Monday 30 December 2013

ಆಡಿಯೋ ಅನಿಸಿಕೆ : ನಿನ್ನಿಂದಲೇ

ಪುನೀತ್ ಚಿತ್ರ ಜೀವನದಲ್ಲಿ ಮೈಲಿಗಲ್ಲಾದ ಮಿಲನ ಚಿತ್ರದ ’ನಿನ್ನಿಂದಲೇ’ ಹಾಡಿನ ಮೊದಲ ಸಾಲನ್ನೇ ಶೀರ್ಷಿಕೆಯಾಗಿಸಿಕೊಂಡ ’ನಿನ್ನಂದಲೇ’ ಚಿತ್ರ ತನ್ನ ಹೆಸರಿಂದಲೇ ಚಿತ್ರ ರಸಿಕರನ್ನು ಸೆಳೆದುಕೊಳ್ಳುತ್ತಿದ್ದಂತೆ, ಆಗಾಗ ಬಿಡುಗಡೆಯಾಗುತ್ತಿರುವ ಚಿತ್ರದ ಸ್ಟಿಲ್ ಗಳಿಂದಾಗಿ ಚಿತ್ರದ ಬಗೆಗಿನ ನಿರೀಕ್ಷೆ ಮತ್ತಷ್ಟು ಹಿಗ್ಗಿದೆ. ಪುನೀತ್ ಚಿತ್ರವೆಂದ ಮೇಲೆ ಅದರಲ್ಲಿನ ಹಾಡುಗಳ ಬಗ್ಗೆ ಕಾತುರ ಇದ್ದೆದ್ದೇ. ಅಪ್ಪು ಚಿತ್ರಗಳಲ್ಲಿನ ಬೇರೆ ಎಲ್ಲ ಅಂಶಗಳಷ್ಟೇ ಪ್ರಮುಖವಾದದ್ದು ಚಿತ್ರದ ಸಾಹಸ ದೃಶ್ಯಗಳು ಹಾಗೂ ಹಾಡುಗಳು. ಮಕ್ಕಳ ಹಾಗೂ ಯುವಕರ ಪಾಲಿಗಂತೂ ಅಪ್ಪು ಈ ಎರಡು ಅಂಶಗಳಿಂದಾಗಿಯೇ ಫೇವರೇಟ್. 2013ರಲ್ಲಿ ಪುನೀತ್ ನ ಯಾವುದೇ ಚಿತ್ರ ಬಿಡುಗಡೆ ಆಗದೆ ನಿರಾಸೆಯಲ್ಲಿದ್ದ ಅವರ ಅಭಿಮಾನಿಗಳ ಪಾಲಿಗೆ ಸ್ವಲ್ಪ ಸಮಾಧಾನವೆಂಬಂತೆ ನಿನ್ನಿಂದಲೇ ಧ್ವನಿಸುರಳಿ ಬಿಡುಗಡೆಯಾಗಿದೆ. ಸಿ.ಡಿ. ಗಳು ಭರದಿಂದ ಮಾರಾಟವಾಗುತ್ತಿರುವ ಸುದ್ದಿ ಇದ್ದು, ಅಭಿಮಾನಿಗಳು ಖುಷಿಯಾಗಿದ್ದಾರೆ. ಅದರೂ ಹಾಡುಗಳನ್ನು ಕೇಳಿದಾಗ ಇನ್ನೂ ಏನೋ ಬೇಕಿತ್ತು ಎಂಬ ಭಾವ ಕಾಡುತ್ತದೆ. ಇತ್ತೀಚಿನ ಕನ್ನಡ ಚಿತ್ರ ಗೀತೆಗಳಲ್ಲಿನ ಸೃಜನಶೀಲತೆ, ಪುನೀತ್ ಹಾಡುಗಳಿಗೆ ಇರುವ ಜನಪ್ರಿಯತೆ, ನಿರೀಕ್ಷೆಯ ಹಿನ್ನಲೆಯಲ್ಲಿ ಮಣಿಶರ್ಮ ಮತ್ತಷ್ಟು ಶ್ರಮವಹಿಸಬಹುದಿತ್ತೇನೋ ಎನಿಸುತ್ತದೆ.


