Thursday 19 January 2012

ದೇಶದ ಶ್ರೇಷ್ಠತೆ


ಒಂದು ದೇಶ/ ರಾಜ್ಯವನ್ನು “ಶ್ರೇಷ್ಠ” ಎಂದು ನಿರ್ಧಾರಿಸುವುದಾದರೂ ಹೇಗೆ? ಒಂದು ದೇಶಕ್ಕೆ ಶ್ರೇಷ್ಠ ಎಂಬ ಪ್ರಮಾಣಪತ್ರವನ್ನು ಯಾವ ಆಧಾರದ ಮೇಲೆ ಕೊಡಬಹುದು? ಯಾವ ಲಕ್ಷಣಗಳು ಒಂದು ದೇಶವನ್ನು ಶ್ರೇಷ್ಠವಾಗಿಸುತ್ತದೆ?  ಒಟ್ಟಾರೆ...what makes a nation great? ದೇಶದ ಮಿಲಿಟರಿ ಬಲವೇ ಅಥವಾ ಆರ್ಥಿಕ ಅಭಿವೃದ್ಧಿಯೇ? ದೇಶದ ವೈಜ್ಞಾನಿಕ ಅವಿಷ್ಕಾರಗಳೇ.. ದೇಶವು ಗರ್ಭಕಟ್ಟಿಕೊಂಡಿರುವ ಅಗಾಧ ನೈಸರ್ಗಿಕ ಸಂಪತ್ತೇ? ಇವೆಲ್ಲಾವು ಶ್ರೇಷ್ಠತೆಯ ಮಾನದಂಡಗಳಾಗಿದ್ದರೆ… ಇಂದು ಅಮೇರಿಕಾ ಅಥವಾ ಇನ್ನಿತರ ದೇಶಗಳು  ಶ್ರೇಷ್ಠ ರಾಷ್ಟ್ರವಾಗಿರಬೇಕಾಗಿತ್ತು!  ನೈಸರ್ಗಿಕ ಸಂಪತ್ತು ದೇಶಕ್ಕೆ ಶ್ರೇಷ್ಠ ಎಂಬ ಅಂಕಪಟ್ಟಿಯನ್ನು ತಂದುಕೊಡುವುದಾಗಿದ್ದರೆ ಇಂದು ಎಷ್ಟೋ ಆಫ್ರಿಕಾ ದೇಶಗಳು ಶ್ರೇಷ್ಠವೆಂಬ ಹಣೆಪಟ್ಟಿ ಕಟ್ಟಿಕೊಂಡು ಅಭಿಮಾನದಿಂದ ಬೀಗಬಹುದಾಗಿತ್ತು. ಇನ್ನೊಂದು ಕಡೆ, ದೇಶದ ಸವಿಸ್ತಾರವಾದ ಪ್ರದೇಶವಾಗಲ್ಲಿ ಅಥವಾ ಜನಸಂಖ್ಯೆಯಾಗಲ್ಲಿ ದೇಶಕ್ಕೆ ಶ್ರೇಷ್ಠತೆಯನ್ನು ತಂದು ಕೊಡುತ್ತದೆ ಎಂಬುವುದು ಅಪ್ಪಿತಪ್ಪಿಯೂ ಒಪ್ಪಲಾಗದಂತಹ ಮಾತು. ದೇಶದ ಸಂಪತ್ತು, ಗಾತ್ರ ಅಥವಾ ಶಕ್ತಿ ಸಾಮರ್ಥ್ಯಗಳ ಸೇರುಗಳಿಂದ ದೇಶದ ಶ್ರೇಷ್ಠತೆಯನ್ನು ಎಂದಿಗೂ ಅಳೆಯಾಲಾಗುವುದಿಲ್ಲ. ಆಗದರೆ ದೇಶದ ಶ್ರೇಷ್ಠತೆ ಯಾವುದರಲ್ಲಿ ಅಡಗಿದೆ?

