Saturday 30 November 2013

ರಕ್ಕಸ ರಸ್ತೆಗಳು

ಸ್ತೆಗಳು ನಗರಗಳ ನರನಾಡಿಯಾಗಿರುತ್ತವೆ ಎಂದು ನಂಬಿದ್ದೇವೆ. ಉತ್ತಮ ರಸ್ತೆಗಳು ಅಭಿವೃದ್ಧಿಯ ಅಳೆತೆಗೋಲು. ರಸ್ತೆಗಳ ನಿರ್ವಹಣೆಯಲ್ಲಿ ಸ್ಥಳಿಯ ಸಂಸ್ಥೆಗಳು ಹೆಚ್ಚು ಕಾರ್ಯೊನ್ಮುಖವಾಗಿರಬೇಕು. ಅದರಲ್ಲೂ ದಿನೇ ದಿನೇ ತನ್ನ ಒಡಲನ್ನು ಉಬ್ಬಿಸಿಕೊಳ್ಳೂತ್ತಿರುವ ಬೆಂಗಳೂರು ಒಂದು ಕೋಟಿ ಜನಸಂಖ್ಯೆಯನ್ನು, ೪೫ ಲಕ್ಷ ವಾಹನಗಳನ್ನು ತನ್ನ ಉದರದಲ್ಲಿಟ್ಟುಕೊಂಡು ತೂಕಹೆಚ್ಚಿಸಿಕೊಳ್ಳುತಿದೆ. ಎನಿಲ್ಲವೆಂದರೂ ಪ್ರತಿದಿನ ೭೦೦ ಹೊಸ ವಾಹನಗಳ ನೊಂದಣಿಯಾಗುತಿದೆಯಂತೆ. ವ್ಯಕ್ತಿ ಮತ್ತು ವಾಹನಗಳ ಅನುಪಾತ ಗಮನಿಸಿದರೆ ಪ್ರತಿ ಇಬ್ಬರಿಗೆ ಒಂದು ವಾಹನ. ಅದು ದೆಹಲಿಯಲ್ಲಿ : ರಂತಿದೆ. ಬೆಂಗಳೂರಿನ ವಾಹನಗಳು ದೆಹಲಿಗಿಂತ ಎರಡುಪಟ್ಟು ವೇಗವಾಗಿ ರಸ್ತೆಯನ್ನು ಅಕ್ರಮಿಸಿಕೊಳ್ಳುತ್ತಿರುವುದ್ದನ್ನು ಇಲ್ಲಿ ಗಮನಿಸಬಹುದು. ಇಂತಹ ಸಂದರ್ಭದಲ್ಲಿ ರಸ್ತೆಗಳ ನಿರ್ವಹಣೆಗೆಂದೆ ಪ್ರತ್ಯೇಕ ಕಾರ್ಪರೇಶನ್ ಬೇಕಾದೀತು. ಅಂತಹುದರಲಿ ಇರುವ ಏಕೈಕ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅನ್ನೋ ನೀರಾನೆ  ಬಿದ್ದಲ್ಲೆ ಬೃಹದಾಕಾರವಾಗಿ ಗೊರಕೆ ಹೊಡೆದುಕೊಂಡು ಬಿದ್ದಿದೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ರಸ್ತೆಗಳಿಗೆ ಯಾವ ಸಂಸ್ಕಾರ, ಹಬ್ಬ ಹರಿದಿನಗಳು ಆಗಿಲ್ಲ. ಹೊಸ ಬಟ್ಟೆಗಳಿರಲಿ, ಹರಿದ ಹಳೆಬಟ್ಟೆಗೆ ತ್ಯಾಪೆ ಹಾಕುವ ಕೆಲಸವು ನಡೆಯಲಿಲ್ಲ. ಅಗಿದ್ದ ಸಣ್ಣ ಪುಟ್ಟ ಗಾಯಗಳು ಕೊಳೆತು ಕುಷ್ಟರೋಗಿಯಂತಾಗಿವೆ. ನೋಡಲಂತೂ ಇನ್ನಿಲದ ಹೇಸಿಗೆ ವಕ್ಕರಿಸಿ ಬರುತ್ತದೆ. ಮೊದಲೆ ಬೆಂಗಳೂರಿಗೆ ಟ್ರಾಫಿಕ್ ಜಾಮ್ ನಂತಹ ಉಬ್ಬಸ ರೋಗವಿದೆ. ಸಾಗದ ರಸ್ತೆಯಲ್ಲಿ ವಾಹನಗಳನ್ನು ಜಗ್ಗಿಸಿ ಜಗ್ಗಿಸಿ ತಳ್ಳುತ್ತಿರಬೇಕು. ರಸ್ತೆಗಳು ರಕ್ಕಸನ ಹಲ್ಲುಗಳಂತೆ ಜಲ್ಲಿಕಲ್ಲುಗಳನ್ನು ಹೊರಚಾಚಿ ಅರಚುತ್ತಿದ್ದರೆ ಪ್ರಯಾಣ ಅಸಹನೀಯ.
