Wednesday 14 March 2012

ಪರೀಕ್ಷೆ ಹಾದಿಯ ಎಂಟು ಸ್ಥಳಗಳು

          ಕ್ಷರಗಳು ಪುಟಗಳ ಮಧ್ಯೆ ಅಡಗಿ ಕುಳಿತ ಪುಟ್ಟ ಪುಟ್ಟ ಭೂತಗಳಂತೆ ಕಂಡರು ಅಚ್ಚರಿಯಿಲ್ಲ. ಬಡಪಾಯಿ ಮಕ್ಕಳ ಪಾಡನ್ನು ಆ ದೇವರೇ ಕಾಪಾಡಬೇಕು. ಪುಸ್ತಕಗಳು ಅದರ ಪಾಠಗಳು ಯಾವ ಜನ್ಮದ ಶತ್ರುಗಳೋ..  ಪರೀಕ್ಷೆಗಳಂತೂ ಟೈಮ್ ಬಾಂಬ್ ಇದ್ದಂತೆ! ವಾರಗಳು, ದಿನಗಳು, ಗಂಟೆಗಳಲ್ಲಿ ಹತ್ತಿರವಾಗುತ್ತಾ ಹೃದಯ ಬಡಿತವನ್ನು ಹೆಚ್ಚು ಮಾಡಿ ಬಡಿದು ಬಿಡುತ್ತವೆ.
ಹೌದು ಇದು ದೊಡ್ಡ ಪರೀಕ್ಷೆಯಕಾಲ.  ಎಲ್ಲ ಮಕ್ಕಳ ಸತ್ವಪರೀಕ್ಷೆಯಕಾಲ. ಇಲ್ಲಿ ಪುಸ್ತಕಗಳ ಜೊತೆ ಶಿಕ್ಷಕರು, ತಂದೆ ತಾಯಂದಿರು, ಸ್ನೇಹಿತರು ಎಲ್ಲರೂ ರಾಕ್ಷಸ ರಂತೆ ಭಾಸವಾಗುವ ಬೇಸಿಗೆಗಾಲ.  ಜಾಣಬುದ್ಧಿ ಮತ್ತು ಮನಸ್ಸು ಕೆಲವೊಮ್ಮೆ ಕೆಲಸಮಾಡದೇ ಕೈಕೊಡುವ ಬರಗಾಲ. ಭವಿಷ್ಯವನ್ನು ನಿರ್ಧರಿಸುವಲ್ಲಿ ಹಠಾತ್ ತೆಪ್ಪಗಾಗಿ ಬಿಡುವ ತಪಸ್ಸುಕಾಲ. ಆದರೆ ಗೊಂದಲಕ್ಕಿಡಾಗುವ ಅಗತ್ಯವಿಲ್ಲ. ಒಂದು ಮಟ್ಟಿನ ಪೂರ್ವತಯಾರಿಯ ಅಂಶಗಳಲ್ಲಿ ಗಮನಹರಿಸಿ ಸಮತೋಲನಮಾಡುವ ಕೌಶಲ್ಯವಿದ್ದರೆ ಇಂತಹ ಸವಾಲನ್ನು ಆರಾಮಾದಾಯಕವಾಗಿ ಎದುರಿಸಬಹುದು.

ಬಹಳ ಮಹತ್ವವೆಂದರೆ ಓದಿದ್ದನ್ನು ನೆನಪಿಟ್ಟುಕೊಂಡು ಅದನ್ನು ಅಂಕಗಳನ್ನಾಗಿ ಪರಿವರ್ತಿಸುವ ಕಲೆ ಅಗತ್ಯ. ಇದಕ್ಕೆ ಕೆಲವು ಪ್ರಮುಖ ಅಂಶಗಳನ್ನು ಹೀಗೆ ಪಟ್ಟಿಮಾಡಬಹುದು.

೧. ಸಮಯ ಪಾಲನೆ
ವಿದ್ಯಾರ್ಥಿ ಜೀವನದಲ್ಲಿ ಸಮಯ ಬಹಳ ಅಮೂಲ್ಯ. ಇದನ್ನು ಸರಿಯಾದ ರೀತಿಯಲ್ಲಿ ಸದುಪಯೋಗಪಡಿಸಿಕೊಳ್ಳಬೇಕು. ಪರೀಕ್ಷಾ ಸಮಯದಲ್ಲಿ ಇಡೀ ದಿನ ಓದು ಓದು ಓದಿ, ಸುಸ್ತಾಗಿ ಬಿದ್ದು ಹೋಗುವ ಬದಲು ಎಂದಿನಂತೆ ಮಲಗುವ ಸಮಯಕ್ಕೆ ನಿದ್ರಿಸಿ, ಊಟ, ಆಟ ಇತರೆ ದೈನಂದಿನ ಕೆಲಸಕ್ಕೂ ಸಮಯ ಮಿಸಲಿತ್ತು, ಮಿಕ್ಕ ಪೂರ್ತಿ ಗಂಟೆಯನ್ನು ಏಕಾಗ್ರತೆಯಿಂದ ಓದಲು ಬಳಸಿಕೊಂಡರೆ ಸಾಕು.

