Tuesday 17 June 2014

ಆಡಿಯೋ ಅನಿಸಿಕೆ - ಬಹುಪರಾಕ್

ಕಳೆದ ವರ್ಷದ ಸೂಪರ್ ಹಿಟ್  ಚಿತ್ರಗಳಲ್ಲಿ ಒಂದಾದ ಸುನಿ ನಿರ್ದೇಶನದ ಸಿಂಪಲ್ಲಾಗಿ ಒಂದ್ ಲವ್ ಸ್ಟೋರಿ, ತನ್ನ ಹಾಡುಗಳಿಂದಲೂ ಚಿತ್ರ ರಸಿಕರ ಮನ ಸೆಳೆಯಿತು. ನಿರ್ದೇಶಕ ಸುನಿ ಮತ್ತೆ ಬಹುಪರಾಕ್ ಮೂಲಕ ನಿರ್ದೇಶನಕ್ಕೆ ಇಳಿದಿದ್ದಾರೆ. ’ಸಿಂಪಲ್ಲಾಗಿ’ ಚಿತ್ರದ ಅಭಿಮಾನಿಗಳು ಇದಕ್ಕೆ ಭವ್ಯವಾದ ಸ್ವಾಗತವನ್ನೇ ಕೊಟ್ಟಿದ್ದಾರೆ. ಹಾಡುಗಳ ಬಗ್ಗೆ ಬಹುಪರಾಕ್ ಗಳು ಕೇಳಿ ಬರುತ್ತಿದೆ. ಹಾಡುಗಳು ಹೇಗಿದೆ? ಸುನಿ ಮ್ಯಾಜಿಕ್ ಮುಂದುವರಿದಿದೆಯೇ? ಸಂಗೀತ ನಿರ್ದೇಶಕ ಭರತ್ ಬಿ.ಜೆ ರವರ ಕೈ ಚಳಕ ಹೇಗಿದೆ ಎಂಬುದರತ್ತ ಒಂದು ನೋಟ

ಉಸಿರಾಗುವೆ
ಗಾಯನ -ರಾಜೇಶ್ ಕೃಷ್ಣನ್ ಹಾಗೂ  ಅನುರಾಧ ಭಟ್ 
ಸಾಹಿತ್ಯ - ಸುನಿ
ಮಾಧುರ್ಯ ಹಾಗೂ ಮೋಹಕ ಸಾಹಿತ್ಯವನ್ನೇ ಉಸಿರಾಗಿಸಿಕೊಂಡಿರುವ ಸುಂದರ ಗೀತೆ. ಎಷ್ಟೋ ಬೇಕೋ ಅಷ್ಟೇ ಇರುವ ಭರತ್ ರವರ ವಾದ್ಯ ಸಂಗೀತದಿಂದಾಗಿ ರಾಜೇಶ್ ಹಾಗೂ ಅನುರಾಧರ ಕಂಠ ಸುಮಧುರವಾಗಿ ಕೇಳುತ್ತದೆ.  ಸುನಿಯವರ ಸಾಹಿತ್ಯದಲ್ಲಿ ಹೊಸತನವಿದೆ. ಗೀತೆಯ ಎಲ್ಲಾ ವಿಭಾಗಗಳು ಉತ್ತಮವಾಗಿ ಬೆರೆತು ಇಷ್ಟವಾಗವ ಗೀತೆ.

ಗೆದ್ದೆ ಗೆಲ್ತಾನಂತ 
ಗಾಯನ - ನವೀನ್ ಸಜ್ಜು 
ಸಾಹಿತ್ಯ - ಪಿ ಲಂಕೇಶ್
ಪಿ.ಲಂಕೇಶ್ ರವರ ಸಾಹಿತ್ಯವಿರುವ ಮತ್ತೊಂದು ವಿಭಿನ್ನವಾದ ಗೀತೆ. ಮತ್ತೆ ಭರತ್ ಸಾಹಿತ್ಯಕ್ಕೆ ಹೆಚ್ಚು ಒತ್ತು ಇರಲಿ ಎಂಬಂತೆ ಸಂಯಮದ ವಾದ್ಯ ಸಂಯೋಜನೆ ಮಾಡಿದ್ದಾರೆ. ಆದರಿಂದ ಇಲ್ಲಿಯೂ ಸಾಹಿತ್ಯವೇ ಮುಂದಾಗಿದ್ದು ಸಂಗೀತ ಹಿನ್ನಲೆಯಲ್ಲಿ ಸರಾಗವಾಗಿ ಬೆರೆತುಕೊಂಡಿದೆ. ನವೀನ್ ರವರ ಲವಲವಿಕೆಯಿಂದ ಹಾಡು ಇನ್ನಷ್ಟು ಇಷ್ಟವಾಗುತ್ತದೆ.

ಸ್ನೇಹ ಎಂಬುದು 
ಗಾಯನ - ಕೆ.ಕೆ 
ಸಾಹಿತ್ಯ - ಸುನಿ
ಮಾಧುರ್ಯ ಹಾಗೂ ಪಾಶ್ಚಾತ್ಯ ಎರಡೂ ರೀತಿಯ ಧಾಟಿ ಇರುವ ಈ ಗೀತೆಗೆ ಕೆ.ಕೆ ಉತ್ತಮವಾಗಿ ಧ್ವನಿ ನೀಡಿದ್ದಾರೆ. ಸುನಿಯವರಲ್ಲಿನ ಸಾಹಿತಿ ಮತ್ತೊಮ್ಮೆ ವಿಜೃಂಭಿಸಿದ್ದಾರೆ. ಉತ್ತಮ ಸಾಹಿತ್ಯ, ಸಂಗೀತ, ಗಾಯನದಿಂದಾಗಿ ಹಾಡು ಆಪ್ತವಾಗುತ್ತಾ ಹೋಗುತ್ತದೆ. ಮತ್ತೆ ಮತ್ತೆ ಕೇಳಬೇಕೆನಿಸುವ ಗೀತೆ.


ಸಿಂಪಲ್ಲ್ ಪ್ರೀತಿ 
ಗಾಯನ - ಶ್ರೀನಗರ ಕಿಟ್ಟಿ ಹಾಗೂ ಮೇಘನ ರಾಜ್ 
ಸಾಹಿತ್ಯ - ಸುನಿ
ಇಂದಿನ ಟ್ರೆಂಡಿಗೆ ಹೊಂದುವಂತ ಸಾಹಿತ್ಯವಿರುವ ಗೀತೆಗೆ ಅಲ್ಬಂ ಹಾತೊರೆಯುತ್ತಿದೆಯೇನೋ ಎನ್ನುವಂತೆ ಎದುರಾಗುವ ಗೀತೆ. ಶ್ರೀನಗರ ಕಿಟ್ಟಿ ಹಾಗೂ ಮೇಘನರಾಜ್ ಸರಾಗವಾಗಿ ಹಾಡಿ ಮೆಚ್ಚುಗೆ ಗಳಿಸುತ್ತಾರೆ.ಫೇಸ್ ಬುಕ್, ವಾಟ್ಸ್ ಆಪ್, ಅಲ್ಲಕ್ ಬುಲ್ಲಕ್ ಎಲ್ಲವೂ ಸುನಿಯವರ ಸಾಹಿತ್ಯದಲ್ಲಿ ಹಾದು ಹೋಗುತ್ತದೆ. ಯುವಕರಿಗೆ ವಿಶೇಷವಾಗಿ ಇಷ್ಟವಾಗಬಹುದಾದ ಗೀತೆ. ಕಿಟ್ಟಿಯವರ ಕಂಠದಲ್ಲಿನ ಲವಲವಿಕೆ ಅಲ್ಲಕ್ ಬುಲ್ಲಕೇನಲ್ಲ ಬಿಡಿ.

ನಾನಾರೇಂಬುದು ನಾನಲ್ಲ - 
ಗಾಯನ - ಭರತ್ ಬಿ.ಜೆ, ಕೌಶಿಕ್ ಹಾಗೂ ಚೈತನ್ಯ ಭಟ್ 
ಸಾಹಿತ್ಯ - ಶಿಶುನಾಳ ಶರೀಫರು
ಸ್ವತ: ಸಂಗೀತ ನಿರ್ದೇಶಕರೇ ಕೌಷಿಕ್ ಹಾಗೂ ಚೈತನ್ಯರೊಂದಿಗೆ ಧ್ವನಿಗೂಡಿಸಿರುವ ಈ ಗೀತೆಯ ಸಾಹಿತ್ಯ ಸಂತ ಶಿಶುನಾಳ ಶರೀಫರದು ಎಂದ ಮೇಲೆ ಸಾಹಿತ್ಯದ ಗುಣ ಮಟ್ಟವನ್ನು ಪ್ರತ್ಯೇಕವಾಗಿ ಹೇಳಬೇಕೆ? ವಿಭಿನ್ನವಾದ ಸಂಗೀತ ಹಾಗೂ ಹಿನ್ನಲೆಯಲ್ಲಿನ ಕೋರಸ್ ನಿಂದಾಗಿ ಹಾಡು ಎತ್ತರದಲ್ಲಿ ನಿಲ್ಲುತ್ತದೆ. ಮಧುರವಾದ ವಾದ್ಯ ಸಂಗೀತ ಈ ಗೀತೆಯ ಸಂಗೀತ ನಿರ್ದೇಶಕರ ಮಾಧುರ್ಯಯದೆಡೆಗಿನ ತುಡಿತಕ್ಕೆ ಸಾಕ್ಷಿಯಾಗಿದೆ. ಎಲ್ಲಾ ರೀತಿಯಲ್ಲೂ ಉತ್ತಮವಾದ ಗೀತೆ.

ಬಜ಼ಾರು ಭಾರಿ 
ಗಾಯನ - ಸ್ಪರ್ಶ  
ಸಾಹಿತ್ಯ - ಸುನಿ
ಇಷ್ಟೆಲ್ಲ ಮಾಧುರ್ಯದ ನಡುವೆ ಒಂದು ಐಟಂ ಸಾಗು ಬೇಕೆ? ಸುನಿಗೂ ಹಾಗೇ ಅನಿಸಿರಬೇಕು. ಸಾಂಗು ಬೇಕಾ ಸಾಂಗು ಎನ್ನುತ್ತಾ ಬರುತ್ತದೆ ಮುಂದಿನ ಹಾಡು. ತುಂಟ ಸಾಹಿತ್ಯಕ್ಕೆ ಪೂರಕವಾದ ಸಂಗೀತ. ನಿರ್ದೇಶಕ ಸುನಿಯವರ ಜಾದೂ ವರ್ಕ ಔಟ್ ಆಗಿದೆ. ಸಾಹಿತ್ಯದಲ್ಲಿ ಅವರು ಲಗೋರಿ ಆಡಿದಂತಿದೆ. ಸ್ಪರ್ಶ ರವರ ಗಾಯನ ಉತ್ತಮವಾಗಿದೆ.

ಸೂರ್ಯನ ಬೆಂಕಿಯ  
ಗಾಯನ -ಭರತ್ ಬಿ.ಜೆ
ಸಾಹಿತ್ಯ - ವಿಶ್ವೇಶ್ವರ ವಿಶ್ವ
ಈ ಹಾಡನ್ನು ಕೇಳುವಷ್ಟರಲ್ಲಿ ಸಂಗೀತದ ಏಕತಾನತೆಯ ಸಣ್ಣ ಸುಳಿವು ಬರುತ್ತದೆ. ಹಿಂದಿನ ಹಾಡುಗಳ ಧಾಟಿಯಲ್ಲೇ ಸಾಗುವ ಈ ಗೀತಯ ಸಾಹಿತ್ಯವೂ ಸಹ ಚಿತ್ರದಲ್ಲಿನ ಸನ್ನಿವೇಶದಿಂದ ಎದ್ದು ಕಾಣದ ಹೊರತು ಹತ್ತರಲ್ಲಿ ಒಂದಾಗುವ ಅಪಾಯವಿದೆ. ಬೇರೆ ಹಾಡುಗಳಿಂದ ಪ್ರತ್ಯೇಕವಾಗಿ ಕೇಳಿದರೆ ಇಷ್ಟವಾಗಬಹುದು.


