Saturday 4 August 2012


ಪ್ರೀತಿಯ ಅನು..
ಹತ್ತಾರು ದಿನಗಳಿಂದ ಕಾಡುತ್ತಿದ್ದ ಈ ಕತೆ.. ಅಕ್ಷರ ರೂಪ ಪಡೆದು ನಿನ್ನ ಸೇರಿದೆ. ಈ ಕತೆಗೆ ಶಿರ್ಷಿಕೆ ಕೊಡಲು ಸಹ ನನ್ನಿಂದಾಗಲಿಲ್ಲ. ಕತೆಯನ್ನು ಓದಿ ನೀನೇ ಒಂದು ಟೈಟಲ್ ತಿಳಿಸು.
ಇಂತಿ ನಿನ್ನ
ಜೋವಿ

ನನ್ನ ಹೆಸರು ಮಹಿಮೆ ದಾಸ್‍ ಅಂತಿದ್ದರೂ ನನ್ನ ಅವ್ವ ಅಪ್ಪ ಕರೆಯುತ್ತಿದಿದ್ದು ”ಮಹಿಮೆ” ಅಂತ. ನನ್ನ ಹೆಸ್ರಲ್ಲಿ ಯಾವ ಮಹಿಮೆ ಕಂಡರೂ ಗೊತ್ತಿಲ್ಲ .. ಕಾಲಕ್ರಮೇಣ ಮಹಿಮೆ  ನಾಪತ್ತೆಯಾಗಿ ಮೈಮೆ ಆಗಿತ್ತು. ಎಮ್ಮೆ ಆಗಿಲ್ಲವೆಂಬುವುದೇ ನನ್ನ ತೃಪ್ತಿ. ನಾಲ್ಕು ಮಕ್ಕಳಲ್ಲಿ ನಾನೇ ಕೊನೆಯವನು. ನನ್ನ ಅಣ್ಣಂದಿರು ಹಾಗು ಅಕ್ಕ ಶಾಲೆಯ ಮೆಟ್ಟಿಲೇರಿರಲಿಲ್ಲ. ನಾನು ಮಾತ್ರ ನನ್ನ ಅವ್ವಳನ್ನು ಕಾಡಿ ಬೇಡಿ ಶಾಲೆಗೆ ಸೇರಿಕೊಂಡಿದ್ದೆ. ಯಾವ ದೇವ್ರು ನನ್ನ ಅವ್ವ ಅಪ್ಪರಿಗೆ ಬುದ್ಧಿ ಕೊಟ್ರೋ ಗೊತ್ತಿಲ್ಲ ನನ್ನ ಬೇಡಿಕೆಯನ್ನು ಮನ್ನಿಸಿ ನನ್ನನ್ನು ಅವರು ಶಾಲೆಗೆ ಹಚ್ಚಿದ್ದರು. ಜತೆಗೆ ನಮ್ಮ ಊರಿನ ಕನ್ಯಾಸ್ತ್ರಿಗಳು ನನಗೆ ಅಗತ್ಯವಾಗಿದ್ದ ಪುಸ್ತಕಗಳನ್ನು, ಯೂನಿಫ಼ಾರ್ಮ ಬಟ್ಟೆಗಳನ್ನು ಉಚಿತವಾಗಿ ಕೊಟ್ಟು ಶಾಲೆಯ ಫೀಜು ಅವರೇ ತುಂಬಿಸಿ ನನ್ನನ್ನು ಓದಿಸುತ್ತಿದ್ದರು. ದೇವರು ಮನುಷ್ಯನಾಗುತ್ತಾನೆ ಎಂದು ಹೇಳುವುದು ಈ ಜನರಿಂದಲೇ ಏನೋ! ಅವರ ಪ್ರತಿಮೆಗಳು ನನ್ನ ಹೃದಯದಲ್ಲಿ ಭದ್ರವಾಗಿ ಅನಾವರಣಗೊಂಡಿಬಿಟ್ಟಿತ್ತು. ಇವರ ಸಹಾಯ ಹಸ್ತದ ಜತೆಗೆ ನನ್ನ ಎದೆಯಲ್ಲಿ ಕುದಿಯುತ್ತಿದ್ದ ಶಾಲೆ ಕಲಿಯಬೇಕೆಂಬ ಆಸೆಯ ಬೆಂಕಿ, ಶಾಲೆಗೆ ನಮಸ್ಕಾರ ಹೇಳುವ ನನ್ನ ಧೈರ್ಯವನ್ನು ಎಂದೂ ಭಸ್ಮಮಾಡಿಬಿಟ್ಟಿತ್ತು. ನನ್ನ ಜನರ ಹುಡುಗರು ಮಾತ್ರ ಶಾಲೆಯನ್ನು ಕಂಡರೆ ನೂರು ಮೈಲಿ ದೂರ ಓಡುತ್ತಿದ್ದರು. ಯವುದೋ ದೆವ್ವ ಅವರನ್ನು ಬೆನೆಟ್ಟಿ ಓಡಿಸಿಕೊಂಡು ಹೋದಂತೆ.

