Friday 14 September 2012

ಲಂಡನ್, ಒಲಂಪಿಕ್ಸ್ ಹಾಗೂ ಭಾರತ


ವೈವಿಧ್ಯಮಯವಾಗಿ ಆರಂಭಗೊಂಡ ೨೦೧೨ರ ಲಂಡನ್ ಒಲಂಪಿಕ್ಸ್ ಭರ್ಜರಿಯಾಗಿ ಮುಗಿದಿದೆ. ಮುಗಿದ ಒಲಂಪಿಕ್ಸ್ ಅನೇಕ ರಾಜಕೀಯ, ಸಾಮಾಜಿಕ, ಆರ್ಥಿಕ ವಿಷಯಗಳಲ್ಲಿ ಚಿಂತನೆಗೆ ದಾರಿ ಮಾಡಿಕೊಟ್ಟಿದೆ. ವಿಶ್ವದ ಅತ್ಯಂತ ಅಧುನಿಕ ನಗರಗಳಲ್ಲಿ ಒಂದಾದ ಲಂಡನ್, ಒಲಂಪಿಕ್ಸ್ ಕೂಟವನ್ನು ಹೇಗೆ ನಿಭಾಯಿಸಬಹುದು ಎಂಬ ಕುತೂಹಲದ ಪ್ರಶ್ನೆ ಕೂಟಕ್ಕೆ ಮುಂಚೆ ಎದ್ದಿತ್ತು. ಇದಕ್ಕೆ ಹಲವಾರು ಕಾರಣಗಳಿದ್ದವು. ಆದರೆ ಈ ಎಲ್ಲಾ ಕುತೂಹಲ, ಸಂಶಯ, ಅಡರು ತೊಡರುಗಳನ್ನು ಮೀರಿ ಲಂಡನ್ ನಗರ, ಒಲಂಪಿಕ್ ಸಂಸ್ಥೆ ಹಾಗೂ ಆಯೋಜಕರು ಅತ್ಯಂತ ಯಶಸ್ವಿ ಕ್ರೀಡಾ ಕೂಟವೊಂದನ್ನು ನಡೆಸಿಕೊಟ್ಟರು ಎಂದರೆ ತಪ್ಪಾಗಲಾರದು. ಒಲಂಪಿಕ್ಸ್ ಎಂದರೆ ಒಂದು ಕ್ರೀಡಾ ಕೂಟ, ಅದರಲ್ಲಿ ರಾಜಕೀಯ, ಸಾಮಾಜಿಕ, ಆರ್ಥಿಕ ಆಯಾಮಗಳೇನಿರುತ್ತವೆ? ಇದ್ದರೂ ಒಂದು ದೇಶ ಒಲಂಪಿಕ್ಸ್ ಕ್ರೀಡಾಕೂಟವನ್ನು ನಡೆಸುವಷ್ಟು ಆರ್ಥಿಕವಾಗಿ ಬಲಶಾಲಿಯೇ, ಸಮರ್ಥವೇ ಎಂಬದಷ್ಟೇ ಮುಖ್ಯ ಎಂಬ ಮಾತುಗಳು ಕೇಳಿ ಬರಬಹುದಾದರೂ, ವಿಷಯ ಅಷ್ಟೇನು ಸರಳವಲ್ಲ.


 ೨೦೦೮ ಚೀನಾದ ಒಲಂಪಿಕ್ಸ್ ಕೂಟವನ್ನೇ ಉದಾಹರಣೆಗೆ ತೆಗೆದುಕೊಂಡರೆ, ಅದು ನಡೆದದ್ದು ದೂರದ ಚೀನಾದಲ್ಲಾದರೂ ಅಲ್ಲಿನ ಕ್ರೀಡಾಂಗಣಗಳ ನಿರ್ಮಾಣಕ್ಕೆ ಬೇಕಾದ ಕಬ್ಬಿಣ ಭಾರತದಿಂದಲೂ ಸರಬರಾಜಾಯಿತು. ನಮ್ಮದೇ ಬಳ್ಳಾರಿಯ ಕಬ್ಬಿಣದ ಗಣಿಗಳಿಗೆ ಚಿನ್ನದ ಬೆಲೆ ಬಂದು, ಅವುಗಳಲ್ಲಿನ ಹಣ ಇಲ್ಲಿನ ರಾಜಕೀಯ ವ್ಯವಸ್ಥೆಯ ಮೇಲೆ ಬೀರಿದ ಪರಿಣಾಮಗಳ ಬಗ್ಗೆ ಸಹಾ ನಮಗೆ ಗೊತ್ತೇ ಇದೆ.  ಮುಂದೆ ಏನಾಯಿತು ಎಂಬುದು ಇಲ್ಲಿ ಅಪ್ರಸ್ತತವಾದರೂ ಒಂದು ಒಲಂಪಿಕ್ಸ್‌ನ ಕದಂಬ ಬಾಹುಗಳು, ಪರಿಣಾಮಗಳು ಎಲ್ಲಿಯುವೆರೆಗೂ ಚಾಚಬಹುದು ಎಂಬುದಕ್ಕೆ ಇದು ಒಂದು ಚಿಕ್ಕ ಉದಾಹರಣೆ, ಈ ರೀತಿಯದು ಇನ್ನೆಷ್ಟೋ? ಆದರಿಂದಲೇ ಒಂದು ಜಾಗತಿಕ ಮಟ್ಟದ ಕ್ರೀಡಾ ಕೂಟಕ್ಕೆ ತನ್ನದೇ ಆದ ಅನೇಕ ಆಯಾಮಗಳಿರುತ್ತವೆ.  
  
