Tuesday 30 May 2017

ನನ್ನ ಮೆಚ್ಚಿನ ಫಾ.ಚಸರಾ ಹಾಡುಗಳು - ಭಾಗ 10 - ’ಸಂವೇದ್ಯ’

’ಸಂವೇದ್ಯ’

ಫಾ.ಚಸರಾರವರ ಇನ್ನೂ ಅನೇಕ ಗೀತೆಗಳ ಬಗ್ಗೆ ಬರೆಯಬಹುದಾದರೂ ’ಸಂವೇದ್ಯ’ ಧ್ವನಿಸುರಳಿಯ ಬಗ್ಗೆ ಪ್ರತ್ಯೇಕವಾಗಿ ಬರೆಯಲೇ ಬೇಕಾಗುತ್ತದೆ. ಈಗಾಗಲೇ ಈ ಧ್ವನಿಸುರಳಿಯ ಮೂರ್ನಾಲ್ಕು ಹಾಡುಗಳ ಬಗ್ಗೆ ಬರೆದಿದ್ದಾಗಿದೆಯಾದರೂಈ ಧ್ವನಿ ಸುರಳಿಯ ಒಟ್ಟು ಹಿನ್ನಲೆ, ಪರಿಣಾಮ, ಸಾಂಸ್ಕೃತಿಕ ಮಹತ್ವದ ಬಗ್ಗೆ ಉಲ್ಲೇಖಿಸಲೇಬೇಕಾಗುತ್ತದೆ.

ಎಲ್ಲರಿಗೂ ತಿಳಿದಿರುವಂತೆ ’ಸಂವೇದ್ಯ’  ಧ್ವನಿಸುರಳಿ, ಮರಿಯಾಪುರದಲ್ಲಿ ಫಾ. ತೋಮಸ್ ನಿರ್ದೇಶನದಲ್ಲಿ ನಡೆಯುತ್ತಾ ಬಂದಿರುವ ’ಕ್ರಿಸ್ತ ದ್ವನಿ’ ಮಹಿಮೆ ನಾಟಕದಲ್ಲಿನ  ಹಾಡುಗಳ ಗುಚ್ಛ. ಹಿಂದಿನ ಸಂಚಿಕೆಯೊಂದರಲ್ಲಿ ಹೇಳಿದಂತೆ ಕನ್ನಡ ಕ್ರೈಸ್ತರು ಮಾತ್ರವಲ್ಲದೆ ಇಡೀ ಕ್ರೈಸ್ತ ಸಮುದಾಯ, ಕನ್ನಡ ಸಾಂಸ್ಕೃತಿಕ ಲೋಕ ಹೆಮ್ಮೆಪಡಬಹುದಾದ ಸಾಂಸ್ಕೃತಿಕ, ಧಾರ್ಮಿಕ ಕಾರ್ಯಗಳಲ್ಲಿ ಇದು ಒಂದು.

ಕರ್ನಾಟಕದ ಹಾಗೂ ತಮಿಳುನಾಡಿನ ಅನೇಕ ಕ್ರೈಸ್ತ ಗ್ರಾಮಗಳಲ್ಲಿ ಹಬ್ಬ, ಜಾತ್ರೆ, ವಿಶೇಷ ಸಂದರ್ಭಗಳಲ್ಲಿ ಕ್ರೈಸ್ತ ನಾಟಕಗಳು ನಡೆದುಕೊಂಡು ಬಂದಿದೆ. ತಮಿಳುನಾಡಿನ ಪಳ್ಳಪಟ್ಟಿ ಹಾಗೂ ಹಾರೋಬೆಲೆಯ ಮಹಿಮೆ ನಾಟಕಗಳು ಸಾಕಷ್ಟು ಜನಪ್ರಿಯವೂ ಹೌದು.  ಹಾರೋಬೆಲೆಯ ಮಹಿಮೆ ನಾಟಕಕ್ಕೆ ನೂರು ವರ್ಷಗಳ ಇತಿಹಾಸವೂ ಇದೆ. ಈ ಹಿನ್ನಲೆಯಲ್ಲಿ ಇವುಗಳಿಗಿಂತ ಭಿನ್ನವಾದ ಧ್ವನಿ ಬೆಳಕಿನ ಮೂಲಕ ವಿಶಾಲವಾದ ವೇದಿಕೆಯಲ್ಲಿ ಬೈಬಲ್ ಅಧಾರಿತ ನಾಟಕವನ್ನು ಮಾಡಬೇಕೆನ್ನುವ ನಿರ್ಧಾರವೇ ಒಂದು ದೊಡ್ಡ ಸಾಹಸ. 

