Tuesday 1 January 2013

ಹೊಸ ವರ್ಷದ ನನ್ನ ಹೊಸ ಬಯಕೆ


ನನ್ನ ಗೆಳೆಯರೊಬ್ಬರು ಸಿಡಿಮಿಡಿಯಿಂದಲೇ ನನ್ನ ಜತೆಗೆ ಮಾತಿಗಿಳಿದರು. ಮಾತು ಮಾತಿಗೂ ಹತ್ತಾಶೆ,..ಅತೃಪ್ತಿ. ಅವರ ಬಾಯಿಂದ ಅಗಾಗ ಮೋಟರ್ ಸೈಕಲ್ಗಳಿಂದ ದುತ್ತನೆ ಹೊರಬರುವ ಬಿಸಿ ಬಿಸಿ ಹೊಗೆಯಂತೆ ಹೊರ ಬರುತ್ತಿತ್ತು. ಎಷ್ಟೋ ವರ್ಷಗಳಿಂದ ಭ್ರಷ್ಟ, ಅನ್ಯಾಯ ಹಾಗು ದಬ್ಬಾಳಿಕೆಯ ವಿರುದ್ಧ ಪಣತೊಟ್ಟು  ಹೋರಾಡಿದ ಜೀವ  ಇಂದು ಯುದ್ಧದ ಮಧ್ಯದಲ್ಲೇ ಸೋಲಿಗೆ ಶರಣಾದ ಸೈನಿಕನಂತೆ ಕಂಡರು. ಮೊದಲಿನಷ್ಟ ತೀಕ್ಷ್ಣವಾಗಿರದ ಅವರ ಮಾತುಗಳು, ತನ್ನ ಜೀವಮಾನದ ಕಡು ವೈರಿನೊಡನೆ ರಾಜಿಮಾಡಿಕೊಂಡಂತಿತ್ತು. ಹತ್ತಾಶ ರಕ್ತದಲ್ಲಿ ತೊಯ್ದಂತಹ ಅವರ ವಿಚಾರಗಳು ಗುರಿ ಮುಟ್ಟುವ ಮೊದಲೇ ತನ್ನ ಹೋರಾಟಕ್ಕೆ ಗುಡ್ ಬೈ ಹೇಳಿದಂತಿತ್ತು.