೨೦೦೮ರ ಒಲಂಪಿಕ್ಸ್ ಆಯೋಜಿಸಿದ ಚೀನಾ ಅದನ್ನು  ಅತ್ಯಂತ ಯಶಸ್ವಿಯಾಗಿ ನಿರ್ವಯಿಸಿದ್ದು ಮಾತ್ರವಲ್ಲದೆ ವೈಭವಯುತವಾಗಿ ನಡೆಸಿಕೊಟ್ಟಿತು. ಜಾಗತಿಕ ಮಟ್ಟದ ಕೂಟವನ್ನು ಜಗವೇ ನಿಬ್ಬೆರಗಾಗಿ ನೊಡುವಂತ ಸಾಮರ್ಥ್ಯ, ಆರ್ಥಿಕ ಶಕ್ತಿ ಹಾಗೂ ಮಾನವ ಸಂಪನ್ಮೂಲ ತನಗಿದೆ ಎಂಬುದನ್ನು ತೋರಿಸಿಕೊಡುವ ವೇದಿಕೆಯನ್ನಾಗಿ ಬಳಸಿಕೊಂಡಿತು. ವಿಶ್ವದ ಆರ್ಥಿಕತೆಯಲ್ಲಿ ಬೃಹದಾಕಾರವಾಗಿ ಬೆಳೆಯುತ್ತಿರುವ ತಾನು ಎಲ್ಲಾ ರಂಗಗಳಲ್ಲೂ ಸಮರ್ಥ ಎನ್ನುವ ಸಂದೇಶವನ್ನು ಸಾರಿದ ಚೀನಾ ಒಲಂಪಿಕ್ಸ್ ಅಯೋಜಿಸುವ ವಿಷಯದಲ್ಲಿ ಒಂದು ಹೊಸ ಮಾನದಂಡವನ್ನು ನಿರ್ಮಿಸಿತು. ಚೀನಾದ ಒಲಂಪಿಕ್ಸ್ ಕ್ರೀಡಾಕೂಟ ಮುಂದೆ ಮುಂದಿನ ಯಾವುದೇ ಕೂಟ ಸಪ್ಪೆಯಾಗುವ ಅಪಾಯವಿತ್ತು ಮತ್ತು ಜನರು ಸಹಾ ಎಂದಿಗೂ ಅದನ್ನು ಚೀನಾ ಮುಂದೆ ಹೋಲಿಕೆ ಮಾಡುವ ಸಂಭವಗಳಿದ್ದವು.

