Monday 7 January 2013

ಸ್ಕೂಲ್ ಸಂತೆ

ಕಲ್ಲು ಸಕ್ಕರೆ ಕೊಳ್ಳಿರೋ ನೀವೆಲ್ಲರೂ ಹಾಡು ಕೇಳಿ
ಕಲ್ಲು ಸಕ್ಕರೆ ಸವಿ ಬಲ್ಲವರೇ ಬಲ್ಲರು
ಎಂಬ ದಾಸರ ಪದದ ಗೀತೆ ಕೇಳುತ್ತಿದ್ದಂತೆ ಮನಸ್ಸು ಉಲಾಸಗೊಳ್ಳುತ್ತದೆ. ದೇವರ ನಾಮವನ್ನು ಕಲ್ಲು ಸಕ್ಕರೆಗೆ ಹೋಲಿಸಿ ಅದರ ಸವಿಯನ್ನು ಬಲ್ಲವರೇ ಧನ್ಯರು, ಎಲ್ಲರೂ ಆ ಸವಿಯನ್ನು ಅನುಭವಿಸಿರಿ ಎಂದು ಕರೆ ನೀಡುವಾ ಆಧ್ಯಾತ್ಮ ಗೀತೆಯಿದು. ಹಾಗೆಯೇ ಮುಂದಿನ ಸಾಲುಗಳಲ್ಲಿ ದಾಸರು ಸಂತೆಯ ಚಿತ್ರಣವನ್ನು ನೀಡುತ್ತಾರೆ. ಈ ದೇವರ ನಾಮವೆಂಬ ಕಲ್ಲು ಸಕ್ಕರೆಯನ್ನು ಸಂತೆಯಲ್ಲಿ ಇಟ್ಟು ಮಾರಬೇಕಾಗಿಲ್ಲ, ಸಂತೆ ಸಂತೆಗೆ ಹೋಗಿ ಶ್ರಮ ಪಡಬೇಕಾಗಿಲ್ಲ ಎಂಬ ಸಾಲುಗಳು ಬರುತ್ತವೆ. ಅಂತೆಯೇ ಒಂದು ಎತ್ತಿನ ಗಾಡಿಯಲ್ಲಿ ಹೊತ್ತುಕೊಂಡು ಹೋಗಬೇಕಾಗಿಲ್ಲದ, ಗೋಣಿಯಲ್ಲಿ ತುಂಬ ಬೇಕಾಗಿಲ್ಲದ ಉತ್ತಮ ಸರಕಿದು ಎಂದು ದೈವ ನಾಮ ಸ್ಮರಣೆಯನ್ನು ಲೋಕದ ವ್ಯಾಪಾರ, ಜಂಜಾಟಗಳೊಂದಿಗೆ ಉದಹರಿಸುತ್ತಾ ಸಾಗುತ್ತಾರೆ ದಾಸರು. ಈ ರೀತಿಯ ಉದಹರಣೆಗಳೊಂದಿಗೆ ಸಾಮಾನ್ಯ ಜನರನ್ನು ಯಶಸ್ವಿಯಾಗಿ ತಲುಪಿದ ಹೆಗ್ಗಳಿಕೆ ಈ ದಾಸ ಸಾಹಿತ್ಯದ್ದು.  ಹಾಗೆಯೇ ಬದುಕಿನ ಜಂಜಾಟಗಳೆಲ್ಲಾ ಕ್ಷಣಿಕ ಎಲ್ಲವೂ ಮುಗಿದ ಮೇಲೆ ಶಾಶ್ವತವಾಗಿ ಉಳಿಯುವುದು  ಭಗವಂತನೊಂದಿಗಿನ ಅನುಬಂಧವೊಂದೇ ಎಂಬರ್ಥದ ಮತ್ತೊಂದು ಪದವೂ ದಾಸ ಸಾಹಿತ್ಯದಲ್ಲಿ ಇದೆ. ಬದುಕನ್ನು ಒಂದು ಸಂತೆಗೆ ಹೋಲಿಸಿ, ಸಂತೆಯಲ್ಲಿ ಕಾಣ ಸಿಗುವ ವಸ್ತುಗಳು, ಘಟನೆಗಳು, ಆಗು ಹೋಗುಗಳು, ವ್ಯಾಪರದ ದೃಶ್ಯಗಳು ನಂತರ ಸಂಜೆ ಎಲ್ಲವೂ ಖಾಲಿಯಾದಾಗ ಉಳಿಯುವ ಮೌನ, ಖಾಲಿತನ, ನಿರಾಳತೆಯನ್ನು ನಮ್ಮ ಬದುಕಿನ ನಶ್ವರತೆಗೆ ಈ ದಾಸರಪದ ಸುಂದರವಾಗಿ ಹೋಲಿಸಿ ವರ್ಣಿಸುತ್ತದೆ. ಅಕ್ಕ ಮಹಾದೇವಿಯ 'ಸಂತೆಯೊಳಗೊಂದು ಮನೆಯ ಮಾಡಿ ಶಬ್ದಕ್ಕೆ ನಾಚಿದಡೆಂತಯ್ಯ?' ಸಾಲಂತೂ ಸರ್ವಕಾಲೀಕ. 

