ಇಂದಿಗೂ ಗೆಳೆಯ ಚಿತ್ರದ ’ಈ ಸಂಜೆ ಯಾಕಾಗಿದೆ’ಯಾಗಲಿ ಬಿರುಗಾಳಿ ಚಿತ್ರದ ’ಮಧುರ ಪಿಸು ಮಾತಿಗೆ’ ಹಾಡು ಟಿ.ವಿಯಲ್ಲಿ ಬರುತ್ತಿದ್ದರೆ ಚ್ಯಾನಲ್ ಬದಲಸಲು ಮನಸಾಗುವುದಿಲ್ಲ. ಆ ಹಾಡುಗಳನ್ನುಹರ್ಷ ಚಿತ್ರಿಸಿರುವ ಗುಂಗಿನಿಂದ ಕನ್ನಡ ಪ್ರೇಕ್ಷಕ ಇನ್ನೂ ಹೊರಗೆ ಬಂದಿಲ್ಲ. ಅಂತಹ ಹರ್ಷರ ನಿರ್ದೇಶನದಲ್ಲಿ, ನೃತ್ಯ ಸಂಯೋಜನೆಯಲ್ಲಿ ಭಜರಂಗಿ ಬರುತ್ತಿದೆ. ಇಂದಿಗೂ ಹೆಜ್ಜೆ ಹಾಕುವುದರಲ್ಲಿ, ಲವಲವಿಕೆಯಲ್ಲಿ ಒಂದು ಕೈ(ಕಾಲೂ) ಮುಂದೇ ಇರುವ ಶಿವಣ್ಣ, ಕಿಕ್ ಕೊಡುವ ಗೀತೆಗಳನ್ನು ನೀಡುತ್ತಾ ಸಂಗೀತ ಪ್ರೇಮಿಗಳನ್ನು ವಾಲಾಡಿಸುತ್ತಿರುವ ಅರ್ಜುನ ಜನ್ಯರ ಸಂಗೀತ, ಹರ್ಷರ ಸಾರಥ್ಯವಿರುವ ಚಿತ್ರ ಎಂದರೆ ಆ ಚಿತ್ರದ ಬಗ್ಗೆ ನಿರೀಕ್ಷೆ ಇಲ್ಲದೆ ಇರುತ್ತದೆಯೇ? ’ಭಜರಂಗಿ’ ಭರ್ಜರಿಯಾಗಿಯೇ ಸದ್ದು ಮಾಡುತ್ತಿದೆ. ಕನ್ನಡದ ಅಗ್ರಗಣ್ಯ ಸಂಗೀತ ನಿರ್ದೇಶಕರಲ್ಲಿ ಒಬ್ಬರಾಗುವತ್ತ ನಿಧಾನವಾಗಿ ಹೆಜ್ಜೆ ಇಡುತ್ತಿದ್ದ ಅರ್ಜುನ ಜನ್ಯ, ಈ ಚಿತ್ರದಿಂದ ಆ ದಿಕ್ಕಿನೆಡೆ ಬಲವಾದ ಹೆಜ್ಜೆ ಇಟ್ಟಿದ್ದಾರೆ ಎಂದೆನಿಸುತ್ತದೆ. ಇತ್ತೀಚೆಗೆ ತಾನೇ ಬಿಡುಗಡೆಯಾದ ಹಾಡುಗಳು ಹೇಗಿವೆ ನೋಡೋಣವೇ?
ಬಾಸು ನಮ್ಮ ಬಾಸು : ಅರ್ಜುನ್ ಜನ್ಯ ಸ್ವತ: ತಾವೇ ಹಾಡಿರುವ ಈ ಗೀತೆ ಇಂದಿನ ಚಿತ್ರಗಳಲ್ಲಿ ಸಾಮಾನ್ಯವಾಗಿ ಕಾಣ ಬರುವ ನಾಯಕನ ಗುಣಗಾನದ ರೀತಿಯ ಗೀತೆ. ’ಇವ್ರು ಹೊಡೆದ್ಬುಟ್ರೆ ಒಂದೇಟು, ಬಿದ್ದಂಗೆ ಬುಲ್ಲೆಟ್ಟು, ಇವ್ರು ಸ್ಟೆಪ್ ಹಾಕಿದ್ ಮೇಲೇನೆ, ಹುಟ್ಟ್ ಕೊಂಡ್ತು ಎರೆಡೇಟು’ ಎಂಬಂತ ಸಾಲುಗಳು ಚೇತನ್ ಚಂದನ್ ಹಾಗೂ ಮೋಹನ್ ಸಾಹಿತ್ಯ ಒದಗಿಸಿರುವ ಈ ಹಾಡಿನ ತುಂಬ ದಂಡಿಯಾಗಿ ಸಿಗುತ್ತದೆ.ಅರ್ಜುನ್ ಜನ್ಯರ ಸಂಗೀತದಲ್ಲಿ ಲವಲವಿಕೆ ಇದ್ದೂ, ತೆರೆಯ ಮೇಲೆ ಅಭಿಮಾನಿಗಳಿಗೆ ಫುಲ್ ಮೀಲ್ಸ್ ನೀಡಬಹುದೆಂಬ ಭರವಸೆ ನೀಡುತ್ತದೆ. ಕೇಳಿದೊಡನೆ ಕೈ ಕಾಲುಗಳು ತಾವೇ ತಾಳ ಹಾಕುವ
ಹಾಡುಗಳ ಸಾಲಿಗೆ ಸೇರುವ ವೇಗದ ಧಾಟಿಯ ಹಾಡು.