ಡೋಂಟ್ ಕೇರ್ : ಕವಿರಾಜ್ ಸಾಹಿತ್ಯದ ವಿಶಾಲ್ ದದ್ಲಾನಿ ಹಾಡಿರುವ ಈ ಗೀತೆ ನೃತ್ಯಕ್ಕಾಗಿಯೇ ಸಂಯೋಜಿಸಿದಂತಿದೆ. ಈ ಹಾಡಿಗೆ ಪುನೀತ್ ಹೇಗೆ ನೃತ್ಯ ಮಾಡಿರಬಹುದು ಎಂಬದಷ್ಟೇ ಮುಂದಿನ ಕುತೂಹಲ. ವಿಶಾಲ್ ಗಾಯನದಲ್ಲಿ ಅಂಥಾ ವಿಶೇಷತೆ ಎನಿಲ್ಲ. ವೇಗದ ಧಾಟಿಯಲ್ಲಿ ಇರುವುದರಿಂದ ಕವಿರಾಜರ ಸಾಹಿತ್ಯಕ್ಕೂ ಹೆಚ್ಚಿನ ಅವಕಾಶ ಸಿಕ್ಕಿಲ್ಲ.

ನೀನು ಇರುವಾಗ : ಕಾರ್ತಿಕ್ ಹಾಗೂ ಅನುರಾಧ ಭಟ್ ಹಾಡಿರುವ ಈ ಸುಮಧುರ ಹಾಡಿಗೆ ಕಲ್ಯಾಣ್ ಉತ್ತಮವಾದ ಸಾಹಿತ್ಯವನ್ನು ಒದಗಿಸಿದ್ದಾರೆ. ಪ್ರೇಮಿಗಳ ಆಶಯ ಹಾಗೂ ತೊಳಲಾಟವನ್ನು ಸಾಹಿತ್ಯ ಮಾತ್ರವಲ್ಲದೆ ರಾಗದ ಮೂಲಕವೂ ಉತ್ತಮವಾಗಿ ಹಿಡಿದಿಡುವಲ್ಲಿ ಸಂಗೀತ ನಿರ್ದೇಶಕ ಮಣಿಶರ್ಮ ಸಫಲವಾಗಿದ್ದಾರೆ. ಅನುರಾಧ ಭಟ್ಟರ ಧ್ವನಿ ಅಪ್ತವಾಗಿದ್ದೂ, ಅನುರಾಧ ಚಿತ್ರದಿಂದ ಚಿತ್ರಕ್ಕೆ ಮತ್ತಷ್ಟು ಭರವಸೆ ಮೂಡಿಸುತ್ತಾರೆ. 

ಮೌನ ತಾಳಿತು : ಮೌನ ತಾಳಿತು ಎಂಬ ಹೆಚ್ಚಿನ ಅಬ್ಬರವಿಲ್ಲದ ಗೀತೆಗೆ ಜಯಂತ್ ಕಾಯ್ಕಿಣಿಯವರ ಸಾಹಿತ್ಯ ಪೂರಕವಾಗಿದೆ. ಚಿತ್ರದಲ್ಲಿನ ದು:ಖದ ಸನ್ನಿವೇಶದಲ್ಲಿ ಬರಬಹುದು ಎಂಬಂತಿರುವ ಹಾಡು ಪರದೆಯ ಮೇಲೆ ಮತ್ತಷ್ಟು ಇಷ್ಟವಾಗಬಹುದೇನೋ. ಗಾಯಕ ಅರ್ಜಿತ್ ಸಿಂಗ್ ಧ್ವನಿ ಚೆನ್ನಾಗಿದ್ದರೂ ಯಾರೇ ಹಾಡಿದ್ದರೂ  ವಿಭಿನ್ನವಾದ ರಾಗದ ಧಾಟಿಯಿಂದಾಗಿ ಕೇಳುತ್ತಾ ಕೇಳುತ್ತಾ ಕೇಳುಗರಿಗೆ ಇಷ್ಟವಾಗಬಹುದಾದ ಗೀತೆಯಿದು. 

