ಡಿಸೆಂಬರ್ ತಿಂಗಳು ಬರುತ್ತಿದ್ದಂತೆ ವರ್ಶಪೂರ್ತಿ ಮನೆಯ ಮೂಲೆಯಲ್ಲಿ ಮುದುಡಿಕೊಂಡಿದ್ದ ಕಂಬಳಿಗಳು ಅರಳಿಕೊಳ್ಳುತ್ತವೆ. ಚುಮು ಚುಮು ಚಳಿಯ ಜೊತೆಯಲ್ಲೇ ಅನೇಕ ಬೆಚ್ಚನೆಯ ನೆನಪುಗಳೂ ಗರಿಗೆದರುತ್ತವೆ. ಈ ನೆನಪುಗಳಲ್ಲಿ ಕ್ರಿಸ್ ಮಸ್ ಹಬ್ಬದೂ ದೊಡ್ಡ ಪಾತ್ರವೇ. ದೂರದಲೆಲ್ಲೋ ಕೇಳಿ ಬರುವ ಕ್ರಿಸ್ ಮಸ್ ನ ಕ್ಯಾರೋಲ್ ಹಾಡು, ಗಿಜಿ ಗಿಜಿ ರಸ್ತೆಯ ಆಚೆಗೆ ದೀಪಗಳಿಂದ ಕಂಗೊಳಿಸುವ ಯಾವುದೋ ಚರ್ಚ್, ಸ್ವಲ್ಪ ಇಣುಕಿ ನೋಡಿದರೆ ಒಳಗೆ ಕಾಣ ಸಿಗುವ ಅಲಂಕೃತ ಗೋದಲಿ, ಎತ್ತರದಲ್ಲಿ ಕಟ್ಟಿರುವ ತಾರೆ, ಅಂಗಡಿಗಳಲ್ಲಿ ತೂಗಿ ಹಾಕಿರುವ ಬಣ್ಣ ಬಣ್ಣದ ಅಲಂಕಾರದ ವಸ್ತುಗಳು, ಮಳಿಗೆಗಳ ಬಾಗಿಲಲ್ಲಿ ಸ್ವಾಗತ ಮಾಡುತ್ತಿರುವ ಬಿಳಿಯ ಗಡ್ಡಧಾರಿ ಕ್ರಿಸ್ ಮಸ್ ತಾತ, ಇವೆಲ್ಲವೂ ಡಿಸೆಂಬರ ಚಳಿಗೆ ತಳಕುಗೊಂಡ ದೃಶ್ಯಗಳು. ಹಾಗೆ ನೋಡಿದರೆ ಇಡೀ ವಿಶ್ವದಲ್ಲಿ ವಿಶಿಶ್ಟ ರೀತಿಯಲ್ಲಿ ಅಚರಿಸಲಾಗುವ ಕ್ರಿಸ್ಮಸ್ ಸಮಯದಲ್ಲಿ ಒಂದು ಮಾಯಲೋಕವೇ ಸ್ರುಶ್ಟಿಯಾದಂತೆ ಕಾಣಿಸುತ್ತದೆ.ಇತ್ತೀಚೆಗಂತೂ ಆಡಂಬರದ ಪಾಶ್ಚಾತ್ಯ ಶೈಲಿಯೇ ವಿಶ್ವದ ಎಲ್ಲೆಡೆ ಹಬ್ಬುತ್ತಿದೆ. ವ್ಯಾಪಾರೀಕರಣದ ಕದಂಬ ಬಾಹುಗಳು ಕ್ರಿಸ್ಮಸ್ ನ ಆಚರಣೆಯ ಸುತ್ತ ಹಬ್ಬಿಕೊಳ್ಳುತ್ತಿದ್ದರೂ, ಕ್ರಿಸ್ಮಸ್ ನ ನಿಜವಾದ ಆಚರಣೆಗಳು ಬಹಳ ಅರ್ಥಗರ್ಭಿತ. ಕ್ರಿಸ್ಮಸ್ ಸಮಯದಲ್ಲಿ ನೋಡಲು ಸಿಗುವ ಗೋದಲಿ, ನಕ್ಷತ್ರ, ಸ್ಯಾಂಟ ಕ್ಲಾಸ್, ದೇವ ದೂತರುಗಳು ಎಲ್ಲಕ್ಕೂ ತನ್ನದೇ ಅರ್ಥವಿದೆ.