 ಹೌದು ನನ್ನ ಜನರೆಂದರೆ ಯಾರು? ಊರಿನಲ್ಲಿ ಜನ ಹೊಲೆಯರು ಅಂತ ಕರೆಯಲ್ಪಟ್ಟವರೆ ನನ್ನ ಜನ. ಇನ್ನೊಂದು ಪಂಗಡದ ಜನರನ್ನು ಮಾದಿಗರೆನ್ನುತ್ತಿದ್ದರು. ಏಕೆ ಈ ರೀತಿ ನಮ್ಮನ್ನು ಕರೆಯುತ್ತಾರೆಂದು ನನಗೆ ಗೊತ್ತಿಲ್ಲ. ಅವ್ವಳನ್ನು ಕೇಳಿ ಕೇಳಿ ಸುಸ್ತಾಗಿ ಕೊನೆಗೆ ಅದರ ಸಹವಾಸವೇ ಬಿಟ್ಟುಬಿಟ್ಟಿದೆ. ಅಪ್ಪನ ಬಳಿ ಈ ರೀತಿಯ ಪ್ರಶ್ನೆಗಳನ್ನು ಕೇಳೋ ಹಾಗಿಲ್ಲ. ಅವನು ಗೌಡರ ಮನೆಯಲ್ಲಿ ಸಂಬಳಕ್ಕಿದ್ದ ಕಾರಣ ಅವನು ಮನೆಗೆ ಬರುತ್ತಿದ್ದೆ ಅಪರೂಪ. ಬೆಳಿಗ್ಗೆ ಅಷ್ಟೋತ್ಕೆ ನಾಗಮ್ಮ ಹೋಟೆಲ್‍ನಲ್ಲಿದ್ರೆ, ಸಂಜೆ ಸರಾಯಿ ಅಂಗಡಿಗೆ ಸೇರಿಬಿಡುತ್ತಿದ್ದ. ಕುಡಿತ ಜಾಸ್ತಿಯಾದ್ರೆ.. ಬೀದಿಯನ್ನೇ ಮನೆಮಾಡಿಕೊಳ್ಳುಬಿಡುತ್ತಿದ್ದ. ಎಷ್ಟೋ ಸಲ ಅವ್ವ ಮತ್ತು ನಾನು ಕುಡಿದು ಚಿತ್ತಾಗಿ ರಸ್ತೆಯಲ್ಲಿ ಬಿದ್ದಿರುತ್ತಿದ್ದ ಅಪ್ಪನನ್ನು ಮನೆಗೆ ಹೊತ್ತು ತಂದು ಮಲಗಿಸುವಷ್ಟ್ರಲ್ಲಿ ಸಾಕುಸಾಕಾಗಿ ಹೋಗಿಬಿಡುತ್ತಿತ್ತು. ಇದು ಒಂದು ತರದ ಯಮಯಾತನೆಯಾಗಿತ್ತು ನನಗೆ. ಯಾಕೆ ನನ್ನ ಅಪ್ಪ ಗಂಟ್ಲು ತುಂಬ ಕುಡಿಯುತ್ತಿದ್ನೋ ಗೊತ್ತಿಲ್ಲ?

ನಾನು ಹೊಲೆಯ ಎಂದು ಖುಷಿಯಾಗುತ್ತಿದ್ದುದು SC/ST ವಿದ್ಯಾರ್ಥಿಗಳು ಅಫೀಸ್‍ಗೆ ಬಂದು ಸ್ಕಾಲರ್‌ಷಿಪ್ ಹಣ ತೆಗೆದುಕೊಳ್ಳಿ ಎಂಬ ನೋಟಿಸ್ ತರಗತಿಗಳಲ್ಲಿ ಓದುವಾಗ ಮಾತ್ರ. ಬಾಕಿ ಸಮಯದಲ್ಲಿ ಯಾಕಪ್ಪ ನಾನು ಈ ಜಾತಿಯಲ್ಲಿ ಹುಟ್ಟಿದೆ ಎಂದು ಬೇಸರವಾಗುತ್ತಿತ್ತು. ಇದಕ್ಕೆ ನಮ್ಮ ಜಾತಿ ಕಾರಣವಾಗಿರಲಿಲ್ಲ. ಊರಿನ ಜನರು ನಮ್ಮನ್ನು ಕಾಣುತ್ತಿದ್ದ ರೀತಿ. ನಮ್ಮ ಮನೆಗಳು ಊರಿನ ಮೂಲೆಯಲಿದ್ದವು. ಅವು ಮನೆಯ ಕೋಣೆಯ ಮೂಲೆಯಲ್ಲಿ ಪರಕೆಯಿದ್ದಂತೆ. ನಮ್ಮ ಮನೆಗಳ ಮುಂದೆ ಮತ್ತು ಅಕ್ಕಪಕ್ಕಗಳಲ್ಲಿ ಮೇಲ್ವರ್ಗ ಜನರ ತಿಪ್ಪೆಗಳ ಗುಡ್ಡೆಗಳು ಸಾಲಾಗಿರುತ್ತಿದ್ದವು. ಇದ್ದರಿಂದ ಹಸುಕೊಟ್ಟಿಗೆಯಲ್ಲಿ ಜೀವಿಸುವ ಅನುಭವವಾಗುತ್ತಿತ್ತು ನನಗೆ. ಜತೆಗೆ ನಮ್ಮ ಮನೆಗಳಲ್ಲಿ ಶೌಚಾಲಯಗಳಿರದ ಕಾರಣ ನಮ್ಮ ಚಿಕ್ಕ ಮಕ್ಕಳು ಮನೆಯ ಮುಂದೆ ಕಕ್ಕಸು ಮಾಡಿ ನಮ್ಮ ಕೇರಿಯನ್ನೇ ಹೊಲಸೆಬಿಸಿಬಿಡುತ್ತಿದ್ದರು. ಮೇಲ್ವರ್ಗ ಜನರು ನಮ್ಮ ಕೇರಿಗೆ ಬರುತ್ತಿದ್ದೆ ಅಪರೂಪ. ಅಪ್ಪಿತಪ್ಪಿ ನಮ್ಮ ಕೇರಿಗೆ ಬಂದರೆ ಮೂಗು ಮುಚ್ಚಿಕೊಳ್ಳುತ್ತಿದ್ದರು. ಇವರ ವರ್ತನೆ ಒಂದು ತರಹ ತಾವೇ ಹೂಸು ಬಿಟ್ಟು ಮೂಗು ಮುಚ್ಚಿಕೊಳ್ಳುವಂತ್ತಿರುತಿತ್ತು.

