Friday 17 February 2012

ಗೌರಮ್ಮಳ ಪ್ರೇಮದ ಮನೆ


ಪ್ರೀತಿಯ ಅನು..

ಹಾರೈಕೆಗಳು.  ನಮಗೊಂದು identity (ಅನನ್ಯತೆ) ಕೂಟ್ಟು ನಮ್ಮ ಬದುಕಿಗೆ ಕನಸ್ಸುಗಳನ್ನು, ಸುಂದರ ನೆನಪುಗಳನ್ನು, ಹೊಸ ಹೊಸ ಸಂಬಂಧಗಳನ್ನುತುಂಬಿಕೊಟ್ಟ ನಮ್ಮ ದೇಶ, ಮನೆ, ಭಾಷೆ, ಸಿದ್ಧಾಂತ, ಸಂಸ್ಕೃತಿಗಳ ಉಳಿವಿಗೆ ಏನೆಲ್ಲಾ ಪ್ರಯಾಸ ಪಡುತ್ತೇವೆ ಅಲ್ವಾ ಅನು. ಕೆಲವೊಮ್ಮೆ ನಮ್ಮ ಪ್ರಾಣವನ್ನೇ ಒತ್ತೆಯಿಟ್ಟು ಅವುಗಳ ಉಳಿವಿಗೆ ಹೋರಾಡುತ್ತೇವೆ. ಹೋರಾಟದಲ್ಲಿ ಸೋಲು ಕಟ್ಟಿಟ್ಟ ಬುತ್ತಿಯೆಂದು ಗೊತ್ತಿದ್ದರೂ, ಅದರಿಂದ ಯಾವುದೇ ರೀತಿಯ ಆರ್ಥಿಕ ಲಾಭವಿಲ್ಲವೆಂದು ತಿಳಿದಿದ್ದರೂ ಯಾವುದೋ ಒಂದು ಕಾಣದ ಅಗೋಚರ ಶಕ್ತಿಅವುಗಳ ಉಳಿವಿಗೆ ಹೋರಾಡಲು ಪ್ರೇರಪಿಸುವುದಲ್ಲದೆ ಕೊನೆಗೆ ನಮ್ಮ ಕೊರಳನ್ನೇ ಕೊಯ್ದು ಬಲಿಯಾಗಿಸುವ ಶಕ್ತಿಯನ್ನೇ ತುಂಬಿಬಿಡುತ್ತದೆ. ಇದೇ ಕತೆಯ ವಸ್ತು. ಕತೆಯ ಪ್ರಮುಖ ಪಾತ್ರಧಾರಿಯಾಗಿರುವಮನೆ ಜಾಗದಲ್ಲಿ ದೇಶ.. ಭಾಷೆ.. ಇತ್ಯಾದಿಗಳನ್ನು ನೀನು ಹಾಕಿ ಓದಿಕೊಂಡರೂ ನನ್ನ ಅಭ್ಯಂತರವಿಲ್ಲ. ದಯವಿಟ್ಟು ಕತೆಯನ್ನು ಓದಿ ಪ್ರತಿಕ್ರಿಯಿಸು.
ಇಂತಿ ನಿನ್ನವ
ಜೋವಿ

ಗೌರಮ್ಮಳ ಪ್ರೇಮದ ಮನೆ

ಗೌರಮ್ಮಗೆ ಹುಚ್ಚು ಇರ್ಬೇಕು.. ಮಳೀಗೆ .ಮನಿ  ಅಗೋ ಈಗೋ ಅಂತಿರಬೇಕಾದ್ರೆಮನಿ ಒಳ್ಗೆ ದೆವ್ವ ಕೂತಂಗೆಕೂತ್ತಾವ್ಳೆ..” ಪಕ್ಕದ ಮನೆಯ ನಾಗಮ್ಮ ಕಳವಳದಿಂದ ಹೇಳಿದ ಮಾತು ಮನೆಯ ಮಧ್ಯಭಾಗದ ಕೋಣೆಯಲ್ಲಿ ಮಂಡಿಗಳ ಮೇಲೆ ತನ್ನ ತಲೆಯ ಇಡೀ ಭಾರವೆನ್ನೆಲ್ಲಾ ಹಾಕಿ ಕಲ್ಲಂತೆ ಕುಳಿತಿದ್ದ ಗೌರಮ್ಮಗೆ ಕೇಳದೆ ಇರಲ್ಲಿಲ್ಲ. ಆದರೂ ನಾಗಮ್ಮಳ ಮಾತಿಗೆ ಪ್ರತಿಕ್ರಿಯಿಸುವ ಗೋಜಿಗೆ ಹೋಗದೆ, ಧಾರಕಾರವಾಗಿ ಸುರಿಯುತ್ತಿದ್ದ ಮಳೆಯನ್ನು ಕೋಪದಿಂದ ದಿಟ್ಟಿಸುತ್ತಾ ದೂಷಿಸತೊಡಗಿದಳು. “ ಹುಚ್ಚು ಮಳೆ ಇಂಗೇ ಮುಂದುವರ್ದೆ... ನನ್ ಮನೀ ಗತಿಯೇನು? ದೇವ್ರೆ ಹುಚ್ಚು ಮಳೆನಾ ನಿಲ್ಲಿಸಪ್ಪ ಎಂದು ಮನಸ್ಸಿನಲೇ ಬೇಡಿಕೊಳ್ಳುತ್ತಿದ್ದಂತೆ, ಪ್ರತಿ ಮಂಗಳವಾರ ನಡೆಯುತ್ತಿದ್ದ ಉಳಿತಾಯ ಸಂಘದ ನೆನಪಾಗಿಇವತ್ತು ಏನಾದ್ರು ಮಾಡಿ ಸಂಘದಿಂದ ಸಾಲ ಕೇಳ್ಲೇ ಬೇಕುಇಲ್ದಿದ್ರೆ ನನ್ ಮನೀ ಉಳಿಯೋದಿಲ್ಲ”  ಎಂಬ ಸಂಕಲ್ಪದಿಂದ ಸಂಘದ ಮನೆ ಕಡೆಗೆ ದೌಡಾಯಿಸಿದಳು.