ಸಂತೆಯೆಂಬುದು ಒಂದು ವ್ಯಾಪಾರದ ಚಟುವಟಿಕೆಯಾದರೂ ಈ ಅಧ್ಯಾತ್ಮದ ಬರಹಗಳಲ್ಲಿ ಅದು ನುಸುಳಿರುವುದನ್ನು ಕಂಡಾಗ ಸಂತೆಗಳು ನಮ್ಮ ಜನರ ಜೀವನ, ಸಂಸ್ಕೃತಿಯ ಪ್ರಮುಖ ಭಾಗವಾಗಿತ್ತು ಎಂಬುದನ್ನು ಗಮನಿಸಬಹುದು. ಮೇಲಿನ ಅಧ್ಯಾತ್ಮದ ಸಾಲುಗಳು ಅರ್ಥವಾಗಬೇಕಾದರೆ ನಮಗೆ ಒಂದು ಸಂತೆಯ ಸಮಗ್ರವೂ ಅತ್ಯಗತ್ಯ. ಈ ಸಾಲುಗಳಲ್ಲಿ ಬರುವ ಈ ಸಂತೆಗಳ ವೈವಿಧ್ಯತೆ, ಸಡಗರ, ಗಿಜಿಗಿಜಿ,ಸಂಭ್ರಮ, ಜಂಜಾಟದ  ಸ್ಪಷ್ಟ ಚಿತ್ರಣ ನಮಗೆ ದೊರಕಬೇಕಾದರೆ ಹಳ್ಳಿಗಳಲ್ಲಿ ನಡೆಯುವ ಸಂತೆಗಳಿಗೊಮ್ಮೆ ಭೇಟಿ ಕೊಡಲೇಬೇಕು. ಕೆಲವೇ ವರ್ಷಗಳ ಹಿಂದಿನವರೆಗೂ ನಮ್ಮ ಬೆಂಗಳೂರಿನ ಹೊರವಲಯದ ಹಳ್ಳಿಗಳಲ್ಲೇ ಈ ರೀತಿಯ ಹಲವಾರು ಸಂತೆಗಳನ್ನು ಕಾಣಬಹುದಿತ್ತು. ಆದರೆ ಯಾವಾಗ ಬೆಂಗಳೂರು ಕೇವಲ ಬೆಂಗಳೂರಾಗಿ ಉಳಿಯದೇ ಬೃಹತ್ತ್ ಬೆಂಗಳೂರಾಯಿತೋ, ಸಂತೆಗಳು ಮಾಯವಾಗಿ ಹೋಗಿವೆ. ಆ ಜಾಗಗಳಲ್ಲಿ ಈಗ ನೈಸಾದ ರೋಡುಗಳು, ಗಿಡ ಮರವಿಲ್ಲದ ಟೆಕ್ನಾಲಜಿ ಪಾರ್ಕುಗಳು, ನಮೋ ವೆಂಕಟೇಶವಿಲ್ಲದೆ ಪ್ರಾರಂಭವಾಗುವ ಮಲ್ಟಿಪ್ಲೆಕ್ಸುಗಳು, ಆಧುನಿಕ ಜಾತ್ರೆಗಳಾದ ಮಾಲುಗಳು, ಹುಟ್ಟು ಸಾವು ಎರಡಕ್ಕೂ ಕಟ್ಟುವ ಬಣ್ಣದ ಬ್ಯಾನರ್ ಗಳು, ಫ್ಲೆಕ್ಸುಗಳು ಎದ್ದು ನಿಂತಿವೆ.  ಇವೆಲ್ಲದರ ಮಧ್ಯೆ ನಮ್ಮ ಮಕ್ಕಳಿಗೆ ಸಂತೆಗಳನ್ನು ತೋರಿಸುವುದೆಲ್ಲಿಂದ, ಮೇಲಿನ ದಾಸರ ಪದವನ್ನು ಅರ್ಥ ಮಾಡಿಸುವುದು ಹೇಗೆ ಎಂದು ನಿರಾಸೆ ಪಡಬೇಕಾಗಿಲ್ಲ. ಒಂದು ಸಂತೆಯ ಗಿಜಿಗಿಜಿ, ಸಂಭ್ರಮ, ತಲ್ಲಣ, ಅವಸರ, ಫಜೀತಿಗಳೆಲ್ಲಾ ನೋಡಬೇಕಾದರೆ ಬೆಂಗಳೂರಿನ ಯಾವುದಾದರೂ ಪ್ರತಿಷ್ಠಿತ ಶಾಲೆಯ ಮುಂದೆ ಬೆಳಿಗ್ಗೆ ಶಾಲೆ ಪ್ರಾರಂಭವಾಗುವ ಸಮಯದಲ್ಲಿ ಹೋಗಿ ನಿಂತರೆ ಸಾಕು. ರಸ್ತೆ ವಿಶಾಲವಾಗಿರದೆ ಕಿರಿದಾಗಿದ್ದರೆ,ನೂಕು ನುಗ್ಗುಲು, ಟ್ರಾಫಿಕ್ಕ್ ಜ್ಯಾಮ್ ಆಗುವ ಶಾಲೆಯಾದರೆ ಇನ್ನೂ ಉತ್ತಮ. ಆ ಬೆಳಗ್ಗಿನ ಒಂದು ಅರ್ಧ ಗಂಟೆ ಅದು ಹಳ್ಳಿಯ ಸಂತೆಯೇ. ಎಲ್ಲರಿಗೂ ಅವಸರ. ಇಲ್ಲಿ ಅವರಸವೇ ಅನುಕೂಲಕ್ಕೆ ಕಾರಣ. 

