Tuesday 10 June 2014

ಯಶಸ್ಸಿನ ಸೂತ್ರಗಳು??

ಹಳೆಯ ಕತೆ. ಇಬ್ಬರು ಗೆಳೆಯರು ಕಾಡಿನಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಹಠಾತ್ತನೆ ಎದುರಿಗೆ ಒಂದು ಹುಲಿ ಬರುವುದು ಕಾಣಿಸಿತು. ಹೇಗೆ ಓಡಿದರೂ ಹುಲಿಯಿಂದ ತಪ್ಪಿಸಿಕೊಳ್ಳುವುದು ಸಾಧ್ಯವಿರಲಿಲ್ಲ. ತಕ್ಷಣವೇ ಒಬ್ಬ ತನ್ನ ಕೈ ಚೀಲದಿಂದ ಓಡಲು ಉಪಯೋಗಿಸುವ ಶೂ ತೆಗೆದುಕೊಂಡು ಹಾಕಿಕೊಳ್ಳಲು ಪ್ರಾರಂಭಿಸಿದ. ಭಯದ ನಡುವೆಯೂ ಇನ್ನೊಬ್ಬನಿಗೆ ಇದು ಏಕೋ ಅತಿ ಎನಿಸಿತು. ಆ ಶೂ ಹಾಕಿಕೊಂಡರೆ ಹುಲಿಗಿಂತ ವೇಗವಾಗಿ ಓಡಿ ತಪ್ಪಿಸಿಕೊಳ್ಳಲು ಸಾಧ್ಯಾನ? ದಡ್ಡ” ಎಂದ. ಶೂ ಹಾಕಿ ನಿಂತವನು ಹೇಳಿದ “ಹುಲಿಗಿಂತ ಜೋರಾಗಿ ಓಡೋದು ಬೇಡ. ನಿನಗಿಂತ ಜೋರಾಗಿ ಓಡಿದರೆ ಸಾಕು”

 ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಯಶಸ್ಸು ಎಲ್ಲರ ಗುರಿ. ಆ ಯಶಸ್ಸನ್ನುಮುಟ್ಟಬೇಕಾದರೆ ಮತ್ತೊಬ್ಬರನ್ನು ಸೋಲಿಸುವುದು, ಹಿಂದೆ ಹಾಕುವುದು, ಮೀರಿಸುವದೇ ಗುರಿಯಾದಾಗ, ಯಶಸ್ಸು ಅಥವಾ ಗೆಲುವು ಎನ್ನುವುದರ ಅರ್ಥ ಬದಲಾವಣೆಯಾಗುತ್ತದೆ. ಸೋಲು ಅನಾಥ ಯಶಸ್ಸಿಗೋ ಹತ್ತಾರು  ತಾಯಿ ತಂದೆ ಎಂಬ ಮಾತಿದೆ. ಹಾಗೆಯೇ ಯಶಸ್ಸಿನ ಹಿಂದೆ ಬೆನ್ನು ಬಿದ್ದವರು ಮಾತ್ರ ಕೋಟ್ಯಾಂತರ. ಆ ಓಟದಲ್ಲಿ ನಾವು ನೀವೂ ಎಲ್ಲರೂ ಭಾಗಿ.ಯಶಸ್ಸಿನ ಬಗ್ಗೆ ನೂರಾರು ಗಾದೆಗಳು, ಮಾತುಗಳು, ನುಡಿಮುತ್ತುಗಳು, ಭಾಷಣಗಳನ್ನು ಕೇಳುತ್ತಲೇ ಇರುತ್ತೇವೆ. ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಮಹಿಳೆ ಇರುತ್ತಾಳೆ ಎನ್ನುವುದರ ಜೊತೆ ಜೊತೆಗೆ ಇಂದು ಒಬ್ಬ ಯಶಸ್ವಿ ಅವಿವಾಹಿತ ಹುಡುಗನ ಹಿಂದೆ ಹತ್ತಾರು ಹುಡುಗಿಯರು ಇರುತ್ತಾರೆ ಎನ್ನುವಷ್ಟರ ಮಟ್ಟಿಗೆ ಯಶಸ್ಸಿನ ವ್ಯಾಖ್ಯಾನ ಬದಲಾಗುತ್ತಲೇ ಇರುತ್ತದೆ. ಎಲ್ಲರಿಗೂ ಯಶಸ್ಸನ್ನು ಕಂಡರೆ ಅಪಾರ ಪ್ರೀತಿ, ಆದರೆ ಯಶಸ್ವಿ ವ್ಯಕ್ತಿಯನ್ನು ಕಂಡರೆ ಮಾತ್ರ ಅದೇಕೋ ಅಸೂಯೆ ಎನ್ನುತ್ತಾನೆ ಲೇಖಕನೊಬ್ಬ.ಅಷ್ಟಕ್ಕೂ ಯಶಸ್ಸೆಂದರೆ ಏನು?