ಸುರಿಯುತ್ತಿರುವ ಭಾರೀ ಮಳೆಯಿಂದ ಊರಿನ ಜನರು ತತ್ತರಿಸಿ ಹೋಗಿದ್ದರು. ಹಲವು ಮನೆಗಳು ನೆಲಕಚ್ಚಿತ್ತು. ಊರಿನ ಕೃಷಿ ಭೂಮಿ ಜಲಾವೃತ್ತವಾಗಿ ಲಕ್ಷಂತರ ರೂ ಮೌಲ್ಯದ ಬೆಳೆ ನಷ್ಟವಾಗಿತ್ತು. ವ್ಯಾಪಕ ಅನಾಹುತಗಳು ಸಂಭವಿಸುತ್ತಿದ್ದರೂ ಜನ ಸಾಮಾನ್ಯರು ಹಾಗು ಆಸ್ತಿಪಾಸ್ತಿ ರಕ್ಷಣೆಗೆ ಸರಕಾರವು ಯಾವುದೇ ರೀತಿಯ ಮುನ್ನೆಚ್ಚರಿಕೆ ಕ್ರಮಕೈಗೊಳ್ಳದಿರುವುದು ಜನರನ್ನು ಸಿಟ್ಟಿಗೆಬ್ಬಿಸಿತ್ತು. ಮುಂದಿನ ೪೮ ಗಂಟೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂಬ ಮುನ್ನೆಚ್ಚರಿಕೆಯನ್ನು ಹವಾಮಾನ ಇಲಾಖೆಯ ನಿರ್ದೇಶಕರು ಕೊಟ್ಟಿದ್ದರು.

ಕಡೆ ಗೌರಮ್ಮಳ ಚಿಕ್ಕ ಚೊಕ್ಕ ಮಣ್ಣಿನ ಮನೆ ಹತ್ತಾರು ದಿನಗಳಿಂದ ಒಂದೇ ಸಮನೆ ಧಾರಾಕಾರವಾಗಿ ಸುರಿಯುತ್ತಿದ್ದ ಮಳೆಯ ಹೊಡೆತಕ್ಕೆ ಸಿಕ್ಕಿ ಈಗೋ ಆಗೋ ಎಂಬುದರಲ್ಲಿತ್ತು. ಅಗಲೇ ಮನೆಯ ಹಿಂಭಾಗ  ಕುಸಿದು ಪೂರ್ತಿ ಮನೆ ಕುಸಿದು ಬೀಳುವ ಮುನ್ಸೂಚನೆ ಸಹ ನೀಡಿತ್ತು. ಮನೆಯ ಬಲಬದಿಯ ಗೋಡೆಯಂತೂ ಮಳೆಯಲ್ಲಿ ಸಂಪೂರ್ಣ ತೊಯ್ದು ಶಿಥಿಲಗೊಂಡು, ನೆಲವನ್ನು ಕಚ್ಚಿಕೊಳ್ಳುವುದರಲ್ಲಿತ್ತು.  ತಕ್ಷಣ ಮನೆಯ ರಿಪೇರಿಯ ಕೆಲಸ ಆಗಲೇಬೇಕಾಗಿತ್ತು. “ಏನಾದ್ರು ಮಾಡಿ ನನ್ನ ಮನೀನ ಉಳಿಸಿಕೊಡಪ್ಪಎಂದು ಗೋಗರೆಯುತ್ತಿದ್ದ ಗೌರಮ್ಮಳಿಗೆನಿನ್ನ ಮನೆಯ ರಿಪೇರಿಗೆ ಐದ್ರಿಂದ ಹತ್ತು ಸಾವಿರ ರೆಡಿ ಮಾಡ್ಕೊಂಡ್….ನನ್ನ ಕರಿ”  ಕಡ್ಡಿ ಮುರಿದಂಗೆ  ಗಾರೆಯವ ಹೇಳ್ಬಿಟ್ಟಿದ್ದ. ಕೂಲಿಮಾಡಿ ಬದುಕುತ್ತಿದ್ದ ಗೌರಮ್ಮಗೆ ಇಷ್ಟೂ ಹಣವಾದರೂ ಎಲ್ಲಿಂದ ಬರಬೇಕು. ಗಂಡ ಮತ್ತು ತಾನು ಕೂಡಿಸಿಟ್ಟಿದ ದುಡ್ಡು ಆಗಲೇ ಗಂಡನ ಅಸ್ಪತ್ರೆ ಖರ್ಚು, ಅಂತ್ಯಕ್ರಿಯೆಗಂತಾ ಖರ್ಚಾಗಿ ಗೌರಮ್ಮ ಬರಿಕೈಯಲ್ಲಿದ್ದಳು. ಕಡೇ, ಇಳೀವಯಸ್ಸಿನಲ್ಲಿದ್ದ ಗೌರಮ್ಮಗೆ ಯಾರು ತಾನೇ ಸಾಲ ಕೊಟ್ಟಾರು? ಆಕಾಶಕ್ಕೆ ಏಣಿ ಹಾಕುವ ಪ್ರಯತ್ನವಾದರೂ ಗೌರಮ್ಮ ಧೃತಿಗೆಟ್ಟಿರಲ್ಲಿಲ್ಲ.