ಈ ನಿಟ್ಟಿನಲ್ಲಿ ಈ ಸಾಹಸಕ್ಕೆ ಕೈ ಹಾಕಿದ ಫಾ.ತೋಮಾಸರ ಧೈರ್ಯ ಮೆಚ್ಚತಕ್ಕದೆ. ಒಂದೀಡಿ ಗ್ರಾಮದ ಜನರ ಸಹಕಾರ, ತಕ್ಕ ಬಯಲು, ತಕ್ಕಮಟ್ಟಿನ ಆರ್ಥಿಕ ಬಲ ಎಲ್ಲವೂ ಹೊಂದಿಸಿದ ಮೇಲೆ ನಿಜಕ್ಕೂ ಸವಾಲಾಗುವಂತದ್ದು ನಾಟಕದ ಕಥಾವಸ್ತು, ನಿರೂಪಣೆ ಹಾಗೂ ಸಾಹಿತ್ಯ. ಮೊದಲೇ ಹೇಳಿದಂತೆ ನಾಟಕಗಳ ಇತಿಹಾಸವಿದ್ದೂ, ಸಂಪ್ರದಾಯಸ್ತ ಮನಸ್ಸುಗಳ ನಡುವೆ ಯುವ ಸಮುದಾಯವನ್ನೂ ಆಕರ್ಷಿಸುವಂತ ಗಟ್ಟಿ ಸಾಹಿತ್ಯ ಮಾತ್ರವೇ ಈ ಮಹಿಮೆ ನಾಟಕವನ್ನು ಯಶಸ್ವಿಗೊಳಿಸಬೇಕಿತ್ತು. ಇಂದಿಗೂ ಈ ಮಹಿಮೆ ನಾಟಕ ಅತ್ತ್ಯುತ್ತಮ ಎನ್ನಬಹುದಾದ ರಂಗ ವಿನ್ಯಾಸ, ಬೆಳಕು ಹಾಗೂ ಸಮರ್ಥ ಮಾನವ ಸಂಪನ್ಮೂಲದ ಬಳಕೆಯಿಂದ ಶ್ರೇಷ್ಠವಾದ ರಂಗ ಚಟುವಟಿಕೆಯಾಗಿ ನಿಂತಿದೆ. ಆದರೆ ಅದಕ್ಕೆ ಸಮನಾದ ಆಧಾರ ಸ್ತಂಭವಾಗಿ ನಿಂತಿರುವುದು ಅದರ ಸಾಹಿತ್ಯ ಹಾಗೂ ಸಂಗೀತ.

ಇಲ್ಲಿನ ಹಾಡುಗಳು ನಿಜಕ್ಕೂ ಒಂದಕ್ಕಿಂತ ಒಂದು ಮೀರಿಸುವಂತದ್ದು. ಧ್ವನಿಸುರಳಿ ಮೊದಲಿಗೆ ಫಾ.ಚಸರಾರವರ ಸುಂದರ ನಿರೂಪಣೆಯಿದೆ. ನಂತರದ್ದು ಫಾ.ಫಿಲಿಪ್ ಸಿಜೋನ್‍ರವರ ಬಗೆಗಿನ ಹಾಡು. ಒಬ್ಬ ವ್ಯಕ್ತಿ ಒಂದು ಗ್ರಾಮಕ್ಕೆ, ಒಂದು ಸಮುದಾಯಕ್ಕೆ ಕೊಡಬಹುದಾದ ಸಾಮಾಜಿಕ, ಅಧ್ಯಾತ್ಮಿಕ, ಸಾಂಸ್ಕೃತಿಕ ಕೊಡುಗೆಗಳ ಬಗ್ಗೆ ನೆನೆಯುತ್ತಾ, ಅದಕ್ಕೆ ಧನ್ಯತೆಯನ್ನು ಒಂದು ಹಾಡಿನಲ್ಲೇ ಹೇಗೆ ಸೂಚಿಸಬಹುದು ಎಂಬುದಕ್ಕೆ ಉದಾಹರಣೆಯಾಗಿದೆ ಈ ಹಾಡು. ಈ ಗೀತೆಯ ಸಾಹಿತ್ಯ, ಸಂಗೀತ, ವಾದ್ಯ ಸಂಯೋಜನೆ ಎಲ್ಲವೂ ಶ್ರೇಷ್ಠ ಮಟ್ಟದಲ್ಲಿದೆ. ಮುಂದೆ ಬರುವ ’ಬಾನಲಿ ದೂತರು ಹಾಡಿದರು’ ಗೀತೆಯ ಬಗ್ಗೆ ಈಗಾಗಲೇ ಇದೇ ಸಂಚಿಕೆಯಲ್ಲಿ ಬರೆಯಲಾಗಿದೆ. ಸುಂದರವಾದ ಕ್ರಿಸ್ತ ಜಯಂತಿಯ ಹಾಡು ಸಾಗುತ್ತಾ ಅನೇಕ ಆಯಾಮಗಳನ್ನು ಪಡೆದುಕೊಳ್ಳುತ್ತದೆ. ಅತ್ತ್ಯುತ್ತಮ ಎನ್ನಬಹುದಾದ ಗಾಯನ ಇಲ್ಲಿದೆ.