 ಬೆಂಗಳೂರಿನ ಯಾವುದಾದರೂ ರಸ್ತೆಯಲ್ಲಿ ಹಾದು ಹೋಗುವಾಗ ಗೋಡೆಗೆ ಅಂಟಿಸಿರುವ ಇತ್ತೀಚಿನ ಪೋಸ್ಟರ್ ಗಳನ್ನು ಗಮನಿಸಿದರೆ ಸ್ವಾರಸ್ಯಕರ ಸಂಗತಿಗಳು ಕಾಣಿಸುತ್ತವೆ. ಇಂದಿನ ಜನಜಂಗುಳಿಯ ಟ್ರಾಫಿಕ್ ಹಾಗೂ ವಾಹನ ಚಾಲಕರ ಅವರಸದ ಮಧ್ಯೆ ಪೋಸ್ಟರ್ ನೋಡುತ್ತ ನಿಲ್ಲುವುದು ದುಸ್ತರದ ಮಾತೇ. ಎಲ್ಲರೂ ಯಶಸ್ಸಿನ ಬೆನ್ನೇರಿ ಅವರಸದಲ್ಲಿ ಹೊರಟವರೇ.ಪೋಸ್ಟರ್ ನೋಡುತ್ತಾ ಮೈ ಮರೆತರೆ, ಭಾವಪೂರ್ಣ ಶ್ರದ್ಧಾಂಜಲಿ ಎಂಬ ತಲೆಬರಹ, ಮತ್ತೆ ಹುಟ್ಟಿ ಬಾ ಎನ್ನುವ ಅಡಿಬರಹದ ಮಧ್ಯೆ ನಾವೇ ಗೋಡೆ ಮೇಲಿನ ಪೋಸ್ಟರ್ ಆಗುವ ಸಂಭವ ಹೆಚ್ಚು,. ಅದರೂ ಸಿಕ್ಕ ಸ್ವಲ್ಪ ಸಮಯದಲ್ಲೇ ಕಣ್ಣಾಡಿಸಿದರೆ ಕಾಣ ಸಿಗುವುದು "ಯಶಸ್ವಿ 10ನೇ ದಿನ" ಅಥವಾ "ಯಶಸ್ವಿ 2ನೇ ವಾರ ಎಂಬ ಸಿನಿಮಾ ಪೋಸ್ಟರುಗಳು. ಮೊನ್ನೆ ಜೊತೆಯಲ್ಲಿದ್ದ ಹಿರಿಯರೊಬ್ಬರು ಇಂತಹುದೇ ಪೋಸ್ಟರ್ ನೋಡಿ "ಅಲ್ಲಿ ತಪ್ಪಾಗಿದೆ"ಎಂದರು, "ಏನು?" ಎಂದೆ. "2 ರ ಪಕ್ಕದಲ್ಲಿ 5" ಇಲ್ಲ ಅಂದರು. ಯಶಸ್ವಿ 25ನೇ ವಾರದ ಪೋಸ್ಟರ್ ಎಂದು ಕೊಂಡಿದ್ದರು. “ಈಗೆಲ್ಲಾ ಹಾಗೆ ಇಲ್ಲ, 2ನೆ ವಾರ ಚಿತ್ರ ಓಡಿದರೇ ಅದೇ ಖುಷಿ ಎನ್ನುತ್ತಲೇ, ಯಶಸ್ವಿಯೋ ಇಲ್ಲವೋ ಯಶಸ್ಸಾಗಿದೆ ಎಂದೂ ತೋರಿಸಿಕೊಳ್ಳುವುದೂ ಈಗ ಯಶಸ್ಸೇ ಎಂದೆ. ಅವರಿಗೆ ಅರ್ಥ ಮಾಡಿಸಲು ಯಶಸ್ವಿಯಾದೆನೋ ಇಲ್ಲವೋ ಗೊತ್ತಿಲ್ಲ. ಯಶಸ್ವಿ ಚಿತ್ರವನ್ನು ಬಯ್ದುಕೊಂಡೇ ನಡೆದರು.

