Tuesday 13 February 2018

ನೀವೂ ನೋಡಿ - Fire proof - ಮನ ಮುಟ್ಟುವ ಚಿತ್ರ

ಈ ಬಾರಿ ಬರೆಯ ಹೊರಟಿರುವುದು ’ಫೈರ್ ಪ್ರೂಫ್’ ಎಂಬ ಚಿತ್ರದ ಬಗ್ಗೆ. 2008ರಲ್ಲಿ ಬಿಡುಗಡೆ ಈ ಚಿತ್ರದ  ನಿರ್ದೇಶಕರು ಆಲೆಕ್ಸ್ ಕೆನ್‍ಡ್ರಿಕ್. ಪ್ರಮುಖ ತಾರಾಗಣದಲ್ಲಿ ಕಿರ್ಕ್ ಕೆಮರೂನ್, ಎರಿನ್ ಬೆತಿಯಾ ಹಾಗೂ ಕೆನ್ ಬೆವಲ್ ಇದ್ದಾರೆ. ದಾಂಪತ್ಯ ಜೀವನದ ಬಗೆಗಿನ ಈ ಚಿತ್ರವನ್ನು ಅತ್ತ್ಯುತ್ತಮೆ ಕ್ರೈಸ್ತ ಚಿತ್ರಗಳಲ್ಲಿ ಒಂದು ಪರಿಗಣಿಸಲಾಗಿದೆ. ಆದರೆ ’ಕ್ರೈಸ್ತ ಚಿತ್ರ’ ಎಂಬ ಹಣೆಪಟ್ಟಿಯ ಹೊರತಾಗಿಯೂ ಇದೊಂದು ಉತ್ತಮ ಚಿತ್ರ ಎಂದರೆ ತಪ್ಪಾಗಲಾರದೇನೋ.

ಚಿತ್ರದ ಕಥಾವಸ್ತು ಸಾಮಾನ್ಯವಾದ್ದದಾದರೂ ಅನೇಕ ಸಾಮಾಜಿಕ ಹಾಗೂ ವ್ಯಕ್ತಿಗತ ಸಮಸ್ಯೆಗಳತ್ತ ಬೆಳಕು ಚೆಲ್ಲುವ ಅಂಶಗಳು ಚಿತ್ರದಲ್ಲಿದೆ. ಜೊತೆ ಜೊತೆಗೆ ಅಧ್ಯಾತ್ಮಿಕ ಹಾಗೂ ಮನಶಾಸ್ತ್ರದ ಎಳೆಯೂ ಚಿತ್ರದಲ್ಲಿ ಹಾಸು ಹೊಕ್ಕಿದೆ. ಈ ಕಾರಣದಿಂದಲೇ ಇದೊಂದು ವಿಭಿನ್ನವಾದ ಚಿತ್ರವಾಗಿ ಮೂಡಿ ಬಂದಿದೆ.

ಯುವ ದಂಪತಿಗಳಿಬ್ಬರ ನಡುವಿನ ದಾಂಪತ್ಯದಲ್ಲಿನ ಅಂತರ, ವಿರಸ, ಅಪನಂಬಿಕೆ, ಕೋಪ, ದು:ಖ ಹಾಗೂ ಹೊಸ ಜೀವನದೆಡೆಗಿನ ಮರು ಪಯಣದ ಚಿತ್ರಣ ಇಲ್ಲಿದೆ. ಇಲ್ಲಿ ಕೊನೆಗೆ ದಂಪತಿಗಳ ನೆರವಿಗೆ ಬರುವುದು ಕ್ರೈಸ್ತ ಮೌಲ್ಯಗಳ ಅಧಾರಸ್ತಂಭವೇ. ಸಾಮಾನ್ಯ ಹಾಲಿವುಡ್ ಚಿತ್ರಗಳ ಮನೋರಂಜನೆ, ಗಲ್ಲಾಪಟ್ಟಿಗೆಯ ಮೂಲ ಸೂತ್ರಗಳಿಂದ ಭಿನ್ನವಾಗಿ ಜೀವನ ಮೌಲ್ಯಗಳನ್ನು ಸಾರುವ ಅದರಲ್ಲೂ  ಕೌಟಂಬಿಕ ಆದರ್ಶಗಳನ್ನು ಸಾರುವ ಚಿತ್ರವಾಗಿ ನಿಲ್ಲುತ್ತದೆ ’ಫೈರ್ ಪ್ರೂಫ್’