ಬಿತ್ತುವವನ ಸಾಮತಿ ಆಧಾರಿತ ’ಒಂದೂರಲ್ಲಿ ಒಬ್ಬ ರೈತನಿದ್ದ’ ಒಂದು ವಿಶೇಷವಾದ ಗೀತೆ. ಸಿ.ಅಶ್ವತ್ಥ್‍ರವರ ಕಂಠಸಿರಿ ಇಲ್ಲಿ ಕೊಡುಗೆಯಾಗಿದೆ.  ಈ ಗೀತೆ ಮನ ಸೆಳೆಯುವುದು ತನ್ನ ಸಂಗೀತದಿಂದ. ಸಾಹಿತ್ಯ ಎಂದಿನಂತೆ ಸರಳ ಆದರೆ ಪರಿಪೂರ್ಣ.  ಸಾಧು ಕೋಕಿಲರವರ ವಾದ್ಯ ಸಂಯೋಜನೆಯ ಬಗ್ಗೆ ಏನು ಹೇಳುವಂತಿಲ್ಲ. ಮಣ್ಣಿನ ಸೊಗಡು ಹಾಡಿನ ಪ್ರತಿ  ವಿಭಾಗ ಹಾಗೂ ಕ್ಷಣಗಳಲ್ಲೂ ಹಾಸು ಹೊಕ್ಕಿದೆ. ಇನ್ನೂ ’ನನ್ನ ಆತ್ಮವೂ ಕರ್ತರನ್ನು ಸ್ತುತಿಸುತ್ತದೆ’ ಹಾಡು ಹಳೆಯ ಗೀತೆಯನ್ನು ನೆನಪಿಸುತ್ತಾ ಹೊಸತಾದ ಅನುಭಾವವನ್ನು ಹೊರಡಿಸುತ್ತದೆ. ದೇವಮಾತೆಯ ಸ್ವಗತದ ಗೀತೆಗೆ ಇದಕ್ಕಿಂತ ಉತ್ತಮವಾದ ಸಂಗೀತ, ವಾದ್ಯ ಸಂಯೋಜನೆ ಸಾಧ್ಯವೇ ಎನ್ನುವಷ್ಟು ಮಧುರ.

’ಪರಲೋಕ ಪಾರ್ಥನೆ’ ಜಗತ್ತಿನ ಅತ್ಯಂತ ಸರಳ ಆದರೆ ಅಷ್ಟೇ ಜನಪ್ರಿಯ, ಪರಿಣಾಮಕ್ಕಾರಿಯಾದ ಪ್ರಾರ್ಥನೆ ಎಂಬ ಮಾತಿದೆ. ಆ ಮಾತಿಗೆ ಪುಷ್ಠಿ ನೀಡುವಂತ ಸರಳ ಸಂಗೀತ ಹಾಗೂ ಸಂಯೋಜನೆ ’ಪರಲೋಕ ತಂದೆಯೇ ನಿಮ್ಮ ನಾಮವು’ ಗೀತೆಗೆ ಒದಗಿ ಬಂದಿದೆ. ಗಾಯನ ಹಾಗೂ ಕೋರಸ್ ಅದೆಷ್ಟು ಸುಂದರವಾಗಿದೆ ಎಂದರೆ ಹಾಡು ಕೇಳುತ್ತಿದ್ದಂತೆ ಯೇಸು ಹಾಗೂ ಶಿಷ್ಯರ ಚಿತ್ರಣ ಕಣ್ಣ ಮುಂದೆ ಮೂಡಿ ಬರುತ್ತದೆ. ’ನನ್ನ ತಂದೆಯ ಈ ಆಲಯ’ ಗೀತೆಯ ಬಗ್ಗೆಯೂ ಇದೇ ಮಾತು ಅನ್ವಯವಾಗುತ್ತದೆ.