ಮೊದಲಿಗೆ ಒಂದು ಕಡೆಯಿಂದ ಬರುವ ಸ್ಕೂಲ್ ವ್ಯಾನಿಗೆ ಎಲ್ಲರೂ ಜಾಗ ಬಿಡಲೇ ಬೇಕು. ಏಕೆಂದರೆ ಅದು ಆ ಸ್ಕೂಲಿನ ವ್ಯಾನು. ಆ ವ್ಯಾನಿನ ಡ್ರೈವರ್‌ದು, ಸಂತೆ ನಡೆಯುತ್ತಿರುವ ಊರಿನ ಗೌಡರ ಎತ್ತಿನ ಗಾಡಿ ಓಡಿಸುವವನ ಭಂಗಿ, ಠೀವಿ.  ನಿಂತ ವ್ಯಾನಿನಿಂದ ಇಳಿಯುತ್ತಿರುವ ಅಥವಾ ಇಳಿಸುತ್ತಿರುವ ಮಕ್ಕಳನ್ನು ನೋಡಿದ ಕ್ಷಣ ಸಂತೆಗಳಲ್ಲಿ ಲಾರಿ ಮೆಟಡೋರ್‌ನಿಂದ ಇಳಿಸಿಕೊಳ್ಳುತ್ತಿರುವ ಮೂಟೆಗಳ ಚಿತ್ರಣ ಸಿಗದಿದ್ದರೆ ಕೇಳಿ. ಇದಕ್ಕೆ ಮಕ್ಕಳ ಬ್ಯಾಗುಗಳು ಒಂದು ಕಾರಣವಾದರೆ ಮಕ್ಕಳ ನಿರ್ಭಾವುಕ ಮುಖ ಭಾವ ಮತ್ತೊಂದು ಕಾರಣ. ಒಂದು ಮೂಟೆ ಎಳೆದ ತಕ್ಷಣ ಅದಕ್ಕೆ ಒರಗಿಕೊಂಡಿದ್ದ ಇನ್ನೊಂದು ಮೂಟೆ ತಾನಾಗಿಯೇ ಬೀಳುವಂತೆ, ವ್ಯಾನ್ ನಿಂತ ಮೇಲೆ ಮಕ್ಕಳು ನಿಂತುಕೊಂಡರೆ ಸಾಕು, ವ್ಯಾನಿನ ಕ್ಲೀನರ್ ತಾನೇ ಮಕ್ಕಳನ್ನು ಎಳೆದು ಎಳೆದು ಕೆಳೆಗ ಬಿಡುತ್ತಾನೆ. ಅದೇ ವೇಗದಲ್ಲೇ ಮಕ್ಕಳು ತಮ್ಮ ತಮ್ಮ ತರಗತಿ ಸೇರಿಕೊಳ್ಳುತ್ತವೆ. ಇನ್ನೂ ಮಕ್ಕಳನ್ನು ತುಂಬಿಕೊಂಡು ಬರುವ ಆಟೋಗಳಂತೂ ಥೇಟ್ ಎತ್ತಿನ ಗಾಡಿಗಳೇ. ಗಾಡಿಯ ಗಾತ್ರವನ್ನು ದಾಟಿ ಚಾಚಿಕೊಳ್ಳುವ ಕಬ್ಬು, ಕಾಯಿಯಂತೆ, ಚಾಚಿ ಕೊಂಡಿರುವ ಮಕ್ಕಳ ಬ್ಯಾಗುಗಳ ಮುಂದೆ ಆಟೋದ ನಿಜ ಸ್ವರೂಪ ಕಾಣುವುದು ಕಷ್ಟವೇ.ಸ್ಕೂಲ್ ವ್ಯಾನಿಗೆ ಸಿಕ್ಕ ಹಾಗೇ ಸುಲಭದಲ್ಲಿ ಆಟೋಗೆ ದಾರಿ ಸಿಗಿವುದಿಲ್ಲ. ಜನರೂ ದಾರಿ ಬಿಡುವುದಿಲ್ಲ. ಆದರೆ ಡ್ರೈವರ್ ಇದಕ್ಕೆಲ್ಲಾ ಬೇಸರ ಮಾಡಿಕೊಳ್ಳುವುದೇ ಇಲ್ಲ. ಏಕೆಂದರೆ ಅವನಿಗಾಗಲೇ ಕೋಪ ಬಂದಿರುತ್ತದೆ. ಕೋಪ ಹಾಗೂ ಬೇಸರ ಎರಡೂ ಭಾವಕ್ಕೆ ಅಲ್ಲಿ ಸಮಯವೂ ಇಲ್ಲ, ಜಾಗವಂತೂ ಇಲ್ಲವೇ ಇಲ್ಲ. ಹಾಗೆ ಬೇಸರ ಮಾಡಿಕೊಂಡರೆ ಯಾರೂ ದಾರಿ ಬಿಡುವುದಿಲ್ಲ. ಆ ಸಮಯದಲ್ಲಿ ಕೋಪ ಉಪಯೋಗಕ್ಕೆ ಬರುತ್ತದೆ. ಕೋಪದಲ್ಲಿ ಬಯ್ದರೆ ಮಾತ್ರ ಮುಂದೆ ಇರುವ ಜನ  ಸೈಡ್ ಬಿಡುವುದು. ಆಟೋ ಒಳಗಿನ ಮಕ್ಕಳ ಶಬ್ದ ಭಂಡಾರಕ್ಕೂ ಅದು ಉಪಯುಕ್ತ. ಸಂತೆಯಲ್ಲಿ ತನ್ನ ವಸ್ತು ಮಾರಲು ವ್ಯಾಪರಿ ಕೂಗುವಂತೆ, ಇಲ್ಲಿ ಎಲ್ಲವನ್ನು ಕೂಗಿ ತೂಗಿಯೇ ಹೇಳಬೇಕು. ಬಯ್ಗುಳಗಳನ್ನು ಕೂಡ.  

