ಮಳೆ ನಿಂತರೂ ಹನಿ ಜಾರಿಯಲ್ಲಿರುವಂತೆ ಗಣೇಶ್ ಚಿತ್ರವೆಂದ ಮೇಲೆ ಮುಂಗಾರು ಮಳೆಯ ಹಾಡುಗಳ ನೆನಪಿಗೆ ಕೊನೆಯಿಲ್ಲ. ಅದರಿಂದಲೇ ಸಹಜವಾಗಿ ಗಣೇಶ್ ಚಿತ್ರಗಳ ಹಾಡುಗಳ ಬಗ್ಗೆ ಒಂದು ಕುತೂಹಲ ಜಾರಿಯಲ್ಲಿ ಇದ್ದೇ ಇರುತ್ತದೆ. ಅದೇ ಕುತೂಹಲದಿಂದ ಹರಿಕೃಷ್ಣ ಸಂಗೀತ ನಿರ್ದೇಶನದ, ಮಂಜು ಸ್ವ್ರರಾಜ್ ರ ಶ್ರಾವಣಿ ಸುಬ್ರಮಣ್ಯ ಚಿತ್ರದ ಹಾಡುಗಳನ್ನು ಕೇಳಿದಾಗ ನಿರಾಸೆ ಆಗವುದಿಲ್ಲ. ಆದರೂ ಹರಿ ಸಂಗೀತ ನಿರ್ದೇಶನದ ಹಾಡುಗಳಲ್ಲಿನ ಲವಲವಿಕೆ ಹಾಗೂ ಹೊಸತನ ಇಲ್ಲಿ ಸ್ವಲ್ಪ ಮಟ್ಟಿಗೆ ಕಾಣೆಯಾಗಿದೆ ಎಂದೇ ಹೇಳಬಹುದು. ಇತ್ತೀಚಿನ ಚಿತ್ರಗಳಲ್ಲಿನ ಸಿದ್ಧ ಸೂತ್ರದಲ್ಲೇ ಹಾಡುಗಳು ಮೂಡಿ ಬಂದಿದೆ ಎಂದರೆ ತಪ್ಪಾಗಲಾರದು. ಹಾಗಾದರೆ ಹೇಗಿದೆ ಹಾಡುಗಳು?

ನಿನ್ನ ನೋಡೋ : ಕನ್ನಡ ಸಿನಿಮಾ ಸಂಗೀತದಲ್ಲಿ made for each other ಎಂಬಂತೆ ಆಗಿ ಹೋಗಿರುವ ಸೋನು, ಹರಿ, ಗಣೇಶ್ ರ ಕಾಂಬಿನೇಶನಿನ್ನ ಮತ್ತೊಂದು ಗೀತೆ. ಕವಿರಾಜರ ಸಾಹಿತ್ಯವಿರುವ ಗೀತೆ ಕೇಳಲು ಮಧುರವಾಗಿದೆ ಎಂಬುದಕ್ಕಿಂತ ಹೆಚ್ಚೇನು ಹೇಳಲು ಸಾಧ್ಯವಿಲ್ಲವೇನೋ. ಈ ರೀತಿಯ ಹಾಡುಗಳಲ್ಲಿ ಪಳಗಿ ಹೋಗಿರುವ ಸೋನು ಹೆಚ್ಚಿನ ಶ್ರಮವಿಲ್ಲದೆ ಹಾಡಿದ್ದಾರೆ.
ನಗುವ ಮೊಗವ : ಹರಿಕೃಷ್ಣರ ಗೀತೆಗಳಲ್ಲಿನ ಜೀವಂತಿಕೆ ಈ ಗೀತೆಯಲ್ಲಿ ಕಾಣುತ್ತದೆ. ಕವಿರಾಜ್ ರ ಸಾಹಿತ್ಯಕ್ಕೆ ಧ್ವನಿಗೂಡಿಸಿರುವ ಸೋನು ಹಾಗೂ ನಂದಿತಾ ಹಾಡಿಗೆ ಮತ್ತಷ್ಟು ಜೀವ ತುಂಬಿದ್ದಾರೆ. ಉತ್ತಮವಾದ ವಾದ್ಯ ಸಂಯೋಜನೆ ಹಾಗೂ ಉತ್ತಮ ಗಾಯನವಿರುವ ಈ ಹಾಡನ್ನು ಕೇಳುತ್ತಿದ್ದರೆ ಎಲ್ಲೋ ಮೊದಲೇ ಕೇಳಿದಂತೆ ಅನಿಸಿದರೂ ಎಲ್ಲಿ ಎಂದು ತಟ್ಟನೆ ಗೊತ್ತಾಗದಿರುವುದೇ ಈ ಹಾಡಿನ ಹೆಗ್ಗಳಿಕೆ.
ಕಣ್ಣಲ್ಲೇ ಕಣ್ಣಿಟ್ಟು : ನಾಯಕ ನಾಯಕಿಯ ಪ್ರೇಮದ ಪರಿಯನ್ನು ವಿವರಿಸುವ ಹಾಡಿಗೆ ಶಾನ್ ಕಂಠವನ್ನು ಉತ್ತಮವಾಗಿ ಬಳಸಿಕೊಳ್ಳಲಾಗಿದೆ. ಡಾ.ನಾಗೆಂದ್ರ ಪ್ರಸಾದ್ ರಿಗೆ ಈ ರೀತಿಯ ಹಾಡಿನ ಸಾಹಿತ್ಯ ಕರತಲಾಮಲಕ. ಯುವಕ ಯುವತಿಯರಿಗೆ ಹೆಚ್ಚು ಪ್ರಿಯವಾಗಬಹುದಾದ ಗೀತೆ. ಚಿತ್ರದ ಕತೆಗೆ ಪೂರವಾಗಿರುವಂತಿದೆ ಈ ಹಾಡು.
-ಪ್ರಶಾಂತ್ ಇಗ್ನೇಷಿಯಸ್
-ಪ್ರಶಾಂತ್ ಇಗ್ನೇಷಿಯಸ್
No comments:
Post a Comment