ನಮ್ಮ ಜನ ಶಾಲೆಗೆ ಹೋಗೋದೇ ಹೆಚ್ಚು. ಹೋದವರು ಯಾರು ೧೦ನೇ ತರಗತಿಯ ಲಕ್ಷ್ಮಣರೇಖೆಯನ್ನು ದಾಟುತ್ತಿರಲಿಲ್ಲ. ಅಪ್ಪಿ ತಪ್ಪಿ ೧೦ನೇ ತರಗತಿಯನ್ನು ಮುಟ್ಟಿದರೂ ಮುಂದಿನ ವಿದ್ಯಾಭ್ಯಾಸಕ್ಕೆ ಮನಸ್ಸು ಮಾಡುತ್ತಿರಲಿಲ್ಲ. ನನ್ನ ಜನರಿಗೆ ಶಾಲೆ ಎನ್ನುವುದು ಜೀರ್ಣಿಸಿಕೊಳ್ಳಲಾಗದ ಊಟವಾಗಿರುತ್ತಿತ್ತು. ನಮ್ಮ ತಂದೆ ತಾಯಿಗಳಿಗೂ ತಮ್ಮ ಮಕ್ಕಳು ಶಾಲೆಗೆ ಹೋಗುವುದು ಬೇಡವಾಗಿತ್ತು. “ನೀನ್ ಶಾಲೆಗೋಗಿ ತಂದ್ ಹಾಕೋದ್ ಅಷ್ಟ್ರಲ್ಲೇ ಇದೆ. ತಿಕ ಮುಚ್ಕೊಂಡು ಸಂಬ್ಳಕ್ಕೆ ಸೇರಿಕೋ” ಎಂಬುವುದು ಅವರ ಮಾತಾಗಿತ್ತು. ಆದರೂ ಸಿಸ್ಟರ್ಸ್ ಮತ್ತು ಪಾದ್ರಿಗಳ ಒತ್ತಾಯಕ್ಕೆ ಅರೆಮನಸ್ಸಿನಿಂದ ಮಕ್ಕಳನ್ನು ಶಾಲೆಗೆ ದಾಖಲಿಸುತ್ತಿದ್ದರು. ಇಂತಹ ಪರಿಸ್ಥಿತಿಯನ್ನು ಮೆಟ್ಟಿ ವಿದ್ಯಾವಂತನಾದವರು ತೀರಾ ಕಡಿಮೆ.