 ಗೌರಮ್ಮಳಿಗೆ ತನ್ನ ಮನೆ ಕಲ್ಲುಮಣ್ಣಿನಿಂದ ಕಟ್ಟಿದ ನಿರ್ಜೀವ ಕಟ್ಟಡವಾಗಿರಲಿಲ್ಲಗಂಡನ ಸ್ಮಾರಕವೇ ಅದಾಗಿತ್ತು. ದಾಂಪತ್ಯ ಜೀವನದ ಪ್ರತಿಯೊಂದು ಹೆಜ್ಜೆಗಳನ್ನು ದಾಖಲಿಸಿದ ಬದುಕಿನ ಗ್ರಂಥಾಲಯವೇ ಅದಾಗಿತ್ತು. ಗಂಡನ ಪ್ರೀತಿಯ ಮಾತುಗಳನ್ನು,.. ತನ್ನ ಮಕ್ಕಳ ಅಕ್ಕರೆಯ ನಗುಅಳಲು ತೊದಲು ಮಾತುಗಳು ಪ್ರತಿಧ್ವನಿಸುವ ಒಲವಿನ ಆಲ್ಬಂಬೇ ಅದಾಗಿತ್ತು. ತಮ್ಮ ಮಕ್ಕಳ ಒಳಪಿನ ಭವಿಷ್ಯಕ್ಕೆ ಯೋಜನೆಗಳನ್ನು ನೇಯಿಸಿದ ಮುದ್ದಿನ ಗೂಡಾಗಿತ್ತು.  ದನ ಕರುಗಳಿಗೆ, ಹೆಂಚುಗಳ ಸಂದುಗಳಲ್ಲಿ ಆಗಾಗ ನುಸುಳುತ್ತಿದ್ದ ಬೆಕ್ಕು, ಅಮೇ ಎಂದು ಸದಾ ಕಿರುಚಿಕೊಳ್ಳುತ್ತಿದ್ದ ಕುರಿಮೇಕೆಗಳಿಗೆ, ಮನೆಯ ಅಲಾರಂ ಗಡಿಯಾರಗಳಾಗಿದ್ದ ಕೋಳಿಗಳಿಗೆ ಸೂರನ್ನು ಒದಗಿಸಿ ಬಾಳ್ವೆಮಾಡಿಸಿದ ಆತ್ಮೀಯ ಭಾವವೇ ಅದಾಗಿತ್ತು. ಆದ್ದರಿಂದ ತನ್ನ ಮುರುಕ ಮನೆಯನ್ನು ಕಳೆದುಕೊಳ್ಳುವುದೆಂದರೆ, ತನ್ನ ಬದುಕಿನ ಭವ್ಯಇತಿಹಾಸವನ್ನೆ ಕಳೆದುಕೊಳ್ಳುವುದ್ದಾಗಿತ್ತು ಗೌರಮ್ಮಳಿಗೆ. ಬದುಕಿನ ಮಧುರ ಕ್ಷಣಗಳನ್ನು ನೆನಪಿಸುವ ಉತ್ಪತ್ತಿಯನ್ನೇ ಕೊನೆಗೊಳಿಸುವುದ್ದಾಗಿತ್ತು. ಒಂದು ಕಾಲದಲ್ಲಿ  ಬಾಡಿಗೆ ಮನೆಗಳ ಒಡತಿಯರು  ಚಿಕ್ಕ ಪುಟ್ಟ ಕಾರಣಗಳಿಗೆಲ್ಲಾ ನೀಡುತ್ತಿದ್ದ ಉಗ್ರ  ಹಿಂಸೆಗಳಿಂದ ಬೇಸತ್ತು ಬಾಡಿಗೆ ಮನೆಯೆಂದರೆ ವಾಕರಿಕೆ ಹುಟ್ಟುವಂತಾಗಿದ್ದ ಸಂದರ್ಭದಲ್ಲಿ ಹಠಕ್ಕೆ ಬಿದ್ದು ಗಂಡ ಹೆಂಡತಿ ಸೇರಿ ಬಹು ಅಸೆಯಿಂದ ಕಟ್ಟಿಕೊಂಡ ಸೂರಾಗಿತ್ತು. ಕೆಳಮನೆ ರಾಜಣ್ಣ, ಗೌರಮ್ಮ ಎಂಬ ಒಂದು identity ಕೊಟ್ಟಿದಲ್ಲದೆ, ಊರಿನಲ್ಲಿ ಅವರ ವಾಸ್ತವವನ್ನು ಸ್ಥರೀಕರಣಗೊಳಿಸಿ, ಊರಿನ ಜನರ ಕಣ್ಣು ಬಾಯಿಗಳನ್ನು ಅವರತ್ತ ಸೆಳೆದಿದ್ದೇ ಮನೆ. ಮನೆಕಟ್ಟಿದ ಹೊಸದರಲ್ಲಿ ಊರಿನ ಕೆಲ ಮಂದಿ  ಮನೆಯನ್ನು ನೋಡಿ ಹೊಟ್ಟೆಕಿಚ್ಚುಪಟ್ಟಿದ್ದು ಗೌರಮ್ಮಳ ಗಮನಕ್ಕೆ ಬಾರದೆ ಇರಲಿಲ್ಲ. ಇಂತಹ ಭವ್ಯ ಪರಂಪರೆಯ ಮನೆಯನ್ನು ನೆಲಸಮಮಾಡಿಬಿಡಬೇಕು ಎಂಬ ಹಠಕ್ಕೆ ಬಿದ್ದಂತೆ ಮಳೆ  ತೀವ್ರವಾಗಿ ಸುರಿಯುತ್ತಿತ್ತು.

ಮೊದಲು ನೀನು ತೆಗೆದುಕೊಂಡಿರುವ ಸಾಲವನ್ನು ತೀರಿಸಿಆಮೇಲೆ ನೀನು ಲೋನ್ ಪಡೆಯಬಹುದುಸಂಘದ ಅಧ್ಯಕ್ಷರು ಹೇಳುತ್ತಿದ್ದಂತೆಕಷ್ಟ ಕಾಲದಲ್ಲಿ ಆಗದ ನಿಮ್ಮ ಸಂಘ ಎಂತ ಸಂಘನಿಮ್ ಸಂಘನ್ನೂ ಬೇಡನಿಮ್ಮ ಸಾಲಾನೂ ಬೇಡ..” ಭ್ರಮನಿರಸನಗೊಂಡ ಗೌರಮ್ಮ ಸಂಘದ ಮನೆಯಿಂದ ರೌದ್ರತೆಯಿಂದ ಹೂರಬಂದು ಮನೆಯ ಕಡೆ ಹೆಜ್ಜೆ ಹಾಕಿದಳು.

 “ತನ್ನ ಮನೆಯ ರಿಪೇರಿ ಮಾಡಿಕೊಡಲು ತನ್ನ ಹಿರಿಮಗ ಶಂಕರಪ್ಪನನ್ನು ಹೇಗಾದರೂ ಮಾಡಿ ಒಪ್ಪಿಸಲೇ ಬೇಕು ಸಂಕಲ್ಪ ಹೊತ್ತು ಶಂಕರಪ್ಪನ ಮನೆಯ ಕಡೆ ಹೆಜ್ಜೆ ಹಾಕಿದಳು ಗೌರಮ್ಮ. ಕೊನೆ ಪ್ರಯತ್ನ ಫಲ ನೀಡುತೋ ಇಲ್ಲವೋ ಎಂಬ ಗೊಂದಲದಲ್ಲೇ ಶಂಕರಪ್ಪನ ಮನೆ ಮುಟ್ಟಿದಳು. ಅಯ್ಯಪ್ಪಸ್ವಾಮಿ ಮಾಲೆ ಹಾಕಿದ್ದರಿಂದ ಶಂಕರಣ್ಣ ರಾತ್ರಿ ನಡೆಯಬೇಕಾಗಿದ್ದ ಭಜನೆಯ ಕಾರ್ಯಕ್ರಮಕ್ಕೆ ಸಿದ್ಧಗೊಳ್ಳುತ್ತಿದ್ದ. “ ಮಗಾ ಮನೆ ಕುಸಿಯುತ್ತಿದೆ, ಏನಾದ್ರು ಮಾಡಿ ಒಂಚೂರು ಮನೆ ರಿಪೇರಿ ಮಾಡ್ಸೋ.. ನಿನ್ ದಮಯ್ಯಗೌರಮ್ಮ ಗೋಗರೆಯುತ್ತಿದ್ದಂತೆ, “ ಮನೆ ಬಿಟ್ಟು ನನ್ ಮನೆಗೆ ಬಂದು ಸೇರ್ಕೋ ಅಂತಾ ಎಷ್ಟು ಸಲ ಹೇಳೋದ್ನನ್ ಮಾತ್ ಎಲ್ಲಿ ಕೇಳ್ತೀಯ.. ಮುರುಕು ಮನೆಯಲ್ಲಿ ಏನಿದೆ ಅಂತಾ?” ಎಂದು ಶಂಕ್ರಣ್ಣ ಕೂಗಾಡುತ್ತಿದ್ದಂತೆ.. “ಲೋ ಆಗಲ್ಲ ಕಣೋ.. “ “ನಿನ್ ಪುರಾಣ ಸಾಕುನಾಳೆ ನಾನು ಅಯ್ಯಪ್ಪ ಸ್ವಾಮಿಗೆ  ಹೋಗುತ್ತಿದೇನೆ.. ನಾನು ವಾಪಸ್ಸು ಬಂದ್ಮೇಲೆ ನೋಡ್ತೀನಿ..” ಎಂಬ ಶಂಕ್ರಣ್ಣನ ಮಾತು ಗೌರಮ್ಮಳ ಕಿವಿಗೆ ಬೀಳುತ್ತಿದ್ದಂತೆ.. “ಲೋ ಹುಚ್ಚು ಮಳಿಗೆ ನಮ್ ಮನಿ ಉಳಿತ್ತದಾ.. ಅಯ್ಯಪ್ಪಗೆ ಇನ್ನೊಂದು ವರ್ಷ ಹೋದ್ರೆ ಅಯಿತ್ತುಏನಾದರೂ ಮಾಡಿ .. ಮನೆ ಉಳಿಸಿ ಕೊಡೋ…” ಎಂಬ ಗೌರಮ್ಮಳ ಕಳಕಳಿಯ ಮಾತುಗಳು ಬಂಡಮೇಲೆ ನೀರುಬಿದ್ದಂತೆ ಶಂಕ್ರಣ್ಣನ ಮನದ ಬಂಡೆಯನ್ನು ಮುಟ್ಟದೆ ಹರಿದೊಯ್ತು. ಬಾಡಿಗೆ ಮನೆಗಳಿಗೆ ದುಡ್ಡು ಕಟ್ಟಿ ಕಟ್ಟಿ ಬೇಸೆತ್ತು ಮನೆ ಸೇರಿಕೊಂಡಿದ್ದ ಗೌರಮ್ಮಳ ಎರಡನೆಯ ಮಗ ಕುಳ್ಳ ಸುರಿಯುತ್ತಿರುವ ಹುಚ್ಚು ಮಳೆಗೆ ಮನೆ ಕುಸಿಯುವುದೆಂದು ಗೊತ್ತಾಗಿ.. ಹೆಂಡತಿ ಮತ್ತು ಮಗುವಿನ ಜತೆ ಗಂಟುಮೂಟೆ ಕಟ್ಟಿಕೊಂಡು ಗೌರಮ್ಮಳ ಮನೆಯಿಂದ ಓಟಕ್ಕಿತ್ತಿದ್ದ. ಏನು ಮಾಡುವುದೆಂದು ತೋಚದೆ ಮಂಕಾಗಿಬಿಟ್ಟಿದ್ದ ಗೌರಮ್ಮಳ ಮನಸ್ಸು ಮಾತ್ರ ಮನೆಯನ್ನು ಕಳೆದುಕೊಳ್ಳಲು ಸುತರಾಂ ಒಪ್ಪಲಿಲ್ಲ.

ಗೌರಮ್ಮಳ ಮನೆಯ ಅಸ್ತಿತ್ವಕ್ಕೆ ಗಂಡಾಂತರ ಬಂದಿದ್ದು ಇದೇ ಮೊದಲ ಸಲವಲ್ಲ. ಬೃಹತ್ತಾದ ಸ್ಟಾರ್ ಅಪಾರ್ಟಮೆಂಟ್‍ನ ಮೂಲದಾರಿಗೆ ಅಡ್ಡಗಾಲಾಗಿದ್ದ ಗೌರಮ್ಮಳ ಮನೆಯ ಖರೀದಿಗೆ ಮಾತುಕತೆ ನಡೆದಿತ್ತು. ಮಾರುಕಟ್ಟ ಬೆಲೆಗಿಂತ ಎರಡು ಪಟ್ಟು ಬೆಲೆಕೊಟ್ಟು ಮನೆಯನ್ನು ಕೊಂಡುಕೊಳ್ಳಲು ಗೌರಮ್ಮಳ ಬೆನ್ನಹತ್ತಿದ ಅಪಾರ್ಟಮೆಂಟ್‍ನ ಮಾಲೀಕನಿಗೆ, “ ನಿಮ್ ಮನಿ ದಾರಿಗೊಸ್ಕರ ನಮ್ ಮನಿ ಕೆಡಹುಬೇಕಾ… ನನ್ ಜೀವ ಇರೋತನ ಇದ್ರ ಆಸೆ ಬಿಟ್‍ಬುಡಿ” ಎಂದು ಬಾಣ ಬಿಟ್ಟಾಗೆ ಮಾತಾಡಿ ಓಡಿಸಿದ್ದಳು.

ಕೊನೆಗೆ, ತನ್ನ ಮನೆಯನ್ನು ಉಳಿಸಿಕೊಳ್ಳುವ ಆಸೆಯನ್ನು ಜೀವಂತವಾಗಿಸಲು ಗೌರಮ್ಮ ಹೋಗಿದ್ದು ಊರಿನ ಚೇರ್ಮನ್ ಮನೆಗೆ. ಸ್ವಾಮಿ ಏನಾದರೂ ಮಾಡಿ ನನ್ನ ಮನೆಯನ್ನು ಉಳಿಸಿಕೊಡಿ.. ದರಿದ್ರ ಮಳೆಗೆ ನನ್ನ ಮನೆ ಆಗೋ ಈಗೋ ಎಂಬಂತ್ತಿದೆಎಂದು ಕೇಳಿಕೊಳ್ಳಿತ್ತಿದ್ದಂತೆ, ಈಗ ನಾನು ಪಂಚಾಯ್ತಿ ಎಲೆಕ್ಷನ್ನಲ್ಲಿ ಬ್ಯುಸಿ ಇದ್ದೀನಿ..ಎಲೆಕ್ಷನ್ ಮುಗಿದ ನಂತರ ಮನೆನಾ ರಿಪೇರಿ ಮಾಡಿಸಿಕೊಡುತ್ತಿನಿ ಭಯ ಪಡಬೇಡ  ರಾಜಕಾರಣಿಯ ಶೈಲಿಯಲ್ಲೇ ಭರವಸೆ ಕೊಡುತ್ತಾ ತನ್ನ ಕಾರನ್ನು ಏರಿ ಜಾಗ ಖಾಲಿಮಾಡಿದ. “ಅಲ್ಲಿ ತನ್ಕ ನನ್ ಮನೆ ಉಳಿಯೊಲ್ಲಚುನಾವಣೆಯ ಸಂದರ್ಭದಲ್ಲಿ ಮಾತ್ರ ಸಾಮಾನ್ಯ ಜನರ ಅಶೋತ್ತರಗಳಿಗೆ ತೆರೆದುಕೊಳ್ಳಬೇಕೆಂಬ ಕಟ್ಟುಪಾಡಿಗೊಳ್ಳಪಟ್ಟಿದ್ದ ಚೇರ್ಮಮನನ್ನ ಕಿವಿಗಳಿಗೆ.. ಗೌರಮ್ಮನ ಮಾತು  ಕೇಳಲ್ಲೇ ಇಲ್ಲ. ಅವನಿಗೆ ಅದರ ಅವಶ್ಯಕತೆಯೂ ಇರಲಿಲ್ಲ.

ತನ್ನ ಮನೆಯನ್ನು ಉಳಿಸಿಕೊಳ್ಳಲು ಮಾಡಿದ ತನ್ನ ಸರ್ವ ಪ್ರಯತ್ನಗಳು ನೀರಿನ ಮೇಲೆ ಮಾಡಿದ ಹೋಮದಂತಾಗಿಗೌರಮ್ಮ ಏನು ಮಾಡುವುದೆಂದು ತೋಚದೆ, ತನ್ನ ಮನೆಯ ಮುಂಭಾಗ ಕೋಣೆಯ ಮಧ್ಯಭಾಗದಲ್ಲಿ ಮಂಕಾಗಿ ಕೂತಳು. ಅಸಹಾಯಕ ಸ್ಥಿತಿಯಲ್ಲಿ ಗೌರಮ್ಮ ಧಾರಕಾರವಾಗಿ ಸುರಿಯುತ್ತಿದ್ದ ಮಳೆಯನ್ನು ದಿಟ್ಟಿಸುತ್ತಾ..ಶಪಿಸುತ್ತಾಕೂತಳು.

ತನ್ನ ಮನೆಯ ಬಗೆಗಿನ ಚಿಂತೆ..ಗೌರಮ್ಮಳ ಊಟ ನೀರನ್ನ ಕಬಳಿಸಿತ್ತಲ್ಲದೆ.. ಹತ್ತಾರು ದಿನಗಳ ನಿದ್ದೆಯನ್ನು ಸಹ ಕಿತ್ತು ತಿಂದಿತ್ತು.  ನಿದ್ದೆಯ ಬರವನ್ನು ಕಂಡಿದ್ದ  ಗೌರಮ್ಮಳ ಕಣ್ಣುಗಳು ಕ್ಷಣಮಾತ್ರದಲ್ಲೇ ನಿದ್ದೆಗೆ ಸೋಲಲಾರಂಭಿಸಿತ್ತು. ಇಡೀ ದೇಶವೇ ಹತ್ತಿ ಉರಿದರೂ.. ಎಚ್ಚರವಾಗದಂತಹ ಭಯಂಕರ ನಿದ್ದೆ ಗೌರಮ್ಮಳನ್ನು ತಬ್ಬಿದ್ದರಿಂದ..ಕ್ಷಣಮಾತ್ರಲ್ಲೇ ಗೌರಮ್ಮ ಕೋಣೆಯ ನೆಲದ ಮೇಲೆ ಮೈಮೇಲೆ ಪ್ರಜ್ಞೆಯೇ ಇಲ್ಲದಂತೆ ಬಿದ್ದುಕೊಂಡಳು. ವರುಣನಿಗೆ ಗೌರಮ್ಮಳ ಪ್ರಾರ್ಥನೆ ಕೇಳಿದಂತೆ ಕಾಣಲಿಲ್ಲ. ಗೌರಮ್ಮಳ ಮನೆಯ ಮೇಲೆ ಜಿದ್ದಿಗೆ ಬಿದ್ದವನಂತೆ ಧಾರಾಕಾರವಾಗಿ ಇನ್ನೂ ಸುರಿಯುತ್ತಲೇ ಇದ್ದ.

