Monday 13 August 2012

ಸ್ವಾತಂತ್ರ್ಯೋತ್ಸವದ ಕನವರಿಕೆಯಲ್ಲಿ…!!!



ಕೃಪೆ: ಗೂಗಲ್ ಇಮೇಜ್
ಮತ್ತೊಂದು ಸ್ವಾತಂತ್ರ್ಯೋತ್ಸವಕ್ಕೆ ನಮ್ಮ ದೇಶ ಅತೀ ಉತ್ಸುಕತೆಯಿಂದ ಸಜ್ಜುಗೊಳ್ಳುತ್ತಿದೆ. ಈ ಒಂದು ಆಚರಣೆಯನ್ನು ಸ್ಮರಣೀಯಗೊಳಿಸಲು ಹತ್ತು ಹಲವಾರು ಕಾರ್ಯಕ್ರಮಗಳು, ಸ್ಪರ್ಧೆಗಳು ಆಚರಣೆಯ ಪಟ್ಟಿಯನ್ನು ಸೇರಿಕೊಂಡಿವೆ. ನಮ್ಮ ಶಾಲಾಮಕ್ಕಳಂತೂ ಪೆರೇಡು ಪ್ರದರ್ಶನದ ತಾಲೀಮಿನ ಭರಾಟೆಯಲ್ಲಿ ಕಳೆದುಹೋಗಿಬಿಟ್ಟಿದ್ದಾರೆ. ವರ್ಷಕ್ಕೊಮ್ಮೆ ಎಂಬಂತೆ ನಮ್ಮ ಸರ್ಕಾರಿ ಕಟ್ಟಡಗಳು ಸ್ಪಚ್ಛಗೊಂಡು ಮದುವಣಿಗಿತ್ತಿಯಾಗಿ ಕಂಗೊಳಿಸುತ್ತಾ ತ್ರಿವರ್ಣ ಧ್ವಜಾರೋಣದ ಸಿಂದೂರಕ್ಕೆ ಕಾತರದಿಂದ ಕಾದು ಕುಳಿತ್ತಿವೆ. ಇನ್ನೊಂದು ಕಡೆ, ಆಚರಣೆಯ ಕೇಂದ್ರಬಿಂದು ದೆಹಲಿಯ ಕೆಂಪುಕೋಟೆ ದೇಶದ ಸಾಧನೆ, ದೇಶದ ಮುಂದಿರುವ ಪ್ರಮುಖ ಸಮಸ್ಯೆಗಳು ಹಾಗು ಪ್ರಗತಿ ಯೋಜನೆಗಳನ್ನು ಸಾರುವ ಪ್ರಧಾನ ಮಂತ್ರಿಯ ನಿಸ್ಸತ್ತ್ವದ ಭಾಷಣಕ್ಕೆ ಮತ್ತು ರಂಗು ರಂಗಿನ ಸಾಂಸ್ಕ್ರತಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲು ಜಾತಕ ಪಕ್ಷಿಯಂತೆ ಕಾದು ಕುಳಿತ್ತಿದೆ.  ತ್ರಿವರ್ಣದ ರಾಷ್ಟ್ರಧ್ವಜಗಳಂತೂ ಟ್ರಾಫಿಕ್ ಮತ್ತು ಮಳಿಗೆಗಳಲ್ಲಿ ಭರಾಟೆಯಿಂದ ಮಾರಾಟವಾಗುತ್ತಿವೆ. ಪುಷ್ಪ ಪ್ರದರ್ಶನ,,, ಕೇಕ್ ಪ್ರದರ್ಶನ, ಗಾಳಿಪಟಗಳ ಹಾರಾಟ ಹೀಗೆ ಪ್ರದರ್ಶನಗಳ ಮೇಲೆ ಪ್ರದರ್ಶನಗಳು ನಗರಗಳಲ್ಲಿ ಯಥೇಚ್ಛವಾಗಿ ಕಂಡುಬರುತ್ತಿವೆ. ಶಾಪಿಂಗ್ ಮಾಲ್‍ಗಳಂತೂ ತನ್ನಡೆ ಜನರನ್ನು ಆಕರ್ಷಿಸಿ ವ್ಯವಹಾರ ಕುದ್ರಿಸಿಕೊಳ್ಳಲು ಕಳ್ಳ ದೇಶಪ್ರೇಮವನ್ನು ನಿರ್ಭೀತಿಯಾಗಿ ತೋರ್ಪಡಿಸುತ್ತಿದ್ದರೆ ಭಾರತೀಯರಾದ ನಾವು ರಾಷ್ಟೀಯ ರಜಾದಿನವಾಗಿರುವ ಆಗಸ್ಟ್ ೧೫ಕ್ಕೆ ವಾಚ್‍ಮ್ಯಾನ್ ಬೆಳಗ್ಗಿನ ಜಾವಕ್ಕೆ ಕಾಯುವಂತೆ ಹೊಂಚು ಹಾಕುತ್ತಿದ್ದೇವೆ.