ಓಪನ್ ಗಂಗ್ನಂ ಸ್ಟೈಲ್ ಹಾಡು ಕೇಳಿರಬೇಕಲ್ಲವೇ?.. ಪ್ರಪಂಚದಾದ್ಯಂತ ಹಾಡು ಸೃಷ್ಟಿಸಿದ ಹುಚ್ಚು ಹೇಳತೀರದು. ದಕ್ಷಿಣ ಕೊರಿಯದ ಒಬ್ಬ ಪಾಪ್ ಸಂಗಿತಗಾರ ರಚಿಸಿ ಹಾಡಿದ ಕೊರಿಯನ್ ಗೀತೆಗೆ ಆತನೆ ನೃತ್ಯ ಮಾಡಿದ್ದಾನೆ, ಒಂದು ವಿಚಿತ್ರ ಭಂಗಿಯ ನೃತ್ಯವಿದು. ಗಂಗ್ನಂ ಹಾಡಿಗೆ ಹಾಕಿದ ಹೆಜ್ಜೆಗಳು ಎಬ್ಬಿಸಿದ ಧೂಳು ಇಡಿ ಪ್ರಪಂಚವನ್ನೆ ಆವರಿಸಿತು. ಅಚ್ಚರಿಯೆಂದರೆ ಒಬ್ಬ ಸಾಮಾನ್ಯನು ಕುಣಿದುಬಿಡಬಲ್ಲ ಕುಣಿತಕ್ಕೆ ಸಿಕ್ಕ ಮಾನ್ಯತೆ ಉಬ್ಬೆರಿಸುವಂತಹದ್ದೆ!. ಗಂಗ್ನಂ ಸ್ಟೈಲ್ ಹೆಸರಿನಿಂದಲೆ ನೃತ್ಯ ಜಗತಿನಾದ್ಯಂತ ಸದ್ದು ಮಾಡಿತು. ಆ ನೃತ್ಯ ಹೇಗಿದೆ ಎಂದರೆ, ಬೆಂಗಳೂರಿನ ಅದಗೆಟ್ಟ ರಸ್ತೆಗಳಲ್ಲಿ ಓಡಾಡುವ ಬಸ್ಸು, ಆಟೊಗಳಲ್ಲಿ ಕುಳಿತವರು ಕುಳಿತಲ್ಲೆ  ಕುಲುಕುವಂತಿದೆ ಗಂಗ್ನಂ ಸ್ಟೈಲ್.
