Tuesday 20 February 2018

ಮಲೆಗಳಲ್ಲಿ ಮದುಮಗಳು

ಮಲತ್ತಳ್ಳಿಯ ಕಲಾಗ್ರಾಮದಲ್ಲಿ ನಡೆಯುತ್ತಿದ್ದ 'ಮಲೆಗಳಲ್ಲಿ ಮದುಮಗಳು' ನಾಟಕದ ಒಂದು ದೃಶ್ಯ. ಗೂಡಿನಿಂದ ಹೊರಬಂದ ಹಂದಿಯೊಂದು ಎಲ್ಲರ ಕೈ ತಪ್ಪಿಸಿ ಓಡುತ್ತಿದೆ. ಹತ್ತು ಹದಿನೈದು ಆಳುಗಳು ಅದರ ಹಿಂದೆ ಮುಂದೆ ಅಲೆದಾಡಿದರೂ ಅದು ಯಾರಿಗೂ ಸಿಕ್ಕುತ್ತಿಲ್ಲಪಾತ್ರಧಾರಿಗಳೆಲ್ಲಾ ನಿಜವಾದ ಹಂದಿಯನ್ನೇ ಹಿಡಿಯುವಂತೆ ತನ್ಮಯರಾಗಿದ್ದಾರೆ. ಹಂದಿ ಪಾತ್ರಧಾರಿ ಕೂಡ ನಿಜಕ್ಕೂ ತನ್ನ ಜೀವಕ್ಕೆ ಆಪತ್ತು ಬಂದಿದೆ ಎಂಬಂತೆ ವೇದಿಯ ಮೇಲಿನ ಕಟ್ಟೆ , ಮರ, ಗಿಡ ಎಲ್ಲದರ ಮೇಲೂ  ಓಲಾಡುತ್ತಾ ಸಾಗುತ್ತಿದ್ದಾನೆಆಷ್ಟರಲ್ಲಿ ಕಾದಂಬರಿಯ ಪ್ರಮುಖ ಪಾತ್ರಧಾರಿಗಳಲ್ಲಿ ಒಂದಾದ  'ಹುಲಿಯಾ' ಎಂಬ ನಾಯಿಯ ಆಗಮನ. ಅದೂ ಮನುಷ್ಯ ಪಾತ್ರಧಾರಿಯೇ . ಮುಂದೆ ಒಂದೆರೆಡು ನಿಮಿಷಗಳ ಕಾಲ ನಡೆಯುವ ಹಂದಿ, ನಾಯಿಯ ಜಟಾಪಟಿಗೆ ಪ್ರೇಕ್ಷಕರ ಕಡೆಯಿಂದ ಸಲಹೆ ಸೂಚನೆ.  ನನ್ನ ಪಕ್ಕದಲ್ಲಿದ್ದ ಸುಮಾರು ೫೫ -೬೦ ವರ್ಷದ ಮಹಿಳೆಯೊಬ್ಬರು ಕಾಳಗದಲ್ಲಿ ಅದೆಷ್ಟು ಮುಳುಗಿ ಹೋಗಿದ್ದರೆಂದರೆ ' ಹುಲಿಯಾ ಕಡೆ ಬಾ, ಇಲ್ಲಿ ಇಲ್ಲಿ.."  ಎನ್ನುತ್ತಾ ಸೂಚನೆ ನೀಡುತ್ತಿದ್ದರು, ತಮ್ಮದ್ದೇ ಮನೆ ನಾಯಿ ಏನೋ ಎಂಬಂತೆ

ಒಮ್ಮೆ “ಈ ಕಡೇ, ಈ ಕಡೆ” ಎನ್ನುತ್ತಾ ಬಿಸಿದ ಅವರ ಕೈ ನನ್ನ ಮೂಗಿನ ತೀರಾ ಹತ್ತಿರಕ್ಕೆ ಬಂದು ಹಿಂದೆ ಹೋಯಿತು. ಮುಂದೆ ಎರಡು ಗುಂಪುಗಳ ನಡುವಿನ ದೊಡ್ಡ ಜಗಳದ ದೃಶ್ಯವಿತ್ತು. ಸುರಕ್ಷತೆಯ ದೃಷ್ಟಿಯಿಂದ ಸ್ವಲ್ಪ ದೂರ ಬಂದು ಕುಳಿತುಕೊಂಡೆ ಕೊನೆಗೆ ಹುಲಿಯಾ ಹಂದಿಯನ್ನು ಮೆಟ್ಟಿ ನಿಂತಾಗ, ಕೂತಿದ್ದ ಪ್ರೇಕ್ಷಕರೆಲ್ಲಾ ಚಪ್ಪಾಳೆ ತಟ್ಟಿ ಅಭಿನಂದನೆ ಸೂಚಿಸಿದರು, ಗೋಲ್ಡ್ ಮೆಡಲ್ ಗೆದ್ದ ಕುಸ್ತಿಪಟುವನ್ನು ಅಭಿನಂದಿಸಿದಂತೆ.    