ಹೌದು ಬ್ರಿಟಿಷರ ಕಪಿಮುಷ್ಠಿಯಿಂದ ಸ್ವಾತಂತ್ರ್ಯವನ್ನು ಪಡೆದ ಐತಿಹಾಸಿಕ ಘಟನೆಯ ಆಚರಣೆ ಉತ್ತಮವಾದುದೆ, ಅವಶ್ಯಕವಾದುದೆ. ಆದರೆ, ಈ ಒಂದು ಆಚರಣೆ ಯಾಂತ್ರಿಕವಾಗಬಾರದು, ದಿನದ ಕಾರ್ಯಕ್ರಮಗಳ ಪಟ್ಟಿಯಲ್ಲಿ ಒಂದಾಗಬಾರದು. ಮಜಮಾಡಲು ಸಿಕ್ಕ ಒಂದು ದಿನದ ಸರ್ಕಾರಿ ರಜೆಯಾಗಬಾರದು. ಸ್ವಾತಂತ್ರವನ್ನು ದೊರಕಿಸಿಕೊಳ್ಳಲು ರಾಷ್ಟ್ರ ತುಳಿದ ಹಾದಿಯನ್ನು ನಮಲ್ಲಿ ನೆನಪಿಸಬೇಕು, ಸ್ವಾತಂತ್ರ್ಯ ದೊರಕಿಸಿಕೊಳ್ಳುವ ಹಾದಿಯಲ್ಲಿ ಮಡಿದ ಹುತಾತ್ಮ ಯೋಧರನ್ನು ಹೋರಾಟಗಾರರನ್ನು ನೆನಪಿಸಬೇಕು. ಸ್ವಾತಂತ್ರ್ಯ ದಕ್ಕಿಸಿಕೊಳ್ಳಲು ಅವರೆಲ್ಲರನ್ನು ಪ್ರೇರಪಿಸಿದ ಕಿಚ್ಚು ನಮ್ಮಲ್ಲಿ ತುಂಬಿಸಬೇಕು. ದೇಶಕ್ಕೆ ಅವರು ಕಂಡ ಕನಸ್ಸುಗಳು ನಮ್ಮದಾಗಿಸಬೇಕು. ಜತೆಗೆ ನಮ್ಮ ಇಂದಿನ ಪರಿಸ್ಥಿತಿಯಲ್ಲಿ ನಿಜವಾಗಲೂ ನಾವು ಸ್ವಾತಂತ್ರ್ಯರೇ? ಸ್ವಾಂತಂತ್ರ್ಯವನ್ನು ಅನುಭವಿಸಲು ಯೋಗ್ಯರೇ?  ಅಷ್ಟೆಲ್ಲ ತ್ಯಾಗ, ಬಲಿದಾನಗಳಿಂದ ಗಳಿಸಿದ ಸ್ವಾತಂತ್ರ್ಯದ ಬೆಲೆ ನಮಗಿವತ್ತು ಗೊತ್ತಿದೆಯೆ? ದಕ್ಕಿದ ಸ್ವಾತಂತ್ರ್ಯವನ್ನು ಜವಾಬ್ದಾರಿಯನ್ನು ಅನುಭವಿಸುತ್ತಿದ್ದೇವೆಯೇ? ಹೀಗೆ ಪ್ರಶ್ನೆಗಳನ್ನು ನಮ್ಮ ಮುಂದಿಡಬೇಕು. ಏಕೆಂದರೆ ಸ್ವಾತಂತ್ರ್ಯ ಪಡೆಯುವುದರ ಜತೆಗೆ ಜವಾಬ್ದಾರಿಯನ್ನು ಸಹ ಪಡೆದುಕೊಂಡಿದ್ದೇವೆ. ಸ್ವಾತಂತ್ರ್ಯವೂ ಒಂದು ಹಕ್ಕು ಮಾತ್ರವಲ್ಲದೆ ಜವಾಬ್ದಾರಿಯು ಹೌದು. ಈ ರೀತಿಯ ಪರಿಶೋಧನೆ, ಆತ್ಮಾವಲೋಕನ ನಮ್ಮ ಆಚರಣೆಯ ಅವಿಭಾಜ್ಯವಾಗದಿದ್ದರೆ, ನಮ್ಮ ಆಚರಣೆ ಬದಲಾವಣೆಯನ್ನು ತರದ, ನಿರುತ್ಸಾಹದ ಅರ್ಥಹೀನ ಆಚರಣೆಯಾಗಿ ಬಿಡುತ್ತದೆ.