ಯಶಸ್ಸಿನ ಅರ್ಥಗಳು ಕಾಲದಿಂದ ಕಾಲಕ್ಕೆ ಬದಲಾಗುತ್ತಾ ಬರುತ್ತದೆ ಎನ್ನುವುದಕ್ಕೆ ಇದು ಒಂದು ಉದಾಹರಣೆ ಅಷ್ಟೆ. ಹತ್ತು ವರ್ಷಗಳ ಹಿಂದೆ 100 ದಿನ ಓಡಿದ ಚಿತ್ರ ಯಶಸ್ವಿ ಎನ್ನಿಸಿಕೊಂಡಿದ್ದರೆ ಅದಕ್ಕೂ ಹಿಂದಿನ ಸಮಯದಲ್ಲಿ ಯಶಸ್ಸನ್ನು ಆ ಚಿತ್ರದಲ್ಲಿದ್ದ ಮೌಲ್ಯ, ಸಂದೇಶ, ಪಡೆದ ಪ್ರಶಸ್ತಿ , ಜನ ಮನ್ನಣೆಯಿಂದ ಅಳೆಯಲಾಗುತ್ತಿತ್ತು. ಇದು ಈಗ ಎಲ್ಲಾ ರಂಗಗಳಲ್ಲೂ ಕಾಣಿಸುತ್ತಿದೆ. ಹಿಂದೆ ಒಬ್ಬ ಕ್ರಿಕೆಟ್ ಆಟಗಾರನ ಆಟದ ಶೈಲಿ,ಕಲಾತ್ಮಕತೆಯಲ್ಲಿ ಅವನ ಯಶಸ್ಸು ಅಡಗಿದರೆ, ನಂತರದ ದಿನಗಳಲ್ಲಿ ಆತನ ಅಂಕಿ ಅಂಶಗಳು,ದಾಖಲೆಗಳು ಅವನ ಯಶಸ್ಸನ್ನು ತೋರಿಸಿಕೊಡುತ್ತಿತ್ತು. ಇಂದೋ ಆತನ ಜನಪ್ರಿಯತೆ, ಅದರಿಂದ ಅವನಿಗೆ ದೊರಕಬಹುದಾದ ಜಾಹಿರಾತು ಹಾಗೂ ಐಪಿಲ್ ನಲ್ಲಿ ಆತನ ಹರಾಜು ಮೊತ್ತ ಅವನ ಯಶಸ್ಸನ್ನು ಅಳೆಯುತ್ತದೆ. ಒಬ್ಬ ಕಲಾವಿದನ ಯಶಸ್ಸು ಅವನ ಕಲಾಕೃತಿ ತರುವ ಹಣದ ಮೇಲೆಯೇ ಅವಲಂಬಿತ.

ಮೊನ್ನೆ ಹಿರಿಯರೊಬ್ಬರು ತಾವು ಬಿನ್ನಿ ಮಿಲ್ಸ್ ಸಂಸ್ಥಯಲ್ಲಿ ೩೭ ವರ್ಷಗಳ ಕಾಲ ಯಶಸ್ವಿಯಾಗಿ ಸೇವೆ ಸಲ್ಲಿಸಿದರ ಬಗ್ಗೆ ಹೆಮ್ಮೆಯಿಂದ ಹೇಳಿದರು. ನಿಜಕ್ಕೂ ಅದು ಒಂದು ಹೆಮ್ಮೆಯ ವಿಷಯವೇ. ಆದರೆ ಇಂದಿನ ದಿನಗಳಲ್ಲಿ ಅದು ಯಶಸ್ಸಿನ ಮಾತಲ್ಲ. 3 ವರ್ಷ ಒಂದೇ ಸಂಸ್ಥೆಯಲ್ಲಿರುವವನನ್ನು ಗುಮಾನಿಯಿಂದ ನೋಡುತ್ತದೆ ಇಂದಿನ ಯುವ ಜನಾಂಗ. ಕಳೆದ 8 ವರ್ಷಗಳಿಂದ ಒಂದೇ ಸಂಸ್ಥೆಯಲ್ಲಿರುವ ನನ್ನನ್ನು ಕಂಡೇ ನನ್ನ ಯುವ ಸಹೋದ್ಯೋಗಿಗಳು “ನೀವು ಬಿಡಿ ಸಾರ್, ಈ ಕಂಪನಿಗೆ ಪಿಲ್ಲರ್ ಇದ್ದಂಗೆ” ಎನ್ನುತ್ತಾ ಕಾಲು ಎಳೆಯುವುದುಂಟು.’ ಪಿಲ್ಲರ್’ ಗೆ  ಇದ್ದಲ್ಲಿಯೇ ಇರುವುದು ಎಂಬುದು ವ್ಯಂಗ್ಯಾರ್ಥ.“ನೀವು ಬಿಡಿ ಗೋಡೆ ಮೇಲಿನ ಬಣ್ಣದಂತೆ” ಎನ್ನುತ್ತ ನಾನು ನಗುವುದುಂಟು.