ಒಮ್ಮೊಮ್ಮೆ ಹಾಗಾಗಿ ಹೋಗುತ್ತದೆ. ನಮ್ಮನ್ನು ನಾವೇ ಮರೆತು ಕಳೆದುಕೊಳ್ಳುವಂಥ ಅನುಭವಗಳು ನಮ್ಮದಾಗುತ್ತ್ತದೆ . ನಟ ಸಿ.ಆರ್. ಸಿಂಹ ತಮ್ಮ  ಸಂದರ್ಶನವೊಂದರಲ್ಲಿ ತಮ್ಮ ಅನುಭವವೊಂದನ್ನು ಹಂಚಿಕೊಂಡಿದ್ದರು.  ಅದು ರಸರಿಷಿ ಕುವೆಂಪು ನಾಟಕದ ಮಾತುಎಲ್ಲರಿಗು ತಿಳಿದಂತೆ ನಾಟಕವು ಕುವೆಂಪುರವರ ಬದುಕಿನ ಕುರಿತಾದ ನಾಟಕ. ಕುವೆಂಪು ಪಾತ್ರವನ್ನು ಸ್ವತಃ ಸಿಂಹರವರೇ ಮಾಡುತ್ತಿದ್ಧರು. ಅಂದಿನ ನಾಟಕಕ್ಕೆ ಕುವೆಂಪು ರವರ ಕುಟುಂಬವೂ ಬಂದಿತ್ತು.

ಸಿಂಹರವರ ಅನುಭವವನ್ನು ಬರೆಯುವ ಮುಂಚೆ ಅವರ  ರಂಗದ ಮೇಲಿನ ಅಭಿನಯದ ಬಗ್ಗೆ ಒಂದೆರೆಡು ಮಾತು ಹೇಳಲೇಬೇಕು. ರಸರಿಷಿ  ನಾಟಕವನ್ನು ನೋಡುವ ಅವಕಾಶ ನನಗೆ ಸಿಗಲಿಲ್ಲ. ಆದರೆ ಅವರದೇ 'ಟಿಪಿಕಲ್ ಕೈಲಾಸಂ  ನಾಟಕ ನೋಡುವ ಸೌಭಾಗ್ಯ  ನನ್ನದಾಯಿತು. ಸೌಭಾಗ್ಯ ಎಂಬ ಪದದಲ್ಲಿ ಉತ್ಪ್ರೇಕ್ಷೆ ಇಲ್ಲ. ಇಡೀ ನಾಟಕ ಕೈಲಾಸಂರವರ  ಜೀವನ, ಬರಹ, ನಾಟಕದ ಮೇಲೆ ಆಧಾರಿತ. ಆದಕ್ಕಿಂತ ವಿಶೇಷವೆಂದರೆ ಇಡೀ ನಾಟಕದಲ್ಲಿ ಸಿಂಹ ಒಬ್ಬರೇ ಪಾತ್ರಧಾರಿ. ನಾಟದದಲ್ಲಿ ಬರುವ ಕೈಲಾಸಂ ಅವರೇ, ಕೈಲಾಸಂರವರ ನಾಟಕದದಲ್ಲಿನ ವಿವಿಧ ಪಾತ್ರಧಾರಿಗಳೂ ಅವರೇ ಸುಮಾರು ಎರಡು ಘಂಟೆಗಳ ನಾಟಕವನ್ನು ಒಬ್ಬನೇ  ತ್ರಧಾರಿ ಹೇಗೆ ನಿಭಾಯಿಸಿಬಲ್ಲ ಎಂಬ ಅದ್ಭುತ ಕಲ್ಪನೆ ನಿಮ್ಮದಾಗ ಬೇಕಾದರೆ ನಾಟಕ ನೋಡಬೇಕಿತ್ತು