ಮೊದಲೇ ತಿಳಿಸಿದಂತೆ ಇದು ಹಾಲಿವುಡ್‍ನ ಇತರ ಚಿತ್ರಗಳಂತೆ ದೊಡ್ಡ ಬಡ್ಜೆಟ್‍ನ ಚಿತ್ರವಲ್ಲ. ತಾರಾ ವರ್ಚಿಸಿರುವ ದೊಡ್ಡ ನಟ ನಟಿಯರೂ ಇಲ್ಲಿಲ್ಲ. ನಿರ್ದೇಶಕರೂ ಅಂತಹ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದವರಿಲ್ಲ. ಅದಕ್ಕಿಂತ ಆಸಕ್ತಿಕರ ವಿಷಯವೆಂದರೆ ಕೇವಲ 3.5 ಕೋಟಿ ರುಪಾಯಿಗಳ ವೆಚ್ಚದಲ್ಲಿ ತಯಾರಾದ ಚಿತ್ರ. ಅಂದರೆ ಇಂದಿನ ಅತಿ ಸಾಮಾನ್ಯ ಕನ್ನಡ ಚಿತ್ರಕ್ಕಿಂತ ಕಡಿಮೆ ವೆಚ್ಚ. ಆದರೆ ತೆರೆಯ ಮೇಲೆ ತಾಂತ್ರಿಕವಾಗಿ ಉತ್ತಮವಾಗಿ ಮೂಡಿ ಬಂದಿದೆ. ವಿಮರ್ಶಕರ ಟೀಕೆ ಹಾಗೂ ಪ್ರತಿಕೂಲ ತೀರ್ಪಿನ ನಡುವೆಯೂ ಸುಮಾರು 200 ಕೋಟಿ ಗಳಿಸಿ, ಯಶಸ್ವಿ ಎನಿಸಿಕೊಂಡ ಚಿತ್ರವಿದು.

ಚಿತ್ರದ ನಾಯಕ ಕ್ಯಾಲಬ್ ಹಾಗೂ ನಾಯಕಿ ಹೋಲ್ಟ್ ಯುವ ದಂಪತಿಗಳು. ಸಣ್ಣ ನಗರವೊಂದರ ಅಗ್ನಿ ಶಾಮಕ ದಳದ ಮುಖ್ಯಸ್ಥನಾಗಿರುವ ಕ್ಯಾಲಬ್ ಧೈರ್ಯಶಾಲಿ ಹಾಗೂ ಅನೇಕ ಸಾಹಸ ಕಾರ್ಯಗಳಿಂದ ಆ ನಗರದಲ್ಲಿ ಪ್ರಸಿದ್ಧ ವ್ಯಕ್ತಿ. ಅತನ ಹೆಂಡತಿ ಹೋಲ್ಟ್ ಅದೇ ನಗರದ ಆಸ್ಪತ್ರೆಯೊಂದರಲ್ಲಿ ಆಡಳಿತಾಧಿಕಾರಿ. ರೂಪವತಿ ಹಾಗೂ ಸುಂದರ ವ್ಯಕ್ತಿತ್ವದ ಹೋಲ್ಟ್ ಆಸ್ಪತ್ರೆಯಲ್ಲಿ ಎಲ್ಲರ ಅಚ್ಚುಮೆಚ್ಚು.

ಹೀಗೆ ಸುಂದರ ವ್ಯಕ್ತಿತ್ವದ ಈ ದಂಪತಿಗಳ ದಾಂಪತ್ಯ ಜೀವನ ಮಾತ್ರ ಇರಿಸುಮುರಿಸಿನದು. ಯಾವುದೇ ವಿಷಯದಲ್ಲೂ ಇಬ್ಬರಲ್ಲಿ ಸಹಮತವಿಲ್ಲ. ಎಲ್ಲದಕ್ಕೂ ವಾದ, ಜಗಳ, ಮನಸ್ತಾಪ. ಹೋಲ್ಟ್ ಗೆ ತನ್ನ ಗಂಡ ತನ್ನನ್ನು ಪ್ರೀತಿಸುತ್ತಿಲ್ಲ, ತನ್ನ ಆಸೆಗಳಿಗೆ ಸ್ಪಂದಿಸುತ್ತಿಲ್ಲ ಎಂಬ  ಭಾವ. ಇತ್ತ ಕ್ಯಾಲಿಬ್ ತಾನು ಸಮಾಜದಲ್ಲಿ ಇಷ್ಟು ಗೌರವಾನಿತ ವ್ಯಕ್ತಿಯಾದರೂ, ತನ್ನ ಹೆಂಡತಿಗೆ ತನ್ನ ಬಗ್ಗೆ, ತನ್ನ ಕೆಲಸದ ಬಗ್ಗೆ ಗೌರವವಿಲ್ಲ ಎಂಬ ಕೊರಗು, ಕೋಪ.

