Sunday, 29 November 2009

ಕನ್ನಡ ಎನೆ ಮನ ಕುಣಿಯುವುದು

"ಕನ್ನಡ ಎನೆ ಮನ ಕುಣಿಯುವುದು
ಕನ್ನಡ ಎನೆ ಕಿವಿ ನಿಮಿರುವುದು"
ಇದು ಕುವೆಂಪು ಬರೆದ ಒಂದು ಕಾವ್ಯದ ಪ್ರಸಿದ್ಧ ಸಾಲು. ತಾವು ಪದ್ಯಗಳನ್ನು ಗೀಚುವ ಗೀಳಿಗೆ ಅಂಟಿಕೊಂಡಾಗ, ಇಂಗ್ಲೀಷ್ ನ ವ್ಯಾಮೋಹ ಅವರನ್ನು ಬಹಳವಾಗಿ ಅಪ್ಪಿಕೊಂಡಿತ್ತು. ಅಷ್ಟೆ ಏಕೆ ಮೊದಮೊದಲು ಕವನಗಳನ್ನು ಸಹ ಆಂಗ್ಲದಲ್ಲಿ ಬರೆದರು. ಒಂದು ಕವನ ಸಂಕಲನವಾಗಿ ಹೊರತಂದ್ದಿದರು. ಬಹುಷಃ ಅಂದಿನ ಬ್ರಿಟಿಷ್ ಆಳ್ವಿಕೆಯಲ್ಲಿ ಬದುಕುತ್ತಿದ್ದ ನಮ್ಮವರಿಗೆ ಎಲ್ಲೆಲ್ಲೂ ಇಂಗ್ಲೀಷ್ ನ ಭಾಷೆ, ಶೈಲಿ, ಉಡುಪು ಮತ್ತು ಅವರ ಸಂಸ್ಕೃತಿ ಆಕರ್ಷಿಸದೆ ಇದ್ದಿರಲಾರದು. ಇಂತಹ ಸಂದರ್ಭದಲ್ಲಿ ಕುವೆಂಪು ಆಂತಹ ಕುವೆಂಪುರವರಿಗೇ ಆ ಮೋಹ ವ್ಯಾಪಿಸಿತ್ತು ಕೂಡ.

Friday, 13 November 2009

ಕನ್ನಡ, ಹೋರಾಟ ಹಾಗೂ ಅದರ ಅವಶ್ಯಕತೆ - ಕೊನೆಯ ಭಾಗ

ಇಲ್ಲಿನ ವಾಣಿಜ್ಯೋದ್ಯಮಕ್ಕೆ, ವ್ಯಾಪರಕ್ಕೆ ಬರುವ ಅನ್ಯ ರಾಜ್ಯದವರಿಗೆ, ವಿದೇಶಿ ಸಂಸ್ಥೆಗಳಿಗೆ ಇಲ್ಲಿನ ನಾಡು, ನುಡಿಯ ಬಗ್ಗೆ ಯಾವುದೇ ರೀತಿಯ ಕಾಳಜಿ, ಪ್ರೀತಿಯಂತೂ ಇರಲು ಸಾಧ್ಯವಿಲ್ಲ. ಇಲ್ಲಿನ ಜನರಿಗೇ ಇಲ್ಲವೆಂದ ಮೇಲೆ ಅವರಿಗೆಲ್ಲಿಂದ ಬರಬೇಕು? ಮಾನವ ಸಂಪನ್ಮೂಲವೂ ಒಳಗೊಂಡಂತೆ ಇಲ್ಲಿನ ಎಲ್ಲಾ ಸಂಪತ್ತು, ಸಂಪನ್ಮೂಲ ಹಾಗೂ ಸೌಲಭ್ಯಗಳನನ್ನು ಬಳಸಿಕೊಂಡು ತಮ್ಮ ವ್ಯಾಪರವನ್ನು ನಡೆಸುತ್ತಾರೆ. ಆಗ ಸಾಮರ್ಥ್ಯ, ಪ್ರತಿಭೆ ಹೆಸರಲ್ಲಿ ಬೇರೆ ರಾಜ್ಯದ ಜನರೂ ಬರುತ್ತಾರೆ. ಅದರಲ್ಲಿ ತಪ್ಪೇನಿಲ್ಲ.