ದೇವನಿರುವನು 
ಗಾಯನ - ಭರತ್ ಬಿ.ಜೆ
ಸಾಹಿತ್ಯ - ಸುನಿ
ಉತ್ತಮವಾದ ಆಲಾಪನೆಯಿಂದ ಶಾಸ್ತ್ರೀಯವಾಗಿ ಆರಂಭವಾಗುವ ಗೀತೆ ಸುನಿಯವರ ಸರಳ ಸಾಹಿತ್ಯ ಹಾಗೂ ಅಷ್ಟೇ ಸುಲಲಿತವಾದ ಸಂಗೀತದಿಂದ ಇಷ್ಟವಾಗುತ್ತದೆ. ಭರತ್ ರವರು ತಾವೇ ಸ್ವತ: ಹಾಡಿರುವುದರಿಂದ ಹಾಡಿಗೆ ಬೇಕಾದ ಎಲ್ಲಾ ಏರಿಳಿತಗಳನ್ನು ಸರಿದೂಗಿಸಿದ್ದಾರೆ.  ನಡುವಿನಲ್ಲಿ ಹಾಡು ಅಚ್ಚರಿಯ ತಿರುವು ಪಡೆಯುವುದನ್ನು ಕೇಳಿಯೇ ಆನಂದಿಸಬೇಕು. ಸಂಗೀತ ಗಾಯನ ಎರಡರಲ್ಲೂ ಭರತ್ ಗೀತೆಯನ್ನು ಆವರಿಸಿಕೊಂಡಿದಾರೆ.

ಉಸಿರಾಗುವೆ ರೀಮಿಕ್ಸ್ 
ಗಾಯನ -ಭರತ್ ಬಿ.ಜೆ, ನೀಲ್ ನ್ಯಾಶ್ ಫೀಟ್, ವಿದ್ಯಾಶ್ರೀ, ಶ್ವೇತಾ
ಸಾಹಿತ್ಯ - ಸುನಿ
ಭರತ್, ನೀಲ್, ವಿದ್ಯಾಶ್ರಿ ಹಾಗೂ ಶ್ವೇತಾ ಅವರ ದನಿಯಲ್ಲಿ ಮೂಡಿ ಬಂದಿರುವ ಉಸಿರಾಗುವೆ ಗೀತೆಯ ರೀಮಿಕ್ಸ್ ನಲ್ಲಿ ಮೂಲ ಗೀತಯ ಮಾಧುರ್ಯ ಇಲ್ಲವಾದರೂ ರೀಮಿಕ್ಸ್ ಇರಬೇಕಾದ ಗುಣವನ್ನು ಹೊಂದಿದ್ದೂ, ಕುಣಿಸುವಂತಿದೆ. ಗಾಯನ , ಸಂಗೀತ ಇಲ್ಲೂ ಇಷ್ಟವಾಗುತ್ತದೆ.

ಬಹು ಪರಾಕ್ - 
ಗಾಯನ -  ಭರತ್ ಬಿ.ಜೆ  
ಸಾಹಿತ್ಯ - ಸುನಿ
ಕೊನೆಯ ಸಣ್ಣ ಬಿಟ್. ರಾಕ್ ರಾಕ್ ಬಹುಪರಾಕ್ ಎನ್ನುವ ಸಾಹಿತ್ಯವಿರುವ ಆ ಸಾಲುಗಳೇ ಈ ಬಿಟ್ ನ ಒನ್ ಲೈನ್ ಅನಿಸಿಕೆಯೂ ಹೌದು. ಭರತ್ ರವರೇ ಇದಕ್ಕೂ ದನಿ ನೀಡಿದ್ದಾರೆ.


-ಪ್ರಶಾಂತ್ ಇಗ್ನೇಶಿಯಸ್

No comments:

Post a Comment