ಹೋಲ್ಟ್ ಗೆ ಖಾಯಿಲೆ ಬಿದ್ದಿರುವ ತನ್ನ ತಾಯಿಯ ವೈದ್ಯಕೀಯ ವೆಚ್ಚಗಳಿಗಾಗಿ ಹಣ ಕೂಡಿಡುವ ಗುರಿ. ಇತ್ತ ಕ್ಯಾಲಬ್‍ಗೆ ಒಂದು ಉತ್ತಮ ವಿಹಾರ ದೋಣಿಯನ್ನು ಕೊಂಡುಕೊಳ್ಳುವ ಕನಸು. ಕ್ಯಾಲಬ್‍ಗೆ ಅಶ್ಲೀಲ ಚಿತ್ರಗಳನ್ನು ವೀಕ್ಷಿಸುವ ಗೀಳು,  ಹೋಲ್ಟ್ ದು ತನ್ನದೇ ಆಸ್ಪತ್ರೆಯಲ್ಲಿನ ಯುವ ಡಾಕ್ಟರ್ ನತ್ತ ಹೊರಳುತ್ತಿರುವ ಚಿತ್ತ. ಮನೆಗೆಲಸ, ಅಡುಗೆಯ ವಿಷಯಗಳಲ್ಲೂ ಇಬ್ಬರಲ್ಲೂ ಸದಾ ಜಗಳ. ಸಹಜೀವನ ಇನ್ನೂ ಸಾಧ್ಯವೇ ಇಲ್ಲ ಎಂಬ ನಿರ್ಧಾರಕ್ಕೆ ಬಂದು ಇಬ್ಬರೂ ವಿವಾಹ ವಿಚ್ಛೇದನದ ನಿರ್ಧಾರಕ್ಕೆ ಬರುತ್ತಾರೆ.

ಇಂತಹ ಸಮಯದಲ್ಲಿ ಕ್ಯಾಲಬ್‍ನ ನೆರವಿಗೆ ಬರುವುದು ಆತನ ಸಹೋದ್ಯೋಗಿ ಮೈಕಲ್ ಹಾಗೂ ಕ್ಯಾಲಬ್‍ನ ತಂದೆ. ಮೈಕಲ್ ತಾನೂ ಕೂಡ ದಾಂಪತ್ಯ ಸಮಸ್ಯಗಳನ್ನು ಎದುರಿಸಿದ್ದೂ ದಾಂಪತ್ಯ ಸಲಹೆಗಾರರ ಸಹಾಯ ಪಡೆದು ಈಗ ಸುಖಿಯಾಗಿರುವುದಾಗಿ ಹೇಳುತ್ತಾನೆ. ಕ್ಯಾಲಬ್ ಮೂರನೆಯ ವ್ಯಕ್ತಿಯಿಂದ ತನ್ನ ಸಮಸ್ಯೆಗೆ ಪರಿಹಾರ ಸಾಧ್ಯವಿಲ್ಲವೆಂದೂ, ತನ್ನ ದಾಂಪತ್ಯ ಮುಗಿದ ಆಧ್ಯಾಯವೆಂದು ತಿಳಿಸುತ್ತಾನೆ.