ದೇಶವು ತನ್ನ ಪ್ರಜೆಗಳಲ್ಲಿ ಯಾವ ಮೌಲ್ಯವನ್ನು ಗುರುತಿಸಿ, ಅದಕ್ಕೆ ಮಾನ್ಯತೆ ಕೊಟ್ಟು ಉತ್ತೇಜಿಸಿತ್ತದೆಯೋ ಅದು ದೇಶದ ಔನ್ನತ್ಯ ಅಥವಾ ಘನತೆಗೆ ರುಜುವಾತು ಒದಗಿಸುತ್ತದೆ. ಆದುದರಿಂದ ದೇಶವು ಯಾವುದಕ್ಕೆ ಮಾನ್ಯತೆಯನ್ನು ಕೊಡುತ್ತದೆ ಎಂಬ ಪ್ರಶ್ನೆಯನ್ನು ಕೇಳಿಕೊಳ್ಳುವುದು ಸೂಕ್ತವೆನ್ನಿಸುತ್ತದೆ. ಭ್ರಷ್ಟಾಚಾರವೆಂಬ ಅನಿಷ್ಟಕ್ಕೆ ಮೂಗುದಾರ ಕಟ್ಟಿ ನಿಗ್ರಹಿಸದೆ, ಅದಕ್ಕೆ ಹುಲ್ಲು ಇಂಡಿ ಹಾಕಿ ಬಲಿಷ್ಠವಾಗಿಸುವ ದೇಶ ಎಂದಿಗೂ ಶ್ರೇಷ್ಠವೆಂದು ಕರೆಸಿಕೊಳ್ಳಲು ಸಾಧ್ಯವೇ ಇಲ್ಲ. ಸರ್ಕಾರದ ಆದ್ಯತೆ, ನಾಯಕರ ದೂರದೃಷ್ಟಿ, ಆದರ್ಶಮಯ ಜೀವನ, ದೇಶದ ಸಮಾಜಿಕ ಮತ್ತು ನ್ಯಾಯ ವ್ಯವಸ್ಥೆ, ಪೌರರಲ್ಲಿರಬೇಕಾದ ಪ್ರಾಮಾಣಿಕತೆ, ಬಡಬಗ್ಗರಿಗೆ ತೋರುವ ದಯೆ ದೇಶದ ಶ್ರೇಷ್ಠತೆಯನ್ನು ಸಾರಿ ಹೇಳುತ್ತವೆ. ಪ್ರಜೆಗಳಲ್ಲಿರಬೇಕಾದ ಸಂಯೋಜಿತ ವ್ಯಕ್ತಿತ್ವ, ಅವರು ಮೆಚ್ಚಿ ಅನುಮೋದಿಸುವ ಮತ್ತು ಉತ್ತೇಜಿಸುವ ಅಂಶಗಳು, ಮೌಲ್ಯಗಳು, ಆದರ್ಶಗಳು ಮಹತ್ವಾಂಕ್ಷೆಗಳು ಕೊನೆಗೆ ಅವರು ಬದುಕುವ ರೀತಿ ದೇಶದ ಶ್ರೇಷ್ಠತೆಯನ್ನು ದೃಢಪಡಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆಂಬುವುದು ಸೂರ್ಯನಷ್ಟೇ ಸತ್ಯ. ಒಂದು ಮಾತಿನಲ್ಲಿ ಹೇಳಬೇಕಾದರೆ ದೇಶದ ನ್ಯಾಯಪರತೆ/ಧರ್ಮಿಷ್ಠತೆ  ದೇಶವನ್ನು ಶ್ರೇಷ್ಠವನ್ನಾಗಿಸುತ್ತದೆ.