ಇನ್ನೂ ಮಕ್ಕಳನ್ನು ಬಿಡಲು ಕಾರಿನಲ್ಲಿ ಬರುವವರ ಕಷ್ಟ ಸುಖ ಅವರಿಗೇ ಪ್ರೀತಿ. ಮೊದಲೇ ಸಣ್ಣ ರಸ್ತೆ.  "ಇಷ್ಟ್ ಚಿಕ್ಕ್ ರೋಡಲ್ಲಿ ಕಾರ್ ತಂದ್ ಬಿಡ್ತಾರೆ, ಏನ್ ಇವರೊಬ್ರತ್ರನೇ ಕಾರ್ ಇರೋದು" ಎಂದು ಕಾರಿನ ಹಿಂದೆ ಇರುವವರು ಬಯ್ದುಕೊಂಡರು ಕಾರನ್ನು ಸಾಗಿ ಮುಂದೆ ಹೋಗುತ್ತಿದ್ದಂತೆ ಏನೂ ಹೇಳುವುದಿಲ್ಲ. ಸಾಧ್ಯವಾದರೇ ಒಂದು ಹಾಯ್ ರೀತಿಯ ನಗು. ಜನ ಇಷ್ಟೆಲ್ಲಾ ಬಯ್ದದ್ದು ಗೊತ್ತಾದರೂ ಕಾರನಲ್ಲಿ ಬಂದವರು ಏನೂ ಆಗದಂತೆ ನಟಿಸುತ್ತಾರೆ. ದಿನವೂ. ಸಂತೆಯಲ್ಲಿ ಎರಡಷ್ಟು ಬೆಲೆ ನಿಗದಿ ಮಾಡಿ ಜನರಿಂದ ತೆಗಳಿಸಿಕೊಂಡರು ಜಗ್ಗದ ದುರುಳ ವ್ಯಾಪಾರಿಯಂತೆ. ಇದ್ದುದರಲ್ಲಿ ಈ ದ್ವಿಚಕ್ರ ವಾಹನಗಳಲ್ಲಿ ಬರುವವರು ಅಲ್ಪ ತಪ್ತರು. ಮಕ್ಕಳನ್ನು ಗೇಟಿನ ಬಳಿಯೇ ಬಿಟ್ಟು ಹುಷಾರು ಎಂದು ಹೇಳಿ ಫ್ಲೈಯಿಂಗ್ ಕಿಸ್ ( ತಮ್ಮ ಮಕ್ಕಳಿಗೇ) ಕೊಡುವಷ್ಟರಲ್ಲಿ ಹಿಂದಿನಿಂದ ಬಂದ ಬೈಕೊಂದು ಹಿಂದಿನ ನೇಮ್ ಪ್ಲೇಟಿಗೆ ಸಣ್ಣಗೆ ಮುತ್ತಿಟ್ಟಿರುತ್ತದೆ.  ಕೋಪ ಮಾಡಿಕೊಳ್ಳೋಣ ಎಂದರೆ ಕಳೆದ ವಾರ ಅದೇ ಜಾಗದಲ್ಲಿ ಅದೇ ರೀತಿ ತಾನು ಇನ್ನೊಂದು ವಾಹನಕ್ಕೆ ಮುತ್ತಿಟ್ಟ ನೆನಪಾಗಿ ಸುಮ್ಮನಾಗಬೇಕಾಗುತ್ತದೆ.ಶಾಲೆಯ ಒಳಗೆ ಹೋಗಬೇಕಾದವರು ಅಲ್ಲೇ ಯಾವುದಾದರೂ ನೋ ಪಾರ್ಕಿಂಗ್ ಬೋರ್ಡ್ ಹುಡುಕಿ ಅದರ ಕೆಳಗೆ ಗಾಡಿ ನಿಲ್ಲಿಸಿ ಹೋಗುತ್ತಾರೆ.ಸಂತೆಯಲ್ಲಿನ "ಇಲ್ಲಿ ಗಲೀಜು ಮಾಡಬಾರದು" ಎಂದು ಬರೆದ ಗೋಡೆಯೇ ಹೆಚ್ಚು ಗಲೀಜು ಆಗಿರುವಂತೆ. ಅಲ್ಲಿ ಜಾಗ ಸಿಗದಿದ್ದವರು ವಾಚ್ ಮ್ಯಾನ್ ಕಣ್ಣ್ತಪ್ಪಿಸಿ ಶಾಲೆಯ ಗೇಟಿನ ಮುಂದೆಯೇ ನಿಲ್ಲಿಸಿ ಹೋಗುತ್ತಾರೆ. 