ನಾಟಕ ನೋಡುವಾಗ ನನಗೆ ಮೊದಲ ಹತ್ತು ಹದಿನೈದು ನಿಮಿಷಗಳಷ್ಟೇ ಸಿಂಹರವರು ಕಾಣಿಸಿದ್ದು. ನಂತರವೇನಿದ್ದರೂ ಅಲ್ಲಿ ಕೈಲಾಸಂ ರವರೆ ಇದ್ದಾರೇನೋ ಎಂಬಂಥ ಅನುಭವ. ಹಾಗೆಂದು ನಾವೇನು ಕೈಲಾಸಂರವರನ್ನು ನೋಡಿದವರಲ್ಲ. ಆದರೆ ಫೋಟೋಗಳಲ್ಲಿ ನೋಡಿದ ಅವರಂತೆಯೇ ಸಿಂಹರವರು ತೊಡಗಿದರು.ನನಗೋ ಅನುಮಾನ ನನಗೆ ಮಾತ್ರ ಹೀಗನಿಸುತ್ತಿದ್ದೆಯೇ  ಅಥವಾ ಬೇರೆ ಪ್ರೇಕ್ಷಕರಿಗೂ ಅನುಭವವಾಗುತ್ತಿದ್ದೆಯೇ ಎಂದು .

ಮುಂದೆ ಸಿಂಹರವರ ಅವರ ಸಂದರ್ಶನ ನೋಡಿದೆ. ಮೊದಲೇ ಹೇಳಿದಂತೆ ಅಂದಿನ ರಸರಿಷಿ ನಾಟಕಕ್ಕೆ ಕುವೆಂಪುರವರ ಕುಟುಂಬವು ಬಂದು ಅವರ ಮಗಳು ಮೊದಲ ಸಾಲಿನಲ್ಲಿ ಕುಳಿತ್ತಿದ್ದರಂತೆ. ಒಂದು ದೃಶ್ಯದಲ್ಲಿ ಸಿಂಹರವರು ಮಂಚದ ಮೇಲೆ ಬಂದು ಕುಳಿತುಕೊಳ್ಳುವ ಸಂದರ್ಭ. ಸಿಂಹ ಕುವೆಂಪು ಪಾತ್ರಧಾರಿಯಾಗಿ ಇನೇನು ಕುಳಿತುಕೊಳ್ಳಬೇಕು, ಅಷ್ಟರಲ್ಲಿ ಮೊದಲ ಸಾಲಿನಲ್ಲಿ ಕುಳಿತ್ತಿದ್ದ ಕುವೆಂಪು ಅವರ ಮಗಳು " ಅಣ್ಣ ನಿಧಾನ" ಎಂದು ತುಸು  ಜೋರಾಗಿಯೇ ಹೇಳಿದರಂತೆ. ಇಲ್ಲಿ ಹೊರಟುಬಂದ ಸಂವೇದನೆ, ಕಾಳಜಿಯ ಮೂಲ ಯಾವುದು? ತಂದೆ ಎಂಬ ಮಮಕಾರದ ಪಾತ್ರವೆಷ್ಟು? ಸಿಂಹರವರ ಅಭಿನಯದ ತನ್ಮಯತೆ ಎಷ್ಟು? ನಾಟಕ ನೋಡುವಾಗಿನ ಶ್ರದ್ಧೆಯ ಪಾಲೆಷ್ಟು? ಅಂದು ಪಾತ್ರ ಮಾಡಿದ ಸಾರ್ಥಕತೆಯ ಅರಿವಾಯ್ತು ಎಂಬ ಮಾತನ್ನು ಸಿಂಹರವರು ಸಂದರ್ಶನದಲ್ಲಿ ಹೇಳಿದರು.

ಕೆಲವೊಂದು ನಾಟಕಗಳು, ಅಭಿನಯಗಳು, ಪ್ರದರ್ಶನಗಳು ನಮ್ಮನು ಹೀಗೆ  ಸೆಳೆಯಬಲ್ಲವು. ಅಂತಹ ಒಂದು ರಂಗರೂಪ ಸಿ.ಬಸವಲಿಂಗಯ್ಯ ನಿರ್ದೇಶನದ 'ಮಲೆಗಳಲ್ಲಿ ಮದುಮಗಳು' ನಾಟಕ.   ನಾಟಕದ ಅನೇಕ ದೃಶ್ಯಗಳಲ್ಲಿ ಪ್ರೇಕ್ಷಕಕರು ತಮ್ಮನ್ನೇ ಮರೆತು, ತಾವೇ ಪಾತ್ರಧಾರಿಗಳೇನೋ ಎಂಬಂತೆ ವರ್ತಿಸುತ್ತಿದ್ದನ್ನ ನಾಟಕದ ಪ್ರತಿ  ಹಂತದಲ್ಲೂ ಕಾಣಬಹುದಾಗಿತ್ತು. ಅದು ಈ ನಾಟಕದ ಹೆಗ್ಗಳಿಕೆ. ನಾಲ್ಕು ವೇದಿಕೆಗಳಲ್ಲಿ ನಡೆಯುವ ಗಂಟೆಗಳ ನಾಟಕ ನಿಜಕ್ಕೂ ಒಂದು ಅನುಭವವೇ ಸರಿ.