Wednesday, 11 November 2009

ಕನ್ನಡ, ಹೋರಾಟ ಹಾಗೂ ಅದರ ಅವಶ್ಯಕತೆ - ಭಾಗ 2

ಹೊರಗಿನ ಶಕ್ತಿಗಳಿಗಿಂತ ಒಳಗಡೆಯೇ ನೆಲಸಿ ಇಲ್ಲಿನ ಭಾಷೆ,ಸಂಸ್ಕೃತಿಗಳ ವಿರುದ್ಧವಾಗಿಯೇ ಕೆಲಸ ಮಾಡುತ್ತಿದ್ದ, ನಿರ್ಭಾವುಕವಾಗಿದ್ದ ಒಳಗಿನ ಶಕ್ತಿಗಳ, ಪಿತೂರಿಗಳ ವಿರುದ್ಧವೂ ದೊಡ್ಡ ಹೋರಾಟಗಳೇ ನಡೆದಿವೆ. ಬೀದಿಗಿಳಿದ ಚಳುವಳಿ ನಾಯಕರ ಹೋರಾಟದ ಜೊತೆಯಲ್ಲೇ ಸಾಹಿತಿಗಳ ಅಕ್ಷರ ರೂಪದ ಹೋರಾಟಗಳು ಈ ಹೋರಾಟದ ಜ್ಯೋತಿಯನ್ನು ನಿರಂತರವಾಗಿ ಬೆಳಗಿಸಿಕೊಂಡು ಬಂದಿತು. ಅನಕೃರವರ೦ತ ಸಾಹಿತಿಗಳು ಬೀದಿಗಿಳಿದ್ದು ಕನ್ನಡ ಪರ ದನಿಯೆತ್ತಿದ್ದೂ ಉ೦ಟು.

ಕಲಾವಿದರನ್ನೂ ಒಳಗೊಂಡಂತೆ ಸಮಾಜದ ಎಲ್ಲಾ ಸ್ತರದ ಜನರೂ ಭಾಗವಹಿಸಿದ ಗೋಕಾಕ್ ಚಳುವಳಿಯ ರಭಸ, ಭಾವತೀವ್ರತೆಯ ಎಷ್ಟಿತ್ತೆಂದರೆ ಅನ್ಯರಾಜ್ಯದವರೂ, ಬೇರೆ ಭಾಷಿಕರೂ ಸಹಾ ಕತ್ತೆತ್ತಿ ನೋಡುವಂತೆ ಮಾಡಿದ್ದು ಮಾತ್ರವಲ್ಲದೆ ಸಕಾಲವಾದ ಎಚ್ಚರಿಕೆಯ ಘಂಟೆಯನ್ನು ಮೊಳಗಿಸಿತು.ಎ೦ಬತ್ತರ ದಶಕದ ರೈತ ಚಳುವಳಿಗಳು ಸಹಾ ಇದಕ್ಕಿಂತ ಭಿನ್ನವಾಗಿರಲಿಲ್ಲ. ಅದೂ ಒ೦ದು ರೀತಿಯ ಕನ್ನಡ ರೈತರ ಆಶೋತ್ತರಗಳಿಗಾಗಿ ನಡೆದ ಕನ್ನಡದ ಹೋರಾಟವೇ.

Tuesday, 3 November 2009

ಕನ್ನಡ, ಹೋರಾಟ ಹಾಗೂ ಅದರ ಅವಶ್ಯಕತೆ - ಭಾಗ 1

ಕನ್ನಡ ಪರ ಹೋರಾಟದ ಮಾತಿರಲಿ, ಕೆಲವೂಮ್ಮೆ ಕನ್ನಡ, ಕನ್ನಡಿಗರ ಬಗೆಗಿನ ನ್ಯಾಯಪರ ಹಕ್ಕುಗಳ ಬಗ್ಗೆ ಮಾತನಾಡಿದರೂ ಇವೆಲ್ಲ ಬೇಕೇ ಎಂದೋ, ದುರಾಭಿಮಾನಿಗಳೆ೦ದೋ ಮೂದಲಿಸುವ ಜನಕ್ಕೆ ಕಡಿಮೆಯಿಲ್ಲ, ಅದರಲ್ಲೂ ನಮ್ಮ ಕನ್ನಡಿಗರೇ ಹೀಗೆ೦ದಾಗ ಇನ್ನೇನು ಹೇಳೋಣ?