ಇತ್ತಿಚಿನಲ್ಲಾದ ಮಳೆಗೆ ತತ್ತರಿಸಿ ಹೋಗಿವೆ ನಮ್ಮ ರಸ್ತೆಗಳು. ಮೊದಲೆ ಅದಗೆಟ್ಟಿದ್ದ ರಸ್ತೆಗಳು ಮಳೆಯಿಂದ ಹಳ್ಳಕೊಳ್ಳದಂತಾಗಿವೆ. ಆನೇಕ ಕಡೆ ಕೇದರನಾಥನ ಕಾಶಿಯಲ್ಲಾದ್ದಂತೆ ಕಲ್ಲು ಮರಳಿನ ರಾಶಿ. ರಸ್ತೆಯ ಮೇಲೆ ಓಡಾಡುವ ಬೆಂಗಳೂರಿಗರು ಬೆಂಡಾಗಿ ಹೋಗಿದ್ದಾರೆ. ಆನೇಕ ಬಾರಿ ವಾಹನಗಳಲ್ಲಿ ಪ್ರಯಣಿಸುವುದಕ್ಕಿಂತ ನಡೆದುಕೊಂಡೆ ಹೋಗೊಣ ಎಂದೆಣಿಸುವುದುಂಟು. ಆದರೆ ನಡೆಯುವವನ ಪಡಿಪಾಟಿಲು ಅದಕ್ಕಿಂತ ಭಿನ್ನವಾಗಿಯೇನು ಇಲ್ಲ. ಸಾರ್ವಜನಿಕವಾಗಿ ಉಳಿದಿರುವ ಏಕೈಕ ಆಸ್ತಿ ಪಾದಚಾರಿ ರಸ್ತೆಗಳು. ಅವು ಸಹ ಪಾನಿಪುರಿಯವನ, ಬೀಡಾ ಸ್ಟಾಲಿನ, ಗ್ಯಾರೆಜ್ ಗ್ರೀಸಿನ, ತರಕಾರಿ ಜಯಮ್ಮನ ಜಾಗವಾಗಿ ಬಿಟ್ಟಿದೆ. ಸಣ್ಣಪುಟ್ಟ ಅಂಗಡಿಗಳು ತನ್ನ ದುರಾಸೆಗೆ ನಾಲಿಗೆಯನ್ನು ಚಾಚಿ ರಸ್ತೆಗ್ಗೇ ಬಂದು ಕುಂತಿವೆ. ಹೀಗಾಗಿ ವಾಹನಗಳು, ಪಾದಚಾರಿಗಳು, ಒಟ್ಟೊಟ್ಟಿಗೆ ತೂರುವಂತಾಗಿದೆ. ಕೆಲವೆಡೆ  ಮಾನವನಿರ್ಮಿತ ಮುಗ್ಧ ದೇವರುಗಳು ಟ್ರಾಫಿಕ್ ಚೌಕಿ(ಐಲ್ಯಾಂಡ್)ನಂತೆ ರಸ್ತೆನಡುವಲ್ಲಿಯೆ ಚಕ್ಕಳಬಕ್ಕಳ ಹಾಕಿ ಕೂತುಬಿಟ್ಟಿದ್ದಾರೆ. ಅವರನ್ನು ಎಬ್ಬಿಸಿ ಕಳಿಸುವ ಧೈರ್ಯ ಮಾತ್ರ ಸರ್ಕಾರಕ್ಕೆ ಇಲ್ಲ
ಇಷ್ಟೆಲ್ಲ ದುಸ್ತರದ ನಡುವೆ, ಆಗಾಗ ಏರ್ಪಡುವ ವಿದೇಶ ಪ್ರವಾಸಗಳಿಂದಾಗಿ ಚೀನಾ, ಸಿಂಗಾಪು, ನ್ಯೂಯರ್ಕ್ ಸಿಟಿಗಳನ್ನು ಕಣ್ತುಂಬಿಕೊಂಡು ಬಂದು, ಅಲ್ಲಿನ ವ್ಯವಸ್ಥಿತ ಮೂಲಸೌಕರ್ಯಗಳಿಗೆ ಪ್ರಭಾವಿತರಾಗಿ ನಮ್ಮ ಪುರವನ್ನು ಸಿಂಗಾಪು, ಶಾಂಘೈ ಸಿಟಿಯನ್ನಾಗಿ ಮಾಡುತ್ತೇವೆ ಎಂದು ಅಬ್ಬರಿಸುವ ರಾಜಕಾರಣಿಗಳು, ಹೊಸದರಲ್ಲಿ ಕಿಸಿದು ಕಿಸಿದು ಒಗೆದ ಅಗಸನಂತೆ ಕಾಣುತ್ತಾನೆ. ಸಿಂಗಾಪು, ಚೀನಾವನ್ನು ಕಂಡುಬಂದ ಅವರೆಲ್ಲ ತಂತಮ್ಮ ಚೀಲ ತುಂಬಿಸಿಕೊಂಡು ಹೋದರೆ ಹೊರತು ಮತ್ತೆನು ಆಗಲಿಲ್ಲ. ಗುಂಡಿ ಬಿದ್ದ ರಸ್ತೆಗಳನ್ನು ಮುಚ್ಚಲಿಕ್ಕೆ ಚೀನಾದಿಂದ ಮಣ್ಣುರಬೇಕು? ಶಾಂಘೈ ಇರಲಿ ಮೊದಲು ಇದ್ದ ರಸ್ತೆಗಳನ್ನು ಸರಿಮಾಡಿಕೊಡಿ  ಸಾಕು ಎನ್ನುತ್ತಿದ್ದಾರೆ ಹತಾಶ ಜನತೆ.
ಪ್ರಜಾಪ್ರಭುತ್ವದಲ್ಲಿ ಪ್ರಜೆಗಳನ್ನೆ ದೇವರು ಎಂದು ಪೂಜಿಸುವ ರಾಜಕಾರಣಿಗಳು ಚುನಾವಣ ಸಮಯದಲ್ಲಿ ಮಾತ್ರ ಒಂದಷ್ಟು ರಸ್ತೆಗಳಲ್ಲಿ ಕಾಣಿಸಿಕೊಳ್ಳುತ್ತಾರೆ ಮತ್ತು ಒಂದಷ್ಟು ರಸ್ತೆ ರಿಪೇರಿಯನ್ನು ಮಾಡಿಸುತಾರೆ. ದು ಬಿಟ್ಟರೆ ಮತ್ತದೆ ಚುಣಾವಣೆಯವರೆಗೂ ಉಣ್ಣಾದ ರಸ್ತೆಗಳ ಮೇಲೆ ಓಡಾಡಿ ಹಣ್ಣಾಗುವುದೆ ನಮ್ಮ ಗತಿ. ಕೆಲವೇ ದಿನಗಳ ಹಿಂದೆ ಕಸದ ಧೂರ್ತವಾಸನೆಯಿಂದಾಗಿ ನಮ್ಮ ಮಹಾನಗರದ ಉಸಿರು ಕಟ್ಟಿತ್ತು. ಕಸದ ವಿಲೇವಾರಿಯನ್ನು ಸಮರ್ಪಕ ರೀತಿಯಲ್ಲಿ ನಿರ್ವಹಿಸದ ಬಿಬಿಎಂಪಿಗೆ ಕೊರ್ಟ್ ಚಿಮಾರಿಹಾಕಿದ್ದು ಇನ್ನು ಮಾಸಿಲ್ಲ. ಇದೀಗ ಮಳೆಯಿಂದ ರಸ್ತೆಗಳು ಪೊರೆ ಬಿಟ್ಟು ವಿಲಕ್ಷಣ ರೂಪ ಪಡೆದಿವೆ. ಅಲಲ್ಲಿ ಚರಂಡಿ ಕಾಲುವೆಗಳು ಪಾಟ್ ಹೊಲ್ ಗಳು ಒಡೆದುಹೋಗಿ ಕೆಟ್ಟನೀರು ಹೊರಹರಿಯುತಿದೆ. ಕುಡಿಯುವ ನೀರಿನ ನಿರ್ವಹಣೆಯು ಅಷ್ಟಕಷ್ಟೆ. ಹೀಗಿರುವಾಗ ಸರ್ಕಾರಕ್ಕೆ ದೊಡ್ಡಮಟ್ಟದ ಅದಾಯ ದಕ್ಕಿಸಿಕೊಡುತ್ತಿರುವ ಮಹಾನಗರಕ್ಕೆ ಅಗತ್ಯತೆಗನುಗುಣವಾಗಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡಬೇಕೆಂಬ ಸ್ವಾಸ್ಥ್ಯ ನಮ್ಮ ಪ್ರತಿನಿಧಿಗಳಿಗಿಲ್ಲವಾಯಿತೆ?. ಇದು ಪಾಲಿಕೆಯ ಅದಕ್ಷತೆಯ ಪರಮಾವಧಿ ಎನಿಸುತ್ತಿಲ್ಲವೆ? ಹೌದೆನ್ನಿಸುವುದಾದರೆ ಕಾರ್ಯವೈಖರಿಯನ್ನು, ಅವರ ಬದ್ಧತೆಯನ್ನು ಪ್ರಶ್ನಿಸಬೇಕಾದುದು ಎಲ್ಲ ನಾಗರಿಕರ ಜವಾಬ್ಧಾರಿ.
