Tuesday 29 January 2013

ಹೊಸವರ್ಷದ ಆಚರಣೆ


ಮೊನ್ನೆ Newbilis ಎಂಬ ಪುಟ್ಟಿಯ ಹುಟ್ಟಿದ ದಿನದಾಚರಣೆಗೆ ಹೋಗಿದೆ. ಅವಳು ಹೊಸವರ್ಷದ ದಿನದಂದು ಹುಟ್ಟಿದ್ದರಿಂದ ಅವಳಿಗೆ Newbilis ಎಂದು ಹೆಸರಿಟ್ಟಿದ್ದರು. Newbilis ಎಂದರೆ ಹೊಸವರ್ಷ ಎಂದಾರ್ಥ. ಅವಳ ನೋಡಿ ಸೂರೆಗೊಂಡು ಬರೆದ ಸಾರವೇ ಸಾಲುಗಳು.

ಯಾರೋ ಕರೆದ
‘ಹೊಸವರ್ಷ ಪುಟ್ಟಿಯ ಹುಟ್ಟಿದಾಚರಣೆಗೆ
ಹೋದೆ ಒಲ್ಲದ ಮನಸ್ಸಿನಿಂದ
ಆಗಲೇ ಸೋಪಾಧಿಕವಾಗಿಬಿಟ್ಟಿದ್ದ
ಆಚರಣೆಗಳ ಬಗೆಗಿದ್ದ ಸಿಡುಕಿನಿಂದ

ಹೋಗಿದಾಕ್ಷಣ ಕಂಡಿದ್ದು
ಕೇಳದೆ ಕೂಡಿದು
ಪುಟ್ಟ ಮಗು 'ಹೊಸವರ್ಷ
ನವಿರಾದ ನಗು
ತೀವ್ರತೆಯ ಸೆಲೆಯಾಗಿದ್ದ  ಮಗು
ಯಾರೋದೋ ಕಟ್ಟುಪಾಡಿನ ಜಾಲ್ರಿ
ಸೂಸಿಗೆ ಸಿಗದ ಅವಳ ಹವಾಭಾವ
ನನ್ನ ನಿಖರ ಮಾತಿನ ಗಾಣದ ಎರೆಗೆ
ತುತ್ತಾಗಲು ನಿರಾಕರಿಸಿತ್ತಿದ್ದರೂ
 ಮಾತು ಕೈಬಿಡದೆ ಪ್ರಯತ್ನಿಸುತಿತ್ತು…

ಅವಳು ಮಾತ್ರ
ದಿಟ್ಟಿಸಿದಳು
ನಕ್ಕಳು..
ಏನನ್ನೋ ಪ್ರಶ್ನಿಸಿ ಬೆನ್ನೆಟ್ಟಿದಳು
ಕಂಡು ಹೊಸಬರ ಬೆಚ್ಚಿಬೆರಗಾದಳು
ಅಮ್ಮನ ಟಾರ್ಚಬೇಕೆಂದು ಹಠ ಹಿಡಿದು
ಕೊಟ್ಟಿದು ಬಿಸಾಡಿದಳು
ಬೇಡದು ಅಪ್ಪಿಕೊಂಡಳು
ಓಡಲು ಹೋಗಿ ಬಿದ್ದು ಎದ್ದಳು
ಎದ್ದು ಬಿದ್ದಳು
ಅಂಬೆಗಾಲಿಡುತ್ತಾ ಮನೆಯನೆಲ್ಲಾ ಸುತ್ತಾಡಿ
ಬಂದು ಕೂತಳು
ಕೂತು ಚೆಲ್ಲಾಡಿದಳು
ಬೆಲೆಯ ಹಂಗಿರಲಿಲ್ಲ ಅವಳಿಗೆ
ಅಂಟಿಕೊಳ್ಳುವ ದುರಾಸೆ ಅವಳಲ್ಲಿ ಹುಟ್ಟಿರಲಿಲ್ಲ
ನಾ ಗಂಡೆನ್ನಲಿಲ್ಲ
ನಾ ಹೆಣ್ಣೆನ್ನಲಿಲ್ಲ
ಜಗತ್ತಿನ ಬೇದವೆಂಬ ವ್ಯಾಕರಣ ಅವಳಿಗೆ ತಿಳಿದಿರಲಿಲ್ಲ
ಲಾಭನಷ್ಟಗಳನ್ನು ಪಕ್ಕಕಿಟ್ಟು
ಸಿಕ್ಕಿದು ಸಿಗದಿದ್ದ
ಪ್ರತಿ ಕ್ಷಣದ ಪ್ರತಿ ಕಣವನ್ನು
ಅಮ್ಮನ ಎದೆಹಾಲು ಹೀರಿದಂತೆ
ಅನುಭೋಗಿಸುತ್ತಾ ಕುಣಿದು ತೊದಲಿತ್ತಿದ್ದಳು
ಮಂದಹಾಸ
ಹೊಸತನ
ಪರಮಾನಂದಗಳ ಜೊತೆಯಾಗಿ

ಅವಳ ಅನನ್ಯಕ್ಕೆ
ನನ್ನ ಬರವಣಿಗೆಯ ಬಲೆ ಹಾಕಿ
ಬಂಧಿಸುತ್ತಿರುವ ನನ್ನ ಮನಸ ನೋಡಿ
ವಿಕೃತ್ತಗೊಂಡೆ.

ಕೊನೆಗೆ,
ಪುಟ್ಟ ಹೊಸವರ್ಷಳನ್ನು ನೋಡಿ
ನನ್ನ ಕಟ್ಟುಪಾಡಿನ ಬದುಕಿಗೆ ಅವಳ ತೋರಿಸಿ
ನಾನೇ ಅವಳಾಗಿ
ಅವಳೇ ನಾನಾಗಿ
ವರ್ಷವಿರಲ್ಲಿ
ಇಡೀ ಬದುಕೇ ಅವಳಂತೆ ನಾನು ಕಳೆಯಬೇಕೆನುವಷ್ಟರಲ್ಲಿ
ಆಚರಣೆ ಮುಗಿಸಿ ಮರಳಿದೆ ನನ್ನ ಮನೆಗೆ
ಹೊಸತನವಿಲ್ಲದ ಯಾರೋದೋ ಕಟ್ಟುಪಾಡಿಗೊಳಪಟ್ಟ
ಮನೆಯೊಡೆಯನಿಲ್ಲದ ನನ್ನ  ದರ್ವೆಸಿ ಬದುಕಿಗೆ

ಜೋವಿ ಯೇ.
Read more!

1 comment: