Monday 1 May 2017

May 1

ಒಂದಷ್ಟು ವರ್ಷಗಳ ಹಿಂದೆ ಒಂದು ಜೋಕ್ ಪ್ರಚಲಿತವಾಗಿತ್ತು. ಅದು ಈಗಲೂ ಪ್ರಸ್ತುತ. ’ತಾಜ್ ಮಹಾಲ್ ಕಟ್ಟಿದ್ದು ಯಾರು?’ ಎಂಬ ಪ್ರಶ್ನೆಗೆ ’ಕಲ್ಲು ಮಣ್ಣು ಹೊತ್ತ ಕೂಲಿಯವರು’ ಎಂಬ ಉತ್ತರ ಬರುತಿತ್ತು.  ಶಹಜಹಾನಿನ ಆ ಕನಸಿಗೆ ಹೆಗಲು, ಬೆವರು ಕೊಟ್ಟವರು ಅಸಂಖ್ಯಾತ ಕೂಲಿ ಕೆಲಸಗಾರರೇ ಅಲ್ಲವೇ? ಜಗತ್ತಿನ ಅತ್ಯದ್ಭುತ ಕಟ್ಟಡಗಳ, ಸ್ಮಾರಕಗಳ ಹಿಂದಿನ ಶ್ರಮ ಕಾರ್ಮಿಕರದ್ದೇ. "ಪ್ರತಿಭೆ ಮಹತ್ವದ ಕಾರ್ಯಗಳನ್ನು ಆರಂಭಿಸಹುದು, ಕಾರ್ಮಿಕ ಅಥವಾ ಶ್ರಮಿಕ ಮಾತ್ರ ಅದನ್ನು ಪೂರ್ಣಗೊಳಿಸಬಲ್ಲ" ಎಂಬ ಮಾತಿದೆ. ಈ ಮಾತಿನ ಅರ್ಥ ಬಹಳ ಸರಳ . ಕೇವಲ ಪ್ರತಿಭೆ ಅಥವಾ ದೊಡ್ಡ ಆಲೋಚನೆ, ಯೋಜನೆಗಳಿಂದ ಮಾತ್ರ ಕಾರ್ಯಗಳು ಕೈಗೂಡುವುದಿಲ್ಲ, ಅದಕ್ಕೆ ಶ್ರಮಪಡುವ ಕಾರ್ಮಿಕರು ಅತ್ಯವಶ್ಯ ಎಂದು.

ನಮ್ಮ ಅಧುನಿಕ ಜಗತ್ತು ಅದೇನೆ ಐ.ಟಿ, ಬಿಟಿ, ಸಾಫ್ಟ್ ವೇರ್ ತಂತ್ರಜ್ಞಾನದಲ್ಲಿ ಮುಂದುವರಿದಿದ್ದರೂ ಕಾರ್ಮಿಕನಿಲ್ಲದ, ಆತನ ಬೆವರಿನ ಶ್ರಮವಿಲ್ಲದ ಜಗತ್ತು ಇಲ್ಲ. ಕಾರ್ಮಿಕ ಹಾಗೂ ಬೆವರಿನ ಶ್ರಮ ಈ ಲೋಕದಷ್ಟೇ ಹಳೆಯದು. ನಿರಂತರ ಶೋಷಣೆ, ದಬ್ಬಾಳಿಕೆ ಒಳಗಾದರೂ ಕಾರ್ಮಿಕರ ಸಂಖ್ಯೆ ಇಳಿದಿಲ್ಲ. ಆತನ ಕಷ್ಟವೂ ಕಡಿಮೆಯಾಗಿಲ್ಲ. ಇಂತಹ ಸಮಯದಲ್ಲಿ ಕಾರ್ಮಿಕನ ಬಗ್ಗೆ ಒಂದಷ್ಟು ನೆನಪು ಆತನ ಬಗ್ಗೆ ಸಹಾನುಭೂತಿ ಬರುವುದು ಕಾರ್ಮಿಕರ ದಿನ ಬಂದಾಗಲೇ. ವಿಶ್ವದ ಬಹುತೇಕ ದೇಶಗಳು ’ಕಾರ್ಮಿಕರ ದಿನ’ವನ್ನು ಮೇ ೧ ರಂದೇ ಅಚರಿಸುತ್ತದೆ. ಕಾರ್ಮಿಕ ಸಂಘ ಸಂಸ್ಥೆಗಳು, ಸಂಘಟನೆಗಳು ಆ ದಿನವನ್ನು ಅನೇಕ ರೀತಿಯಲ್ಲಿ ಆಚರಿಸುತ್ತವೆ. ಮೆರವಣಿಗೆಗಳು, ಕಾರ್ಯಕ್ರಮಗಳು ವಿಚಾರ ಸಂಕಿರಣಗಳು ನೆಡೆಯುತ್ತದೆ. ಅಂದು ಎಲ್ಲರಿಗೂ  ಕಡ್ಡಾಯ ರಜೆ ಎನ್ನುವುದು ಮತ್ತೊಂದು ಆಕರ್ಷಣೆ. ಆದರೆ ಈ ಮೇ ೧ ರ ಆಚರಣೆ ಹೇಗೆ ಪ್ರಾರಂಭವಾಯಿತು ಎಂದು ಇತಿಹಾಸದತ್ತ ನೋಟ ಹರಿಸಿದಾಗ, ಆಸಕ್ತಿದಾಯಕ ವಿಷಯಗಳು ಗಮನಕ್ಕೆ ಬರುತ್ತವೆ.