ಹೌದು, ಅನ್ಯಾಯ ದಬ್ಬಾಳಿಕೆಯ ಮತ್ತು ಭ್ರಷ್ಟ ವ್ಯವಸ್ಥೆಯ ವಿರುದ್ಧ ನಿದ್ದೆ, ನೀರು ಊಟ ಬಿಟ್ಟು ಹೋರಾಡಿದ ಎಷ್ಟೋ ಸಾತ್ವಿಕರ ಅನುಭವವಿದು. ಆದರೆ, ಇವರೆಲ್ಲರು ತಾವು ಸೋಲುತ್ತೇವೆ ಎಂದು ಮುಂಚಿತವಾಗಿ ಗೊತ್ತಿದ್ದರೂ ಒಂದು ಒಳ್ಳೆಯ ಸಂಪ್ರದಾಯವನ್ನು, ನ್ಯಾಯವಾದ ವ್ಯವಸ್ಥೆಯನ್ನು ರೂಪಿಸಲು ದೊಡ್ಡ ಗಂಡಾಂತರದ ಚಪಡಿಗಳನ್ನೇ ತಮ್ಮ ಮೇಲೆ ಎಳೆದುಕೊಂಡವರು.. ಅವರಿಗೆ ಗೊತ್ತು, ತನ್ನ ಜೀವಮಾನದಲ್ಲೇ ತಾನು ಕೈಗೊಂಡಿರುವ ಕೆಲಸದಲ್ಲಿ, ಹೋರಾಟದಲ್ಲಿ ಯಶಸ್ಸು ಕಾಣುವುದು ಅನಿಶ್ಚಿತವೆಂದು. ಆದರೂ ಊಟ, ನೀರು ನಿದ್ದೆಯನ್ನು ಬಿಟ್ಟು ಅಂತಹ ವ್ಯವಸ್ಥೆಯ ಸಕಾರಕ್ಕೆ ಶಕ್ತಿ ಮೀರಿ ದುಡಿಯುತ್ತಾರೆ. ಅವರಿಗೆ ಸೋಲು ಸೋಲಾಗುವುದಿಲ್ಲ. ತಮ್ಮ ಕನಸ್ಸಿನ ಮತ್ತು ಸ್ಥಾಪಿಸ ಹೋರಟಿರುವ ವ್ಯವಸ್ಥೆಯ ಪಯಣಕ್ಕೆ ಮೆಟ್ಟಿಲುಗಳಾಗುತ್ತವೆ. ಕ್ರಿಸ್ತ, ಬಸವಣ್ಣ, ಅಬೆಂಡ್ಕರ್, ಗಾಂಧಿ, ಮಾರ್ಟಿನ್ ಲೂತರ್ ಕಿಂಗ್, ನೆಲ್ಸನ್ ಮಂಡೇಲಾ… ಇವರೆಲ್ಲರೂ ನಮ್ಮಲ್ಲಿ ಚಿರಸ್ಥಾಯಿಯಾಗಿರುವುದು ಈ ಕಾರಣಕ್ಕಾಗಿಯೇ. ಇವರಿಗೆ ಗೊತ್ತಿತ್ತು ಅನ್ಯಾಯದ ವಿರುದ್ಧ ಹೋರಾಡುವುದೆಂದರೆ ತಮ್ಮನ್ನೇ ಸೋಲಿನ ಸಮಾಧಿಯಲ್ಲಿ ಹೂಳುವುದೆಂದು. ಆದರೂ ಅನ್ಯಾಯದ ವ್ಯವಸ್ಥೆಯ ವಿರುದ್ಧ ಎದೆ ತಟ್ಟಿ ಹೋರಾಡಿದರು.  ಇಂತಹ ಹೋರಾಟ ಹಾದಿಯಲ್ಲಿ ತಲೆದೋರಿದ ಸಾವಿರಾರು ಸಂಕಷ್ಟಗಳಿಗೆ ಅವರು ಎದೆಗುಂದಲಿಲ್ಲ. ಅನ್ಯಾಯದ ಬಗೆಗಿನ ಅವರ ಸಾತ್ವಿಕ ಸಿಟ್ಟು ಬರಿದಾಗಲಿಲ್ಲ. ಬಂದ ಹತ್ತಾರು ಅಮಿಷಗಲಿಗೆ ತಲೆಬಾಗಲಿಲ್ಲ. ಅಧಿಕಾರದ ಲಾಲಾಸೆಗೆ ನಂಬಿರುವ ತತ್ವ ಆದರ್ಶಗಳನ್ನು ಬಲಿಕೊಡಲಿಲ್ಲ. ಮನೆಮಠವನ್ನು, ಸ್ವಹಿತಗಳ ಗಡಿಯನ್ನು ದಾಟಿ ಬೀದಿಗಿಳಿದು ಪೋಲಿಸ್ ಲಾಠಿಗಳ ರುಚಿಕಂಡು ಜೈಲು ಸೇರಿದವರು. ಸರ್ಕಾರಗಳ ಕೆಂಗೆಣ್ಣಿ ಗುರಿಯಾದವರು. ತಮ್ಮ ವಿರುದ್ಧ  ಸರ್ಕಾರಗಳು ಕೈಗೊಂಡ ’ಬಾಯಿಮುಚ್ಚಿಸು” ಕಾರ್ಯಚರಣೆಯನ್ನು ನಿರ್ಭಯದಿಂದ ಎದುರಿಸಿದವರು. ತಮ್ಮ ಭವಿಷ್ಯದ ಬಗ್ಗೆ ಕಿಂಚತ್ತೂ ತಲೆಕೆಡಿಸಿಕೊಂಡವರಲ್ಲ. ತಮ್ಮ ಹಿಂಬಾಲಕರು ನಡು ನೀರಿನಲ್ಲೇ ಕೈಕೊಟ್ಟು ಹೋದರೂ ಕೊರಗದೆ ಏಕಾಂಗಿಯಾಗಿ ಹೋರಾಡಿದವರು. ಅವರಲ್ಲಿ ಮೋಸತನವಿರಲಿಲ್ಲ. ಕಪಟತನವೆಂಬುದಿರಲಿಲ್ಲ. ರಕ್ಷಣೆಗೆ ಮುಖವಾಡಗಳ ಮೊರೆಹೋಗಲಿಲ್ಲ. ಅವರದು ಬೆರೆಕೆಯಲ್ಲದ ಅಪ್ಪಟ ಹೋರಾಟವಾಗಿತ್ತು. ನ್ಯಾಯ ಮತ್ತು ಮಾನವ ಹಕ್ಕುಗಳ ಮರು ಸ್ಥಾಪನೆಯೇ ಅವರ ಹೋರಾಟದ ಬುನಾದಿಯಾಗಿತ್ತು.