ನಿಂತೆ ನಿಂತೆ : ಧ್ವನಿ ಸುರಳಿಯ ಅತ್ತ್ಯುತ್ತಮ ಗೀತೆ ಎನ್ನಬಹುದು. ವಿಜಯ್ ಪ್ರಕಾಶ್ ಎಂದಿನಂತೆ ತಮ್ಮ ಧ್ವನಿ ಹಾಗೂ ಶೈಲಿಯಿಂದಾಗಿ ಹಾಡನ್ನು ತಮ್ಮದಾಗಿಸುಕೊಳ್ಳುವುದು ಮಾತ್ರವಲ್ಲದೆ ಕೇಳುಗರನ್ನು ಆವರಿಸಿಕೊಳ್ಳುತ್ತಾರೆ. ಚಿನ್ಮಯಿ ಹಾಗೂ ಸುಧಾಮಯಿ ಸಹಾ ಉತ್ತಮವಾಗಿ ಧ್ವನಿಗೂಡಿಸಿದ್ದಾರೆ, ನಡು ನಡುವೆ ಬರುವ ಇಂಗ್ಲೀಷ್ ಕೋರಸ್ ಉತ್ತಮವಾಗಿದೆ. ಕವಿರಾಜರ ಸಾಹಿತ್ಯವೂ ಗೀತೆಗೆ ಮೆರಗನ್ನು ತಂದುಕೊಟ್ಟಿದೆ.

ಹಾರು ಹಾರು : ಸರಳವಾದರೂ ವಿಭಿನ್ನವಾದ ಈ ಹಾಡಿಗೆ ಸ್ವೀಕಾರ್ ಹಾಗೂ ಚೈತ್ರ ಧ್ವನಿಗೂಡಿಸಿದ್ದಾರೆ. ಕವಿರಾಜ್ ರ ಸಾಹಿತ್ಯ ಅಗತ್ಯಕ್ಕೆ ತಕ್ಕಂತಿದೆ. ಮಣಿಶರ್ಮರ ವಾದ್ಯ ಸಂಯೋಜನೆಯಲ್ಲಿ ಹೊಸತೇನಿಲ್ಲ.

ಭೋಲೊ ಭಂ : ಡಾ.ನಾಗೆಂದ್ರ ಪ್ರಸಾದರ ಸಾಹಿತ್ಯವಿರುವ ಗೀತೆಗಲಲ್ಲಿ ಕೇಳ ಸಿಗುವ ಲವಲವಿಕೆ, ತುಂಟತನಗಳಿರುವ ಮತ್ತೊಂದು ಯುಗಳ ಗೀತೆ. ಕಾರ್ಥಿಕ್ ಹಾಗೂ ಶ್ರವನ್ ಭಾರ್ಗವಿ ಲವಲವಿಕೆಯಿಂದಲೇ ಹಾಡಿದ್ದಾರೆ. ಹಾಡಿನ ಧಾಟಿ ಹಾಗೂ ವೇಗಕ್ಕೆ ತೆಲುಗು ಗೀತೆಗಳ ಗುಣವಿದೆ. ಪುನೀತ್ ನೃತ್ಯವನ್ನು ಈ ಹಾಡಿನ ಮೂಲಕ ಕಣ್ಣು ತುಂಬಿಕೊಳ್ಳಬೇಕು ಎಂಬ ಭರವಸೆ ಹಾಗೂ ಆಸೆಯನ್ನು ಮೂಡಿಸುವ ಗೀತೆ.

-ಪ್ರಶಾಂತ್ ಇಗ್ನೇಷಿಯಸ್

No comments:

Post a Comment