 ಅಂದರೆ ಒಂದು ಗೆಲವು ಅಥವಾ ಯಶಸ್ಸಿನ್ನು ಇಂದಿನ ಕಾಲ ಜನಾಂಗ ನೋಡುವುದೇ ಬೇರೆಯದೇ ಅರ್ಥದಲ್ಲಿ. ಅದರೂ ಯಶಸ್ಸು ಎನ್ನುವುದರ ಅರ್ಥ ಒಬ್ಬರಿಂದ ಒಬ್ಬರಿಗೆ ಬೇರೆ ಬೇರೆಯಾಗಿರುವುದರಿಂದ ನಮ್ಮ ಯಶಸ್ಸು ಯಾವುದು  ಎನ್ನುವುದನ್ನು ನಾವು ಮೊದಲು ಅರ್ಥಮಾಡಿಕೊಳ್ಳಬೇಕಾಗುತ್ತದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮತ್ತೊಬ್ಬರ ಯಶಸ್ಸು ನಮಗೆ ಸ್ಪೂರ್ತಿ, ಪ್ರೇರಣೆಯಾದರೂ ನಮ್ಮ ಯಶಸ್ಸಿನ ಗುರಿ, ದಾರಿ, ಗುರುವನ್ನು ನಾವೇ ನಿರ್ಧರಿಸಿಕೊಳ್ಳಬೇಕಾಗುತ್ತದೆ ಎನ್ನುತ್ತಾರೆ ತಜ್ಞರು. ಇದೇ ರೀತಿ ಯಶಸ್ಸಿನಹಾದಿಯಲ್ಲಿ ಕೆಲವೊಂದು ಯೋಜನೆಗಳು ಅವಶ್ಯವೆನ್ನುತ್ತಾರೆ ಅದೇ ತಜ್ಞರು . ಅವುಗಳಲ್ಲಿ ಪ್ರಮುಖವಾದವು :

ಗುರಿ: ನಾವು ಯಶಸ್ಸನ್ನು ಸಾಧಿಸಬೇಕಾದರೆ ಮೊದಲು ಒಂದು ಗುರಿ ಇರಬೇಕು ಮತ್ತು ಆಗುರಿಯನ್ನು ಸಣ್ಣ ವಿಭಾಗಗಳನ್ನಾಗಿ ಮಾಡಿಕೊಂಡು ಒಂದೊಂದೇ ಮೆಟ್ಟಿಲುಗಳನ್ನೇರುತ್ತಾಅಂತಿಮ ಗುರಿಯನ್ನು ಸಾಧಿಸಿಕೊಂಡು ಯಶಸ್ಸು ಪಡೆಯಬೇಕು. ಸಚಿನ್ ತೆಂಡುಲ್ಕರ್ ೧೦೦ಶತಕಗಳನ್ನು ಸಾಧಿಸಿಸ್ದರೂ ಅವೆಲ್ಲವೂ ಒಂದೇ ಬಾರಿಗೆ ಇಲ್ಲವೇ ಧಿಡೀರನೆ ಆದಂತವುದಲ್ಲ.ಪ್ರತಿಯೊಂದು ಶತಕದಲ್ಲಿಯೂ ನೂರು ರನ್ನುಗಳ ಮೊತ್ತವಿದೆ ಹಾಗೂ ಆ ಪ್ರತಿಯೊಂದು ರನ್ನಿಗೂಅದರದೇ ಆದ ಮಹತ್ವವಿದೆ. ರನ್ನು ಹೊಡೆಯಲಾಗದ ಬಾಲಿನ ಹಿಂದೆ ಒಂದು ರಕ್ಷಣಾತ್ಮಕ ಆಟವಿದೆಹಾಗೂ ಆ ರಕ್ಷಣಾತ್ಮಕ ಆಟಕ್ಕೆ ಪರಿಶ್ರಮ ಹಾಗೂ ಅಭ್ಯಾಸ  ಅಗತ್ಯವಿದೆ.

ಸಾಧಿಸಲಾಗದಂತ ಗುರಿಗಳು ಬೇಡ : ಗುರಿಗಳು ನಮ್ಮ ಸಾಮರ್ಥ್ಯ ಹಾಗೂ ನಮ್ಮ ಪರಿಶ್ರಮದ ಮಿತಿಯಲ್ಲಿದ್ದರೆ ಒಳ್ಳೆಯದು ಬೇರೆ ಯಾರನ್ನೋ ಅನುಸರಿಸಿ ಇಲ್ಲವೇ ನಮಗೆ ಒಲ್ಲದ ಗುರಿಗಳು ನಮ್ಮನ್ನು ಹತಾಶೆಗೆ ತಳ್ಳಬಹುದು. ಮೊದಲ ದಿನ ವಾಯು ವಿಹಾರದಲ್ಲೇ ೨೦ ಕಿಲೋಮೀಟರ್ ನಡೆಯುತ್ತೇನೆ ಎಂಬಂತ ನಿರ್ಧಾರಗಳು ಯಶಸ್ಸನ್ನು ತರುವುದಿಲ್ಲ ಬದಲಿಗೆನಿರಾಶೆಯನ್ನು ಮೂಡಿಸುತ್ತದೆ.

ಗುರಿಗಳನ್ನು ಬರೆದಿಟ್ಟುಕೊಳ್ಳುವುದು ಹಾಗೂ ಪೂರ್ವ ತಯಾರಿ : ಮುಟ್ಟಬೇಕಾದ ಗುರಿಸಾಧಿಸಬೇಕಾದ ಯಶಸ್ಸನ್ನು ಬರೆದಿಟ್ಟುಕೊಂಡು, ಅದರತ್ತ ನಿರಂತರ ಶ್ರಮ ವಹಿಸುವುದು ಹಾಗೂ ಆ ಯಶಸ್ಸು ಪ್ರಾಪ್ತಿಯಾದಾಗ ನಮ್ಮ ಜೀವನ ಹೇಗಿರಬಹುದೆಂದು ಉಹಿಸುತ್ತಾ, ಅದಕ್ಕೆ ತಯಾರಿಮಾಡಿಕೊಳ್ಳಬೇಕು

ಬದಲಾವಣೆಗೆ ಮುಕ್ತ ಮನಸ್ಸು : ಯಶಸ್ಸು ಸುಲಭವಾಗಿ ದೊರಕುವಂತದಲ್ಲ. ಒಂದು ಗುರಿಯನ್ನುಸಾಧಿಸಲು ಹೊರಟಾಗ ಯಾವುದನ್ನು ಯಶಸ್ಸು ಎಂದು ತಿಳಿದುಕೊಂಡಿರುತ್ತೇವೆಯೋ ಅದರ ಸ್ವರೂಪ ಕೆಲವೊಮ್ಮೆ ಬದಲಾಗಬಹುದು. ಆಗ ಹಳೆಯ ಯಶಸ್ಸಿನ ಕಲ್ಪನೆಗೆ ಜೋತು ಬೀಳದೆ ಬದಲಾವಣೆಗೆಮುಖ ಒಡ್ಡಬೇಕು. ಸಾಹಿತ್ಯ ಲೋಕ ಕಂಡ ಅದ್ಭುತ ಪ್ರತಿಭೆಯಾದ ರಾಷ್ಟ್ರಕವಿ ಕುವೆಂಪುತಮ್ಮ ಆರಂಭದ ದಿನಗಳಲ್ಲಿ ಬರೆದದ್ದು ಇಂಗ್ಲೀಷ್ ಸಾಹಿತ್ಯವನ್ನು. ಅದರಲ್ಲಿ ಬಹಳಯಶಸ್ಸು ಕಂಡು ಅಪಾರ ಪ್ರಶಂಸೆಯನ್ನೂ ಪಡೆದರು. ಆದರೆ ಐರಿಷ್ ಲೇಖಕ ಕವಿ ಜೇಮ್ಸ್ಕಸಿನ್ಸ್ ರವರನ್ನು ಭೇಟಿ ಮಾಡಿದಾಗ ಕಸಿನ್ಸ್, ಕುವೆಂಪುರವರಿಗೆ  ಕನ್ನಡದಲ್ಲೇ ಬರೆಯಲು ಹಿತವಚನ ನೀಡುತ್ತಾರೆ. ಯುವಕ ಕುವೆಂಪುಗೆ ಈ ಮಾತುಗಳು ರುಚಿಸದೆ ಕನ್ನಡ ಭಾಷೆಗೆ ತಮ್ಮದೇ ಆದ ಇತಿ ಮಿತಿ ಇರುವುದರಿಂದ ಇಂಗ್ಲೀಷ್ನಲ್ಲೇ ಬರೆಯುತ್ತೇನೆ ಎಂದು ವಾದಿಸಿಸುತ್ತಾರೆ. ಆದರೂ ನಂತರ ಯೋಚಿಸಿ, ಕನ್ನಡದಲ್ಲಿ ಬರೆಯಲು ನಿರ್ಧಾರ ಮಾಡಿದರ ಫಲವಾಗಿ ಜಗತ್ತು ಕಂಡ ಅತ್ಯದ್ಭುತ ಕೃತಿಗಳನ್ನು ನೀಡಿ ವಿಶ್ವ ಮಾನವರಾದವರು ನಮ್ಮಕುವೆಂಪು.

ತೊಡಕುಗಳನ್ನು ಗುರುತಿಸಿ ಅದರ ನಿವಾರಣೆಗೆ ಕ್ರಮ : ಗುರಿ ಹಾಗೂ ಯಶಸ್ಸಿನ ಹಾದಿಯಲ್ಲಿ ಅನೇಕ ತೊಡಕುಗಳು ನಮಗೆ ಎದುರಾಗುತ್ತವೆ. ಪದೇ ಪದೇ ಎದುರಾಗುವ ತೊಡಕುಗಳನ್ನು ಗುರುತಿಸಿಕೊಂಡು ಅದನ್ನು ನಿವಾರಿಸಲು ಬೇಕಾದ ಕ್ರಮಗಳನ್ನು ಕೈಗೊಳ್ಳುವ ಮೂಲಕ ಯಶಸ್ಸು ಪಡೆಯಬಹುದು. ಗಾಯಕನಾಗಿ ಯಶಸ್ಸು ಪಡೆಯಬೇಕಾದವನು ಉತ್ತಮ ಕಂಠವಿದ್ದರೂ ಮುಂಜಾನೆ ಎದ್ದು ಅಭ್ಯಾಸದಲ್ಲಿ ತೊಡಗಬೇಕಾಗುತ್ತದೆ. ಹಾಗೇ ಮುಂಜಾನೆ ಏಳಲು ಸಾಧ್ಯವಾಗದ ಕಾರಣಗಳನ್ನು ಗುರುತಿಸಿ ಅವಗಳಿಗೆ ತಕ್ಕ ಕ್ರಮಗಳನ್ನು ಕಂಡುಕೊಂಡರೆ ಮಾತ್ರವೇ ಅವರ ಕಂಠ ಅವನ ಕೈಹಿಡಿಯುತ್ತದೆ.

ಯಶಸ್ಸಿನ ಹಾದಿಯಲ್ಲಿ ಎಚ್ಚರ : ಎಲ್ಲವನ್ನು ಗುರುತಿಸಿ ಯೋಜನೆಯನ್ನು ತಯಾರಿಮಾಡಿಕೊಂಡು ಸಾಗುತ್ತಿರುವಾಗ ಆಗಾಗ ನಡೆಯುತ್ತಿರುವ ಹಾದಿ ಸರಿಯಾಗಿದೆಯೇ, ಸರಿದಾರಿಯಲ್ಲಿಯೇ ನಡೆಯುತ್ತಿದ್ದೇನೆಯೇ ಎಂದು ಪರೀಕ್ಷಿಸಿಕೊಳ್ಳುವುದು ಜಾಣತನ.ಗೊತ್ತಿದ್ದೂ ಇಲ್ಲವೆ ಗೊತ್ತಿಲ್ಲದೆಯೇ ತಪ್ಪಬಹುದಾದ ದಾರಿಯಿಂದ ಸರಿ ದಾರಿಗೆ ಬೇಗನೇ ಮರಳದಿದ್ದರೆ, ಗುರಿ ಹಾಗೂ ಯಶಸ್ಸು ಮತ್ತಷ್ಟು ದೂರದ ದಾರಿಯಾಗಿ ಪರಿಣಮಿಸಿ ಪರಿಶ್ರಮಹಾಗೂ ಸಮಯ ಪೋಲಾಗುತ್ತದೆ. ಆರಿಸಿಕೊಂಡ ಗುರಿಯ ರಂಗದಲ್ಲಿ ಪರಿಣಿತರಾದವರ ಜೊತೆ ಒಡನಾಟವಿದ್ದರೆ ಇದನ್ನು ತಪ್ಪಿಸಬಹುದು.ಆ ಸಮಯಕ್ಕೆ ಕ್ರಮಿಸಬೇಕಾದ ದೂರದ ಯೋಜನೆ ಇದ್ದರೆ ದಾರಿ ತಪ್ಪುವುದು ಕಡಿಮೆಯಾಗುತ್ತದೆ.