ಕ್ರಿಸ್ಮಸ್ ನ ಹಿನ್ನಲೆಯನ್ನು ತಿಳಿಯಲು ಬೈಬಲ್ ನಲ್ಲಿ ಯೇಸು ಕ್ರಿಸ್ತನ ಜನನದ ಸುತ್ತ ನಡೆಯುವ ಘಟನೆಗಳತ್ತ ಕಣ್ಣಾಡಿಸಿದರೆ, ಅದೊಂದು ಮನಮೋಹಕವಾದ ದ್ರುಶ್ಯ ಕಾವ್ಯದಂತೆ ಕಾಣಿಸುತ್ತದೆ. ದ್ವೇಶ, ಅಶಾಂತಿ, ದೌರ್ಜನ್ಯ, ಅಸಮತೆಯಿಂದ ಬಳಲುತ್ತಿದ್ದ ಜಗತ್ತಿಗೆ ದೇವರು ಯೇಸುವಿನ ರೂಪದಲ್ಲಿ ತಮ್ಮ ಮಗನನ್ನೇ ಕಳುಹಿಸುತ್ತಾರೆ ಎಂಬುದು ತಿರುಳಾದರೂ ದೇವರ ಪುತ್ರ ಸಾಮಾನ್ಯರಲ್ಲಿ ಸಾಮಾನ್ಯನಾಗಿ ಒಂದು ದನಗಳು ವಾಸಿಸುವ ಗೋದಲಿಯಲ್ಲಿ ಜನಿಸಿದ ಎಂಬುದು ದೀನತೆಯ ಪ್ರತೀಕವಾಗಿದೆ. ಇದೇ ದೀನತೆ, ಕ್ಷಮೆ, ಸಹನೆಯ ಸಂದೇಶವನ್ನು ಯೇಸು ಮುಂದೆ ಬೋದಿಸಿದರು ಎಂಬುದಕ್ಕೆ ಈ ಗೋದಲಿ ಮುನ್ನುಡಿಯಾಗುತ್ತದೆ. ಅಂತೆಯೇ ಜನರನ್ನು ರಕ್ಷಿಸುವ ಉದ್ಧಾರಕ ಬಂದಾಗ ಪೂರ್ವ ದಿಕ್ಕಿನಲ್ಲಿ ತಾರೆಯೊಂದು ಕಾಣಿಸುತ್ತದೆ ಎಂಬ ಪ್ರವಾದನೆ ಯೇಸು ಹುಟ್ಟಿದ್ದಾಗ ನಿಜವಾಗುತ್ತದೆ. ಪ್ರಜ್ವಲವಾಗಿ ಹೊಳೆಯುತ್ತಿದ್ದ ಆ ತಾರೆಯೇ ಜನರಿಗೆ ಯೇಸು ಹುಟ್ಟಿದ ಸಂದೇಶವನ್ನು ಸಾರಿದ್ದಲ್ಲದೆ, ಗೋದಲಿಗೆ ದಾರಿಯನ್ನೂ ತೋರಿಸಿತು ಎನ್ನುತ್ತದೆ ಬೈಬಲ್. ಇದೇ ಸಂಕೇತವಾಗಿ ಇಂದಿಗೂ ಕ್ರಿಸ್ಮಸ್ ಸಮಯದಲ್ಲಿ ಬಣ್ಣ ಬಣ್ಣದ ತಾರೆಗಳು ಕ್ರೈಸ್ತರ ಮನೆಗಳ ಮೇಲೆ ರಾರಾಜಿಸುತ್ತವೆ. ಯೇಸು ಹುಟ್ಟಿದ ಸಂತೋಷದ ವಾರ್ತೆಯನ್ನು ಆ ಸಮಯದಲ್ಲಿ ದೇವ ದೂತರುಗಳು ಆಕಾಶದಲ್ಲಿ ಹಾಡುಗಳ ಮೂಲಕ ಎಲ್ಲೆಡೆ ಸಾರಿದರರು ಎನ್ನುವುದರ ಸಂಕೇತವಾಗಿ ಮನೆ ಮನೆಗೆ ಹೋಗಿ ಕ್ರಿಸ್ಮಸ್ ಹಾಡುಗಳನ್ನು ಹಾಡುವ ಸಂಪ್ರದಾಯ ಇಂದಿಗೂ ಮುಂದುವರಿದಿದೆ. ಇಷ್ಟೆಲ್ಲದರ ನಡುವೆಯೇ ಜೀವನದುದ್ದಕ್ಕೂ ಶಾಂತಿ, ಪ್ರೀತಿ, ಸಹನೆ, ಕ್ಷಮೆಯ ಸಂದೇಶವನ್ನು ತನ್ನ ನಡೆ ನುಡಿಯಿಂದ ಬೋಧಿಸಿದ ಯೇಸು ಕ್ರಿಸ್ತನನ್ನು ಕಂದನಾಗಿ, ಮನೆಯ ಮಗುವಾಗಿ, ಅನಂದ ತರುವ ಬಂದುವಾಗಿ, ಕತ್ತಲನನ್ನು ಹೋಗಲಾಡಿಸುವ ದಿವ್ಯ ಬೆಳಕ್ಕಾಗಿ ನೆನಪಿಸಿಕೊಳ್ಳುವ ಸುಸಮಯ ಈ ಕ್ರಿಸ್ಮಸ್.


ಹೀಗೆ ಇಡೀ ವಿಶ್ವವೇ ಜಾತಿ ಮತಗಳ ಬೇಧವಿಲ್ಲದೆ ಆಚರಿಸುವ ಕ್ರಿಸ್ಮಸ್ ನ ಹಬ್ಬದ ತಿರುಳಿರುವುದು ಶಾಂತಿ ಪ್ರೀತಿ ಹಾಗೂ ದೀನತೆಯ ಸಂದೇಶದಲ್ಲೇ. ಇದೇ ಶಾಂತಿ ಪ್ರೀತಿ ಸಹನೆ ದೀನತೆ ನಮ್ಮ ಪ್ರತಿ ದಿನವನ್ನೂ ಹಬ್ಬವಾಗಿ ಮಾರ್ಪಡಿಸಲಿ, ಯೇಸುವಿನ ಸಂದೇಶಗಳು ನಮ್ಮ ಮನಸ್ಸೆಂಬ ಗೋದಲಿಯಲ್ಲಿ ಸದಾ ನೆಲೆಗೊಳ್ಳಲ್ಲಿ ಎನ್ನುವುದರಲ್ಲಿದೆ ಕ್ರಿಸ್ಮಸ್ ನ ಸಾರ್ಥಕತೆ.
-ಪ್ರಶಾಂತ್ ಇಗ್ನೇಷಿಯಸ್
No comments:
Post a Comment