ಇದು ಲಂಡನ್ ನಗರಕ್ಕೆ ಮೊದಲ ಸವಾಲಾಗಿದ್ದರೂ, ಅದು ಹೊರಗಿನ ಸವಾಲಾಗಿತ್ತು. ಆದರೆ ಅದಕ್ಕಿಂತಲೂ  ಹೆಚ್ಚಾಗಿ ತನ್ನದೇ ಆದ ಆಂತರಿಕ ಸಮಸ್ಯೆಗಳಿಂದ ನಡುವೆ ನರಳಿ, ತೊಳಲಾಡುತ್ತಿದ್ದ ಲಂಡನ್ ನಗರ ಅವುಗಳನ್ನು ಮೆಟ್ಟಿ ನಿಲ್ಲುವ ಸ್ಥೈರ್ಯ ತೋರಬೇಕಾಗಿತ್ತು. ಈ ನಾಲ್ಕು ವರುಷಗಳಲ್ಲಿ ಲಂಡನ್ ನಗರದ ಆಗುಹೋಗುಗಳಲ್ಲಿ ಹಲವಾರು ಬದಲಾವಣೆಗಳಾಗಿದ್ದವು. ಜಾಗತಿಕ ಮಟ್ಟದಲ್ಲಿ ಕಾಣಿಸಿಕೊಂಡ ಆರ್ಥಿಕ ದುಸ್ಥಿತಿಯಿಂದ ಬಳಲಿದ ಇತರ ಐರೋಪ ದೇಶಗಳಂತೆ ಯೂ.ಕೆ ಸಹಾ ಇನ್ನೂ ಚೇತರಿಕೆಯ ಹಾದಿಯಲ್ಲಿದ್ದು ಸಂಪೂರ್ಣವಾಗಿ ಎದ್ದು ನಿಂತಿಲ್ಲ. ಉದಾರ ಹಾಗೂ ಮುಕ್ತವಾದ ವಾತವರಣದಿಂದ ಕೂಡಿದ ಸಾಮಾಜಿಕ ವ್ಯವಸ್ಥೆಯಿಂದಾಗಿ ಇಲ್ಲಿ ಬಂದು ನೆಲಸಿದ ವಲಸಿಗರ ಸಂಖ್ಯೆಯೂ ಹೆಚ್ಚು. ಅದರಲ್ಲೂ ಏಷ್ಯಾ ಖಂಡದ ಜನರಿಂದ ತುಂಬಿರುವ ಲಂಡನ್ ನಗರ, ಮೊದಲಿನಿಂದಲೂ ಇತರ ದೇಶದ ಜನರನ್ನು ತನ್ನತ್ತ ಮುಕ್ತವಾದ ಮನಸ್ಸಿನಿಂದ ಸೆಳೆಯುತ್ತಿದ್ದದ್ದು ಐತಿಹಾಸಿಕ ಸತ್ಯ.

ಆರ್ಥಿಕ ದುಸ್ಥಿಯ ನಂತರದ ವರ್ಷಗಳಲ್ಲಿಇದರ ಪರಿಣಾಮಗಳು ಲಂಡನ್ ನಗರದ ಮೇಲೆ ಕಾಣಿಸಿಕೊಂಡಿತು. ಒಂದೆಡೆ ತಮ್ಮ ಅಸ್ತಿತ್ವ, ಬೇರುಗಳನ್ನು ಕಳೆದುಕೊಳ್ಳುತ್ತಿರುವ ಭೀತಿ, ಕಾಳಜಿ ಅಲ್ಲಿನ ಸ್ಥಳೀಯರಲ್ಲಿ ಮನೆಮಾಡುತ್ತಿದ್ದಂತೆ ಭೂತಾಕಾರವಾಗಿ ಬೆಳೆದು ನಿಂತಿದ್ದು ನಿರುದ್ಯೋಗ ಸಮಸ್ಯೆ. ತಮ್ಮ ಉದ್ಯೋಗಗಳನ್ನು ವಲಸಿಗರು ಕಸಿದುಕೊಳ್ಳುತ್ತಿದ್ದರೆಂಬಾ ಭಾವ ಇತ್ತೀಚಿನ ವರ್ಷಗಳಲ್ಲಿ ಅಲ್ಲಿನ ಸ್ಥಳೀಯರಲ್ಲಿ ಬೇರು ಬಿಟ್ಟಿತು. ಇಡೀ ದೇಶ ನಿರಾಶ ಭಾವದಲ್ಲಿ ಮುಳುಗಿ ಆತ್ಮವಿಶ್ವಾಸ ಕೊರತೆ ಎದ್ದು ಕಾಣುತ್ತಿತ್ತು. ಈ ಎಲ್ಲದರ ಹಿನ್ನಲೆಯಲ್ಲಿ ಒಲಂಪಿಕ್ಸ್ ಎಂಬ ಜಾಗತಿಕ ಮಟ್ಟದ ಕ್ರೀಡಾಕೂಟವನ್ನು ನಡೆಸಲು ಲಂಡನ್ ಸಮರ್ಥವೇ ಎಂಬ ಪ್ರಶ್ನೆಗಳು ಎದ್ದಿದ್ದವು. ಇವುಗಳ ಮಧ್ಯೆ ಕೂಟದ ಚಿಹ್ನೆ, ಪ್ರಮುಖ ಪ್ರಾಯೋಜಕರ ಬಗೆಗಿನ ಅಪಸ್ವರ ಮುಂತಾದ ಸಣ್ಣ ಪುಟ್ಟ ಅಡೆತಡೆಗಳೂ ಇದ್ದವು. ಅಷ್ಟು ಮಾತ್ರವಲ್ಲದೆ ೨೦೧೧ ರಲ್ಲಿ ಸಣ್ಣ ಕಾರಣವೊಂದಕ್ಕೆ ಪ್ರಾರಂಭವಾದ ಗಲಾಟೆ, ಗಲಭೆಯ ಸ್ವರೂಪ ಪಡೆದು ಒಂದು ವಾರದ ಕಾಲ ನಗರವನು ಅಲುಗಾಡಿಸಿದ್ದು, ಇಲ್ಲಿನ ಭದ್ರತಾ ವ್ಯವಸ್ಥೆಯ ಬಗ್ಗೆಯೂ ಪ್ರಶ್ನೆಗಳು ಏಳುವಂತೆ ಮಾಡಿತು.  