ಒ೦ದು ಭಾಷೆ ಎನ್ನುವುದು ಕೇವಲ ಸ೦ಪರ್ಕದ ಮಾಧ್ಯಮ ಮಾತ್ರವಲ್ಲದೆ ಸಂಸ್ಕೃತಿಯ ಭಾಗವೇ ಆಗಿ ಶತಮಾನಗಳೇ ಕಳೆದಿವೆ. ಜಗತ್ತಿನ ಯಾವುದೇ ಭಾಷೆಯ ಇತಿಹಾಸ , ಬೆಳವಣಿಗೆಯನ್ನು ಅವಲೋಕಿಸಿದಾಗ ಅದರ ಜೊತೆಯಲ್ಲೇ ಆ ಪ್ರದೇಶದ ಸಂಸ್ಕೃತಿ, ಜೀವನ ವಿಧಾನ, ಪ್ರಾದೇಶಿಕತೆ, ಮಣ್ಣಿನ ಸೊಗಡು ಹಾಗೂ ತನ್ನದೇ ಆದ ವೈಶಿಷ್ಠ್ಯಗಳು ಕಾಣ ಸಿಗುತ್ತದೆ. ಒ೦ದು ಸಮಾಜದ, ಜನಾ೦ಗದ, ಜೀವ ವಿಧಾನದ ಅವಿಭಾಜ್ಯ ಅಂಗವಾಗಿರುವ ಭಾಷೆಯ ಪರವಾಗಿ ಹೋರಾಟ, ವಕಾಲತ್ತುಗಳ ಅವಶ್ಯಕತೆ ಇಲ್ಲ ಎ೦ದು ಮೇಲು ನೋಟಕ್ಕೆ ಅನಿಸುತ್ತದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಹಲವಾರು ಪ್ರಾಚೀನ ಸಂಸ್ಕೃತಿಗಳು, ಜೀವ ವಿಧಾನಗಳು ಆಧುನಿಕತೆಯ ಹೊಡೆತಕ್ಕೆ ಸಿಕ್ಕು ತಮ್ಮ ಬೇರನ್ನು ಕಳೆದುಕೊ೦ಡು ಅವಸಾನದತ್ತ ಹೆಜ್ಜೆ ಹಾಕಿವೆ. ಭಾಷೆಯ ವಿಷಯದಲ್ಲೂ ಈ ಮಾತು ನಿಜವಾಗತೊಡಗಿರುವುದು ವರದಿಗಳಿಂದ ಧೃಡಪಟ್ಟಿವೆ.ಕೆಲವು ಸ೦ದರ್ಭಗಳಲ್ಲಿ ಇವು ಸಕಾರಣವಾಗಿ, ಅನಿವಾರ್ಯವಾಗಿದ್ದರೂ ಇನ್ನೂ ಕೆಲವು ಸ೦ದರ್ಭಗಳಲ್ಲಿ ಒ೦ದು ಸಂಸ್ಕೃತಿ, ಒ೦ದು ಭಾಷೆ ಇನ್ನೊ೦ದು ಸಂಸ್ಕೃತಿ, ಭಾಷೆಗಳ ಮೇಲೆ ದಬ್ಬಾಳಿಕೆ ನಡೆಸಿದ ನಿದರ್ಶನಗಳೂ ಹೇರಳ. ಸ೦ಖ್ಯಾ ದೃಷ್ಠಿ, ಪ್ರಬಲ ಅಧಿಕಾರ ಹಾಗೂ ದುರಾಭಿಮಾನಗಳು ಈ ದಬ್ಬಾಳಿಕೆ, ಹೇರಿಕೆಗೆ ಪ್ರಮುಖ ಕಾರಣಗಳು.