೨. ಅಧ್ಯಯನದ ಶೈಲಿ
ನಿಮ್ಮ ಅಧ್ಯಯನ ಮಟ್ಟವನ್ನು ಉತ್ತಮಗೊಳಿಸಿಕೊಳ್ಳಲು ಇದು ಸಹಕಾರಿಯಾಗಿರುತ್ತದೆ. ಕಾರಣ ಒಬೊಬ್ಬ ವಿದ್ಯಾರ್ಥಿಗೂ ತನ್ನದೇ ಆದ ಕಲಿಕಾ ಶೈಲಿಗಳಿರುತವೆ. ಕೆಲವರು ಜೋರಾಗಿ (ಶಬ್ದ ಮಾಡಿ) ಓದುವ, ಕೆಲವರಿಗೆ ಮಲಗಿದ ಭಂಗಿಯಲ್ಲಿ ಓದುವ ಅಭ್ಯಾಸ. ಹಲವರಿಗೆ ಗುಂಪು ಚರ್ಚೆಯಲ್ಲಿ (group study) ಓದಿಕೊಂಡರೇನೇ ಸಮಾಧಾನ. ಈ ವಿಧಗಳಲ್ಲಿ ಉತ್ತಮ ಮಧ್ಯಮವೆಂಬ ಬೇಧವಿಲ್ಲ. ಆದರೆ ಓದನ್ನು ಮತ್ತೆ ಮತ್ತೆ ಮನನಮಾಡಿಕೊಳ್ಳಲು  ಪುಟ್ಟ ಟಿಪ್ಪಣಿಯನ್ನು ಮಾಡಿಟ್ಟುಕೊಳ್ಳುವುದು ಹೆಚ್ಚು ಉಪಯುಕ್ತ. ಇದು ಓದಿದ್ದನು ಕಡಿಮೆ ಅವದಿಯಲ್ಲಿ ಪುನರಾವರ್ತಿಸಲು ನೆರವಿಗೆ ಬರುತದೆ.

೩. ಪಠ್ಯ ಪುಸ್ತಕಕ್ಕೆ ಮೊದಲ ಆದ್ಯತೆ
ಆನೇಕರು ಕೊನೇ ಗಳಿಗೆಯವರೆಗೂ ಕಾಲಹರಣಮಾಡಿ, ಕಡೆ ಗಳಿಗೆಯಲ್ಲಿ ಡೈಜೆಸ್ಟ್ ಅಥವಾ ನೋಟ್ಸ್ ಬುಕ್ ಗಳನ್ನು ತಿರುವಿಹಾಕುವುದು ವಿಷಾದನೀಯ. ಇವೆಲ್ಲವುಗಳಿಗಿಂತ ಪಠ್ಯಪುಸ್ತಕ ನೇರ ಮತ್ತು ಉತ್ತಮ. ಚಿಕ್ಕ ಉತ್ತರ ಮತ್ತು ಬಹು ಆಯ್ಕೆಯ ಪ್ರಶ್ನೆಗಳಿಗೆ ಪಠ್ಯಪುಸ್ತಕವೇ ಮೂಲಾಧಾರ. ಮುಖ್ಯವಾಗಿ ಇಸವಿ, ಹೆಸರುಗಳನ್ನು ಬಣ್ಣದ ಪೆನ್ನಿನಿಂದ ಗುರುತಿಸುವುದರಿಂದ, ಪರೀಕ್ಷೆಗಳಲ್ಲಿ ಸುಲಭಕ್ಕೆ ನೆನಪಿಗೆ ತಂದುಕೊಳ್ಳಬಹುದು.