ಎಲ್ಲದಕ್ಕೂ ಉತ್ತರವೆಂಬಂತೆ ನಡೆದದ್ದು ೨೦೧೨ರ ಯಶಸ್ವಿ ಒಲಂಪಿಕ್ಸ್. ಕ್ರೀಡಾಕೂಟದ ಆರಂಭ ಸಮಾರಂಭದಲ್ಲೇ ಆಯೋಜಕರು ತಮ್ಮ ಮೊದಲ ಗೆಲುವನ್ನು ಕಂಡುಕೊಂಡರು ಎಂದರೆ ತಪ್ಪಾಗಲಾರದು. ಸ್ಲಮ್ ಡಾಗ್ ಮಿಲೇನಿಯರ್ ಖ್ಯಾತಿಯ ಚಿತ್ರ ನಿರ್ದೇಶಕ ಡ್ಯಾನಿ ಬಾಯ್ಲ್ ನೇತೃತ್ವದಲ್ಲಿ ನಡೆದ ಈ ಸಮಾರಂಭ ಯಾವುದೇ ರೀತಿಯಲ್ಲೂ ನಾಲ್ಕು ವರ್ಷದ ಹಿಂದಿನ ಚೀನಾ ಸಮಾರಂಭದ ಛಾಯೆಗೆ ಒಳಪಡದೆ, ಇಂಗ್ಲೆಂಡ್ ದೇಶದ ಸಂಸ್ಕೃತಿ, ಇತಿಹಾಸ, ಸ್ಥಳೀಯತೆ, ಬೆಳವಣಿಗೆಗಳ ಬಗೆ ಹೆಚ್ಚು ಒತ್ತು ನೀಡಿತು. ಇಡೀ ಇಂಗ್ಲೆಂಡ್ ದೇಶವೇ ಕ್ರೀಡಾಂಗಣದಲ್ಲಿ ಮರುರೂಪ ಮಡೆದಂತೆ ಭಾಸವಾಗಿ ಎಂಥಾ ಆಧುನಿಕತೆಗೂ ತನ್ನದೇ ಆದ ಬೇರು ಇದೆ ಎಂಬುದನ್ನು ಆಯೋಜಕರು ತೋರಿಸಿಕೊಟ್ಟರು. ಈ ಸಮಾರಂಭದ ಯಶಸ್ಸು ಇಡೀ ಕೂಟಕ್ಕೆ ಹೊಸ ಚೈತನ್ಯವನ್ನು ತಂದು ಕೊಟ್ಟಿತು ಎಂದರೆ ತಪ್ಪಾಗಲಾರದು. 