ಇದೇ ಸಮಯದಲ್ಲಿ ಕ್ಯಾಲಬ್‍ನನ್ನು ಭೇಟಿ ಮಾಡಲು ಬರುವ ಆತನ ತಂದೆ ತಾಯಿಗಳು ತಮ್ಮ ದಾಂಪತ್ಯ ಸಮಸ್ಯೆ ಹಾಗೂ ಅದಕ್ಕೆ ತಾವು ಕಂಡುಕೊಂಡ ಪರಿಹಾರದ ಬಗ್ಗೆ ಮಾತಾಡುತ್ತಾರೆ. ಅದರಲ್ಲೂ ಅತನ ತಂದೆ ಕ್ಯಾಲಬ್‍ಗೆ 40 ದಿನಗಳ ಕಾಲ ಒಂದು ಪ್ರಯೋಗದ ಬಗ್ಗೆ ಪ್ರಸ್ತಾಪಿಸಿ, ಅದನ್ನು ಪ್ರಯತ್ನಿಸಲು ಸಲಹೆ ನೀಡುತ್ತಾರೆ. ಜೊತೆಗೆ ಕ್ರಿಸ್ತನ ಶುಭಸಂದೇಶದ ಮಹತ್ವ  ಅದರ ಸಹಾಯದಿಂದ ಹೊಸ ಜೀವನ ಪ್ರಾರಂಭಿಸುವ ಬಗ್ಗೆಯೂ ಮಾತಾಡುತ್ತಾರೆ. ಯೇಸು ಕ್ರಿಸ್ತನ ಬಗ್ಗೆ  ಯಾವುದೇ ಆಸಕ್ತಿ ಇಲ್ಲದ ಕ್ಯಾಲಬ್ ತಂದೆಯ ಒತ್ತಾಯದಿಂದಾಗಿ ಆ ಪ್ರಯೋಗಕ್ಕೆ ಅಣಿಯಾಗಿ ಮಾರನೆಯ ದಿನದಿಂದಲೇ ಆದನ್ನು ಪಾಲಿಸಲು ಪ್ರಾರಂಭಿಸುತ್ತಾನೆ.

ಮೊದ ಮೊದಲು ಬಹಳ ಕಷ್ಟವಾಗಿ ಪರಿಣಮಿಸುವ ಈ ಪ್ರಯೋಗಕ್ಕೆ ಅವನ ಮನಸ್ಸು ಹೊಂದಿಕೊಳ್ಳತೊಡಗುತ್ತದೆ. ತನ್ನ ತಂದೆಯ ಸಹಾಯದಿಂದ ಒಂದೊಂದೇ ದಿನವನ್ನು ಕಳೆಯುತ್ತಾ ಸಾಗುತ್ತಾನೆ. ಮೊದ ಮೊದಲು ಪ್ರತಿರೋಧಿಸುವ ಹೋಲ್ಟ ಸಹಾ ಕ್ಯಾಲಬ್‍ನ ಬದಲಾವಣೆಗಳಿಗೆ ಹೇಗೆ ಸ್ಪಂದಿಸುತ್ತಾಳೆ ಎನ್ನುವುದು ಚಿತ್ರದ ಮುಂದಿನ ಭಾಗ.

40 ದಿನಗಳ ಈ ಪರಿವರ್ತನೆಯ ಸಮಯದಲ್ಲಿ ಕ್ರೈಸ್ತ ಮೌಲ್ಯಗಳಾದ ಸಹನೆ, ಕ್ಷಮೆ, ಪ್ರೀತಿ, ತ್ಯಾಗ, ದುಶ್ಚಟಗಳ ನಿಗ್ರಹಣೆಗಳನ್ನು ಸಾಧಿಸುತ್ತಾ ಸಾಗುವ ಪರಿ ಮನಮುಟ್ಟುವಂತಿದೆ. ಕ್ರೈಸ್ತ ವಿಶ್ವಾಸ, ಮೌಲ್ಯಗಳು ಹಾಗೂ ಶುಭ ಸಂದೇಶಗಳಲ್ಲಿ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಿದೆ ಎಂದು ತೋರುವ ಪ್ರಯತ್ನದಲ್ಲಿ ಚಿತ್ರ ಗೆಲ್ಲುತ್ತದೆ. ಮನ ಮುಟ್ಟುವ ನಟನೆ, ನಿರೂಪಣೆಯಿಂದಾಗಿ ಚಿತ್ರ ಮನದಲ್ಲಿ ನಿಲ್ಲುತ್ತದೆ.

ಚಿತ್ರದ ಕೊನೆಯಲ್ಲಿ ದಂಪತಿಗಳು ಮತ್ತೆ ಮದುವೆಯ ಸಂಸ್ಕಾರವನ್ನು ಸ್ವೀಕರಿಸುತ್ತಾರೆ. ಈ ಬಾರಿ ದೇವರ ಇಚ್ಚೆಯಂತೆ ಅವರ ಮದುವೆಯಾಗುತ್ತದೆ ಎಂಬ ಸಂದೇಶವನ್ನು ಚಿತ್ರ ನೀಡುತ್ತದೆ. ಈ ರೀತಿಯ ಹಲವಾರು ಸಣ್ಣ ಸಣ್ನ ಸಂದೇಶಗಳು ಚಿತ್ರದ ಉದ್ದಕ್ಕೂಸಿಗುತ್ತದೆ. ನೋಡಲೇಬೇಕಾದ ಚಿತ್ರವಿದು. 

No comments:

Post a Comment