ಯೇಸು ಕ್ರಿಸ್ತ ಜೆರುಸಲೇಮ್ ನಗರವನ್ನು ಪ್ರವೇಶಿಸಿದಾಗ ಸಿಕ್ಕ ಅಭೂತಪೂರ್ವ ಸ್ವಾಗತ, ಪ್ರೀತಿಯನ್ನು ಅತ್ಯಂತ ಸಮರ್ಥವಾಗಿ, ಸುಂದರವಾಗಿ ಮಹಿಮೆಯ ವೇದಿಕೆಯ ಮೇಲೆ ತೋರಿಸಲು ಬೇಕಾದ ಲವಲವಿಕೆ ,ಶಕ್ತಿ ’ದಾವಿದ ಕುವರಗೆ ಹೊಸಾನ್ನ’ ಹಾಡಿನಲ್ಲಿದೆ. ಸಾಂಪ್ರದಾಯಿಕವಾದ ಸಾಹಿತ್ಯದ ಜೊತೆ ಜೊತೆಗೆ ಫಾ.ಚಸರಾ ತಮ್ಮದೇ ಆದ ಚಿಂತನೆಯನ್ನುಈ ಗೀತೆಯಲ್ಲಿ ಪೋಣಿಸಿದ್ದಾರೆ. ಸದಾ ಗುನುಗಬಹುದಾದ ಗೀತೆ.

ಧ್ವನಿಸುರಳಿಯ ಮುಂದಿನ ಎರಡು ಗೀತೆಗಳಾದ ’ ನನ್ನ ಸ್ವಾರ್ಥ ಮನಸ್ಸಿನ ಈ ಬದಕು’ ಹಾಗೂ ’ಅಗೋ ನೋಡಿ’ ಬಗ್ಗೆ ಇದೇ ಅಂಕಣದಲ್ಲಿ ಬರೆಯಲಾಗಿದೆ. ಈ ಎರಡು ಗೀತೆಗಳು ಈ ಧ್ವನಿಸುರಳಿಯ ಮೇಲ್ಮೆಯನ್ನು ಇನ್ನೂ ಎತ್ತರಕ್ಕೆ ಏರಿಸುತ್ತದೆ. ಕನ್ನಡದ ಅತ್ತ್ಯುತ್ತಮ ಪುನರುತ್ಥಾನ ಗೀತೆಗಳ ಸಾಲಿನಲ್ಲಿ ಇದೇ ಧ್ವನಿಸುರಳಿಯ ’ಪುನರುತ್ಥಾನರಾದರು ನಮ್ಮ ಯೇಸು ಕ್ರಿಸ್ತರು’ ಸಹಾ ಒಂದು. ಭಿನ್ನವಾದ, ಕೇವಲ ಫಾ.ಚಸರಾ ಚಿಂತನೆಯ ಬತ್ತಳಿಕೆಯಿಂದ ಮಾತ್ರ ಬರಬಹುದಾದ ಸಾಲುಗಳು ಈ ಹಾಡಿನಲ್ಲಿವೆ. ’ಮುಂಜಾನೆ ಮೂಡಿ ಬಂದು ಹೊಂಗಿರಣ ಚಿಮ್ಮಿಸಿತು’ ಎಂಬುದು ಯೇಸುವಿನ ಪುನರುತ್ಥಾನಕ್ಕೆ ಹೊಸ ಅರ್ಥವನ್ನೂ ನೀಡುತ್ತದೆ. ’ಸೂರ್ಯನು ಉದಯಿಸಿದ ಬದುಕೆಲ್ಲಾ ಹೊಸದಾಯಿತು, ಮನಸೆಲ್ಲಾ ಹಗುರಾಯಿತು’ ಎನ್ನುವ ಸಾಲುಗಳು ಚಸರಾರವರು ಕನ್ನಡ ಭಕ್ತಿ ಸಂಗೀತಕ್ಕೆ ತಂದ ಹೊಸ ಅಲೋಚನೆಗಳ ಪ್ರತಿಬಿಂಬವಾಗಿದೆ.   