ನಂತರ ಆಯೋಜಕರು ಹಿಂದೆ ನೋಡುವ ಪ್ರಮೇಯವೇ ಬರಲಿಲ್ಲ. ಕೂಟ ಯಶಸ್ವಿಯಾಯಿತು. ಟಿ.ವಿ. ರೇಟಿಂಗ್‌ಗಳು ಗಗನಕ್ಕೇರಿದವು, ವ್ಯವಸ್ಥೆ ಅಚ್ಚುಕಟ್ಟಾಗಿತ್ತು, ಹೊಸ ದಾಖಲೆಗಳಾದವು, ಕ್ರೀಡಾ ಪಟುಗಳು ತಮ್ಮ ಎಂದಿನ ನೈಪುಣ್ಯ ಮೆರೆದರು.  ಜಮೈಕಾದ ಉಸೇನ್ ಬೋಲ್ಟ್ ಮಿಂಚಿನ ಸಂಚಾರ ಮೂಡಿಸಿದರೆ, ಅಮೆರಿಕಾ ತನ್ನ ಅಗ್ರಸ್ಥಾನವನ್ನು ಮತ್ತೆ ಭರ್ಜರಿಯಾಗೇ ಪಡೆದುಕೊಂಡಿತು. ನಮ್ಮ ಬೆಂಗಳೂರಿನಷ್ಟು ಸಣ್ಣ ಪುಟ್ಟ ದೇಶಗಳು ಸಹಾ ಪದಕ ಪಟ್ಟಿಯಲ್ಲಿ ಮಿಂಚಿದವು. ಚೀನಾದ ಕ್ರೀಡಾಪಟುಗಳು ತಮ್ಮ ಸಾಮರ್ಥ್ಯದಿಂದ ಅಚ್ಚರಿ ಮೂಡಿಸಿದರೂ, ತನ್ನ ಕ್ರೀಡಾಪಟುಗಳನ್ನು ಚೀನಾ ತಯಾರು ಮಾಡುವ ರೀತಿಯ ಬಗ್ಗೆ ಸಣ್ಣ ಅಪಸ್ವಗಳು ಎದ್ದಿವೆ. ಅದು ಕ್ರೀಡಾ ಮನೋಭಾವಕ್ಕೆ ವಿರುದ್ಧವಾದವು ಎಂಬ ಮಾತುಗಳು ಸಹಾ ಕೇಳಿ ಬಂದಿವೆ. ಅದೇನೆ ವಿವಾದಗಳಿದ್ದರೂ ಒಲಂಪಿಕ್ಸ್ ಕ್ರೀಡಾಕೂಟಕ್ಕೆ ತನ್ನದೇ ಆದ ವರ್ಚಸ್ಸಿದೆ, ಜನರ ಪ್ರೀತಿ ಇದೆ, ಇತಿಹಾಸವಿದೆ ಎಂಬ ಸತ್ಯವನ್ನು ಈ ಒಲಂಪಿಕ್ಸ್ ಮತ್ತೆ ನಿರೂಪಿಸಿದೆ. ಲಂಡನ್ ತನ್ನೆಲ್ಲಾ ಸಮಸ್ಯೆಗಳ ಮಧ್ಯೆಯೂ ತನ್ನ ಸಾಮರ್ಥ್ಯವನ್ನು ತೋರಿಸಿಕೊಟ್ಟಿತು. ಕಾರ್ಯದೆಡೆಗೆ ನಿಷ್ಠೆ ಹಾಗೂ ಇಚ್ಛಾ ಶಕ್ತಿಯ ಮುಂದೆ ಎಂಥಾ ಸವಾಲುಗಳು ಸಹಾ ನಗಣ್ಯ ಎಂಬುದನ್ನು ಜಗಕ್ಕೆ ತೋರಿಸಿತು. ಕ್ರೀಡಾ ಕೂಟ ಯಶಸ್ವಿಯಾದ ಮಾತ್ರಕ್ಕೆ ಅದರ ಸಮಸ್ಯೆಗಳೆಲ್ಲಾ ಕಳೆಯಿತುಯೆಂದಲ್ಲ. ಆದರೆ ಇದರಿಂದ ದೇಶಕ್ಕೆ ದೊರಕಿದ ಆತ್ಮ ವಿಶ್ವಾಸ, ಸರಿದು ಹೋದ ನಿರಾಶ ಭಾವ ಮಾತ್ರ ಬೆಲೆ ಕಟ್ಟಲಾಗದು. ಮುಂದೆ ಅದು ಅಲ್ಲಿನ ಸರ್ಕಾರಕ್ಕೆ, ಆರ್ಥಿಕತೆಗೆ ಹೊಸ ಚೈತನ್ಯ ನೀಡಬಹುದು. 