ಶಾಲೆಯಲ್ಲೂ ವಿದ್ಯಾರ್ಥಿಗಳಿರಲಿ ನಮ್ಮ ಕೆಲ ಟೀಚರ್ಸ್‍ಗಳು ಸಹ ನಮ್ಮನ್ನು ಕೀಳಾಗಿ ನೋಡುತ್ತಿದ್ದರು. ನೀವು ಹೊಲೆಯರು ನಿಮಗ್ಯಾಕೆ ವಿದ್ಯಾಭ್ಯಾಸ? ನಿಮ್ಮ ತಲೆಗೆ ವಿದ್ಯೆ ಹತ್ತೋದಿಲ್ಲ. ನೀವು ಕೂಲಿ ಮಾಡುವುದಕ್ಕೇ ಲಾಯಕು… ಕೆಲ ಟೀಚರ್ಸ್‍ಗಳಿಲ್ಲಿದ ನಮ್ಮ ಬಗ್ಗೆಗಿನ ಪೂರ್ವಗ್ರಹಿಕೆ ಇದಾಗಿತ್ತು. ನೀವು ಕೊಳಕರು… ದುರ್ನಾತವೆಂದು ನಮ್ಮ ಬಳಿಗೆ ಬಂದಾಗ ಮೂಗು ಮುಚ್ಚಿಕೊಳ್ಳುತ್ತಿದ್ದರು. ಅಪ್ಪಿತಪ್ಪಿಯೂ ನಮ್ಮನ್ನು ತಮ್ಮ ಹತ್ತಿರಕ್ಕೆಸೇರಿಸಿಕೊಳ್ಳುತ್ತಿರಲಿಲ್ಲ. ನಮ್ಮ ಉಕ್ತಲೇಖನಗಳನ್ನು ಬೇರೆ ವಿದ್ಯಾರ್ಥಿಗಳಿಂದಲೇ ಪರಿಶೀಲಿಸಿ ತಿದ್ದಿತೀಡುತ್ತಿದ್ದರು. ಹೌದು ನಾವು ಕೂಡ ಸ್ನಾನ ಮಾಡಿಕೊಳ್ಳುತ್ತಿದ್ದೇ ವಾರಕೊಮ್ಮೆ. ಕೆಲವೊಮ್ಮೆ ಅದೂ ಇಲ್ಲ. ಹೊಟ್ಟೆಗೆ ಸರಿಯಾಗಿ ಊಟ ಸಿಗುವುದೇ ಕಷ್ಟವಾಗಿರಬೇಕಾದರೆ.. ನಮಗೆಲ್ಲಿ ಬಾಚಣಿಗೆ, ಎಣ್ಣೆ ಪೌಡರ್ ಸಿಗಬೇಕು? ಶಾಲೆಗೆ ಧರಿಸಲು ಯೋಗ್ಯವಾದ ಬಟ್ಟೆಗಳೆಂದರೆ ವರ್ಷದ ಪ್ರಾರಂಭದಲ್ಲಿ ಕೊಡುತ್ತಿದ್ದ ಯುನಿಫ಼ಾರ್ಮ ಬಟ್ಟೆಗಳು. ನಮ್ಮ ಮಿತಿಮೀರಿದ ಉಪಯೋಗದಿಂದ ಅವುಗಳು ಸಹ ತ್ಯಾಪೆಗಳಿಂದ ತುಂಬಿಹೋಗುತ್ತಿದ್ದವು.

ನಮ್ಮ ಮನೆಗಳು ಚಿಕ್ಕದಾಗಿದ್ದವು. ಮನೆಗಳೆನ್ನುವುದಕ್ಕಿಂತ ಗೂಡುಗಳೆಂದರೆ ಎಷ್ಟೋ ವಾಸಿ. ಅದು ಯಾವುದೋ ಪುಣ್ಯವತಿ ಸಿಸ್ಟರ್ ಕಟ್ಟಿಸಿಕೊಟ್ಟ ಮನೆಗಳಂತೆ. ಸಿಮೆಂಟ್ ಕಾಣದ ಮಣ್ಣಿನ ಮನೆಗೆಳು. ಮನೆಗಳಿಗೆ ಇದುದ್ದು ಎರಡೇ ಕೋಣೆಗಳು. ಮಧ್ಯದ ದೊಡ್ಡದೊಂದು ಕೋಣೆ ಮತ್ತು ಚಿಕ್ಕ ಅಡಿಗೆ ಮನೆ. ಸಾಮಾನ್ಯವಾಗಿ ನಮ್ಮ ಮನೆಗಳಿಗೆ ಇರುತ್ತಿದ್ದು ಒಂದು ಕಿಟಕಿ ಹಾಗು ಒಂದ್ ಬಾಗಿಲು. ಗಾಳಿ ಬೆಳಕು ಸಹ ನಮ್ಮ ಮನೆಗಳ ಮೇಲೆ ಅಸ್ಪೃಶ್ಯತೆ ಸಾಧಿಸುತ್ತಿತೋ ಎನೋ,!! ಅವು ನಮ್ಮ ಮನೆಗಳನ್ನು ಪ್ರವೇಶಿಸುತ್ತಿರಲಿಲ್ಲ. ಪ್ರವೇಶಿಸಲು ಸರಿಯಾದ ಬಾಗಿಲು ಕಿಟಕಿಗಳಿದ್ದರೆ ತಾನೆ! ಈ ಕಾರಣದಿಂದ ನಮ್ಮ ಮನೆಗಳು ಕತ್ತಲ ಗುಹೆಗಳಂತಿದ್ದವು. ಕೆಲವರ ಮನೆಗಳಲ್ಲಿ ಮಾತ್ರ ವಿದ್ಯುತ್ತಿನ ದೀಪಗಳಿದ್ದವು. ಅದು ಸರ್ಕಾರದ ಭಾಗ್ಯಜ್ಯೋತಿಯ ಯೋಜನೆ ಫಲದಿಂದ.