೧೮ನೇ ಶತಮಾನದಲ್ಲಿ ಆರಂಭವಾದ ಕೈಗಾರಿಕಾ ಕ್ರಾಂತಿ, ವಿಶ್ವದ ಅನೇಕ ಅಭಿವೃದ್ಧಿ ಹೊಂದುತ್ತಿದ್ದ ದೇಶಗಳಲ್ಲಿ ಅನೇಕ ಕಾರ್ಖಾನೆಗಳ ಪ್ರಾರಂಭಕ್ಕೆ ಕಾರಣವಾಯಿತು. ಬ್ರಿಟನ್, ಫ್ರಾನ್ಸ್, ಅಮೇರಿಕಾ ಮುಂತಾದ ದೇಶಗಳಲ್ಲಿ ಲಕ್ಷಾಂತರ ಜನರು ಈ ಕಾರ್ಖಾನೆಗಳಲ್ಲಿ ಕೆಲಸ ಮಾಡತೊಡಗಿದರು. ಕೆಟ್ಟ ವಾತಾವರಣ, ಕನಿಷ್ಠ ಸೌಲಭ್ಯಗಳೂ ಇಲ್ಲದ ಈ ಕಾರ್ಖಾನೆಗಳಲ್ಲಿ ಕಾರ್ಮಿಕರ ಕಷ್ಟ ಹೇಳ ಸಾಧ್ಯವಿಲ್ಲದಂತಿತ್ತು. ಈ ನಡುವೆ ಕಾರ್ಖಾನೆಯ ಮಾಲೀಕರು ಕಾರ್ಮಿಕರನ್ನು ದಿನಕ್ಕೆ ೧೦ ರಿಂದ ೧೬ ಗಂಟೆಗಳ ಕಾಲ ದುಡಿಸಿಕೊಳ್ಳಲು ಪ್ರಾರಂಭಿಸುತ್ತಾರೆ. ಇದು ನಿಜಕ್ಕೂ ಕಾರ್ಮಿಕರ ಮೇಲೆ ಮಾನಸಿಕ ಹಾಗೂ ದೈಹಿಕ ಪರಿಣಾಮಗಳನ್ನು ಬೀರಲು ಪ್ರಾರಂಭಿಸುತ್ತದೆ. ೧೮೧೦ರಲ್ಲೇ ರಾಬರ್ಟ್ ಓವನ್ ಎಂಬ ನಾಯಕ ದಿನಕ್ಕೆ ಗರಿಷ್ಠ ’೧೦ ಗಂಟೆ ಮಾತ್ರದ ಕೆಲಸ’ ಎಂಬುದರತ್ತ ದನಿ ಎತ್ತುತ್ತಾನೆ.  ಕ್ರಮೇಣ ೮ ಗಂಟೆಗಳ ಅವಧಿಯ ಕೆಲಸದ ಬಗ್ಗೆ ಬೇಡಿಕೆಗಳು, ಮುಷ್ಕರಗಳು, ಧರಣಿಗಳು ಕಾರ್ಮಿಕ ವಲಯದಿಂದ ಪ್ರಾರಂಭವಾಗುತ್ತದೆ. ಇಡೀ ೧೮ನೇ ಶತಮಾನದ ಉದ್ದಕ್ಕೂ ಈ ರೀತಿಯ ಸಂಘರ್ಷಗಳು ನಡೆಯುತ್ತಲೇ ಇದ್ದವು. ೧೮೮೬ರ ಮೇ ೪ರಂದು ಇದೇ ರೀತಿಯ ಕಾರ್ಮಿಕ ಮುಷ್ಕರವೊಂದು ಅಮೇರಿಕಾದ ಚಿಕಾಗೋ ನಗರದ ಹೇಮಾರ್ಕೆಟ್ ಎಂಬಲ್ಲಿ ನಡೆಯುತ್ತದೆ. ಆ ಮುಷ್ಕರದ ಮುಖ್ಯ ಬೇಡಿಕೆ ಅದೇ ೮ ಗಂಟೆಗಳ ಕೆಲಸದ ಅವಧಿಯ ಬಗ್ಗೆಯೇ ಆಗಿತ್ತು.ಹಿಂದಿನ ದಿನ ನಡೆದ ಕಾರ್ಮಿಕರ ಮೇಲಿನ ಮಾರಣಾಂತಿಕ ದೌರ್ಜನ್ಯದ ಮೇಲಿನ ಪ್ರತಿಭಟನೆಯೂ ಅದಾಗಿತ್ತು.

ಶಾಂತಿಯುತವಾಗಿ ನಡೆಯುತ್ತಿದ್ದ ಮುಷ್ಕರದಲ್ಲಿ ಅಚಾನಕ್ಕಾಗಿ ಬಾಂಬೊಂದು ಸಿಡಿಯುತ್ತದೆ. ಇದರಿಂದಾಗಿ ಒಬ್ಬ ಪೋಲಿಸ್ ಅಧಿಕಾರಿ ಸತ್ತು ಆರು ಜನ ಗಾಯಗೊಳ್ಳುತ್ತಾರೆ. ನಂತರ ನಡೆದ ಪೋಲಿಸ್ ಹಾಗೂ ಕಾರ್ಮಿಕರ ತಿಕ್ಕಾಟದಲ್ಲಿ ಅನೇಕ ಸಾವು ನೋವುಗಳು ಸಂಭವಿಸುತ್ತವೆ. ಅಂದು ನಡೆದ ಆ ಘಟನೆಯಿಂದಾಗಿ ಕಾರ್ಮಿಕ ಹಾಗೂ ಮಾಲೀಕರ ನಡುವಿನ ಒಂದು ದೊಡ್ಡ ಕಂದರ ಉಂಟಾಗುತ್ತದೆ. ಆ ಘಟನೆಗಳ ಬಗ್ಗೆ ನಂತರ ನಡೆದ ವಿಚಾರಣೆ, ಕೋರ್ಟ್ ಕೇಸುಗಳಲ್ಲಿ ೭ ಜನ ಕಾರ್ಮಿಕ ಪರ ನಾಯಕರಿಗೆ ಮರಣ ದಂಡನೆ ವಿಧಿಸಲಾಗುತ್ತದೆ. ಅದರಲ್ಲಿ ಇಬ್ಬರ ಶಿಕ್ಷೆಯನ್ನು ಜೀವಾವಧಿಗೆ ಇಳಿಸಲಾಗುತ್ತದೆ. ಮತ್ತೊಬ್ಬ ಆರೋಪಿಯು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ.

ಇದು ಅನ್ಯಾಯದ ತೀರ್ಪು ಎಂಬ ಕಾರಣಕ್ಕಾಗಿವಿಶ್ವದಾದ್ಯಂತ ಅನೇಕ ಪ್ರತಿಭಟನೆಗಳು ಪ್ರಾರಂಭವಾಗುತ್ತದೆ.  ಮರಣ ದಂಡನೆಗೆ ಗುರಿಯಾದವರು ಕಾರ್ಮಿಕರ ಕಣ್ಣಲ್ಲಿ ತಮ್ಮ ಪರವಾಗಿ ಸತ್ತ ಹುತ್ತಾತ್ಮ ನಾಯಕರಾಗುತ್ತಾರೆ. ಕಾರ್ಮಿಕ ಸಂಘಟನೆಗಳು ಇದರಿಂದಾಗಿ ಮತ್ತಷ್ಟು ಸಂಘಟಿತರಾಗಿ ಬೆಳೆಯುತ್ತವೆ. ಕಾರ್ಮಿಕ ಪರ ದನಿ ದೊಡ್ಡ ಮಟ್ಟದಲ್ಲಿ ಬೆಳೆದು ಸಂಸ್ಥೆಗಳ ರೂಪ ಪಡೆಯುತ್ತವೆ. ಇದರ ಪರಿಣಾಮವಾಗಿ ೧೯೦೪ರಲ್ಲಿ ನಡೆದ ಕಾರ್ಮಿಕರ  ಸಂಘಟನೆಗಳ Sixth Conference of the Second International ಕೂಟದಲ್ಲಿ ಈ ಹೇಮಾರ್ಕೆಟ್ ಘಟನೆಯ ಸ್ಮರಣಾರ್ಥ ಪ್ರತಿ ಮೇ ೧ ರಂದು ಅಂತರರಾಷ್ಟ್ರೀಯ ಕಾರ್ಮಿಕರ ದಿನವನ್ನು ಆಚರಿಸುವ ನಿರ್ಣಯಕ್ಕೆ ಬರಲಾಗುತ್ತದೆ.

ಅಂದಿನಿಂದ ಅನೇಕ ರಾಷ್ಟ್ರಗಳಲ್ಲಿ ಇದನ್ನು ಆಚರಿಸಿಕೊಂಡು ಬರಲಾಗಿದೆ. ಕಾರ್ಮಿಕರ ದಿನವನ್ನು ಕಾರ್ಮಿಕರ ಆಶೋತ್ತರ, ಹಕ್ಕುಗಳಿಗೆ  ಪ್ರತೀಕವಾಗಿ ಬಳಸಿಕೊಳ್ಳಲಾಗಿದೆ. ಕ್ರೈಸ್ತ ಧರ್ಮಸಭೆ ಕೂಡ ಕಾರ್ಮಿಕರ ಪಾಲಕ ಸಂತರಾದ ಜೋಸೆಫರ ಹಬ್ಬವನ್ನು ಆಚರಿಸುವುದರ ಮೂಲಕ ತಾನು ಕಾರ್ಮಿಕರ , ಶ್ರಮಿಕರ ಪರ ಎಂದು ತೋರಿಸಿಕೊಟ್ಟಿದೆ.

ಕಾರ್ಮಿಕ ನಾಯಕನಾಗಿದ್ದು ಹೇಮಾರ್ಕೆಟ್ ಘಟನೆಯಲ್ಲಿ ಮರಣದಂಡನೆಗೆ ಒಳಗಾದ ಆಗಸ್ಟ್ ಸ್ಪೈಸ್ ಹೇಳಿದ ಮಾತು ಶೋಷಿತ, ದಮನಕ್ಕೊಳಗಾದ ಜನರ ಪಾಲಿಗೆ ಅಮರ ವಾಕ್ಯವಾಗಿದೆ. ನೇಣು ಕುಣಿಕೆಗೆ ಹಾಕುವ ಮುನ್ನ ಕೊನೆಯ ಮಾತಾಗಿ ಸ್ಪೈಸ್ ಹೇಳಿದ್ದೇನೆಂದರೆ " ನೀವು ಇಂದು ಅದುಮಿಡುತ್ತಿರುವ ದನಿಗಿಂತ ನಮ್ಮ ಮೌನವೇ ಶಕ್ತಿಶಾಲಿಯಾಗಿ ರೂಪುಗೊಳ್ಳುವ ಸಮಯವೊಂದು ಬರುತ್ತದೆ." ಆತನ ಮಾತು ನಿಜವೆಂಬಂತೆ ಕಾರ್ಮಿಕರ ಪರವಾದ ಚಿಂತನೆಗಳು ಮುಂದೆ  ದೊಡ್ಡ ದನಿಯಾಗಿ ಬೆಳೆಯಿತು ಎಂಬುದಕ್ಕೆ ಮೇ ೧ ಸಾಕ್ಷಿಯಾಗಿದೆ. ಆದರೆ ಕಾರ್ಮಿಕರೂ ಸೇರಿದಂತೆ  ನೊಂದ, ಶೋಷಿತರ ದನಿಗಳಿಗೆ ಪೂರ್ಣ ಶಕ್ತಿ, ಸ್ವಾತಂತ್ರ್ಯ ದೊರಕಿದೆಯೇ ಎಂಬುದು ಇಂದಿಗೂ ಪ್ರಶ್ನೆಯಾಗಿಯೇ ಉಳಿದಿದೆ.

No comments:

Post a Comment