ದೇಶದ ಶ್ರೇಷ್ಠತೆಯ ಬಗ್ಗೆ ಮಾತನಾಡುತ್ತಾ, ಉತ್ತಮ ಸರ್ಕಾರ, ದೇಶಭಕ್ತಿ, ಪ್ರಜಾಪ್ರಭುತ್ವ, ಆದರ್ಶ ಮತ್ತು ನ್ಯಾಯಪರ ರಾಜಕೀಯ ನಾಯಕರುಗಳು ಮತ್ತು ರಾಜಕೀಯ ಪಕ್ಷಗಳು ಒಂದು ದೇಶಕ್ಕೆ ಶ್ರೇಷ್ಠತೆಯನ್ನು ತಂದುಕೊಡುವ ಕೆಲವೊಂದು ಸಾಧನಗಳೆಂದು ಕೆಲವರು ಪಟ್ಟಿಮಾಡುತ್ತಾರೆ. ಒಂದು ಉತ್ತಮ ಜವಾಬ್ದಾರಿಯುತ್ತ, ನ್ಯಾಯಪರ ನಿಷ್ಕಳಂಕ ಸರ್ಕಾರ ಮತ್ತು ರಾಜಕೀಯ ಪಕ್ಷಗಳು ಒಂದು ರಾಷ್ಟ್ರವನ್ನು ಶ್ರೇಷ್ಠ ರಾಷ್ಟ್ರವಾಗಿಸುವುದರಲ್ಲಿ ಅನುಮಾನವೇ ಇಲ್ಲ. Votebank politics ಬಗ್ಗೆ ತಲೆಕೆಡಿಸಿಕೊಳ್ಳದೆ, ಜನರ ಸರ್ವತೋಮುಖ ಅಭಿವೃದ್ಧಿಗೆ ತೊಡೆತಟ್ಟಿ ನಿಲ್ಲುವ ಸರ್ಕಾರ ಮತ್ತು ರಾಜಕೀಯ ಪಕ್ಷಗಳು ರಾಷ್ಟ್ರಕ್ಕೆ ಶ್ರೇಷ್ಠತೆಯನ್ನು ತಂದುಕೊಡುವ ಪ್ರಮುಖ ಪಾತ್ರ ದಾರಿಗಳು. ಪ್ರಜೆಗಳ ಹಿತ, ರಕ್ಷಣೆ, ಅಭಿವೃದ್ಧಿ ಸರ್ಕಾರ ಮತ್ತು ರಾಜಕೀಯ ಪಕ್ಷಗಳ ನಿರ್ಧಾರಗಳ, ಅದ್ಯತೆಗಳ ಮಾರ್ಗದರ್ಶಿಯಾಗಿರಬೇಕೇ ವಿನಃ ಈ ಪ್ರಕ್ರಿಯೆಯಲ್ಲಿ ಸ್ವಹಿತ ಎಂದೂ ನುಸುಳಬಾರದು. ಒಳ್ಳೆಯ ನಾಯಕತ್ವ ಉತ್ತಮ ರಾಜಕೀಯ ಮತ್ತು ಆಡಳಿತ ವ್ಯವಸ್ಥೆಯ ಒಂದು ಅಂಶ. ದೂರದೃಷ್ಟಿ, ವಿವೇಕ, ಜ್ಞಾನ ತಿಳುವಳಿಕೆ ಮತ್ತು ಸಮಾನ್ಯ ಜ್ಞಾನ ನಾಯಕತ್ವದಲ್ಲಿ ಎದ್ದು ಕಾಣಬೇಕು. ನಾಯಕತ್ವದ ಪ್ರತಿಯೊಂದು ನಿರ್ಧಾರವು ದೇಶದ  ಮುನ್ನಡೆಗೆ  ಸಹಕಾರಿಯಾಗಬೇಕು. ದೇಶವನ್ನು ಶ್ರೇಷ್ಠತೆಯ ಕಡೆಗೆ ಕೊಂಡೊಯುವ ಇನ್ನೊಂದು ಅಂಶ ಪ್ರಜೆಗಳಲ್ಲಿರಬೇಕಾದ್ದ ದೇಶಭಕ್ತಿ. ದೇಶವನ್ನು ಪ್ರೀತಿಸಬೇಕು ಎಂಬ ಭಾವ. ಆ ಪ್ರೀತಿ ವಸ್ತುನಿಷ್ಠವಾಗಿದ್ದು, ಕೆಟ್ಟದನ್ನು ತೆಗಳುತ್ತಾ ಒಳೆಯದನ್ನು ಅನುಮೋದಿಸುವ ತರ್ಕಾಧಾರಿತ ಪ್ರೀತಿ ದೇಶಭಕ್ತಿ ಅದಾಗಿರಬೇಕು. ಸಮಾಜದಲ್ಲಿ ಒಡಕನ್ನು ಬಿತ್ತುವ ದುಷ್ಟ ಶಕ್ತಿಗಳ ವಿರುದ್ಧ ಹೋರಾಡುವ ಛಲ, ನ್ಯಾಯಪರ ಹೋರಾಟಗಳಿಗೆ ಸಾತ್ ನೀಡುವ ದೇಶಭಕ್ತಿ ಪ್ರಜೆಗಳಲ್ಲಿರಬೇಕು.

ನಮ್ಮ ದೇಶದ ವಾಸ್ತವವನ್ನು ಅವಲೋಕಿಸಿ ನೋಡಿ, ಭ್ರಷ್ಟಾಚಾರ ಒಪ್ಪಿಗೊಂಡ ಮೌಲ್ಯವಾಗಿಬಿಟ್ಟಿದೆ. ಭ್ರಷ್ಟಾಚಾರವು ಕೆಟ್ಟದೆಂದು ನಮಗೆ ಅಪ್ಪಿತಪ್ಪಿಯೂ ಅನಿಸುವುದಿಲ್ಲ. ಭ್ರಷ್ಟ ರಾಜಕೀಯ ಪಕ್ಷಗಳನ್ನೇ ಪುನ: ಪುನ: ಆರಿಸಿ ಅಧಿಕಾರಕ್ಕೆ ತರುತ್ತೇವೆ. ನಮ್ಮ ಕಾರ್ಯಸಾಧನೆಗೆ ಭ್ರಷ್ಟ ಮಾರ್ಗಗಳನ್ನೇ ಕೈಗೊಳ್ಳುತ್ತೇವೆ. ಇನ್ನೊಂದು ಕಡೆ, ಅಧಿಕಾರ ದಾಹಕ್ಕಾಗಿ ಸಮಾಜವನ್ನು ಜಾತಿ, ಮತ ಮತ್ತು ಭಾಷಾಧಾರಗಳ ಮೇಲೆ ನುಚ್ಚುನೂರು ಮಾಡುತ್ತಿರುವ ರಾಜಕೀಯ ಪಕ್ಷಗಳಿಗೆ ದೇಶ ಹಿತ ಬೇಡವಾದ ಮೌಲ್ಯವಾಗಿಬಿಟ್ಟಿದೆ. ನಾವಂತೂ ಈ ರಾಜಕೀಯ ಪಕ್ಷಗಳ ಗುಲಾಮರಾಗಿಬಿಟ್ಟಿದ್ದೇವೆ. ಅವರು ಹರಡುತ್ತಿರುವ ದ್ವೇಷ ಪ್ರಚೋದಕ ಸಿದ್ಧಾಂತಗಳನ್ನು ನಾವು ಕಣ್ಣುಮುಚ್ಚಿ ಒಪ್ಪಿಕೊಳ್ಳುತ್ತಿದ್ದೇವೆ. ಅದನ್ನೇ ದೇಶಭಕ್ತಿ ಎಂದು ಸಹ ನಂಬಿಬಿಟ್ಟಿದ್ದೇವೆ. Votebank ಲೆಕ್ಕಚಾರ ಇಂದು ಸರ್ಕಾರಗಳ ಪ್ರತಿಯೊಂದು