ಇಷ್ಟು ಶ್ರೇಷ್ಠವಾದ ಹಾಡುಗಳು ಒಂದೇ  ಧ್ವನಿಸುರಳಿಯಲ್ಲಿ ಇರುವುದು ನಿಜಕ್ಕೂ ಅಪರೂಪದ ಸಂಗತಿಯಾಗಿರುವುದರಿಂದ ಈಡೀ  ಧ್ವನಿಸುರಳಿಯ ಬಗ್ಗೆ ಬರೆಯಬೇಕಾಯಿತು.
ಫಾ.ಚಸರಾರವರ  ಸಾಹಿತ್ಯ ಹಾಗೂ ಸಂಗೀತ ಎರಡು ದಶಕಗಳ ನಂತರವೂ ತನ್ನ ನಾವಿನ್ಯತೆಯನ್ನು ಕಳೆದುಕೊಂಡಿಲ್ಲ ಎಂದರೆ ಅದಕ್ಕೆ ಅವರ ದೂರದೃಷ್ಟಿ, ಪಾಂಡಿತ್ಯ, ಪ್ರತಿಭೆ, ಶ್ರಮ ಮಾತ್ರವಲ್ಲದೆ ಅವರು ನಂಬಿದ ಟೀಂ ವರ್ಕ್ ಕಾರಣವಾಗಿದೆ. ಹಳೆಯ ಹಾಗೂ ಹೊಸತನದ ಮಿಲನವಾಗಿರುವ ಈ ಸಾಹಿತ್ಯದಿಂದಾಗಿಯೇ ಈ ಧ್ವನಿಸುರಳಿಯ ಎಲ್ಲಾ ಹಾಡುಗಳು ಇಂದಿಗೂ ನನ್ನ ಮೆಚ್ಚಿನ ಮಾತ್ರವಲ್ಲದೆ ಕ್ರೈಸ್ತ ಸಮುದಾಯದ ಮೆಚ್ಚಿನ ಹಾಡುಗಳಾಗಿ ಜನಮನದಲ್ಲಿ ಬೆರೆತು ಹೋಗಿದೆ.

ಸಂಗೀತ ಹಾಗೂ ವಾದ್ಯ ಸಂಯೋಜನೆಯಲ್ಲಿ ದೃಶ್ಯಗಳಿಗೆ ಬೇಕಾದ ಭಾವನಾತ್ಮಕತೆಯನ್ನು ಕಾಪಾಡಿಕೊಳ್ಳಲಾಗಿದೆ. ಉದಾಹರಣೆಗೆ ’ನನ್ನ ತಂದೆ’,’ನನ್ನ ಆತ್ಮವು’,’ಪರಲೋಕ ತಂದೆಯ’ ಗೀತೆಗಳಲ್ಲಿ ಅತ್ಯಂತ ಕಡಿಮೆ ವಾದ್ಯಗಳನ್ನು ಬಳಸಿ ಮಾಧುರ್ಯಕ್ಕೆ ಆದ್ಯತೆ ನೀಡಲಾಗಿದೆ. ’ದಾವಿದ ಕುವರಗೆ ಹೊಸಾನ್ನ’ ಹಾಗೂ’ಪುನರುತ್ಥಾನರಾದರೇಸು’ ಗೀತೆಗಳಲ್ಲಿ ಸಂಭ್ರಮ ಹಾಸುಹೊಕ್ಕಿದೆ. ’ಒಂದೂರಿನಲ್ಲಿ’ ಅಪ್ಪಟ ದೇಸಿ ಶೈಲಿಯಲ್ಲಿದ್ದರೆ, ’ಗ್ಲೋರಿಯಾ’ ಹಾಗೂ ’ಜನತೆಯ ಬದುಕಿನ’ ಹಾಡುಗಳಲ್ಲಿ ಪ್ರಯೋಗವಿದೆ.  ’ನನ್ನ ಸ್ವಾರ್ಥ ’ಹಾಗೂ ’ಅಗೋ ನೋಡಿ’ ಗೀತೆಗಳ ಸಂಗೀತದಲ್ಲಿ ಕರುಣರಸ ಎದ್ದು ಕಾಣುತ್ತದೆ.

ಇಲ್ಲಿನ ಹಾಡುಗಳು ಬೈಬಲ್ ಘಟನೆಗಳಿಗೆ, ಅದರ ಆಶಯಕ್ಕೆ ಬದ್ಧವಾಗಿರುವುದರಿಂದ ಸಾಹಿತ್ಯದ ಆಳಕ್ಕೆ ಇಳಿದು ಹೇಳುವಂಥದ್ದೇನಿಲ್ಲ. ಗೊತ್ತಿರುವ ಸಂಗತಿಗಳನ್ನೇ ಸೃಜನಾತ್ಮಕವಾಗಿ, ಈ ಮಣ್ಣಿನ ಸೊಗಡಿಗೆ ಹತ್ತಿರವಾಗಿ, ಹೊಸ ಬಗೆಯಲ್ಲಿ ಕಟ್ಟಿಕೊಟ್ಟಿರುವ ಫಾ.ಚಸರಾರವರ ಪ್ರಯತ್ನವನ್ನು ಅಚ್ಚರಿಯಿಂದ, ಮೆಚ್ಚುಗೆಯಿಂದ ನೋಡಬಹುದಷ್ಟೇ.



No comments:

Post a Comment