ಶ್ರೀ ಕೃಷ್ಣ : ಇತ್ತೀಚಿನ ಚಿತ್ರಗಳಲ್ಲಿ ಒಂದು ಪರಿಪೂರ್ಣ ಭಕ್ತಿ ಗೀತೆ ಕೇಳಿ ತುಂಬಾ ಸಮಯವೇ ಆಗಿತ್ತು ಎಂಬ ಕೊರತೆಯನ್ನು ನೀಗಿಸುವಂತ ಗೀತೆ. ಇಂತಹ ಗೀತೆಗಳನ್ನು ಚಂದವಾಗಿ ಹಾಡುವ ಅನುರಾಧ ಭಟ್ಟರ ಕಂಠ ಸಿರಿಯಲ್ಲಿ ಮೂಡಿರುವ ಗೀತೆ ತನ್ನ ವಿಭಿನ್ನತೆಯಿಂದ ಇಷ್ಟವಾಗುತ್ತದೆ. ಅರ್ಜುನ್ ಜನ್ಯ ಈ ಗೀತೆಯ ಮೂಲಕ ಅಚ್ಚರಿ ಮೂಡಿಸುತ್ತಾರೆ. ನಾಗೇಂದ್ರ ಪ್ರಸಾದರಿಗೆ ಈ ರೀತಿಯ ಗೀತಾಸಾಹಿತ್ಯ ಕಷ್ಟವೇನಲ್ಲ. ಸಾಹಿತ್ಯ ನವಿರಾಗಿ, ಉತ್ತಮವಾಗಿದೆ.
ಜಿಯಾ ತೇರಿ : ಜಯಂತ್ ಕಾಯ್ಕಿಣಿಯವರ ಸಾಹಿತ್ಯವಿರುವ ಗೀತೆಯಲ್ಲಿ ಹಿಂದಿ ಹೇಗೆ ನುಸುಳಿತು ಎನ್ನುವ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಮೊದಲೇ ಹಾಡು ಇಷ್ಟವಾಗುತ್ತದೆ. ನಿಸ್ಸಂದೇಹವಾಗಿ ಚಿತ್ರದ ಅತ್ತ್ಯುತ್ತಮ ಗೀತೆ. ’ನೋಟದ ಬಾಣವು ನಾಟಿದೆ ಆಗಲೇ’ ಎಂಬ ಹಾಡಿನ ಸಾಲಿನಂತೆ ಸಂಗೀತ, ಕಾರ್ತಿಕರ ಗಾಯನ, ಕಾಯ್ಕಿಣಿಯವರ ಸಾಹಿತ್ಯ ಎಲ್ಲವೂ ಮನಸೂರೆಗೊಂಡು ಮನಸ್ಸಿಗೆ ನಾಟಿ ಕೊಳ್ಳುತ್ತದೆ. ಮೊದಲೇ ಕೇಳಿದಂತೆ ಎನಿಸಿದರೂ ಅದ್ಭುತವಾದ ವಾದ್ಯ ಸಂಯೋಜನೆ ಈ ಗೀತೆಗಿದೆ. ಕೋರಸ್ ಸಹ ಮನ ಗೆಲ್ಲುತ್ತದೆ. ಮನಮೋಹಕ ಗೀತೆ.
ಭಜರಂಗಿ ರೇ : ಕಲ್ಯಾಣ್ ರ ಸಾಹಿತ್ಯದ ಈ ಗೀತೆಗೆ ಕೈಲಾಶ್ ಖೈರ್ ರ ಕಂಠದ ಮಾಂತ್ರಿಕ ಸ್ಪರ್ಷ ದೊರಕಿದೆ. ಕೈಲಾಶ್ ಇದನ್ನು ಅದೆಷ್ಟು ಸೊಗಸಾಗಿ ಹಾಡಿದ್ದಾರೆಂದರೆ ಉತ್ತಮವಾದ ವಾದ್ಯ ಸಂಯೋಜನೆ, ಸಂಗೀತ, ಸಾಹಿತ್ಯವೆಲ್ಲವೂ ತೆರೆಮರೆಯಲ್ಲಿ ನಿಂತು ಅವರ ಕಂಠಕ್ಕೆ ತಲೆದೂಗಿದಂತೆ ಅನಿಸುತ್ತದೆ. ಚಿತ್ರದ ಪ್ರಮುಖ ಘಟ್ಟದಲ್ಲಿ ಬರುವಂತೆ ತೋರುವ ಈ ಗೀತೆ ತನ್ನಲ್ಲಿ ಚಿತ್ರದ ಕಥೆಯನ್ನು ಸಹಾ ಹೇಳುವಂತೆ ತೋರುತ್ತದೆ. ಇದರ ದೃಶ್ಯರೂಪ ಹೇಗಿರಬಹುದೆಂಬ ನಿರೀಕ್ಷೆಯನ್ನು ಈ ಗೀತೆ ಹುಟ್ಟಿಸುತ್ತದೆ.
-ಪ್ರಶಾಂತ್ ಇಗ್ನೇಷಿಯಸ್
No comments:
Post a Comment