ಅದೃಷ್ಟ, ಸೋಲು ಹಾಗೂ ಬಹುಮಾನ : ಯಶಸ್ಸಿನ ಪಯಣದಲ್ಲಿ ಅದೃಷ್ಟ ಹಾಗೂ ವಿಧಿಯಾಟಕ್ಕಿಂತ ಸ್ವಸಾಮರ್ಥ್ಯ,ಪರಿಶ್ರಮಕ್ಕೆ ಹೆಚ್ಚು ಮಹತ್ವ ಕೊಡುವುದು ಲೇಸು. ತೊಡಕು ತೊಂದರೆಗಳು ಬಂದಾಗ ಅದೇ ದುರಾದೃಷ್ಟ, ವಿಧಿಯ ಸಾಂತ್ವನ ಪಡೆಯುವದಕ್ಕಿಂತ ತೊಂದರೆಗಳ ನಿವಾರಣೆಗೆಕ್ರಮಗಳನ್ನು ಕೈಗೊಳ್ಳದಿದ್ದರೆ ಕಳ್ಳ ಮನಸ್ಸು ಗುರಿಯಿಂದ ಆಚೆಗೆ ಕರೆದೊಯ್ಯುತ್ತದೆ. Success is simply a matter of luck. Ask any failure  ಎಂಬ ಮಾತು ಅದೆಷ್ಟುಸತ್ಯವಲ್ಲವೇ.. ಅಂತೆಯೇ ಯಶಸ್ಸಿನ ಹಾದಿಯಲ್ಲಿ ಹೂವುಗಳು ಮಾತ್ರವಲ್ಲದೇ ಕಲ್ಲು ಮುಳ್ಳುಸೋಲು ಇರುವುದು ಸಹಜ. ತಮ್ಮ ಅಸಂಖ್ಯಾ ಸೋಲುಗಳನ್ನು ಮೆಟ್ಟಿ ಗೆಲುವನ್ನು ದಕ್ಕಿಸಿಕೊಂಡವರಲ್ಲಿ ಥಾಮಸ್ ಆಳ್ವಾ ಎಡಿಸನ್, ಅಬ್ರಾಹಾಂ ಲಿಂಕನ್ ರವರು ಪ್ರಮುಖರು.“ನಾನು ಸೋತಿಲ್ಲ, ನನ್ನ ಕೆಲಸದಲ್ಲಿ ೧೦,೦೦೦ ರೀತಿಯ ಮಾರ್ಗಗಳು ಕೆಲಸಕ್ಕೆಬರುವುದಿಲ್ಲ ಎಂಬ ಪಾಠವನ್ನು ಕಲಿತ್ತಿದ್ದೇನೆ” ಎನ್ನುತ್ತಾ ತಮ್ಮ ವೈಫಲ್ಯಗಳ ಬಗ್ಗೆಹೇಳುತ್ತಾರೆ ಎಡಿಸನ್. ಹಾಗೆಯೇ ಯಶಸ್ಸಿನ ಸಣ್ಣ ಸಣ್ಣ ಗುರಿಗಳನ್ನು ದಾಟುತ್ತಿದ್ದಂತೆ ನಮಗೆ ನಾವೇ ಬೆನ್ನು ತಟ್ಟಿಕೊಂಡು ಆಗಿಂದಾಗ್ಗೆ ಸಣ್ಣ ಪುಟ್ಟ ಕೊಡುಗೆಗಳನ್ನು ನೀಡಿಕೊಳ್ಳುವುದರಿಂದ ಮುಂದಿನ ಹೆಜ್ಜೆಯತ್ತ ಮನಸ್ಸು ಉಲ್ಲಾಸಗೊಳ್ಳುತ್ತದೆ.