ಎಲ್ಲರಿಗೂ ತಿಳಿದಂತೆ 'ಮಲೆಗಳಲ್ಲಿ ಮದುಮಗಳು' ಕುವೆಂಪುರವರ ಉತ್ಕೃಷ್ಟ ಕೃತಿಗಳಲ್ಲಿ ಒಂದು. ಅಂತಹ ಕೃತಿಯನ್ನು ರಂಗರೂಪಕ್ಕೆ ತರುವುದು ಸಾಮಾನ್ಯ ವಿಷಯವಲ್ಲ. ಏಕೆಂದರೆ ಕಾದಂಬರಿಯ ವಸ್ತು ಹಾಗೂ ಭೂಮಿಕೆಯೇ ಅಂತದ್ದು . ಸುಮಾರು ೧೧೦ ವರ್ಷಗಳ ಹಿಂದಿನ ಮಲೆನಾಡಿನ ಕಾಡುಗಳ ನಡುವಿನ ಹಳ್ಳಿಗಳಲ್ಲಿ ಸಾಗುವ ಕಾದಂಬರಿಯ ಕಥೆಯನ್ನು ವೇದಿಕೆ ಮೇಲೆ ತರುವ ಸಾಹಸ ದೊಡ್ಡದು. ಅದರಲ್ಲೂ ಜನಪ್ರಿಯವಾಗಿರುವ ಕಾದಂಬರಿಯನ್ನು ರಂಗರೂಪಕ್ಕಿಳಿಸಿದಾಗ ರಸಭಂಗವಾಗುವ ಅಪಾಯವೂ ಇದೆ.

ಸವಾಲುಗಳನ್ನೆಲ್ಲಾ ಮೀರಿ ನಾಟಕ ಗೆಲ್ಲುತ್ತದೆ, ಅಪಾರ ಪ್ರೇಕ್ಷಕರನ್ನು ಕಾಲಘಟ್ಟದಲ್ಲೂ ಸೆಳೆದು ಯಶಸ್ವಿಯಾಗುತ್ತದೆ  ಎಂದರೆ ಅದು  ಕುವೆಂಪುರವರ ದಾರ್ಶನಿಕ ಶಕ್ತಿ ಹಾಗು ಪ್ರತಿಭೆಯನ್ನು ತೋರಿಸುತ್ತದೆ. ಅಷ್ಟೇ ಮುಖ್ಯವಾಗಿ ಅದನ್ನು ರಂಗರೂಪಕ್ಕೆ ಅಳವಡಿಸಿದ ಕೆ.ವೈ.ನಾರಾಯಣಸ್ವಾಮಿ ಹಾಗು ನಿರ್ದೇಶನ ಮಾಡಿದ ಬಸವಲಿಂಗಯ್ಯನವರು ಅಪಾರ ಶ್ಲಾಘನೆಗೆ ಆರ್ಹರು. ಇತ್ತೀಚಿನ ವರ್ಷಗಳಲ್ಲಿನ ಕನ್ನಡ ಸಾಂಸ್ಕೃತಿಕ ಲೋಕದ ಅತ್ಯಂತ ಮಹತ್ವದ ಸಂದರ್ಭಗಳಲ್ಲಿ ಇದು ಒಂದು.
ಇದರಲ್ಲಿ ತೊಡಗಿಕೊಂಡವರೆಲ್ಲರೂ ಅಷ್ಟೇ ಪ್ರಮುಖರು . ವಸ್ತ್ರವಿನ್ಯಾಸ, ರಂಗ , ಬೆಳಕು , ಧ್ವನಿ ವಿನ್ಯಾಸ ವೆಲ್ಲವೂ ಅತ್ತ್ಯುತ್ತಮವೇ . ಇನ್ನು ಹಂಸಲೇಖರ ಸಂಗೀತವೆಂದರೆ ಹೇಳಬೇಕೇ ?ಮತ್ತೊಂದು ಪ್ರಮುಖ ಕಾರಣವೆಂದರೆ ಪಾತ್ರಧಾರಿಗಳು . ರಂಗಾಯಣ, ಏನ್.ಎಸ್ .ಡಿಯಾ ವಿದ್ಯಾರ್ಥಿಗಳೂ ಸೇರಿದಂತೆ  ಇಲ್ಲಿನ ನಟರು ಕುವೆಂಪುರವರ  ಪಾತ್ರಧಾರಿಗಳು  ಪುಸ್ತಕದಿಂದ, ನಮ್ಮ ಕಲ್ಪನೆಯಿಂದ ವೇದಿಕೆಯ ಮೇಲಿನ ನೆಲದ ಮೇಲೆ ಸಾಕಾರಮೂರ್ತಿಗಳಾಗಿಯೂ ಇಳಿದು ಬಂದಂತೆ  ನಟಿಸುತ್ತಿದ್ದರು. ನಟಿಸುತ್ತಿದ್ದರಾ?ನಾಯಿ ಪಾತ್ರಧಾರಿ ಅನಿಲ್ ಅಭಿನಯ ನಿಜವಾದ ನಾಯಿಗೂ ಸ್ಪರ್ಧೆ ನೀಡುವಂತಿತ್ತು. ಅಂತೆಯೇ ನಾಟಕದ ಅತ್ಯಂತ ಶಕ್ತಿಯುತ ಸಾರವಿರುವುದು ಕಾದಂಬರಿಯಲ್ಲಿನ ವಿವಿಧ ಮಾನವ ಸಂಬಂಧಗಳ ಸೂಕ್ಷ್ಮತೆ ಹಾಗೂ ಮನೋವ್ಯಾಪಾರದ ಆಯಾಮಗಳಲ್ಲಿ.