ಶಾಲೆಯ ಸ್ವಚ್ಛತೆಯ ಕೆಲಸದಲ್ಲಿ ನಮ್ಮ ಜಾತಿಯ ಹುಡುಗರದೇ ಮೇಲುಗೈ. ಮನೆಯಲ್ಲಿ ಮಾಡುತ್ತಿದ್ದ ಕೆಲಸಗಳಿಗೆ ಹೋಲಿಸಿ ನೋಡಿದರೆ ಶಾಲೆಯ ಸ್ವಚ್ಛತೆಯ ಕೆಲಸ ಅಷ್ಟಕಷ್ಟೇ. ಆಟಗಳಲ್ಲಿ ಕೂಡ ನಾವು ಮುಂದು. ಈ ಕಾರಣದಿಂದ ಇತರ ಹುಡುಗರು ನಮ್ಮನ್ನು ಆಟವಾಡಲು ಉಪಯೋಗಿಸಿಕೊಳ್ಳುತ್ತಿದ್ದರು. ಶಾಲೆ ಪ್ರಾರಂಭವಾಗುವ ಮುಂಚೆ ಒಂದು ಸುತ್ತಿನ ಆಟ ಮುಗಿದರೆ, ಇನ್ನೊಂದು ಮಧ್ಯಾಹ್ನ ಊಟದ ಸಮಯಕ್ಕೆ. ಜೂಟಾಟ, ಪೋಲಿಚೆಂಡ್, ಮರದಕೋತಿ ..ನಾವು ಆಡುತ್ತಿದ್ದ ಆಟಗಳು. ಹೀಗೆ ಒಂದು ಮಧ್ಯಾಹ್ನ ತುಂಬಾ ಆಟವಾಡಿದ ಕಾರಣ ನಮಗೆಲ್ಲಾ ಸಿಕ್ಕಾಪಟ್ಟೆ ಬಾಯಾರಿಕೆಯಾಗಿತ್ತು. ಬಾಯಾರಿಕೆಯನ್ನು ತಣಿಸಿಕೊಳ್ಳಲು ನಾವು ಯಾವಾಗಲೂ ಹೋಗುತ್ತಿದ್ದ ಅಂತೋಣಿಯ ಮನೆಗೆ ಹೋದೆವು. ಅಂತೋಣಿಯ ಮನೆ ಶಾಲೆಯ ಪಕ್ಕದಲ್ಲಿತ್ತು. ಮನೆಯನ್ನು ತಲುಪಿದಾಕ್ಷಣ ನಮಗಾಗಿಯೇ ಇರಿಸಿದ ಪ್ರತ್ಯೇಕ ಲೋಟಗಳಿಗೆ ಹುಡುಕಾಡಿದೆವು. ಆ ದಿನ ನಮ್ಮ ಲೋಟಗಳು ಕಾಣೆಯಾಗಿದ್ದವು. ನೀರುನ್ನು ನೀಡುತ್ತಿದ್ದ ಅಂತೋಣಿ ಅವರ ಲೋಟಗಳಲ್ಲೇ ನಮಗೆ ನೀರುನ್ನು ಕೊಡಲು ಬಂದಾಗ, ಅವನ ತಾಯಿ ’ಅವ್ರ ಕೈಗೆ ಲೋಟ ಕೊಡಬೇಡ… “ಬೇಕಾದ್ರೆ… ಚೊಂಬಿನಿಂದ ಅವರ ಕೈಗೆ  ಮೇಲಿಂದ ನೀರು ಹಾಕು ಬೊಗಸೆಯಲ್ಲಿ ಕುಡಿಯಲ್ಲಿ” ಎಂದು ಅಂತೋಣಿಯನ್ನು ಬೈದರು. ನನಗೆ ಬೇಸರವಾಯ್ತು. ಒಂದು ತರ, ಬೆಕ್ಕಿನ ಮುಂದೆ ಇಲಿಗೆ ಬೇಸರವಾದಂತೆ. ಸುಮ್ಮನಾದೆ. ನನ್ನ ಎರುಡು ಕೈಗಳನ್ನು ಜೋಡಿಸಿ ಬೊಗಸೆ ಮಾಡಿ ಮೇಲಿನಿಂದ ಸುರಿದ ನೀರನ್ನು ಕುಡಿದು ಶಾಲೆಗೆ ಹೊರಟೆ.

ಆ ದಿನ  ಶಾಲೆಯಲ್ಲಿ ಪಾಠ ಕೇಳಲು ಸಾಧ್ಯವಾಗಲಿಲ್ಲ. ನಮ್ಮನ್ನು ಏಕೆ ಜನರು ತುಚ್ಛವಾಗಿ ಕಾಣುತ್ತಾರೆ ಎಂಬ ಪ್ರಶ್ನೆ ಕಾಡಲು ಪ್ರಾರಂಭಿಸಿತ್ತು. ಪ್ರಶ್ನೆಗಳ ಮೇಲೆ ಪ್ರಶ್ನೆಗಳು ನನ್ನಲ್ಲಿ ಹುಟ್ಟಿ ಉತ್ತರಕ್ಕೆ ಕಾಯುತ್ತಿದ್ದವು. ಇನ್ನೊಂದು ಕಡೆ, ಊರಿನಲ್ಲಿ ನಡೆಯುವ ಅಸ್ಪೃಶ್ಯತೆಯ ಒಂದೊಂದೆ ಇಣುಕು ಕಣ್ಣ ಮುಂದೆ ಪ್ರತ್ಯಕ್ಷವಾಗಲು ಪ್ರಾರಂಭಿಸಿತ್ತು. ಊರಿನಲ್ಲಿ ನಡೆಯುವ ಬೇಡದೆಲೆಯಲ್ಲಿ ನಮಗಾಗಿಯೇ ಒಂದು ಪ್ರತ್ಯೇಕ ಜಾಗವಿರುತ್ತಿತ್ತು. ಯಾವುದೇ ಕಾರಣಕ್ಕೂ ನಾವು ಮೇಲ್ಜಾತಿಯವರು ಅಡುಗೆ ಮಾಡುವ ಸ್ಥಳಕ್ಕೆ ಹೋಗುವಂತಿರಲಿಲ್ಲ. ಅವರು ಉಪಯೋಗಿಸುತ್ತಿದ್ದ ಪಾತ್ರೆಗಳನ್ನು ನಾವು ಮುಟ್ಟುವಂತಿರಲಿಲ್ಲ. ಸೌಹಾರ್ದತ್ವ, ಸಮಾನತೆ, ಸಹೋದರತ್ವ ಬೆಳೆಸುವ ಉದ್ದೇಶದಿಂದ ಪ್ರಾರಂಭಗೊಂಡ ಇಂತಹ ಬೇಡುದೆಲೆಗಳಲೇ ನಮ್ಮನ್ನು ಪ್ರತ್ಯೇಕವಾಗಿಸುವುದನ್ನು ಕಂಡು ಮನಸ್ಸು ರೋಸಿಹೋಗುತ್ತಿತ್ತು. ಅಸ್ಪೃಶ್ಯತೆಯೆಂಬ ಭೂತ ಸತ್ತ ಹೆಣವನ್ನು ಸಹ ಬಿಡುತ್ತಿರಲಿಲ್ಲ. ನಮ್ಮ ಜನರ ಸತ್ತಾ ದೇಹವನ್ನು ಹೂಳಲು ಸಹ ಸಮಾಧಿಯಲ್ಲಿ ಪ್ರತ್ಯೇಕ ಸ್ಥಳವಿತ್ತು. ಮೇಲ್ಜಾತಿಯರು ಉಪಯೋಗಿಸುತ್ತಿದ್ದ ಬಾವಿಯಿಂದ ನಾವು ನೀರು ಸೇದುವಂತಿರಲಿಲ್ಲ. ಒಟ್ಟಾರೆ, ನಮ್ಮ ಬದುಕು ಅಮಾನವೀಯವಾಗಿತ್ತು.

ನಮಗೆ ಭಾನುವಾರಗಳಲ್ಲಿ ನಡೆಯುತ್ತಿದ್ದ ಧರ್ಮೋಪದೇಶದಲ್ಲಿ ನಮ್ಮ ಟೀಚರ್ಸ ’ ನಾವು ದೇವರ ಪ್ರತಿರೂಪ, ದೇವರ ನಮ್ಮನ್ನೆಲ್ಲರನ್ನೂ ಸಮಾನರಾಗಿ ತನ್ನ ರೂಪದಲ್ಲಿ ಸೃಷ್ಟಿಸಿದ್ದಾನೆ..” ಎಂದು ಹೇಳುವಾಗ,,, ನನ್ನ ಹೃದಯ ಬೆಂಕಿಯಾಗುತಿತ್ತು. ಪಾದ್ರಿಗಳು ಪೂಜೆಯ ಸಮಯದಲ್ಲಿ ಬೋಧಿಸುತ್ತಿದ್ದು ಕೂಡ ನನಗೆ ಅರ್ಥಹೀನವಾಗಿ ಕಾಣುತ್ತಿತ್ತು. ಅದ್ದರಿಂದ ಬಲಿಪೂಜೆ ಹೋಗಲು ನಿಲ್ಲಿಸಿಬಿಟ್ಟು ಸಿಸ್ಟರ್ಸ್ ಮತ್ತು ಪಾದ್ರಿಗಳ ಕಣ್ಣುಗಳಲ್ಲಿ ಕೆಟ್ಟ ಹುಡುಗನಾದೆ. ನಾಸ್ತಿಕ ಎಂಬ ಗೌರಕ್ಕೆ ಪಾತ್ರನಾದೆ. ಹೌದು ಎಲ್ಲರೂ ಸಮಾನರು ಎಂದು ಸಾರುವ ಕೈಸ್ತಧರ್ಮದಲ್ಲಿ ಈ ರೀತಿಯ ಜಾತಿಪದ್ಧತಿ ಇರುವುದು ನಿಮಗೆ ನಂಬಲಾಸಾಧ್ಯವಾಗಬಹುದು. ಆದರೆ ಇದು ಸತ್ಯ. ಹೀಗೆ ನಾವು ಕಲಿಯುತ್ತಿದ್ದ ಪಾಠಗಳು, ಪಾಲಿಸುತ್ತಿದ್ದ ಧರ್ಮಚರಣೆಗಳು ನಮ್ಮ ಬದುಕಿನ ವಾಸ್ತವ ಒಂದೊಂದು ಸಂಬಂಧವಿಲ್ಲದಂತೆ ನಡೆಯುತ್ತಿದ್ದವು. ಆದ್ದರಿಂದ ಎಲ್ಲವೂ ನನಗೆ ಅರ್ಥಹೀನವಾಗಿ ಕಾಣುತ್ತಿತ್ತು. ನನಗೆ ಮಾತ್ರವಲ್ಲ ನನ್ನ ಜನರಿಗೂ ಕೂಡ. ಆದ್ದರಿಂದ ನನ್ನ ಜನರಿಗೆ ಧಾರ್ಮಿಕ ವಿಧಿಯಾಚರಣೆಗಳಲ್ಲಿ ಎಳ್ಳಷ್ಟೂ ಆಸಕ್ತಿಯಿರಲಿಲ್ಲ. ಅವರು ಕೂಡ ಬಲಿಪೂಜೆಗಳಿಗೆ ಹೋಗುತ್ತಿದ್ದೇ ಅಪರೂಪ.

ಹೀಗೆ ಒಂದು ದಿನ ಕೂಲಿಗೆ ಹೋಗಿದ್ದ ನನ್ನ ಅವ್ವ ತನ್ನೊಡನೆ ಮನೆಯ ಬೀಗದ ಕೀಲಿಯನ್ನು ಸಹ ಎತ್ತಿಕೊಂಡು ಹೋಗಿಬಿಟ್ಟಿದರಿಂದ ಮಧ್ಯಾಹ್ನ ಊಟಕ್ಕೆ ಪರದಾಡಬೇಕಾಯ್ತು. ಎಂದಿನಂತೆ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಶಾಲೆಗೆ ಬಂದಿದ್ದರಿಂದ ಮಳೆಗಾಲದಲ್ಲಿ ವಟರ್‍ಗುಟ್ಟುವ ಕಪ್ಪಯಂತೆ ನನ್ನ ಹೊಟ್ಟೆ ವಟರ್ ವಟರ್ ಎಂದು ಸದ್ದು ಮಾಡಲಾರಂಭಿಸಿತ್ತು. ಖಾಲಿ ಹೊಟ್ಟೆಯನ್ನು ಸುಮ್ಮನಿರಿಸಲು ಏನದರೂ ಮಾಡಲೇ ಬೇಕಾಯ್ತು. ಹೂಟ್ಟೆ ತುಂಬ ನೀರು ಕುಡಿದೆ. ಆದರೂ ನನ್ನ ಹೊಟ್ಟೆ ಸುಮ್ಮನಾಗಲಿಲ್ಲ. ಕೊನೆಗೆ ಅವ್ವಳ ಬಳಿಯಿಂದ ಕೀಲಿ ತಂದು ಊಟಮಾಡಲು ನಿರ್ಧಾರಿಸಿದೆ. ನಿರ್ಧಾರದಂತೆ ಹೊಲಕ್ಕೆ ಹೋಗಿ ಕೀಲಿ ತಂದು ಊಟ ಮಾಡಿ ಬರುವಷ್ಟರಲ್ಲಿ ಸ್ಪಲ್ಪ ತಡವಾಗಿತ್ತು. ಅವಸರದಲ್ಲೇ ಶಾಲೆಯ ಕಡೆಗೆ ಓಡ ತೊಡಗಿದೆ. ಶಾಲೆಯ ಗೇಟಿನ ಹತ್ತಿರ ಬಂದಾಗ ಸಿಕ್ಕಪಟ್ಟೆ ಬಾಯಾರಿಕೆಯಾಗಿ ನನ್ನ ಬಾಯಿ ಪೂರ್ತಿ ಒಣಗಿತ್ತು. ಅಭ್ಯಾಸದಂತೆ ಶಾಲೆಯ ಪಕ್ಕದಲ್ಲೇ ಇದ್ದ ಅಂತೋಣಿಯ ಮನೆಗೆ ನೀರು ಕುಡಿಯಲು ಹೋದೆ. ಮನೆಯ ಮುಂದಿನ ಕೋಣೆಯನ್ನು ತಲುಪುತ್ತಿದಂತೆ, ಅಂತೋಣಿಯ ತಾಯಿ ಸುಸ್ತಾಗಿ ನೆಲದ ಮೇಲೆ ಕುಸಿದು ಬೀಳುವುದನ್ನು ಕಂಡು ತಬ್ಬಿಬಾದೆ. ಮನೆಯಲ್ಲಿ ಕೂಡ ಯಾರು ಇರಲಿಲ್ಲ. ನನಗೆ ಏನು ಮಾಡಬೇಕೆಂದು ತೋಚಲಿಲ್ಲ. ಅವರಿಗೆ ನೀರು ತಂದು ಕುಡಿಸಬೇಕಾ? ಬೇಡವಾ? ವಿಪರೀತ ಇಕ್ಕಟ್ಟಿಗೆ ಸಿಕ್ಕಿಕೊಂಡೆ.  ಇದರ ನಡುವೆ, ಅವತ್ತು ಅಂತೋಣಿ ನನಗೆ ಅವನ ಲೋಟದಲ್ಲಿ ನೀರು ಕೊಡಲು ಬಂದಾಗ.. ’ಅವ್ರ ಕೈಗೆ ಲೋಟ ಕೊಡಬೇಡ.. “ ಎಂದು ಈ ತಾಯಿ ಬೈದ ಪ್ರಸಂಗವೂ ಕೂಡ ನನ್ನ ಮನಸ್ಸಿನಲ್ಲಿ ನುಸುಳಿಯಾರಂಭಿಸಿತ್ತು. ಏನು ಮಾಡುವುದೆಂದು ತೋಚದೆ ಕೊನೆಗೆ, ಧೈರ್ಯಮಾಡಿ ಮನೆಯ ಒಳಗೆ ಹೋಗಿ ನೀರು ತಂದು ಅವರ ಮುಖದ ಮೇಲೆ ನೀರನ್ನು ಚಿಮುಕಿಸಿ, ಕುಡಿಸಿ ಅವರನ್ನು  ಕುರ್ಚಿಯ ಮೇಲೆ ಕೂರಿಸಿದೆ. ಸಾವಕಾಶವಾಗಿ ಚೇತರಿಕೊಳ್ಳುತ್ತಿದ್ದ ಅಂತೋಣಿಯ ತಾಯಿಯ ಕಣ್ಣುಗಳು ಒಮ್ಮೆಲೇ ನನ್ನನ್ನು ನೋಡಲಾರಂಭಿಸಿದವು. ಅವಳ ಕಣ್ಣುಗಳು ಒಂದು ಕ್ಷಣಕಾಲ ಅಕ್ಕಪಕ್ಕ ತಿರುಗದೆ ನನ್ನ ಮೇಲೆ ನಿಶ್ಚಲವಾಗಿ ನೆಟ್ಟಿತ್ತು. ಸಿಟ್ಟುಕೊಂಡ ನೋಟವೋ? ಆಭಾರಿಯಾದ ನೋಟವೋ? ಗೊತ್ತಗಲಿಲ್ಲ. ಕಳ್ಳವಳ್ಳಗೊಂಡೆ.  ಈ ನೋಟದ ಅರ್ಥವಾದರೂ ಏನು? ಎಂಬ ಪ್ರಶ್ನೆ ನನ್ನನ್ನು ಕಾಡಲಾಂಭಿಸಿತ್ತು. ಒಟ್ಟಿನಲ್ಲಿ ಅವರ ನೋಟ ತೀಕ್ಷ್ಣವಾದ ಅಸಾಧರಣ ನೋಟವಾಗಿತ್ತು. ನೋಟದ ವಿಶ್ಲೇಷಣೆಯ ಗುಂಗಿನಲ್ಲೇ ಶಾಲೆ ಸೇರಿ ತಲೆ ತಗ್ಗಿಸಿ ತರಗತಿಯ ಬಾಗಿಲ ಬಳಿ ನಿಂತೆ. ತಗ್ಗಿ ಬಗ್ಗಿ ನಿಲ್ಲುವುದು ರಕ್ತಗತವಾಗಿಬಿಟ್ಟಿರುವ ನನಗೆ ತಗ್ಗಿ ನಿಲ್ಲಲು ಕಷ್ಟವಾಗಲಿಲ್ಲ . ಪೂಜೆಗೆ ಕರಡಿ ಬಿಟ್ಟಂತೆ ಬಂದ ನನ್ನನ್ನು ಟೀಚರ್ ಗುರಾಯಿಸಿ. …”ಈ… ಜನಗಳೇ ಹೀಗೆ… ಇವರನ್ನು ಯಾಕಾಗಿ ಶಾಲೆಗೆ ಸೇರಿಸ್ತಾರೋ…ಎಂದು ರಾಗ ಎತ್ತುತ್ತಿದಂತೆ.. ಟೀಚರ್‍ನನ್ನೇ ಸುಟ್ಟು ಭಸ್ಮಮಾಡುವಷ್ಟ ಕೋಪ ನನ್ನ ಮನಸ್ಸನು ತುಂಬಿತ್ತು. ಆದರೂ ಮರು ಮಾತನಾಡದೇ.. ಬಾಲ ಅಲ್ಲಾಡಿಸಿಕೊಂಡು ಯಜಮಾನನ ಮಾತು ಕೇಳುವ ನಾಯಿಯಂತೆ, ನಾನು ಕೂರುತ್ತಿದ್ದ ಸ್ಥಳದ ಕಡೆ ತಲೆ ತಗ್ಗಿಸಿಯೇ ಹೆಜ್ಜೆ ಹಾಕಿದೆ. ತರಗತಿಯಲ್ಲಿ ಎಲ್ಲರ ಕಣ್ಣು ನನ್ನ ಮೇಲೆ ನಾಟಿತ್ತು. ಮುಜುಗರದಿಂದಲೇ ನನ್ನ ಸ್ಥಳದಲ್ಲಿ ಕೂತು ಪಾಠ ಕೇಳಲು ಪ್ರಯತ್ನಿಸಲು ಪ್ರಾರಂಭಿಸಿದೆ…ಆದರೂ ಅಂತೋಣಿ ತಾಯಿಯ ನೋಟದ ಅರ್ಥವಾದರೂ ಏನು? ಎಂಬ ಪ್ರಶ್ನೆ ಉತ್ತರಕ್ಕಾಗಿ ಪೀಡಿಸತೊಡಗಿತ್ತು………….!!!


ಜೋವಿ
Read more!

No comments:

Post a Comment