ಕಳೆದ ವರ್ಷದ ಸೋಲು ಗೆಲ್ಲುವುಗಳ ನೋವು ನಲಿವುಗಳ  ಗಾಢ ನೆನಪುಗಳಲ್ಲಿ  ಹೂಸ ವರ್ಷವನ್ನು ಸ್ವಾಗತಿಸುತ್ತಿದ್ದೇವೆ. ಇಂತಹ ಸೋಲು ಗೆಲ್ಲುವುಗಳ ಗಾಢ ನೆನಪುಗಳಲ್ಲಿ ಮುಖ್ಯವಾಗಿ ನನ್ನನ್ನು ಕಾಡಿದ್ದು  ಕಳೆದ ವರ್ಷದಲ್ಲಿ ನಡೆದ  ನೂರಾರು ಸಾರ್ವತ್ರಿಕ ಪ್ರತಿಭಟನೆಗಳು ಮತ್ತು ಹೋರಾಟಗಳು. ವ್ಯವಸ್ಥಿತವಾಗಿ ಹಾಗೂ ಸುದೀರ್ಘ‌ವಾಗಿ ನಡೆಸಿದ ಅನೇಕ ಹೋರಾಟಗಳು ನಿರೀಕ್ಷಿತ ಫಲ ಕೊಡಲಿಲ್ಲ. ಕೆಲವೊಂದು  ಹೋರಾಟಗಳಿಗೆ ಉದ್ದೇಶದ ಸ್ಪಷ್ಟತೆಯಿರಲಿಲ್ಲ. ಹೋರಾಟ, ಪ್ರಟಿಭಟನೆಗಳನ್ನು ಹುಟ್ಟು ಹಾಕಿದ ಅನೇಕರಲ್ಲಿ ಸಾತ್ವಿಕತೆಯಿರಲಿಲ್ಲ; ಪ್ರಾಮಾಣಿಕತೆಯಿರಲ್ಲ. ಕೆಲವೊಂದಂತು ಅಪ್ಪಟ ರಾಜಕೀಯ ಪ್ರೇರಿತವಾಗಿದ್ದವು. ಹಣೆಪಟ್ಟಿಗಳನ್ನು ಕಟ್ಟಿಕೊಂಡು ರಾತ್ರಿಹೊತ್ತು ಕ್ಯಾಂಡಲ್ ಹಚ್ಚುತ್ತಾ ಘೋಷಣೆ ಕೂಗುತ್ತಾ ಪ್ರತಿಭಟನೆಗಳಲ್ಲಿ ಭಾಗವಹಿಸುತ್ತಿದ್ದ ಜನಸಮೂಹಕ್ಕೆ ಇರಬೇಕಾದ ಬದ್ಧತೆಯಿರಲಿಲ್ಲ. ಹೀಗೆ ಅಬ್ಬರದೊಂದಿಗೆ ಸುರುವಾದ ಹಲವಾರು ಹೋರಾಟಗಳು ಉದ್ದೇಶದ ಸಫಲತೆ ಕಾಣುವುದು ಇರಲ್ಲಿ ಅವು ಕಣ್ಣುತೆರೆಯುವ ಮೊದಲೇ ನೆಲಕಚ್ಚಿದವು. ಇಂತಹ ಪರಿಸ್ಥಿತಿಯಲ್ಲಿ ನನ್ನ ಮನಸ್ಸಿಗೆ ಬಂದಿದ್ದು ಕ್ರಿಸ್ತ ಮತ್ತು ಬಸವಣ್ಣ.

ಕ್ರಿಸ್ತ ಬಸವಣ್ಣ ಕೂಡ ಧಾರ್ಮಿಕ ಮತ್ತು ರಾಜಕೀಯ ವ್ಯವಸ್ಥೆಯ ವಿರುದ್ಧ ಹೋರಾಡಿದ ಹಠ ಯೋಗಿಗಳು. ಧಾರ್ಮಿಕ ಗಣ್ಯರನ್ನು ಸುಣ್ಣ ಬಳಿದ ಸಮಾಧಿಯೆಂದು ಬಹಿರಂಗವಾಗಿ ವ್ಯವಸ್ಥೆಯ ಬಂಡೆಗೆ ತಲೆ ಬಡಿದುಕೊಂಡವರು. ಅವರಿಗೆ ಗೋತ್ತಿತ್ತು, ತಾವು ಕೈಗೊಂಡಿರುವ ಹೋರಾಟದಲ್ಲಿ ಸೋಲು ಕಟ್ಟಿಟ್ಟ ಬುತ್ತಿಯೆಂದು. ಆದರೂ ಹಾವಿದ್ದ ಹುತ್ತಕ್ಕೆ ಕೈಹಾಕಿದರು. ಕೊನೆಗೆ ಧಾರ್ಮಿಕ ಅಧಿಕಾರಿಗಳ ಉಗ್ರ ಕೋಪಕ್ಕೆ ಸುಟ್ಟು ಭಸ್ಮವಾದರು. ಪ್ರಪಂಚದ ಸಂಕುಚಿತ ದೃಷ್ಟಿಯಲ್ಲಿ ಅವರು ಸೋತ ಯೋಧರಾದರು. ತಾವು ಕಂಡ ಕನಸ್ಸಿನ ರಾಜ್ಯವನ್ನು ಕಾಣದೆ, ಹತ್ತಾಶರಾಗಿ ಸತ್ತವರಾದರು. ಅವರ ಕನಸುಗಳು ಚಾಲ್ತಿಯಲ್ಲಿಲ್ಲದ್ದ ನಾಣ್ಯಗಳಾದವು. ಆದರೂ ಅನ್ಯಾಯದ ವ್ಯವಸ್ಥೆಯ ಜತೆ ರಾಜಿ ಮಾಡಿಕೊಳ್ಳಲಿಲ್ಲ. ಅವರು ಕ್ಷಣಿಕ ಸೋಲಿಗೆ ತಲೆ ಕೆಡಿಸಿಕೊಳ್ಳಲಿಲ್ಲ. ಅವರ ಸೋಲೇ ಇಂದು ನೂರಾರು ಜನರಲ್ಲಿ ನ್ಯಾಯದ ತುಡಿತವನ್ನು ಹುಟ್ಟಿಸಿದ್ದು. ನಿಸ್ಪಾರ್ಥ ಬದುಕಿಗೆ ಪ್ರೇರಣೆಯಾಗಿದ್ದು, ಸಾವಿರಾರು ಜನರಲ್ಲಿ ಅವರು ಮತ್ತೆ ಹುಟ್ಟಿ ಬಂದಿದ್ದು. ಅವರಂತಹ ಹೋರಾಟ ನಮ್ಮದಾಗಲಿ. ಅವರಲ್ಲಿದ್ದ ಬದ್ಧತೆ, ಪ್ರಾಮಾಣಿಕತೆ, ಸಂಕಲ್ಪ ನಮ್ಮ ಕೈಗಳ ಹಿಡಿಯಲಿ. ಕುಗ್ಗದ ಅವರ ಜೀವಪೂರಕ ಸಿದ್ಧಾಂತಗಳ ಚೈತನ್ಯ ನಮ್ಮ ಲ್ಲಿ ತುಂಬಿತುಳುಕಲಿ. ಆಗ ನಮ್ಮ ಹೋರಾಟ ನಡು ದಾರಿಯಲೇ  ಹಳಿ ತಪ್ಪಿದ ಹೋರಾಟವಾಗದೆ ಬದಲಾವಣೆಯ ಸಾಧನಗಳಾಗುತ್ತದೆ. ಇಂತಹ ಹೋರಾಟಗಳು ೨೦೧೩ ವರ್ಷವನ್ನು ತುಂಬಿಕೊಳಲಿ; ದಬ್ಬಾಳಿಕೆ ಅನ್ಯಾಯಗಳ ವಿರುದ್ಧ ದನಿ ಎತ್ತಲಿ., ಜಗತ್ತನ್ನು ಇನ್ನಷ್ಟ್ಟುಮಾನವೀಕರಣಗೊಳಿಸಲಿ ಎಂಬುವುದೇ ಹೊಸ ವರ್ಷದ ನನ್ನ ಹೊಸ ಬಯಕೆ ಮತ್ತು ಹಾರೈಕೆ.