ನಿರ್ಧಾರಗಳನ್ನು ಆಧ್ಯತೆಗಳನ್ನು ಡ್ರೈವ್ ಮಾಡುತ್ತಿದೆ. ಬಡವರ ಮೇಲೆ ಇರಬೇಕಾದ ಕಾಳಜಿ ಮಾಯವಾಗಿಬಿಟ್ಟಿದೆ. ಸರ್ಕಾರಗಳ ಕೆಲವೊಂದು ಧೋರಣೆ, ಕಾರ್ಯನೀತಿ ಬಡವರ, ತುಳಿಯ್ಪಟ್ಟವರ ರೈತರ ನಿದ್ದೆಗೆಡಿಸುತ್ತಿದೆ. ಬಡವರನ್ನು ನಿರ್ಗತಿಕರನ್ನು ತುಚ್ಛವಾಗಿ ಕಾಣಲಾಗುತ್ತಿದೆ. ಅನ್ಯಾಯ ಮತ್ತು ಶೋಷಣೆಗಳ ವಿರುದ್ಧ ಹೋರಾಡುವ ನೆಪದಲ್ಲಿ ಹಿಂಸೆಗೆ ಮೊರೆಹೋಗಿರುವ ಕೆಲವೊಂದು ಗುಂಪುಗಳು ಇಂದು ಶೋಷಿಸುವ ಗುಂಪುಗಳಾಗಿ ಮಾರ್ಪಟ್ಟಿವೆ. ಈ ಪರಿಸ್ಥಿತಿಯಲ್ಲಿ ನಮ್ಮ ದೇಶವನ್ನು ಶ್ರೇಷ್ಠವೆಂದು ಕರೆಯಬಹುದೇ?..ಅಥವಾ ನಮ್ಮ ದೇಶಗೆ ಶ್ರೇಷ್ಠತೆಯೆಂಬ ಪಟ್ಟ ಸಿಗಬಹುದೇ? …ಗಣರಾಜ್ಯೋತ್ಸವದ ಈ ಸಂದರ್ಭದಲ್ಲಿ ಇದರ ಬಗ್ಗೆ ಯೋಚಿಸುವುದು ಸೂಕ್ತವೆನ್ನಿಸುತ್ತದೆ.

ಈ ಸಂದರ್ಭದಲ್ಲಿ ಖಲೀಲ್ ಗಿಬ್ರಾನ್ ರವರ the builders of bridges ಅಂದ್ರೆ ಸೇತುವೆಯ ಕಟ್ಟುವವರು ಎಂಬ ಕತೆ ನೆನಪಿಗೆ ಬರುತ್ತಿದೆ. ಅಸ್ಸಿ ನದಿ ಸಮುದ್ರವನ್ನು ಸೇರಲು ಹೋಗುವ ಸ್ಥಳದಲ್ಲಿ ನಗರದ ಎರಡು ಭಾಗಗಳನ್ನು ಹತ್ತಿರ ತರುವುದಕ್ಕೆ ಎಂದು ಒಂದು ಸೇತುವೆ ಕಟ್ಟಿದ್ದರು. ಅದಕ್ಕೆ ಬೇಕಾದ ದೊಡ್ಡ ದೊಡ್ಡ ಕಲ್ಲುಗಳನ್ನು ಬೆಟ್ಟದಿಂದ ಹೇಸರಗತ್ತೆಗಳ ಮೇಲೆ ಹೊರಿಸಿ ತರಿಸಿದರು. ಸೇತುವೆ ಮುಗಿದ ಮೇಲೆ ಅರಾಬಿಕ್ ಮತ್ತು ಅರಾಮೆಯಿಕ್ ಭಾಷೆಗಳಲ್ಲಿ ’ಎರಡನೆಯ ಅಂಟಿಯೋರಸ್ ದೊರೆ ಕಟ್ಟಿಸಿದ’ ಎಂದು ಒಂದು ಕಂಬದ ಮೇಲೆ ಕೆತ್ತಿದರು: ಒಂದು ಸಂಜೆ ಹುಚ್ಚನಂತೆ ತೋರುವ ಒಬ್ಬ ಯುವಕ ಈ ಕಂಬದ ಮೇಲೆ ಇದ್ದಲಿನ ಚೂರಿನಲ್ಲಿ ಬರೆದ: ’ಈ ಸೇತುವೆಯ ಕಲ್ಲುಗಳನ್ನು ಬೆಟ್ಟದಿಂದ ಹೇಸರಗತ್ತೆಗಳು ತಂದವು. ಈ ಸೇತುವೆಯ ಮೇಲೆ ಒಡಾಡುವಾಗ ನೀವು ಈ ಸೇತುಯನ್ನು ಕಟ್ಟಿದ ಆಂಟಿಯಕನ ಹೇಸರಗತ್ತೆಗಳ ಬೆನ್ನಿನ ಮೇಲೆ ಸವಾರಿ ಮಾಡುತ್ತಿದ್ದೇರಿ’. ಅದನ್ನು ನೋಡಿದ ಕೆಲವರು ನಕ್ಕರು. ಕೆಲವರು ಅಶ್ಚರ್ಯಪಟ್ಟರು. ಕೆಲವರು ಹೇಳಿದರು: ’ಇದನ್ನು ಮಾಡಿದವರು ಯಾರು ಎಂದು ನಮಗೆ ಗೊತ್ತು. ಆತನಿಗ ಸ್ವಲ್ಪ ಹುಚ್ಚಲ್ಲವೆ?’. ಆದರೆ ಒಂದು ಹೇಸರಗತ್ತೆ ನಗುತ್ತಾ ಮತ್ತೊಂದಕ್ಕೆ ಹೇಳಿತು: ಹೌದು ಆ ಕಲ್ಲುಗಳನ್ನು ಹೊತ್ತವರು ನಾವು. ನಿನಗೆ ನೆನಪಿಲ್ಲವೆ? ಆದರೂ ಇವತ್ತಿಗೂ ಎಲ್ಲರೂ ಹೇಳುವುದು ಸೇತುವೆ ಕಟ್ಟಿದವನು ದೊರೆ ಆಂಟಿಯೋರಸ್ ಎಂದೇ!.

ಹೌದು, ನಮ್ಮ ದೇಶವನ್ನು ಕಟ್ಟಿ ಬೆಳಸಿದವರು ಮತ್ತು ಬೆಳಸಬೇಕಾದವರು ಜನಸಮಾನ್ಯರಾದ ನಾವು ನೀವು. ನಮ್ಮ ದೇಶವನ್ನು ಶ್ರೇಷ್ಠತೆಯ ಬೆಳಕಿಗೆ ಕರೆದೊಯುವವರು ನಾವೇ. ಅದ್ದರಿಂದ ನಾವು ಮೆಚ್ಚಿ ಅನುಮೋದಿಸುವ ಮತ್ತು ಉತ್ತೇಜಿಸುವ ಅಂಶಗಳು, ಮೌಲ್ಯಗಳು, ಆದರ್ಶಗಳು ಮಹತ್ವಾಂಕ್ಷೆಗಳು ಕೊನೆಗೆ ನಾವು ಬದುಕುವ ರೀತಿಯು ನ್ಯಾಯಪರತೆ ಧರ್ಮಿಷ್ಠತೆಯಿಂದಿದ್ದು ನಮ್ಮ ದೇಶವನ್ನು ಶ್ರೇಷ್ಠವಾಗಿಸಲಿ ಎಂಬ ಮನೋಭಾವ ನಮ್ಮದಾಗಲಿ. 

-ಜೋವಿ

No comments:

Post a Comment