ಇದೆಲ್ಲದರ ಮಧ್ಯೆ ಕಾಲು ನಡಿಗೆಯಲ್ಲಿ ಬರುವವರ ಕಷ್ಟ ಹೇಳ ತೀರದು. ಇಷ್ಟೆಲ್ಲಾ ವಾಹನಗಳ ಮಧ್ಯೆ ನಡೆಯಲು ಜಾಗವಿಲ್ಲದೆ ಪುಟ್ ಪಾತಿನ ಕಡೆ ಹೋದರೆ, ಅಲ್ಲಿ ವಿಲೇವಾರಿ ಆಗದ ಕಸ ತನ್ನ ಸಾಮ್ರಾಜ್ಯವನ್ನು ದಿನೇ ದಿನೇ ವಿಸ್ತರಿಸುತ್ತಲೇ ಇರುತ್ತದೆ. ಶಾಲೆಗೆ ಬಂದವರೂ ಸಹ ಅದಕ್ಕೆ ತಮ್ಮ ಕಪ್ಪ ಕಾಣಿಕೆ ಅರ್ಪಿಸುತ್ತಾ ತಾಜ್ಯ ವಿಸ್ತರಣೆಯಲ್ಲಿ ಸಹಾಯ ಮಾಡುತ್ತಾರೆ. ಆಡ್ದ ನಿಂತ ದ್ವಿಚಕ್ರ ವಾಹನಗಳ ಸುಡುತ್ತಿರುವ ಸೈಲೆನ್ಸ್ ರ್ ಗಳ ಮಧ್ಯೆ ನುಸುಳಿಕೊಂಡು ಹೋಗುವಾಗಿನ ಮಕ್ಕಳ ಮುಖಭಾವಕ್ಕೂ  ಸಂತೆಯ ಗಿರಗಿಟ್ಟಲೆಯಲ್ಲಿ ಕೂತು ತಲೆಸುತ್ತಿಸಿಕೊಂಡ ಹಳ್ಳಿಗನ ಮುಖ ಭಾವಕ್ಕೂ ಅಂತ ವ್ಯತ್ಯಾಸವೇನು ಇರುವುದಿಲ್ಲ. ಈ ಮಧ್ಯೆ ಸಂತೆಯಲ್ಲಿ ಮಾರಾಟವಾಗ ಬೇಕಿರುವ ಕುರಿಯೊಂದು ನಡೆಯದೆ ಮೊಂಡಾಟ ಮಾಡಿದಾಗ ಕತ್ತಿಗೆ ಕಟ್ಟಿದ ಹಗ್ಗವನ್ನು ಹಿಡಿದು ದರದರನೆ ಎಳೆದು ತರುವ ಕಟುಕನಂತೆ, ಶಾಲೆಗೆ ಬರಲು ಹಠ ಮಾಡುವ ಮಗನನ್ನೋ ಮಗಳನ್ನೋ ಎಳೆದು ತರುವ ಪೋಷಕರ ದೃಶ್ಯವೂ ಕಾಣ ಸಿಗುತ್ತದೆ. ಕುರಿಯ "ಮ್ಯಾ ಮ್ಯಾ" ಸದ್ದಿಗಿಂತ ಹೃದಯವಿದ್ರಾವಕ ಆ ಮಗುವಿನ ಅಳು. ಒಮ್ಮೆ ಶಾಲೆಯ ಬೆಲ್ಲ್ ಹೊಡೆದು ಪ್ರಾರ್ಥನಾ ಗೀತೆ ಪ್ರಾರಂಭವಾಗುತ್ತಿದ್ದಂತೆ ಇಡೀ ರಸ್ತೆ ನಿರಾಳತೆಗೆ ಹಿಂದಿರುಗುತ್ತದೆ. ತಡವಾಗಿ ಬಂದವರು ಓಡಿ ಬರುತ್ತಿದ್ದರೆ, ಪೆನ್ ಮರೆತ ಹುಡುಗ ಹತ್ತಿರದ ಅಂಗಡಿಗೆ ಓಡುತ್ತಿರುವುದು, ಮಕ್ಕಳನ್ನು ಬಿಟ್ಟ ತಾಯಿ ತನ್ನ ಕೆದರಿದ ಕೂದಲನ್ನು ಸರಿ ಮಾಡಿಕೊಳ್ಳುತ್ತಿರುವುದು, ಗಾಡಿಯ ಕನ್ನಡಿಯಲ್ಲಿ ಕಣ್ಣೊರೆಸಿಕೊಳ್ಳುತ್ತಿರುವ ತಂದೆ, ಗುಡ್ ಮಾರ್ನಿಂಗ್ ಹೇಳಿದ ವಾಚ್ ಮ್ಯಾನ್‌ಗೆ ಪ್ರತಿಕ್ರಯಿಸದೆ ಪ್ರೆಯರ್ ಮುಗಿಯಿತೇ ಎಂದು ಕೇಳುತ್ತಾ ಓಡುವಾ, ಇಲ್ಲವೇ ಓಡುತ್ತಾ ಕೇಳುವ ತಡವಾಗಿ ಬಂದ ಟೀಚರ್,  ಮನೆ ಮುಂದೆ ಯಾರೂ ಗಾಡಿ ನಿಲ್ಲಿಸಲು ಬಿಡದೆ ಗೆದ್ದ ಸ್ಕೂಲ್ ಎದುರು ಮನೆಯ ಅಂಕಲ್  .. ಹೀಗೆ ಒಂದೆರೆಡು ಕೊಸರು ದೃಶ್ಯಗಳು ಕಾಣುತ್ತವೆ.