ಜನವಿರೋಧಿ, ಜೀವ ವಿರೋಧಿಗಳ ವಿರುದ್ಧ ಹೋರಾಡುತ್ತಿರುವ ಸಾವಿರಾರು ಸಾತ್ವಿಕ ಜನರಿಗೆ ನಮಸ್ಕರಿಸಿ ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳನ್ನು ಕೋರುತ್ತೇನೆ.
ಜೋವಿ.Read more!

1 comment:

  1. ಪ್ರಶಾಂತ್ ಇಗ್ನೇಷಿಯಸ್1 January 2013 at 17:38

    ನಿಮ್ಮ ಅನಿಸಿಕೆಗಳು ನಿಜ ಜೋವಿ. ನಿಜಕ್ಕೂ ಪ್ರಾಮಾಣಿಕ ಹೋರಾಟ ಮಾಡುತ್ತಿರುವವರಿಗೆ ಮತ್ತಷ್ಟು ಶಕ್ತಿ, ಸ್ಪೂರ್ತಿ ದೊರಕಲಿ. ಎಲ್ಲವನ್ನೂ ಬಲ್ಲವರು ತಿಳಿದವರೇ ಹೋರಾಟವನ್ನು ಹತ್ತಿಕ್ಕಲು ಪ್ರಯತ್ನ ಮಾಡುತ್ತಿರುವ ಅಧಿಕಾರ ವರ್ಗ ಒಂದೆಡೆಯಾದರೆ, ಎಲ್ಲವನ್ನು ನಿರಾಕರಿಸುತ್ತಾ, ಎಲ್ಲವನ್ನು ಅಪನಂಬಿಕೆಯಿಂದ ನೋಡುತ್ತಾ ಹೋರಾಟವನ್ನು ಕೇವಲವಾಗಿ ನೋಡುವ ತಟಸ್ಥ ವರ್ಗ ಮತ್ತೊಂದೆಡೆ. ಪ್ರಾಮಾಣಿಕ ಹೋರಾಟಗಳು ಎಚ್ಚರವಾಗಿದ್ದೂ ನಮ್ಮನ್ನೂ ಎಚ್ಚರಿಸುತ್ತಿರಲಿ!!!

    ReplyDelete