ನಾನು ಹಿಂದೆ ಒಮ್ಮೆ ನೋಡಿದಾಗ ಅದು ಬೇಸಿಗೆಯಾಗಿತ್ತು . ಸಲ ನೋಡಿದಾಗ ಮೈ ಕೊರೆವ ಚಳಿ. ನಿರ್ದೇಶನ, ಸಂಗೀತ, ಅಭಿನಯ, ಸಂಗೀತ, ರಂಗಸಜ್ಜಿಕೆಯ ಜೊತೆ ಸಲದ ಚಳಿ ಮಲೆನಾಡನ್ನೇ ಬೆಂಗಳೂರಿಗೆ ತಂದಿತ್ತು ಎಂದರೆ ತಪ್ಪಾಗಲಾರದು. ಅಂದು ಕುವೆಂಪುರವರ ಜನ್ಮದಿನವೂ ಆಗಿತ್ತು. ಒಬ್ಬ ಕವಿ ಬರಹಗಾರನ ಜನ್ಮೋತ್ಸವವು ಅದಕ್ಕಿಂತ ಅರ್ಥಪೂರ್ಣವಾಗಲು ಸಾಧ್ಯವಿಲ್ಲವೇನೋ.

ನಾಟಕದ ಕೊನೆಯಲ್ಲಿ 'ಸಂತೋಷ ಉಕ್ಕುತ್ತೆ ಸಂತೋಷ  ಉಕ್ಕುತ್ತೆ ' ಹಾಡು ಬರುತ್ತದೆ . ಅದೇ ಸಂತೋಷದಲ್ಲಿ ಹೊರಟಾಗ ನಿರ್ದೇಶಕ ಬಸವಲಿಂಗಯ್ಯ 'ಬಸವಣ್ಣ ಹಾಗೂ ವಚನ ಸಾಹಿತ್ಯದ' ಆಧಾರದ ಮೇಲಿನ ಮುಂದಿನ ಯೋಜನೆಯನ್ನು ಪ್ರಕಟಿಸಿದಾಗ ಮತ್ತೊಂದು ಸುತ್ತಿನ  ಚಪ್ಪಾಳೆ ಪ್ರೇಕ್ಷಕರಿಂದ .  ಮಿಸ್ ಮಾಡಿಕೊಂಡರಿಗೆ ಡಿ.ವಿ. ಡಿ  ಲಭ್ಯವಿದೆ. ಹಂಸಲೇಖ ಅಭಿಮಾನಿಗಳಿಗೆ ನಾಟಕದ ಹಾಡುಗಳ ಸಿ.ಡಿ.ಯಂತೂ ಕಡ್ಡಾಯ. 


-ಪ್ರಶಾಂತ್ ಇಗ್ನೇಶಿಯಸ್ 
ಮಾತುಕತೆ ಪತ್ರಿಕೆಯಲ್ಲಿ ಪ್ರಕಟವಾದ ಬರಹ

No comments:

Post a Comment