ಇಂದಿನ ವಾಸ್ತವದಲ್ಲಿ ಈ ರೀತಿಯ ಆತ್ಮಾವಲೋಕನದ ಕ್ರಿಯೆ ಅತ್ಯಾವಶ್ಯಕವಾಗಿ ಬೇಕಾದುದ್ದೇ. ಏಕೆಂದರೆ ಇರಬೇಕಾದ ಜವಾಬ್ದಾರಿ ನಮ್ಮಲ್ಲಿ ಕಾಣುತ್ತಿಲ್ಲ. ಮಂಗನ ಕೈಯಲ್ಲಿ ಮಾಣಿಕ್ಯ ಕೊಟ್ಟಂತಾಗಿದೆ. ಮಗುವಿನ ಕೈಗೆ ಕತ್ತಿ ಕೊಟ್ಟಂತಾಗಿದೆ. ಕಡುಬಡತನ, ರೈತರ ಆತ್ಮಹತ್ಯೆಗಳು, ದೇಶದ ಮೂಲೆ ಮೂಲೆಗಳಲ್ಲಿ ಮೌಲ್ಯವಾಗಿಬಿಟ್ಟಿರುವ ಭ್ರಷ್ಟಚಾರವೆಂಬ ಅನಿಷ್ಟ ಪಿಡುಗು, ಜಾತಿ, ಧರ್ಮಗಳ ಆಧಾರಗಳ ಮೇಲೆ ಒಡೆದೋಗಿರುವ ಸಮಾಜ, ಜಾತಿ ರಾಜಕಾರಣ, ಭ್ರಷ್ಟ ರಾಜಕಾರಣಿಗಳು, ನಕ್ಸಲ್ ಸಮಸ್ಯೆ, ಅಗಿಂದಾಗ್ಗೆ ನಡೆಯುವ ಮತೀಯ ಗಲಭೆಗಳು, ತಾತ್ವಿಕ ಮತ್ತು ಸೈದಾಂತಿಕ ನೆಲೆಗಳನ್ನು ಕಳೆದುಕೊಂಡು ಕೇವಲ ಅಧಿಕಾರಕ್ಕಾಗಿ ಹಾತೊರೆಯುವ ರಾಜಕೀಯ ಪಕ್ಷಗಳು, ಭಯೋತ್ಪಾದನೆ, ಅಸಮಾನತೆ, ಜಾತಿ ಧ್ರುವೀಕರಣ ಹೀಗೆ ಒಂದೇ ಎರಡೇ ನೂರಾರು ಜಟಿಲ ಸಮಸ್ಯೆಗಳಿಂದ ನಮ್ಮ ದೇಶ ತುಂಬಿಹೋಗಿದೆ. ಅಸ್ಸಾಂನಲ್ಲಿ ನಡೆದ ಬೋಡೋ ಮೂಲನಿವಾಸಿಗಳು ಮತ್ತು ಮುಸ್ಲಿಂ ವಲಸಿಗರ ನಡುವಿನ ಹಿಂಸಾಚಾರ, ಸಂಸ್ಕೃತಿಯ ಸಂಕ್ಷರಣೆಯ ನೆಪದಲ್ಲಿ ಮಹಿಳೆಯರ ಮೇಲೆ ನಡೆದ ದೌರ್ಜನ್ಯ, ರಾಜಕೀಯ ಬೋನಿಗೆ ಬಿದ್ದ `ಅಣ್ಣ ಚಳವಳಿ’, ಸ್ಪಷ್ಟತೆಯಿಲ್ಲದ ರಾಮ್‍ದೇವ್ ಯೋಗಿಯ ನಿರಶನ, ಮಳೆಗಾಗಿ ಕೋಟ್ಯಂತರ ರೂ. ಖರ್ಚು ಮಾಡಿ ಪರ್ಜನ್ಯ ಪೂಜೆ ಮಾಡಿದ ಮೂರ್ಖ ಸರ್ಕಾರ, ದಿನಕ್ಕೊಂದೆಬಂತೆ ಹೊರ ಬರುತ್ತಿರುವ ಭ್ರಷ್ಟಚಾರ, ಸರ್ಕಾರದ ದುರಾಡಳಿತ..ಹೀಗೆ ಇತೀಚಿನ ಬ್ರೆಕಿಂಗ್ ನ್ಯೂಸ್‍ಗಳು, ಮುಂದೆ ಸಂಭವಿಸಲಿರುವ ಅದೋಗತಿಯನ್ನು ಸ್ಪಷ್ಟಪಡಿಸುವ ಎಚ್ಚರಿಕೆಯಗಂಟೆಗಳಾಗಿವೆ.