೪.  ಹಳೆ ಪ್ರಶ್ನೆಪತ್ರಿಕೆಗಳ ಅಧ್ಯಯನ 
ಕಳೆದ ಕೆಲವು ವರ್ಷಗಳ ಪ್ರಶ್ನೆ ಪತ್ರಿಕೆಗಳನ್ನು ಸಂಗ್ರಹಿಸಿ ಪ್ರಶ್ನೆಗಳ ಮಾದರಿಯನ್ನು ಗ್ರಹಿಸುವುದು ಜಾಣ ವಿದ್ಯಾರ್ಥಿಗಳ  ಲಕ್ಷಣ. ಸಾಮಾನ್ಯವಾಗಿ ಪ್ರಶ್ನೆಗಳನ್ನು ಎಂದಿಗಿಂತ ಭಿನ್ನವಾಗಿ ಕೇಳುವುದು ವಾಡಿಕೆ. ಇದು ಹಲವು ಹಳೆಯ ಪ್ರಶ್ನೆಪತ್ರಿಕೆಗಳನ್ನು ಗಮನಿಸಿದಾಗ ನಮಗೆ ತಿಳಿಯುತ್ತದೆ. ಇದರಿಂದ ಪರೀಕ್ಷಾ ಮಂಡಲಿಗೆ ನಿಮ್ಮ ಗ್ರಹಿಕೆಯ, ಅರ್ಥೈಸುವಿಕೆಯ ಸಾಮರ್ಥ್ಯವನ್ನು ಪರೀಕ್ಷಿಸುವ ಉದ್ದೇಶವಿದ್ದರೂ ಇರಬಹುದು.  ಹೀಗೆ ಪ್ರಶ್ನೆಗಳ ವಿವಿಧ ಸ್ತರಗಳನ್ನು ತಿಳಿಯುವುದರಿಂದ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ನೋಡಿ ಗೊಂದಲಕಿಡಾಗುವ ಪ್ರಮಯ ಉದ್ಭವಿಸುವುದಿಲ್ಲ. ಮತ್ತೊಂದು ಸಲಹೆ ಎಂದರೆ ಪ್ರತಿ ಪ್ರಶ್ನೆಯನ್ನು ಅರ್ಥವಾಗುವವರೆಗು ಓದಿ ಆನಂತರ ಉತ್ತರ ಬರೆಯುವದರಿಂದ ತಪ್ಪು ಉತ್ತರಕ್ಕೆ ಆಸ್ಪದವಾಗುವುದಿಲ್ಲ.

೫.  ಸ್ಪಷ್ಟ ಮತ್ತು ದೋಷರಹಿತ ಬರವಣಿಗೆ
ಉತ್ತರಪತ್ರಿಕೆಯಲ್ಲಿ ಮೌಲ್ಯಮಾಪನ ಮಾಡುವವರಿಗೆ ಮೊದಲು ಗಮನಸೆಳೆಯುವ ಅಂಶವೆಂದರೆ ಉತ್ತರಪತ್ರಿಕೆಯ ಅಂದತೆ(neatness). ಹಾಗಾಗಿ ಉತ್ತರಪತ್ರಿಕೆಯೂ ನಾಜೂಕಗಿರಲಿ ಮತ್ತು ಸ್ಪಚ್ಛವಾಗಿರಲಿ. ಆನಂತರ ಉತ್ತರಗಳೂ ಸ್ಪಷ್ಟವಾಗಿ ಸ್ಪುಟವಾಗಿರಲಿ. ಅಂಕಗಳಿಗೆ ಬೇಕಾದಷ್ಟು ಮಾತ್ರ ಉತ್ತರ ಬರೆಯಿರಿ. ಇದರಿಂದ ಎಲ್ಲ ಪ್ರಶ್ನೆಗಳಿಗೂ ನಿಗದಿತ ಸಮಯದೊಳಗೆ ಉತ್ತರಿಸಲು ಸಾಧ್ಯ. ಮುಖ್ಯವಾಗಿ ನಿಮ್ಮ ಬರವಣಿಗೆಯಲ್ಲಿ ತಪ್ಪುಗಳು ಇಲ್ಲದಿದ್ದರೆ ನೀವು ಜಾಣ ವಿದ್ಯಾರ್ಥಿ ಎಂದು ಮೌಲ್ಯಮಾಪಕರು ಊಹಿಸುತ್ತಾರೆ.

೬.  ಪರಿಕರದ ಸದ್ಬಳಕೆ
ಸಾಮಾನ್ಯವಾಗಿ ವಿದ್ಯಾರ್ಥಿಗಳು ಆಯಾಯ ವಿಷಯಕ್ಕೆ ಸಂಬಂಧಿಸಿದಂತೆ ಸಲಕರಣೆಗಳನ್ನು ಬಳಸಬೇಕಾಗುತದೆ. ಉದಾಹರಣೆಗೆ ಸ್ಕೇಲ್ (ಅಳತೆ ಪಟ್ಟಿ) ಪೆನ್ಸಿಲ್ (ಸೀಸದ ಕಡ್ಡಿ) ರಬ್ಬರ್, ಜಿಯಾಮೆಟ್ರೀ ಪೆಟ್ಟಿ ಹೀಗೆ ಆಗತ್ಯವಿದ್ದಲ್ಲಿ ಇವುಗಳ ಸಮರ್ಪಕ ಬಳಕೆ ಉಚಿತ. ಇವುಗಳನ್ನು ನಾವೇ ಸ್ವತಃ ಕೊಂಡೊಯ್ಯುವುದರಿಂದ ಪರೀಕ್ಷಾ ಕೊಠಡಿಯಲ್ಲಿ ಮತ್ತೊಬ್ಬರಿಂದ ಎರವಲು ಪಡೆಯಲು ಅವರನ್ನು ಪೀಡಿಸುವುದು ಮತ್ತು ನಾವು ಮುಜುಗರಕ್ಕೊಳಗಾಗುವುದನ್ನು ತಪ್ಪಿಸಬಹುದು.