ಚುಣಾವಣೆಯಲ್ಲಿ ಮತಹಾಕಿ ಆರಿಸಿ ಕಳುಹಿಸಿದರೆ ಜವಾಬ್ಧಾರಿ ಕಳೆಯುವುದಿಲ್ಲ. ನಮ್ಮ ಅಗತ್ಯತೆಗಳನ್ನು ಪಡೆದುಕೊಳುವ ಹಕ್ಕು ಸಹ ನಮ್ಮದೇ. ಪ್ರಜ್ನಾವಂತ ನಾಗರೀಕರು ಮನಸ್ಸಿನಲ್ಲೆ ಮಡುಗಟ್ಟಿದ ಅಸಹನೆಯನ್ನು ಹೊರಹಾಕಬೇಕಿದೆ. ಕನಿಷ್ಟ ಪಕ್ಷ ನಮ್ಮ ವಾಸಸ್ಥಳದ ಸುತ್ತಮುತ್ತ ಆಗಿರುವ ನ್ಯೂನತೆಯನ್ನು ಪಾಲಿಕೆ ಸಿಬ್ಬಂದಿಗಳಿಗೆ ಕರೆ ಮಾಡಿ ಮನವರಿಕೆ ಮಾಡಿಕೊಡಬೇಕಾಗಿದೆ. ಮೌನ ಮುರಿದು ಸಂಭಂದಪಟ್ಟ ಅಧಿಕಾರಿಗಳಿಗೆ ಅಥವ ವಾರ್ಡ್ ನ ಪ್ರತಿನಿಧಿಗೆ ತಿಳಿಸಬೇಕಾಗಿದೆ. ಒಂದೆರಡುಬಾರಿ ಸಾಲದು ಏಕೆಂದರೆ ಅದು ಅವರಿಗೆ ತಾಕದು. ಪದೇ ಪದೇ ಕರೆ ಮಾಡಿ ಒತ್ತಡ ಹೇರುವ ತಂತ್ರವಾಗಬೇಕು. ಇದೊಂದು ರೀತಿ ಒತ್ತಡ ಆಂದೋಲನವಾಗಲಿ. ಬಿಬಿಎಂಪಿಯ ಟೊಲ್ ಫ್ರೀ  ದೂರವಾಣಿ ಸಂಖ್ಯೆ 22660000 ನಿಮ್ಮ ಕಾಂಟ್ಯಾಟ್ ಪಟ್ಟಿಯಲ್ಲಿರಲಿ ಮತ್ತು ಆಗಾಗೆ ಕರೆಗಳು ಹೋಗುತ್ತಿರಲಿ. ನಿಮ್ಮ ನಿಮ್ಮ ಹಕ್ಕನ್ನು ಪಡೆಯುವುದು ನಿಮ್ಮ ಕರ್ತವ್ಯವೆಂದು ಭಾವಿಸಿರಿ.
  
-ಸಂತೋಷ್ ಇಗ್ನೇಷಿಯಸ್
 
 

1 comment: