Friday 17 February 2012

ಶಾಲೆಗಳಲ್ಲಿ ಭಗವದ್ಗೀತೆ - ಆವಶ್ಯವೇ? ಅನಿವಾರ್ಯವೇ?


ಶಾಲೆಗಳಲ್ಲಿ ಭಗವದ್ಗೀತೆಯನ್ನು ಅಳವಡಿಸುವುದನ್ನು ವಿರೋಧಿಸುವವರು ದೇಶದಲ್ಲಿ ಇರಲು ಅನರ್ಹರು ಎಂಬರ್ಥದ ಮಾತುಗಳನ್ನು ನಮ್ಮ ರಾಜ್ಯ ಸರ್ಕಾರದ ಶಿಕ್ಷಣ ಸಚಿವರು ತಿಂಗಳುಗಳ ಹಿಂದೆ ಹೇಳಿದಾಗ ಆಶ್ಚರ್ಯವಾಗಿತ್ತು. ಈಗ ಮುಖ್ಯ ಮಂತ್ರಿಗಳೇ ಭಗವದ್ಗೀತೆ ಅಳವಡಿಕೆಯ ಬಗ್ಗೆ ಮಾತನಾಡಿರುವುದು ಭಾರಿ ಚರ್ಚಗೆ ಗ್ರಾಸವಾಗಿದೆ. ಸರ್ಕಾರದ ನಿರ್ಧಾರವನ್ನು ವಿರೋಧಿಸುತ್ತಿರುವವರು ವಿರೋಧಿಸುತ್ತಿರುವುದು ಜಾತ್ಯಾತೀತವಾಗಿರಬೇಕಾದ ಶಿಕ್ಷಣದಲ್ಲಿ ಒಂದು ಧರ್ಮದ ಗ್ರಂಥವನ್ನು ಮಕ್ಕಳ ಮೇಲೆ ಹೇರುವುದನ್ನೇ ಹೊರತು ಭಗವದ್ಗೀತೆಯ ಮೇಲಲ್ಲ. ಈಗಾಗಲೇ ಧರ್ಮ, ಜಾತಿಯ ಹೊಡೆತಕ್ಕೆ ಸಿಕ್ಕು ಒದ್ದಾಡುತ್ತಿರುವ ನಮ್ಮ ದೇಶದಲ್ಲಿ, ಇದೆಲ್ಲದರಿಂದ ಮುಕ್ತವಾಗಿಬೇಕಾದ ಮಕ್ಕಳ ಮನಸುಗಳು ಶಾಲೆಯಿಂದಲೇ ಜಾತಿ ಧರ್ಮಗಳ ಚೌಕಟ್ಟಿಗೆ ಒಳಗಾಗುವುದು ಬೇಡ ಎಂಬುದೇ ವಿರೋಧದ   ಕೂಗು.


ಭಗವದ್ಗೀತೆಯಲ್ಲಿ ಬದುಕಿನ ಮೌಲ್ಯಗಳ, ಸತ್ಯದ ದರ್ಶನವಿದೆ, ಪಾಠವಿದೆ ಎನ್ನುವುದು ಸತ್ಯವಿರಬಹುದು. ಆದರೆ ಮಾತುಗಳು ಇತರ ಧರ್ಮದ ಗ್ರಂಥದಲ್ಲಿಯೂ ಇದೆ, ಇನ್ನೂ ಹೆಚ್ಚಾಗಿಯೇ ಇರಬಹುದು ಎಂಬುದೂ ಅಷ್ಟೇ ಸತ್ಯ. ಎಲ್ಲಾ ಧರ್ಮಗಳು, ಗುರುಗಳೂ ಸಹಾ ತಮ್ಮ ತಮ್ಮ ಗ್ರಂಥವನ್ನು ಶಾಲೆಗಳಲ್ಲಿ ಅಳವಡಿಸಬೇಕೆಂದು ಕೇಳ ಹೊರಟರೆ ಶಾಲೆಗಳು ಶಾಲೆಗಳಾಗಿ ಉಳಿಯದೇ ಧರ್ಮ ಭೋಧನೆಯ ಮಠ ಮಂದಿರಗಳಾಗುವ ಅಪಾಯವೇ ಹೆಚ್ಚು.ಎಲ್ಲಾ ಧರ್ಮವನ್ನು ಸಮಾನಾಗಿ ಕಾಣಬೇಕೆಂಬ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಸರ್ಕಾರಗಳು ನಡೆದುಕೊಂದು ಬರುತ್ತಿರುವ ಅನೇಕ ನಿದರ್ಶನಗಳನ್ನು ನಾವು ಕಾಣುತ್ತಲೇ ಬಂದಿದ್ದೇವೆ. ಇವೆಲ್ಲಾವು ಇನ್ನಿತರ ಅಲ್ಪ ಸಂಖ್ಯಾತ ಜನರಲ್ಲಿ, ಧರ್ಮಿಯರಲ್ಲಿ ಒಂದು ರೀತಿಯ ಭಯವನ್ನು, ಆತ್ಮ ವಿಶ್ವಾಸದ ಕೊರತೆಯನ್ನು, ಸಮಾನತೆಗೆ ಒಡಕನ್ನು ತರುತ್ತದೆ ಎಂಬ ಸೂಕ್ಷ್ಮ ಪ್ರಜ್ಞೆ ಸಹಾ ಇಲ್ಲದ ಸರ್ಕಾರಗಳ ಇಂತಹ ನಿರ್ಧಾರಗಳು ಕಳವಳಕಾರಿಯಾಗಿದೆ. ಅದರಲ್ಲೂ ನಮ್ಮ ಶಾಲೆಗಳಲ್ಲಿ ನಮ್ಮೆಲ್ಲರ ಭಾವನಾತ್ಮಕ, ಸಾಮಾಜಿಕ, ವೈಚಾರಿಕ ಅಂಶಗಳು ತಳಕುಗೊಂಡಿವೆ. ಅದರಲ್ಲಿ ಧರ್ಮದ ಹಸ್ತಕ್ಷೇಪ ನಿಜಕ್ಕೂ ಇಂದಿನ ಆದ್ಯತೆಯಲ್ಲ.

ನಮ್ಮೆಲ್ಲರ ಬಾಲ್ಯದ ನೆನಪುಗಳಲ್ಲಿ ಶಾಲೆಯೆಂಬುದು ಒಂದು ಅವಿಭಾಜ್ಯ ಅಂಗ. ನಾವು ಓದಿದ ಶಾಲೆ, ಅಲ್ಲಿನ ಗೆಳೆಯರು, ಅಲ್ಲಿನ ಶಿಕ್ಷಕರು, ಪರಿಸರ ಎಲ್ಲವೂ ನಮ್ಮ ಮನದಾಳದಲ್ಲಿ ಬೇರೂರಿರುವುದಂತೂ ಸತ್ಯ. ನೆನಪುಗಳಿಗೆ ಅದರದೇ ಆದ ಮಾಸದ ಜೀವಂತಿಕೆ ಇದೆ. ನಂತರ ನಮ್ಮ ಕಾಲೇಜು ಜೀವನ, ಕೆಲಸ, ಕ್ಲಬ್ಬು, ಫೇಸ್ ಬುಕ್,ಅಕ್ಕ ಪಕ್ಕಗಳಲ್ಲಿ ನಾವೂ ಗಳಸಿ ಬೆಳೆಸಿಕೊಳ್ಳುವ ಎಲ್ಲಾ ಹೊಸ ಗೆಳೆತನಗಳಿಗಿಂತಲೂ ಆಪ್ತವೆನಿಸುವುದು ನಮ್ಮ ಶಾಲೆಯ ಬಾಲ್ಯದ ಗೆಳೆತನಗಳೇ. ಜಾತಿ, ಅಂತಸ್ತು, ಅಹಂ ಮೀರಿದ ಗೆಳೆತನ, ಒಡನಾಟಗಳಿಗೆ ಶಾಲೆಗಳೇ ಮುಖ್ಯ ವೇದಿಕೆ. ಇದು ನಮ್ಮ ಭಾವಾನಾತ್ಮಕ ಜಗತ್ತಿಗೆ ಸಂಬಂಧಿಸಿದಾದರೆ ಇನ್ನೂ ಮಕ್ಕಳ, ವಿಧ್ಯಾರ್ಥಿಗಳ ಮಾನಸಿಕ, ವ್ಯಕ್ತಿತ್ವ ವಿಕಸನ, ವೈಜ್ಞಾನಿಕ/ ವೈಚಾರಿಕ ಚಿಂತನೆ, ಜೀವನ ಮೌಲ್ಯಗಳ ಗ್ರಹಿಕೆ, ಕುತೂಹಲ ತಣಿಸುವಲ್ಲಿ, ಭವಿಷ್ಯ ಜೀವನ ರೂಪಿಸುವಲ್ಲಿ ಸಹಾ ಶಾಲಾ ಜೀವನವು ಬಹು ಪ್ರಮುಖವಾದ ಪಾತ್ರವನ್ನು  ವಹಿಸುತ್ತದೆ ಎಂಬುದು ಸತ್ಯ . ಅಂದರೆ ಒಂದು ಇಡೀ ಜನಾಂಗವನ್ನೇ ಎಲ್ಲಾ ರೀತಿಯಲ್ಲೂ ತನ್ನ ಒಡಲ್ಲಲ್ಲಿ ಪೋಷಿಸಿಕೊಂಡು ಹೋಗುವ ಸಾಮಾಜಿಕ ಜವಬ್ದಾರಿ ಶಿಕ್ಷಣ ವ್ಯವಸ್ಥೆಗೆ ಇದೆ ಎಂದರೆ ತಪ್ಪಾಗಲಾರದು.

ಒಂದು ದೇಶದ ಸರ್ವಾಂಗೀಣ ಅಭಿವೃಧಿಯಲ್ಲಿ ಇಷ್ಟೇಲ್ಲಾ ಪ್ರಮುಖವಾದ ಪಾತ್ರ ವಹಿಸುವ ಶಿಕ್ಷಣ ವ್ಯವಸ್ಥೆಯು ಭಾರತದಂಥ ಅಭಿವೃದ್ಧಿ ಹೊಂದುತ್ತಿರುವ ದೇಶದಲ್ಲಿ ಇನ್ನೂ ಅಂಬೆಗಾಲಿನ ಪರಿಸ್ಥಿತಿಯಲಿರುವುದು ಆಶ್ಚರ್ಯವೇ ಸರಿ. ಸರ್ಕಾರಗಳ ನಿರಂತರ ಪ್ರಯತ್ನದ ನಡುವೆಯೂ ಇನ್ನೂ ಅನೇಕ ಹಳ್ಳಿಗಳಲ್ಲಿ, ಪ್ರದೇಶಗಳಲ್ಲಿ ಶಿಕ್ಷಣವೆಂಬುದು ಕೈಗೆಟುಕದ, ಗಗನಕುಸುಮವಾಗಿಯೂ, ದುರ್ಭರವಾದ ಸಂಗತಿಯಾಗಿ ಉಳಿದಿರುವುದು ನಿಜ. ಅಭಿವೃದ್ಧಿಗೊಂಡಿರುವ ನಗರ, ಪಟ್ಟಣಗಳ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವೇನ್ನಲ್ಲ. ಅತ್ಯಂತ ಸ್ವಾಭಾವಿಕ ಹಾಗೂ ಸರಳವಾಗಿ ಸಿಗಬೇಕಾದ ಮೂಲಭೂತ ಸೌಲಭ್ಯಗಳಲ್ಲಿ ಒಂದಾಗ ಬೇಕಾದ ಶಿಕ್ಷಣವೆಂಬುದು ಹಣ ಲೂಟಿ ಮಾಡುವ ಸಾಧನವಾಗಿರುವುದು ದು:S ವಿಷಯ. ನಗರ, ಪಟ್ಟಣಗಳ ಮಧ್ಯಮ, ಕೆಳ ಮಧ್ಯಮ ವರ್ಗದ ಜನರ ಕೈಗೆಟುಕದ, ಕೈ ಸುಡುವ ಸೌಲಭ್ಯಗಳಲ್ಲಿ ಶಿಕ್ಷಣವೂ ಒಂದು.

ಸಮಸ್ಯೆಗಳಿಗೆ, ಅನಾನುಕೂಲತೆಗಳೆಗೆ ಪರಿಹಾರವಾಗಬೇಕಾದುದು ಸರ್ಕಾರಿ ಶಾಲೆಗಳು. ಆದರೆ ಎಲ್ಲಾ ಸಮಸ್ಯೆಗೆಳಿಗೆ ಬೆನ್ನು ಮಾಡಿಕೊಂಡು ತನ್ನದೇ ಅದ ಸಮಸ್ಯೆ, ಒಳ ಸುಳಿಗಳಿಂದ ನರಳುತ್ತಿದೆ ಸರ್ಕಾರಿ ಶಾಲೆಗಳನ್ನು ಮೇಲ್ಲೆತ್ತುವ, ಅವು ಎಲ್ಲರಿಗೂ ಲಭ್ಯವಾಗುವಂತಹ, ಎಲ್ಲರೂ ಹೋಗ ಬಯುಸುವಂತಹ ಶಾಲೆಗಳಾಗಿ ಮಾಡುವ ಅವಶ್ಯಕತೆ ಇದೆ. ಅದರೆ ಜೊತೆಗೆ ವಿಲೀನ ಅಥವಾ ಮುಚ್ಚುವಿಕೆ, ಯಾಯ ಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ, ಖಾಸಗಿ ಶಾಲೆಗಳ ದಬ್ಬಾಳಿಕೆಯಂಥಾ ಅನೇಕ ಗಂಭೀರವಾದ ವಿಷಯಗಳಿವೆ. ನಿಟ್ಟಿನಲ್ಲಿ ಗಂಭೀರವಾದ ಸುಧಾರಣೆಗಳು, ಚಿಂತನೆಗಳ ಅನಿವಾರ್ಯತೆ ಇದೆ. ಇಡೀ ವಿಶ್ವದಲ್ಲಿ ಅತಿ ಹೆಚ್ಚು ಯುವ ಜನರನ್ನು ಹೊಂದಿರುವ ಭಾರತದಲ್ಲಿ ಸುಧಾರಿತ ಶಿಕ್ಷಣ ವ್ಯವಸ್ಥೆ ಇನ್ನೂ ಅನೇಕ ಹೊಸ ಸಾಧ್ಯತೆಗಳಿಗೆ ಸಾಕ್ಷಿಯಾಗಬಹುದು.

ನಮ್ಮ ಶಿಕ್ಷಣ ವ್ಯವಸ್ಥೆಯ ಮುಂದೆ ರೀತಿಯ ಹಲವಾರು ಸವಾಲುಗಳಿರುವಾಗ ನಾವೆಲ್ಲರೂ ಒಂದು ಜಾತ್ಯಾತೀತ ಶಿಕ್ಷಣ ವ್ಯವಸ್ಥೆಯಲ್ಲಿ ಒಂದು ಧರ್ಮಗ್ರಂಥದ ಅಳವಡಿಕೆ ಆಗಬೇಕೆ ಬೇಡವೇ ಎಂಬ ಚರ್ಚೆಯಲ್ಲಿ ತೊಡಗಿಕೊಂಡಿರುವುದು ನಿಜಕ್ಕೂ ದು: ವಿಷಯಜೊತೆಗೆ ಸರ್ಕಾರ ಹೊಸ ಗೊಂದಲಗಳ, ಹೊಸ ಸಮಸ್ಯೆಗಳನ್ನು ಸೃಷ್ಠಿ ಮಾಡುವುದು ಎಷ್ಟು ಸರಿ? ಶಾಲಾ ಪಠ್ಯಕ್ರಮದಲ್ಲಿ ಭಗವದ್ಗೀತೆಯನ್ನು ಅಳವಡಿಸುವ ಕರ್ನಾಟಕ ಸರ್ಕಾರದ ನಿರ್ಧಾರ ನಿಜಕ್ಕೂ ಇಂತಹ ಗೊಂದಲವನ್ನು ಹುಟ್ಟುಹಾಕಿದೆ. ಅದಕ್ಕೆ ಕಳಶವಿಟ್ಟಂತೆ ಅದನ್ನು ವಿರೋಧಿಸುವವರು ಭಾರತದಲ್ಲಿ ವಾಸಿಸಲು ಅನರ್ಹರು ಎಂಬಂರ್ಥದ ಶಿಕ್ಷಣ ಸಚಿವರ ಮಾತುಗಳು ಇನ್ನಷ್ಟು ಆಘಾತಕಾರಿ.