ಇವಿಷ್ಟು ಮಾತ್ರವೇ ಯಶಸ್ಸಿನ ಗುಟ್ಟುಗಳಲ್ಲ, ಅಂತೆಯೇ ಇವೆಲ್ಲವೂ ಯಶಸ್ಸನ್ನು ಖಂಡಿತವಾಗಿಯೂ ತಂದು ಕೊಡುತ್ತವೆ ಎಂದು ಕೊಳ್ಳಬೇಕಾಗೂ ಇಲ್ಲ. ಆದರೆ ಇವೆಲ್ಲವೂ ಯಶಸ್ಸಿನ ಹಾದಿಯನ್ನು ಸುಗಮಗೊಳಿಸಬಲ್ಲಂತ ಸಂಗತಿಗಳು. ಯಶಸ್ಸು ಹಾಗೂ ಪರಿಶ್ರಮಕ್ಕೆ ಅವಿನಾಭಾವ ಸಂಬಂಧವಿದ್ದೂ ಪರಿಶ್ರಮವೇ ಯಶಸ್ಸಿನ ಸೂತ್ರಧಾರ ಎಂಬ ಮಾತನ್ನು ಜ್ಞಾನಿಯೊಬ್ಬ ಹೇಳಿದ್ದಾನೆ. ಇದನ್ನು ಅರಿತು ನಡೆದರೆ ಯಶಸ್ಸಿನ ಹಾದಿಯಲ್ಲಿ ಹತಾಶೆ,ನಿರಾಸೆಗೆ ಸ್ಥಳವಿರುವಿದಿಲ್ಲ. ಗುರಿ ಮಾತ್ರವಲ್ಲದೆ ಹಾದಿಯೂ ಮುಖ್ಯ ಆನಂದಕರ ಎಂಬ ಸತ್ಯವೂ ತಿಳಿಯುತ್ತದೆ.  ಹಾಗೆಯೇ ಕೇವಲ ಹಣ, ಸುಖದಲ್ಲಿ ಮಾತ್ರವಲ್ಲದೆ ಪರಸೇವೆಯಲ್ಲಿ,ನೋವಿನಲ್ಲೂ ಯಶಸ್ಸು ಇದೆ ಎಂಬುದನ್ನು ನಮ್ಮಲೇ ಅನೇಕ ಸಂತರು ತಮ್ಮ ಜೀವನದಿಂದ ನಿರೂಪಿಸಿದ್ದಾರೆ. ಇವಲ್ಲವೂ ನಮಗೆ ದಾರಿ ದೀಪವಾಗಲಿ, ಯಶಸ್ಸಿನ ಮೆಟ್ಟಿಲಾಗಲಿ.

ಸಾಧಿಸಬೇಕಾದ ಗುರಿಯ ಬಗ್ಗೆ ಇರಬೇಕಾದ ಆತ್ಮವಿಶ್ವಾಸದ ಬಗೆಗಿನ ಹಾಸ್ಯ ತುಣುಕೊಂದಿಗೆ ಮುಗಿಸೋಣ: ಹೆಂಡತಿಯೊಬ್ಬಳು ಹೊಸದಾಗಿ ಮನೆಗೆ ತಂದ ನಾಯಿಗೆ ಸರಿಯಾಗಿ ಕುಳಿತುಕೊಳ್ಳುವುದನ್ನು ಹೇಳಿ ಕೊಡುತ್ತಿದ್ದಳು. ದಿನವೆಲ್ಲಾ ಪ್ರಯತ್ನಿಸಿದರೂ ನಾಯಿ ಬಗ್ಗಲಿಲ್ಲ, ಹೆಂಡತಿ ಬಿಡಲಿಲ್ಲ. ಇದನ್ನು ನೋಡಿ ರೋಸಿ ಹೋದ ಗಂಡ ಹೇಳಿದ ” ಲೇ ಬಿಡೇ, ಅದು ಆಗೊಲ್ಲ,ನಿನ್ನಿಂದ ಸಾಧ್ಯವಿಲ್ಲ. ತಟ್ಟನೆ ಬಂತು ವಿಶ್ವಾಸದ ಉತ್ತರ : “ಆಗೊಲ್ಲ ಅಂದ್ರೆ ಹೆಂಗ್ರಿ? ಹೊಸತರಲ್ಲಿ ನೀವೂ ಹೀಗೆ ಇರಲಿಲ್ಲ್ವಾ? ನಾನು ಕಷ್ಟಪಟ್ಟು ಸರಿಮಾಡ್ಲಿಲ್ವಾ?.

-ಪ್ರಶಾಂತ್

(ತಾಬೋರ್ ಪತ್ರಿಕೆಯ ಜೂನ್ ೧೪ರ ಸಂಚಿಕೆಯಲ್ಲಿ ಪ್ರಕಟವಾದ ಲೇಖನ) 

No comments:

Post a Comment