Thursday 1 December 2011

ನೆನೆದವನ ಮನದಲ್ಲಿ…..



ಶ್ರೀ.ಇನ್ನಾಸಪ್ಪನವರು ಒಬ್ಬ ಸಾಧಾರಣ ಕ್ರೈಸ್ತರಾದರೂ, ಅವರಿಂದ ಸ್ಫೂರ್ತಿಗೊಂಡ ಅನೇಕರಲ್ಲಿ ನಾನು ಒಬ್ಬ. ಒಬ್ಬ ಸಾಮಾನ್ಯನಾಗಿ, ಇಡೀ ಒಂದು ಗ್ರಾಮದ ಆರ್ಥಿಕ, ಶೈಕ್ಷಣಿಕ ಹಾಗು ಆಧ್ಯಾತ್ಮಿಕ ಪ್ರಗತಿಗೆ ದುಡಿದು ಯಶಸ್ಸು ಪಡೆದ ಶ್ರೀಯುತರು, ಆದರ್ಶ ಕ್ರೈಸ್ತ ಜೀವನ ಸಾಧ್ಯವೆಂದು ಬಾಳಿ ತೋರಿಸಿಕೊಟ್ಟವರು. ಶ್ರೀಯುತರ ಅಧ್ಯಾತ್ಮಿಕ ಜೀವನ, ಕ್ರಿಸ್ತನ ಶುಭಸಂದೇಶವನ್ನು ಜನಮನಗಳಲ್ಲಿ ಬಿತ್ತಲು ಕೈಗೊಂಡ ಕಾರ್ಯಗಳು, ತಮ್ಮ ಜನರ ಜೀವನದಲ್ಲಿ ಕ್ರೈಸ್ತ ಧರ್ಮವನ್ನು ಪ್ರಸ್ತುತ ಪಡಿಸಿದ ರೀತಿ, ತನಗಾದ ಕ್ರಿಸಾನುಭವವನ್ನು ಇತರಿಗೆ ತಿಳಿಸಲು ಭಾರತೀಯ ಕಲಾಪ್ರಕಾರಗಳನ್ನು ಬಳಸಿಕೊಳ್ಳುವ ನಿರ್ಧಾರ ನಿಜಕ್ಕೂ ಶ್ಲಾಘನೀಯ. ಹಾರೋಬೆಲೆ ಗ್ರಾಮದಲ್ಲಿ ವಂ. ಸ್ವಾಮಿ. ಲಾಜರಸ್ರವರು ಪ್ರಾರಂಭಿಸಿದ ಯೇಸು ಕ್ರಿಸ್ತರ ಪೂಜ್ಯ ಪಾಡುಗಳ ಮಹಿಮೆಯನ್ನು ಸಂಪೂರ್ಣವಾಗಿ ಪರಿಷ್ಕರಿಸಿ ಸುಮಾರು ೮೦ ವರ್ಷಗಳ ಕಾಲ ಅದರ ನಿರ್ದೇಶಕರಾಗಿ ಮುನ್ನಡೆಸಿಕೊಂಡು ಬಂದಿದ್ದು, ಸುಮಾರು ೩೫ಕ್ಕೂ ಹೆಚ್ಚು ಬೈಬಲ್ ಆಧಾರಿತ ನಾಟಕಗಳ ರಚನೆ, ೮೦೦ಕ್ಕೂ ಹೆಚ್ಚು ಭಜನಾ ಹಾಗೂ ರಂಗ  ಗೀತೆಗಳ ರಚನೆ, ೩೦ ವರ್ಷಗಳ ಕಾಲ ಶಾಲೆಯ ಶಿಕ್ಷಕ, ಮುಖ್ಯ ಉಪಾಧ್ಯಾಯರಾಗಿ ಸೇವೆ ಹಾಗೂ ಪಂಚಾಯಿತಿ ಅಧ್ಯಕ್ಷತೆ, ಊರಿನ ಪೋಸ್ಟ್ ಮಾಸ್ಟರ್ ಒಳಗೊಂಡಂತೆ ಅನೇಕ ಜವಬ್ದಾರಿಗಳ ನಿರ್ವಹಣೆ ಹಾಗೂ ಕರ್ನಾಟಕದ ರಾಯಭಾರಿಯಾಗಿ ರೋಮ್ ದೇಶದಲ್ಲಿ ಪೋಪ್ ಜಗದ್ಗುರುಗಳ ಭೇಟಿ, ಇವು ಇವರ ಜೀವಮಾನದ ಕೆಲವು ಪ್ರಮುಖ ಸಾಧನೆಗಳಾಗಿವೆ. ಇವೆಲ್ಲವೂ ಮೇಲ್ನೋಟಕ್ಕೆ ಕೇವಲ ಸಾಮಾನ್ಯ ಜವಾಬ್ದಾರಿ ಹಾಗೂ ನಿರ್ವಹಣೆಯಂತೆ ಕಂಡರೂ ಒಬ್ಬ ಗ್ರಾಮಸ್ಥನಾಗಿ, ತುಂಬು ಪರಿವಾರದ ಯಜಮಾನನಾಗಿ  ಇತಿಮಿತಿಯ ಹಾಗೂ ಪರಿಸ್ಥಿತಿಯ ಒತ್ತಡಗಳ ನಡುವೆಯೂ ರೀತಿಯ ಸಾಧನೆಗಳ ಶಿಖರವೇರಿದ್ದು ನಿಜವಾಗಲೂ ಅದ್ಭುತವೇ ಸರಿ. ಇನ್ನಾಸಪ್ಪನವರ ಹಂತ ಹಂತದ ಬೆಳವಣಿಗೆ, ಕೊಡುಗೆ, ಜೀವನ, ಸಾಧನೆ ಹಾಗೂ ತಮ್ಮ ಸುತ್ತಮುತ್ತಲಿನ ಜನ, ಪರಿಸರ ಹಾಗೂ ಜೀವನ ಕ್ರಮಗಳ ಮೇಲೆ ಬೀರಿದ ಪ್ರಭಾವದ ಬಗ್ಗೆ ಒಂದು ವಿಹಂಗಮ ನೋಟವನ್ನು ಹಂತ ಹಂತವಾಗಿ ಪರಿಚಯಿಸುವ ಸಾಹಸವನ್ನು ಕೈಗೊಳ್ಳುವ ಯೋಜನೆ ಇದೆ. ಅವರು ನಮ್ಮನ್ನು ಆಗಲಿ ನವಂಬರ್ ೨೪ಕ್ಕೆ ೧೪ ವರ್ಷಗಳು ತುಂಬಿ ೧೫ನೇ ವರ್ಷಕ್ಕ ಕಾಲಿಟ್ಟಿದೆ. ಈ ಒಂದು ಸುಸಂದರ್ಭದಲ್ಲಿ …ಅವರ ಬಗ್ಗೆ ಬರೆದಿದ್ದ ಕೆಲವೊಂದು ಸಾಲುಗಳು..