ಅಷ್ಟು ಮಾತ್ರವಲ್ಲದೆ ಭಗವದ್ಗೀತೆ ಎಂಬುದು ಅಷ್ಟೊಂದು ಅವಶ್ಯ, ಅನಿವಾರ್ಯ ಎಂದು ಸರ್ಕಾರಕ್ಕೆ ಅನಿಸಿದ್ದರೆ ಅದು ಮಕ್ಕಳಿಗಿಂತ ಇನ್ಯಾರಿಗೆ ಹೆಚ್ಚು ಅವಶ್ಯ ಎಂಬುದರ ಬಗ್ಗೆ ಚಿಂತಿಸಬಹುದಿತ್ತು. ಜಾತಿ, ಧರ್ಮದ ಹೆಸರಲ್ಲಿ ಸಮಾಜವನ್ನು ಒಡೆಯುತ್ತಾ, ಭ್ರಷ್ಟಾಚಾರ, ಅನೈತಿಕತೆಯಲ್ಲಿ ಮುಳುಗಿ ಕನಿಷ್ಠ ಸೌಜನ್ಯ, ಮನಸಾಕ್ಷಿಯನ್ನು ಕಳೆದುಕೊಂಡು ಬಾಳುತ್ತಿರುವ, ದಬ್ಬಾಳಿಕೆ, ಅನ್ಯಾಯದಿಂದಲೇ ದೀನ ಜನರನ್ನು ಸುಲಿಯುತ್ತಿರುವವರಿಗೆ ಇದರ ಅವಶ್ಯಕತೆ ಇದೆ ಎಂಬುದು ಜನ ಸಾಮಾನ್ಯರ ಅನಿಸಿಕೆ.

ಸರ್ಕಾರ ಶಾಲೆಗಳಿಗೆ ಮಕ್ಕಳನ್ನು ಕಳುಹಿಸಲು ಪೋಷಕರು ಹಿಂಜರಿಯುತ್ತಿರುವ ಸಂದರ್ಭದಲ್ಲಿ  ಸರ್ಕಾರಗಳು ತಮ್ಮ ತಮ್ಮ ರಾಜಕೀಯ ಆಶೋತ್ತರಗಳಿಗೆ ಸರ್ಕಾರಿ ಶಾಲೆಗಳನ್ನು, ಅಲ್ಲಿನ ಶಿಕ್ಷಕರನ್ನು, ಮಕ್ಕಳನ್ನು ಬಲಿಪಶು ಮಾಡಿಕೊಳ್ಳುತ್ತಿರುವುದು ದು:ಖಕರ ವಿಷಯವಾಗಿದೆ. ಸಮಯದಲ್ಲಿ ನಮ್ಮ ಕ್ರೈಸ್ತ ಶಾಲೆಗಳು ಸಹಾ ಆತ್ಮಾವಲೋಕನಕ್ಕೆ ಮುಂದಾಗಬೇಕು. ಶಿಕ್ಷಣವೆಂಬ ಸಮಾಜಿಕ ಸುಧಾರಣೆಯ ಕಾರ್ಯದಲ್ಲಿ ನಮ್ಮ ಜವಬ್ದಾರಿ, ಹೊಣೆಗಾರಿಯನ್ನು ಅರಿತುಕೊಂಡು ಲಾಭ, ಧರ್ಮವನ್ನು ಮೀರಿದ ಸಂಸ್ಥೆಗಳಾಗಿ ಬೆಳೆದು ಇನ್ನಿತರ ಶಾಲೆಗಳಿಗೆ ಮಾದರಿಯಾಗಿ ನಿಲ್ಲುವ ಅವಶ್ಯಕತೆ ಇದೆ. ಆತ್ಮಾವಲೋಕನಕ್ಕೆ ಇದೇ ತಕ್ಕ ಸಮಯವಾಗಿದೆ.

-ಪ್ರಶಾಂತ್ ಇಗ್ನೇಷಿಯಸ್


±

No comments:

Post a Comment