೊಡುಗೆಯೇ ಸರಿ.
      ಇದೀಗ ಶತ ಶತಮಾನಗಳು ಕಳೆದು ಆಧುನಿಕತೆ, ವೈಚಾರಿಕತೆ, ವೈಜ್ನಾನಿಕತೆಯ ಕಡೆ ಹೆಚ್ಚು ವಾಲುತಿದ್ದೇವೆ ಎಂಬ ಹೆಮ್ಮೆ ಇದೆ. ಅನಿಷ್ಟ ಪದ್ದತಿಗಳು ಸಮಾಜ ಸುದಾರಕರ ಫಲದಿಂದ ಸುಧಾರಣೆಯಾಗಿವೆ. ಆದರೆ ಅದೇಕೊ ಸುಧಾರಿಸಿಕೊಳ್ಳುವ ಮನೋಬಲದ ಕೊರತೆ ಅಲ್ಲಲ್ಲಿ ಇದ್ದೆ ಇದೆ. ಸಮಾಜದಲ್ಲಿ ಬಹಿರಂಗವಾಗಿ ಕಾಣಿಸಿಕೊಂಡಿದ್ದ ಹಲವು ಅನಿಷ್ಟ ಪದ್ದತಿಗಳು ಸತ್ತು ಎಷ್ಟೋ ಕಾಲಗಳಾಗಿವೆ. ಆದರೂ ಅದರ ನೆರಳು(ಪ್ರೇತ) ಅಸ್ಥಿತ್ವದಲ್ಲಿದೆ. ಅದು ಮಹಿಳೆ ಮೇಲಿನ ದಬ್ಬಾಳಿಕೆ, ಕೌಟುಂಬಿಕ ದೌರ್ಜನ್ಯ, ಅತ್ಯಾಚಾರ ಹೀಗೆ ಒಂದಲ್ಲ ಒಂದು ರೀತಿಯಲ್ಲಿ ಪದೇ ಪದೇ ಆ ಹೆಣ್ಣನ್ನು ಬಲಿತೆಗೆದು ಕೊಳ್ಳುತ್ತಲೆ ಇದೆ. ಅದರಲ್ಲೂ "ಕೌಟುಂಬಿಕ ದೌರ್ಜನ್ಯ"ದಂತಹ ಸಾಮಾಜಿಕ ಪಿಡುಗು ನಿಂತ ನೀರಲ್ಲಿ ಕಾಣಸಿಗುವ ಪಾಚಿಯಂತೆ, ಕುಟುಂಬಗಳಲ್ಲಿ ಸಾಮಾನ್ಯವಾಗಿರುವ ಒಂದು ಕೆಟ್ಟ ಪಿಡುಗು. "ಎಲ್ಲರ ಮನೆ ದೋಸೆನೂ ತೂತೇ" ಎನ್ನುವಂತಹ ಉದ್ಧಟತನದ ಮಾತುಗಳು ನಮ್ಮ ಹಿರಿಯ ಸಮಾಜ ಸುಧಾರಕರನ್ನು ಕೌಟುಂಬಿಕ ವಿಚಾರದೊಳಗೆ ತಲೆಹಾಕದಂತೆ ಮಾಡಿಬಿಡುತ್ತಿದ್ದವು.
    ಈಗಂತೂ ವಿದ್ಯಾದೇವತೆ ಮನೆಮನೆ ತಟ್ಟಿದ್ದಾಳೆ. ಎಲ್ಲರಿಗು ಇವಳು ಸಹಜ ವಸ್ತುವೇ ಆದರೂ ಪರಿಣಾಮಕಾರಿಯಾದ ಸುಸ್ಥಿತಿ ತಲುಪುವಲ್ಲಿ ನಾವುಗಳು ಎಡವುತಿರುವುದೇಕೆ? ಎಂದು ಅವಲೋಕಿಸಿದಾಗ "ಅಹಂ" ಎಂಬ ದುಷ್ಟ ಅಡಗಿ ಕುಳಿತಿರುವುದು ಗೋಚರಿಸುತ್ತದೆ. ಗಂಡು ಕುಟುಂಬದ ಸರ್ವಕಾಲಿಕ ಯಜಮಾನ ಎಂಬುವ ಅಹಂ. ಲೋಕದ ವ್ಯವಹಾರ ಜ್ನಾನ ತಿಳಿದುಕೊಂಡಿದ್ದೇವೆ ಎಂಬ ಅಹಂ. ಕುಟುಂಬಕ್ಕೆ ಗಂಡೆ ಅನ್ನದಾತ ಎನ್ನುವ ಅಹಂ ಇತ್ಯಾದಿಗಳ ಅಹಂನಿಂದಾಗಿ ಕುಟುಂಬದ ನಿರ್ದಾರಗಳಲ್ಲಿ, ತೀರ್ಮಾನ ತೆಗೆದುಕೊಳ್ಳುವುದರಲ್ಲಿ ಹೀಗೆ ಅಲ್ಲ ವಿಚಾರದಲ್ಲೂ ತನ್ನದೇ ಮೇಲುಗೈ ಆಗಿರಬೇಕು ಎಂದು ಗಂಡು ಬಯಸುತ್ತಾನೆ. ಮಾತ್ರವಲ್ಲ ಇಂತಹ ವಿಚಾರಗಳಲ್ಲಿ ಹೆಣ್ಣು ಅಡ್ಡಿಯಾದರೆ ಆಕೆಯ ಮೇಲೆ ದೌರ್ಜನ್ಯವೆಸಗುವ ಪ್ರವೃತ್ತಿಯನ್ನು ಕಂಡುಕೊಂಡಿದ್ದಾನೆ. ವರದಕ್ಷಿಣೆ ಹೆಸರಿನಲ್ಲಿ ಹೆಣ್ಣಿನ ಮೇಲೆ ದೌರ್ಜನ್ಯ ನಡೆಸುವುದು, ಮಕ್ಕಳಾಗಲಿಲ್ಲ ಎಂಬ ಕಾರಣಕ್ಕಾಗಿ ಹೆಣ್ಣನ್ನು ದೂಷಿಸುವುದು. ಮನೆಯಲ್ಲೇ ಇರುತ್ತಾಳೆ ಎಂಬುವ ಕಾರಣಕೊಟ್ಟು ಒಬ್ಬ ಸೇವಕಿಯಂತೆ ನಡೆಸಿಕೊಳ್ಳುವುದು, ಮದುವೆಯಾದ ಮೇಲೆ ಸ್ನೇಹಿತರೊಂದಿಗೆ ಮಾತನಾಡುವಂತಹ ಸ್ವಾತಂತ್ರ್ಯ ಮೊಟುಕುಗೊಳಿಸುವುದು. ಗಂಡನ ಮನೆಕಡೆಯವರು ಮನೆಗೆ ಬಂದಾಗ ಅವರನ್ನು ಸರಿಯಾಗಿ ಗಮನಿಸಲಿಲ್ಲ ಎಂಬ ಕ್ಷುಲಕ ಕಾರಣಕೊಟ್ಟು ದೌರ್ಜನ್ಯ ಎಸಗುವವರು ಇದ್ದಾರೆ. ಈ ಎಲ್ಲ ವಿಧಿ ವಿಧಾನಗಳನ್ನು ರೀತಿ ನೀತಿಗಳನ್ನು ಹೆಣ್ಣಿನ ಮೇಲೆ ಹೊರಿಸಿ ಆಕೆಯನ್ನು ತನ್ನ ಹದ್ದು ಬಸ್ತಿನಲ್ಲಿ ಇಟ್ಟುಕೊಳ್ಳಬೇಕೆನ್ನುವುದು ಕೌಟುಂಬಿಕ ದೌರ್ಜನ್ಯದ ಮುಂದುವರಿದ ಭಾಗ.
        ಒಟ್ಟಿನಲ್ಲಿ ಅಕ್ಕಪಕ್ಕ ಇಂತಹ ದೌರ್ಜನ್ಯಗಳು ಕಂಡುಬಂದಾಗ ಹಿರಿಯರು, ಪ್ರಬುದ್ಧರು "ಕುಟುಂಬದಲ್ಲಿ ಇದೆಲ್ಲ ಸರ್ವೆ ಸಾಮಾನ್ಯ ಎಲ್ಲರ ಮನೆ ದೊಸೆನೂ ತೂತೇ" ಎಂದು ಅಲ್ಲಗಳೆಯದೆ, ಆ ಹೆಣ್ಣು ಮಗಳ ಸ್ಥಿತಿ ನಾಳೆ ನನ್ನ ಮಗಳಿಗೂ ಬಂದೀತು, ಆಗಾಗದಿರಲಿ ಎಂದು ಇಂತಹ ದೌರ್ಜನ್ಯಗಳನ್ನು ಖಂಡಿಸುವ ಸ್ಥೈರ್ಯ ತೋರಬೇಕು. ಅಂತಹ ಅಜ್ನಾನ ಅಘೋರ ಕಾಲದಲ್ಲೆ ಅನಿಷ್ಟ ದೌರ್ಜನ್ಯಗಳ ವಿರುದ್ಧ ಹೋರಾಡುವ ಧೈರ್ಯ ತೋರಿದ ಮಹಾನುಭಾವರಿಗೆ ಕಿಂಚಿತ್ತಾದರು ಬೆಲೆಕೊಡುವ ಮತ್ತು ಅವರಂತ ಸುಧಾರಕರ ಶ್ರಮದಿಂದಲೇ ನಮ್ಮ ಸಂತತಿಗಳು ಬದುಕು ಕಾಣುತಿರುವುದು ಎಂಬ ಕೃತಜ್ನತೆಯನ್ನು ಪ್ರಜ್ನ್ನ ಹೋರಾಟದ ಮೂಲಕ ತೋರಿಸಬೇಕು. ಇಲ್ಲವಾದರೆ ನಾಗರೀಕ ಸಮಾಜದಲ್ಲಿರುವ ಅಂತವರನ್ನು ಅನಾಗರಿಕರು ಎಂದು ಕರೆಯಬೇಕಾಗುತ್ತದೆ. ಏನಂತೀರಿ?.

-ಸಂತೋಷ್.ಇ.
 Read more!

No comments:

Post a Comment