ಮೌನದಿ ನಿಂತು ನೋಡುತ್ತೇನೆ...
ನಿನ್ನಂದ ಊರು ಪಡೆದ ಹೂಸ ಆಕಾರಗಳ 
ವಿಕಾರದೊಳಗೆ ಭಕ್ತಿ ಬಂಡಾರದ ನವ ರೂಪಗಳ
ನೆನೆಯುತ್ತಿದೆ ಮನಸು ಮನಪಲ್ಲಟದೊಳೆಗೆ ಹುದುಗಿ
ನಿನ್ನ ಸಾಮಾನ್ಯತೆಯಲ್ಲಿ ಅಸಾಮಾನ್ಯತನವ
ಕೈಯಾರೆ ಕಟ್ಟಿ ಹರಸಿದ ಮಹಿಮೆ ನಾಟಕವ..
ಸೋಲಲಿಲ್ಲ ನಿನ್ನ ಕೈಗಳು ಹತ್ತಾರು ಪುಸ್ತಕಗಳ ಕೈಬರವಣಿಗೆಗೆ,
ಆರಲಿಲ್ಲ ದನಿಯು ನೂರಾರು ಹಾಡಿನ ರಚನೆಗಳಿಗೆ..
ದಣಿಯಲಿಲ್ಲ ಕಾಲುಗಳು ಕ್ರಿಸ್ತನ ಆವಿಷ್ಕಾರ ಪಯಣದ ಮೈಲಿಗಳಿಗೆ
ಎಲ್ಲದರಲ್ಲೂ ಕ್ರಿಸ್ತನನ್ನೇ ಉಣ ಬಡಿಸುವ ತೀವ್ರತೆಯಲಿ…
ಕ್ರಿಸ್ತಾನುಭವವ ಧಾರೆಯೆರದ ಅದಮ್ಯ ಅನುಭಾವಿಯೇ
ಸುಜ್ಞಾನ ಸಂಭ್ರಮಿಸಿದ ಕಲಾಗಣಿಯೇ..
ನಿನ್ನ ನೆನೆಯುವುದಕ್ಕೂ ಪಾತ್ರನಲ್ಲವೆಂಬ..
ನಿರ್ಭಾವ ಒಸರಲ್ಲಿ
ನೆನೆಯುತ್ತಿರುವೆ ನಿನ್ನ ಸಾರ್ಥಕ ಬದುಕ
ಸ್ವಲ್ಪವಾದರೂ ಕಲಿಯುವ ಹಂಬಲದಲ್ಲಿ
ಮೌನದಿ ನಿಂತು ನೋಡುತ್ತಿದೇನೆ…

-ಜೋವಿ

Read more!

1 comment:

  1. ಇನ್ನಾಸಪ್ಪನವರನ್ನು ನಾನು ಬಲ್ಲೆ. ಅವರ ಕೆಲಸಗಳು ಅನುಪಮ. ಆದರೂ ಹಾರೋಬೆಲೆಯಂಥ ಕುಗ್ರಾಮದಲ್ಲಿ ಶತಮಾನಕ್ಕೂ ಮುಂಚೆಯೇ ಈ ಕೆಲಸಗಳಲ್ಲಿ ತೊಡಗಲು ಇನ್ನಾಸಪ್ಪನವರಿಗೆ ಪ್ರೇರಣೆ ಅಥವಾ ಸ್ಫೂರ್ತಿಯಾಗಿದ್ದಂಥವರು ಇದ್ದಿರಬೇಕಲ್ಲವೇ?

    ReplyDelete