ದುರದೃಷ್ಟವಶಾತ್ ಧಾರಾಕಾರವಾಗಿ ಸುರಿಯುತ್ತಿದ್ದ ಮಳೆಯ ವಿರುದ್ಧ ಹೋರಾಡಲು ಸಾಧ್ಯವಾಗದ ಗೌರಮ್ಮ ಮನೆಯ ನಿಶಕ್ತ ಮಣ್ಣು ಗೋಡೆಗಳು ಮಧ್ಯ ರಾತ್ರಿಯಲ್ಲಿ ಕೈಚೆಲ್ಲಿ.. ಕ್ಷಣಾರ್ದದಲ್ಲೇ ಕುಸಿದು ನೆಲಸಮವಾಗಲಾಂಭಿಸಿದವು. ನಿದ್ದೆಗೆ ಮಾರುಹೋಗಿದ್ದ ಗೌರಮ್ಮಳಿಗೆ ಏನಾಗುತ್ತಿದೆ ಎಂದು ಅರಿವಿಗೆ ಬರುವಷ್ಟರಲ್ಲಿ ಮನೆಯ ಗೋಡೆಗಳು ಮತ್ತು ಮೇಲ್ಛಾವಣಿ ನಿರ್ಧಯವಾಗಿ ತಟತಟನೆ ಅವಳ ಮೇಲೆ ಕಳಚಿ ಬೀಳತೊಡಗಿದ್ದವು.  ಗೌರಮ್ಮಅಯ್ಯೋ ನನ್ ಮನೆ”  ಎಂಬ ಹತ್ತಾಶ ಕೂಗು ನಿದ್ರೆಯಲ್ಲಿ ತಲ್ಲೀನವಾಗಿದ್ದ ಊರಿಗೆ ಕೇಳಿಸಲೇ ಇಲ್ಲ.  

ಬೆಳಿಗ್ಗೆ  ನೆಲಸಮವಾಗಿದ್ದ  ಗೌರಮ್ಮಳ ಮನೆಯ ಮುಂದೆ ಹತ್ತಾರು ಜನ ಸೇರಿದರು. ಕೆಲವರು ಮನೆಯ ಅವಶೇಷಗಳಡಿ ಸಿಲುಕಿ ಸತ್ತು ಬಿದ್ದಿದ್ದ ಗೌರಮ್ಮಳನ್ನು ಹೊರತೆಗೆಯಲು ಯತ್ನಿಸುತ್ತಿದ್ದರು. ಕೆಲ ಸಂಘದ ಮಹಿಳೆಯರು ಇದು ಗೌರಮ್ಮಳ ಮೂಡತನದ ಪರಮ ಮಿತಿಯೆಂದು ದೂಷಿಸತೊಡಗಿದ್ದರು. ನಡು ನೀರಿನಲ್ಲಿ ಬಿಟ್ಟುಓಡಿ ಹೋಗಿದ್ದ ಗೌರಮ್ಮಳ ಎರಡನೆಯ ಮಗ ಕುಳ್ಳ ಸರ್ಕಾರದಿಂದ ಯಾವ ರೀತಿ ಪರಿಹಾರ ಹಣಪಡೆದು ತನಗೊಂದು ಸೂರನ್ನು ಕಟ್ಟಿಸಿಕೊಳ್ಳಬಹುದೆಂಬ ಯೋಚನೆಯಲ್ಲೇ ಮುಳುಗಿಬಿಟ್ಟಿದ್ದ. ಊರಿನ ಚೇರ್‍ಮನ್ ಗೆ ಸಿಕ್ಕಿದ ಅವಕಾಶವನ್ನು ಶಕ್ತಿಮೀರಿ ಬಳಸಿಕೊಳ್ಳಲು ಗೌರಮ್ಮಳ ಅಂತ್ಯಕ್ರಿಯೆಗೆ ಓಡಾಡುತ್ತಿದ್ದ. ಅವನ ಓಡಾಟ ಒಂದು ತರ ಚುನಾವಣೆ ಪ್ರಚಾರದಂತೆ ಕಾಣಿಸತೊಡಗಿತ್ತು. ಅಯ್ಯಪ್ಪನ ದರ್ಶನಕೆಂದು ಪ್ರಯಾಣ ಬೆಳೆಸಬೇಕಿದ್ದ ಮತ್ತೊಬ್ಬ ಮಗ, ಅಮ್ಮಳ ಕೊನೆಯ ಋಣವನ್ನು ತೀರಿಸಿ ಬಿಡಬೇಕೆಂದು ಅವಳ ಉತ್ತರಕ್ರಿಯೆಗೆ ಸಿದ್ಧತೆ ಮಾಡತೊಡಗಿದ.

ಧಾರಾಕಾರವಾಗಿ ಸುರಿಯುತ್ತಿದ್ದ ಮಳೆಯಿಂದಾಗಿ ಗೌರಮ್ಮಳ ಅಂತ್ಯಕ್ರಿಯೆ ಸರಸರನೆ ಮುಗಿಯುತ್ತಿದಂತೆ, ಅಂತ್ಯಕ್ರಿಯೆಗೆ ಬಂದಿದ್ದ ಕೆಲವರಂತೂ  “ಇದು ಗೌರಮ್ಮಳ ಹುಚ್ಚುತನವೇ ಸರಿ” ಎಂದು ದೂಷಿಸುತ್ತಲೇ ಅವಳ ಆಕಾಲಿಕ ಸಾವಿಗೆ ಮಮ್ಮಲ ಮರುಗಿದರು.
 ಇನ್ನೊಂದು ಕಡೆ, ಗೌರಮ್ಮಳ ಸಾವು, ನಿಷ್ಕ್ರೀಯವಾಗಿದ್ದ ಸರಕಾರದ ಆಡಳಿತ ಯಂತ್ರವನ್ನು ಬಡಿದ್ದೆಚ್ಚರಿಸಿ, ಅತಿವೃಷ್ಟಿ ಮಳೆಯಿಂದ ಅಸ್ತಿಪಾಸ್ತಿ, ಮನೆಮಠ ಬೆಳೆಗಳನ್ನು ಕಳೆದುಕೊಂಡ ದುರ್ದೈವಿಗಳಿಗೆ ಪರಿಹಾರದ ಕಾರ್ಯವನ್ನು  ಚುರುಕುಗೊಳಿಸಿವಂತೆ  ಸರ್ಕಾರದ ಕಿವಿಹಿಂಡಿತ್ತು. ಜತೆಗೆ ಸ್ಟಾರ್ ಅಪಾರ್ಟಮೆಂಟ್‍ನ ದಾರಿಗೆ ತಡೆಯಾಗಿದ್ದ ಗೌರಮ್ಮಳ ಮನೆ ಮತ್ತು ಜಾಗವನ್ನು ಸ್ವಾಧೀನ ಮಾಡಿಕೊಳ್ಳುವ ಪ್ರಕ್ರಿಯೆ ಪುನರಾಂಭವಾಗಿ, ವ್ಯವಹಾರ ಕುದುರುವ ದೃಢವಾದ ಸೂಚನೆ ಕಂಡುಬಂತು.

ಹತ್ತಾರು ದಿನಗಳ ನಂತರ, ವರುಣನ ಅರ್ಭಟದಿಂದಾದ ವ್ಯಾಪಕ ಅನಾಹುತಗಳ ಬಗ್ಗೆ ವರದಿ ಮಾಡ ಬಂದಿದ್ದ ಪತ್ರಕರ್ತನ ಪ್ರಶ್ನೆಗೆ  ಗೌರಮ್ಮಳ ಪಕ್ಕದ ಮನೆಯ ಹೆಂಗಸು ಮನೀ ಮ್ಯಾಲೆ ಅವಮ್ಮನಿಗೆ ಅಂದೆಂತ ಹುಚ್ಚು ಪ್ರೀತಿ ನಾ ಕಾಣೆ, ಮನೆಯ ಜತೆಯಲ್ಲೇ ಸತ್ತು ಹೋದಳು”… ಹೇಳಿದ ಮಾತು ಪತ್ರಕರ್ತನಿಗೆ ಅರ್ಥವಾಯಿತೋ ಗೊತ್ತಿಲ್ಲ !!!!

ಜೋವಿ
Read more!

5 comments:

  1. ಗೌರಮ್ಮನ ಮನೆಯ ಮೇಲಿನ ಪ್ರೀತಿ ಕೇವಲ ಸೂರಿಗೋಸ್ಕರವಾಗಿರದೆ ಅದರ ಹಿಂದಿರುವ ಸವಿನೆನಪುಗಳನ್ನು ಬಿಚ್ಚಿಡುತ್ತದೆ.ಇಲ್ಲಿನ ಕಥೆ, ಕಥಾನಾಯಕ/ನಾಯಕಿಯೋಡನೆ ಮನೆಯ ಸವಿನೆನಪುಗಳು ಹೊರಹೊಮ್ಮಿರುವುದು ಗೌರಮ್ಮನ ಅಸಹಾಯಕತೆ ಹಾಗೂ ಸಮಾಜದಲ್ಲಿನ ವಿಧವೆಯರ ಪರಿಸ್ಥಿತಿಯನ್ನು ಸಹ ಎಳೆ ಎಳೆಯಾಗಿ ಬಿಚ್ಚಿಡುತ್ತದೆ.

    ReplyDelete
  2. Prashanth Ignatius21 February 2012 at 18:11

    Good one Jovi!!!!

    ReplyDelete
  3. This blog is nice❤...... but @Prashanth anna you can add on some more feature to this blog ❤.

    ReplyDelete
  4. Nice one❤ ❤ ❤ ❤ ❤........but u can add some more add on feature to this blog:)

    ReplyDelete
  5. Anand, thanks for the comment & suggestion. We will certainly add more things. you too can contribute to the blog!!!!

    ReplyDelete