೭.   ಅಂತಿಮ ಚೆಕ್
ಪರೀಕ್ಷಾ ಅವಧಿಯ ಕಡೆಯ ಐದತ್ತು ನಿಮಿಷವನ್ನು ಬರೆದ ಉತ್ತರಪತ್ರಿಕೆಯನ್ನು ನೀವೇ ಸ್ವತಃ ಪರೀಕ್ಷಿಸಿಕೊಳ್ಳಲು ಮೀಸಲಿಡೀ. ಆದರಿಂದ ಕೇಳಿದ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿದ್ದಿರೋ ಇಲ್ಲವೋ ಎಂದು ಖಾತ್ರಿಮಾಡಿಕೊಳ್ಳಬಹುದು. ಇಲ್ಲದಿದ್ದರೆ ಸಣ್ಣ ಅನುಮಾನಗಳು ಕಾಡೀ ಮುಂದಿನ ಪರೀಕ್ಷಾ ಓದಿನ ಸಮಯದ ಮೇಲೆದುಷ್ಪರಿಣಾಮಬೀರಬಹುದು. ಕೆಲವೊಮ್ಮೆ ಜ್ಞಾಪಕಕ್ಕೆಬರದ ಉತ್ತರಗಳನ್ನು ಕೊನೆಗೊಮ್ಮೆ ಬರೆಯೋಣ ಎಂದು ಬಿಟ್ಟಿದ್ದ್ದರೆ ಯೋಚಿಸಿ ಬರೆಯಲು ಈ ಸಮಯ ಸಹಾಯಕ್ಕೆ ಬರುತದೆ.

೮.  ಸ್ವ ಮೌಲ್ಯಮಾಪನ
ಇದು ಪರೀಕ್ಷೆಯ ನಂತರ ಮಾಡಿಕೊಳ್ಳುವ ಸ್ವ ಮೌಲ್ಯ ಮಾಪನ. ಇದೇನಿದು ಎಂದು ಆಶ್ಚರ್ಯಪಡಬೇಡಿ. ಕಲಿಕೆ ಪರೀಕ್ಷೆ ನಂತರವೂ ಅಗತ್ಯ. ನೀವು ಉತ್ತರಿಸಿದ್ದ ಪ್ರಶ್ನೆಗಳನ್ನು ಒಂದೊಂದಾಗಿ ಪಠ್ಯಪುಸ್ತಕವನ್ನು ನೋಡಿ ಪರಿಕ್ಷಿಕೊಳ್ಳಿ. ನೀವು ಬರೆದ ಉತ್ತರ ಸರಿಯೋ ತಪ್ಪೋ ತಿಳಿದುಕೊಳ್ಳಿ. ಇದರಿಂದ ಒಂದು ವೇಳೆ ನೀವು ತಪ್ಪು ಉತ್ತರ ಬರೆದೂ ಅದೇ ಸರಿ ಎಂದು ಭಾವಿಸಿದ್ದರೆ ಅದು ನಿಮಗೆ ಇಲ್ಲಿ ತಿಳಿಯುತ್ತದೆ. ಏಕೆಂದರೆ ತಪ್ಪುಗಳನ್ನು ತಿಳಿದುಕೊಳ್ಳುವುದು ಸಹ ಸರಿ ಜೀವನದ ಕ್ರಮ.

                ಈ ಎಲ್ಲ ಅಂಶಗಳೊಂದಿಗೆ ನಿಮ್ಮ ನಿಮ್ಮ ಶಿಕ್ಷಕರು ತಿಳಿಸುವ ಸಲಹೆಗಳನ್ನು, ಪೂರಕವಾದ ಅಂಶಗಳನ್ನು ಅಡವಳಿಸಿಕೊಳ್ಳಿ ಖಂಡಿತ ಸಹಾಯವಾಗುತದೆ. ಪರೀಕ್ಷೆಕಾಲದ ಜೊತೆ ಜೊತೆಗೆ ಬರುವ ಬೇಸಿಗೆಕಾಲ, ಬರಗಾಲ ಮತ್ತು ತಪಸ್ಸುಕಾಲವೂ ತಕ್ಕಮಟ್ಟಿಗೆ ತಂಪಾಗಿರುತ್ತದೆ. ತಂಪಾಗಿರಲಿ ಎಂಬುದು ನಮ್ಮ ಆಶಯ.  

-ಸಂತೋಷ್ ಇ.

No comments:

Post a Comment