ಇನ್ನೂ ಭಾರತದ ವಿಷಯಕ್ಕೆ ಬಂದರೆ, ಇದು ಅತ್ಯಂತ ಯಶಸ್ವಿ ಒಲಂಪಿಕ್ಸ್. ಪದಕಗಳ ಸಂಖ್ಯೆ ಹಿಂದೆಂದಿಗಿಂತಲೂ ಹೆಚ್ಚು. ಸಂತೋಷ. ಪದಕ ಗೆದ್ದವರು ಅಭಿನಂದನಾರ್ಹರು. ಇವರ ನಡುವೆ ಭಾರಿ ಭರವಸೆ ಮೂಡಿಸಿದ ಟೆನ್ನಿಸ್ ಹಾಗೂ ಹಾಕಿಯ ವೈಫಲ್ಯ ಭಾರತದ ಕ್ರೀಡಾ ವ್ಯವಸ್ಥೆ ಕನ್ನಡಿಯಾಗಿತ್ತು. ಒಂದು ಕಾಲದಲ್ಲಿ ರಾಜನಂತೆ ಮೆರೆದ ಹಾಕಿಯಲ್ಲಿ ಕೊನೆಯ ಸ್ಥಾನ. ಕಾರಣ ಆ ಕ್ರೀಡೆಯ  ನಿರ್ವಹಣೆಯಲ್ಲಿನ ಲೋಪ ದೋಷ, ಭ್ರಷ್ಟಚಾರ. ಇನ್ನೂ ಟೆನ್ನಿಸ್ ಬಳಲಿದ್ದು ಒಳಜಗಳದಿಂದ. ಈ ಎರಡು ಕಾರಣಗಳು ನಮ್ಮ ಕ್ರೀಡಾ ವ್ಯವಸ್ಥೆಯ ಪ್ರತಿಬಿಂಬವಲ್ಲದೆ ಏನು? 

ಕೊನೆಯಲ್ಲಿ, ತನ್ನದೇ ಸಮಸ್ಯೆಗಳಿಂದ ಬಳಲುತ್ತಲೇ, ತನ್ನ ಆತ್ಮಸ್ಥೈರ್ಯ, ಇಚ್ಛಾ ಶಕ್ತಿ, ನಿಷ್ಠೆ, ಸಂಘಟನಾ ಶಕ್ತಿಯಿಂದ ಗೆದ್ದ ಲಂಡನ್ನಿನ ಯಶಸ್ಸು ಭಾರತಕ್ಕೆ ಏಕೆ ಸಾಧ್ಯವಾಗುವುದಿಲ್ಲ? ಎಲ್ಲಾ ರೀತಿಯ ಶ್ರೀಮಂತ ಸಂಪನ್ಮೂಲದ ನಡುವೆಯೂ ಜಾಗತಿಕ ಮಟ್ಟದ ಕಾರ್ಯಗಳಲ್ಲಿ ಭಾರತ ಇನ್ನೂ ಹಿಂದುಳಿದಿರುವುದಾದರೂ ಏಕೆ? ಕಾಮನೆವೆಲ್ತ್ ಕೂಟದಲ್ಲಿ ಕಂಡು ಬಂದ ಅಷ್ಟು ಪ್ರಮಾಣದ ಭ್ರಷ್ಟಾಚಾರಕ್ಕೆ ಮುಂದಾದರೂ ಕೊನೆಯಿದೆಯೇ? ಊಟ, ಬಟ್ಟೆ, ಶಿಕ್ಷಣ, ಉದ್ಯೋಗವೆಂಬ ಮೂಲಭೂತ ಸಮಸ್ಯೆಗಳೇ ಸಾಕಷ್ಟಿರುವಾಗ ಒಲಂಪಿಕ್ಸ್ ರೀತಿಯ ಕೂಟವನ್ನು ನಡೆಸಲು ಬೇಕಾದ ಸಾಮರ್ಥ್ಯ ಭಾರತದ ಪಾಲಿಗೆ ನಿಜಕ್ಕೂ ಮರಿಚಿಕೆಯೇ? ನಮ್ಮ ರಾಜಕೀಯ ಇಚ್ಛಾಶಕ್ತಿ ಇಷ್ಟೊಂದು ದುರ್ಬಲವೇ? ಮುಂತಾದ ಅನೇಕ ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಉಳಿದಿವೆ. ಭಾರತದ ಯುವ ಶಕ್ತಿ ಇದಕ್ಕೆ ಉತ್ತರಗಳನ್ನು ಕಂಡುಕೊಳ್ಳಬೇಕಾಗಿದೆ. ಆ ಸಮಯ ಬಲು ಬೇಗ ಬರಲಿದೆ ಎಂಬ ಭರವಸೆಯನ್ನು ಇಂಥಹ ಒಲಂಪಿಕ್ಸ್‌ಗಳು ತರುತ್ತಿರಲಿ.

- ಪ್ರಶಾಂತ್ ಇಗ್ನೇಷಿಯಸ್

No comments:

Post a Comment