ಮುಂದಿನ 5 ನಿಮಿಷದಲ್ಲಿ ಎಲ್ಲವೂ ಪ್ರಶಾಂತ. ದಾಸರು ಹೇಳಿದ ಬದುಕೆಂಬ ಸಂತೆ ಮುಗಿದ ಮೇಲೆ ಎಲ್ಲವೂ ನಿರಾಳ ಎಂಬ ನಶ್ವರದ ಮಾತಂತೆ ಇಡೀ ರಸ್ತೆ ಏನೂ ಆಗಿಲ್ಲದಂತೆ ತನ್ನ ಮೂಲ ಸ್ವರೂಪಕ್ಕೆ ಮರಳಿರುತ್ತದೆ. ಎಲ್ಲವೂ ಮುಗಿಯಲಿ ಎಂಬಂತೆ ಕಾದು ಕುಳಿತ್ತಿದ್ದ ಕೋಗಿಲೆಯೊಂದು ಮತ್ತೆ ಕುಹೂ ಕುಹೂ ಎನ್ನುತ್ತಿದಂತೆ ಹಿಮ್ಮೇಳದಲ್ಲಿ ತರಗತಿಯೊಂದರ ಕಿಟಕಿಯಲ್ಲಿ ಮಕ್ಕಳು ಮಗ್ಗಿ ಹೇಳುತ್ತಿರುವ ಸದ್ದು  ಗಾಳಿಯಲ್ಲಿ ತೇಲಿ ಬರುತ್ತದೆ. 

ಇನ್ನೂ ಸಂಜೆ ಶಾಲೆ ಬಿಡುತ್ತಿದ್ದಂತೆ ಆದು ಬೇರೆಯದೇ ಆದ ಮತ್ತೊಂದು ಜಗತ್ತು . . . . . . .ಅದರ ಬಗ್ಗೆ ಇನ್ನೊಮ್ಮೆ ಬರೆದೇನು...

 -ಪ್ರಶಾಂತ್ ಇಗ್ನೇಷಿಯಸ್


ಚಿತ್ರಗಳು : ದಿ ಹಿಂದು ಹಾಗೂ ಡೆಕ್ಕನ್ ಹೆರಾಲ್ಡ್

2 comments:

  1. School ennuvudhe ondhu santhe!
    Santhe ennuvudu ondhu schoolu... Ennalu nimma lekhana oppavagide. Good one.

    ReplyDelete
  2. ಪ್ರಶಾಂತ್ ಇಗ್ನೇಷಿಯಸ್8 January 2013 at 16:19

    Dhanyavadagalu Yajaman!!!

    ReplyDelete