ಈ ಒಂದು ವಾಸ್ತವದ ಗ್ರಹಿಕೆ ನಮ್ಮ ಮುಂದಿನ ಕಾರ್ಯ ಸಂಕಲ್ಪಕ್ಕೆ ಅತ್ಯಗತ್ಯ. ಇಲ್ಲದೇ ಹೋದರೆ, ಪ್ರಧಾನಿ ಕೈಗೊಂಡಿರುವ ’ಎಲ್ಲರಿಗೂ ಮೊಬೈಲ್’ ಎಂಬ ಟೊಳ್ಳು ಕಾರ್ಯಕ್ರಮವೂ, ಹಾದಿ ತಪ್ಪಿದ ಅಣ್ಣ ಚಳುವಳಿಯೋ ಅಥವಾ ರಾಮ್‍ದೇವ್ ಯೋಗಿಯ ಕಾಮಿಡಿ ಶೋಗಳಂತಾಗಿಬಿಡುತ್ತದೆ ನಮ್ಮ ಆಚರಣೆ.  ಕೊನೆಗೆ, ರವೀಂದ್ರನಾಥ ಠಾಕೂರರ ಕವಿತೆಯೊಂದಿಗೆ ಸ್ವಾತಂತ್ರ್ಯೋತ್ಸವಕ್ಕೆ ಸಿದ್ಧಗೊಳೋಣ.
ಎಲ್ಲಿ ಮನಸ್ಸು ನಿರ್ಭಯವೋ, ಶಿರ ಎತ್ತರಕ್ಕೆ ನಿಮಿರಿ ನಿಂತಿದೆಯೋ
ಆ ಸ್ವಾತಂತ್ರ್ಯ ಸ್ವರ್ಗಕ್ಕೆ ಓ ತಂದೆ, ಎಚ್ಚರಗೊಳ್ಳಲ್ಲಿ ನನ್ನ ನಾಡು
ಎಲ್ಲಿ ಜ್ಞಾನ ಸ್ವತಂತ್ರವೋ
ಆ ಸ್ವಾತಂತ್ರ್ಯ ಸ್ವರ್ಗಕ್ಕೆ ಓ ತಂದೆ, ಎಚ್ಚರಗೊಳ್ಳಲ್ಲಿ ನನ್ನ ನಾಡು
ಎಲ್ಲಿ ಜಗತ್ತು ಸಂಕುಚಿತವಾದ ಮನೆಗೋಡೆಗಳಿಂದ ಒಡೆದು
ಚೂರುಚೂರಾಗಿಲ್ಲವೋ
ಆ ಸ್ವಾತಂತ್ರ್ಯ ಸ್ವರ್ಗಕ್ಕೆ ಓ ತಂದೆ ಎಚ್ಚರಗೊಳ್ಳಲ್ಲಿ ನನ್ನ ನಾಡು
ಎಲ್ಲಿ ಮನಸ್ಸನ್ನು ನೀನು ಸತತ ವಿಸ್ತರಣಶೀಲ ವಿಚಾರ ಕ್ರಿಯೆಗಳಿಗೆ
ಮುನ್ನಡೆಸುತ್ತೀಯೋ
ಆ ಸ್ವಾತಂತ್ರ್ಯ ಸ್ವರ್ಗಕ್ಕೆ ಓ ತಂದೆ, ಎಚ್ಚರಗೊಳ್ಳಲ್ಲಿ ನನ್ನ ನಾಡು
-ಜೋವಿ
Read more!

No comments:

Post a Comment